Tag: ಬಸ್

  • ಕಿಚ್ಚ ಸುದೀಪ್ ಸಿನಿಮಾ ಶೂಟಿಂಗ್‍ ಗೂ ತಟ್ಟಿದ್ದ ಐಟಿ ದಾಳಿ ಬಿಸಿ

    ಕಿಚ್ಚ ಸುದೀಪ್ ಸಿನಿಮಾ ಶೂಟಿಂಗ್‍ ಗೂ ತಟ್ಟಿದ್ದ ಐಟಿ ದಾಳಿ ಬಿಸಿ

    ರಾಮನಗರ: ಸಚಿವ ಡಿಕೆ ಶಿವಕುಮಾರ್ ಮೇಲಿನ ಐಟಿ ದಾಳಿ ಬಿಸಿ ಕಿಚ್ಚ ಸುದೀಪ್ ಅವರ ಸಿನಿಮಾ ಶೂಟಿಂಗ್‍ ಗೂ ತಟ್ಟಿದೆ.

    ಈಗಲ್ಟನ್ ರೆಸಾರ್ಟ್ ಸುತ್ತ ಖಾಕಿ ಕಣ್ಗಾವಲು ಇದ್ದು ಈ ರೆಸಾರ್ಟ್‍ಗೆ ಇಂದು ಕಿಚ್ಚ ಸುದೀಪ್ ಹೋಗುತ್ತಿದ್ದಾರೆ. ಬುಧವಾರದಂದು ಈಗಲ್‍ಟನ್ ರೆಸಾರ್ಟ್‍ನಲ್ಲಿ ಸಚಿವ ಡಿಕೆ ಶಿವಕುಮಾರ್ ಇದ್ದ ಕಾರಣ ಐಟಿ ಅಧಿಕಾರಿಗಳು ರೆಸಾರ್ಟ್ ಮೇಲೂ ದಾಳಿ ಮಾಡಿದ್ದರು. ಎಲ್ಲಾ ವಾಹನಗಳನ್ನ ಪರಿಶೀಲಿಸಿ ಒಳಗೆ ಬಿಡಲಾಗ್ತಿತ್ತು.

    ಇಂದು ರಾಜು ಕನ್ನಡ ಮೀಡಿಯಂ ಚಿತ್ರದ ಚಿತ್ರೀಕರಣ ಇರುವುದರಿಂದ ಮೂರು ಕ್ಯಾರವಾನ್ ಬಸ್ ಸೇರಿದಂತೆ ಒಂದು ಐಷಾರಾಮಿ ಬಸ್‍ನಲ್ಲಿ ಬಂದಿದ್ದ ಕಲಾವಿದರನ್ನು ಭದ್ರತಾ ಸಿಬ್ಬಂದಿ ಸುಮಾರು ಅರ್ಧ ಗಂಟೆ ಕಾಲ ಪರೀಕ್ಷಿಸಿ ರೆಸಾರ್ಟ್‍ನೊಳಗೆ ಬಿಟ್ಟಿದ್ದಾರೆ. ಈ ಚಿತ್ರದಲ್ಲಿ ನಟ ಸುದೀಪ್ ಗೆಸ್ಟ್ ರೋಲ್‍ನಲ್ಲಿ ನಟಿಸುತ್ತಿದ್ದು, ದೃಶ್ಯದ ಚಿತ್ರೀಕರಣ ಈಗಲ್‍ಟನ್ ರೆಸಾರ್ಟ್‍ನ ಗಾಲ್ಫ್ ಆವರಣದಲ್ಲಿ ನಡೆಯುತ್ತಿದೆ.

    ಮೊದಲಿಗೆ ವಿಶೇಷ ಬಸ್ ರೆಸಾರ್ಟ್‍ನೊಳಗೆ ಎಂಟ್ರಿ ಕೊಟ್ಟಿದ್ದನ್ನು ನೋಡಿ ಗುಜರಾತ್ ಶಾಸಕರು ರೆಸಾರ್ಟ್‍ನಿಂದ ಶಿಫ್ಟ್ ಆಗಲು ಬಂದಿರುವ ಬಸ್ ಇರಬಹುದು ಎಂದು ಊಹಿಸಲಾಗಿತ್ತು.

    ಆದರೂ ಡಿಕೆಶಿ ಮೇಲಿನ ಐಟಿ ದಾಳಿಗೆ ಹೆದರಿದ ರೆಸಾರ್ಟ್ ಮಾಲೀಕರು ಗುಜರಾತ್ ಕಾಂಗ್ರೆಸ್ ಶಾಸಕರಿಗೆ ರೆಸಾರ್ಟ್ ಖಾಲಿ ಮಾಡುವಂತೆ ಸೂಚಿಸಿದ್ದಾರೆ. ಸದ್ಯ ಗುಜರಾತ್ ಶಾಸಕರ ಮೇಲ್ವಿಚಾರಣೆಯಲ್ಲಿ ತೊಡಗಿರುವ ಡಿ.ಕೆ.ಸುರೇಶ್ ಗೂ ಕೂಡ ಈ ಬಗ್ಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ರೆಸಾರ್ಟ್‍ನಿಂದ ಗುಜರಾತ್ ಶಾಸಕರು ಬೇರೆಡೆಗೆ ಶಿಫ್ಟ್ ಆಗುವ ಸಾಧ್ಯತೆ ದಟ್ಟವಾಗಿದೆ.

  • ಮೋದಿ ಬಂದ್ರು ಸೀಟ್ ಸಿಗಲ್ಲ: ಸೀಟಿನಲ್ಲಿ ಕುಳಿತ ವಿದ್ಯಾರ್ಥಿನಿಗೆ KSRTC ಕಂಡಕ್ಟರ್, ಟಿಸಿ ಅವಾಜ್- ವಿಡಿಯೋ ನೋಡಿ

    ಮೋದಿ ಬಂದ್ರು ಸೀಟ್ ಸಿಗಲ್ಲ: ಸೀಟಿನಲ್ಲಿ ಕುಳಿತ ವಿದ್ಯಾರ್ಥಿನಿಗೆ KSRTC ಕಂಡಕ್ಟರ್, ಟಿಸಿ ಅವಾಜ್- ವಿಡಿಯೋ ನೋಡಿ

    ಮಂಡ್ಯ: ಕೆಎಸ್‍ಆರ್‍ಟಿಸಿ ಬಸ್ಸಿನ ಸೀಟಿನಲ್ಲಿ ಕುಳಿತುಕೊಳ್ಳುವ ವಿಚಾರಕ್ಕೆ ವಿದ್ಯಾರ್ಥಿನಿಗೆ ಬಸ್ಸಿನ ನಿರ್ವಾಹಕಿ ಮತ್ತು ಟಿಸಿ ಅವಾಜ್ ಹಾಕಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದ್ದು, ವಾಗ್ವಾದ ಮಾಡಿರುವ ವಿಡಿಯೋವನ್ನು ಬಸ್ಸಿನಲ್ಲಿದ್ದ ಯುವಕರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

    ಕಾಲೇಜು ವಿದ್ಯಾರ್ಥಿನಿ ತರಗತಿ ಮುಗಿಸಿಕೊಂಡು ಮನೆಗೆ ಹೋಗಲು ಮೇಲುಕೋಟೆ ಸರ್ಕಾರಿ ಬಸ್ ನಿಲ್ದಾಣಕ್ಕೆ ಬಂದಿದ್ದಾಳೆ. ಕೆಲಹೊತ್ತಿನಲ್ಲಿ ಮೇಲುಕೋಟೆಯಿಂದ ಮಂಡ್ಯಕ್ಕೆ ಹೋಗುವ ಬಸ್ ಬಂದಿದ್ದು, ಅದರಲ್ಲಿ ಖಾಲಿ ಇದ್ದ ಸೀಟಿನಲ್ಲಿ ವಿದ್ಯಾರ್ಥಿನಿ ಕುಳಿತುಕೊಂಡಿದ್ದಾಳೆ.

    ಈ ವೇಳೆ ಬಂದ ನಿರ್ವಾಹಕಿ ಟಿಕೆಟ್ ಪಡೆದವರಿಗೆ ಸೀಟು ಬಿಡಲು ಸೂಚಿಸಿದ್ದಾರೆ. ಆದರೆ ಇದಕ್ಕೆ ವಿದ್ಯಾರ್ಥಿನಿ ವಿರೋಧಿಸಿದ್ದಾರೆ. ನಾವು ಹಣ ಕೊಟ್ಟು ಪಾಸ್ ಮಾಡಿಸಿಕೊಂಡಿದ್ದೇವೆ. ನಮಗೂ ಸೀಟಿನಲ್ಲಿ ಕುಳಿತುಕೊಳ್ಳುವ ಹಕ್ಕಿದೆ ಅಂತಾ ವಾದ ಮಾಡಿದ್ದಾಳೆ.

    ಗಲಾಟೆ ಕೇಳಿ ಬಸ್ಸಿನ ಬಳಿ ಬಂದ ನಿಲ್ದಾಣದ ಟಿಸಿ ಸರ್ಪಸೇನಾ ಕೂಡ ವಿದ್ಯಾರ್ಥಿನಿಗೆ ಅವಾಜ್ ಹಾಕಿದ್ದಾರೆ. ಯಾರಿಗೆ ಬೇಕಾದ್ರೂ ಹೇಳು, ಮೋದಿ ಬಂದ್ರು ಅಷ್ಟೇ ಅಂತಾ ಉಡಾಫೆ ಮಾತುಗಳನ್ನ ಮಾತನಾಡಿದ್ದಾರೆ. ಜೊತೆಗೆ ವಿದ್ಯಾರ್ಥಿನಿಯನ್ನು ಬಸ್ಸಿನಿಂದ ಕೆಳಗಿಳಿಸಿ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಈ ಎಲ್ಲ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    https://youtu.be/1hGt5_Ns1ZQ

  • ಉತ್ತರಪ್ರದೇಶದಲ್ಲಿ ಮಹಿಳೆಯರ ಸುರಕ್ಷತೆಗಾಗಿ ರಸ್ತೆಗಿಳಿಯಲಿವೆ `ಪಿಂಕ್ ಬಸ್’

    ಉತ್ತರಪ್ರದೇಶದಲ್ಲಿ ಮಹಿಳೆಯರ ಸುರಕ್ಷತೆಗಾಗಿ ರಸ್ತೆಗಿಳಿಯಲಿವೆ `ಪಿಂಕ್ ಬಸ್’

    ಲಕ್ನೋ: ಅತ್ಯಾಚಾರದಂತಹ ಪ್ರಕರಣಗಳಿಗೆ ಬ್ರೇಕ್ ಹಾಕಲು ಹಾಗೂ ಪ್ರಯಾಣದ ವೇಳೆ ಮಹಿಳೆಯರ ಸುರಕ್ಷತೆಗಾಗಿ ಉತ್ತರಪ್ರದೇಶದಲ್ಲಿ ಗುಲಾಬಿ ಬಣ್ಣದ ಹವಾನಿಯಂತ್ರಿತ ಬಸ್‍ಗಳನ್ನ ರಸ್ತೆಗಿಳಿಸಲು ನಿರ್ಧರಿಸಲಾಗಿದೆ.

    2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯಾ ಪ್ರಕರಣದ ನಂತರ ಕೇಂದ್ರ ಸರ್ಕಾರ ನಿಧಿ ಸ್ಥಾಪಿಸಿತ್ತು. ಇದೀಗ ಪಿಂಕ್ ಬಸ್ ಯೋಜನೆಗಾಗಿ ಈ ನಿಧಿಯಿಂದ 50 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ. ಕೇಂದ್ರ ಸರ್ಕಾರ ಈ ನಿಧಿಗಾಗಿ 1000 ಕೋಟಿ ರೂ. ಘೋಷಣೆ ಮಾಡಿದೆ. ಮಹಿಳಾ ಸುರಕ್ಷತೆಯ ಕಾರ್ಯಗಳಿಗೆ ಇದರ ಹಣವನ್ನು ಬಳಸಿಕೊಳ್ಳಲಾಗುತ್ತದೆ.

    ಪಿಂಕ್ ಬಸ್‍ಗಳು ಉತ್ತರಪ್ರದೇಶದ ಎಲ್ಲಾ ಪ್ರಮುಖ ಮಾರ್ಗಗಳಲ್ಲಿ ಓಡಾಡಲಿವೆ. ಅಲ್ಲದೇ ಇದರಲ್ಲಿ ಪುರುಷರು ಸಂಚರಿಸುವಂತಿಲ್ಲ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

  • 300 ಮೀಟರ್ ಆಳದ ಕಂದಕಕ್ಕೆ ಬಿದ್ದ ಖಾಸಗಿ ಬಸ್- 28 ಪ್ರಯಾಣಿಕರ ಸಾವು

    300 ಮೀಟರ್ ಆಳದ ಕಂದಕಕ್ಕೆ ಬಿದ್ದ ಖಾಸಗಿ ಬಸ್- 28 ಪ್ರಯಾಣಿಕರ ಸಾವು

    ಶಿಮ್ಲಾ: ಖಾಸಗಿ ಬಸ್‍ವೊಂದು 900 ಆಳದ ಕಂದಕಕ್ಕೆ ಬಿದ್ದ ಪರಿಣಾಮ ಸುಮಾರು 28 ಜನ ಸಾವನ್ನಪ್ಪಿದ್ದು, ಹಲವರಿಗೆ ಗಾಯವಾಗಿರುವ ಘಟನೆ ಇಂದು ಬೆಳಿಗ್ಗೆ ಶಿಮ್ಲಾದಲ್ಲಿ ನಡೆದಿದೆ.

    ಕಿನ್ನೊರ್ ಜಿಲ್ಲೆಯ ರೆಕಾಂಗ್ ಪಿಯೋನಿಂದ ಸೊಲಾನ್ ಕಡೆಗೆ ಹೋಗುತ್ತಿದ್ದ ಬಸ್ ರಸ್ತೆಯಲ್ಲಿ ಸ್ಕಿಡ್ ಆಗಿ ಶಿಮ್ಲಾ ಜಿಲ್ಲೆಯ ರಾಮ್‍ಪುರ್ ಬಳಿಯ ಖಾನೇರಿ ಬಳಿ 300 ಮೀಟರ್(ಸುಮಾರು 900 ಅಡಿ) ಆಳದ ಕಂದಕಕ್ಕೆ ಬಿದ್ದಿದೆ.

    ಈ ಅವಘಢ ಸಂಭವಿಸಿದಾಗ ಬಸ್‍ನಲ್ಲಿ ಸುಮಾರು 40 ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಬಸ್ ಚಾಲಕ ಹಾಗೂ ಕಂಡಕ್ಟರ್ ಗಾಯಗೊಂಡಿದ್ದಾರೆ.

    ಇಂದು ಬೆಳ್ಳಂಬೆಳಗ್ಗೆ ಬಸ್ ರೆಕಾಂಗ್ ಪಿಯೋನಿಂದ ಹೊರಟಿದ್ದು, ಸುಮಾರು 9 ಗಂಟೆ ವೇಳೆಗೆ ಖಾನೇರಿ ಅಸ್ಪತ್ರೆ ಬಳಿ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ ಎಂದು ಹೇಳಲಾಗಿದೆ.

    ಪೊಲೀಸರು ಹಾಗೂ ಜಿಲ್ಲಾಡಳಿತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅಧಿಕಾರಿಗಳಿಗೆ ಸೂಕ್ತ ಪರಿಹಾರ ಕ್ರಮ ಕೈಗೊಳ್ಳುವಂತೆ ಹಿಮಾಚಲ ಪ್ರದೇಶ ಮುಖ್ಯುಮಂತ್ರಿ ವೀರಭದ್ರ ಸಿಂಗ್ ಸೂಚನೆ ನೀಡಿದ್ದಾರೆ.

  • ಸಾರಿಗೆ ಬಸ್ಸಿಗೆ ಖಾಸಗಿ ಶಾಲೆಯ ವ್ಯಾನ್ ಡಿಕ್ಕಿ – 15 ವಿದ್ಯಾರ್ಥಿಗಳಿಗೆ ಗಾಯ

    ಸಾರಿಗೆ ಬಸ್ಸಿಗೆ ಖಾಸಗಿ ಶಾಲೆಯ ವ್ಯಾನ್ ಡಿಕ್ಕಿ – 15 ವಿದ್ಯಾರ್ಥಿಗಳಿಗೆ ಗಾಯ

    ಹಾವೇರಿ: ಸಾರಿಗೆ ಬಸ್ ಮತ್ತು ಖಾಸಗಿ ಶಾಲೆಯ ವ್ಯಾನ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಹದಿನೈದಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗೊಂಡ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಮಾಸನಕಟ್ಟಿ ಗ್ರಾಮದ ಬಳಿ ನಡೆದಿದೆ.

    ಸರ್ಕಾರಿ ಬಸ್ ಹುಬ್ಬಳ್ಳಿಯಿಂದ ಹಾನಗಲ್ ನತ್ತ ಹೋಗುತ್ತಿತ್ತು. ಈ ವೇಳೆ ಶಾಲಾ ವಾಹನಕ್ಕೆ ಡಿಕ್ಕಿ ಹೊಡೆದಿದ್ದರಿಂದ ಈ ಅವಘಡ ಸಂಭವಿಸಿದೆ.

    ಗಾಯಗೊಂಡ 15 ವಿದ್ಯಾರ್ಥಿಗಳನ್ನ ಬಂಕಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಆಡೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

     

  • ಮಡಿಕೇರಿ: ಬಸ್ ಅಡಿ ಸಿಲುಕಿಯೂ ಬಚಾವ್ ಆದ ಮಹಿಳೆ- ವೈರಲ್ ಆಗಿದೆ ಗ್ರೇಟ್ ಎಸ್ಕೇಪ್ ವಿಡಿಯೋ

    ಮಡಿಕೇರಿ: ಬಸ್ ಅಡಿ ಸಿಲುಕಿಯೂ ಬಚಾವ್ ಆದ ಮಹಿಳೆ- ವೈರಲ್ ಆಗಿದೆ ಗ್ರೇಟ್ ಎಸ್ಕೇಪ್ ವಿಡಿಯೋ

    ಮಡಿಕೇರಿ: ಕೆಎಸ್‍ಆರ್‍ಟಿಸಿ ಬಸ್ ಕೆಳಗೆ ಸಿಲುಕಿದ್ರೂ ಪವಾಡ ಸದೃಶವಾಗಿ ಮಹಿಳೆ ಪ್ರಾಣಾಪಾಯದಿಂದ ಪಾರಾದ ಘಟನೆ ಮಡಿಕೇರಿಯಲ್ಲಿ ನಡೆದಿದೆ.

    ಸೋಮವಾರಪೇಟೆ ತಾಲೂಕಿನ ಕುಶಾಲನಗರ ಸಮೀಪದ ಗುಡ್ಡೆಹೊಸೂರು ಬಳಿಯ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಈ ಅಪಘಾತ ನಡೆದಿದ್ದು, ಘೋರ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ರಸ್ತೆಯಲ್ಲಿ ಬೈಕ್ ಸವಾರನೊಬ್ಬ ಇದ್ದಕ್ಕಿದ್ದಂತೆ ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಯತ್ತ ಬೈಕ್ ತಿರುಗಿಸಿದ್ಧಾನೆ. ಈ ವೇಳೆ ಹಿಂದೆ ಬರುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಬೈಕಿಗೆ ಡಿಕ್ಕಿ ಹೊಡೆಯೋದನ್ನ ತಪ್ಪಿಸಲು ಚಾಲಕ ಬಸ್ಸನ್ನು ಎಡಕ್ಕೆ ತಿರುಗಿಸಿದ್ದಾರೆ. ಈ ವೇಳೆ ಬಸ್ ಗೆ ಬೈಕ್ ಟಚ್ ಆಗಿ ಬೈಕ್ ಸವಾರ ದೂರಕ್ಕೆ ಹಾರಿಬಿದ್ದಿದ್ದಾನೆ. ಇತ್ತ ಬೈಕ್ ಹಿಂಬದಿ ಕುಳಿತಿದ್ದ ಮಹಿಳೆ ಬಸ್‍ನ ಎರಡು ಚಕ್ರದ ನಡುವೆ ಸಿಲುಕಿದ್ದಾರೆ. ಸಮಯ ಪ್ರಜ್ಞೆ ಮೆರೆದ ಬಸ್ ಚಾಲಕ ಕೂಡಲೇ ಬಸ್ ನಿಲ್ಲಿಸಿದ್ದಾರೆ. ಹೀಗಾಗಿ ಮಹಿಳೆ ಅಪಾಯದಿಂದ ಪಾರಾಗಿದ್ದಾರೆ. ಆದ್ರೆ ವೇಗದ ತೀವ್ರತೆಗೆ ಸರ್ಕಾರಿ ಬಸ್ ಉಲ್ಟಾ ತಿರುಗಿ ರಸ್ತೆಗೆ ಅಡ್ಡಲಾಗಿ ನಿಂತಿದೆ.

    ಅದೃಷ್ಟವಶಾತ್ ಬಸ್ಸಿನಲ್ಲಿದ್ದವರು ಹಾಗೂ ಬೈಕ್ ಸವಾರರಿಗ್ಯಾರಿಗೂ ಯಾವುದೇ ತೊಂದರೆ ಆಗಿಲ್ಲ. ಅಪಘಾತದ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    https://www.youtube.com/watch?v=f5KpV1MzHLU&feature=youtu.be

  • ಕಬ್ಬಿಣದ ರಾಡ್‍ಗಳನ್ನ ಹೊತ್ತೊಯ್ಯುತ್ತಿದ್ದ ಟ್ರಕ್‍ಗೆ ಬಸ್ ಡಿಕ್ಕಿ- 9 ಮಂದಿ ಸಾವು

    ಕಬ್ಬಿಣದ ರಾಡ್‍ಗಳನ್ನ ಹೊತ್ತೊಯ್ಯುತ್ತಿದ್ದ ಟ್ರಕ್‍ಗೆ ಬಸ್ ಡಿಕ್ಕಿ- 9 ಮಂದಿ ಸಾವು

    ಚೆನ್ನೈ: ಕಬ್ಬಿಣದ ರಾಡ್‍ಗಳನ್ನು ಕೊಂಡೊಯ್ಯುತ್ತಿದ್ದ ಟ್ರಕ್‍ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ 9 ಮಂದಿ ಸಾವನ್ನಪ್ಪಿದ್ದು ಸುಮಾರು 25 ಜನ ಗಾಯಗೊಂಡಿರುವ ಘಟನೆ ತಮಿಳುನಾಡಿನ ತಂಜಾವೂರ್ ಜಿಲ್ಲೆಯ ಓವರ್‍ಬ್ರಿಡ್ಜ್ ವೊಂದರ ಬಳಿ ನಡೆದಿದೆ.

    ಶುಕ್ರವಾರದಂದು ತಿರುಪ್ಪುರ್‍ನಿಂದ ಕುಂಬಕೋಣಂಗೆ ಹೋಗುತ್ತಿದ್ದ ರಾಜ್ಯ ಸಾರಿಗೆ ಬಸ್‍ನಲ್ಲಿ ಸುಮಾರು 60 ಪ್ರಯಾಣಿಕರಿದ್ದರು. ಜಿಲ್ಲೆಯ ವಲ್ಲಂ ನಗರದ ಓವರ್‍ಬ್ರಿಡ್ಜ್ ಬಳಿ ಬಸ್ ಟ್ರಕ್‍ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಟ್ರಕ್‍ನಲ್ಲಿದ್ದ ರಾಡ್‍ಗಳು ಬಸ್‍ನಲ್ಲಿದ್ದ ಕೆಲವು ಪ್ರಯಣಿಕರಿಗೆ ಚುಚ್ಚಿಕೊಂಡಿತ್ತು ಎಂದು ಪೊಲೀಸರು ಹೇಳಿದ್ದಾರೆ.

    ಬಸ್‍ನಲ್ಲಿದ್ದ 7 ಪ್ರಯಾಣಿಕರು ಸೇರಿದಂತೆ ಎರಡೂ ವಹನಗಳ ಚಾಲಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರನ್ನು ತಂಜಾವೂರು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಘಟನೆಗೆ ನಿಖರವಾದ ಕಾರಣವೇನೆಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಜಿಲ್ಲಾಧಿಕಾರಿ ಎ ಅಣ್ಣಾದುರೈ ಹಾಗೂ ಎಸ್‍ಪಿ ಜೆ ಮಹೇಶ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ.

  • ಅಮರನಾಥ ಉಗ್ರರ ದಾಳಿಯಲ್ಲಿ ಸಾವನ್ನಪ್ಪಿದ್ದು 7 ಶಿವಭಕ್ತರು, ಉಳಿದವರನ್ನ ಉಳಿಸಿದ್ದು ಬಸ್ ಚಾಲಕ ಸಲೀಮ್

    ಅಮರನಾಥ ಉಗ್ರರ ದಾಳಿಯಲ್ಲಿ ಸಾವನ್ನಪ್ಪಿದ್ದು 7 ಶಿವಭಕ್ತರು, ಉಳಿದವರನ್ನ ಉಳಿಸಿದ್ದು ಬಸ್ ಚಾಲಕ ಸಲೀಮ್

    ಶ್ರೀನಗರ: ಉಗ್ರರ ಪೈಶಾಚಿಕ ಕೃತ್ಯದಿಂದ ಅಮರನಾಥ ಯಾತ್ರೆಗೆ ತೆರಳಿದ್ದ ಶಿವಭಕ್ತರಲ್ಲಿ 7 ಮಂದಿ ಸಾವನ್ನಪ್ಪಿದ್ದು, ಹಲವು ಜನರು ಗಾಯಗೊಂಡಿದ್ದಾರೆ. ಆದ್ರೆ ಹೀರೋ ರೀತಿಯಲ್ಲಿ ಉಳಿದ ಯಾತ್ರಿಕರ ಪ್ರಾಣ ಉಳಿಸಿದ್ದು ಬಸ್ ಚಾಲಕ ಸಲೀಮ್.

    ಅದು ಸೋಮವಾರ ರಾತ್ರಿ 8.20ರ ಸಮಯ. ಬಿಳಿ ಬಣ್ಣದ ಗುಜರಾತ್ ನೋಂದಣಿಯುಳ್ಳ ಬಸ್ 61 ಅಮರನಾಥ ಯಾತ್ರಿಕರನ್ನ ಶ್ರೀನಗರದಿಂದ ಜಮ್ಮುವಿಗೆ ಕೊಂಡೊಯ್ಯುತ್ತಿತ್ತು. ಆ ಬಸ್ ಅಧಿಕೃತವಾಗಿ ಅಮರನಾಥ ದೇವಾಲಯದ ಬೋರ್ಡ್‍ನೊಂದಿಗೆ ನೋಂಣಿಯಾಗಿರಲಿಲ್ಲ. ಹೀಗಾಗಿ ಆ ಬಸ್‍ಗೆ ಪೊಲೀಸರ ರಕ್ಷಣೆಯೂ ಇರಲಿಲ್ಲ. ಬಸ್ ಖನಾಬಲ್ ಬಳಿ ತಲುಪುತ್ತಿದ್ದಂತೆ 3-5 ಉಗ್ರರು ಗುಂಡಿನ ದಾಳಿ ಆರಂಭಿಸಿದ್ರು. ಹೊರಗೆ ಕಗ್ಗತ್ತಲು, ಬಸ್ ಮೇಲೆ ಗುಂಡಿನ ಸುರಿಮಳೆ. ಎಂಥವರಿಗೂ ಭಯ ಹುಟ್ಟಿಸುವ ಸಂದರ್ಭವದು. ಆದ್ರೆ ಬಸ್‍ನ ಚಾಲಕ ಸಲೀಮ್ ಶೇಕ್ ಮಾತ್ರ ಬಸ್ ನಿಲ್ಲಿಸದೇ ಮುಂದೆ ಸಾಗಿದ್ದರು. 7 ಯಾತ್ರಿಕರನ್ನ ಅವರಿಂದ ಉಳಿಸಲಾಗಲಿಲ್ಲ. ಆದ್ರೂ ಉಳಿದ ಎಲ್ಲರನ್ನೂ ಸುರಕ್ಷಿತವಾಗಿ ಕರೆದುಕೊಂಡು ಬಂದು ಅವರ ಪ್ರಾಣ ಉಳಿಸಿದ್ರು ಆ ಹೀರೋ ಚಾಲಕ.

    ಬಸ್‍ನೊಳಗಿದ್ದ ಯಾತ್ರಿಕ ಯೋಗೇಶ್ ಪ್ರಜಾಪತಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದು, ನಾವು ಸೀಟ್‍ನ ಕೆಳಗಡೆ ಅಡಗಿ ಕುಳಿತೆವು. ಎಲ್ಲಾ ದಿಕ್ಕುಗಳಿಂದ ಬುಲೆಟ್‍ಗಳು ಹಾರಿ ಬಂದವು. ಆದ್ರೆ ಚಾಲಕ ಮಾತ್ರ ಗಾಬರಿಯಾಗಲಿಲ್ಲ. ಅವರು ಬಸ್ ಚಾಲನೆ ಮಡುವುದನ್ನ ಮುಂದುವರೆಸಿದ್ರು ಎಂದಿದ್ದಾರೆ.

    ಇಲ್ಲಿಂದ ಮುಂದೆ ಸಾಗಿದ ನಂತರ ಸಲೀಮ್ ಅವರು ಒಂದು ಕಿಲೋಮೀಟರ್‍ವರೆಗೆ ಬಸ್ ಚಾಲನೆ ಮಾಡಿಕೊಂಡು ಹೋಗಿ ನಂತರವಷ್ಟೆ ಬಸ್ ನಿಲ್ಲಿಸಿದ್ರು. ಒಂದು ವೇಳೆ ಚಾಲಕ ಭಯದಿಂದ ಬಸ್ ನಿಲ್ಲಿಸಿದ್ರೆ ಮತ್ತಷ್ಟು ಜನ ಪ್ರಾಣ ಕಳೆದುಕೊಳ್ಳಬೇಕಿತ್ತು. ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಚಾಲಕ ಸಲೀಮ್ ಅವರ ಧೈರ್ಯವನ್ನ ಮೆಚ್ಚಿ ಕೊಂಡಾಡಿದ್ದಾರೆ. 50ಕ್ಕೂ ಹೆಚ್ಚು ಜನರ ಪ್ರಾಣ ಉಳಿಸಿದ್ದಕ್ಕೆ ಅವರನ್ನ ಶ್ಲಾಘಿಸಿದ್ದಾರೆ.

    ಜನರ ಪ್ರಣ ಉಳಿಸಿದ್ದಕ್ಕೆ ಬಸ್ ಚಾಲಕನಿಗೆ ಧನ್ಯವಾದ ಹೇಳಬೇಕು. ಅವರ ಹೆಸರನ್ನ ಶೌರ್ಯ ಪ್ರಶಸ್ತಿಗೆ ನಾಮನಿರ್ದೇಶನ ಮಾಡುತ್ತೇವೆ ಎಂದು ರೂಪಾನಿ ವರದಿಗಾರರಿಗೆ ಹೇಳಿದ್ದಾರೆ.

    ಈ ದುರಂತದಲ್ಲಿ ಸಾವನ್ನಪ್ಪಿದ 7 ಜನರಲ್ಲಿ 5 ಮಂದಿ ಗುಜರಾತ್‍ನವರು, ಇಬ್ಬರು ಮಹಾರಾಷ್ಟ್ರದವರು. ಮೂಲಗಳ ಪ್ರಕಾರ ಪಾಕಿಸ್ತಾನದ ಲಷ್ಕರ್ ಸಂಘಟನೆಯ ಇಸ್ಮಾಯಿಲ್ ಎಂಬಾತ ಈ ದಾಳಿಯ ನೇತೃತ್ವ ವಹಿಸಿದ್ದ ಎಂದು ವರದಿಯಾಗಿದೆ.

  • ಗ್ರಾಮದಲ್ಲಿ ಬಸ್ ನಿಲ್ಲಿಸಲು ಆಗ್ರಹಿಸಿ ವಿದ್ಯಾರ್ಥಿಗಳಿಂದ ಚಾಲಕನಿಗೆ ಥಳಿತ

    ಗ್ರಾಮದಲ್ಲಿ ಬಸ್ ನಿಲ್ಲಿಸಲು ಆಗ್ರಹಿಸಿ ವಿದ್ಯಾರ್ಥಿಗಳಿಂದ ಚಾಲಕನಿಗೆ ಥಳಿತ

    ರಾಯಚೂರು: ಗ್ರಾಮದಲ್ಲಿ ಬಸ್ ನಿಲ್ಲಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಸಾರಿಗೆ ಬಸ್ ತಡೆದು ಪ್ರತಿಭಟಿಸಿ ಚಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆ ರಾಯಚೂರಿನ ಸಿಂಧನೂರಿನ ಹೊಸಳ್ಳಿ ಕ್ಯಾಂಪ್‍ನಲ್ಲಿ ನಡೆದಿದೆ.

    ಸಿಂಧನೂರಿನಿಂದ 5 ಕಿ.ಮೀ ದೂರದಲ್ಲಿರುವ ಹೊಸಳ್ಳಿ ಕ್ಯಾಂಪ್‍ನಲ್ಲಿ ಸಾಮಾನ್ಯ ಬಸ್‍ಗಳನ್ನೂ ಸಹ ನಿಲ್ಲಿಸಲ್ಲ. ನಿಲ್ಲಿಸಿದರೂ ಪಾಸ್ ಇರುವ ವಿದ್ಯಾರ್ಥಿಗಳನ್ನು ಬಸ್ ಹತ್ತಲು ಚಾಲಕ ಹಾಗೂ ನಿರ್ವಾಹಕರು ಬಿಡುತ್ತಿರಲಿಲ್ಲ. ಇದರಿಂದ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ತೆರಳಲು ತೊಂದರೆ ಅನುಭವಿಸುತ್ತಿದ್ದರು. ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ಮಾಡಿದ್ದಾರೆ.

    ಬೆಳಿಗ್ಗೆ 7:30 ರಿಂದ 8:30ರ ಸಮಯದಲ್ಲಿ ಬಸ್ ವ್ಯವಸ್ಥೆ ಮಾಡಲು ಆಗ್ರಹಿಸಿದ್ದಾರೆ. ಚಾಲಕನ ಜೊತೆ ವಿದ್ಯಾರ್ಥಿಗಳು ಮಾತಿನ ಚಕಮಕಿ ನಡೆಸಿ ಥಳಿಸಿದ್ದಾರೆ. ಚಾಲಕ ಸಹ ವಿದ್ಯಾರ್ಥಿಗಳ ಮೇಲೆ ಕೈಮಾಡಿದ್ದಾನೆ. ಬಸ್ ತಡೆದಿದ್ದರಿಂದ ಪ್ರಯಾಣಿಕರು ಪರದಾಡಿದ್ದು ಪ್ರತ್ಯೇಕ ವ್ಯವಸ್ಥೆಯಲ್ಲಿ ತೆರಳಿದ್ದಾರೆ.

  • ಪ್ರಿಯಕರನನ್ನ ಹುಡುಕಿ ಬಂದ ಅಪ್ರಾಪ್ತೆ ಮೇಲೆ ಸಾರಿಗೆ ಬಸ್ ಕಂಡಕ್ಟರ್, ಚಾಲಕರಿಂದ ಗ್ಯಾಂಗ್‍ರೇಪ್!

    ಪ್ರಿಯಕರನನ್ನ ಹುಡುಕಿ ಬಂದ ಅಪ್ರಾಪ್ತೆ ಮೇಲೆ ಸಾರಿಗೆ ಬಸ್ ಕಂಡಕ್ಟರ್, ಚಾಲಕರಿಂದ ಗ್ಯಾಂಗ್‍ರೇಪ್!

    ಹಾವೇರಿ: ಸಹಾಯ ಅರಸಿ ಬಂದಾಕೆಯ ಮೇಲೆಯೇ ಕಾಮುಕರು ಎರಗಿ ಅತ್ಯಾಚಾರವೆಸಗಿರೋ ಘನಘೋರ ಕೃತ್ಯ ಪ್ರತಿಷ್ಠಿತ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಬಸ್‍ನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ಸಹಾಯ ಕೇಳಿಬಂದ ಅಪ್ರಾಪ್ತೆಗೆ ಸಹಾಯ ಮಾಡುವುದಾಗಿ ಕರೆದುಕೊಂಡು ಹೋದ ಕೀಚಕರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಉಡುಪಿ ಮೂಲದ ಅಪ್ರಾಪ್ತೆ ತನ್ನ ಪ್ರಿಯಕರ ಹಾವೇರಿಯ ಹಿರೇಕೆರೂರು ಮೂಲದ ಯುವಕನನ್ನು ಹುಡುಕಿಕೊಂಡು ಬಂದಿದ್ದಳು. ಆದ್ರೆ ಪ್ರಿಯಕರ ಸಿಗದ ಕಾರಣ ತಡರಾತ್ರಿ ಮರಳಿ ಉಡುಪಿಗೆ ತೆರಳಲು ರಾಣೇಬೆನ್ನೂರಿಗೆ ಬಂದಿದ್ದಳು. ಈ ವೇಳೆ ತಾನು ಬಂದಿದ್ದ ಬಸ್‍ನ ಕಂಡಕ್ಟರ್, ಡ್ರೈವರ್ ಬಳಿ ಸಹಾಯ ಕೇಳಿದ್ದಳು.

    ಸಹಾಯ ಮಾಡೋ ಸೋಗಿನಲ್ಲಿ ಹಿರೇಕೆರೂರು ಡಿಪೋದ ಕಂಡಕ್ಟರ್ ವೈ.ಸಿ ಕಟ್ಟೆಕಾರ, ಡ್ರೈವರ್ ವಿ.ಆರ್ ಹಿರೇಮಠ ಹಾಗೂ ರಾಣೆಬೆನ್ನೂರು ಡಿಪೋದ ಡ್ರೈವರ್ ಕಂ ಕಂಡಕ್ಟರ್ ರಾಘವೇಂದ್ರ ಬಡಿಗೇರ ಸೇರಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

    ಜೂನ್ 5ರಂದು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಬಸ್‍ನಲ್ಲಿ ಕೃತ್ಯ ನಡೆದಿದೆ. ಮಾರನೇ ದಿನ ಸುಧಾರಿಸಿಕೊಂಡು ಉಡುಪಿಗೆ ತೆರಳಿದ ಅಪ್ರಾಪ್ತೆ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಈ ದೂರನ್ನು ಆಧರಿಸಿ ಮೂವರು ಕಾಮುಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಕೃತ್ಯಕ್ಕೆ ಬಳಸಿದ್ದ ಕೆಎ47-ಎಫ್449 ಸಂಖ್ಯೆಯ ಬಸ್ ವಶಕ್ಕೆ ಪಡೆದಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ತಡರಾತ್ರಿ ಮೂವರು ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರುಪಡಿಸಿದ್ದಾರೆ. ಮೂವರು ಕಾಮಾಂಧರಿಗೆ 15 ದಿನಗಳ ಕಾಲ ನ್ಯಾಯಂಗ ಬಂಧನ ವಿಧಿಸಲಾಗಿದೆ.