Tag: ಬಸ್ ಸಂಚಾರ

  • ಹಾವೇರಿಯಲ್ಲಿ ನಿಲ್ದಾಣ ನಿರ್ಮಾಣವಾಗಿ 12 ವರ್ಷ ಕಳೆದರೂ ಇನ್ನೂ ಆರಂಭಗೊಂಡಿಲ್ಲ ನಗರ ಸಾರಿಗೆ!

    ಹಾವೇರಿಯಲ್ಲಿ ನಿಲ್ದಾಣ ನಿರ್ಮಾಣವಾಗಿ 12 ವರ್ಷ ಕಳೆದರೂ ಇನ್ನೂ ಆರಂಭಗೊಂಡಿಲ್ಲ ನಗರ ಸಾರಿಗೆ!

    – ಬಸ್ ಇಲ್ಲದೇ ಹೆಚ್ಚಾದ ಆಟೋ ಹಾವಳಿ

    ಹಾವೇರಿ: ಹಾವೇರಿ (Haveri) ಜಿಲ್ಲಾ ಕೇಂದ್ರವಾಗಿ 27 ವರ್ಷ ಕಳೆದಿದೆ. ಆದರೆ ನಗರದ ಜನರಿಗೆ ಕನಿಷ್ಠ ಮೂಲಭೂತ ಸೌಕರ್ಯ ಸಿಗುತ್ತಿಲ್ಲ. ಜೊತೆಗೆ ಸಾರಿಗೆ ಸೌಲಭ್ಯವೂ ಇಲ್ಲದೇ ಪರದಾಡುತ್ತಿದ್ದಾರೆ.

    ಹಾವೇರಿ ನಗರಸಭೆಯು ನಗರದ ಜನರ ಅನುಕೂಲಕ್ಕಾಗಿ ಕಚೇರಿ ಹಾಗೂ ಬೇರೆ ಬೇರೆ ಏರಿಯಾಗಳಿಗೆ ಸಾಗಲು ನಗರ ಸಂಚಾರವನ್ನು ಆರಂಭಿಸಿತ್ತು. ಪ್ರಮುಖ ನಗರದಲ್ಲಿ ಬಸ್ ನಿಲ್ದಾಣ (Bus Stand) ನಿರ್ಮಾಣ ಮಾಡಿ 12 ವರ್ಷ ಕಳೆದಿದೆ. 2013ರಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ನಗರದ ಪ್ರಮುಖ ಏರಿಯಾದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಯಿತು.ಇದನ್ನೂ ಓದಿ:

    ನಗರ ಸಂಚಾರ ಆರಂಭಿಸಿದ ಒಂದೇ ಒಂದು ತಿಂಗಳಲ್ಲಿ ಬಸ್ ಸಂಚಾರ ಬಂದ್ ಆಗಿದೆ. ಬಸ್ ಬಿಡದೇ ಬಸ್ ನಿಲ್ದಾಣಗಳೇ ಹಾಳಾಗಿವೆ. ನಗರಸಭೆ, ಸಾರಿಗೆ ಇಲಾಖೆಯ ದಿವ್ಯ ನಿರ್ಲಕ್ಷ್ಯಕ್ಕೆ ಜನರು ಪರಿಸ್ಥಿತಿ ಪರದಾಡುವಂತಾಗಿದೆ.

    ಇದರಿಂದ ಆಟೋಗಳ ಹಾವಳಿ ಹೆಚ್ಚಾಗಿದೆ. ಸಮೀಪದ ಪ್ರದೇಶಗಳಿಗೆ 50 ರಿಂದ 100 ರುಪಾಯಿ ಕೇಳುತ್ತಾರೆ. ಹೀಗಾಗಿ ಬಡ ಜನರು ನಗರದಲ್ಲಿ ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ಶಾಲೆಯ ಮಕ್ಕಳು ಸಹ ನಿತ್ಯವು ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ನಗರದಲ್ಲಿ 2 ಎಲೆಕ್ಟ್ರಿಕ್ ಬಸ್ ಬಿಡುವ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ಒಟ್ಟಿನಲ್ಲಿ ಹಾವೇರಿ ಜಿಲ್ಲಾಕೇಂದ್ರವಾಗಿ 27 ವರ್ಷ ಕಳೆದರೂ ಜನರು ವಂಚಿತರಾಗುತ್ತಿದ್ದಾರೆ. ಇನ್ನಾದರೂ ಸಾರಿಗೆ ಇಲಾಖೆ ಮತ್ತು ನಗರಸಭೆ ಸಿಬ್ಬಂದಿ ಹಾವೇರಿ ನಗರದಲ್ಲಿ ನಗರಸಾರಿಗೆ ಆರಂಭಿಸುವ ಮೂಲಕ ಜನರಿಗೆ ಅನುಕೂಲ ಮಾಡಬೇಕಿದೆ.ಇದನ್ನೂ ಓದಿ:

  • ಹುಬ್ಬಳ್ಳಿ TO ಹೈದರಾಬಾದ್ ಬಸ್ ಸಂಚಾರ ಪುನರಾರಂಭ

    ಹುಬ್ಬಳ್ಳಿ TO ಹೈದರಾಬಾದ್ ಬಸ್ ಸಂಚಾರ ಪುನರಾರಂಭ

    ಹುಬ್ಬಳ್ಳಿ: ಕೋವಿಡ್-19 ಲಾಕ್‍ಡೌನ್ ಕಾರಣದಿಂದ ಕಳೆದ ಆರು ತಿಂಗಳಿಂದ ಸ್ಥಗಿತಗೊಂಡಿದ್ದ ಹುಬ್ಬಳ್ಳಿ ಟು ಹೈದರಾಬಾದ್ ಸಾರಿಗೆ ಬಸ್ ಸಂಚಾರವನ್ನು ಮತ್ತೆ ಆರಂಭಿಸಲಾಗಿದೆ.

    ಸರ್ಕಾರದ ಮಾರ್ಗದರ್ಶಿ ನಿರ್ದೇಶನಗಳ ಪ್ರಕಾರ ಎಲ್ಲ ಸುರಕ್ಷತಾ ಕ್ರಮಗಳೊಂದಿಗೆ ಬಸ್ಸುಗಳ ಕಾರ್ಯಾಚರಣೆ ಮಾಡಲಾಗುತ್ತಿದೆ. ಈ ಬಸ್ಸುಗಳು ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣ ಹಾಗೂ ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಿಂದ ಹೊರಡುತ್ತವೆ ಎಂದು ವಾಕರಸಾಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

    ಮೊದಲ ಹಂತದಲ್ಲಿ 1 ಎಸಿ ಸ್ಲೀಪರ್ (ರಾತ್ರಿ 8-00ಕ್ಕೆ), 1 ನಾನ್ ಎಸಿ ಸ್ಲೀಪರ್(ಸಂಜೆ 7-00ಕ್ಕೆ), 1 ರಾಜಹಂಸ( ಸಂಜೆ 7-30ಕ್ಕೆ) ಹಾಗೂ 2 ವೇಗದೂತ ಬಸ್ಸುಗಳ (ಬೆಳಿಗ್ಗೆ 7-00 ಮತ್ತು 8-00ಕ್ಕೆ) ಸಂಚಾರವನ್ನು ಆರಂಭಿಸಲಾಗಿದೆ. ಬೆಳಿಗ್ಗೆ 7 ಗಂಟೆಗೆ ಹೊರಡುವ ವೇಗದೂತ ಮತ್ತು ಎಲ್ಲ ಐಶಾರಾಮಿ ಬಸ್ಸುಗಳು ಗದಗ, ಕೊಪ್ಪಳ, ಗಂಗಾವತಿ, ಸಿಂಧನೂರು, ರಾಯಚೂರು, ಮೆಹಬೂಬ ನಗರ, ಝಡ್ ಚರ್ಲಾ ಮಾರ್ಗವಾಗಿ ಸಂಚರಿಸುತ್ತವೆ.

    ಬೆಳಿಗ್ಗೆ 8-00ಗಂಟೆಗೆ ಹೊರಡುವ ವೇಗದೂತ ಬಸ್ಸು ನವಲಗುಂದ, ರೋಣ, ಗಜೇಂದ್ರಗಡ, ಕುಷ್ಟಗಿ, ಸಿಂಧನೂರು, ರಾಯಚೂರು, ಮೆಹಬೂಬ್ ನಗರ, ಝಡ್ ಚರ್ಲಾ ಮಾರ್ಗವಾಗಿ ಸಂಚರಿಸುತ್ತದೆ. ಕೋವಿಡ್-19 ಮಾರ್ಗಸೂಚಿ ನಿರ್ದೇಶನಗಳ ಪ್ರಕಾರ ಎಲ್ಲ ಪ್ರಯಾಣಿಕರು ಮಾಸ್ಕ್ ಧರಿಸುವದು ಕಡ್ಡಾಯವಾಗಿರುತ್ತದೆ. ಬಸ್ಸಿನಲ್ಲಿ ಬ್ಲಾಂಕೆಟ್ ಮತ್ತು ನೀರಿನ ಬಾಟಲಿಗಳನ್ನು ನೀಡುವುದಿಲ್ಲ.

    ಎಲ್ಲ ಬಸ್ಸುಗಳಿಗೆ ಆನ್‍ಲೈನ್ ಮತ್ತು ಮುಂಗಡ ಬುಕ್ಕಿಂಗ್ ಕೌಂಟರುಗಳ ಮೂಲಕ ಆಸನಗಳನ್ನು ಕಾಯ್ದಿರಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ. ಸಾರ್ವಜನಿಕರ ಪ್ರತಿಕ್ರಿಯೆ ಗಮನಿಸಿ ವೋಲ್ವೋ ಬಸ್ ಸಂಚಾರ ಆರಂಭಿಸುವ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ.

  • ವಾಯವ್ಯ ಸಾರಿಗೆ ಸಂಸ್ಥೆ ಹುಬ್ಬಳ್ಳಿ ವಿಭಾಗದಿಂದ ಎಸಿ ಬಸ್ ಸಂಚಾರ ಆರಂಭ

    ಹುಬ್ಬಳ್ಳಿ: ಲಾಕ್‍ಡೌನ್ ಪರಿಣಾಮ ಕಳೆದ ನಾಲ್ಕು ತಿಂಗಳಿಂದ ಸ್ಥಗಿತಗೊಳಿಸಲಾಗಿದ್ದ ಎಸಿ ಬಸ್‍ಗಳ ಸಂಚಾರವನ್ನು ಸರ್ಕಾರದ ಅನುಮತಿ ಮೇರೆಗೆ ಸೋಮವಾರದಿಂದ ಪುನರಾರಂಭಿಸಲಾಗುತ್ತಿದೆ.

    ಮೊದಲ ಹಂತದಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರು ಮತ್ತು ಮೈಸೂರಿನ ನಡುವೆ ಎಸಿ ಸ್ಲೀಪರ್ ಮತ್ತು ವೋಲ್ವೋ ಬಸ್‍ಗಳ ಸಂಚಾರ ಆರಂಭಿಸಲಾಗುತ್ತದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ತಿಳಿಸಿದ್ದಾರೆ.

    ಬಸ್ ಹೊರಡುವ ಸಮಯದ ವಿವರ:
    ಹುಬ್ಬಳ್ಳಿಯಿಂದ ಬೆಂಗಳೂರಿಗೆ ವೋಲ್ವೊ ಬಸ್ ಮಧ್ಯಾಹ್ನ 3 ಗಂಟೆಗೆ ಮತ್ತು ರಾತ್ರಿ 10.30ಕ್ಕೆ ಹೊರಡುತ್ತದೆ. ಎಸಿ ಸ್ಲೀಪರ್ ಬಸ್ ರಾತ್ರಿ 10.40ಕ್ಕೆ ಹೊರಡುತ್ತದೆ. ಹುಬ್ಬಳ್ಳಿಯಿಂದ ಮೈಸೂರಿಗೆ ಎಸಿ ಸ್ಲೀಪರ್ ರಾತ್ರಿ 9.45ಕ್ಕೆ ಹೊರಡುತ್ತದೆ.

    ಎಸಿ ಬಸ್ ಗಳಲ್ಲದೆ, ಈಗಾಗಲೇ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಸಂಚರಿಸುತ್ತಿರುವ ನಾನ್ ಎಸಿ ಸ್ಲೀಪರ್ ಮತ್ತು ರಾಜಹಂಸ ಬಸ್‍ಗಳು ಎಂದಿನಂತೆ ಸಂಚರಿಸಲಿವೆ. ನಾನ್ ಎಸಿ ಸ್ಲೀಪರ್: ರಾತ್ರಿ 8.30, 9 ಹಾಗೂ 10 ಗಂಟೆ ರಾಜಹಂಸ ಸಂಜೆ 7.30 ಗಂಟೆ ಹೊರಡಲಿದೆ.

    ಮಾರ್ಗಸೂಚಿಗಳ ಪ್ರಕಾರ ಎಲ್ಲ ಸುರಕ್ಷತಾ ಕ್ರಮಗಳೊಂದಿಗೆ ಬಸ್‍ಗಳನ್ನು ರಸ್ತೆಗಿಳಿಸಲಾಗುತ್ತದೆ. ಬಸ್ ಒಳಗಡೆ ನಿಗದಿತ ತಾಪಮಾನವನ್ನು ನಿರ್ವಹಣೆ ಮಾಡಲಾಗುತ್ತದೆ. ಪ್ರಯಾಣಿಕರು ಮಾಸ್ಕ್ ಧರಿಸುವುದು ಕಡ್ಡಾಯ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸ್ಲೀಪರ್ ಬಸ್ಸಿನಲ್ಲಿ 20 ಹಾಗೂ ವೋಲ್ವೋ ಬಸ್ಸಿನಲ್ಲಿ 30 ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ಸುರಕ್ಷತೆಯ ದೃಷ್ಟಿಯಿಂದ ಬಸ್ಸಿನಲ್ಲಿ ಪ್ರಯಾಣಿಕರಿಗೆ ಬ್ಲಾಂಕೆಟ್ ಗಳನ್ನು ನೀಡುವುದಿಲ್ಲ. ಮಾರ್ಗ ಮಧ್ಯದಲ್ಲಿ ಊಟೋಪಚಾರಕ್ಕಾಗಿ ನಿಲುಗಡೆ ಇರುವುದಿಲ್ಲ. ಆದ್ದರಿಂದ ಪ್ರಯಾಣಿಕರು ಊಟ, ತಿಂಡಿ ಮತ್ತು ನೀರನ್ನು ಮನೆಯಿಂದಲೇ ತರಬೇಕು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ವಿವರಿಸಿದ್ದಾರೆ.

  • ಕೊಡಗು ಗ್ರಾಮೀಣ ಭಾಗದಲ್ಲಿ ಬಸ್‍ಗಳಿಲ್ಲದೆ ಜನ ಪರದಾಟ

    ಕೊಡಗು ಗ್ರಾಮೀಣ ಭಾಗದಲ್ಲಿ ಬಸ್‍ಗಳಿಲ್ಲದೆ ಜನ ಪರದಾಟ

    ಮಡಿಕೇರಿ: ಲಾಕ್‍ಡೌನ್ ಸಡಿಲಿಕೆ ಮಾಡಲಾಗಿದ್ದು, ಖಾಸಗಿ ಬಸ್‍ಗಳ ಸಂಚಾರಕ್ಕೂ ಅನುಮತಿ ನೀಡಲಾಗಿದೆ. ಆದರೆ ಕೊಡಗು ಜಿಲ್ಲೆಯಲ್ಲಿ ಪಟ್ಟಣ, ನಗರ ಪ್ರದೇಶಗಳಿಗೆ ಬೆರಳೆಣಿಕೆಯಷ್ಟು ಬಸ್‍ಗಳು ಮಾತ್ರ ಸಂಚರಿಸುತ್ತಿವೆ. ಗ್ರಾಮೀಣ ಪ್ರದೇಶಗಳಿಗೆ ಬಸ್‍ಗಳ ಸಂಚಾರವೇ ಇಲ್ಲದಂತಾಗಿದ್ದು, ಜನ ಪರದಾಡುವಂತಾಗಿದೆ.

    ಸರ್ಕಾರ ಬಸ್‍ಗಳ ಸಂಚಾರಕ್ಕೆ ಅನುಮತಿ ನೀಡಿದೆ. ಆದರೆ ಪಟ್ಟಣ, ನಗರ ಸೇರಿದಂತೆ ಪ್ರಮುಖ ಊರುಗಳಿಗೆ ಮಾತ್ರ ಬಸ್‍ಗಳು ಸಂಚರಿಸುತ್ತಿವೆ. ಹಳ್ಳಿಗಳಿಗೆ ಸರ್ಕಾರಿ ಬಸ್‍ಗಳು ಸಂಚರಿಸದಿರುವುದರಿಂದ ಗ್ರಾಮೀಣ ಭಾಗದ ಜನ ಖಾಸಗಿ ಬಸ್‍ಗಳನ್ನೇ ನಂಬಿಕೊಂಡಿದ್ದರು. ಇದೀಗ ಖಾಸಗಿ ಬಸ್‍ಗಳೂ ಗ್ರಾಮೀಣ ಭಾಗಕ್ಕೆ ಸಂಚರಿಸುತ್ತಿಲ್ಲ. ಹೀಗಾಗಿ ಪಡಬಾರದ ಕಷ್ಟಪಡುತ್ತಿದ್ದಾರೆ.

    ಗುಡ್ಡಗಾಡು ಪ್ರದೇಶವಾಗಿರುವ ಕೊಡಗು ಜಿಲ್ಲೆಯ ಗ್ರಾಮೀಣ ಭಾಗಕ್ಕೆ ಖಾಸಗಿ ಬಸ್‍ಗಳ ಸಂಚಾರವೇ ಪ್ರಮುಖ ಸಾರಿಗೆ. ಮತ್ತೊಂದೆಡೆ ಸರ್ಕಾರಿ ಸಾರಿಗೆ ಬಸ್‍ಗಳು ಓಡಾಡುತ್ತಿದ್ದ ಗ್ರಾಮಗಳಿಗೂ ಬಸ್‍ಗಳು ಓಡಾಡುತ್ತಿಲ್ಲ. ಇದರಿಂದ ಜನರು ಅಗತ್ಯ ವಸ್ತುಗಳನ್ನು ಕೊಳ್ಳಲು, ಅನಾರೋಗ್ಯದ ಸಮಸ್ಯೆ ಕಾಡಿದರೆ ಆಸ್ಪತ್ರೆಗೆ ಹೋಗಲು ಸಾರಿಗೆ ಇಲ್ಲದೆ ನರಕಯಾತನೆ ಅನುಭವಿಸುತ್ತಿದ್ದಾರೆ. ಮಡಿಕೇರಿಯಿಂದ ಕೇವಲ 10, 12 ಕಿ.ಮೀ. ದೂರದಲ್ಲಿರುವ ಗ್ರಾಮಗಳಿಗೂ ಬಸ್‍ಗಳ ಸಂಚಾರವಿಲ್ಲದಂತಾಗಿದೆ. ಹೀಗಾಗಿ ನಾಪೋಕ್ಲು, ಮಾದಾಪುರ, ಗಾಳೀಬೀಡು, ಒಣಚಲು ಸೇರಿದಂತೆ ಹಲವು ಗ್ರಾಮಗಳ ಜನರು ನಡೆದುಕೊಂಡೇ ನಗರಗಳಿಗೆ ಆಗಮಿಸುತ್ತಿದ್ದಾರೆ.

    ಸಾರಿಗೆ ಸಂಚಾರವಿಲ್ಲದಿರುವುದರಿಂದ ಜನರು ಎಲ್ಲಾ ಅಗತ್ಯ ವಸ್ತುಗಳನ್ನು ಕೊಳ್ಳಲು ಮಡಿಕೇರಿ ಸೇರಿದಂತೆ ನಗರ ಪಟ್ಟಣಗಳಿಗೆ ಹೋಗಬೇಕಾಗಿರುವುದರಿಂದ ಜನರು ಆಟೋಗಳನ್ನೇ ಆಶ್ರಯಿಸಬೇಕಾಗಿದೆ. ಬಸ್‍ಗಳ ಸಂಚಾರವಿಲ್ಲದ್ದನ್ನು ಬಂಡವಾಳವಾಗಿಸಿಕೊಂಡಿರುವ ಆಟೋ ಚಾಲಕರು 10 ಕಿ.ಮೀ. ಗೆ ವ್ಯಕ್ತಿಯೊಬ್ಬರಿಂದ 300 ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ವಾಪಸ್ ಅದೇ ಆಟೋದಲ್ಲಿ ಮತ್ತೆ ಗ್ರಾಮಕ್ಕೆ ತಲುಪಬೇಕಾದರೂ ಪುನಃ 300 ರೂಪಾಯಿ ಕೊಡಬೇಕಾಗಿದೆ. ಹೀಗಾಗಿ ಗ್ರಾಮೀಣ ಭಾಗದ ಜನರು ಪಡಬಾರದ ಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ಎಲ್ಲ ಗ್ರಾಮೀಣ ಭಾಗಗಳಲ್ಲಿ ಬಸ್‍ಗಳನ್ನು ಓಡಿಸುವಂತೆ ಜನರು ಒತ್ತಾಯಿಸುತ್ತಿದ್ದಾರೆ.

  • ರೆಡ್‍ಝೋನ್ ಬಿಟ್ಟು ಬೇರೆ ಪ್ರದೇಶದಲ್ಲಿ ನಾಳೆಯಿಂದ ಬಸ್ ಸಂಚಾರ ಆರಂಭ: ಸವದಿ

    ರೆಡ್‍ಝೋನ್ ಬಿಟ್ಟು ಬೇರೆ ಪ್ರದೇಶದಲ್ಲಿ ನಾಳೆಯಿಂದ ಬಸ್ ಸಂಚಾರ ಆರಂಭ: ಸವದಿ

    – ಸಿಎಂ ಜೊತೆ ಸಭೆ ಮಾಡಿ ನಂತರ ನಿಯಮ ಬಿಡುಗಡೆ

    ಬೆಂಗಳೂರು: ರೆಡ್ ಝೋನ್ ಮತ್ತು ಕಂಟೈನ್ಮೆಂಟ್ ಪ್ರದೇಶಗಳನ್ನು ಬಿಟ್ಟು ಬೇರೆ ಎಲ್ಲ ಕಡೆ ಬಸ್ ಸಂಚಾರ ಆರಂಭ ಮಾಡುವ ಸಂಕಲ್ಪವನ್ನು ಮಾಡಲಾಗಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

    ಇಂದು ಬಸ್ ಸಂಚಾರದ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ಇದೆ. ಸಭೆಯಲ್ಲಿ ಬಸ್ ಸಂಚಾರ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ಬಹುತೇಕ ನಾಳೆ ರಾಜ್ಯಾದ್ಯಂತ ಬಸ್ ಸಂಚಾರ ಆರಂಭವಾಗಲಿದೆ ಎಂದು ಹೇಳಿದ್ದಾರೆ.

    ಕೇಂದ್ರ ಸರ್ಕಾರದಿಂದ ಬಸ್ ಸಂಚಾರದ ವಿಚಾರದಲ್ಲಿ ರಾಜ್ಯಗಳು ತೀರ್ಮಾನ ತೆಗೆದುಕೊಳ್ಳಬುಹುದು ಎಂಬ ಸುತ್ತೋಲೆ ಬಂದಿದೆ. ಹಾಗಾಗಿ ಇಂದಿನ ಸಭೆಯಲ್ಲಿ ಬಸ್ ಸಂಚಾರಕ್ಕೆ ನಿಯಮಗಳನ್ನು ರೂಪಿಸುತ್ತೇವೆ. ಅಂತರ್ ಜಿಲ್ಲಾ, ಅಂತರ್ ರಾಜ್ಯ ಬಸ್ ಸಂಚಾರ ಸಂಬಂಧ ನಿಯಮ ತರುತ್ತೇವೆ. ಬೆಂಗಳೂರಿನಲ್ಲಿ ಬಸ್ ಸಂಚಾರ ಸವಾಲಿನ ಕೆಲಸ ಬೆಂಗಳೂರು ರೆಡ್ ಝೋನ್ ಆಗಿರುವುದರಿಂದ ಹೆಚ್ಚಿನ ಮುತುವರ್ಜಿಯಿಂದ ಬಸ್ ಸಂಚಾರಕ್ಕೆ ಅವಕಾಶ ಕೊಡುತ್ತೇವೆ ಎಂದು ಸವದಿ ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಎಷ್ಟು ಬಸ್ ಗಳನ್ನು ರಸ್ತೆಗೆ ಇಳಿಸಬೇಕು ಎಂಬುದನ್ನು ಇಂದು ನಿರ್ಧರಿಸುತ್ತೇವೆ. ಬಸ್ಸಿನಲ್ಲಿ ಎಷ್ಟು ಪ್ರಯಾಣಿಕರು ಇರಬೇಕೆಂದು ಎಂಬುದರ ಬಗ್ಗೆ ಸಭೆಯಲ್ಲಿ ತೀರ್ಮಾನ ತೆಗದುಕೊಳ್ಳುತ್ತೇವೆ. ಸೀಟಿಂಗ್ ಕೆಪಾಸಿಟಿ ಆಧರಿಸಿ ಬಸ್ ಸಂಚಾರಕ್ಕೆ ಅವಕಾಶ ಕೇಳಿದ್ದೇವೆ. ಸದ್ಯ ಬಸ್ ಗಳ ಸಂಚಾರದಿಂದ ನಷ್ಟ ಆಗುತ್ತೆ ಎಂದು ಗೊತ್ತಿದೆ. ಆದರೆ ಸಾಮಾಜಿಕ ಸೇವೆ ಮನಗಂಡು ಬಸ್ ಸೇವೆಗೆ ಮುಂದಾಗಿದ್ದೇವೆ ಎಂದು ಸವದಿ ಮಾಹಿತಿ ನೀಡಿದರು.

    ಬೇರೆ ರಾಜ್ಯಗಳಿಗೆ ಬಸ್ ಸಂಚಾರ ಆರಂಭಿಸಲು ಆ ರಾಜ್ಯದ ಅನುಮತಿ ಕೂಡಬೇಕು. ಆದರೆ ಎಲ್ಲ ಪ್ರದೇಶಗಳಿಗೂ ಬಸ್ ಸಂಚಾರ ಮಾಡುವುದು ಕಷ್ಟ. ಯಾಕೆಂದರೆ ಪುಣೆ ಮತ್ತು ಮುಂಬೈನಲ್ಲಿ ಕೊರೊನಾ ಅರ್ಭಟ ಜಾಸ್ತಿ ಇದೆ. ಅಲ್ಲಿಗೆ ನಾವು ರಾಜ್ಯದಿಂದ ಬಸ್ ಬಿಡಲು ಆಗುವುದಿಲ್ಲ. ಎಲ್ಲ ರಾಜ್ಯದಲ್ಲೂ ಕೊರೊನಾ ಸೋಂಕು ಇದೆ ಆದರೆ ಬೇರೆ ರಾಜ್ಯದಲ್ಲಿ ಸೋಂಕು ಇಲ್ಲದಿರುವ ಪ್ರದೇಶಗಳಿಗೆ ಬಸ್ ಬಿಡಲಾಗುವುದು ಎಂದು ಹೇಳಿದರು.

    ಇದೇ ವೇಳೆ ಖಾಸಗಿ ಬಸ್ ಸಂಚಾರದ ಬಗ್ಗೆ ಮಾತನಾಡಿದ ಸವದಿ, ಖಾಸಗಿ ಬಸ್ಸುಗಳ ಸಂಚಾರ ಸದ್ಯಕ್ಕಿಲ್ಲ. ಖಾಸಗಿ ಬಸ್ಸುಗಳ ಸಮಸ್ಯೆ ನಮಗಿಂತ ಹೆಚ್ಚಾಗಿದೆ. ಖಾಸಗಿ ಬಸ್ ಸಂಚಾರ ಆರಂಭಿಸುವ ಬಗ್ಗೆಯೂ ಇಂದು ನಿರ್ಧಾರ ಮಾಡುತ್ತೇವೆ. ಮುಖ್ಯವಾಗಿ ಬಸ್ಸುಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಮತ್ತು ಸಿಬ್ಬಂದಿ ಪರೀಕ್ಷೆ ಈ ಎಲ್ಲದರ ಬಗ್ಗೆ ಇಂದಿನ ಸಭೆಯಲ್ಲಿ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.

  • ಬಸ್ ಸಂಚಾರ ಆರಂಭ- ಸರ್ಕಾರದ ಮಾರ್ಗಸೂಚಿಗಾಗಿ ಕಾಯುತ್ತಿರುವ ಗದಗ ಸಾರಿಗೆ ಅಧಿಕಾರಿಗಳು

    ಬಸ್ ಸಂಚಾರ ಆರಂಭ- ಸರ್ಕಾರದ ಮಾರ್ಗಸೂಚಿಗಾಗಿ ಕಾಯುತ್ತಿರುವ ಗದಗ ಸಾರಿಗೆ ಅಧಿಕಾರಿಗಳು

    ಗದಗ: ಜಿಲ್ಲೆನಲ್ಲಿ ಬಸ್ ಸಂಚಾರಕ್ಕೆ ಎಲ್ಲ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಸರ್ಕಾರದ ಮಾರ್ಗಸೂಚಿಗಾಗಿ ಸಾರಿಗೆ ಅಧಿಕಾರಿಗಳು ಕಾಯುತ್ತಿದ್ದಾರೆ.

    ಜಿಲ್ಲೆಯ ಒಟ್ಟು 7 ಘಟಕಗಳಿಂದ 136 ಬಸ್ ಬಿಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದಕ್ಕಾಗಿ ವಿಭಾಗಿಯ ಘಟಕದಲ್ಲಿ ಸಿಬ್ಬಂದಿಗಳ ಸ್ಕ್ರೀನಿಂಗ್, ಬಸ್ ಗಳಿಗೆ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗುತ್ತಿದೆ. ಇಲಾಖೆಯಲ್ಲಿ ಕೆಲಸ ಮಾಡುವ ಮೆಕ್ಯಾನಿಕ್, ಚಾಲಕ, ನಿರ್ವಾಹಕ ಹಾಗೂ ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ ಮಾಡಿದ್ದಾರೆ.

    ಬಸ್ ಆಸನಗಳಲ್ಲೂ ನಿಯಮಗಳ ಪಾಲನೆ ಕಡ್ಡಾಯವಾಗಿದೆ. ಅದಕ್ಕಾಗಿ ಬಸ್‍ನ ಆಸನಗಳಿಗೆ ಕೆಂಪು ಬಣ್ಣದಿಂದ ಮಾರ್ಕ್ ಮಾಡಲಾಗುತ್ತಿದೆ. ಮಾರ್ಕ್ ಮಾಡಿದ ಸ್ಥಳದಲ್ಲಿ ಕೂರದೆ ಅಂತರ ಕಾಯ್ದುಕೊಳ್ಳಲು ಒಂದು ಬಸ್‍ನಲ್ಲಿ 28 ಜನರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇನ್ನು ಬಸ್ ನಿಲ್ದಾಣದಲ್ಲೂ ಒಂದೇ ಗೇಟ್ ಮೂಲಕ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ. 3 ಗೇಟ್ ಗಳ ಪೈಕಿ, 2 ಗೇಟ್ ಗೆ ಮುಳ್ಳಿನ ಬೇಲಿ ಹಾಕಿ ಮುಚ್ಚಲಾಗಿದೆ. ಒಂದೇ ಗೇಟ್ ತೆರೆಯಲಾಗಿದೆ. ಇದರಿಂದಾಗಿ ಪ್ರಯಾಣಿಕರ ಆರೋಗ್ಯ ತಪಾಸಣೆ ಅನುಕೂಲವಾಗತ್ತದೆ. ಸರ್ಕಾರದ ಮಾರ್ಗಸೂಚಿ ನೋಡಿಕೊಂಡು ಬಸ್ ಬಿಡುವುದಾಗಿ ಗದಗ ಸಾರಿಗೆ ಅಧಿಕಾರಿಗಳು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

  • ಉಡುಪಿಯಲ್ಲಿ ನಾಳೆಯಿಂದ ಖಾಸಗಿ, ಸರ್ಕಾರಿ ಬಸ್ ಸಂಚಾರ ಆರಂಭ

    ಉಡುಪಿಯಲ್ಲಿ ನಾಳೆಯಿಂದ ಖಾಸಗಿ, ಸರ್ಕಾರಿ ಬಸ್ ಸಂಚಾರ ಆರಂಭ

    – ಕಾನೂನು ಪಾಲಿಸದಿದ್ದರೆ ಪ್ರಯಾಣಿಕರ ಮೇಲೂ ಕೇಸ್
    – ಡಿಸಿ ಜಿ.ಜಗದೀಶ್ ಕಟ್ಟುನಿಟ್ಟಿನ ಸೂಚನೆ

    ಉಡುಪಿ: ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆಯಿಂದ ಖಾಸಗಿ ಮತ್ತು ಸರ್ಕಾರಿ ಬಸ್ ಸಂಚಾರ ಆರಂಭವಾಗಲಿದೆ. ಜನತಾ ಕಫ್ರ್ಯೂ ಘೋಷಣೆಯಾದ ನಂತರ ಉಡುಪಿ ಜಿಲ್ಲೆಯಲ್ಲಿ ಯಾವುದೇ ಬಸ್ ಸಂಚಾರ ಇರಲಿಲ್ಲ. ಇದೀಗ ಕೆಲವು ಷರತ್ತುಗಳನ್ನು ವಿಧಿಸಿ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

    ಮೇ 13ರ ಬೆಳಗ್ಗೆಯಿಂದ ಜಿಲ್ಲೆಯೊಳಗೆ ಖಾಸಗಿ ಮತ್ತು ಸರ್ಕಾರಿ ಬಸ್‍ಗಳು ಸಂಚಾರ ಆರಂಭಿಸಲಿವೆ. ಒಂದು ಬಸ್‍ನಲ್ಲಿ ಶೇ.50ರಷ್ಟು ಪ್ರಯಾಣಿಕರು ಮಾತ್ರ ಓಡಾಡಬಹುದು. ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಮಾಸ್ಕ್ ಧರಿಸಿದ ಪ್ರಯಾಣಿಕರನ್ನು ಬಸ್ ಒಳಗೆ ಬಿಟ್ಟುಕೊಳ್ಳಬೇಡಿ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಬಸ್ ನಿರ್ವಾಹಕರಿಗೆ ಹಾಗೂ ಚಾಲಕರಿಗೆ ಸೂಚನೆ ನೀಡಿದ್ದಾರೆ.

    ಮಾಸ್ಕ್ ತಲೆಗೆ ಹಾಕಿಕೊಳ್ಳುವುದು, ಕುತ್ತಿಗೆಗೆ ನೇತಾಡಿಸುವುದು ಮಾಡಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕೆಎಸ್‍ಆರ್‍ಟಿಸಿಯ ಅಧಿಕಾರಿಗಳು ರೂಟ್ ಸರ್ವೇ ಮುಗಿಸಿದ್ದು, ಅಗತ್ಯ ಇರುವ ರಸ್ತೆಗಳಲ್ಲಿ ಬಸ್ ಗಳನ್ನು ಓಡಿಸಲಿದ್ದಾರೆ. ಖಾಸಗಿ ಬಸ್ ಮಾಲೀಕರ ಸಂಘದಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ಕೆಲವು ಖಾಸಗಿ ಬಸ್‍ಗಳು ನಾಳೆ ರಸ್ತೆಗಿಳಿಯಲಿವೆ. ಸರ್ಕಾರದ ನಿಯಮಗಳನ್ನು ಪಾಲಿಸಿ, ಸ್ಯಾನಿಟೈಸರ್ ಕೊಟ್ಟು, ಮಾಸ್ಕ್ ಧರಿಸುವಂತೆ ನೋಡಿಕೊಂಡು ಬಸ್ ಓಡಿಸುವುದು ಕಷ್ಟ ಸಾಧ್ಯ ಎಂದು ಕೆಲ ಖಾಸಗಿ ಬಸ್ ಮಾಲೀಕರು ಬಸ್ ಓಡಿಸದಿರಲು ನಿರ್ಧಾರ ಮಾಡಿದ್ದಾರೆ. ಬಸ್ ಸಂಚಾರದ ಕುರಿತು ನಾಳೆ ಸ್ಪಷ್ಟ ಚಿತ್ರಣ ಸಿಗಲಿದೆ.

  • ರೆಡ್‍ಝೋನ್ ಅಲ್ಲದ ತಾಲೂಕುಗಳಲ್ಲಿ ಮೇ 4ರಿಂದ ಬಸ್ ಸಂಚಾರ: ಲಕ್ಷ್ಮಣ ಸವದಿ

    ರೆಡ್‍ಝೋನ್ ಅಲ್ಲದ ತಾಲೂಕುಗಳಲ್ಲಿ ಮೇ 4ರಿಂದ ಬಸ್ ಸಂಚಾರ: ಲಕ್ಷ್ಮಣ ಸವದಿ

    ಬೆಳಗಾವಿ: ರೆಡ್ ಝೋನ್ ಅಲ್ಲದ ತಾಲೂಕುಗಳಲ್ಲಿ ಮೇ 4ರಿಂದ ಬಸ್ ಸಂಚಾರಕ್ಕೆ ಅನುಮತಿ ನೀಡುತ್ತೇವೆ ಎಂದು ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

    ಇಂದು ನಗರದಲ್ಲಿ ಮಾತನಾಡಿದ ಅವರು, ತಾಲೂಕುವಾರು ಕೊರೊನಾ ಹಾಟ್‍ಸ್ಟಾಟ್‍ಗಳನ್ನು ಗುರುತಿಸಲಾಗಿದೆ. ಕೊರೊನಾ ಸೋಂಕು ಇರುವ ತಾಲೂಕುಗಳಲ್ಲಿ ಸಾರಿಗೆ ಸಂಚಾರ ಇರುವುದಿಲ್ಲ. ಅವುಗಳನ್ನು ಬಿಟ್ಟು ಉಳಿದ ತಾಲೂಕುಗಳಲ್ಲಿ ಗ್ರಾಮೀಣ ಭಾಗಕ್ಕೂ ಸೇರಿ ಸಾರಿಗೆ ವ್ಯವಸ್ಥೆಯನ್ನು ಮೇ 4ರಿಂದ ಮಾಡುತ್ತೇವೆ ಎಂದು ಹೇಳಿದರು.

    ಇದೇ ವೇಳೆ ವಲಸೆ ಕಾರ್ಮಿಕರಿಂದ ಕೆ.ಎಸ್.ಆರ್.ಟಿ.ಸಿ ಬಸ್‍ಗಳಲ್ಲಿ ದುಪ್ಪಟ್ಟು ದರ ವಸೂಲಿ ವಿಚಾರವಾಗಿ ಮಾತನಾಡಿದ ಅವರು, ಇದು ತಪ್ಪು ಕಲ್ಪನೆಯಿಂದ ಆಗಿದೆ. ಕಾರ್ಮಿಕರ ಹಿತದೃಷ್ಟಿಯಿಂದ ಸಿಂಗಲ್ ಫೇರ್ ತಗೆದುಕೊಂಡು ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಸ್‍ನಲ್ಲಿ ಕಡಿಮೆ ಜನರನ್ನು ಕಳಿಸಬೇಕಾಗುತ್ತೆ. ಕಾರ್ಮಿಕರನ್ನು ಅವರ ಊರಿಗೆ ಬಿಟ್ಟು ವಾಪಸ್ ಬರುವಾಗ ಖಾಲಿ ಬರಬೇಕಾಗುತ್ತೆ. ಆದರೂ ಈ ಹೊರೆ ಸಹಿಸಿಕೊಂಡು ನಿಗದಿತ ದರವನ್ನು ಪಡೆಯಲಾಗುತ್ತೆ ಎಂದರು.

    ವಲಸೆ ಕಾರ್ಮಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕೆಂಬ ಬೇಡಿಕೆ ವಿಚಾರವಾಗಿ ಮಾತನಾಡಿದ ಸವದಿ, ಈಗಾಗಲೇ ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ಸಹಾಯ ಮಾಡಿದ್ದೇವೆ. ಕೊರೊನಾದಿಂದ ಇಡೀ ವಿಶ್ವಕ್ಕೆ ಕಂಟಕವಾಗಿದೆ. ಇದು ಎಲ್ಲರೂ ಕೂಡ ಹೊರಬೇಕಾಗಿರುವ ಭಾರ, ಸ್ವಲ್ಪ ಸಹಿಸಿಕೊಳ್ಳಬೇಕಾಗುತ್ತೆ ಎಂದು ಹೇಳುವ ಮೂಲಕ ಕಾರ್ಮಿಕರಿಗೆ ಉಚಿತ ಪ್ರಯಾಣ ಅಸಾಧ್ಯ ಎಂದು ಪರೋಕ್ಷವಾಗಿ ಲಕ್ಷ್ಮಣ ಸವದಿ ತಿಳಿಸಿದರು.

  • ಹುಬ್ಬಳ್ಳಿಯಿಂದ ಮಹಾರಾಷ್ಟಕ್ಕೆ ತೆರಳುವ 7 ಬಸ್ಸುಗಳ ಸಂಚಾರ ಸ್ಥಗಿತ

    ಹುಬ್ಬಳ್ಳಿಯಿಂದ ಮಹಾರಾಷ್ಟಕ್ಕೆ ತೆರಳುವ 7 ಬಸ್ಸುಗಳ ಸಂಚಾರ ಸ್ಥಗಿತ

    ಹುಬ್ಬಳ್ಳಿ: ವಿಜಯಪುರ ಜಿಲ್ಲೆಯ ಗಡಿಭಾಗಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಕೊರೊನಾ ವೈರಾಣು ಹರಡಿರುವುದರಿಂದ, ಹುಬ್ಬಳ್ಳಿಯಿಂದ ಈ ಭಾಗಕ್ಕೆ ತೆರಳುವ ಏಳು ಬಸ್ಸುಗಳು ಹಾಗೂ ರಾಜ್ಯದ ಕಲಬುರಗಿಗೆ ತೆರಳುವ ಸ್ಲೀಪರ್ ಕೋಚ್ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

    ಈ ಕುರಿತು ವಾಕರಸಾಸಂ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಕ ಹೆಚ್.ರಾಮನಗೌಡರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ವಿಜಯಪುರ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಹೀಗಾಗಿ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸುವ ಪ್ರವಾಸಿಗರನ್ನು ನಿಯಂತ್ರಿಸಲು ವಿಜಯಪುರ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ಸಾರ್ವಜನಿಕ ಸಾರಿಗೆ ಮತ್ತು ಖಾಸಗಿ ಸಾರಿಗೆ ಸಂಸ್ಥೆಗಳ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

    ಹುಬ್ಬಳ್ಳಿ ಗ್ರಾಮಾಂತರ ವಿಭಾಗದಿಂದ ಮಹಾರಾಷ್ಟ್ರದ ಸೊಲ್ಲಾಪುರ, ಔರಂಗಾಬಾದ್, ಬಾರ್ಸಿ ಹಾಗೂ ಪಂಡರಾಪುರಕ್ಕೆ ತೆರಳುವ ಏಳು ಬಸ್ಸುಗಳ ಸಂಚಾರವನ್ನು ತಕ್ಷಣದಿಂದ ಸ್ಥಗಿತಗೊಳಿಸಲಾಗಿದೆ. ಹುಬ್ಬಳ್ಳಿ-ಕಲಬುರಗಿ ಸ್ಲೀಪರ್ ಕೋಚ್ ಬಸ್ ಸಂಚಾರ ಈಗಾಗಲೇ ಸ್ಥಗಿತಗೊಳಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

  • ಗಮನಿಸಿ, ಬುಧವಾರದಿಂದ ಶಿರಾಡಿ ಘಾಟ್ ಬಸ್ ಸಂಚಾರಕ್ಕೆ ಮುಕ್ತ

    ಗಮನಿಸಿ, ಬುಧವಾರದಿಂದ ಶಿರಾಡಿ ಘಾಟ್ ಬಸ್ ಸಂಚಾರಕ್ಕೆ ಮುಕ್ತ

    ಮಂಗಳೂರು: ಭೂ-ಕುಸಿತ ಹಾಗೂ ಭಾರೀ ಮಳೆಯಿಂದಾಗಿ ಬಂದ್ ಆಗಿದ್ದ ಶಿರಾಡಿ ಘಾಟಿ ರಸ್ತೆಯಲ್ಲಿ ಅಕ್ಟೋಬರ್ 3(ಬುಧವಾರ)ರಿಂದ ಬಸ್ ಸಂಚಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಸಸಿಕಾಂತ್ ಸೆಂಥಿಲ್ ಅನುಮತಿ ನೀಡಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿಯವರು, ಭಾರಿ ಮಳೆಯಿಂದ ರಸ್ತೆ ಮೇಲೆ ಗುಡ್ಡ ಕುಸಿತ ಉಂಟಾಗಿದ್ದ ಕಾರಣ ಶಿರಾಡಿ ಘಾಟ್‍ನ ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿತ್ತು. ಸದ್ಯ ತೆರವು ಕಾರ್ಯಾಚರಣೆ ಪೂರ್ಣಗೊಂಡಿದೆ. ಈ ಮೊದಲು ಸೆಪ್ಟೆಂಬರ್ 5 ರಿಂದ ಲಘು ವಾಹನಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಈಗ ಅಕ್ಟೋಬರ್ 3 ರಿಂದ ಸಾರಿಗೆ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಅಲ್ಲದೇ ಇನ್ನೆರಡು ವಾರಗಳ ಬಳಿಕ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗುತ್ತದೆ. ಘಾಟ್ ರಸ್ತೆಯ ಕುಸಿತ ಸ್ಥಳಗಳಲ್ಲಿ 24 ಗಂಟೆ ಪೊಲೀಸ್ ನಿಯೋಜನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

    ಇದಲ್ಲದೇ ಜಿಲ್ಲಾಡಳಿತ ಹೆದ್ದಾರಿ ಪರಿಸ್ಥಿತಿ ಅವಲೋಕಿಸಲು ತಜ್ಞರ ಮೊರೆ ಹೋಗಿದ್ದು, ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರಾದ ತಂಗವೇಲುರವರು ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ಇನ್ನೊಂದು ವಾರದಲ್ಲಿ ಸ್ಥಳ ಪರಿಶೀಲನೆ ನಡೆಸುತ್ತಾರೆ ಎಂದು ತಿಳಿದು ಬಂದಿದೆ. ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟ ಹಿನ್ನೆಲೆಯಲ್ಲಿ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.

    ಶಿರಾಡಿ ಘಾಟ್ ಕಾಂಕ್ರೀಟ್ ಆದ ಬಳಿಕ ಕಳೆದ ಜುಲೈ 15ರಂದು ಅಧಿಕೃತ ಉದ್ಘಾಟನೆ ಆಗಿತ್ತು. ಆದರೆ ಭೂಕುಸಿತ ಕಾರಣದಿಂದಾಗಿ ಶಿರಾಡಿ ಘಾಟ್ ಹೆದ್ದಾರಿ ಸ್ಥಗಿತಗೊಳಿಸಲಾಗಿತ್ತು. ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಶಿರಾಡಿ ಜೊತೆಗೆ ಸಂಪಾಜೆ ಘಾಟಿಯಲ್ಲಿ ಗುಡ್ಡ ಕುಸಿತ ಸಂಭವಿದ್ದ ಪರಿಣಾಮ ರಸ್ತೆ ಸಂಪರ್ಕ ಬಂದ್ ಆಗಿತ್ತು. ಚಾರ್ಮಾಡಿ ರಸ್ತೆಯಲ್ಲಿ ವಾಹನಗಳ ದಟ್ಟನೆ ಜಾಸ್ತಿಯಾಗಿ ಭಾರೀ ಟ್ರಾಫಿಕ್ ಜಾಮ್ ಆಗುತ್ತಿರುವ ಹಿನ್ನಲೆಯಲ್ಲಿ ಲಘು ವಾಹನಗಳಿಗೆ ಶಿರಾಡಿ ಘಾಟಿ ರಸ್ತೆಯಲ್ಲಿ ಸಂಚರಿಸಲು ಅನುಮತಿ ನೀಡಬೇಕೆಂಬ ಬೇಡಿಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಆಗಸ್ಟ್ ಕೊನೆಯ ವಾರ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಸಮಸ್ಯೆಯನ್ನು ತಿಳಿಸಿದ್ದರು. ಈ ವೇಳೆ ಗಡ್ಕರಿ ಒಂದು ವಾರದ ಒಳಗಡೆ ರಸ್ತೆಯನ್ನು ದುರಸ್ತಿ ಮಾಡಿ ವಾಹನಗಳ ಸಂಚಾರಕ್ಕೆ ಅನುಮತಿ ನೀಡಬೇಕೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದ್ದರು. ಹೀಗಾಗಿ ಸೆಪ್ಟೆಂಬರ್ 5 ರಿಂದ ಹಾಸನ ಜಿಲ್ಲಾಡಳಿತ ಲಘು ವಾಹನಗಳಿಗೆ ಈ ರಸ್ತೆಯಲ್ಲಿ ಸಂಚರಿಸಲು ಅನುಮತಿ ನೀಡಿತ್ತು.


    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv