Tag: ಬಸ್

  • ಕಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ: ಓರ್ವ ಮಹಿಳೆ ಸಾವು, 25 ಜನರಿಗೆ ಗಾಯ

    ಕಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ: ಓರ್ವ ಮಹಿಳೆ ಸಾವು, 25 ಜನರಿಗೆ ಗಾಯ

    ರಾಯಚೂರು: ಸಾರಿಗೆ ಬಸ್ ಹಾಗೂ ಕಾರು ನಡುವೆ ಡಿಕ್ಕಿ ಸಂಭವಿಸಿ ಬಸ್ ಪಲ್ಟಿಯಾಗಿ ಓರ್ವ ಮಹಿಳೆ ಸಾವನ್ನಪ್ಪಿರುವ ಘಟನೆ ರಾಯಚೂರಿನ ಸಾತ್ ಮೈಲ್ ಬಳಿ ನಡೆದಿದೆ.

    ಬಸ್‍ನಲ್ಲಿದ್ದ ಅಮೃತಾ (25) ಸಾವನ್ನಪ್ಪಿರುವ ದುರ್ದೈವಿ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಚಾಲಕನ ಕಾಲುಗಳು ಮುರಿದಿದ್ದು ಕಾರಿನಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಸ್ ನಲ್ಲಿ ಒಟ್ಟು 30 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. 25 ಜನರಿಗೆ ಗಾಯಗಳಾಗಿದ್ದು, ನಾಲ್ಕು ಜನರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

    ಚಾಲಕ ಕಾರನ್ನು ಅಡ್ಡಾದಿಡ್ಡಿಯಾಗಿ ಚಾಲನೆ ಮಾಡುತ್ತಿದ್ದ. ಈ ವೇಳೆ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸಾರಿಗೆ ಬಸ್ ರಸ್ತೆಯ ಪಕ್ಕದ ಹೊಲದಲ್ಲಿ ಪಲ್ಟಿಯಾಗಿದೆ.

    ಸಾರಿಗೆ ಬಸ್ ರಾಯಚೂರಿನಿಂದ ಕಲಬುರಗಿ ಕಡೆಗೆ ಪ್ರಯಾಣ ಬೆಳೆಸಿತ್ತು. ಘಟನಾ ಸ್ಥಳಕ್ಕೆ ರಾಯಚೂರು ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ನಿಯಂತ್ರಣ ತಪ್ಪಿದ ಬಸ್ ವೇಗವಾಗಿ ಬಂದು ವ್ಯಕ್ತಿಗೆ ಡಿಕ್ಕಿ- ಆತ ಎದ್ದು ಸೀದಾ ಬಾರ್‍ನೊಳಗೆ ಹೋದ!

    ನಿಯಂತ್ರಣ ತಪ್ಪಿದ ಬಸ್ ವೇಗವಾಗಿ ಬಂದು ವ್ಯಕ್ತಿಗೆ ಡಿಕ್ಕಿ- ಆತ ಎದ್ದು ಸೀದಾ ಬಾರ್‍ನೊಳಗೆ ಹೋದ!

    ಲಂಡನ್: ಚಾಲಕನ ನಿಯಂತ್ರಣ ಕಳೆದುಕೊಂಡು ವೇಗವಾಗಿ ಬಂದ ಬಸ್ ವ್ಯಕ್ತಿಗೆ ಡಿಕ್ಕಿ ಹೊಡೆದಿದ್ದು, ಆತ ನೆಲದ ಮೇಲೆ ಜಾರಿಕೊಂಡು ಸ್ವಲ್ಪ ದೂರಕ್ಕೆ ಹೋಗಿದ್ರೂ ಪ್ರಾಣಾಪಾಯದಿಂದ ಪಾರಾದ ಘಟನೆ ಇಂಗ್ಲೆಂಡಿನಲ್ಲಿ ನಡೆದಿದೆ. ಇಷ್ಟೇ ಅಲ್ಲದೆ ಬಸ್‍ನಿಂದ ಡಿಕ್ಕಿ ಹೊಡೆಸಿಕೊಂಡ ವ್ಯಕ್ತಿ ಕೂಡಲೇ ಮೇಲೆದ್ದು ಸೀದಾ ಬಾರ್‍ನೊಳಗೆ ಹೋಗಿದ್ದಾರೆ.

    ಈ ಭಯಾನಕ ಘಟನೆಯ ದೃಶ್ಯಾವಳಿ ಬಾರ್‍ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವ್ಯಕ್ತಿ ರಸ್ತೆ ದಾಟುತ್ತಿದ್ದ ವೇಳೆ ಹಿಂದಿನಿಂದ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಅವರು ಸ್ವಲ್ಪ ದೂರದವರೆಗೆ ಜಾರಿಕೊಂಡು ಬಂದು ಪಬ್‍ನ ಮುಂದೆ ಬಂದು ಬಿದ್ದಿದ್ದಾರೆ. ಘಟನೆಯಲ್ಲಿ ಬಸ್‍ನ ಮುಂಬದಿಯ ಗಾಜು ಪುಡಿಪುಡಿಯಾಗಿದೆ. ಆದ್ರೆ ಈ ವ್ಯಕ್ತಿ ಮಾತ್ರ ಮೇಲೆದ್ದು, ಏನೂ ಆಗೇ ಇಲ್ಲ ಎಂಬಂತೆ ಬಾರ್‍ನೊಳಗೆ ಹೋಗಿ ಅಚ್ಚರಿ ಮೂಡಿಸಿದ್ದಾರೆ.

    ಶನಿವಾರದಂದು ಈ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ವೈರಲ್ ಆಗಿದೆ. ಅಪಘಾತಕ್ಕೀಡಾದ ವ್ಯಕ್ತಿಯನ್ನ 53 ವರ್ಷದ ಸೈಮನ್ ಸ್ಮಿತ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇವರಿಗೆ ಸಣ್ಣ ಪುಟ್ಟ ತರಚು ಗಾಯಗಳು ಬಿಟ್ಟರೆ ಹೆಚ್ಚಿನ ಅಪಾಯವೇನೂ ಆಗಿಲ್ಲ.

    ಸೈಮನ್ ಮೇಲೆದ್ದು, ಮೈಕೊಡವಿಕೊಂಡ್ರು. ನಂತರ ಆಂಬುಲೆನ್ಸ್ ಬಂದು ಚೆಕಪ್‍ಗಾಗಿ ಕರೆದೊಯ್ಯಲಾಯ್ತು ಎಂದು ಪರ್ಪಲ್ ಟರ್ಟಲ್ ಪಬ್‍ನ ಸಹ ಮಾಲೀಕರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    https://www.youtube.com/watch?v=y9s1UNU2jSw

  • ರಾಯಚೂರು: ಸ್ಟೇರಿಂಗ್ ರಾಡ್ ಕಟ್ ಆಗಿ ಕಾಲುವೆಗೆ ಉರುಳಿದ ಬಸ್- ಪ್ರಯಾಣಿಕರು ಪಾರು

    ರಾಯಚೂರು: ಸ್ಟೇರಿಂಗ್ ರಾಡ್ ಕಟ್ ಆಗಿ ಕಾಲುವೆಗೆ ಉರುಳಿದ ಬಸ್- ಪ್ರಯಾಣಿಕರು ಪಾರು

    ರಾಯಚೂರು: ಸಾರಿಗೆ ಬಸ್ ನ ಸ್ಟೇರಿಂಗ್ ರಾಡ್ ಕಟ್ ಆಗಿ ಬಸ್ ಕಾಲುವೆ ಉರುಳಿದ ಘಟನೆ ಮಾನ್ವಿ ತಾಲೂಕಿನ ಸಿರವಾರ ಬಳಿ ನಡೆದಿದೆ.

    ವೇಗದಲ್ಲಿದ್ದ ಬಸ್‍ನ ಸ್ಟೇರಿಂಗ್ ರಾಡ್ ಕಟ್ ಆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಗದ್ದೆ ಪಕ್ಕದ ಸಣ್ಣ ಕಾಲುವೆಗೆ ಉರುಳಿದೆ. ಕಾಲುವೆಯಲ್ಲೆ ಬಸ್ ನಿಂತಿದ್ದರಿಂದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ 8 ಜನರಿಗೆ ಗಾಯಗಳಾಗಿವೆ

    ಲಿಂಗಸೂಗುರಿನಿಂದ ರಾಯಚೂರಿಗೆ ತೆರಳುತ್ತಿದ್ದ ಸಾರಿಗೆ ಬಸ್ 30 ಕ್ಕೂ ಹೆಚ್ಚು ಜನ ಪ್ರಯಾಣಿಕರನ್ನ ಕರೆದೊಯ್ಯುತ್ತಿತ್ತು. ಸಿರವಾರ ಬಳಿ ಏಕಾಏಕಿ ತೊಂದರೆ ಕಾಣಿಸಿಕೊಂಡಿದ್ದು, ಅಪಘಾತ ಸಂಭವಿಸಿದೆ.

    ಗಾಯಾಳುಗಳು ಹಾಗೂ ಉಳಿದ ಪ್ರಯಾಣಿಕರನ್ನ ಕೂಡಲೇ ಬದಲಿ ಬಸ್ ನಲ್ಲಿ ರಾಯಚೂರಿಗೆ ಕಳುಹಿಸಲಾಗಿದೆ.

  • ಪಲ್ಟಿ ಹೊಡೆದ ಖಾಸಗಿ ಬಸ್ -15 ಜನರಿಗೆ ಗಾಯ

    ಪಲ್ಟಿ ಹೊಡೆದ ಖಾಸಗಿ ಬಸ್ -15 ಜನರಿಗೆ ಗಾಯ

    ಹಾವೇರಿ: ಖಾಸಗಿ ಬಸ್‍ವೊಂದು ಪಲ್ಟಿಯಾಗಿದ್ದು, ಬಸ್‍ನಲ್ಲಿದ್ದ 15 ಜನರು ಗಾಯಗೊಂಡಿರುವ ಘಟನೆ ಜಲ್ಲೆಯ ಹಿರೇಕೆರೂರು ತಾಲೂಕಿನ ಹಿರೇಮೊರಬ ಗ್ರಾಮದ ಬಳಿ ನಡೆದಿದೆ.

    ಶ್ರೀನಿವಾಸ್ ಎಂಬವರಿಗೆ ಸೇರಿದ ಬಸ್ ಪಲ್ಟಿಯಾಗಿದೆ. ಬಸ್ ಚಾಲಕನ ನಿರ್ಲಕ್ಷ್ಯದಿಂದ ರಸ್ತೆ ಪಕ್ಕದ ಕಂದಕಕ್ಕೆ ಬಸ್ ಉರುಳಿದೆ ಎಂದು ಹೇಳಲಾಗಿದೆ. ಅಪಘಾತದ ಬಳಿಕ ಚಾಲಕ ಪರಾರಿಯಾಗಿದ್ದಾನೆ. ಬಸ್ ಉಕ್ಕಡಗಾತ್ರಿಯಿಂದ ಶಿವಮೊಗ್ಗ ಹೊರಟಿತ್ತು.

    ಸ್ಥಳಕ್ಕೆ ಹಿರೇಕೆರೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಗಾಯಾಳುಗಳನ್ನು ರಟ್ಟೀಹಳ್ಳಿ ಮತ್ತು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

     

  • ವಿಡಿಯೋ: KSRTC ಬಸ್, ಬೈಕ್ ನಡುವೆ ಭೀಕರ ಅಪಘಾತ- ಸವಾರ ಸ್ಥಳದಲ್ಲೇ ಸಾವು

    ವಿಡಿಯೋ: KSRTC ಬಸ್, ಬೈಕ್ ನಡುವೆ ಭೀಕರ ಅಪಘಾತ- ಸವಾರ ಸ್ಥಳದಲ್ಲೇ ಸಾವು

    ಮೈಸೂರು: ಕೆಎಸ್‍ಆರ್‍ಟಿಸಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣದಲ್ಲಿ ನಡೆದಿದೆ.

    35 ವರ್ಷದ ಮಂಜುನಾಥ್ ಮೃತ ಬೈಕ್ ಸವಾರ. ಘಟನೆಯಲ್ಲಿ ಹಿಂಬದಿ ಸವಾರ ರವಿಕುಮಾರ್ ಗೆ ಗಂಭೀರ ಗಾಯವಾಗಿದೆ. ಮಂಜುನಾಥ್ ಹಾಗೂ ರವಿಕುಮಾರ್ ಇಬ್ಬರೂ ಮಾಗಳಿ ಗ್ರಾಮದವರು ಎಂದು ತಿಳಿದುಬಂದಿದೆ.

    ಮಂಗಳವಾರ ಮಧ್ಯಾಹ್ನ ಈ ಅಪಘಾತ ಸಂಭವಿಸಿದೆ. ಸಿಸಿ ಕ್ಯಾಮೆರಾದಲ್ಲಿ ಅಪಘಾತದ ಭಯಾನಕ ದೃಶ್ಯ ಸೆರೆಯಾಗಿದೆ. ಘಟನೆ ಬಗ್ಗೆ ಹುಣಸೂರು ಪಟ್ಟಣ ಪೊ ಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=lK_lSC2m5Is&feature=youtu.be

  • ಮನೆ ಬಿಟ್ಟು ಹೋಗಿದ್ದ 14ರ ಬಾಲಕಿ ಮೇಲೆ ಬಸ್‍ ನಲ್ಲಿ ಗ್ಯಾಂಗ್‍ರೇಪ್- ಮೂವರ ಬಂಧನ

    ಮನೆ ಬಿಟ್ಟು ಹೋಗಿದ್ದ 14ರ ಬಾಲಕಿ ಮೇಲೆ ಬಸ್‍ ನಲ್ಲಿ ಗ್ಯಾಂಗ್‍ರೇಪ್- ಮೂವರ ಬಂಧನ

     

    ಚೆನ್ನೈ: ತಮಿಳುನಾಡಿನ ಸೇಲಂನಲ್ಲಿ ಇಬ್ಬರು ಚಾಲಕರು ಹಾಗೂ ಒಬ್ಬ ನಿರ್ವಾಹಕ ಸೇರಿ ಪ್ರೈವೇಟ್ ಬಸ್‍ನಲ್ಲಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಈ ವರ್ಷ 9ನೇ ತರಗತಿ ಪೂರೈಸಿರೋ ಬಾಲಕಿ ಸೇಲಂನಲ್ಲಿನ ತನ್ನ ಮನೆಯಿಂದ ಓಡಿಹೋಗಿದ್ದು, ಸೋಮವಾರ ಮಧ್ಯಾಹ್ನ ಬಸ್ ಹತ್ತಿದ್ದಳು. ಮುಂದಿನ 7 ಗಂಟೆಗಳ ಕಾಲ ಬಸ್ ಸೇಲಂನಿಂದ ಓಮಲೂರಿಗೆ ಹಾಗೂ ಓಮಲೂರಿನಿಂದ ಸೇಲಂಗೆ ಸುಮಾರು 20 ಕಿಲೋಮೀಟರ್‍ನಷ್ಟು ಹೋಗಿ ಬಂದಿದ್ದು ಈ ವೇಳೆ ಬಾಲಕಿ ಬಸ್‍ನಲ್ಲೇ ಇದ್ದಳು.

    ಕೊನೆಯ ಟ್ರಿಪ್ ನಂತರ ಬಸ್ಸಿನ ನೌಕರರು ಒಮಲೂರಿನಿಂದ ಸುಮಾರು 7 ಕಿ.ಮೀ ದೂರದಲ್ಲಿ ನಿರ್ಜನ ಪ್ರದೇಶದಲ್ಲಿ ಬಸ್ಸನ್ನು ನಿಲ್ಲಿಸಿ, ಒಬ್ಬರಾದ ನಂತರ ಒಬ್ಬರು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಬಸ್‍ನಿಂದ ಕೆಳಗಿಳಿಯದಂತೆ ಬಾಲಕಿಗೆ ಹೆದರಿಸಿದ್ದರು. ಮೂರನೆಯ ವ್ಯಕ್ತಿ ಆಕೆಯ ಮೇಲೆ ದೌರ್ಜನ್ಯವೆಸಗಿದಾಗ ಆಕೆ ಅವರಿಂದ ತಪ್ಪಿಸಿಕೊಂಡು ಕಿರುಚಾಡಿದ್ದಾಳೆ. ನಂತರ ಸ್ಥಳೀಯರು ಆಕೆಯನ್ನು ರಕ್ಷಿಸಿ ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆಂದು ಹಿರಿಯ ಅಧಿಕಾರಿಯೊಬ್ಬರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ಬಾಲಕಿಯ ಪೋಷಕರು ಸೇಲಂನಲ್ಲಿ ದಿನಗೂಲಿ ಕಾರ್ಮಿಕರಾಗಿದ್ದು, ಬಾಲಕಿ ಈ ಹಿಂದೆಯೂ ಎರಡು ಬಾರಿ ಮನೆಯಿಂದ ಓಡಿಹೋಗಿದ್ದಳು ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಬಾಲಕಿಯನ್ನು ಕೌನ್ಸೆಲಿಂಗ್ ಮಾಡಲಾಗುತ್ತಿದ್ದು, ಮಕ್ಕಳ ರಕ್ಷಣಾ ಗೃಹದಲ್ಲಿದ್ದಾಳೆ.

    ಘಟನೆಗೆ ಸಂಬಂಧಿಸಿದಂತೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

  • ಬಸ್ ಆಟೋಗೆ ಡಿಕ್ಕಿ, ಆಟೋ ಬೈಕ್‍ಗೆ ಡಿಕ್ಕಿ- ಓರ್ವ ಸಾವು, ಮೂವರ ಸ್ಥಿತಿ ಗಂಭೀರ

    ಬಸ್ ಆಟೋಗೆ ಡಿಕ್ಕಿ, ಆಟೋ ಬೈಕ್‍ಗೆ ಡಿಕ್ಕಿ- ಓರ್ವ ಸಾವು, ಮೂವರ ಸ್ಥಿತಿ ಗಂಭೀರ

    ರಾಯಚೂರು: ನಗರದ ಕೇಂದ್ರ ಬಸ್ ನಿಲ್ದಾಣದ ಎದುರು ಸರಣಿ ಅಪಘಾತ ಸಂಭವಿಸಿದ್ದು ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಮೂವರ ಸ್ಥಿತಿ ಗಂಭೀರವಾಗಿದ್ದು, ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

    ಬೈಕ್‍ನ ಹಿಂಬದಿ ಸವಾರ ಆಂಧ್ರಪ್ರದೇಶ ಮೂಲದ 26 ವರ್ಷದ ರಂಗಸ್ವಾಮಿ ಮೃತ ದುರ್ದೈವಿ. ಬಸ್ ನಿಲ್ದಾಣದಿಂದ ಸಾರಿಗೆ ಬಸ್ ಹೊರಬರುತ್ತಿದ್ದಂತೆ ಬ್ರೇಕ್ ಫೇಲ್ ಆಗಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

    ಚಾಲಕನ ನಿಯಂತ್ರಣ ತಪ್ಪಿದ ಬಸ್ ಆಟೋರಿಕ್ಷಾಗೆ ಡಿಕ್ಕಿ ಹೊಡೆದಿದ್ದು ಆಟೋ ರಾಜಕಾಲುವೆಗೆ ಉರುಳಿದೆ. ಈ ವೇಳೆ ಆಟೋ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಲ್ಲದೆ ರಸ್ತೆ ಬದಿ ನಿಂತಿದ್ದ ರಂಜಿತಾ ಎಂಬವರಿಗೆ ಬಸ್ ತಾಕಿದ್ದು ಅವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನ ನಗರದ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    https://www.youtube.com/watch?v=33XNxaS07sA

     

  • ಲಾರಿ, ಬಸ್ ನಡುವೆ ಡಿಕ್ಕಿ – 22 ಮಂದಿ ಸಾವು, 15 ಜನರಿಗೆ ಗಾಯ

    ಲಾರಿ, ಬಸ್ ನಡುವೆ ಡಿಕ್ಕಿ – 22 ಮಂದಿ ಸಾವು, 15 ಜನರಿಗೆ ಗಾಯ

    ಬರೇಲಿ: ಬಸ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ 22 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಬರೇಲಿ ಬೈಪಾಸ್ ಬಳಿ ನಡೆದಿದೆ.

    ಮಧ್ಯರಾತ್ರಿ 1 ಗಂಟೆ ವೇಳೆಯಲ್ಲಿ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 22 ಮಂದಿ ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ನಂತರ ಬಸ್‍ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಮೃತರ ದೇಹಗಳು ಸುಟ್ಟು ಹೋಗಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ಬರೇಲಿ ಮತು ಶಾಹ್‍ಜಹಾನ್‍ಪುರ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಹಂತದ ರಸ್ತೆಯಲ್ಲಿ ಘಟನೆ ನಡೆದಿದೆ. ಬಸ್ ಚಾಲಕನ ಅತೀ ವೇಗದ ಚಾಲನೆಯೇ ಘಟನೆಗೆ ಕಾರಣ ಎಂದು ವರದಿಯಾಗಿದೆ.

    ಅಪಘಾತದ ನಂತರ ಬಸ್ಸಿನ ಡೀಸೆಲ್ ಟ್ಯಾಂಕ್ ಸ್ಫೋಟಗೊಂಡಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಬಸ್ ಪ್ರಯಾಣಿಕರು ನಿದ್ರೆಯಲ್ಲಿದ್ದಿದ್ದರಿಂದ ಅವರು ಬಸ್‍ನಿಂದ ಕೆಳಗಿಳಿಯುವ ಮುನ್ನವೇ ಬೆಂಕಿ ಆವರಿಸಿದೆ. ಕೆಲವರು ಕಿಟಕಿಯ ಮೂಲಕ ಬಸ್‍ನಿಂದ ಹೊರಗೆ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ವರದಿಯ ಪ್ರಕಾರ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರಲು ಸುಮಾರು ಒಂದೂವರೆ ಗಂಟೆ ಬೇಕಾಯ್ತು ಎನ್ನಲಾಗಿದೆ. ಡಿಕ್ಕಿಯಾದ ನಂತರ ಬಸ್ ಮತ್ತು ಟ್ರಕ್ ಎರಡಕ್ಕೂ ಬೆಂಕಿ ಹೊತ್ತಿಕೊಂಡಿದೆ.

    ಅಗ್ನಿಶಾಮಕ ಸಿಬ್ಬಂದಿ ಎಷ್ಟು ಸಾಧ್ಯವೋ ಅಷ್ಟ ಬೇಗ ಸ್ಥಳಕ್ಕೆ ಧಾವಿಸಿದ್ರು. ಆದ್ರೆ ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಬೆಂಕಿಯನ್ನು ನಿಯಂತ್ರಿಸಿ ಒಳಗೆ ಹೋಗಲು ಹರಸಾಹಸಪಡಬೇಕಾಯ್ತು ಎಂದು ಹಿರಿಯ ಅಧಿಕಾರಿ ಎಸ್‍ಕೆ ಭಗತ್ ತಿಳಿಸಿದ್ದಾರೆ.

    ಉತ್ತರಪ್ರದೇಶ ರಾಜ್ಯ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ನವದೆಹಲಿಯಿಂದ ಉತ್ತರಪ್ರದೇಶದ ಗೊಂಡಾ ಜಿಲ್ಲೆಯ ಕಡೆಗೆ ಹೋಗುತ್ತಿತ್ತು ಎಂದು ವರದಿಯಾಗಿದೆ. ಬಸ್‍ನಲ್ಲಿ ಒಟ್ಟು ಎಷ್ಟು ಜನ ಇದ್ದರು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.

  • ಬಸ್‍ನಲ್ಲೇ ಕಂಡಕ್ಟರ್ ಆತ್ಮಹತ್ಯೆ

    ಬಸ್‍ನಲ್ಲೇ ಕಂಡಕ್ಟರ್ ಆತ್ಮಹತ್ಯೆ

    ಹುಬ್ಬಳ್ಳಿ: ಬಸ್‍ನಲ್ಲೇ ನಿರ್ವಾಹಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದಲ್ಲಿ ನಡೆದಿದೆ.

    ಅಬ್ಬಾಸ್ ಅಲಿ ಬಸ್‍ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ನಿರ್ವಾಹಕ. ಅಬ್ಬಾಸ್ ಅಲಿ ಬಸವಕಲ್ಯಾಣ ಡಿಪೋ ವಿಭಾಗದ ನಿರ್ವಾಹಕರಾಗಿದ್ದು, ಬುಧವಾ ರಾತ್ರಿ ಬಸವಕಲ್ಯಾಣದಿಂದ ಹುಬ್ಬಳ್ಳಿಗೆ ಆಗಮಿಸಿದ್ದರು. ರಾತ್ರಿ ಊಟ ಮಗಿಸಿಕೊಂಡು ಬಸ್‍ನಲ್ಲಿ ಚಾಲಕ ಹಾಗೂ ನಿರ್ವಾಹಕ ಇಬ್ಬರೂ ಮಲಗಿದ್ದರು. ಚಾಲಕ ಮಲಗಿದ ನಂತರ ಅಬ್ಬಾಸ್ ಅಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

    ಬೆಳಗ್ಗೆ ಬಸ್ ಚಾಲಕ ಎದ್ದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಡಿಸಿ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.

    ಈ ಸಂಬಂಧ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • 100 ಅಡಿ ಆಳಕ್ಕೆ ಬಸ್ ಉರುಳಿ ಬಿದ್ದು 24 ಯಾತ್ರಿಕರ ದುರ್ಮರಣ

    100 ಅಡಿ ಆಳಕ್ಕೆ ಬಸ್ ಉರುಳಿ ಬಿದ್ದು 24 ಯಾತ್ರಿಕರ ದುರ್ಮರಣ

    ಡೆಹ್ರಾಡೂನ್: ಯಾತ್ರಿಕರು ಪ್ರಯಾಣಿಸುತ್ತಿದ್ದ ಬಸ್ಸೊಂದು 100 ಮೀಟರ್ ಆಳಕ್ಕೆ ಉರುಳಿ ಬಿದ್ದ ಪರಿಣಾಮ 24 ಮಂದಿ ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ.

    ಉತ್ತರಾಖಂಡ್ ನ ಉತ್ತರಕಾಶಿಯ ಗಂಗೋತ್ರಿಯಿಂದ ಯಾತ್ರಿಕರಿದ್ದ ಬಸ್ ಹಿಂದಿರುಗುತ್ತಿದ್ದ ವೇಳೆ ನಲುಪಾಣಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಭಾಗೀರಥಿ ನದಿಗೆ ಉರುಳಿ ಬಿದ್ದಿದೆ.

    ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿಷಾದ ವ್ಯಕ್ತಪಡಿಸಿದ್ದು, ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ, ಗಾಯಾಳುಗಳು ಬೇಗ ಗುಣಮುಖರಾಗಲಿ ಅಂತಾ ಟ್ವೀಟ್ ಮಾಡಿದ್ದಾರೆ. ಅಲ್ಲದೇ ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.

    ಮಂಗಳವಾರ ಸಂಜೆ ಸುಮಾರು 6 ಗಂಟೆ ವೇಳೆಯಲ್ಲಿ ಈ ದುರಂತ ಸಂಭವಿಸಿದೆ. ಬಸ್‍ನಲ್ಲಿದ್ದವರು ಮಧ್ಯಪ್ರದೇಶ ಮೂಲದವರಾಗಿದ್ದು, ಗಂಗೋತ್ರಿಯಿಂದ ರಿಷಿಕೇಶ್‍ಗೆ ಬರುವಾಗ 100 ಅಡಿ ಆಳದ ಕಂದಕಕ್ಕೆ ಬಿದ್ದು ಅವಘಢ ಸಂಭವಿಸಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ವಾಣ್ ಮೃತರ ಕುಟುಂಬದವರಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

    ಐಟಿಬಿಪಿ, ಎಸ್‍ಡಿಆರ್‍ಎಫ್ ಪಡೆ ಹಾಗೂ ಪೊಲೀಸರಿಂದ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಪರ್ವತ ತುಂಬಾ ಕಡಿದಾದುದ್ದರಿಂದ ಮತ್ತಷ್ಟು ವಿಳಂಬವಾಗಿ ಬೆಳಗ್ಗೆವರೆಗೂ ಕಾರ್ಯಾಚರಣೆ ನಡೆದಿದೆ.

    ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಕೂಡ ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಪ್ರತೀ ಕುಟುಂಬಕ್ಕೂ 1 ಲಕ್ಷ ಹಾಗೂ ಗಯಾಳುಗಳಿಗೆ 50,000 ಪರಿಹಾರ ಘೋಷಿಸಿದ್ದಾರೆ.