Tag: ಬಸ್

  • ಹಾಸನದಲ್ಲಿ 30ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿದ್ದ ಬಸ್‍ಗೆ ಬೆಂಕಿ!

    ಹಾಸನದಲ್ಲಿ 30ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿದ್ದ ಬಸ್‍ಗೆ ಬೆಂಕಿ!

    ಹಾಸನ: ಸುಮಾರು 30ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿದ್ದ ಖಾಸಗಿ ಬಸ್ಸೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಬಸ್ ಸುಟ್ಟು ಸಂಪೂರ್ಣ ಕರಕಲಾಗಿರುವ ಘಟನೆ ಜಿಲ್ಲೆಯ ಹೊರವಲಯದಲ್ಲಿ ಸಂಭವಿಸಿದೆ.

    ಹಾಸನ ಸಮೀಪದ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಕೆಂಚಟಹಳ್ಳಿ ಗ್ರಾಮದ ಬಳಿ ತಡರಾತ್ರಿ ಈ ಅವಘಡ ಸಂಭವಿಸಿದೆ. ಖಾಸಗಿ ಸ್ಲೀಪರ್ ಕೋಚ್ ಬಸ್ ನಲ್ಲಿ ಈ ಅವಘಡ ಸಂಭವಿಸಿದ್ದು, ಇದು ಮಂಗಳೂರಿನಿಂದ ಬೆಂಗಳೂರಿಗೆ ಕಡೆಗೆ ತೆರಳುತಿತ್ತು.  ಬಸ್ ನಲ್ಲಿ ಸುಮಾರು 30 ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.

    ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ತಕ್ಷಣವೇ ಚಾಲಕರ ಗಮನಕ್ಕೆ ಬಂದಿದೆ. ಕೂಡಲೇ ಅವರು ಬಸ್ಸನ್ನು ರಸ್ತೆಯ ಪಕ್ಕಕ್ಕೆ ನಿಲ್ಲಿಸಿ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ಆದ್ದರಿಂದ ಈ ಅವಘಡದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಈ ಘಟನೆ ಸಂಬಂಧಿಸಿದಂತೆ ಹಾಸನ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಾಂತ್ರಿಕ ದೋಷದಿಂದ ಬಸ್‍ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • KSRTC ಬಸ್‍ನಲ್ಲಿ ಕುಳಿತ ಸ್ಥಿತಿಯಲ್ಲೇ ಪ್ರಾಣ ಬಿಟ್ಟ ಮಹಿಳೆ

    KSRTC ಬಸ್‍ನಲ್ಲಿ ಕುಳಿತ ಸ್ಥಿತಿಯಲ್ಲೇ ಪ್ರಾಣ ಬಿಟ್ಟ ಮಹಿಳೆ

    ಬಳ್ಳಾರಿ: ಪ್ರಯಾಣದ ಸಂದರ್ಭದಲ್ಲಿ ಮಾರ್ಗಮಧ್ಯೆ ವೃದ್ಧ ಮಹಿಳೆಯೊಬ್ಬರು ಕೆಎಸ್‍ಆರ್‍ಟಿಸಿ ಬಸ್‍ನಲ್ಲಿಯೇ ಜೀವ ಬಿಟ್ಟಿರುವ ಘಟನೆ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಂಪ್ಲಿಯಲ್ಲಿ ನಡೆದಿದೆ.

    ಮೂಲತಃ ಕುರುಗೋಡಿನ ಇಂದಿರಾನಗರದ ನಿವಾಸಿಯಾದ ದೊಡ್ಡ ಬಸಪ್ಪ ಎಂಬುವರ ಪತ್ನಿ ನೀಲಮ್ಮ (61) ಮೃತಪಟ್ಟಿರುವ ವೃದ್ಧ ಮಹಿಳೆ. ಇವರು ಗಂಗಾವತಿಯಿಂದ ಕುರುಗೋಡಿಗೆ ಪ್ರಯಾಣಿಸುವಾಗ ಕಂಪ್ಲಿ ರಸ್ತೆಯ ಮಧ್ಯದಲ್ಲಿ ಜೀವ ಬಿಟ್ಟಿದ್ದಾರೆ.

    ನೀಲಮ್ಮ ಅವರು ಗಂಗಾವತಿಯಲ್ಲಿರುವ ಅವರ ಸಂಬಂಧಿಕರನ್ನು ಭೇಟಿ ಮಾಡಲು ಹೋಗಿದ್ದರು. ನಂತರ ಸಂಬಂಧಿಕರೇ ಬಸ್ ನಲ್ಲಿ ಕೂರಿಸಿ ಹೋಗಿದ್ದಾರೆ. ನಂತರ ಬಳ್ಳಾರಿಗೆ ಬರುತ್ತಿದ್ದ ಬಸ್ ಕಂಪ್ಲಿ ಮಾರ್ಗ ಬರುತ್ತಿದ್ದಂತೆ ಮೃತಪಟ್ಟಿದ್ದಾರೆ.

    ಮೃತದೇಹ ನೋಡಿ ಪ್ರಯಾಣಿಕರು ಬಸ್ಸಿನಿಂದ ಕೆಳಗಡೆ ಇಳಿದಿದ್ದಾರೆ. ನಂತರ ಬಸ್ ಚಾಲಕ ನಿರ್ವಾಹಕರು ಕಂಪ್ಲಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ನಂತರ ಪೊಲೀಸರು ಬಂದು ಸರ್ಕಾರಿ ಆಸ್ಪತ್ರೆಗೆ ಮೃತದೇಹವನ್ನು ಕೊಂಡೊಯ್ದಿದ್ದಾರೆ.

  • ಬೈಕಿಗೆ ಡಿಕ್ಕಿ ಹೊಡೆದ KSRTC ಬಸ್ -ಒಂದೇ ಕುಟುಂಬದ ಮೂವರ ಸಾವು

    ಬೈಕಿಗೆ ಡಿಕ್ಕಿ ಹೊಡೆದ KSRTC ಬಸ್ -ಒಂದೇ ಕುಟುಂಬದ ಮೂವರ ಸಾವು

    ಚಾಮರಾಜನಗರ: ಜಿಲ್ಲೆಯ ಯಳಂದೂರು ಪಟ್ಟಣದಲ್ಲಿ ಬೈಕ್ ಹಾಗೂ ಬಸ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.

    ಮೂಲತಃ ಯರಿಯೂರು ಗ್ರಾಮದ ರಾಜಮ್ಮ (48), ಸತೀಶ್  (24), ಬಿಂದು (19) ಮೃತಪಟ್ಟವರು ದುರ್ದೈವಿಗಳು. ಯಳಂದೂರು ಪಟ್ಟಣದಿಂದ ಯರಿಯೂರಿಗೆ ಪ್ರಯಾಣ ನಡೆಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

    ಒಂದೇ ಬೈಕಿನಲ್ಲಿ ಮೂವರು ಪ್ರಯಾಣಿಸುವ ವೇಳೆ ಹಿಂಬದಿಯಿಂದ ವೇಗವಾಗಿ ಬಂದ KSRTC ಬಸ್ ರಭಸದಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಸತೀಶ್ ಸಾವನ್ನಪ್ಪಿದ್ದಾರೆ. ನಂತರ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮತ್ತಿಬ್ಬರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸತೀಶ್ ಪತ್ನಿ ಬಿಂದು, ತಾಯಿ ರಾಜಮ್ಮ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

    ಘಟನೆ ಕುರಿತು ಯಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಾಗಿಲಲ್ಲಿ ನಿಲ್ಲಬೇಡಿ ಎಂದಿದಕ್ಕೆ ಡ್ರೈವರ್, ಕಂಡಕ್ಟರ್ ಮೇಲೆ ವಿದ್ಯಾರ್ಥಿಗಳಿಂದ ಹಲ್ಲೆ

    ಬಾಗಿಲಲ್ಲಿ ನಿಲ್ಲಬೇಡಿ ಎಂದಿದಕ್ಕೆ ಡ್ರೈವರ್, ಕಂಡಕ್ಟರ್ ಮೇಲೆ ವಿದ್ಯಾರ್ಥಿಗಳಿಂದ ಹಲ್ಲೆ

    ಕಲಬುರಗಿ: ವಿದ್ಯಾರ್ಥಿಗಳು ಸರ್ಕಾರಿ ಬಸ್ ಚಾಲಕ ಮತ್ತು ನಿರ್ವಾಹಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನಡೆದಿದೆ.

    ವಿದ್ಯಾರ್ಥಿಗಳು ಚಿತ್ತಾಪುರ ಬಸ್ ಘಟಕದ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಧರ್ಮಸಾಗರದಿಂದ ಚಿಂಚೋಳಿಗೆ ಬರುವಾಗ ಬಸ್ ಬಾಗಿಲಿನಲ್ಲಿ ನಿಂತ ವಿದ್ಯಾರ್ಥಿಗಳಿಗೆ ಒಳಬನ್ನಿ ಎಂದಿದ್ದಕ್ಕೆ ವಿದ್ಯಾರ್ಥಿಗಳು ಕೋಪಗೊಂಡು ಹಲ್ಲೆ ನಡೆಸಿದ್ದಾರೆ.

    ಯುವಕರು ಮೊದಲು ಬಸ್ ನಲ್ಲಿ ಇಬ್ಬರಿಗೆ ಹೊಡೆದು ಆ ನಂತರ ಚಿಂಚೋಳಿ ಬಸ್ ಘಟಕಕ್ಕೆ ಬಂದು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ನಿರ್ವಾಹಕ ಬೀರಪ್ಪ ಚಾಲಕ ವೀರಾರೆಡ್ಡಿಗೆ ಗಾಯವಾಗಿದ್ದು, ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳುವಂತೆ ಪಟ್ಟು ಹಿಡಿದಿದ್ದಾರೆ.

    ಹಲ್ಲೆ ಖಂಡಿಸಿ ಕಳೆದ ಒಂದು ಗಂಟೆಯಿಂದ ಎಲ್ಲಾ ಬಸ್ ಗಳ ಸಂಚಾರ ಸ್ಥಗಿತ ಮಾಡಿ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದಾರೆ.

    https://www.youtube.com/watch?v=VhVmQBZrKnE

  • ಟಿಪ್ಪು ಜಯಂತಿ ವಿರೋಧಿಸಿ KSRTC ಬಸ್‍ಗೆ ಕಲ್ಲು- ಶಾಸಕ ಅಪ್ಪಚ್ಚುರಂಜನ್ ಸೇರಿ ಹಲವರ ಬಂಧನ

    ಟಿಪ್ಪು ಜಯಂತಿ ವಿರೋಧಿಸಿ KSRTC ಬಸ್‍ಗೆ ಕಲ್ಲು- ಶಾಸಕ ಅಪ್ಪಚ್ಚುರಂಜನ್ ಸೇರಿ ಹಲವರ ಬಂಧನ

    ಮಡಿಕೇರಿ: ಟಿಪ್ಪು ಜಯಂತಿ ಆಚರಣೆಗೆ ಈಗಾಗಲೇ ಕೊಡಗಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಕಿಡಿಗೇಡಿಗಳು ಕೆಎಸ್‍ ಆರ್ ಟಿಸಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

    ಮಡಿಕೇರಿ ತಾಲೂಕಿನ ಗಾಳಿಬೀಡು ಸಮೀಪದ ಕಾಲೂರು ಕಟ್ಟೆಕಲ್ಲು ಬಳಿ ಈ ಘಟನೆ ನಡೆದಿದೆ. ಕೆಎ-09-ಎಫ್ -5205 ನಂಬರಿನ ಕೆಎಸ್‍ಆರ್ ಟಿಸಿ ಬಸ್‍ಗೆ ಇಬ್ಬರು ದುಷ್ಕರ್ಮಿಗಳು ಕಲ್ಲು ತೂರಿದ್ದು, ಬಸ್ಸಿನ ಮುಂಭಾಗದ 1 ಗ್ಲಾಸ್ ಮತ್ತು ಸೈಡ್‍ನಲ್ಲಿ 2 ಗ್ಲಾಸ್ ಪುಡಿಪುಡಿಯಾಗಿದೆ.

    ಕೋಟೆ ಸಭಾಂಗಣದಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲು ಮುಂದಾದ ಶಾಸಕ ಅಪ್ಪಚ್ಚುರಂಜನ್, ಎಂಎಲ್‍ಸಿ ಸುನೀಲ್ ಸುಬ್ರಹ್ಮಣಿ ಸೇರಿ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ರಸ್ತೆಯಲ್ಲಿ ಜೈ ಶ್ರೀರಾಮ್ ನೃತ್ಯ ಮಾಡಿ ವಿರೋಧ ವ್ಯಕ್ತಪಡಿಸಿದ ಹಿಂದೂ ಸಂಘಟನೆ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

    ಎರಡು ಬಸ್, 3 ಬೊಲೆರೋ ವಾಹನಗಳಲ್ಲಿ ಹಿಂದೂ ಕಾರ್ಯಕರ್ತರ ಬಂಧನವಾಗಿದ್ದು, ಅರೆಸ್ಟ್ ಮಾಡಲು ಪೊಲೀಸರಿಗೆ ವಾಹನಗಳ ಕೊರತೆ ಎದುರಾಗಿದೆ. ಎರಡು ಬಸ್, 3 ಬೊಲೆರೋ ಗಾಡಿ ಬಿಟ್ಟು ಬೇರೆ ಗಾಡಿ ವ್ಯವಸ್ಥೆ ಇಲ್ಲವಾಗಿದೆ. ಹೀಗಾಗಿ ಕಾರ್ಯಕರ್ತರನ್ನ ಬಂಧನ ಮಾಡಲು ಸಾಧ್ಯವಾಗಿಲ್ಲ. ನೂರುಕ್ಕು ಹೆಚ್ಚು ಕಾರ್ಯಕರ್ತರು ರಸ್ತೆ ಮಧ್ಯೆ ಪ್ರತಿಭಟನೆ ಮುಂದುವರಿಸಿದ್ದು, ಹಿಂದೂಪರ ಸಂಘಟನೆಗಳ ಪ್ರತಿಭಟನೆ ತಡಿಯಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

    ಟಿಪ್ಪು ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಕೊಡಗು ಬಂದ್‍ಗೆ ಟಿಪ್ಪು ಜಯಂತಿ ಆಚರಣಾ ವಿರೋಧಿ ಸಮಿತಿ ಕರೆ ನೀಡಿರೋ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆಯಿಂದಲೇ ಮಂಜಿನ ನಗರಿ ಮಡಿಕೇರಿಯ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಬಂದ್ ಆಗಿವೆ. ಅಲ್ಲದೆ ಖಾಸಗಿ ಬಸ್‍ನವರು ಪ್ರಯಾಣಿಕರ ಹಿತದೃಷ್ಠಿಯಿಂದ ಬಸ್ ಸಂಚಾರ ಮಾಡುವುದಿಲ್ಲವೆಂದು ತಿಳಿಸಿದ್ದಾರೆ. ಇನ್ನು ಅಟೋ ಚಾಲಕರು, ಟ್ಯಾಕ್ಸಿ ಚಾಲಕರು ಬಂದ್‍ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

    ಮಡಿಕೇರಿ ತಾಲೂಕಿನ ಕಡಗದಳು ಗ್ರಾಮದಲ್ಲಿ ಕಳೆದ ರಾತ್ರಿ ಮುಖ್ಯ ರಸ್ತೆಗಳಿಗೆ ಮರಗಳನ್ನು ಕಡಿದು ಹಾಕುವ ಮೂಲಕ ರಸ್ತೆ ಸಂಚಾರಕ್ಕೆ ಅಡ್ಡಿಯುಂಟು ಮಾಡಲಾಗಿತ್ತು. ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿ ಮರಗಳನ್ನು ತೆರವುಗೊಳಿಸಿದ್ದಾರೆ.

     

  • ಚಾಲಕನ ನಿಯಂತ್ರಣ ತಪ್ಪಿ ಮಂಡ್ಯದ ಮದುವೆ ದಿಬ್ಬಣದ ಬಸ್ ಶೃಂಗೇರಿಯಲ್ಲಿ ಪಲ್ಟಿ

    ಚಾಲಕನ ನಿಯಂತ್ರಣ ತಪ್ಪಿ ಮಂಡ್ಯದ ಮದುವೆ ದಿಬ್ಬಣದ ಬಸ್ ಶೃಂಗೇರಿಯಲ್ಲಿ ಪಲ್ಟಿ

    ಚಿಕ್ಕಮಗಳೂರು: ಮದುವೆ ಮುಗಿಸಿಕೊಂಡು ವಾಪಸ್ ಹೊರಟಿದ್ದ ಮದುವೆ ದಿಬ್ಬಣ ಬಸ್ ಒಂದು ಪಲ್ಪಿ ಹೊಡೆದಿರುವ ಘಟನೆ ಶೃಂಗೇರಿಯ ಆನೆಗುಂದ ಬಳಿ ನಡೆದಿದೆ.

    ಶೃಂಗೇರಿಯಲ್ಲಿ ಸೋಮವಾರ ನಡೆದ ಮದುವೆ ಆಗಮಿಸಿದ್ದ ಮದುವೆ ದಿಬ್ಬಣ ಬಸ್ ಇಂದು ಮಂಡ್ಯಕ್ಕೆ ಹಿಂದಿರುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಮದುವೆ ಸೋಮವಾರ ಮುಗಿದಿದ್ದು, ಬಸ್ ನಲ್ಲಿ ಕೇವಲ 16 ಜನ ಪ್ರಯಾಣಿಸುತ್ತಿದ್ದರು. ಈ ವೇಳೆ ಶೃಂಗೇರಿಯ ಆನೆಗುಂದ ಬಳಿ ಬಂದಾಗ ಅಪಘಾತ ಸಂಭವಿಸಿದೆ. ಶೃಂಗೇರಿ ರಸ್ತೆ ಮಾರ್ಗವು ಅತ್ಯಂತ ಹೆಚ್ಚು ತಿರುವುಗಳಿರುವ ಪ್ರದೇಶವಾಗಿದ್ದು, ಚಾಲಕನಿಗೆ ಇಂತಹ ಪ್ರದೇಶದಲ್ಲಿ ಬಸ್ ಚಾಲನೆ ಮಾಡಲು ಅನುಭವ ಇಲ್ಲದ ಕಾರಣ ಬಸ್ ನಿಯಂತ್ರಣ ಕಳೆದು ಕೊಂಡು ಪಲ್ಟಿ ಹೊಡೆದಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

    ಘಟನೆ ಕುರಿತು ಮಾಹಿತಿ ಪಡೆದಿರುವ ಶೃಂಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಕುರಿತು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮದ್ವೆ ಮನೆಯಿಂದ ವಾಪಸ್ಸಾಗ್ತಿದ್ದ 70 ಜನರಿದ್ದ ಬಸ್ ಮರಕ್ಕೆ ಡಿಕ್ಕಿ

    ಮದ್ವೆ ಮನೆಯಿಂದ ವಾಪಸ್ಸಾಗ್ತಿದ್ದ 70 ಜನರಿದ್ದ ಬಸ್ ಮರಕ್ಕೆ ಡಿಕ್ಕಿ

    ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲೂಕಿನ ಬೈಯಪ್ಪನಹಳ್ಳಿ ಗೇಟ್ ಬಳಿ ಮದುವೆ ಮನೆಯಿಂದ ಜನರನ್ನು ಕರೆದುಕೊಂಡು ಹೋಗುತ್ತಿದ್ದ ಖಾಸಗಿ ಬಸ್ ವೊಂದು ಮರಕ್ಕೆ ಡಿಕ್ಕಿ ಹೊಡೆದಿದೆ.

    ಬಸ್ ನಲ್ಲಿದ್ದವರು ಬಾಗೇಪಲ್ಲಿಯ ಮಿಟ್ಟೆಮರಿ ಗ್ರಾಮದ ನಿವಾಸಿಗಳಾಗಿದ್ದು, ಬೆಂಗಳೂರಿನ ಸರ್ಜಾಪುರದ ಕಲ್ಯಾಣ ಮಂಟಪವೊಂದರಲ್ಲಿ ಮದುವೆಯನ್ನ ಮುಗಿಸಿಕೊಂಡು ವಾಪಸ್ಸಾಗುತ್ತಿದ್ರು. ಈ ವೇಳೆ ಮಧ್ಯರಾತ್ರಿ 12.30 ರ ಸುಮಾರಿಗೆ ಬೈಯಪ್ಪನಹಳ್ಳಿ ಗೇಟ್ ಬಳಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ.

    ಬಸ್ ನಲ್ಲಿ 70ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು. ಅವರಲ್ಲಿ ಕೆಲವರಿಗೆ ಮಾತ್ರ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದಲ್ಲಿ ಅದೃಷ್ಟವಷತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಅಪಘಾತದ ರಭಸಕ್ಕೆ ಖಾಸಗಿ ಬಸ್ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನವೆಂಬರ್‍ನಿಂದ ಹೆಚ್‍ಡಿಕೆ ರಾಜ್ಯ ಪ್ರವಾಸ- ಜೊತೆಗಿರಲಿದ್ದಾರೆ ಯೋಗಗುರು, ಬಾಣಸಿಗ, ಮೇಲ್ ನರ್ಸ್

    ನವೆಂಬರ್‍ನಿಂದ ಹೆಚ್‍ಡಿಕೆ ರಾಜ್ಯ ಪ್ರವಾಸ- ಜೊತೆಗಿರಲಿದ್ದಾರೆ ಯೋಗಗುರು, ಬಾಣಸಿಗ, ಮೇಲ್ ನರ್ಸ್

    ಬೆಂಗಳೂರು: ಹೃದಯ ಚಿಕಿತ್ಸೆ ಬಳಿಕ ಮೊದಲ ಬಾರಿಗೆ ಅಖಾಡಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಇಳಿಯಲಿದ್ದು, ಜೆಡಿಎಸ್ ಸಂಘಟನಾ ರ್ಯಾಲಿಯ ಚಾಲನೆಗೆ ಮುಂದಾಗಿದ್ದಾರೆ.

    2018 ರ ಚುನಾವಣಾ ಪ್ರಯುಕ್ತ ನವೆಂಬರ್ 3 ರಂದು ಜೆಡಿಎಸ್ ಸಂಘಟನಾ ರ್ಯಾಲಿಗೆ ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿ ನಂತರ ರಾಜ್ಯ ಪ್ರವಾಸ ಮಾಡಲಿಸಿದ್ದಾರೆ. ಈ ಸಂಬಂಧ ಪತ್ನಿ ಅನಿತಾ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರವಾಸದ ರೂಪುರೇಷೆ ಸಿದ್ಧಪಡಿಸಲಾಗಿದೆ.

    ಮೊದಲ ಹಂತದಲ್ಲಿ ಉತ್ತರ ಕರ್ನಾಟಕದ 62 ವಿಧಾನಸಭಾ ಕ್ಷೇತ್ರದಲ್ಲಿ ಕುಮಾರಸ್ವಾಮಿ ಪ್ರವಾಸ ಮಾಡಲಿದ್ದಾರೆ. ಈ ಪ್ರವಾಸದಲ್ಲಿ ಅವರ ಆರೋಗ್ಯ ಕಾಪಾಡಿಕೊಳ್ಳಲು ವಿಶೇಷ ಸಿದ್ಧತೆ ಮಾಡಿಕೊಂಡಿದ್ದಾರೆ. ಪ್ರವಾಸದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ತಯಾರಿ ಮಾಡಿಕೊಂಡಿದ್ದಾರೆ. ಆರೋಗ್ಯದ ಸಮಸ್ಯೆ ಇರುವುದರಿಂದ ಮುಂಜಾಗೃತವಾಗಿ ಅಡುಗೆಯವರು, ಯೋಗ ಗುರು ಹಾಗೂ ಓರ್ವ ಪುರುಷ ನರ್ಸ್ ಹೆಚ್‍ಡಿಕೆ ಜೊತೆಗೆ ಇರಲಿದ್ದಾರೆ. ನಿಮಗೆ ಪಕ್ಷ ಮುಖ್ಯ ಆದರೆ ನಮಗೆ ನಿಮ್ಮ ಆರೋಗ್ಯ ಮುಖ್ಯ ಎಂಬ ಕುಟುಂಬದವರ ಮಾತಿಗೆ ತಲೆ ಬಾಗಿ ಹೆಚ್‍ಡಿಕೆ ಈ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದಾರೆ.

    ಪ್ರವಾಸಕ್ಕಾಗಿಯೇ 1 ಕೋಟಿ ರೂ. ವೆಚ್ಚದಲ್ಲಿ ವಿಶೇಷ ಬಸ್ ಸಿದ್ಧವಾಗಿದೆ. ವಿಶೇಷ ಬಸ್‍ನಲ್ಲೇ ಊಟ, ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿದೆ. ಹೆಚ್‍ಡಿಕೆ ಜೊತೆ ಅವರ ನೆಚ್ಚಿನ ಬಾಣಸಿಗ ಇರಲಿದ್ದಾರೆ. ಪ್ರತಿದಿನ ಮನೆ ಅಡುಗೆ ಬಸ್ಸಿನಲ್ಲೇ ಸಿದ್ಧವಾಗಲಿದೆ. ಪ್ರವಾಸ ಮುಗಿಯುವವರಗೆ ನಾನ್ ವೆಜ್ ತಿನ್ನದಿರಲು ಹೆಚ್‍ಡಿಕೆ ನಿರ್ಧರಿಸಿದ್ದಾರೆ. ಆತರೋಗ್ಯದ ಹಿತದೃಷ್ಟಿಯಿಂದ ರಾತ್ರಿ 8 ಗಂಟೆ ಒಳಗಾಗಿ ಊಟ, ರಾತ್ರಿ 11 ಗಂಟೆಯೊಳಗಾಗಿ ನಿದ್ರೆ ಕಡ್ಡಾಯವಾಗಿದೆ. ಹೆಚ್‍ಡಿಕೆ ಆರೋಗ್ಯ ತಪಾಸಣೆಗಾಗಿ ಜೊತೆಯಲ್ಲೇ ಒಬ್ಬ ಮೇಲ್ ನರ್ಸ್ ಇರಲಿದ್ದಾರೆ. ಪ್ರತಿ ದಿನದ ವ್ಯಾಯಾಮಕ್ಕೆ ಜೊತೆಗೊಬ್ಬ ಯೋಗ ಗುರುವನ್ನು ಎಚ್‍ಡಿಕೆ ಕರೆದೊಯ್ಯಲಿದ್ದಾರೆ.

    ಇದನ್ನೂ ಓದಿ: ಹೆಚ್‍ಡಿಕೆ ಚುನಾವಣಾ ಪ್ರಚಾರಕ್ಕೆ 1 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಬಸ್: ಒಳಗಡೆ ಏನೆಲ್ಲಾ ಇದೆ ಗೊತ್ತಾ!

  • ಭಯಾನಕ ಸಿಸಿಟಿವಿ ವಿಡಿಯೋ: ನೋಡ ನೋಡುತ್ತಿದ್ದಂತೆ ಜನರ ಮೇಲೆ ಹರಿದ ಸರ್ಕಾರಿ ಬಸ್

    ಭಯಾನಕ ಸಿಸಿಟಿವಿ ವಿಡಿಯೋ: ನೋಡ ನೋಡುತ್ತಿದ್ದಂತೆ ಜನರ ಮೇಲೆ ಹರಿದ ಸರ್ಕಾರಿ ಬಸ್

    ವಿಜಯವಾಡ: ಆಂಧ್ರಪ್ರದೇಶ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ನ ಬ್ರೇಕ್‍ಫೇಲ್ ಆಗಿ ಭೀಕರ ರಸ್ತೆ ಅಪಘಾತ ಸಂಭವಿಸಿ ಮೂವರು ಸಾವನ್ನಪ್ಪಿರುವ ಘಟನೆ ವಿಜಯವಾಡದಲ್ಲಿ ನಡೆದಿದೆ.

    ವಿಜಯವಾಡ ನಗರದ ಅಜೀತ್ ನಗರ್ ಪ್ರಮುಖ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ಅಪಘಾತದ ವಿಡಿಯೋ ನೋಡುಗರ ಮೈಜುಂ ಎನ್ನಿಸುವಂತೆ ಮಾಡುತ್ತಿದೆ.

    ಅಪಘಾತದಲ್ಲಿ ವಿಜಯನಗರ ನಿವಾಸಿಗಳಾದ ಕುರ್ಶಿದ್(32), ಅಶ್ರತ್(12) ಎಂಬವರು ಮೃತ ಪಟ್ಟಿದ್ದಾರೆ. ಘಟನೆಯಲ್ಲಿ ಇನ್ನೂ ಹಲವು ಜನರು ಗಾಯಗೊಂಡಿದ್ದು, ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

    ಅಪಘಾತವಾದ ಬಸ್ ವಿಜಯನಗರದ ವ್ಯಾಂಬಾಯ್ ನಿಲ್ದಾಣದಿಂದ ಪಂಡಿತ್ ನೆಹರು ಬಸ್ ನಿಲ್ದಾಣ ಮಾರ್ಗವಾಗಿ ಪ್ರಯಾಣ ಆರಂಭಿಸಿತ್ತು. ಅಜೀತ್ ನಗರ ಫ್ಲೈ ಓವರ್ ಬಳಿ ಬಂದಾಗ ಬ್ರೇಕ್ ಫೇಲ್ ಆಗಿ ಆಟೋ, ಬೈಕ್ ಸೇರಿದಂತೆ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ನಂತರ ಫ್ಲೈಓವರ್‍ನ ವಿಭಜಕಕ್ಕೆ ಡಿಕ್ಕಿ ಹೊಡೆದು ನಿಂತಿದೆ.

     

  • ಬಸ್ ಡಿಪೋದ ವಿಶ್ರಾಂತಿ ಕೊಠಡಿ ಕುಸಿದು 8 ಮಂದಿ ದುರ್ಮರಣ, ಮೂವರಿಗೆ ಗಾಯ

    ಬಸ್ ಡಿಪೋದ ವಿಶ್ರಾಂತಿ ಕೊಠಡಿ ಕುಸಿದು 8 ಮಂದಿ ದುರ್ಮರಣ, ಮೂವರಿಗೆ ಗಾಯ

    ಚೆನೈ: ಇಲ್ಲಿನ ರಾಜ್ಯ ಸಾರಿಗೆ ನಿಗಮದ ವಿಶ್ರಾಂತಿ ಕೊಠಡಿಯ ಮೇಲ್ಛಾವಣಿ ಕುಸಿದು 8 ಸಿಬ್ಬಂದಿ ದಾರುಣವಾಗಿ ಮೃತಪಟ್ಟಿದ್ದಾರೆ.

    ಈ ಘಟನೆ ತಮಿಳುನಾಡಿನ ನಾಗಪಟ್ಟಿನಂ ನ ಪೊರಾಯರ್ ನಲ್ಲಿ ಇಂದು ಮುಂಜಾನೆ ಸುಮಾರು 3.30ರ ವೇಳೆಗೆ ನಡೆದಿದೆ. ಡಿಪೋದಲ್ಲಿ ಮಲಗಿದ್ದ ಒಟ್ಟು 11 ಮಂದಿಯಲ್ಲಿ 8 ಮಂದಿ ಸಾವನ್ನಪ್ಪಿದ್ದು, ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ಮೂವರನ್ನು ರಕ್ಷಣೆ ಮಾಡಲಾಗಿದೆ. ದೀಪಾವಳಿ ರಜೆ ಇದ್ದಿದ್ದರಿಂದ ಡಿಪೋದಲ್ಲಿ ಪ್ರಯಾಣಿಕರು ಹೆಚ್ಚಾಗಿ ಇರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

    ಮೃತರನ್ನು ಪ್ರಭಾಕರನ್, ಬಾಲು, ಚಂದ್ರಶೇಖರನ್, ಧನಪಾಲ್, ಮುನಿಯಸಾಮಿ, ರಾಮಲಿಂಗಮ್, ಅನ್ಬರಸನ್ ಹಾಗೂ ಮಣಿವಣ್ಣನ್ ಎಂದು ಗುರುತಿಸಲಾಗಿದೆ. ವೆಂಕಟೇಶನ್, ಸೆಂಥಿಲ್ ಹಾಗೂ ಪ್ರೇಮ್‍ಕುಮಾರ್ ಗಾಯಗೊಂಡವರು. ಇವರನ್ನ ಕಾರೈಕಲ್ ಸರ್ಕಾರಿ ಅಸ್ಪತ್ರೆಗೆ ದಾಖಲಿಸಲಾಗಿದೆ.

    ಇದು ಸುಮಾರು 60 ವರ್ಷಗಳಷ್ಟು ಹಳೆಯ ಕಟ್ಟಡವಾಗಿದ್ದು, ಬಸ್ ಚಾಲಕರು ಹಾಗೂ ನಿರ್ವಾಹಕರು ರಾತ್ರಿ ತಮ್ಮ ಕೆಲಸ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಅಂತ ಪೊಲಿಸರು ತಿಳಿಸಿದ್ದಾರೆ.

    ಸ್ಥಳಕ್ಕೆ ನಾಗಪಟ್ಟಿನಂ ಜಿಲ್ಲಾಧಿಕಾರಿ ಡಾ. ಸುರೇಶ್ ಕುಮಾರ್ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ರಾಜ್ಯ ಸಾರಿಗೆ ಇಲಾಖೆ ಸಚಿವ ವಿಜಯಭಾಸ್ಕರ್ ಪೊರಾಯರ್ ಕೂಡ ಶೀಘ್ರದಲ್ಲೇ ಸ್ಥಳಕ್ಕಾಗಮಿಸಿ ಘಟನೆಯ ಬಗ್ಗೆ ವಿವರ ಪಡೆದುಕೊಳ್ಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.