Tag: ಬಸ್

  • ಅಪಘಾತವಾಗದೇ ಇರಲು ಹೋಮದ ಮೊರೆ ಹೋದ ಸಾರಿಗೆ ಅಧಿಕಾರಿಗಳು

    ಅಪಘಾತವಾಗದೇ ಇರಲು ಹೋಮದ ಮೊರೆ ಹೋದ ಸಾರಿಗೆ ಅಧಿಕಾರಿಗಳು

    ಚಾಮರಾಜನಗರ: ಇತ್ತೀಚೆಗೆ ಸಾರಿಗೆ ಸಂಸ್ಥೆಯ ಬಸ್ ಗಳು ಅಪಘಾತಕ್ಕೀಡಾಗುತ್ತಿರುವ ಹಿನ್ನೆಲೆಯಲ್ಲಿ ಚಾಮರಾಜನಗರದ ಸಾರಿಗೆ ಇಲಾಖೆಯ ಅಧಿಕಾರಿಗಳು ಹೋಮದ ಮೊರೆ ಹೋಗಿದ್ದಾರೆ.

    ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಘಟಕದ ಸಾರಿಗೆ ಸಂಸ್ಥೆಯ ಬಸ್ ಗಳು ಇತ್ತೀಚೆಗೆ ಅಪಘಾತಕ್ಕೀಡಾಗುತ್ತಿವೆ. ಕಳೆದ ವಾರವಷ್ಟೇ ಗುಂಡ್ಲುಪೇಟೆ ತಾಲೂಕಿನ ಗೋಪಾಲಸ್ವಾಮಿ ಬೆಟ್ಟದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದು ನಿಂತದ್ದರಿಂದ ದೊಡ್ಡ ದುರಂತವೊಂದು ತಪ್ಪಿತ್ತು. ಇದರಿಂದಾಗಿ ಕೂದಲೆಳೆ ಅಂತರದಲ್ಲಿ ಪ್ರಯಾಣಿಕರು ಪಾರಾಗಿದ್ದರು.

    ಈ ಘಟನೆಯಾದ ಮರು ದಿನವೇ ಚಾಮರಾಜನಗರ ಘಟಕದ ಇನ್ನೊಂದು ಬಸ್ ಸಂತೇಮರಹಳ್ಳಿ ವೃತ್ತದಲ್ಲಿ ಬ್ರೇಕ್ ವಿಫಲಗೊಂಡು ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಡಿಕ್ಕಿ ಹೊಡೆದಿತ್ತು. ಅಲ್ಲೂ ಕೂಡ ಸಣ್ಣ ಪುಟ್ಟ ಗಾಯಗಳಿಂದ ಪಾದಚಾರಿಗಳು ಹಾಗೂ ಪ್ರಯಾಣಿಕರು ಪಾರಾಗಿದ್ದರು.

    ಈ ಅವಘಡಗಳಿಂದ ವಿಚಲಿತರಾಗಿರುವ ಸಾರಿಗೆ ಇಲಾಖೆ ಅಧಿಕಾರಿಗಳು ಈಗ ದೇವರ ಮೊರೆ ಹೋಗಿದ್ದಾರೆ. ಚಾಮರಾಜನಗರ ಸಾರಿಗೆ ಡಿಸಿ ಅಶೋಕ್ ಕುಮಾರ್ ಆದೇಶದ ಮೇರೆಗೆ ಇಂದು ಬೆಳಗ್ಗೆ ಗುಂಡ್ಲುಪೇಟೆ ಘಟಕದಲ್ಲಿ ಗಣಪತಿ ಹೋಮ ನಡೆಸಿ ಇನ್ನು ಮುಂದೆ ಅಪಘಾತವಾಗದೇ ಇರಲೆಂದು ಪ್ರಾರ್ಥನೆ ಮಾಡಿಕೊಂಡಿದ್ದಾರೆ.

  • ಸೀಟ್ ಬೆಲ್ಟ್ ಹಾಕಿದ್ದರಿಂದ ಬಸ್ ಪಲ್ಟಿ ಹೊಡೆದ್ರೂ ಉಳಿಯಿತು ಪ್ರಾಣ-ವಿಡಿಯೋ ನೋಡಿ

    ಸೀಟ್ ಬೆಲ್ಟ್ ಹಾಕಿದ್ದರಿಂದ ಬಸ್ ಪಲ್ಟಿ ಹೊಡೆದ್ರೂ ಉಳಿಯಿತು ಪ್ರಾಣ-ವಿಡಿಯೋ ನೋಡಿ

    ಬೀಜಿಂಗ್: ಹೆದ್ದಾರಿಯಲ್ಲಿ ಬಸ್ಸೊಂದು ಕಾರ್ ಗೆ ಡಿಕ್ಕಿಯಾದರೂ ಪ್ರಯಾಣಿಕರೆಲ್ಲಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ ನಲ್ಲಿದ್ದ ಪ್ರಯಾಣಿಕರೆಲ್ಲರೂ ಸೀಟ್ ಬೆಲ್ಟ್ ಧರಿಸಿದ್ದರಿಂದ ಯಾವುದೇ ಸಾವುಗಳು ಸಂಭವಿಸಿಲ್ಲ. ಅಪಘಾತದ ದೃಶ್ಯಗಳೂ ಬಸ್ ನ ಸಿಸಿಟಿವಿ ಯಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಈ ಅಪಘಾತ ಅಕ್ಟೋಬರ್ 1ರಂದು ಸುಮಾರು ಮಧ್ಯಾಹ್ನ 1.55ಕ್ಕೆ ಚೀನಾದ ಝುಝೌ ಸಿಟಿ ಬಳಿಯ ಹೆದ್ದಾರಿಯಲ್ಲಿ ನಡೆದಿದೆ. ಬಸ್ ನಲ್ಲಿದ್ದ ಪ್ರಯಾಣಿಕರು ಸೀಟ್ ಬೆಲ್ಟ್ ಹಾಕಿದ್ದರಿಂದ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.

    ಹೆದ್ದಾರಿಯಲ್ಲಿ ಬಸ್ ಅತಿ ವೇಗದಿಂದ ಹೋಗುತ್ತಿತ್ತು. ಈ ವೇಳೆ ಬಸ್ ಕಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ವಿಡಿಯೋದಲ್ಲಿ ಬಿಳಿ ಶರ್ಟ್ ತೊಟ್ಟಿರುವ ಮಹಿಳೆಯನ್ನು ಹೊರತುಪಡಿಸಿ, ಎಲ್ಲರೂ ಸೀಟ್ ಬೆಲ್ಟ್ ಧರಿಸಿದ್ದಾರೆ. ಸೀಟ್ ಬೆಲ್ಟ್ ಹಾಕದೇ ಇದ್ದ ಮಹಿಳೆ ಮಾತ್ರ ಬಸ್ ನ ಒಂದು ಬದಿಯಿಂದ ಇನ್ನೊಂದು ಬದಿಗೆ ಬಂದು ಗಾಯಗೊಂಡಿದ್ದಾರೆ. ಇನ್ನುಳಿದ ಪ್ರಯಾಣಿಕರೆಲ್ಲಾ ಸೀಟ್ ಬಿಟ್ಟು ಸಹ ಬಂದಿಲ್ಲ.

    ಬಸ್ ಅಥವಾ ಕಾರಿನಲ್ಲಿ ಪ್ರಯಾಣಿಸುವವರು ಸೀಟ್ ಬೆಲ್ಟ್ ಧರಿಸಬೇಕೆಂಬ ನಿಯಮವಿದ್ದರೂ, ಹಲವರು ಧರಿಸಲ್ಲ. ಭಾರತದಲ್ಲಿ ಸೀಟ್ ಬೆಲ್ಟ್ ಹಾಕದೇ ಇರುವದರಿಂದ ಒಂದು ಗಂಟೆಗೆ ಸುಮಾರು 17 ಪ್ರಯಾಣಿಕರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.

    https://www.youtube.com/watch?v=RD34i25wmlE

  • ನೀವು ಊರಿಗೆ ಹೋಗಿ ವಾಪಸ್ ಬಂದಿದ್ದಕ್ಕೆ KSRTCಗೆ ಒಂದೇ ದಿನ ಭರ್ಜರಿ 13.46 ಕೋಟಿ ರೂ. ಬಂತು!

    ನೀವು ಊರಿಗೆ ಹೋಗಿ ವಾಪಸ್ ಬಂದಿದ್ದಕ್ಕೆ KSRTCಗೆ ಒಂದೇ ದಿನ ಭರ್ಜರಿ 13.46 ಕೋಟಿ ರೂ. ಬಂತು!

    ಬೆಂಗಳೂರು: ಈ ಬಾರಿ ದಸರಾ ಹಬ್ಬಕ್ಕೆ ನೀವು ಊರಿಗೆ ಹೋಗಿದ್ರಾ..? ಹಬ್ಬ ಎಲ್ಲಾ ಮುಗಿಸಿ ನಿನ್ನೆ (ಅಕ್ಟೋಬರ್ 3) ರಂದು ವಾಪಸ್ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ವಾಪಸ್ ಬಂದ್ರಾ..?

    ಹೌದು ಎಂದಾದರೆ ಕೆ.ಎಸ್.ಆರ್.ಟಿ.ಸಿ ಈ ಬಾರಿ ಮಾಡಿದ ದಾಖಲೆ ಆದಾಯದಲ್ಲಿ ನಿಮ್ಮ ಪಾಲೂ ಸೇರಲಿದೆ. ಅಕ್ಟೋಬರ್ 3ರ ಒಂದೇ ದಿನ ಕೆ.ಎಸ್.ಆರ್.ಟಿ.ಸಿ ಭರ್ಜರಿ 13.46 ಕೋಟಿ ಆದಾಯ ಗಳಿಸಿದೆ. ದಸರಾ ಹಬ್ಬದ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚುವರಿ ಕೆ.ಎಸ್.ಆರ್.ಟಿ.ಸಿ ಬಸ್ ಗಳನ್ನು ಬಿಟ್ಟಿತ್ತು.

    ಈ ಹಿಂದೆ 2015ರ ದಸರಾ ಸಂದರ್ಭದಲ್ಲಿ ಒಂದೇ ದಿನ 12.75 ಕೋಟಿ ರೂ. ಆದಾಯ ಬಂದಿದ್ದು ಇದುವರೆಗಿನ ದಿನದ ಅತ್ಯಧಿಕ ಆದಾಯವಾಗಿತ್ತು. ಕಳೆದ ವರ್ಷ ಏಪ್ರಿಲ್- ಅಕ್ಟೋಬರ್ 3ರವರೆಗಿನ ಅವಧಿಯನ್ನು ಈ ವರ್ಷಕ್ಕೆ ಹೋಲಿಸಿದರೆ ಒಟ್ಟು ಆದಾಯದಲ್ಲಿ 132.16 ಕೋಟಿ ಹೆಚ್ಚುವರಿ ಆದಾಯವನ್ನು ದಾಖಲಿಸಿದೆ.

     

     

     

  • ಸ್ಕೂಟಿಗೆ ಡಿಕ್ಕಿ ಹೊಡೆದ ತಮಿಳುನಾಡು ಸರ್ಕಾರಿ ಬಸ್- ದಂಪತಿ ಸಾವು

    ಸ್ಕೂಟಿಗೆ ಡಿಕ್ಕಿ ಹೊಡೆದ ತಮಿಳುನಾಡು ಸರ್ಕಾರಿ ಬಸ್- ದಂಪತಿ ಸಾವು

    ಬೆಂಗಳೂರು: ಸ್ಕೂಟಿಗೆ ಹಿಂದಿನಿಂದ ಬಸ್ ಡಿಕ್ಕಿ ಹೊಡೆದು ದಂಪತಿ ಸಾವನ್ನಪ್ಪಿರುವ ಘಟನೆ ಮಾರ್ಕೆಟ್ ಫ್ಲೈಓವರ್ ಮೇಲೆ ತಡರಾತ್ರಿ ನಡೆದಿದೆ.

    ಆಂಥೋನಿ ಜೋಸೆಫ್ (55) ಮತ್ತು ಸಗಾಯ ಮೇರಿ (53) ಅಪಘಾತದಲ್ಲಿ ಮೃತ ದುರ್ದೈವಿಗಳು. ಮೃತರು ಸ್ಕೂಟಿಯಲ್ಲಿ ಜೆಜೆ ನಗರಕ್ಕೆ ಹೋಗುವಾಗ ಹಿಂಬದಿಯಿಂದ ತಮಿಳುನಾಡಿನ ಸರ್ಕಾರಿ ಬಸ್ ಡಿಕ್ಕಿ ಹೊಡೆದಿದೆ.

    ಅಪಘಾತದ ಬಳಿಕ ಬಸ್ ಚಾಲಕ ಪರಾರಿಯಾಗಿದ್ದಾನೆ. ಈ ಸಂಬಂಧ ಚಿಕ್ಕಪೇಟೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸ್ಪಿರಿಟ್ ತುಂಬಿದ್ದ ಟ್ಯಾಂಕರ್‍ಗೆ ಖಾಸಗಿ ಬಸ್ ಡಿಕ್ಕಿ: ಇಬ್ಬರ ಸಾವು, 30 ಜನರಿಗೆ ಗಾಯ

    ಸ್ಪಿರಿಟ್ ತುಂಬಿದ್ದ ಟ್ಯಾಂಕರ್‍ಗೆ ಖಾಸಗಿ ಬಸ್ ಡಿಕ್ಕಿ: ಇಬ್ಬರ ಸಾವು, 30 ಜನರಿಗೆ ಗಾಯ

    ಹಾವೇರಿ: ಸ್ಪಿರಿಟ್ ತುಂಬಿದ್ದ ಟ್ಯಾಂಕರ್ ಗೆ ಹಿಂಬದಿಯಿಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದು, 30 ಜನರು ಗಾಯಗೊಂಡ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ನಗರದ ಹಲಗೇರಿ ಬ್ರಿಡ್ಜ್ ಬಳಿ ನಡೆದಿದೆ.

    ಬಸ್‍ನಲ್ಲಿದ್ದ ರಾಜಸ್ಥಾನ ಮೂಲದ 54 ವರ್ಷ ವಯಸ್ಸಿನ ಅರವಿಂದ ಕೊಠಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ಮೃತ ಮಹಿಳೆ ಹೆಸರು ತಿಳಿದುಬಂದಿಲ್ಲ. ಗಾಯಾಳುಗಳನ್ನು ರಾಣೇಬೆನ್ನೂರು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಖಾಸಗಿ ಬಸ್ ಮುಂಬೈನಿಂದ ಮೈಸೂರಿಗೆ ಹೊರಟ್ಟಿತ್ತು. ಬಸ್ ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗ್ತಿದೆ. ಅಪಘಾತದ ರಭಸಕ್ಕೆ ಟ್ಯಾಂಕರ್ ನಿಂದ ಸ್ಪಿರಿಟ್ ಸೋರಿಕೆಯಾಗಿದೆ. ಹೀಗಾಗಿ ಸ್ಥಳದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಕ್ರೇನ್ ಮೂಲಕ ವಾಹನವನ್ನ ಬೇರೆ ಕಡೆಗೆ ವರ್ಗಾವಣೆ ಮಾಡಲಾಗುತ್ತಿದೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರಾಣೇಬೆನ್ನೂರು ಪೊಲೀಸರು ಹಾಗೂ ಎಸ್ಪಿ ಕೆ.ಪರಶುರಾಮ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ರೇಷನ್ ಕೊಡಲ್ಲ, ಸಾಲ ರಿನೀವಲ್ ಆಗಲ್ಲ- ಕಾಂಗ್ರೆಸ್ ಸಮಾವೇಶಕ್ಕೆ ಬರಲ್ಲ ಎಂದವರಿಗೆ ಬೆದರಿಕೆ

    ರೇಷನ್ ಕೊಡಲ್ಲ, ಸಾಲ ರಿನೀವಲ್ ಆಗಲ್ಲ- ಕಾಂಗ್ರೆಸ್ ಸಮಾವೇಶಕ್ಕೆ ಬರಲ್ಲ ಎಂದವರಿಗೆ ಬೆದರಿಕೆ

    ಕೊಪ್ಪಳ: ಸರ್ಕಾರದ ಸಮಾವೇಶಕ್ಕೆ ಜನರನ್ನು ಕರೆತರಲು ಕೈ ಪಾಳೆಯ ಕಸರತ್ತು ನಡೆಸಿದೆ. ಕಾಂಗ್ರೆಸ್ ಸಮಾವೇಶಕ್ಕೆ ಬರಲ್ಲ ಎಂದ ಜನರಿಗೆ ಕಾಂಗ್ರೆಸ್ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ.

    ಇಂದು ಕೊಪ್ಪಳದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳ ಬೃಹತ್ ಸಮಾವೇಶ ನಡೆಯುತ್ತಿದ್ದು, ಈ ಸಮಾವೇಶಕ್ಕೆ ಬರ್ಲಿಲ್ಲ ಅಂದ್ರೆ ರೇಷನ್ ಕೊಡಲ್ಲ, ಸಾಲ ರಿನೀವಲ್ ಆಗಲ್ಲ ಎಂದು ಬೆದರಿಕೆ ಹಾಕಲಾಗಿದೆ. ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಒಟ್ಟು 1497 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಕೊಪ್ಪಳ ಜಿಲ್ಲಾಡಳಿತ ಭವನದ ಬಳಿಯ ಬೃಹತ್ ವೇದಿಕೆಯಲ್ಲಿ ಸಮಾವೇಶ ನಡೆಯಲಿದೆ. ಸಮಾವೇಶ ದಲ್ಲಿ ಸಂಪುಟದ ಅರ್ಧಕ್ಕಿಂತಲೂ ಹೆಚ್ಚು ಸಚಿವರು ಭಾಗಿಯಾಗಲಿದ್ದಾರೆ

    ಸಮಾವೇಶಕ್ಕೆ 1 ಲಕ್ಷ ಜನರನ್ನು ಸೇರಿಸುವ ಉದ್ದೇಶದಿಂದ ಕಾರ್ಯಕರ್ತರು ಜನರಿಗೆ ಈ ಬೆದರಿಕೆಗಳನ್ನು ಹಾಕಿದ್ದಾರೆ ಎಂದು ಹೇಳಲಾಗಿದೆ. 1 ಸಾವಿರ ಸರ್ಕಾರಿ ಬಸ್‍ಗಳನ್ನ ಕಾಂಗ್ರೆಸ್ ಸಮಾವೇಶಕ್ಕಾಗಿ ಬಳಸಿಕೊಳ್ಳಲಾಗ್ತಿದೆ.

  • ಯಶವಂತಪುರದಿಂದ ದಾಬಸ್‍ಪೇಟೆ ಕೈಗಾರಿಕಾ ಪ್ರದೇಶಕ್ಕೆ 6 ನೂತನ ಬಸ್‍ಗಳು

    ಯಶವಂತಪುರದಿಂದ ದಾಬಸ್‍ಪೇಟೆ ಕೈಗಾರಿಕಾ ಪ್ರದೇಶಕ್ಕೆ 6 ನೂತನ ಬಸ್‍ಗಳು

    ಬೆಂಗಳೂರು: ಗ್ರಾಮೀಣ ಭಾಗದ ಕಾರ್ಮಿಕರಿಗೆ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಇಲಾಖೆ 6 ನೂತನ ಬಸ್‍ಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಕೈಗಾರಿಕ ಪ್ರದೇಶದಲ್ಲಿ ನೂತನ ಬಸ್‍ಗಳಿಗೆ ಸಾರಿಗೆ ಸಚಿವ ಹೆಚ್.ಎಂ. ರೇವಣ್ಣ ಹಾಗೂ ಸಂಸದ ವೀರಪ್ಪ ಮೊಯ್ಲಿ ಚಾಲನೆ ನೀಡಿದರು. ಇನ್ನೂ ಗ್ರಾಮೀಣ ಭಾಗದ ಸಾವಿರಾರು ಕಾರ್ಮಿಕರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಇಲ್ಲಿಯವರೆಗೂ ಖಾಸಗಿ ಬಸ್ ಮೂಲಕ ಸಂಚಾರ ಮಾಡುತ್ತಿದ್ದರು. ಹೀಗಾಗಿ ಸಾರಿಗೆ ಇಲಾಖೆ ವತಿಯಿಂದ ಇಂದು 6 ನೂತನ ಬಿಎಂಟಿಸಿ ಬಸ್‍ಗಳ ಸೇವೆ ಕಲ್ಪಿಸಲಾಗಿದೆ. ಈ ಬಸ್‍ಗಳು ಪ್ರತಿನಿತ್ಯ ಯಶವಂತಪುರದಿಂದ ದಾಬಸ್‍ಪೇಟೆ ಕೈಗಾರಿಕಾ ಪ್ರದೇಶಕ್ಕೆ 6 ಸುತ್ತುವಳಿಗಳನ್ನ ಅರ್ಧ ಗಂಟೆಯ ಅಂತರದಲ್ಲಿ ಕಾರ್ಯಾಚರಣೆ ಮಾಡುತ್ತವೆ.

    ಉದ್ಘಾಟನೆಯ ನಂತರ ಮಾತನಾಡಿದ ಸಾರಿಗೆ ಸಚಿವ ಹೆಚ್.ಎಂ. ರೇವಣ್ಣ, ಪ್ರಮುಖವಾಗಿ ಕರ್ನಾಟಕ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ನೆಲಮಂಗಲದ ಪಟ್ಟಣಕ್ಕೆ ಹೈಟೆಕ್ ಬಸ್ ಕೋರ್ಟ್ ನಿರ್ಮಿಸಲಾಗುವುದು ಎಂದರು. ಬಸ್ ನಿಲ್ದಾಣದ ಜೊತೆಗೆ ಶಾಪಿಂಗ್ ಮಾಲ್, ಕಚೇರಿಗಳು, ಅಂಗಡಿಗಳನ್ನ ಒಳಗೊಂಡಿರುವಂತೆ ಕರ್ನಾಟಕ ರಾಜ್ಯದಲ್ಲೇ ವಿನೂತನ ಬಸ್ ನಿಲ್ದಾಣವನ್ನ ನಿರ್ಮಿಸಲಾಗುವುದು ಎಂದರು.

    ಬಸ್ ಉದ್ಘಾಟನಾ ಕಾರ್ಯಕ್ರಮಕ್ಕೆ ಜನರಿಲ್ಲದ ಕಾರಣ ಸ್ಥಳೀಯ ಕಾಂಗ್ರೆಸ್ ಮುಖಂಡರು ಕಾರ್ಖಾನೆಗಳಿಂದ ನೂರಾರು ಮಹಿಳಾ ಕಾರ್ಮಿಕರನ್ನ ಕರೆತಂದ ಪ್ರಸಂಗವೂ ಕೂಡ ನಡೆದು ಮುಜುಗರಕ್ಕೀಡಾಯಿತು.

  • ನಿಂತಿದ್ದ ಸರಕು ಲಾರಿಗೆ ಬಸ್ ಡಿಕ್ಕಿ: ಇಬ್ಬರ ದುರ್ಮರಣ, ಮೂವರಿಗೆ ಗಾಯ

    ನಿಂತಿದ್ದ ಸರಕು ಲಾರಿಗೆ ಬಸ್ ಡಿಕ್ಕಿ: ಇಬ್ಬರ ದುರ್ಮರಣ, ಮೂವರಿಗೆ ಗಾಯ

    ಚಿತ್ರದುರ್ಗ: ನಿಂತಿದ್ದ ಲಾರಿಗೆ ಖಾಸಗಿ ಬಸ್ ಡಿಕ್ಕಿಯಾಗಿ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿ ಮೂವರು ಗಾಯಗೊಂಡ ಘಟನೆ ಹಿರಿಯೂರು ತಾಲೂಕಿನ ಐಮಂಗಲ ಬಳಿ ನಡೆದಿದೆ.

    ಸೂರತ್ ಮೂಲದ 30 ವರ್ಷದ ಅರುಣ್ ಹಾಗೂ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಗಣೇಕಲ್ ಗ್ರಾಮದ ನಿವಾಸಿ 30 ವರ್ಷದ ಪ್ರಶಾಂತ ಮೃತಪಟ್ಟ ದುರ್ದೈವಿಗಳು.

    ಗೋವಾದಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್, ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಐಮಂಗಲ ಸಮೀಪ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ರಸ್ತೆ ಬದಿ ನಿಂತಿದ್ದ ಸರಕು ಲಾರಿಗೆ ಮುಂಜಾನೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಸದ್ಯ ಮೃತರ ಶವಗಳನ್ನ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ. ಇನ್ನು ಗಾಯಗೊಂಡ ಮೂವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಲಾರಿ-ಬಸ್ ಮುಖಾಮುಖಿ ಡಿಕ್ಕಿಯಾಗಿ ಭೀಕರ ಅಪಘಾತ- ಲಾರಿ ಚಾಲಕ ಸ್ಥಳದಲ್ಲೇ ಸಾವು, 15 ಜನರಿಗೆ ಗಾಯ

    ಲಾರಿ-ಬಸ್ ಮುಖಾಮುಖಿ ಡಿಕ್ಕಿಯಾಗಿ ಭೀಕರ ಅಪಘಾತ- ಲಾರಿ ಚಾಲಕ ಸ್ಥಳದಲ್ಲೇ ಸಾವು, 15 ಜನರಿಗೆ ಗಾಯ

    ಕಾರವಾರ: ಮೀನಿನ ಲಾರಿ ಹಾಗೂ ಖಾಸಗಿ ಬಸ್ಸು ಮೊದಲು ಮುಖಾಮುಖಿ ಡಿಕ್ಕಿಯಾಗಿದ್ದು, ನಂತರ ಹಿಂದಿನಿಂದ ಬಂದ ಮತ್ತೊಂದು ಬಸ್ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿರೋ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಸೋಡಿಗದ್ದೆ ಕ್ರಾಸ್ ಬಳಿ ನಡೆದಿದೆ.

    ಅಪಘಾತದಲ್ಲಿ ಲಾರಿ ಚಾಲಕ 25 ವರ್ಷದ ಅಬ್ದುಲ್ಲಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಬಸ್‍ನಲ್ಲಿದ್ದ 15 ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಭಟ್ಕಳ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಮೀನಿನ ಲಾರಿ ಗೋವಾದಿಂದ ಕೇರಳ ಕಡೆಗೆ ತೆರಳುತ್ತಿತ್ತು. ಇನ್ನೂ ಖಾಸಗಿ ಬಸ್‍ಗಳು ಮಂಗಳೂರಿನಿಂದ ಬೆಳಗಾವಿ ಕಡೆಗೆ ಹೋಗುತ್ತಿದ್ದವು ಎಂದು ತಿಳಿದುಬಂದಿದೆ. ಭಟ್ಕಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.

  • ಸರ್ಕಾರಿ ಬಸ್, ಬೈಕ್ ನಡುವೆ ಡಿಕ್ಕಿ: ಸ್ಥಳದಲ್ಲೇ ಇಬ್ಬರು ಸಾವು

    ಸರ್ಕಾರಿ ಬಸ್, ಬೈಕ್ ನಡುವೆ ಡಿಕ್ಕಿ: ಸ್ಥಳದಲ್ಲೇ ಇಬ್ಬರು ಸಾವು

    ಧಾರವಾಡ: ಬೈಕ್ ಮತ್ತು ಸಾರಿಗೆ ಸಂಸ್ಥೆ ಬಸ್ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್‍ನಲ್ಲಿದ್ದ ಸವಾರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೃಷಿ ವಿವಿಯ ಸಮೀಪ ನಡೆದಿದೆ.

    ಸಾವನ್ನಪ್ಪಿದ ದುರ್ದೈವಿ ಗುರುಪಾದಪ್ಪ ಗೊಡಚಿ (38) ಎಂದು ಗುರುತಿಸಲಾಗಿದ್ದು, ಮೃತ ಮಹಿಳೆ ಹೆಸರು ತಿಳಿದು ಬಂದಿಲ್ಲ. ನಗರದ ಹೊರವಲಯದ ಕೃಷಿ ವಿಶ್ವವಿದ್ಯಾಲಯದ ಬಳಿ ಈ ಘಟನೆ ನಡೆದಿದ್ದು, ಸಾವನ್ನಪ್ಪಿದ ವ್ಯಕ್ತಿ ಹಾಗೂ ಮಹಿಳೆ ಬೆಳಗಾವಿ ಜಿಲ್ಲೆಯ ರಾಮದುರ್ಗದವರು ಎಂದು ತಿಳಿದು ಬಂದಿದೆ.

    ಸದ್ಯ ಸ್ಥಳಕ್ಕೆ ಭೇಟಿ ನೀಡಿದ ಸಂಚಾರಿ ಪೊಲೀಸರು ಬಸನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಸಾವನ್ನಪ್ಪಿದ ವ್ಯಕ್ತಿಗಳ ಶವಗಳನ್ನ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.