Tag: ಬಸ್ ದುರಂತ

  • ಕನಗನಮರಡಿ ಬಸ್ ದುರಂತ ನೆನೆದು ಬಿಕ್ಕಿಬಿಕ್ಕಿ ಅತ್ತ ಬದುಕಿ ಬಂದ ಬಾಲಕ

    ಕನಗನಮರಡಿ ಬಸ್ ದುರಂತ ನೆನೆದು ಬಿಕ್ಕಿಬಿಕ್ಕಿ ಅತ್ತ ಬದುಕಿ ಬಂದ ಬಾಲಕ

    ಮಂಡ್ಯ: ಕಳೆದ ವರ್ಷ ಮಂಡ್ಯ ಜಿಲ್ಲೆಯ ಕನಗನಮರಡಿಯಲ್ಲಿ ನಡೆದ ಬಸ್ ದುರಂತ ಇನ್ನೂ ಕೂಡ ಮಾಸಿಲ್ಲ. 30 ಜನರನ್ನು ಆಹುತಿ ಪಡೆದ ಈ ಬಸ್ ದುರಂತದ ಬಗ್ಗೆ ಕೇಳಿದರೆ ಸಾಕು ದುರಂತದಲ್ಲಿ ಬದುಕಿ ಬಂದ ಬಾಲಕ ರೋಹಿತ್ ಬಿಕ್ಕಿಬಿಕ್ಕಿ ಅಳುತ್ತಾನೆ.

    2018 ನವಂಬರ್ 24ರಂದು ನಡೆದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಬಳಿ ಮಧ್ಯಾಹ್ನದ ವೇಳೆ ಬಸ್‍ ಕಾಲುವೆಗೆ ಉರುಳಿದ ಪರಿಣಾಮ 30 ಮಂದಿ ದಾರುಣವಾಗಿ ಸಾವನ್ನಪ್ಪಿದ್ದರು. ಈ ಪೈಕಿ ಬಸ್‍ನಲ್ಲಿದ್ದ ರೋಹಿತ್ ಮಾತ್ರ ಬದುಕಿ ಬಂದಿದ್ದನು. ಈ ದುರಂತದಲ್ಲಿ ಹಲವು ಪೋಷಕರು ತಮ್ಮ ಮಕ್ಕಳನ್ನು ಕಳೆದುಕೊಂಡಿದ್ರೆ, ಇನ್ನೂ ಹಲವು ಮಕ್ಕಳು ತಮ್ಮ ತಂದೆ-ತಾಯಿಗಳನ್ನು ಕಳೆದುಕೊಂಡಿದ್ದರು. ಮತ್ತು ಕೆಲವರು ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡು ಇಂದಿಗೂ ಸಹ ಕಣ್ಣೀರು ಹಾಕುತ್ತಿದ್ದಾರೆ. ಇದನ್ನೂ ಓದಿ: ಮಂಡ್ಯ ಬಸ್ ದುರಂತ ಪ್ರಕರಣ ಹೇಳುತ್ತಿದೆ ಮನಕಲಕುವ ಕಥೆ!

    ಆ ಬಸ್ ದುರಂತದಲ್ಲಿ ಬದುಕಿ ಬಂದಿರುವ ಬಾಲಕ ರೋಹಿತ್‍ನಲ್ಲಿ ಮಾತ್ರ ಆ ದುರಂತದ ಕಪ್ಪು ಛಾಯೆ ಇಂದಿಗೂ ಕೂಡ ಅಳಿದಿಲ್ಲ. ಬಸ್ ಎಂದರೆ ಸಾಕು ರೋಹಿತ್ ಬಿಕ್ಕಿಬಿಕ್ಕಿ ಅಳುವುದಕ್ಕೆ ಶುರು ಮಾಡುತ್ತಿದ್ದಾನೆ. ಯಾಕಪ್ಪಾ ಏನಾಯಿತು ಎಂದು ಕೇಳಿದ್ರೂ ಏನು ಹೇಳದೇ ಸುಮ್ಮನೆ ಕಣ್ಣೀರು ಹಾಕುತ್ತಾನೆ. ರೋಹಿತ್‍ನ ಕಣ್ಣೆದುರೇ ತನ್ನ ಸ್ನೇಹಿತರು ತನ್ನೂರಿನ ಜನರು ಹಾಗೂ ನೆಂಟರುಗಳು ಜಲ ಸಮಾಧಿಯಾಗಿದ್ದರು. ಇದನ್ನು ಕಣ್ಣಾರೆ ಕಂಡಿರುವ ರೋಹಿತ್, ಇಂದಿಗೂ ಸಹ ಅದ್ಯಾವುದನ್ನೂ ಮರೆತಿಲ್ಲ. ಘಟನೆ ನಡೆದು ಒಂದು ವರ್ಷ ಕಳೆದರು ಸಹ ಆತ ಬಸ್ ಮತ್ತು ನೀರಿನ ಹೆಸರು ಹೇಳಿದ್ರೆ, ಒಂದು ಅಕ್ಷರವನ್ನು ಮಾತಾಡಾದೇ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಾನೆ. ಇದನ್ನೂ ಓದಿ: ಮಂಡ್ಯ ಬಸ್ ದುರಂತ- ಇಬ್ಬರು ಹೆಣ್ಣುಮಕ್ಕಳ ಸಮಾಧಿ ಬಳಿ ಹೋಗಿ ತಂದೆ ಕಣ್ಣೀರು

    ರೋಹಿತ್ ತನ್ನ ಕಣ್ಣೆದುರು ನಡೆದ ಘಟನೆಯನ್ನು ನೋಡಿ ಹೀಗೆ ಕಣ್ಣೀರು ಹಾಕುತ್ತಿದ್ರೆ, ಇನ್ನೊಂದೆಡೆ ತಮ್ಮವರನ್ನು ಕಳೆದುಕೊಂಡವರು ಕೂಡ ಅದೇ ನೆನಪಿನಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ಕನಗನಮರಡಿ ಗ್ರಾಮದ ಪಕ್ಕದಲ್ಲಿರುವ ವದೆಸಮುದ್ರ ಗ್ರಾಮದವರೇ ಅತೀ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಈ ಗ್ರಾಮದಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಕೆಲವರು ಮಕ್ಕಳನ್ನು ಕಳೆದುಕೊಂಡಿದ್ರೆ, ಇನ್ನೂ ಕೆಲವರು ತಂದೆ-ತಾಯಿ ಹಾಗೂ ಕುಟಂಬಸ್ಥರನ್ನು ಕಳೆದುಕೊಂಡಿದ್ದಾರೆ. ಬದುಕಿ ಬಂದಿರುವ ರೋಹಿತ್ ಕೂಡ ಇದೇ ಗ್ರಾಮದ ಬಾಲಕ. ಸರ್ಕಾರ ಆ ವೇಳೆ ಪರಿಹಾರವನ್ನು ಸಹ ಆಯಾ ಕುಟಂಬಗಳಿಗೆ ನೀಡಿದೆ. ಇಲ್ಲಿನ ಜನರು ಸರ್ಕಾರ ನಮಗೆ ಆ ವೇಳೆ ಎಲ್ಲಾ ರೀತಿಯಲ್ಲೂ ಸ್ಪಂದನೆಯನ್ನು ನೀಡಿತು. ಆದರೆ ಏನೇ ನೀಡಿದ್ರು ನಮ್ಮವರು ಈಗ ನಮಗೆ ಮರಳಿ ಬರುವುದಿಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ.

  • ಮಂಡ್ಯ ಬಸ್ ದುರಂತದ ಪರಿಹಾರಕ್ಕೆ ಪತ್ರ ಬರೆದಿದ್ದು ನಾನು- ಶಿವರಾಮೇಗೌಡ

    ಮಂಡ್ಯ ಬಸ್ ದುರಂತದ ಪರಿಹಾರಕ್ಕೆ ಪತ್ರ ಬರೆದಿದ್ದು ನಾನು- ಶಿವರಾಮೇಗೌಡ

    ಮಂಡ್ಯ: ಜಿಲ್ಲೆಯಲ್ಲಿ ನಡೆದಿದ್ದ ಬಸ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದಿಂದ ಪರಿಹಾರ ಹಣ ತಂದ ಕ್ರೆಡಿಟ್ ಪಡೆಯುವ ಕುರಿತು ಸಂಸದೆ ಸುಮಲತಾ ಹಾಗೂ ಜೆಡಿಎಸ್ ಕಾರ್ಯಕರ್ತರ ಫೈಟ್ ಮಧ್ಯೆ ಇದೀಗ ಮಾಜಿ ಸಂಸದ ಶಿವರಾಮೇಗೌಡ ಎಂಟ್ರಿ ಕೊಟ್ಟಿದ್ದಾರೆ.

    ಸುಮಲತಾ ಬೆಂಬಲಿಗರು ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವಿನ ವಾಕ್ಸಮರ ಮಧ್ಯೆ ಶಿವರಾಮೇಗೌಡ ಅವರ ಟ್ವೀಟ್ ಅಚ್ಚರಿ ಮೂಡಿಸಿದೆ. ‘ಕೇಂದ್ರಕ್ಕೆ ಪರಿಹಾರ ಹಣಕ್ಕಾಗಿ ಒತ್ತಾಯಿಸಿದ್ದು ನಾನು’ ಎಂದು ಮಾಜಿ ಸಂಸದರು ಟ್ವೀಟ್ ಮಾಡಿದ್ದಾರೆ. ಪರಿಹಾರ ಕೋರಿ ಕೇಂದ್ರಕ್ಕೆ ಪತ್ರ ಬರೆದವನು ನಾನು, ಹಣ ಬಂದಿದ್ದು ಎರಡು ತಿಂಗಳ ಹಿಂದೆ ಎಂದು ಶಿವರಾಮೇಗೌಡ ತಿಳಿಸಿದ್ದಾರೆ. ಇದನ್ನೂ ಓದಿ: ಮಂಡ್ಯ ಬಸ್ ದುರಂತ ಕೇಂದ್ರ ಸರ್ಕಾರದಿಂದ ನೆರವು- ನನಗೆ ಕ್ರೆಡಿಟ್ ಬೇಡ ಎಂದ ಸುಮಲತಾ

    ಮಂಡ್ಯದ ಕನಗನಮರಡಿ ಗ್ರಾಮದಲ್ಲಿ ನವೆಂಬರ್ 24ರಂದು ಭೀಕರ ಬಸ್ ದುರಂತ ಸಂಭವಿಸಿತ್ತು. ಘಟನೆಯಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದರು. ಈ ವೇಳೆ ರಾಜ್ಯ ಸರ್ಕಾರ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ನೀಡಿತ್ತು. ಇದೀಗ ಕೇಂದ್ರ ಸರ್ಕಾರವೂ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ನೀಡಿದೆ.

    ಕೇಂದ್ರದ ಪರಿಹಾರ ಹಣದ ವಿಚಾರವಾಗಿ ವಾದ ವಿವಾದಗಳು ಆರಂಭವಾಗಿದ್ದು, ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಪ್ರಧಾನಿ ಮೋದಿ ಬಳಿ ಮಾತನಾಡಿ ಪರಿಹಾರ ಹಣ ಬಿಡುಗಡೆ ಮಾಡಿಸಿದ್ದಾರೆ ಎಂದು ಸುಮಲತಾ ಬೆಂಬಲಿಗರು ಹೇಳುತ್ತಿದ್ದಾರೆ. ಕೇಂದ್ರದಿಂದ ಪರಿಹಾರ ಹಣ ತಂದಿದ್ದು ಮುಖ್ಯಮಂತ್ರಿ ಹಾಗೂ ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ಎಂದು ಜೆಡಿಎಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಳ್ಳುತ್ತಿದ್ದಾರೆ.

    ಈ ಮಧ್ಯೆ ಇದೀಗ ಶಿವರಾಮೇಗೌಡ ಎಂಟ್ರಿ ಕೊಟ್ಟಿದ್ದು, ಕೇಂದ್ರಕ್ಕೆ ಪತ್ರ ಬರೆದು ಹೆಚ್ಚಿನ ಪರಿಹಾರಕ್ಕೆ ಆಗ್ರಹಿಸಿದ್ದು ನಾನು ಎಂದು ಮಾಜಿ ಸಂಸದ ಶಿವರಾಮೇಗೌಡ ಟ್ವೀಟ್ ಮಾಡಿದ್ದಾರೆ

    https://www.youtube.com/watch?v=XpZzL4RaCWk

  • ಮಂಡ್ಯ ಬಸ್ ದುರಂತ ಕೇಂದ್ರ ಸರ್ಕಾರದಿಂದ ನೆರವು- ನನಗೆ ಕ್ರೆಡಿಟ್ ಬೇಡ ಎಂದ ಸುಮಲತಾ

    ಮಂಡ್ಯ ಬಸ್ ದುರಂತ ಕೇಂದ್ರ ಸರ್ಕಾರದಿಂದ ನೆರವು- ನನಗೆ ಕ್ರೆಡಿಟ್ ಬೇಡ ಎಂದ ಸುಮಲತಾ

    ಮಂಡ್ಯ: 2018 ನವೆಂಬರ್ 24ರಂದು ಜಿಲ್ಲೆಯ ಪಾಂಡವಪುರದ ಕನಗನಮರಡಿ ಎಂಬ ಗ್ರಾಮದಲ್ಲಿ ಸಂಭವಿಸಿದ ಬಸ್ ದುರಂತದಲ್ಲಿ 30 ಜನರು ಸಾವನ್ನಪಿದ್ದರು. ಈ ಘಟನೆಯಲ್ಲಿ ಮೃತಪಟ್ಟ ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ ತಲಾ 2 ಲಕ್ಷ ರೂ. ಹಣ ಬಂದಿದೆ. ಆದರೆ ಈ ವಿಚಾರ ಈಗ ರಾಜಕೀಯ ತಿರುವು ಪಡೆದು ಚರ್ಚೆಗೆ ಕಾರಣವಾಗಿದೆ. ಇದೀಗ ಎಲ್ಲ ಗೊಂದಲಗಳಿಗೆ ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟನೆ ನೀಡಿದ್ದಾರೆ.

    https://www.facebook.com/permalink.php?story_fbid=2502437746650334&id=100006523990844

    ಮಂಡ್ಯದಲ್ಲಿ ಈ ಹಣ ಕೇಂದ್ರ ಸರ್ಕಾರದಿಂದ ಬರಲು ನೂತನ ಸಂಸದೆ ಸುಮಲತಾ ಕಾರಣ ಎಂದು ಸುಮಲತಾ ಬೆಂಬಲಿಗರು ಮತ್ತು ಈ ನೆರವು ಬರಲು ಕಾರಣ ರಾಜ್ಯ ಸರ್ಕಾರದ ಸಿಎಂ ಕಾರಣ ಎಂದು ಜೆಡಿಎಸ್ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ವಾಗ್ವಾದ ಮಾಡುತ್ತಿದ್ದಾರೆ. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಸುಮಲತಾ ಅವರು ನನಗೆ ಆ ಕ್ರೆಡಿಟ್ ಬೇಡ ಎಂದು ಹೇಳಿದ್ದಾರೆ.

    ಇಂದು ಜಿಲ್ಲೆಯ ಮಾಚಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ದುರಂತದ ಸಂಗತಿ. ಆ ಕುಟುಂಬಗಳಿಗೆ ಅನುದಾನ ತಲುಪಿರೋದು ಮುಖ್ಯ. ಯಾರು ಕೊಟ್ಟಿದ್ದಾರೆ, ಕೊಡಿಸಿದ್ದಾರೆ ಅನ್ನೋದು ಮುಖ್ಯವಲ್ಲ. ನಾನು ಕೊಟ್ಟಿದ್ದೀನಿ, ನೀವು ಕೊಟ್ಟಿಲ್ಲ ಅನ್ನೋದು ತುಂಬಾ ತಪ್ಪಾಗುತ್ತೆ. ಆ ರೀತಿ ತಪ್ಪು ಯಾರೂ ಮಾಡಬಾರದು ನಾನಂತೂ ಆ ತಪ್ಪು ಮಾಡೋದಿಲ್ಲ ಎಂದು ಹೇಳಿದ್ದಾರೆ.

    ಬಸ್ ದುರಂತವನ್ನು ಪ್ರಚಾರಕ್ಕೆ ಬಳಸೋದು ನನಗಿಷ್ಟ ಇಲ್ಲ. ಹಿಂದೆಯಿಂದಲೂ ನಾನು ಸಾಕಷ್ಟು ಬಾರಿ ಹೇಳಿದ್ದೀನಿ ಸಾಧನೆಗಳು ನಮ್ಮ ಬಗ್ಗೆ ಮಾತಾಡಬೇಕು. ನಾವು ನಮ್ಮ ಸಾಧನೆಗಳ ಬಗ್ಗೆ ಮಾತಾಡಬಾರದು. ಯಾರೇ ಮಾಡಿರಲಿ ಅದನ್ನು ಹೇಳಿಕೊಳ್ಳಬಾರದು. ಈ ವಿಚಾರದಲ್ಲಿ ಯಾರು ಬೇಕಾದರೂ ಕ್ರೆಡಿಟ್ ತೆಗೆದುಕೊಳ್ಳಲಿ ನನಗೆ ಆ ಬಗ್ಗೆ ಬೇಜಾರ್ ಏನೂ ಇಲ್ಲ. ನನ್ನ ಕೆಲಸ ಈಗಷ್ಟೇ ಆರಂಭವಾಗಿದೆ. ಅದನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗುವ ನಂಬಿಕೆ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಇದೇ ವೇಳೆ ಸಂಸತ್ ಅಧಿವೇಶನದ ಬಳಿಕ ಕ್ಷೇತ್ರ ಪ್ರವಾಸ ಮಾಡುತ್ತೇನೆ. ಬಜೆಟ್‍ನಲ್ಲಿ ಸಾಕಷ್ಟು ನಿರೀಕ್ಷೆ ಇದೆ, ಸಾಕಷ್ಟು ಕೊಡುಗೆ ನೀಡೋ ವಿಶ್ವಾಸ ಇದೆ. ಸಂಬಂಧಪಟ್ಟ ಸಚಿವರ ಜೊತೆ ಚರ್ಚೆ ಮಾಡುತ್ತೇನೆ. ಮಂಡ್ಯದ ಸಮಸ್ಯೆ ಬಗೆಹರಿಸಲು ಮತ್ತು ಮಂಡ್ಯ ರೈತರ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡುತ್ತೇನೆ. ಮಂಡ್ಯದ ಶುಗರ್ ಸಕ್ಕರೆ ಕಾರ್ಖಾನೆ ಖಾಸಗೀಕರಣ ರೈತರಿಗೆ ಒಳ್ಳೆಯದಾಗುವಂತ ನಿರ್ಧಾರ ತೆಗೆದುಕೊಂಡರೆ ಸಹಕಾರ ನೀಡುತ್ತೇನೆ. ಇದರ ಬಗ್ಗೆ ತಜ್ಞರ ಜೊತೆ ಚರ್ಚೆ ಮಾಡಿ ಮಾಹಿತಿ ಪಡೆದು ಯಾವುದು ಸೂಕ್ತ ಅನ್ನೋದನ್ನು ನಂತರ ತೀರ್ಮಾನ ಮಾಡಿ ಮಾತನಾಡುತ್ತೇನೆ ಎಂದು ಹೇಳಿದರು.

    https://www.youtube.com/watch?v=XpZzL4RaCWk

    ಲೋಕಸಭಾ ಚುನಾವಣೆ ಬಳಿಕ ರಾಜ್ಯ ಸರ್ಕಾರದಿಂದ ಮಂಡ್ಯ ನಿರ್ಲಕ್ಷ್ಯ ವಿಚಾರದ ಬಗ್ಗೆ ಕೇಳಿದಾಗ, ಈ ವಿಚಾರದ ಬಗ್ಗೆ ಅವರನ್ನೇ ಕೇಳಬೇಕು. ಈಗಷ್ಟೇ ಚುನಾವಣೆ ಮುಗಿದಿದೆ. ಆ ವೇಳೆ ಸಾಕಷ್ಟು ಭರವಸೆ ಕೂಡ ಕೊಟ್ಟಿದ್ದರು. ಎಲ್ಲಾ ಭರವಸೆ ಈಡೇರಿಸೋ ವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ಏನ್ ಮಾಡುತ್ತಾರೆ ಅನ್ನೋದನ್ನು ಕಾದು ನೋಡೋಣ ಎಂದರು. ಮಣಿಗೆರೆಯಲ್ಲಿ ಮೂವರ ದುರ್ಮರಣ ಪ್ರಕರಣದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ. ಯಾರಿಂದ ಪರಿಹಾರ ಕೊಡಿಸಬೇಕೋ ಅವರಿಂದ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

  • ಕನಗನಮರಡಿ ಬಸ್ ದುರಂತ ಬೆನ್ನಲ್ಲೇ ಮಂಡ್ಯದಲ್ಲಿ ಮತ್ತೊಂದು ದುರಂತ

    ಕನಗನಮರಡಿ ಬಸ್ ದುರಂತ ಬೆನ್ನಲ್ಲೇ ಮಂಡ್ಯದಲ್ಲಿ ಮತ್ತೊಂದು ದುರಂತ

    – ಪಶ್ಚಿಮ ಬಂಗಾಳದ ಪ್ರವಾಸಿಗರ ಬಸ್ ಪಲ್ಟಿ
    – 40 ಜನರಿಗೆ ಗಾಯ, ಐವರ ಸ್ಥಿತಿ ಗಂಭೀರ

    ಮಂಡ್ಯ: ಕನಗನಮರಡಿ ಬಸ್ ದುರಂತ ಸಂಭವಿಸಿ ನಾಲ್ಕು ತಿಂಗಳು ಕೂಡ ಆಗಿಲ್ಲ. ಮತ್ತೊಂದು ಬಸ್ ಅವಘಡವು ಜಿಲ್ಲೆಯಲ್ಲಿ ಸಂಭವಿಸಿದೆ.

    ಮದ್ದೂರು ಹೊರವಲಯದ ಐಶ್ವರ್ಯ ಶಾಲೆ ಬಳಿಯ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಪಶ್ಚಿಮ ಬಂಗಾಳದ ಪ್ರವಾಸಿಗರ ಬಸ್ ಅವಡಘಕ್ಕೆ ತುತ್ತಾಗಿದ್ದು, ಅದರಲ್ಲಿದ್ದ ಸುಮಾರು 40 ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಐವರ ಸ್ಥಿತಿ ಗಂಭೀರವಾಗಿದ್ದು, ಎಲ್ಲರನ್ನೂ ಸಮೀಪದ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಶ್ಚಿಮ ಬಂಗಾಳದ ಪ್ರವಾಸಿಗರ ಬಸ್ ಹೊರಟಿತ್ತು. ಮದ್ದೂರು ಪಟ್ಟಣದ ಹೊರವಲಯದಲ್ಲಿ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಬಸ್ಸು ರಸ್ತೆ ಬಿಟ್ಟು ಕೆಳಗೆ ಇಳಿದಿದೆ. ಪರಿಣಾಮ ಪಲ್ಟಿ ಹೊಡೆದಿದ್ದು, ಅದರಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದಾರೆ.

    ಬಸ್ಸು ಬಿದ್ದಿದ್ದನ್ನು ನೋಡಿದ ಸ್ಥಳೀಯರು ಪ್ರಯಾಣಿಕರನ್ನು ರಕ್ಷಿಸಿ, 108ಗೆ ಕರೆ ಮಾಡಿ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ. ಘಟನೆಯಿಂದಾಗಿ ಕೆಲ ಹೊತ್ತು ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪ್ರಯಾಣಿಕರ ರಕ್ಷಣಾ ಕಾರ್ಯಕ್ಕೆ ಮುಂದಾದರು. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಡ್ಯ ಬಸ್ ದುರಂತದ ನಾಲೆಗೆ ತಡೆಗೋಡೆ ನಿರ್ಮಾಣ- ಶಾಂತಿ ಹೋಮ ನಡೆಸಲು ಗ್ರಾಮಸ್ಥರ ನಿರ್ಧಾರ

    ಮಂಡ್ಯ ಬಸ್ ದುರಂತದ ನಾಲೆಗೆ ತಡೆಗೋಡೆ ನಿರ್ಮಾಣ- ಶಾಂತಿ ಹೋಮ ನಡೆಸಲು ಗ್ರಾಮಸ್ಥರ ನಿರ್ಧಾರ

    ಮಂಡ್ಯ: 30 ಜನರನ್ನು ಬಲಿ ಪಡೆದ ಕನಗನಮರಡಿ ಬಸ್ ದುರಂತದ ನಂತರ ಎಚ್ಚೆತ್ತುಕೊಂಡ ಸರ್ಕಾರ ನಾಲೆಗೆ ತಡೆಗೋಡೆಯನ್ನು ನಿರ್ಮಿಸಿದೆ. ಹಾಗೆಯೆ ಗ್ರಾಮಸ್ಥರು ಸ್ಥಳದಲ್ಲಿ ಶಾಂತಿ ಹೋಮ ನಡೆಸಲು ಮುಂದಾಗಿದ್ದಾರೆ.

    ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿ ನಾಲೆಯ ಎಡಭಾಗದಲ್ಲಿ ರಸ್ತೆಗೆ ಹೊಂದಿಕೊಂಡಂತೆ ಸರ್ಕಾರ ತಡೆಗೋಡೆ ನಿರ್ಮಾಣ ಮಾಡಿದೆ. ಅಷ್ಟೆ ಅಲ್ಲದೆ ದುರಂತದಿಂದ ಎಚ್ಚೆತ್ತುಕೊಂಡ ಸರ್ಕಾರ ಅಪಘಾತ ನಡೆದ ಮಾರನೇ ದಿನದಿಂದಲೇ ಈ ಭಾಗದಲ್ಲಿ ಸರ್ಕಾರಿ ಬಸ್ ಸಂಚಾರ ಆರಂಭಿಸಿದೆ. ಸದ್ಯ ಗ್ರಾಮದ ಮಾರ್ಗವಾಗಿ ದಿನಕ್ಕೆ ನಾಲ್ಕು ಬಾರಿ ಸರ್ಕಾರಿ ಬಸ್ ಸಂಚಾರ ನಡೆಸುತ್ತಿದೆ.

    ಈ ನಡುವೆ ಗ್ರಾಮಸ್ಥರಲ್ಲಿ ಇನ್ನೂ ದುರಂತದ ಭಯದ ಛಾಯೆ ಹಾಗೆ ಉಳಿದಿದೆ. ಆದರಿಂದ ಇದೇ ತಿಂಗಳ 21ಕ್ಕೆ ದುರಂತ ನಡೆದ ನಾಲೆಯ ಬಳಿ ಶಾಂತಿ ಹೋಮ ನಡೆಸಲು ಕನಗನಮರಡಿ ಗ್ರಾಮಸ್ಥರು ನಿರ್ಧರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಸ್ಸಿನ ಆಯಸ್ಸು ಮುಗಿದಿದ್ದರೂ 3 ವರ್ಷ ಚಾಲನೆ ಮಾಡಿದ್ದು ಹೇಗೆ: ಮಂಗ್ಳೂರು ಮಾಲೀಕ

    ಬಸ್ಸಿನ ಆಯಸ್ಸು ಮುಗಿದಿದ್ದರೂ 3 ವರ್ಷ ಚಾಲನೆ ಮಾಡಿದ್ದು ಹೇಗೆ: ಮಂಗ್ಳೂರು ಮಾಲೀಕ

    ಮಂಗಳೂರು: ಬಸ್ಸು ಆಯಸ್ಸು ಮುಗಿದಿದ್ದರೂ 3 ವರ್ಷ ಚಾಲನೆ ಮಾಡಿದ್ದು ಹೇಗೆ ಎನ್ನುವುದೇ ನನಗೆ ಅನುಮಾನ ಉಂಟಾಗಿದೆ ಎಂದು ಬಸ್ಸಿನ ಮೂಲ ಮಾಲೀಕರಾಗಿದ್ದ ರಾಘವ ಕರ್ಕೇರ ಹೇಳಿದ್ದಾರೆ.

    ಮಂಡ್ಯದ ಕನಗನಮರಡಿ ಬಸ್ ದುರಂತಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ನಾನು ಆ ಬಸ್ ಖರೀದಿ ಮಾಡುವ ವೇಳೆಗೆ ಆದರ ಆಯಸ್ಸು 11 ವರ್ಷ ಆಗಿತ್ತು. ಬಳಿಕ ನನಗೆ ಇಲ್ಲಿ 1 ವರ್ಷ ಮಾತ್ರ ಓಡಿಸಲು ಅವಕಾಶವಿತ್ತು. ಆದ್ದರಿಂದ ನಾನು ಬಸ್ ಖರೀದಿ ಮಾಡಿ ಉತ್ತಮವಾಗಿ ನಿರ್ವಹಣೆ ಮಾಡಿದ್ದೆ. ಬಸ್ ಸ್ಥಿತಿ ಉತ್ತಮವಾಗಿದ್ದ ಕಾರಣ ಮೂರು ವರ್ಷಕ್ಕೆ ರಿನೀವಲ್ ಆಗಿತ್ತು. 12 ವರ್ಷ ಬಸ್ಸಿನ ಆಯಸ್ಸು ಇದ್ದರೂ ಚೆನ್ನಾಗಿ ನಿರ್ವಹಣೆ ಮಾಡಿದ್ದರೆ 15 ವರ್ಷ ಇಲ್ಲಿ ಓಡಿಸಬಹುದು ಎಂದು ತಿಳಿಸಿದರು.

    ಬಸ್ಸಿನ ಆಯಸ್ಸು 15 ವರ್ಷಕ್ಕೆ 4 ತಿಂಗಳು ಬಾಕಿ ಇರುವ ವೇಳೆ ನಾನು ಮಾರಾಟ ಮಾಡಿದೆ. ಆಗ ಅವರಿಗೆ ಒಂದು ಅವಧಿಗೆ ಚಾಲನೆ ಮಾಡಲು ಅವಕಾಶವಿತ್ತು. ಈಗ ಬಸ್ ಹೆಚ್ಚುವರಿಯಾಗಿ 3 ವರ್ಷ ಓಡಿಸಿದ್ದಾರೆ. ಇದಕ್ಕೆ ಹೇಗೆ ಅನುಮತಿ ಸಿಕ್ಕಿದೆ ಎನ್ನುವುದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.

    ನಾನು ಬಸ್ ಕಡಿಮೆ ಅವಧಿಗೆ ಚಾಲನೆ ಮಾಡುವ ಉದ್ದೇಶದಿಂದ ಖರೀದಿ ಮಾಡಿದ್ದೆ. ಕಡಿಮೆ ಕಲೆಕ್ಷನ್ ಆಗುತ್ತಿದ್ದ ಕಾರಣ ಈ ರೂಟ್ ನಲ್ಲಿ ಹೊಸ ಬಸ್ ಓಡಿಸಲು ಸಾಧ್ಯವಿರಲಿಲ್ಲ. ಆದ್ದರಿಂದ ಉತ್ತಮ ಸ್ಥಿತಿಯಲ್ಲೇ ಇಟ್ಟು ಮಾರಾಟ ಮಾಡಿದ್ದೇನೆ. ಅವರಿಗೆ ಹೆಚ್ಚುವರಿ ಅನುಮತಿ ಹೇಗೆ ಲಭಿಸಿದೆ ಎನ್ನುವುದು ತಿಳಿದುಕೊಳ್ಳಬೇಕಿದೆ. ಅಲ್ಲದೇ ಯಾವುದೇ ಅಪಘಾತವಾದ ಬಳಿಕ ತನ್ನ ಜೀವ ಕೊಟ್ಟು ಪ್ರಯಾಣಿಕರ ಜೀವ ಉಳಿಸುವುದು ಚಾಲಕನ ಕರ್ತವ್ಯ. ಆದರೆ ಈ ಘಟನೆಯಲ್ಲಿ ಚಾಲಕ ಸ್ಥಳದಿಂದ ಪರಾರಿಯಾಗಿರುವುದು ಬೇಸರ ತಂದಿದೆ ಎಂದು ತಿಳಿಸಿದರು.  ಇದನ್ನು ಓದಿ: 30ಕ್ಕೂ ಹೆಚ್ಚು ಜನರ ಬಲಿ ತೆಗೆದುಕೊಂಡ ಮಂಡ್ಯ ದುರಂತಕ್ಕೆ ಕಾರಣ ಸಿಕ್ತು!

    ಇತಿಹಾಸ ಕೆದಕಿದಾಗ ಮತ್ತಷ್ಟು ಮಾಹಿತಿ ಸಿಕ್ಕಿದ್ದು ಇದೂವರೆಗೆ 9 ಮಂದಿ ಈ ಬಸ್ಸಿನ ಮಾಲೀಕರಾಗಿದ್ದಾರೆ. 2001ರ ಜೂ.1ಕ್ಕೆ ಆರ್ ಟಿಓ ಕಚೇರಿಯಲ್ಲಿ ನೋಂದಣಿ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಬಸ್ಸಿನ ಗರಿಷ್ಟ ಆಯಸ್ಸು 15 ವರ್ಷವಾಗಿದ್ದು, ನಂತರ ಈ ಬಸ್ಸನ್ನು ಓಡಿಸುವಂತಿಲ್ಲ ಎನ್ನುವ ನಿರ್ಧಾರವನ್ನು ಮಂಗಳೂರು ಸಾರಿಗೆ ಪ್ರಾಧಿಕಾರ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮಂಡ್ಯ ದುರಂತ: ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ – ಸಿಎಂ ಎಚ್‍ಡಿಕೆ ಭೇಟಿ

    ಮಂಡ್ಯ ದುರಂತ: ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ – ಸಿಎಂ ಎಚ್‍ಡಿಕೆ ಭೇಟಿ

    ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕು ಕನಗನಮರಡಿ ಬಸ್ ದುರಂತದಲ್ಲಿ ಸಾವನ್ನಪ್ಪಿದವರಿಗೆ ರಾಜ್ಯ ಸರ್ಕಾರ ತಲಾ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಣೆ ಮಾಡಿದೆ.

    ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಘಟನೆ ಬಗ್ಗೆ ಮಾಹಿತಿ ಪಡೆದು ಇಂದಿನ ಅವರ ಎಲ್ಲಾ ಕಾರ್ಯಕ್ರಮಗಳನ್ನ ರದ್ದುಗೊಳಿಸಿ ಬಸ್ ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

    ಸ್ಥಳಕ್ಕೆ ಭೇಟಿ ನೀಡಿದ ಸಿಎಂ ಕುಮಾರಸ್ವಾಮಿ ಅವರು ಮೃತ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಸ್ಥಳಕ್ಕೆ ಆಗಮಿಸಿ ಮೃತ ದೇಹಗಳನ್ನು ನೋಡುತ್ತಿದ್ದಂತೆ ಸಿಎಂ ಕಣ್ಣೀರು ಹಾಕಿದ್ದು, ನಿಮ್ಮೊಂದಿಗೆ ನಾನಿದ್ದೇನೆ, ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬೇಡಿ ಎಂದು ಗ್ರಾಮಸ್ಥರಿಗೆ ಧೈರ್ಯ ತುಂಬಿದರು.

    ಘಟನೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ, ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವರು ನಾಯಕರು ಸಂತಾಪ ಸೂಚಿಸಿದ್ದಾರೆ. ದುರಂತ ನಡೆದ ಸ್ಥಳದಲ್ಲಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಶಾಸಕ ರವೀಂದ್ರ ಶ್ರೀಕಂಠಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟಸ್ವಾಮಿ ಸೇರಿದಂತೆ ಹಲವು ನಾಯಕರು ಆಗಮಿಸಿ ನೊಂದ ಕುಟುಂಬಗಳಿಗೆ ಸಾಂತ್ವನ ಹೇಳುವ ಕಾರ್ಯ ಮಾಡಿದರು. ಅಲ್ಲದೇ ಮೃತ ದೇಹಗಳನ್ನ ಗುರುತಿಸುವ ಕಾರ್ಯ ಸೇರಿದಂತೆ, ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸುವ ಬಗ್ಗೆ ಕ್ರಮಕೈಗೊಳ್ಳಲು ಸೂಚನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv