Tag: ಬಸ್ ಬಂದ್

  • ಸಾರಿಗೆ ಮುಷ್ಕರ- ಧಾರವಾಡ ಜಿಲ್ಲಾಡಳಿತ ಖಾಸಗಿ ಬಸ್ ಇಳಿಸಲು ಸಜ್ಜು

    ಸಾರಿಗೆ ಮುಷ್ಕರ- ಧಾರವಾಡ ಜಿಲ್ಲಾಡಳಿತ ಖಾಸಗಿ ಬಸ್ ಇಳಿಸಲು ಸಜ್ಜು

    – ಗದಗನಲ್ಲಿ ಮಧ್ಯಾಹ್ನದಿಂದಲೇ ಬಸ್ ಸಂಚಾರ ವಿರಳ

    ಧಾರವಾಡ: ನಾಳೆ ರಾಜ್ಯಾದ್ಯಂತ ಸಾರಿಗೆ ನೌಕರರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮುಷ್ಕರ ಕರೆ ನೀಡಿರುವ ಹಿನ್ನೆಲೆ ಧಾರವಾಡ ಜಿಲ್ಲಾಡಳಿತ ಖಾಸಗಿ ಬಸ್ ರಸ್ತೆಗಿಳಿಸಲು ಮುಂದಾಗಿದೆ. ಅಗತ್ಯ ಇರೋ ಮಾರ್ಗಗಳಲ್ಲಿ 408 ಖಾಸಗಿ ಬಸ್ ಕಾರ್ಯಾಚರಣೆ ನಡೆಸಲಿವೆ ಎಂದು ಪ್ರಕಟಣೆ ನೀಡಿರುವ ಜಿಲ್ಲಾಡಳಿತ, ಮ್ಯಾಕ್ಸಿಕ್ಯಾಬ್, ಖಾಸಗಿ ಪ್ರಯಾಣಿಕರ ವಾಹನ, ಶಾಲಾ ವಾಹನಗಳ ಬಳಕೆಗೆ ನಿರ್ಧಾರ ಮಾಡಲಾಗಿದೆ.

    ಒಟ್ಟು 1311 ಖಾಸಗಿ ವಾಹನಗಳು ಲಭ್ಯ ಇದ್ದು, ಆ ಪೈಕಿ 408 ಖಾಸಗಿ ವಾಹನ ಕಾರ್ಯಾಚರಣೆ ನಡೆಸಲಿವೆ. ಹುಬ್ಬಳ್ಳಿ ಹಳೇ ಬಸ್ ನಿಲ್ದಾಣ ಮತ್ತು ಧಾರವಾಡ ಹೊಸ ಬಸ್ ನಿಲ್ದಾಣದಿಂದ ಖಾಸಗಿ ವಾಹನಗಳು ಓಡಾಡಲಿವೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಪ್ರಕಟಣೆಯಲ್ಲಿ ಹೇಳಿದ್ದಾರೆ.

    ಗದಗ ಜಿಲ್ಲೆಯಲ್ಲಿ ಇಂದು ಮಧ್ಯಾಹ್ನದಿಂದಲೇ ಕೆಲವು ರೂಟ್ ಬಸ್ ಸಂಚಾರ ಬಂದ್ ಆಗಿವೆ. ಬಸ್ ಬಂದ್ ನಿಂದ ನಗರದ ಪಂಡಿತ ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಡಿದರು. ನಂತರ ಸಾರಿಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಾಳೆ ಬಂದ್ ಅಂತ ಹೇಳಿ, ಈಗಲೇ ಬಸ್ ಇಲ್ಲಾಂದ್ರೆ ಹೇಗೆ ಆಂತ ಆಕ್ರೋಶ ವ್ಯಕ್ತಪಡಿಸಿದರು.

    ಜನರ ಒತ್ತಡಕ್ಕೆ ಮಣಿದು ಕೆಲ ಹಳೆ ಬಸ್ ಗಳನ್ನು ರಸ್ತೆಗಿಳಿಸಿದರು. ತಳ್ಳು ತಳ್ಳು ಐಸಾ… ಇನ್ನು ತಳ್ಳು ಐಸಾ ಅನ್ನುತ್ತಾ, ಸಾರಿಗೆ ಸಿಬ್ಬಂದಿ, ಸಾರ್ವಜನಿಕರು ಬಸ್ ತಳ್ಳಿ ಸ್ಟಾರ್ಟ್ ಮಾಡಿದರು. ಒಂದಡೆ ಬಸ್ ಗಾಗಿ ಕಾದುಕುಳಿತು ಸುಸ್ತಾದ್ರೆ, ಮತ್ತೊಂದಡೆ ಬಂದ ಬಸ್ ತಳ್ಳಿ ಸುಸ್ತಾಗಬೇಕಾಯಿತು. ಚಾಲಕ ನಿರ್ವಾಹಕರು ಸೆಕೆಂಡ್ ಸ್ವಿಫ್ಟ್ ಗೆ ಬಾರದಕ್ಕೆ ಮೊದಲು ಸ್ವಿಫ್ಟ್ ಬಂದಂತಹ ಸಿಬ್ಬಂದಿಯ ಕೈಗೆ ಇಂತಹ ಹಳೆ ಬಸ್ ಕೊಟ್ಟು ರಸ್ತೆಗಿಳಿಸಿದ್ದಾರೆ ಎಂದು ಸಾರ್ವಜನಿಕರು ಕಿಡಿಕಾರಿದರು.

  • ಏಪ್ರಿಲ್ 7ಕ್ಕೆ ಸಾರಿಗೆ ನೌಕರರ ಮುಷ್ಕರ – ರಾಜ್ಯಾದ್ಯಂತ ಬಸ್ ಬಂದ್

    ಏಪ್ರಿಲ್ 7ಕ್ಕೆ ಸಾರಿಗೆ ನೌಕರರ ಮುಷ್ಕರ – ರಾಜ್ಯಾದ್ಯಂತ ಬಸ್ ಬಂದ್

    ಬೆಂಗಳೂರು: ಆರನೇ ವೇತನ ಜಾರಿಗೆ ಆಗ್ರಹಿಸಿ ಏಪ್ರಿಲ್ ಏಳರಂದು ಸಾರಿಗೆ ಬಂದ್ ಗೆ ಕರೆ ಕೊಡಲಾಗಿದೆ. ಇಡೀ ರಾಜ್ಯಾದ್ಯಂತ ಬಸ್ ಗಳು ರಸ್ತೆಗಿಳಿಯಲ್ಲ ಎಂದು ಸಾರಿಗೆ ನೌಕರರು ಸರ್ಕಾರಕ್ಕೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಇತ್ತ ನೌಕರರಿಗೆ ಸೆಡ್ಡು ಹೊಡೆಯಲು ಸಚಿವರು ಖಾಸಗಿ ವಾಹನಗಳನ್ನು ಇಳಿಸುವ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

    ಏಪ್ರಿಲ್ 6 ರೊಳಗೆ 6 ನೇ ವೇತನ ಆಯೋಗ ಜಾರಿ ಆಗಬೇಕು ಇಲ್ಲದಿದ್ರೆ ಏಪ್ರಿಲ್ 7ರಂದು ಮುಷ್ಕರ ನಡೆಸುವುದಾಗಿ ಸರ್ಕಾರಕ್ಕೆ ಸಾರಿಗೆ ನೌಕರರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಇನ್ನೇನು ಪ್ರತಿಭಟನೆಗೆ ಒಂದು ದಿನವಷ್ಟೇ ಬಾಕಿ ಉಳಿದಿದ್ದು, ಈ ವಿಚಾರವಾಗಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮಹತ್ವದ ಸುದ್ದಿಗೋಷ್ಟಿ ನಡೆಸಿದರು. ವೇತನ ಹೆಚ್ಚಳ ಮಾಡಲು ನೀತಿ ಸಂಹಿತೆ ಅಡ್ಡಿಯಿದೆ. ನೀತಿ ಸಂಹಿತೆ ಮುಗಿದ ಬಳಿಕ ವೇತನ ಹೆಚ್ಚಳ ಮಾಡುವ ಖಾತ್ರಿ ಕೊಡುತ್ತೇವೆ. ಚುನಾವಣಾ ಆಯೋಗ ಅದಕ್ಕೂ ಮುನ್ನ ಅನುಮತಿ ನೀಡಿದರೆ ಚರ್ಚಿಸಿ ಘೋಷಣೆ ಮಾಡ್ತೇವೆ. ಖಾಸಗಿ ಬಸ್ ನವರಿಗೆ ಸ್ಪಂದಿಸುವಂತೆ ಆಹ್ವಾನ ಕೊಟ್ಟಿದ್ದೇವೆ. ಮಿನಿ ಬಸ್, ಟೆಂಪೋ ಟ್ರಾವೆಲರ್ ಗಳನ್ನೂ ಬಳಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

    ಬಂದ್ ಬಗ್ಗೆ ಮಾತನಾಡಿದದ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ನಾವು ಸರ್ಕಾರಕ್ಕೆ ಮೂರೂವರೆ ತಿಂಗಳು ಗಡುವು ಕೊಟ್ಟಿದ್ದೇವು. ಅಂದಿನಿಂದ ಇಲ್ಲಿಯವರೆಗೂ ಸರ್ಕಾರಕ್ಕೆ ಕಾಲಾವಕಾಶ ಇತ್ತು. ಈಗ ಸರ್ಕಾರ ನೀತಿ ಸಂಹಿತೆ ನೆಪ ಹೇಳುತ್ತಿದೆ. ನಾಡಿದ್ದು ಬಸ್ ಬಂದ್ ಇದ್ದೇ ಇರುತ್ತೆ. ಕೊರೊನಾ ನಿಯಮಗಳನ್ನು ಮೀರಲ್ಲ. ಅಸಹಕಾರ ಚಳುವಳಿಯಂತೆ ಬಸ್ ನಿಲ್ಲಿಸಿ ಪ್ರತಿಭಟನೆ ನಡೆಸುತ್ತೇವೆ. ಕೊರೊನಾ ಕಡಿಮೆ ಇರೋ ಕಡೆ ಮುಷ್ಕರ ನಡೆಸಿ ಉಪವಾಸ ಕೈಗೊಳ್ಳತ್ತೇವೆ ಎಂದು ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.

    ಸಾರಿಗೆ ನೌಕರರ ಮುಷ್ಕರಕ್ಕೆ ಸೆಡ್ಡು ಹೊಡೆಯುವ ಸಲುವಾಗಿ ಖಾಸಗಿ ವಾಹನಗಳನ್ನ ರಸ್ತೆಗಿಳಿಸಲು ಸರ್ಕಾರ ಸಜ್ಜಾಗಿದೆ. ಹೀಗಾಗಿ ಇಂದು ಟ್ಯಾಕ್ಸಿ, ಮಿನಿ ಕ್ಯಾಬ್ ಮತ್ತು ಬಸ್ ಮಾಲೀಕರೊಂದಿಗೆ ಸಾರಿಗೆ ಸಚಿವರು ಚರ್ಚಿಸಿ ಸಭೆ ನಡೆಸಿದ್ದಾರೆ. ಈ ಹಿಂದೆ ಖಾಸಗಿ ವಾಹನಗಳ ಮಾಲೀಕರು ಸರ್ಕಾರದ ಮುಂದೆ ಇಟ್ಟಿದ್ದ ಆರು ಬೇಡಿಕೆಗಳನ್ನ ಈಡೇರಿಸುವ ಜೊತಗೆ ಒಂದು ತಿಂಗಳ ಟ್ಯಾಕ್ಸ್ ರಿಲ್ಯಾಕ್ಸ್ಲೇಷನ್ ನೀಡುವುದಾಗಿ ಭರವಸೆ ನೀಡಿದ್ದು, ಖಾಸಗಿ ವಾಹನಗಳನ್ನ ರಸ್ತೆಗೆ ಇಳಿಸುವಂತೆ ತಿಳಿಸಲಾಗಿದೆ. ಇದಕ್ಕೆ ಖಾಸಗಿ ವಾಹನಗಳ ಮಾಲೀಕರು ಒಪ್ಪಿಕೊಂಡಿದ್ದು ಮುಷ್ಕರದ ದಿನ ವಾಹನಗಳನ್ನ ರಸ್ತೆಗೆ ಇಳಿಸುವುದಾಗಿ ತಿಳಿಸಿದ್ದಾರೆ.

  • ಯಾರು ಯಾರಿಗೆ ಬೆಂಬಲ ಕೊಡ್ತಾರೋ ನೋಡೋಣ: ಲಕ್ಷ್ಮಣ ಸವದಿ

    ಯಾರು ಯಾರಿಗೆ ಬೆಂಬಲ ಕೊಡ್ತಾರೋ ನೋಡೋಣ: ಲಕ್ಷ್ಮಣ ಸವದಿ

    ಬೆಂಗಳೂರು: ಯಾರು ಯಾರಿಗೆ ಬೆಂಬಲ ಕೊಡ್ತಾರೆ ನಾಳೆ ನೋಡೋಣ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

    ಸಿಎಂ ಜೊತೆಗಿನ ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಲಕ್ಷ್ಮಣ ಸವದಿ, ನಾಳೆ ನಮ್ಮ ಎಲ್ಲ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುತ್ತಾರೆ ಎಂಬ ವಿಶ್ವಾಸ ನಮಗಿದೆ. ಸಾರಿಗೆ ನೌಕರರು ನಾಳೆ ಕೆಲಸಕ್ಕೆ ಹಾಜರಾಗಬಹುದು. ಕೆಲಸಕ್ಕೆ ಹಾಜರಾಗುವ ಸಿಬ್ಬಂದಿಗೆ ಸೂಕ್ತ ರಕ್ಷಣೆ ನೀಡುತ್ತೇವೆ. ಯಾರಾದ್ರೂ ಅಡ್ಡಿ ಪಡಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ್ರತಿಭಟನಾ ನಿರತರಿಗೆ ಎಚ್ಚರಿಕೆ ನೀಡಿದರು.

    ಸಭೆಯಲ್ಲಿ ಚೆನ್ನಾಗಿ ಮಾತಾಡಿದರು. ಮಾಧ್ಯಮಗಳ ಮುಂದೆ ಸಕಾರಾತ್ಮಕ ಬೆಳವಣಿಗೆ ಅಂತ ಅವರೇ ಹೇಳಿದವರು ಅಲ್ಲಿ ತಮ್ಮ ಮಾತು ಬದಲಿಸಿದ್ದಾರೆ. ನಾಳೆ ಪ್ರಯಾಣಿಕರು ನಿಲ್ದಾಣಕ್ಕೆ ಬರಬಹುದು. ಯಾರಿಗೂ ತೊಂದರೆ ಆಗದಂತೆ ಸರ್ಕಾರ ನೋಡಿಕೊಳ್ಳುತ್ತದೆ. ಖಾಸಗಿ ವಾಹನಗಳ ಬೆಂಬಲ ನೀಡುವ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಾಳೆ ಯಾರು ಯಾರಿಗೆ ಬೆಂಬಲ ಕೊಡ್ತಾರೆ ನೋಡೋಣ. ಕೆಲವರ ಪ್ರತಿಷ್ಠೆಗಾಗಿ ಸಾರಿಗೆ ನೌಕರರು ಒಳಗಾಗೋದು ಬೇಡ ಎಂದು ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಆಕ್ರೋಶ ಹೊರ ಹಾಕಿದರು.

  • ಎಸ್ಮಾ ಜಾರಿ ಮಾಡುವ ಚಿಂತನೆ ಇದೆ: ಬಸವರಾಜ್ ಬೊಮ್ಮಾಯಿ

    ಎಸ್ಮಾ ಜಾರಿ ಮಾಡುವ ಚಿಂತನೆ ಇದೆ: ಬಸವರಾಜ್ ಬೊಮ್ಮಾಯಿ

    – ಮುಷ್ಕರ ಕೈ ಬಿಟ್ಟು ಕರ್ತವ್ಯಕ್ಕೆ ಹಾಜರಾಗಿ: ಸಿಎಂ ಕರೆ

    ಬೆಂಗಳೂರು: ಕರ್ನಾಟಕದಲ್ಲಿ ಈ ಹಿಂದೆಯೂ ಎಸ್ಮಾ ಕಾಯ್ದೆ ಜಾರಿಯಾಗಿತ್ತು. ಈಗಲೂ ಜಾರಿ ಮಾಡುವ ಚಿಂತನೆ ಇದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

    ಸಿಎಂ ಕರೆದ ತುರ್ತುಸಭೆಗೆ ಆಗಮಿಸಿದ್ದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಬಸವರಾಜ್ ಬೊಮ್ಮಾಯಿ, ಬೆಳಗ್ಗೆ 10 ಗಂಟೆಯಿಂದ ಮಾತುಕತೆ ನಡೆಸಲಾಗಿತ್ತು. ಎಲ್ಲರೂ ಸಂಧಾನದಲ್ಲಿ ಒಪ್ಪಿಗೆ ಕೊಟ್ಟು, ಮಾಧ್ಯಮಗಳ ಮುಂದೆ ಸಕಾರಾತ್ಮಕವಾಗಿದೆ ಅಂತ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದರು. ಅಲ್ಲಿ ಹೋಗಿ ಕೆಲವರ ಮಾತು ಕೇಳಿರುವ ಕೋಡಿಹಳ್ಳಿ ಚಂದ್ರಶೇಖರ್ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಕೋವಿಡ್-19 ಸಂದರ್ಭದಲ್ಲಿಯೂ ಸಾರಿಗೆ ನೌಕರರಿಗೆ ಸಂಬಳ ಕೊಟ್ಟಿದ್ದೇವೆ. ಕೋಡಿಹಳ್ಳಿ ಚಂದ್ರಶೇಖರ್ ಪ್ರತಿಷ್ಠೆಗೆ ಸಾರಿಗೆ ನಿಗಮ ಹಾಳಾಗುತ್ತದೆ. ಕೋಡಿಹಳ್ಳಿ ಚಂದ್ರಶೇಖರ್ ಇಲ್ಲೊಂದು, ಅಲ್ಲೊಂದು ಹೇಳೋದನ್ನ ಖಂಡಿಸುತ್ತೇನೆ ಎಂದು ಬಸವರಾಜ್ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.

    ಇತ್ತ ಸಿಎಂ ಬಿ.ಎಸ್.ಯಡಿಯೂರಪ್ಪ ಸಾರಿಗೆ ಸಿಬ್ಬಂದಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡಿಕೊಂಡಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ಜೊತೆಗೂಡಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ಅವರು ಅನಗತ್ಯವಾಗಿ ನೌಕರರ ದಾರಿತಪ್ಪಿಸುತ್ತಿರುವುದು ಸರಿಯಲ್ಲ. ಅವರ ದುರುದ್ದೇಶಪೂರಿತ ನಡೆ ಖಂಡನೀಯ. ಮುಷ್ಕರದಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ, ಸಾರಿಗೆ ಸಂಸ್ಥೆಗೆ ನಷ್ಟ ಹಾಗೂ ಸಾರಿಗೆ ಸಂಸ್ಥೆಯ ನೌಕರರಿಗೂ ತೊಂದರೆಯಾಗುತ್ತದೆ. ನೌಕರರು ಮುಷ್ಕರವನ್ನು ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕೆಂದು ಸಿಎಂ ಕರೆ ನೀಡಿದ್ದಾರೆ.

  • ಪ್ರಯಾಣಿಕರೇ ಎಚ್ಚರ, ಎಚ್ಚರ – ನಾಳೆ ರಸ್ತೆಗಿಳಿಯಲ್ಲ ಖಾಸಗಿ ಬಸ್

    ಪ್ರಯಾಣಿಕರೇ ಎಚ್ಚರ, ಎಚ್ಚರ – ನಾಳೆ ರಸ್ತೆಗಿಳಿಯಲ್ಲ ಖಾಸಗಿ ಬಸ್

    – ಸಾರಿಗೆ ನೌಕರರ ಪ್ರತಿಭಟನೆ ಮುಂದುವರಿಕೆ

    ಬೆಂಗಳೂರು: ಪ್ರಮುಖ ಬೇಡಿಕೆಯನ್ನ ಈಡೇರಿಲಸಲು ಸರ್ಕಾರ ಒಪ್ಪದ ಹಿನ್ನೆಲೆ ಸಾರಿಗೆ ನೌಕರರು ತಮ್ಮ ಮುಷ್ಕರವನ್ನ ಮುಂದುವರಿಸಿದ್ದಾರೆ. ಸಾರಿಗೆ ನೌಕರರ ಪ್ರತಿಭಟನೆಗೆ ಸಾಥ್ ಖಾಸಗಿ ಬಸ್ ಸಂಘ ಸಹ ಬೆಂಬಲ ನೀಡಿದೆ. ಖಾಸಗಿ ಬಸ್ ನಂಬಿ ನೀವು ಊರಿಗೆ ತೆರಳುತ್ತಿದ್ರೆ ನಿಮ್ಮ ಪ್ರಯಾಣ ಮುಂದೂಡುವುದು ಉತ್ತಮ.

    ಈ ವೇಳೆ ಮಾತನಾಡಿದ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್, ಒಳ್ಳೆಯ ನಾಯಕನ ನೇತೃತ್ವದಲ್ಲಿ ನಿಮ್ಮೆಲ್ಲರ ಪ್ರತಿಭಟನೆ ನಡೆಯುತ್ತಿದೆ. ಹೋರಾಟ ಅನ್ನೋದು ಯಾವುದೋ ಒಬ್ಬ ಬ್ರೋಕರ್ ಅಡಿಯಲ್ಲಿ ಅಗುವಂತದಲ್ಲ. ನಾಯಕನ ಹೋರಾಟದ ಮೇಲೆ ನಮ್ಮೆಲ್ಲರ ಪ್ರತಿಫಲ ಇರುತ್ತೆ ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕಿದೆ. ಆಡಳಿತದಲ್ಲಿರುವ ಸರ್ಕಾರದ ಪಕ್ಷದಲ್ಲಿಯೇ ನಾನಿದ್ದೇನೆ. ಅವರಿಗೆ ನಾನು ಮತ ಹಾಕಿದ್ದೇನೆ. ಸಾರಿಗೆ ಸಚಿವರು ನಮ್ಮ ಮನವಿಗಳಿಗೂ ಸ್ಪಂದಿಸಿಲ್ಲ. ಬಿಜೆಪಿ ಕಾರ್ಯಕರ್ತನಾಗಿ ಈ ಮಾತುಗಳನ್ನ ಹೇಳಲು ನನಗೆ ನೋವಾಗುತ್ತೆ ಎಂದರು.

    ಇದು ಸರ್ಕಾರ ಮತ್ತು ಬಿ.ಎಸ್.ಯಡಿಯೂರಪ್ಪ ಅವರ ವೈಫಲ್ಯ ಅಲ್ಲ. ಇದು ಸಾರಿಗೆ ಮಂತ್ರಿಗಳ ವೈಫಲ್ಯ, ಲಕ್ಷ್ಮಣ ಸವದಿ ತಮ್ಮ ಪ್ರತಿಷ್ಠೆಯನ್ನ ಬಿಟ್ಟು ಇಲ್ಲಿಗೆ ಬಂದು ಸಮಸ್ಯೆಗಳನ್ನ ಆಲಿಸಬೇಕು ಎಂದು ಆಗ್ರಹಿಸಿದರು. ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳಿಗೆ ಸಾರಿಗೆ ಸಚಿವರು ಹೊಣೆ. ಹಾಗಾಗಿ ನಾಳೆಯಿಂದ ನಿಮ್ಮ ಬೆಂಬಲಕ್ಕೆ ನಾವು ಕೈ ಜೊತೆ ಜೋಡಿಸುತ್ತೇವೆ ಎಂದು ಹೇಳಿದರು.

    ರಾಜ್ಯ ಸರ್ಕಾರ ಸಾರಿಗೆ ಇಲಾಖೆಯನ್ನ ಯಾಕೆ ಸೈಡ್ ನಲ್ಲಿ ಇಡುತ್ತಿದೆ ಅನ್ನೋದು ತಿಳಿಯುತ್ತಿಲ್ಲ. ಎಷ್ಟು ಜನ ಚಾಲಕರನ್ನ ಕೊರೋನಾ ಸಮಯದಲ್ಲಿ ಬೇರೆ ಬೇರೆ ರೀತಿಯಲ್ಲಿ ಬಳಸಿಕೊಂಡರು. ಅವರನ್ನ ಯಾಕೆ ಕೊರೊನಾ ವಾರಿಯರಸ್ ಅಂತಾ ಕರೆಯಲಿಲ್ಲ ಎಂದು ಖಾಸಗಿ ಟ್ಯಾಕ್ಸಿ ಮಾಲೀಕರ ಸಂಘದ ಅಧ್ಯಕ್ಷ ರಾಮಕೃಷ್ಣ ಹೊಳ್ಳ ಪ್ರಶ್ನಿಸಿದರು.

    ಸಾರಿಗೆ ಸಿಬ್ಬಂದಿಯನ್ನ ಸರ್ಕಾರಿ ನೌಕರರು ಎಂದು ಪರಿಗಣಿಸಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದ್ದರು. ಆದರೆ ಸರ್ಕಾರ ಈ ಬೇಡಿಕೆ ಪೂರ್ಣ ಮಾಡಲು ಸಾಧ್ಯವಿಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ. ಆದ್ದರಿಂದ ನಮ್ಮ ಬೇಡಿಕೆ ಈಡೇರುವರೆಗೂ ಮುಷ್ಕರ ಮುಂದುವರಿಯುತ್ತದೆ ಎಂದು ಸಾರಿಗೆ ನೌಕರರು ಹೇಳಿದ್ದಾರೆ. ಈ ಎಲ್ಲ ಅನಾನುಕೂಲಗಳಿಗೆ ಸಾರಿಗೆ ಸಚಿವರೇ ಕಾರಣ. ಸಚಿವರು ಇಲ್ಲಿಯೇ ಬಂದು ನಮ್ಮ ಸಮಸ್ಯೆ ಆಲಿಸಲಿ ಎಂದು ಪ್ರತಿಭಟನಾ ನಿರತರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸಾರಿಗೆ ನೌಕರರ ಸಂಧಾನ ವಿಫಲ – ಮುಷ್ಕರ ಮುಂದುವರಿಕೆ 

    ಇನ್ನು ಸಾರಿಗೆ ನೌಕರರಕ್ಕೆ ಹೋರಾಟಕ್ಕೆ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್, ಖಾಸಗಿ ಟ್ಯಾಕ್ಸಿ ಮಾಲೀಕರ ಸಂಘದ ಅಧ್ಯಕ್ಷ ರಾಮಕೃಷ್ಣ ಹೊಳ್ಳ, ಟ್ರಾವೆಲ್ ಅಸೋಸಿಯೇಷನ್ ಅಧ್ಯಕ್ಷ ರಾಧಕೃಷ್ಣ ಸಹ ಸಾಥ್ ನೀಡಿದ್ದಾರೆ. ಇನ್ನು ಕೊನೆಯದಾಗಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ನಾಳೆಯ ಎಲ್ಲರೂ ಪ್ರತಿಭಟನೆಗೆ ಬರಬಹುದು ಎಂದು ಕರೆ ಕೊಟ್ಟಿದ್ದಾರೆ. ಇದನ್ನೂ ಓದಿ: ಪ್ರಯಾಣಿಕರೇ ಗಮನಿಸಿ – ಸಾರಿಗೆ ಮುಷ್ಕರದಲ್ಲಿ ಹೈಡ್ರಾಮಾ, ರಸ್ತೆಗೆ ಇಳಿಯಲ್ಲ ಬಸ್ 

  • ಸಾರಿಗೆ ನೌಕರರ ಸಂಧಾನ ವಿಫಲ – ಮುಷ್ಕರ ಮುಂದುವರಿಕೆ

    ಸಾರಿಗೆ ನೌಕರರ ಸಂಧಾನ ವಿಫಲ – ಮುಷ್ಕರ ಮುಂದುವರಿಕೆ

    – ಮುಷ್ಕರ ಮುಂದುವರಿಯುತ್ತೆ ಅಂದ್ರು ಕೋಡಿಹಳ್ಳಿ ಚಂದ್ರಶೇಖರ್

    ಬೆಂಗಳೂರು: ಸರ್ಕಾರದ ಜೊತೆಗಿನ ಸಂಧಾನ ಯಶಸ್ವಿ ಆಯ್ತಾ ಅಥವಾ ವಿಫಲವಾಯ್ತಾ ಅನ್ನೋದರ ಬಗ್ಗೆ ಸಾರಿಗೆ ನೌಕರರಲ್ಲಿ ಗೊಂದಲ ಉಂಟಾಗಿದೆ. ಸಂಧಾನ ವಿಫಲವಾಗಿದ್ದು ಸಿಬ್ಬಂದಿ ವಾಹನಗಳನ್ನ ಹೊರಗೆ ತೆಗೆಯಬೇಡಿ ಎಂದು ಕೋಡಿಹಳ್ಳಿ ಚಂದ್ರಶೇಖರ್ ಘೋಷಣೆ ಮಾಡಿದ್ದಾರೆ.

    ಫ್ರೀಡಂಪಾರ್ಕ್ ನಲ್ಲಿ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ನೌಕರ ಸಂಘದ ಮುಖಂಡ, ನಾನು ಮಾಧ್ಯಮಗಳಲ್ಲಿ ಯಾವುದೇ ರೀತಿಯ ಹೇಳಿಕೆಯನ್ನ ನೀಡಿಲ್ಲ. ಸರ್ಕಾರ ನೀಡಿರುವ ಕೆಲ ಭರವಸೆಗಳ ಬಗ್ಗೆ ಮಾತ್ರ ಹೇಳಿದ್ದೇನೆ. ನಮ್ಮ ಪ್ರಮುಖ ಬೇಡಿಕೆಯನ್ನ ಈಡೇರಿಸಲು ಸರ್ಕಾರ ಒಪ್ಪಿಲ್ಲ. ಆದ್ರೆ ಸಚಿವರು ಸಂಧಾನ ಯಶಸ್ವಿ ಅಂತಾ ಹೇಳಿದ್ದರಿಂದ ಮಾಧ್ಯಮಗಳಲ್ಲಿ ವರದಿ ಬಿತ್ತರವಾಗುತ್ತಿದೆ. ಹಾಗಾಗಿ ಇಲ್ಲಿ ನಿಮ್ಮ ಮುಂದೆ ಸಂಧಾನ ವಿಫಲವಾಗಿದೆ ಎಂದು ಹೇಳುತ್ತಿದ್ದೇನೆ. ನಿಮ್ಮ ಸ್ನೇಹಿತರಿಗೆ ಬಸ್ ಗಳನ್ನ ಹತ್ತಬಾರದು ಎಂದು ಹೇಳಿ ಎಂದ್ರು.

    ಇನ್ನೂ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಯಾವುದೇ ಕಾರಣಕ್ಕೂ ಬಸ್ ಗಳನ್ನ ರಸ್ತೆಗಿಳಿಸಬೇಡಿ. ಸರ್ಕಾರದ ಜೊತೆಗಿನ ಮಾತುಕತೆ ಫಲಪ್ರದವಾಗಿಲ್ಲ. ಮುಷ್ಕರ ಮುಂದುವರಿಯಲಿದೆ ಎಂದು ಘೋಷಣೆ ಮಾಡಿದರು.

    ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂಬ ಬೇಡಿಕೆಯನ್ನು ಸರ್ಕಾರ ಒಪ್ಪಿಲ್ಲ. ಉಳಿದಂತೆ 8 ಬೇಡಿಕೆಯನ್ನು ಸರ್ಕಾರ ಈಡೇರಿಸುವ ಭರವಸೆಯನ್ನು ನೀಡಿದೆ. ಇದನ್ನೂ ಓದಿ: ಸರ್ಕಾರದ ಸಂಧಾನ ಯಶಸ್ವಿ – ಪ್ರತಿಭಟನೆ ಕೈ ಬಿಟ್ಟ ನೌಕರರು 

    ಈಡೇರಿಕೆಯಾದ ಬೇಡಿಕೆಗಳು
    1. ನಿಗಮದ ನೌಕರರಿಗೆ ಆರೋಗ್ಯ ಸಂಜೀವಿನಿ ವಿಮಾ ಯೋಜನೆ ಅಳವಡಿಸಲು ತೀರ್ಮಾನ.
    2. ಕೋವಿಡ್-19 ಸೋಂಕಿನಿಂದ ಮೃತ ಸಿಬ್ಬಂದಿಯ ಕುಟುಂಬಕ್ಕೆ 30 ಲಕ್ಷ ರೂಪಾಯಿ ಪರಿಹಾರ.
    3. ಅಂತರ್ ನಿಗಮ ವರ್ಗಾವಣೆ ಕುರಿತು ಸೂಕ್ತ ನೀತಿ ರಚಿಸಲು ತೀರ್ಮಾನ.
    4. ನೌಕರರ ತರಬೇತಿ ಅವಧಿ 2 ರಿಂದ ಒಂದು ವರ್ಷಕ್ಕೆ ಇಳಿಕೆ.
    5. ನಿಗಮದಲ್ಲಿ ಹೆಚ್.ಆರ್.ಎಂ.ಎಸ್. (ಮಾನವ ಸಂಪನ್ಮೂಲ) ವ್ಯವಸ್ಥೆ ಜಾರಿ.
    6. ಸಿಬ್ಬಂದಿಯ ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಭತ್ಯೆ ನೀಡಲು ನಿರ್ಧಾರ.
    7. ಘಟಕದ ವ್ಯಾಪ್ತಿಯಲ್ಲಿ ನೌಕರರಿಗೆ ಕಿರುಕುಳ ತಪ್ಪಿಸಲು ಸೂಕ್ತ ಆಡಳಿತ ವ್ಯವಸ್ಥೆ.
    8. ವೇತನ ಪರಿಷ್ಕರಣೆ, ಆರನೇ ವೇತನ ಆಯೋಗದ ಜಾರಿ ನಡೆಸುವ ಸಂಬಂಧ ಆರ್ಥಿಕ ಇಲಾಖೆ ಜೊತೆ ಚರ್ಚೆ ನಡೆಸಿ ತೀರ್ಮಾನ

  • ಉಡುಪಿಯಲ್ಲಿ ಇಲ್ಲ ಬಂದ್ ಬಿಸಿ – ಎರಡನೇ ದಿನವೂ ಓಡಾಡ್ತಿದೆ ಸರ್ಕಾರಿ ಬಸ್

    ಉಡುಪಿಯಲ್ಲಿ ಇಲ್ಲ ಬಂದ್ ಬಿಸಿ – ಎರಡನೇ ದಿನವೂ ಓಡಾಡ್ತಿದೆ ಸರ್ಕಾರಿ ಬಸ್

    ಉಡುಪಿ: ರಾಜ್ಯಾದ್ಯಂತ ಕೆಎಸ್‍ಆರ್‍ಟಿಸಿ ನೌಕರರ ಪ್ರತಿಭಟನೆ 2ನೇ ದಿನಕ್ಕೆ ಕಾಲಿಟ್ಟಿದೆ. ಉಡುಪಿ ಜಿಲ್ಲೆಯಲ್ಲಿ ಬಂದ್‍ಗೆ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ. ಸರ್ಕಾರಿ ಬಸ್ಸುಗಳು ರಸ್ತೆಗೆ ಇಳಿದು ಓಡಾಟ ನಡೆಸಿವೆ.

    ರಾಜ್ಯಾದ್ಯಂತ ಸರ್ಕಾರಿ ಬಸ್ ಬಂದ್ ಆದ್ರೂ ಉಡುಪಿ ಜಿಲ್ಲೆಗೆ ಬಂದ್ ಬಿಸಿ ಅಷ್ಟಾಗಿ ತಟ್ಟಿಲ್ಲ. ಸರ್ಕಾರಿ ಚಾಲಕರು ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಡಿಪೋದಿಂದ ಬಸ್ಸುಗಳು ಬರುತ್ತಿದ್ದು, ಹೊರಜಿಲ್ಲೆ, ಪಕ್ಕದ ಜಿಲ್ಲೆ ಮತ್ತು ಜಿಲ್ಲೆಯ ಎಲ್ಲಾ ತಾಲೂಕಿಗೆ ಬಸ್ ಓಡಾಡುತ್ತಿದೆ. ನಿನ್ನೆ ಕೂಡಾ ಬಸ್ ಓಡಾಟ ನಡೆಸಿದ್ದು, ಎರಡೂ ದಿನ ನೌಕರರು ಬಂದ್ ಮಾಡಿಲ್ಲ, ಪ್ರತಿಭಟನೆ ನಡೆಸಿಲ್ಲ.

    ರಾಜಧಾನಿ ಬೆಂಗಳೂರು, ಹೊರ ಜಿಲ್ಲೆಯಿಂದ ಬರೋ ಬಸ್ಸುಗಳು ಇವತ್ತು ಜಿಲ್ಲೆಗೆ ಬಂದಿಲ್ಲ. ಜಿಲ್ಲೆಯಲ್ಲಿ ಪ್ರತಿದಿನ 300 ಬಸ್ಸುಗಳು ಓಡಾಟ ನಡೆಸುತ್ತ್ತಿವೆ. ಇಂದು 10 ಗಂಟೆಯ ನಂತ್ರ ಉತ್ತರ ಕರ್ನಾಟಕದ ಕಡೆ ಸಂಚರಿಸುವ ಬಸ್ ಸಂಚಾರ ಸ್ಥಗಿತಗೊಂಡಿದೆ. ಸದ್ಯ ಸರಿ ಸುಮಾರು 30 ರಿಂದ 40 ಬಸ್ಸುಗಳು ಜಿಲ್ಲೆಯಲ್ಲಿ ಹಾಗೂ ಪಕ್ಕದ ಜಿಲ್ಲೆಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗೆ ಓಡಾಡುತ್ತಿವೆ.

    ಉಡುಪಿ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣದ ಸಿಬ್ಬಂದಿ ರಾಮು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿಯಿಂದ ಬಸ್ಸುಗಳು ಇವತ್ತು ಉಡುಪಿಗೆ ಬಂದಿಲ್ಲ. ಉಡುಪಿಯಿಂದ ಹೋಗುವ ಮೈಸೂರು ಬೆಂಗಳೂರು ಬಸ್ಸು ಹೋಗಿದೆ. ಧರ್ಮಸ್ಥಳ, ಸುಬ್ರಹ್ಮಣ್ಯ, ಕಾರ್ಕಳ, ಪೆರ್ಡೂರು, ಕುಂದಾಪುರಕ್ಕೆ ಬಸ್ಸುಗಳು ಓಡಾಡುತ್ತವೆ. ಡಿಪೋದಿಂದ ಬಸ್ ನಿಲ್ದಾಣಕ್ಕೆ ಬಸ್ ಬಂದಿರುವ ಕಾರಣ, ಎಲ್ಲಾ ಬಸ್ಸುಗಳು ಓಡಾಡುತ್ತವೆ ಎಂದರು.

    ಉಡುಪಿ ನಗರದ ಒಳಗೆ ಮತ್ತು ಹೊರಗೆ ಓಡಾಡುವ ನರ್ಮ್ ಬಸ್ಸುಗಳು ಕೂಡ ಇದೆ. ಹೊರ ಜಿಲ್ಲೆಗಳಿಂದ ಯಾವುದೇ ಬಸ್ಸುಗಳು ಜಿಲ್ಲೆಗೆ ಪ್ರವೇಶ ಮಾಡುತ್ತಿಲ್ಲ. ಜೊತೆಗೆ ಪ್ರತಿಭಟನೆ ಕಾವು ಹೆಚ್ಚು ಇರುವ ಜಿಲ್ಲೆಗೆ ಬಸ್ ಸಂಚಾರ ಸ್ಥಗಿತ ಗೊಂಡಿದೆ. ಉಡುಪಿಯಲ್ಲಿ ಖಾಸಗಿ ಬಸ್‍ಗಳೇ ಹೆಚ್ಚಾಗಿರುವ ಕಾರಣ, ನಿತ್ಯ ಉದ್ಯೋಗಕ್ಕೆ ತೆರಳುವ ಪ್ರಯಾಣಿಕರು ಖಾಸಗಿ ಬಸ್ಸನ್ನು ನೆಚ್ಚಿಕೊಂಡಿದ್ದಾರೆ.

    ಸದ್ಯ ಜಿಲ್ಲೆಯ ಜನ ಪರದಾಡುವ ಸ್ಥಿತಿ ಎದುರಾಗಿಲ್ಲ. ಆದ್ರೆ ದೂರದ ಜಿಲ್ಲೆಗಳಿಗೆ ಹೋಗಬೇಕಿದ್ದ ಪ್ರಯಾಣಿಕರು ಪರದಾಡುವ ಸ್ಥಿತಿ ಎದುರಾಗಿದೆ. ಕರಾವಳಿ ಜಿಲ್ಲೆಯಲ್ಲಿ ಖಾಸಗಿ ಬಸ್‍ಗಳೇ ಪಾರಮ್ಯ ಮೆರೆದಿರುವಾಗ ಸರ್ಕಾರಿ ಬಸ್ಸುಗಳು ಬಂದ್ ಆದ್ರೂ ಜನರ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇಲ್ಲ.