Tag: ಬಸ್ಸುಗಳು

  • ವಲಸೆ ಕಾರ್ಮಿಕರ ಸ್ಥಳಾಂತರ – ಮುಂದುವರಿದ ‘ಕೈ-ಕಮಲ’ ತಿಕ್ಕಾಟ

    ವಲಸೆ ಕಾರ್ಮಿಕರ ಸ್ಥಳಾಂತರ – ಮುಂದುವರಿದ ‘ಕೈ-ಕಮಲ’ ತಿಕ್ಕಾಟ

    – ಸಾವಿರ ಬಸ್ಸುಗಳಿಗೆ ಅವಕಾಶ ನೀಡದ ಯುಪಿ ಸರ್ಕಾರ
    – ಕಾಂಗ್ರೆಸ್‍ನಿಂದ 4 ಕೋಟಿ 80 ಲಕ್ಷ ಖರ್ಚು

    ನವದೆಹಲಿ: ವಲಸೆ ಕಾರ್ಮಿಕರ ಸ್ಥಳಾಂತರ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ರಾಜಕೀಯ ತಿಕ್ಕಾಟ ಮುಂದುವರಿದಿದೆ. ವಲಸೆ ಕಾರ್ಮಿಕರ ಕರೆತರಲು ಕಾಂಗ್ರೆಸ್ ನಿಯೋಜಿಸಿರುವ 1,000 ಬಸ್ಸುಗಳಿಗೆ ಉತ್ತರ ಪ್ರದೇಶ ಸರ್ಕಾರ ಪರವಾನಿಗೆ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.

    ಗಡಿ ಭಾಗದಲ್ಲಿ ಬಸ್ಸುಗಳ ಸಂಚಾರಕ್ಕೆ ಅವಕಾಶ ನೀಡುವಂತೆ ಮಂಗಳವಾರ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಈ ಮನವಿಗೆ ಯುಪಿ ಸರ್ಕಾರ ಕೂಡಾ ಒಪ್ಪಿಗೆ ಸೂಚಿಸಿತ್ತು, ಆದರೆ ಇಂದು ಗಡಿ ಭಾಗದಲ್ಲಿ ಮಾತ್ರ ಉತ್ತರಪ್ರದೇಶ ಪೋಲಿಸರು ಬಸ್ಸುಗಳಿಗೆ ದಾಖಲೆಗಳಿಲ್ಲದ ಕಾರಣ ಗಡಿ ಪ್ರವೇಶಕ್ಕೆ ಅವಕಾಶ ನೀಡಿಲ್ಲ.

    ಬಸ್ಸುಗಳಿಗೆ ಅನುಮತಿ ನೀಡಿ ಎಂದು ಗಡಿಭಾಗದಲ್ಲಿ ಯುಪಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಅವರನ್ನು ಎಳೆದೊಯ್ದು ಘಟನೆಯೂ ನಡೆಯಿತು. ಈ ಬಗ್ಗೆಯೂ ಪ್ರಿಯಾಂಕಾ ಗಾಂಧಿಯ ಕಾರ್ಯದರ್ಶಿ ಸಂದೀಪ್ ಸಿಂಗ್ ಖಂಡಿಸಿದ್ದಾರೆ. ಪೊಲೀಸರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಟೀಕಿಸಿದ್ದಾರೆ.

    ಉತ್ತರಪ್ರದೇಶ ಸರ್ಕಾರದ ಧೋರಣೆಗೆ ಎಐಸಿಸಿ ಕಾರ್ಯದರ್ಶಿ ರೋಹಿತ್ ಚೌದ್ರಿ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರತಿದಿನ ಬಸ್‍ವೊಂದಕ್ಕೆ 16 ಸಾವಿರ ಬಾಡಿಗೆ ನೀಡಲಾಗುತ್ತಿದೆ. ಗಡಿ ದಾಟಲಾಗದೇ 1,000 ಬಸ್ಸುಗಳು ನಿಂತಲ್ಲೇ ನಿಂತಿದ್ದು, ಕಾಂಗ್ರೆಸ್ ಈವರೆಗೂ 4 ಕೋಟಿ 80 ಲಕ್ಷ ಹಣ ಖರ್ಚು ಮಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ

    ಕಾಂಗ್ರೆಸ್ ಜನರಿಗೆ ಆಹಾರ ಮತ್ತು ಬಸ್ಸುಗಳ ವ್ಯವಸ್ಥೆ ಮಾಡುತ್ತಿದೆ. ಇದನ್ನು ಎಲ್ಲಾ ಸರ್ಕಾರಗಳು ಸ್ವಾಗತಿಸಬೇಕು ಮತ್ತು ಗಡಿಯಲ್ಲಿ ಅನುಮತಿಸಬೇಕು, ಅದನ್ನು ಬಿಟ್ಟು ನಾಯಕರನ್ನು ಬಂಧಿಸುವ ಕೀಳು ಮಟ್ಟದ ರಾಜಕೀಯ ಮಾಡಬಾರದು ಎಂದು ರಾಜಸ್ಥಾನ ಡಿಸಿಎಂ ಸಚಿನ್ ಪೈಲಟ್ ಯುಪಿ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ.

  • ಜಿಲ್ಲೆಗಳ ಬೇಡಿಕೆಗೆ ತಕ್ಕಂತೆ ಬಸ್‍ಗಳ ಸಂಚಾರ: KSRTC ಎಂಡಿ

    ಜಿಲ್ಲೆಗಳ ಬೇಡಿಕೆಗೆ ತಕ್ಕಂತೆ ಬಸ್‍ಗಳ ಸಂಚಾರ: KSRTC ಎಂಡಿ

    ಬೆಂಗಳೂರು: ಯಾವ್ಯಾವ ಜಿಲ್ಲೆಗಳಿಗೆ ಬೇಡಿಕೆ ಇದೆಯೋ ಬೇಡಿಕೆಗೆ ತಕ್ಕಂತೆ ಬಸ್‍ಗಳ ಸಂಚಾರ ಮಾಡುತ್ತೇವೆ ಎಂದು ಕೆ.ಎಸ್.ಆರ್.ಟಿ.ಸಿ ಎಂಡಿ ಶಿವಯೋಗಿ ಕಳಸದ್ ಅವರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ

    ಇಂದು ಸಭೆ ನಡೆಸಿ ನಾಲ್ಕನೇ ಹಂತದ ಲಾಕ್‍ಡೌನ್ ಮಾರ್ಗಸೂಚಿಯನ್ನು ಇಂದು ಮಧ್ಯಾಹ್ನ ಮಾಡಿದ ಬಿಎಸ್ ಯಡಿಯೂರಪ್ಪನವರು, ಕೆ.ಎಸ್.ಆರ್.ಟಿ.ಸಿ, ಬಿಎಂಟಿಸಿ, ಖಾಸಗಿ ಬಸ್‍ಗಳು, ಆಟೋ ಮತ್ತು ಟ್ಯಾಕ್ಸಿಗಳು ಓಡಾಡಲು ಅನುಮತಿ ನೀಡಿದ್ದಾರೆ. ಈ ವೇಳೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದ್ದಾರೆ.

    ಈಗ ಬಸ್ ಸಂಚಾರ ಮಾಡುವ ವಿಚಾರದ ಬಗ್ಗೆ ಮಾತನಾಡಿರುವ ಅವರು, ಯಾವ್ಯಾವ ಜಿಲ್ಲೆಗಳಿಗೆ ಬೇಡಿಕೆ ಇದೆಯೋ ಬೇಡಿಕೆಗೆ ತಕ್ಕಂತೆ ಬಸ್ ಗಳ ಬಸ್‍ಗಳನ್ನು ಬಿಡುತ್ತೇವೆ. ಆದರೆ ಡಿಮ್ಯಾಂಡ್ ಎಷ್ಟಿದೆ ಎಂದು ಗೊತ್ತಾಗುತ್ತಿಲ್ಲ. ಹೀಗಾಗಿ ಮೊದಲ ವಾರ ಪ್ರಾಥಮಿಕ ಹಂತದಲ್ಲಿ ಶೇ.20 ರಿಂದ 30 ರಷ್ಟು ಬಸ್ ಗಳು ಮಾತ್ರ ಕಾರ್ಯಚರಣೆ ಇಳಿಯುತ್ತವೆ. ಎರಡನೇ ವಾರದಲ್ಲಿ ಬಹುತೇಕ ಹೆಚ್ಚಿನ ಬಸ್‍ಗಳ ಬಿಡುತ್ತೇವೆ. ಈ ವೇಳೆ 30 ಸೀಟ್ ಗಳಿಗೆ ಮಾತ್ರ ಪ್ರಯಾಣಿಕರಿಗೆ ಅವಕಾಶ ಎಂದು ತಿಳಿಸಿದ್ದಾರೆ.

    ಬೆಂಗಳೂರಿನಿಂದ ಬೆಳಗಾವಿ ಬೀದರ್ ಗೆ ಹೋಗೋರಿಗೆ ಬೆಳಗ್ಗೆ 8 ಗಂಟೆಗೆ ವ್ಯವಸ್ಥೆ ಮಾಡಲಾಗಿದ್ದರೆ,  ಆ ಕಡೆಯಿಂದ ಬೆಂಗಳೂರಿಗೆ ಬರುವರಿರಿಗೆ ಬೆಳಿಗ್ಗೆ ಏಳುಗಂಟೆಗೆ ಬಸ್ ವ್ಯವಸ್ಥೆ ಮಾಡಲು ಸಾರಿಗೆ ಇಲಾಖೆ ಸಿದ್ಧತೆ ಮಾಡಿದೆ.

  • ಚತುಷ್ಪತ ರಸ್ತೆ ಕಾಮಗಾರಿ ಮುಗಿಯುವ ಮುಂಚೆಯೇ ಟೋಲ್ ಶುಲ್ಕ – ಸ್ಥಳೀಯರಿಗೆ ವಿನಾಯ್ತಿ ನೀಡುವಂತೆ ಆಗ್ರಹ

    ಚತುಷ್ಪತ ರಸ್ತೆ ಕಾಮಗಾರಿ ಮುಗಿಯುವ ಮುಂಚೆಯೇ ಟೋಲ್ ಶುಲ್ಕ – ಸ್ಥಳೀಯರಿಗೆ ವಿನಾಯ್ತಿ ನೀಡುವಂತೆ ಆಗ್ರಹ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಐ.ಆರ್.ಬಿ ಕಂಪನಿ ಚತುಷ್ಪತ ರಸ್ತೆ ಕಾಮಗಾರಿ ಅಪೂರ್ಣ ವಾಗಿರುವಾಗಲೇ ಟೋಲ್ ನಿರ್ಮಾಣ ಮಾಡಿ ಸ್ಥಳೀಯರಿಗೆ ಶುಲ್ಕ ವಸೂಲಿ ಮಾಡುತ್ತಿರುವುದಕ್ಕೆ ಕಾರವಾರದ ಮಾಜಿ ಶಾಸಕ ಸತೀಶ್ ಸೈಲ್ ಅಕ್ಷೇಪ ವ್ಯಕ್ತಪಡಿಸಿದ್ದಾರೆ.

    ಇಂದು ಕಾರವಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಅವರು ನಿನ್ನೆದಿನ ಐ.ಆರ್.ಬಿ ಕಂಪನಿ ಅಧಿಕಾರಿಗಳೊಂದಿಗೆ ಮೀಟಿಂಗ್ ಮಾಡಿದ್ದೇನೆ. ಸ್ಥಳೀಯರಿಗೆ ಶುಲ್ಕ ವಸೂಲಿ ಮಾಡುತ್ತಿರುವುದು ತಪ್ಪು, ಮಾಜಾಳಿಯಿಂದ ಅಂಕೋಲದ ವರೆಗೆ ಶೇಕಡ 50 ರಷ್ಟು ಕಾಮಗಾರಿ ಪೂರ್ಣವಾಗಿಲ್ಲ ಆದರೂ ಅಂಕೋಲದ ಬೇಲಿಕೇರಿ ಬಳಿ ಶುಲ್ಕ ವಸೂಲಿ ಮಾಡುತಿದ್ದಾರೆ, ಅರಗ, ಅಮದಳ್ಳಿ, ಚಂಡಯಾ, ಹಟ್ಟಿಕೇರಿ ಬಿಡ್ಜ್ ಗಳು, ರಸ್ತೆಗಳೇ ಆಗಿಲ್ಲ. ಹೀಗಿರುವಾಗ ಹೇಗೆ ಶುಲ್ಕ ವಸೂಲಿ ಮಾಡುತ್ತಾರೆ ಎಂದು ಪ್ರಶ್ನಿಸಿದರು.

    ಕರಾವಳಿ ಭಾಗದಲ್ಲಿನ ಸ್ಥಳೀಯ ವಾಹನಗಳಿಗೆ ವಿನಾಯ್ತಿ ನೀಡಲೇ ಬೇಕು ಈ ಹಿಂದೆ ಮಾಜಾಳಿ ನಂತರ ಗೋವಾ ಗಡಿಯಲ್ಲಿ ಗೋವಾ ಸರ್ಕಾರದ ಟೋಲ್ ಗೆ ಕಾರವಾರದ ಸ್ಥಳೀಯ ವಾಹನಗಳಿಗೆ ವಿನಾಯ್ತಿ ನೀಡಬೇಕೆಂದು ಗೋವಾದ ಅಂದಿನ ಮುಖ್ಯಮಂತ್ರಿ ಪಾಲೇಕರ್ ರವರಿಗೆ ನಾನು ಶಾಸಕನಾಗಿದ್ದಾಗ ವಿನಾಯ್ತಿ ನೀಡಬೇಕೆಂದು ಕೇಳಿದ್ದೆ ಆಗ ಕಾರವಾರದ ವಾಹನಗಳಿಗೆ ವಿನಾಯ್ತಿ ನೀಡಿದ್ದರು. ಆದರೇ ನಮ್ಮಲ್ಲಿ ಸ್ಥಳೀಯ ವಾಹನಗಳಿಗೆ ವಿನಾಯ್ತಿ ನೀಡಿಲ್ಲ, ಕೇಳಿದರೆ ವೈಟ್ ಬೋರ್ಡ ಗೆ ಮಾತ್ರ ನೀಡುತ್ತೇವೆ ಎಂದು ಕಂಪನಿಯವರು ಹೇಳುತ್ತಾರೆ. ಇದು ತಪ್ಪು ಎಲ್ಲಾ ವಾಹನಗಳಿಗೆ ವಿನಾಯ್ತಿ ನೀಡಬೇಕು, ಕಾಮಗಾರಿ ಪೂರ್ಣವಾಗದೇ ಶುಲ್ಕ ವಸೂಲಿ ಮಾಡುತಿದ್ದಾರೆ. ನಾನು ಮಾಜಾಳಿಯಿಂದ ಅಂಕೋಲದ ವರೆಗೆ ರಸ್ತೆ ಸರ್ವೆ ಮಾಡಿಸಿ ಐ.ಆರ್.ಬಿ ಕಂಪನಿ ವಿರುದ್ಧ ಕೋರ್ಟ ನಲ್ಲಿ ದಾವೆ ಹೂಡುತ್ತೇನೆ. ಹತ್ತು ದಿನ ಸಮಯ ಕೇಳಿದ್ದಾರೆ ತೆಗೆದುಕೊಳ್ಳಲಿ ಆದರೇ ಸ್ಥಳೀಯ ವಾಹನಗಳಿಗೆ ಶುಲ್ಕ ವಿನಾಯ್ತಿ ನೀಡಲೇ ಬೇಕು ಎಂದರು.

    ಸರ್ಕಾರಿ ಬಸ್ಸುಗಳ ಮೇಲೆ ಟೋಲ್ ಶುಲ್ಕ:
    ಕಾರವಾರದಿಂದ ಅಂಕೋಲಕ್ಕೆ ಹೋಗುವ ಸ್ಥಳೀಯ ಸರ್ಕಾರಿ ಬಸ್ ಗಳಿಗೆ ಟೋಲ್ ಶುಲ್ಕದಿಂದಾಗಿ ಪ್ರಯಾಣಿಕರ ಮೇಲೆ ಹೆಚ್ಚಿನ ದರ ವಿಧಿಸಲಾಗುತ್ತಿದೆ. ಮೂರು ಕಡೆ ಟೋಲ್‍ಗಳಿದ್ದು, ಕೆಎಸ್‌ಆರ್‌ಟಿಸಿಯ ಬಸ್ಸಿಗೆ ಕ್ರಮವಾಗಿ 9 ರೂ., ಸ್ಲೀಪರ್ ಗೆ 13 ರೂ., ರಾಜಹಂಸಕ್ಕೆ 10 ರೂ. ಏರಿಸಲಾಗಿದೆ. ಆದರೆ ಲೋಕಲ್ ಬಸ್ಸಿಗೆ ವಿನಾಯ್ತಿ ನೀಡಬೇಕು ಇದರಿಂದ ಸ್ಥಳೀಯ ಪ್ರಯಾಣಿಕರಿಗೆ ಹೊರೆ ತಪ್ಪುತ್ತದೆ. ಪ್ರತಿ ಟ್ರಿಪ್‍ಗೆ ಟೋಲ್ ಶುಲ್ಕ ತೆಗೆದುಕೊಳ್ಳುವುದನ್ನು ಬಿಡಬೇಕು. 24 ಘಂಟೆಗೆ ತೆಗೆದುಕೊಳ್ಳಬೇಕು. ಐ.ಆರ್.ಬಿ ಕಂಪನಿ ರಸ್ತೆಯಲ್ಲಿ ದರೋಡೆಗೆ ಮಾಡುತಿದ್ದಾರೆ. ಇದು ಸರಿಯಲ್ಲ ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಸತೀಶ್ ಸೈಲ್ ಹೇಳಿದರು.

    ಅಪಘಾತ ತಪ್ಪಿಸಲು ಬೀದಿ ದೀಪ ಅಳವಡಿಸಿ:
    ಮಾಜಾಳಿಯಿಂದ ಅಂಕೋಲ ಭಾಗದಲ್ಲಿ ಅಲ್ಲಲ್ಲಿ ಬೀದಿ ದೀಪವನ್ನು ರಸ್ತೆಯಲ್ಲಿ ಅಳವಡಿಸಲಾಗಿದೆ. ಆದರೆ ಎಲ್ಲಿ ಅವಷ್ಯಕತೆ ಇದೆಯೋ ಅಲ್ಲಿ ಅಳವಡಿಸಿಲ್ಲ. ರಸ್ತೆ ತಿರುವು, ಗ್ರಾಮಗಳು ಇರುವ ಪ್ರದೇಶಕ್ಕೆ ಕಡ್ಡಾಯವಾಗಿ ಬೀದಿ ದೀಪಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಿದರು. ಇತ್ತ ರಸ್ತೆಯನ್ನು ಸಹ ಸಮರ್ಪಕವಾಗಿ ಮಾಡದೇ ಅಪಘಾತವಾಗಿ ಜನರು ಸಾಯುವಂತಾಗಿದೆ ಎಂದು ಐ.ಆರ್.ಬಿ ಕಂಪನಿ ವಿರುದ್ಧ ಸತೀಶ್ ಸೈಲ್ ಆಕ್ರೋಶ ವ್ಯಕ್ತಪಡಿಸಿದರು.

  • ನಷ್ಟದ ಸುಳಿಗೆ ಸಿಲುಕಿ ಬೀಗ ಹಾಕುವ ಹಂತ ತಲುಪಿದ ದೇಶದ ಮೊದಲ ಸಹಕಾರ ಸಾರಿಗೆ

    ನಷ್ಟದ ಸುಳಿಗೆ ಸಿಲುಕಿ ಬೀಗ ಹಾಕುವ ಹಂತ ತಲುಪಿದ ದೇಶದ ಮೊದಲ ಸಹಕಾರ ಸಾರಿಗೆ

    ಚಿಕ್ಕಮಗಳೂರು: ಮಲೆನಾಡ ಮನೆ-ಮನಗಳಲ್ಲಿ ಆತ್ಮೀಯತೆಯ ಭಾವನಾತ್ಮಕ ಕೊಂಡಿ ಬೆಸೆದಿದ್ದ ದೇಶದ ಮೊದಲ ಸಹಕಾರ ಸಾರಿಗೆ ಸಂಸ್ಥೆ ಕಷ್ಟದ ಸುಳಿಗೆ ಸಿಲುಕಿ ಬೀಗ ಹಾಕುವ ಹಂತ ತಲುಪಿದೆ. ಮಾಲೀಕರೇ ಇಲ್ಲದೆ ಕಾರ್ಮಿಕರೇ ನಡೆಸುತ್ತಿದ್ದ ಈ ಸಹಕಾರ ಸಾರಿಗೆ ಸಂಸ್ಥೆಯ ಬೆನ್ನಿಗೆ ಸರ್ಕಾರ ನಿಲ್ಲದಿದ್ದರೆ ಈ ಸಾರಿಗೆ ಸಂಸ್ಥೆ ಇನ್ನು ನೆನಪಾಗಿ ಮಾತ್ರ ಉಳಿಯುತ್ತೆ.

    ಕೆಲಸಗಾರರೆಲ್ಲರೂ ಮಾಲೀಕರೇ ಆಗಿದ್ದ ಈ ಸಂಸ್ಥೆಯಲ್ಲಿ 65ಕ್ಕೂ ಹೆಚ್ಚು ಬಸ್‍ಗಳು ಮಲೆನಾಡಿಗರ ಜೀವನದ ಅವಿಭಾಜ್ಯ ಅಂಗವಾಗಿದ್ದವು. ಪ್ರತಿ ನಿತ್ಯ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, 60-70 ಸಾವಿರ ಜನ ನಿತ್ಯ ಪ್ರಯಾಣಿಸುತ್ತಿದ್ದರು. ಆದರೆ, ಬರುತ್ತಿದ್ದ ಹಣ ನಿತ್ಯದ ಡಿಸೇಲ್‍ಗೂ ಆಗಾದ ಕಾರಣ 30 ವರ್ಷಗಳಿಂದ ದಣಿವರಿಯದೆ ಓಡಿದ ಬಸ್ಸಿನ ಚಕ್ರಗಳು ಚಿರನಿದ್ರೆಯತ್ತ ಧಾವಿಸಿವೆ. ಸಹಾಯಕ್ಕಾಗಿ ಸರ್ಕಾರದ ಕದ ಬಡಿದರೂ ಆಶ್ವಾಸನೆ ಸಿಕ್ಕಿತೇ ವಿನಃ, ಸ್ಪಂದನೆ ಸಿಕ್ಕಲಿಲ್ಲ. ಹಾಗಾಗಿ, ನಿಸ್ವಾರ್ಥ ಸಾರಿಗೆ ಸಂಸ್ಥೆ ತನ್ನ ಸಂಚಾರವನ್ನ ಸ್ಥಗಿತಗೊಳಿಸಿದೆ.

    ಜನವರಿ 3, 2017ರಂದು ಬೆಳ್ಳಿಹಬ್ಬ ಆಚರಿಸಿಕೊಂಡ ಸಾರಿಗೆ ಸಂಸ್ಥೆ ನಷ್ಟವನ್ನ ಸರಿದೂಗಿಸಲಾಗದೆ ವೇತನ ಹೆಚ್ಚಳ, ಬೋನಸ್ ಯಾವೂದನ್ನೂ ನೀಡದೆ ವರ್ಷಗಳೇ ಕಳೆದಿದೆ. ವಿಮೆ ಕಟ್ಟಲೂ ಕೂಡ ಸಂಸ್ಥೆ ಪರದಾಡಿತ್ತು. ಈ ಸಾರಿಗೆ ಸಂಸ್ಥೆಯ ನೆರವಿಗೆ ಸರ್ಕಾರ ಬರದಿದ್ದರೆ ಏಷ್ಯಾ ಖಂಡದಲ್ಲೇ ಮೊದಲ ಹಾಗೂ ಮಾದರಿಯಾದ ಸಂಸ್ಥೆ ಶೀಘ್ರವೇ ಬಾಗಿಲು ಹಾಕಲಿದೆ. 300ಕ್ಕೂ ಹೆಚ್ಚು ಕಾರ್ಮಿಕರು ಬೀದಿಗೆ ಬೀಳುತ್ತಾರೆ. ಹಾಗಾಗಿ ಇಂದು ಕಾರ್ಮಿಕರು ಸಂಚಾರವನ್ನ ಸ್ಥಗಿತಗೊಳಿಸಿ ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹಾಗೂ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಕೂಡ ಭಾಗವಹಿಸುವ ಸಾಧ್ಯತೆ ಇದ್ದು, ಸ್ಥಳೀಯ ನಾಯಕರು ಸಮಾಲೋಚನೆ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

    ಸರ್ಕಾರದ ನೆರವಿಗಾಗಿ ಸಂಸ್ಥೆಯವರು ಸಿಎಂ ಬಿ.ಎಸ್.ವೈ ಅವರನ್ನ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಅಂದು ಯಡಿಯೂರಪ್ಪ ಕೂಡ ಟ್ಯಾಕ್ಸ್ ವಿಚಾರದಲ್ಲಿ ನೆರವಿಗೆ ನಿಲ್ಲೋ ಭರವಸೆ ನೀಡಿದ್ದರು. ಆದ್ರೆ ಯಾವುದೂ ಈಡೇರಲಿಲ್ಲ. ದಿನದಿಂದ ದಿನಕ್ಕೆ ಸಮಸ್ಯೆ ಜಟಿಲವಾಗ್ತಿರುವುದರಿಂದ ಕಾರ್ಮಿಕರು ಸಂಚಾರವನ್ನ ಸ್ಥಗಿತಗೊಳಿಸೋ ತೀರ್ಮಾನಕ್ಕೆ ಬಂದಿದ್ದಾರೆ. ಸರ್ಕಾರ ಶೀಘ್ರವೇ 6.50 ಕೋಟಿ ಹಣ ಬಿಡುಗಡೆ ಮಾಡಿದರೆ ಅನುಕೂಲವಾಗುತ್ತೆ. ಆ ಕ್ಷಣದಿಂದಲೇ ಮತ್ತೆ ಕಾರ್ಯಾರಂಭ ಮಾಡುತ್ತೇವೆ ಅಂತಿದ್ದಾರೆ ಕಾರ್ಮಿಕರು. ಸರ್ಕಾರದ ನಡೆ ಮೇಲೆ ಒಂದು ಸಂಸ್ಥೆಯ ಭವಿಷ್ಯವಂತೂ ನಿಂತಿದೆ.

    ಸಹಕಾರ ಸಾರಿಗೆ ನಡೆದು ಬಂದ ಹಾದಿ:
    90ರ ದಶಕದಲ್ಲಿ ಲಾಭದಲ್ಲಿದ್ದ ಶಂಕರ್ ಟ್ರಾನ್ಸ್‌ಪೋರ್ಟ್‌ನ ಸಿಬ್ಬಂದಿಗಳು ಮಾಲೀಕರ ಬಳಿ ಸಂಬಳ ಹೆಚ್ಚಳಕ್ಕೆ ಬೇಡಿಕೆ ಇಟ್ಟು 2 ತಿಂಗಳಿಗೂ ಹೆಚ್ಚು ಕಾಲ ಮುಷ್ಕರ ಕೈಗೊಂಡಿದ್ರು. ಕಾರ್ಮಿಕರ ಬೇಡಿಕೆ ಈಡೇರಿಸಲು ಒಪ್ಪದ ಮಾಲೀಕರು ಸಂಸ್ಥೆಯನ್ನ ಮುಚ್ಚಿದರು. ಕೆಲಸವಿಲ್ಲದೆ ಅತಂತ್ರರಾದ 123 ಕಾರ್ಮಿಕರು ಶಂಕರ್ ಟ್ರಾನ್ಸ್‌ಪೋರ್ಟ್‌ನವರು ಕೊಟ್ಟ ಪರಿಹಾರ 12 ಲಕ್ಷ ಹಣವನ್ನೇ ಬಂಡವಾಳವನ್ನಾಗಿಸಿಕೊಂಡು, ಅದೇ ಸಂಸ್ಥೆಯ 6 ಹಳೇ ಬಸ್‍ಗಳನ್ನ ಕೊಂಡು 1991 ಮಾರ್ಚ್‍ನಲ್ಲಿ 8 ರಂದು ಸಹಕಾರ ಸಾರಿಗೆ ಆರಂಭಿಸಿದ್ದರು. ಅಂದು ಕಾರ್ಮಿಕ ಮುಖಂಡ ಬಿ.ಕೆ.ಸುಂದರೇಶ್ ಕಾರ್ಮಿಕರ ಬೆನ್ನಿಗೆ ನಿಂತಿದ್ದರು.

    ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಜಿಲ್ಲೆಯ ದಟ್ಟಕಾನನದ ಕುಗ್ರಾಮದಲ್ಲೂ ಸಾರಿಗೆ ಬಸ್ ಸಂಚರಿಸಿತ್ತು. 6 ಬಸ್ಸುಗಳಿಂದ ಆರಂಭವಾದ ಸಂಸ್ಥೆಯಲ್ಲೀಗ 75 ಬಸ್‍ಗಳಿವೆ. 1998ರಲ್ಲಿ ಕೊಪ್ಪದಲ್ಲಿ ಕಚೇರಿ ನಿರ್ಮಿಸಿದ್ದಲ್ಲದೆ ಕಂಪ್ಯೂಟರ್ ಬಳಸಿದ ಹೆಗ್ಗಳಿಕೆಯೂ ಈ ಸಂಸ್ಥೆಗಿದೆ. ಈ ಸಂಸ್ಥೆಯ ಸಾಹಸಕ್ಕೆ ನಿಬ್ಬೆರಗಾದ ಜಪಾನಿನ ಕ್ಯೊಟೊ ನಗರದ ರಿಟ್ಸುಮೆಕಿನ್ ಯುನಿರ್ವಸಿಟಿಯ ತಂಡ ಇಲ್ಲಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ತನ್ನ ದೇಶದ ಸಹಕಾರ ಸಂಸ್ಥೆಯಲ್ಲಿ ಅಳವಡಿಸಿಕೊಂಡಿತು. ಮಂಗಳೂರು ವಿವಿಯ ಪ್ರಾಧ್ಯಾಪಕರು ಇದೇ ಸಾರಿಗೆ ಸಂಸ್ಥೆ ಬಗ್ಗೆ ಅಧ್ಯಯನ ನಡೆಸಿ ಪಿಎಚ್‍ಡಿ ಪಡೆದರು. ಮಣಿಪಾಲ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಕೋರ್ಸ್‍ಗೆ ಸಹಕಾರ ಸಾರಿಗೆಯ ಯಶೋಗಾಥೆ ಪಠ್ಯವಾಯ್ತು. ಕಾಲೇಜಿನ ಪ್ರಾಧ್ಯಾಪಕರೊಬ್ಬರು ಮಂಡಿಸಿದ ಪ್ರಬಂಧಕ್ಕೆ ಕೊಲ್ಲಾಪುರದ ಶಿವಾಜಿ ವಿವಿ ಪಿಎಚ್‍ಡಿಯನ್ನೇ ನೀಡಿ ಗೌರವಿಸಿದೆ.

    ಸ್ವಾತಂತ್ರ್ಯ ಹೋರಾಟಗಾರರು, ಕರ್ನಾಟಕ ಏಕೀಕರಣಕ್ಕೆ ಹೋರಾಡಿದವರು, ವಿದ್ಯಾರ್ಥಿಗಳು, ಸಂಸ್ಥೆಯ ಕಾರ್ಮಿಕ ಮಕ್ಕಳು, ವಿಕಲಚೇತನರು, ಹಿರಿಯ ನಾಗರಿಕರಿಗೆ ಶೇ.50 ರಿಯಾಯಿತಿ ಕೊಟ್ಟು, ದಟ್ಟಕಾನನ, ಕಲ್ಲು-ಮಣ್ಣಿನ ದುರ್ಗಮ ಹಾದಿಯಲ್ಲೂ ಲಕ್ಷಾಂತರ ಮಕ್ಕಳ ಭವಿಷ್ಯ ರೂಪಿಸಿದ ಹೆಗ್ಗಳಿಕೆ ಈ ಸಂಸ್ಥೆಯದ್ದು. ಅಂತಹಾ ಸಂಸ್ಥೆ ಈಗ, ಸರ್ಕಾರದ ರೀತಿ-ರಿವಾಜುಗಳಿಂದ ಬೀಗ ಹಾಕುವ ಹೊಸ್ತಿಲಲ್ಲಿದೆ. ಸರ್ಕಾರ ಈ ಸಂಸ್ಥೆಗೆ ನೆರವು ನೀಡಿದ್ದೇ ಆದಲ್ಲಿ ಇದರ ಗತವೈಭವದ ದಿನ ಮತ್ತೆ ಆರಂಭಗೊಳ್ಳುತ್ತೆ ಎಂದು ಕಾರ್ಮಿಕರು ಹೇಳುತ್ತಿದ್ದಾರೆ.

  • ಕರ್ನಾಟಕ ಬಂದ್ – ಮೆಜೆಸ್ಟಿಕ್ ಬಸ್ ನಿಲ್ದಾಣ ಖಾಲಿ ಖಾಲಿ

    ಕರ್ನಾಟಕ ಬಂದ್ – ಮೆಜೆಸ್ಟಿಕ್ ಬಸ್ ನಿಲ್ದಾಣ ಖಾಲಿ ಖಾಲಿ

    ಬೆಂಗಳೂರು: ಯಾವಾಗಲೂ ಜನ ಸಂದಣಿಯಿಂದ ಕೂಡಿರುತ್ತಿದ್ದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲೋದಕ್ಕೆ ಬಿಡುತ್ತಿರಲಿಲ್ಲ ಜನ ಓಡೋಡಿ ಬರುತ್ತಿದ್ದರು. ಆದರೆ ಇಂದು ಬಸ್‍ಗಳ ಸಂಚಾರವಿದ್ದರೂ ಪ್ರಯಾಣಿಕರು ಮಾತ್ರ ಬೆರಳೆಣಿಕೆಯಷ್ಟು ಮಾತ್ರ ಕಾಣಸಿಗುತ್ತಿದ್ದಾರೆ.

    ಹೌದು. ಇಂದು ಸರೋಜಿನ ಮಹಿಷಿ ವರದಿಯನ್ನ ಜಾರಿಗೆ ತರುವಂತೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್‍ಗೆ ಕರೆ ಕೊಟ್ಟಿದೆ. ಈ ಹಿನ್ನೆಲೆ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದ್ದು, ನಾವು ಅರ್ಧ ಗಂಟೆಯಿಂದ ಕಾದರೂ ಜನ ಬರುತ್ತಿಲ್ಲ ಬಂದ್ ಅಂತ ಜನ ಭಯಪಡುತ್ತಿದ್ದಾರೆ. ವೋಲ್ವೋದಲ್ಲಂತೂ ಎರಡು ಪ್ರಯಾಣಿಕರು ಇದ್ದರೆ ಹೆಚ್ಚು ಎಂದು ಬಿಎಂಟಿಸಿ ಬಸ್ ಚಾಲಕ, ನಿರ್ವಾಹಕರು ಅಳಲು ತೋಡಿಕೊಂಡರು. ಬಂದ್ ಪರಿಣಾಮ ಬಿಎಂಟಿಸಿ ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೆ ಸಂಪೂರ್ಣ ಭಣಗುಟ್ಟುತ್ತಿದೆ.

    ಇತ್ತ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಎಲ್ಲೆಡೆ ಪೊಲೀಸರ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ. ಪ್ರತಿ ಸರ್ಕಲ್‍ಗೂ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ ಬಸ್ ಸಂಚಾರ ಯಥಾಸ್ಥಿತಿಯಿದ್ದು, ಎಂದಿನಂತೆ ಬಿಎಂಟಿಸಿ, ಕೆಎಸ್ಆರ್‌ಟಿಸಿ ಬಸ್‍ಗಳು ಸಂಚರಿಸುತ್ತಿದೆ. ಆದರೆ ಜನರಿಲ್ಲದೆ ಮೆಜೆಸ್ಟಿಕ್ ಬಸ್ ನಿಲ್ದಾಣ ಮಾತ್ರ ಖಾಲಿ ಖಾಲಿ ಕಾಣಿಸುತ್ತಿದೆ.

    ಡಿಸಿಪಿ ರಮೇಶ್ ಬಾನೋತ್ ನೇತೃತ್ವದಲ್ಲಿ ಭದ್ರತೆ ನಿಯೋಜಿಸಲಾಗಿದೆ. ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಬಳಿ ಕೂಡ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಮೆಜೆಸ್ಟಿಕ್‍ನಿಂದ ಫ್ರೀಡಂ ಪಾರ್ಕ್ ವರೆಗೂ ರ‍್ಯಾಲಿ ನಡೆಯಲಿರುವ ಹಿನ್ನೆಲೆ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಬಳಿ ಭಧ್ರತೆ ಒದಗಿಸಲಾಗಿದೆ. 1 ಕೆಎಸ್‌ಆರ್‌ಪಿ ತುಕಡಿ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹೊಯ್ಸಳ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಹಾಗೆಯೇ ರೈಲ್ವೆ ಸಂಚಾರದಲ್ಲಿ ಯಾವುದೇ ವ್ಯತ್ಯಯವಿರುವುದಿಲ್ಲ. ಎಂದಿನಂತೆ ರೈಲುಗಳು ಸಂಚರಿಸಲಿದೆ. ಆದರೆ ಪ್ರಯಾಣಿಕರ ಸಂಖ್ಯೆಯಲ್ಲಿ ಶೇಕಡಾ 50ರಷ್ಟು ಇಳಿಕೆಯಾಗಿದೆ.

  • ಮೈಸೂರು, ಹಾಸನ, ಬೆಂಗ್ಳೂರು ನಡುವೆ ಓಡಾಡುವ 126 KSRTC ಬಸ್ಸುಗಳ ಸಂಚಾರ ಸ್ಥಗಿತ

    ಮೈಸೂರು, ಹಾಸನ, ಬೆಂಗ್ಳೂರು ನಡುವೆ ಓಡಾಡುವ 126 KSRTC ಬಸ್ಸುಗಳ ಸಂಚಾರ ಸ್ಥಗಿತ

    ಬೆಂಗಳೂರು: ಸಾರಿಗೆ ಸಚಿವ ಲಕ್ಷ್ಮಣ ಸವದಿ ಸೂಚನೆಯಂತೆ 4ರಿಂದ 5 ಮಂದಿ ಅಥವಾ ಬೆರಳೆಣಿಕೆಯ ಪ್ರಯಾಣಿಕರನ್ನ ಹೊತ್ತು ಸಂಚರಿಸುವ ಬಸ್ಸುಗಳ ಸೇವೆಯನ್ನು ಕೆಎಸ್ಆರ್‌ಟಿಸಿ ರದ್ದುಪಡಿಸಿದೆ.

    ಕೆಎಸ್ಆರ್‌ಟಿಸಿ ಈಗಾಗಲೇ ನಷ್ಟದಲ್ಲಿದ್ದು, ಇಂಧನಕ್ಕೆ ಮತ್ತು ಬಸ್ಸುಗಳ ನಿರ್ವಹಣೆ ಮಾಡುವುದೇ ಕಷ್ಟವಾಗಿದೆ. ಆದ್ದರಿಂದ ಸಾರಿಗೆ ಸಚಿವರ ಸೂಚನೆಯಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಅವರು ಎಲ್ಲಾ ವಿಭಾಗದ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಒಟ್ಟು 126 ಬಸ್ಸುಗಳ ಸಂಚಾರ ರದ್ದುಗೊಳಿಸಿದ್ದಾರೆ.

    ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಸ್ಯಾಟಲೈಟ್ ನಿಲ್ದಾಣದಲ್ಲಿ ಕೆಲ ಚಾಲಕ, ನಿರ್ವಾಹಕರು ಕೆಲ ಬಸ್‍ಗಳಲ್ಲಿ 4ರಿಂದ 5 ಜನ ಪ್ರಯಾಣಿಕರಿದ್ದರೆ ಸಾಕು ಎಂದು ಬಸ್ಸಿನಲ್ಲಿ ಸಂಚರಿಸುತ್ತಾರೆ. ಜೊತೆಗೆ ಪ್ಲಾಟ್ ಫಾರಂನಲ್ಲಿ ಬಸ್ ನಿಲ್ಲಿಸುವ ಜಾಗಕ್ಕಾಗಿ ಚಾಲಕರ ನಡುವೆ ಜಗಳ ನಡೆಯುತ್ತಲೇ ಇರುತ್ತದೆ. ಇದನ್ನು ಮನಗಂಡ ಕೆಎಸ್ಆರ್‌ಟಿಸಿ ಮೈಸೂರು-ಬೆಂಗಳೂರು ಮತ್ತು ಹಾಸನ-ಬೆಂಗಳೂರು ನಡುವಿನ 126 ಬಸ್ಸುಗಳ ಸಂಚಾರವನ್ನು ಸ್ಥಗಿತಗೊಳಿಸಿದೆ.

    ಮೊದಲ ಹಂತದಲ್ಲಿ ಮೈಸೂರು-ಬೆಂಗಳೂರು, ಹಾಸನ-ಬೆಂಗಳೂರು ಮಾರ್ಗದಲ್ಲಿ ಖಾಲಿ ಸಂಚರಿಸುವ ಬಸ್ಸುಗಳ ಸೇವೆಯನ್ನು ರದ್ದು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಮಾರ್ಗಗಳಿಗೂ ಇದು ಅನ್ವಯಗೊಳ್ಳುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ತುಮಕೂರು ಬಸ್ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ- ಸ್ಮಾರ್ಟ್ ಸಿಟಿ ಯೋಜನೆಯಡಿ 82.18 ಕೋಟಿ ರೂ. ವೆಚ್ಚ

    ತುಮಕೂರು ಬಸ್ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ- ಸ್ಮಾರ್ಟ್ ಸಿಟಿ ಯೋಜನೆಯಡಿ 82.18 ಕೋಟಿ ರೂ. ವೆಚ್ಚ

    ತುಮಕೂರು: ರಾಜ್ಯ ಸಾರಿಗೆ ಸಂಸ್ಥೆ ಬಸ್ ನಿಲ್ದಾಣವು ಸ್ಮಾರ್ಟ್ ಸಿಟಿ ಯೋಜನೆ ಅಡಿ ಹೈಟೆಕ್ ಸ್ಪರ್ಶ ಪಡೆಯಲಿದೆ. 82.18 ಕೋಟಿ ರೂ. ವೆಚ್ಚದಲ್ಲಿ ಬಹುಮಡಿ `ಸ್ಮಾರ್ಟ್ ಬಸ್ ಟರ್ಮಿನಲ್’ ನಿರ್ಮಿಸಲಾಗುತ್ತಿದೆ.

    ನಗರದ ಹೃದಯಭಾಗದಲ್ಲಿ ಏರ್‌ಪೋರ್ಟ್‌ ಮಾದರಿಯಲ್ಲಿ ತಲೆ ಎತ್ತಲಿರುವ ಬಸ್ ನಿಲ್ದಾಣವು ಹತ್ತು ಹಲವು ಸ್ಮಾರ್ಟ್ ವಿಶೇಷತೆ ಹೊಂದಿದೆ. ಬಿ1, ಬಿ2, ನೆಲಮಹಡಿ ಹಾಗೂ 3 ಅಂತಸ್ತಿನ ಬಸ್ ನಿಲ್ದಾಣವು ಅತ್ಯಾಧುನಿಕವಾಗಿ ನಿರ್ಮಾಣಗೊಳ್ಳಲಿದೆ.

    ರಾಜ್ಯ ರಾಜಧಾನಿ ಬೆಂಗಳೂರು ಹೆಬ್ಬಾಗಿಲು ತುಮಕೂರು ಜಿಲ್ಲೆ. ಜಿಲ್ಲೆಯ ಮೂಲಕ ಮಧ್ಯಕರ್ನಾಟಕ ಹಾಗೂ ಉತ್ತರಕರ್ನಾಟಕ ಭಾಗದ ಬಸ್ಸುಗಳು ಹಾದುಹೋಗಲಿದ್ದು, ಪ್ರತಿನಿತ್ಯ 2,400 ಬಸ್ಸುಗಳು ಸಾರಿಗೆ ಬಸ್ ನಿಲ್ದಾಣವನ್ನು ಹಾದುಹೋಗಲಿವೆ. ಬಸ್ ಸಂಚಾರದ ಒತ್ತಡದ ದಟ್ಟಣೆಗೆ ಪರಿಹಾರವಾಗಿ ಸ್ಮಾರ್ಟ್ ಬಸ್ ನಿಲ್ದಾಣ ನಿರ್ಮಿಸುವ ಯೋಜನೆಗೆ ಚಾಲನೆ ನೀಡಲಾಗಿದೆ.

    ಬಹುಮಹಡಿ ಬಸ್ ಟರ್ಮಿನಲ್:
    ವಿಮಾನ ನಿಲ್ದಾಣ ಮಾದರಿಯಂತೆ ಬಹುಮಹಡಿ ಬಸ್ ಟರ್ಮಿನಲ್ ನಿರ್ಮಿಸುವ ಯೋಜನೆಯನ್ನು ಸ್ಮಾರ್ಟ್ ಸಿಟಿ ಕೈಗೆತ್ತಿಕೊಂಡಿದೆ. ಎರಡೂವರೆ ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಂಡು ಕೆಎಸ್ಆರ್‌ಟಿಸಿಗೆ ಹಸ್ತಾಂತರಿಸಲಾಗುವುದು. ವೈಫೈ, ಇಂಟರ್‌ನೆಟ್ ಸಹಿತ ಅತ್ಯಾಧುನಿಕ ಸಂಪರ್ಕ ಸೌಲಭ್ಯ ಬಸ್ ನಿಲ್ದಾಣದಲ್ಲಿ ಇರಲಿದೆ. ಗುಜರಾತ್ ವಡೋದರದಲ್ಲಿನ ಬಸ್ ಟಿರ್ಮಿನಲ್‍ನಂತೆ ತುಮಕೂರು ಬಸ್ ನಿಲ್ದಾಣ ನಿರ್ಮಾಣಗೊಳ್ಳಲಿದೆ.

    ನೆಲಮಹಡಿಯಲ್ಲಿ ಸಿಟಿ ಬಸ್ ನಿಲ್ದಾಣ:
    ಹೈಟೆಕ್ ಬಸ್ ಟಿರ್ಮಿನಲ್‍ನ ನೆಲಮಹಡಿಯಲ್ಲಿ ಸಿಟಿ ಬಸ್ ನಿಲ್ದಾಣ ಇರಲಿದೆ. ಸದ್ಯ 50 ಸಿಟಿ ಬಸ್ಸುಗಳು ನಗರದಲ್ಲಿ ಕಾರ್ಯಾಚರಣೆಯಲ್ಲಿದ್ದು, 30 ಬಸ್ಸುಗಳು ನಿಲ್ಲುವ ವ್ಯವಸ್ಥೆ ನಿಲ್ದಾಣದಲ್ಲಿ ಇರಲಿದೆ. ಪ್ರತಿನಿತ್ಯ ನಗರ ಸಾರಿಗೆಯ 1,200 ಟ್ರಿಪ್‍ಗಳನ್ನು ಈ ಬಸ್ಸುಗಳು ಮಾಡಲಿವೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ನಗರ ಸಾರಿಗೆ ಬಸ್ಸುಗಳನ್ನು ಹೆಚ್ಚಳ ಮಾಡುವ ಸಾಧ್ಯತೆಯಿದೆ.

    ಬಿ1, ಬಿ2ನಲ್ಲಿ ವಾಹನ ಪಾರ್ಕಿಂಗ್:
    ಬೇಸ್ 1, ಬೇಸ್ 2ನಲ್ಲಿ ವಿಶಾಲವಾದ ಅತ್ಯಾಧುನಿಕ ವಾಹನ ಪಾರ್ಕಿಂಗ್ ವ್ಯವಸ್ಥೆ ಇರಲಿದೆ. ಬೇಸ್ 1ನಲ್ಲಿ ಕಾರು ಪಾರ್ಕಿಂಗ್‍ಗಾಗಿ ವ್ಯವಸ್ತೆ ಮಾಡಲಾಗುತ್ತದೆ. 167 ನಾಲ್ಕು ಚಕ್ರದ ವಾಹನಗಳನ್ನು ಒಟ್ಟಿಗೆ ಇಲ್ಲಿ ಪಾರ್ಕ್ ಮಾಡಬಹುದು. ಏಕಕಡೆ ಪ್ರವೇಶ ಹಾಗೂ ನಿರ್ಗಮನ ಇರಲಿದ್ದು, 4 ಲಿಫ್ಟ್ ಹಾಗೂ 4 ಕಡೆ ಮೆಟ್ಟಿಲುಗಳನ್ನು ನಿರ್ಮಿಸಲಾಗುವುದು. ಸಬ್‍ವೇ ಸಂಪರ್ಕ ವ್ಯವಸ್ಥೆ ಕೂಡ ಮಾಡಲಾಗುವುದು.

    ಎಕ್ಸ್‌ಪ್ರೆಸ್‌, ಗ್ರಾಮೀಣ ಸಾರಿಗೆ ಬಸ್:
    ಮೊದಲ ಅಂತಸ್ತು ಎಕ್ಸ್‌ಪ್ರೆಸ್‌, ಗ್ರಾಮೀಣ ಸಾರಿಗೆ ಬಸ್ ನಿಲ್ದಾಣಕ್ಕೆ ಮೀಸಲಿರಿಸಲಾಗಿದೆ. 35 ಬಸ್ಸುಗಳು ಒಟ್ಟಿಗೆ ಬಂದು ನಿಲ್ಲುವ ವ್ಯವಸ್ಥೆ ಇರಲಿದೆ. ಜೊತೆಗೆ ಆಡಳಿತ ಕಚೇರಿ, ಪ್ರಯಾಣಿಕರ ವಿಶ್ರಾಂತಿ ಕೊಠಡಿ, ಕುಡಿಯುವ ನೀರು, ಲಗ್ಗೇಜ್ ಕೊಠಡಿ ಸೇರಿದಂತೆ ಶೌಚಾಗೃಹ ಸೌಲಭ್ಯ, ಲಿಫ್ಟ್, ಎಸ್ಕಲೇಟರ್ ಸಹ ಪ್ರಯಾಣಿಕರಿಗಾಗಿ ನಿರ್ಮಿಸಲಾಗುತ್ತದೆ.

    ಅಂಗಡಿ-ಮಳಿಗೆಗಳು:
    2 ಹಾಗೂ 3ನೇ ಅಂತಸ್ತಿನಲ್ಲಿ ಮಾಲ್‍ಗಳು, ಖಾಸಗಿ ಕಚೇರಿ ಕಟ್ಟಡಗಳನ್ನು ನಿರ್ಮಿಸಲಾಗುವುದು. ಛಾವಣಿಯಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಸಿ 65 ಕೆವಿ ಸೌರ ವಿದ್ಯುತ್ ಉತ್ಪಾದನೆಗೆ ಅವಕಾಶ ನೀಡಲಾಗುತ್ತದೆ.

    ಸಾರಿಗ್ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ ಪೂರ್ಣವಾಗುವವರೆಗೂ ಈಗಿರುವ ಬಸ್ ನಿಲ್ದಾಣವನ್ನು ಹತ್ತಿರದಲ್ಲಿರುವ ಜೆ.ಸಿ ರಸ್ತೆಯ ಖಾಸಗಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತಿರುವ ಕೆಎಸ್ಆರ್‌ಟಿಸಿ ಬಸ್ ಡಿಪೋ-1ಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ. ಜ. 8ರಿಂದ ಈ ಬಸ್ ನಿಲ್ದಾಣ ಕಾರ್ಯಾರಂಭವಾಗಿದ್ದು, ಅಶೋಕ ರಸ್ತೆಯಿಂದ ಬಸವೇಶ್ವರ ರಸ್ತೆ ಮೂಲಕ ನಿಲ್ದಾಣ ಪ್ರವೇಶಿಸುವ ಬಸ್ಸುಗಳು ಗುಬ್ಬಿ ವೀರಣ್ಣ ಕಲಾಕ್ಷೇತ್ರ ಭಾಗದಲ್ಲಿ ನಿರ್ಗಮಿಸಲಿವೆ. 2 ನಿರ್ಗಮನ ದ್ವಾರಗಳಿರಲಿವೆ.

  • ಬೂದಿ ಮುಚ್ಚಿದ ಕೆಂಡವಾದ ಕನಕಪುರ- ರಸ್ತೆಗಿಳಿಯದ ಬಸ್ಸುಗಳು

    ಬೂದಿ ಮುಚ್ಚಿದ ಕೆಂಡವಾದ ಕನಕಪುರ- ರಸ್ತೆಗಿಳಿಯದ ಬಸ್ಸುಗಳು

    ರಾಮನಗರ: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಬಂಧನದ ಹಿನ್ನೆಲೆ ಅವರ ಸ್ವಕ್ಷೇತ್ರ ಕನಕಪುರದಲ್ಲಿ ಉದ್ವಿಗ್ನ ಪರಿಸ್ಥಿತಿ ಇದೆ. ಈ ಹಿನ್ನೆಲೆ ಯಾವುದೇ ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳಾಗಲಿ ರಸ್ತೆಗಿಳಿಯದ ಕಾರಣ ಸಾರ್ವಜನಿಕರು ಪರದಾಡುತ್ತಿದ್ದಾರೆ.

    ಕನಕಪುರದಲ್ಲಿ ಬಸ್ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿದೆ. ಕೆಎಸ್‍ಆರ್ ಟಿಸಿ ಬಸ್ ಡಿಪೋ ಬಳಿ ಸಿಬ್ಬಂದಿ ಹಾಜರ್ ಆಗಿ ಬಸ್ಸುಗಳನ್ನು ಹೊರಗೆ ತೆಗೆಯದಿರಲು ನಿರ್ಧರಿಸಿದ್ದಾರೆ. ಮಂಗಳವಾರ ರಾತ್ರಿ ಡಿಕೆಶಿ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ನಾಯಕನ ಬಂಧನ ಖಂಡಿಸಿ, 1 ಬಸ್ಸಿಗೆ ಬೆಂಕಿ ಹಚ್ಚಿ, ಸುಮಾರು 4 ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು.

    ಇತ್ತ ಬಸ್ಸಿಗಾಗಿ ಪ್ರಯಾಣಿಕರು ಕಾಯುತ್ತಿದ್ದಾರೆ. ಆದರೆ ಬಸ್ ನಿಲ್ದಾಣದೊಳಗೆ ಒಂದೇ ಒಂದು ಬಸ್ ಕೂಡ ಬರುತ್ತಿಲ್ಲ. ಹಾಗೆಯೇ ಕನಕಪುರ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಆರಂಭಗೊಂಡಿದೆ. ತರಕಾರಿಗಳನ್ನು ವ್ಯಾಪಾರಸ್ಥರು ತಂದು ಮಾರಾಟಕ್ಕೆ ಕೂತಿದ್ದಾರೆ, ಆದರೆ ಖರೀದಿಗೆ ಯಾರೂ ಬರುತ್ತಿಲ್ಲ. ಒಂದೆಡೆ ಬೆಳಗ್ಗಿನ ವೇಳೆ ಸಹಜ ಸ್ಥಿತಿಯಲ್ಲಿರುವ ಕನಕಪುರ ಕಾಣುತ್ತಿದ್ದರೂ ಬೂದಿ ಮುಚ್ಚಿದ ಕೆಂಡದಂತೆ ಅಲ್ಲಿನ ಪರಿಸ್ಥಿತಿ ಇದೆ.

    ಕನಕಪುರದಲ್ಲಿ ನಿಧಾನವಾಗಿ ಒಂದೊಂದೆ ಅಂಗಡಿ ಮುಂಗಟ್ಟುಗಳು ತೆರೆದುಕೊಳ್ಳುತ್ತಿದೆ. ಬಸ್ ನಿಲ್ದಾಣದ ಬಳಿಯ ಬೇಕರಿಗಳನ್ನು ಕೂಡ ತೆರೆಯಲಾಗಿದೆ. ಅಲ್ಲದೆ ಮತ್ತೆ ಯಾವುದೇ ಅಹಿತಕರ ಘಟನೆಗಳು, ಗಲಾಟೆಗಳು ನಡೆಯದಂತೆ ನೋಡಿಕೊಳ್ಳಲು ಪೊಲೀಸರು ಸಿಟಿ ರೌಂಡ್ಸ್ ಹಾಕುತ್ತಿದ್ದಾರೆ.

     

    ದೆಹಲಿ ನಿವಾಸದಲ್ಲಿ ಹಣ ಸಿಕ್ಕ ಪ್ರಕರಣ ಸಂಬಂಧ ಇಡಿ ಪ್ರಶ್ನೆಗೆ ಸರಿಯಾಗಿ ಉತ್ತರಿಸಿದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ 8.30ಕ್ಕೆ ಮಾಜಿ ಸಚಿವ, ಕರ್ನಾಟಕ ಕಾಂಗ್ರೆಸ್ ಆಪದ್ಬಾಂಧವ ಡಿಕೆ ಶಿವಕುಮಾರ್ ರನ್ನು ಬಂಧಿಸಿದೆ. ಡಿಕೆ ಶಿವಕುಮಾರ್ ಬಂಧನವಾಗುತ್ತಿದ್ದಂತೆ, ಮಾಜಿ ಸಚಿವರ ಬೆಂಬಲಿಗರು ದೆಹಲಿ ಸೇರಿದಂತೆ ರಾಜ್ಯದಲ್ಲಿ ಕೂಡ ಮಂಗಳವಾರ ರಾತ್ರಿಯೇ ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಅಭಿಮಾನಿಗಳು ಬೀದಿಗಿಳಿದು ಬೆಂಕಿಹಚ್ಚಿ ಆಕ್ರೋಶ ಹೊರಹಾಕಿದ್ದು, ಈ ವೇಳೆ ಕೆಲವೆಡೆ ಹಿಂಸಾಚಾರ ಕೂಡ ನಡೆದಿತ್ತು.

    ರಾಮನಗರದಲ್ಲಿ ಡಿಕೆಶಿ ಅಭಿಮಾನಿಗಳಿ ಕೆಎಸ್‍ಆರ್ ಟಿಸಿಯ 1 ಬಸ್‍ಗೆ ಬೆಂಕಿ 4 ಬಸ್‍ಗಳ ಮೇಲೆ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದರು. ಐಜೂರು ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಅಭಿಮಾನಿಗಳು ರೋಷಾವೇಶ ಪ್ರದರ್ಶಿಸಿದರು. ಬೆಂಗಳೂರು- ಮೈಸೂರು ಹೆದ್ದಾರಿ ತಡೆದು ಕೇಂದ್ರ, ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಹೆದ್ದಾರಿ ತಡೆದ ಪ್ರತಿಭಟನಕಾರರು ಪೊಲೀಸರ ನಡುವೆ ತಳ್ಳಾಟ, ನೂಕಾಟ ನಡೀತು. ಈ ವೇಳೆ ಡಿಕೆ ಅಭಿಮಾನಿಯೋರ್ವ ವಾಹನದ ಕೆಳಗೆ ಮಲಗಲು ಯತ್ನಿಸಿದ ಘಟನೆ ಸಂಭವಿಸಿತ್ತು.

    ಕಲ್ಲಹಳ್ಳಿ ಗೇಟ್, ಕನಕಪುರ: ಡಿಕೆ ಅಭಿಮಾನಿಗಳು ಕನಕಪುರ ಕೋಡಿಹಳ್ಳಿ ಸಂಪರ್ಕ ರಸ್ತೆ ಬಂದ್ ಮಾಡಿ ರಸ್ತೆಗಳಲ್ಲಿ ಮರದ ದಿಮ್ಮಿಗಳನ್ನಿಟ್ಟು ಬೆಂಕಿ ಹಚ್ಚಿದರು. ಇದಲ್ಲದೇ ರಸ್ತೆಗೆ ಕಲ್ಲುಗಳನ್ನಿಟ್ಟು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಲಾಠಿ ಚಾರ್ಜ್ ಮಾಡಿ ಪರಿಸ್ಥಿತಿ ಹತೋಟಿಗೆ ತರಲು ಪ್ರಯತ್ನಿಸಿದರು. ಇದೇ ವೇಳೆ ಎಸ್.ಪಿ ಸ್ವತಃ ಪರಿಸ್ಥಿತಿ ನಿಯಂತ್ರಿಸಿದರು. ಕನಕಪುರ ಗಲ್ಲಿ ಗಲ್ಲಿಗಳಲ್ಲೂ ಪೊಲೀಸರ ನಿಯೋಜನೆ ಮಾಡಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಾತನೂರು, ಚನ್ನಬಸಪ್ಪ ಸರ್ಕಲ್‍ನಲ್ಲೂ ಅಭಿಮಾನಿಗಳು ಟೈರ್ ಗೆ ಬೆಂಕಿ ಹಚ್ಚಿ ಹೆದ್ದಾರಿ ತಡೆದು ಪ್ರತಿಭಟಿಸಿದ್ದರು.