Tag: ಬಸವ ಸಾಗರ ಜಲಾಶಯ

  • ಆಲಮಟ್ಟಿ, ನಾರಾಯಣಪುರ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ, ಪ್ರವಾಹ ಭೀತಿ

    ಆಲಮಟ್ಟಿ, ನಾರಾಯಣಪುರ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ, ಪ್ರವಾಹ ಭೀತಿ

    ವಿಜಯಪುರ/ ಯಾದಗಿರಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ‌ ಮಳೆಯಿಂದ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ.ಆಲಮಟ್ಟಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ಒಳಹರಿವು ಹೆಚ್ಚಳವಾಗಿದ್ದು 26 ಗೇಟ್ ಗಳ ಪೈಕಿ 22 ಗೇಟ್ ಗಳ ಮೂಲಕ ಅಪಾರ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ.

    1.47 ಲಕ್ಷ ಕ್ಯುಸೆಕ್‌ ಒಳ ಹರಿವು ದಾಖಲಾಗಿದ್ದು,1.50 ಲಕ್ಷ ಕ್ಯುಸೆಕ್‌ ನೀರನ್ನ ಹೊರಬಿಡಲಾಗುತ್ತಿದೆ. ಕ್ಷಣ ಕ್ಷಣಕ್ಕೂ ನೀರು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದ ಹತ್ತಿರದ ಗ್ರಾಮಗಳ ಮೀನುಗಾರರು, ಗ್ರಾಮಸ್ಥರು ನದಿಗೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

    123.081 ಟಿಎಂಸಿ ಸಂಗ್ರಹ ಸಮರ್ಥ್ಯ ಇರುವ ಜಲಾಶಯದಲ್ಲಿ ಈಗ 97.70 ಟಿಎಂಸಿ ನೀರು ಸಂಗ್ರಹಗೊಂಡಿದೆ. 519 ಮೀಟರ್‌ ಎತ್ತರದ ಜಲಾಶಯದಲ್ಲಿ ಈಗ 518 ಮೀಟರ್‌ ನೀರು ಸಂಗ್ರಹಗೊಂಡಿದೆ.

    ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಮತ್ತೆ ಕೃಷ್ಣಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆಯಾಗಿದೆ.

    ಜಲಾಶಯಕ್ಕೆ 1.50 ಲಕ್ಷ ಕ್ಯೂಸೆಕ್ ಒಳಹರಿವು ಇದ್ದು, 1,63,650 ಕ್ಯೂಸೆಕ್ ನೀರನ್ನು 10 ಗೇಟ್‌ ತೆರೆದು ಬಿಡುಗಡೆ ಮಾಡಲಾಗಿದೆ. ಜಲಾಶಯದ ಸಂಗ್ರಹ ಸಾಮರ್ಥ್ಯ 33.313 ಟಿಎಂಸಿ ಇದ್ದು, ಈಗಾಗಲೇ 29.570 ಟಿಎಂಸಿ ನೀರು ಸಂಗ್ರಹವಿದೆ. ಮಧ್ಯಾಹ್ನ ವೇಳೆಗೆ 2 ಲಕ್ಷ ಕ್ಯೂಸೆಕ್ ನೀರು ಬಿಡುಗಡೆಯಾಗುವ ಸಾಧ್ಯತೆಯಿದೆ.

    ಕ್ಯೂಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
    ಕ್ಯೂಸೆಕ್ ಎಂಬುದು Cubic feet per Second ಹ್ರಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.

  • ಬಸವ ಸಾಗರ ಜಲಾಶಯದಿಂದ ಏಕಾಏಕಿ 28 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ

    ಬಸವ ಸಾಗರ ಜಲಾಶಯದಿಂದ ಏಕಾಏಕಿ 28 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ

    ಯಾದಗಿರಿ: ಬಸವ ಸಾಗರ ಜಲಾಶಯ ಭರ್ತಿ ಹಂತಕ್ಕೆ ತಲುಪಿದ ಹಿನ್ನೆಲೆಯಲ್ಲಿ ಜಲಾಶಯದಿಂದ ಏಕಾಏಕಿ 28,480 ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.

    ಬಸವ ಸಾಗರ ಜಲಾಶಯ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದಲ್ಲಿದೆ. ಜಲಾಶಯದ 25 ಗೇಟ್‍ಗಳ ಪೈಕಿ ನಾಲ್ಕು ಗೇಟ್ ಓಪನ್ ಮಾಡಲಾಗಿದೆ. ನಾಲ್ಕು ಗೇಟ್‍ಗಳ ಮೂಲಕ ಜಲಾಶಯದಿಂದ 28 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಹೋಗುತ್ತಿದೆ.

    ಕೃಷ್ಣಾ ನದಿಯಿಂದ ಬಸವ ಸಾಗರ ಜಲಾಶಯಕ್ಕೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಲಾಶಯದಿಂದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಸದ್ಯಕ್ಕೆ ಜಲಾಶಯಕ್ಕೆ 40 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ.

    ಮೊದಲಿಗೆ ಎರಡು ಗೇಟ್ ಓಪನ್ ಮಾಡುವ ಮೂಲಕ ನೀರನ್ನು ಹೊರಗೆ ಬಿಡಲಾಗುತ್ತಿತ್ತು. ಆದರೆ ಒಂದೇ ಗಂಟೆ ಅಂತರದಲ್ಲಿ ಎರಡು ಬಾರಿ ಜಲಾಶಯದಿಂದ ನೀರು ಹೊರಗೆ ಬಂದಿದೆ. ಇದರಿಂದ ಜಿಲ್ಲೆಯ ನದಿ ಪಾತ್ರದ ಜನರಲ್ಲಿ ಮತ್ತೆ ಪ್ರವಾಹದ ಆತಂಕ ಶುರುವಾಗಿದೆ. ಹೀಗಾಗಿ ಮತ್ತೆ ಜಲಾಶಯದ ಎರಡು ಗೇಟ್ ಓಪನ್ ಮಾಡಲಾಗಿದೆ. ಈಗ ಒಟ್ಟು ನಾಲ್ಕು ಗೇಟ್ ಮೂಲಕ ನೀರು ಹೊರಕ್ಕೆ ಹೋಗುತ್ತಿದೆ.

    ಪ್ರಸ್ತುತ ನಾಲ್ಕು ಗೇಟ್‍ಗಳ ಮೂಲಕ 28,480 ಕ್ಯೂಸೆಕ್ ನೀರು ಜಲಾಶಯದಿಂದ ಹೊರಕ್ಕೆ ಹೋಗುತ್ತಿದೆ. ಹೀಗಾಗಿ ನದಿ ಪಾತ್ರದಲ್ಲಿ ತೀವ್ರ ನಿಗಾ ಇಡಲಾಗಿದೆ. ಒಂದು ವೇಳೆ ಜಲಾಶಯದಲ್ಲಿ ನೀರು ಹೆಚ್ಚಾದರೆ ಮತ್ತೆ ಗೇಟ್ ಓಪನ್ ಮಾಡಿ ನೀರನ್ನು ಹೊರಗೆ ಬಿಡುವ ಸಾಧ್ಯತೆ ಇದೆ.

  • ಬಸವಸಾಗರ ಜಲಾಶಯದಿಂದ ಬರೋಬ್ಬರಿ 1 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ

    ಬಸವಸಾಗರ ಜಲಾಶಯದಿಂದ ಬರೋಬ್ಬರಿ 1 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ

    ಯಾದಗಿರಿ: ಕಳೆದ ಒಂದು ತಿಂಗಳ ಹಿಂದೆಯಷ್ಟೇ ಪ್ರವಾಹ ಪರಿಸ್ಥಿತಿಯನ್ನು ಎದುರಿಸಿದ್ದ ಜಿಲ್ಲೆಯ ಜನತೆಗೆ ಮತ್ತೊಮ್ಮೆ ಪ್ರವಾಹ ಎದುರಾಗುವ ಆತಂಕ ಎದುರಾಗಿದ್ದು, ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಬಸವಸಾಗರ ಜಲಾಶಯಕ್ಕೆ ಹರಿಯುವ ಒಳ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ಪರಿಣಾಮ ಕೃಷ್ಣಾ ನದಿಗೆ 1,13,280 ಕ್ಯೂಸೆಕ್ ನೀಡು ಬಿಡುಗಡೆ ಮಾಡಲಾಗಿದೆ.

    ಜಲಾಶಯ 33 ಗೇಟ್‍ಗಳಲ್ಲಿ ಸದ್ಯ 12 ಗೇಟ್ ಮೂಲಕ ನೀರು ಬಿಡುಗಡೆ ಮಾಡಲಾಗುತ್ತಿದೆ. ನೀರು ಬಿಡುಗಡೆಯಾಗಿರುವುದರಿಂದ ನಾಳೆ ಮುಂಜಾನೆ ವೇಳೆಗೆ ನದಿ ನೀರಿನ ಪ್ರಮಾಣ ಜಾಸ್ತಿಯಾಗುವ ಸಾಧ್ಯತೆ ಇದೆ. ನದಿಪಾತ್ರದ ಗ್ರಾಮಗಳಿಗೆ ಜಿಲ್ಲಾಡಳಿತದಿಂದ ಈಗಾಗಲೇ ಎಚ್ಚರಿಕೆ ಸಂದೇಶ ರವಾನೆ ಮಾಡಿದೆ.

    ಕಳೆದ ತಿಂಗಳಷ್ಟೇ ಕೃಷ್ಣಾ ಪ್ರವಾಹಕ್ಕೆ ಜಿಲ್ಲೆ ತತ್ತರಿಸಿತ್ತು, ನದಿಪಾತ್ರ ಗ್ರಾಮಗಳು ಜಲಾವೃತಗೊಂಡಿದ್ದವು. ಅಲ್ಲದೇ ಈ ಭಾಗದ ಸಾವಿರಾರು ಎಕರೆ ಬೆಳೆ ನಾಶವಾಗಿತ್ತು. ಕೊಳ್ಳೂರು ಬ್ರಿಡ್ಜ್ ಮುಳುಗಡೆಯಾಗಿ ಕೆಲ ದಿನ ಸಂಪರ್ಕಕಡಿತವಾದರೆ, ನೀಲಕಂಠರಾಯನ ಗಡ್ಡಿ ಸೇತುವೆ ನದಿಯ ನೀರಿನ ರಭಸಕ್ಕೆ ಕೊಚ್ಚಿಹೋಗಿತ್ತು. ಕಳೆದ ಬಾರಿ ಸಂಭವಿಸಿದ ಪ್ರವಾಹ ನಷ್ಟಕ್ಕೆ ಪರಿಹಾರ ನೀಡಲು ಸರ್ವೆ ಕಾರ್ಯವನ್ನು ಜಿಲ್ಲಾಡಳಿದ ಆರಂಭಿಸಿತ್ತು. ಆದರೆ ಸದ್ಯ ನದಿಯಲ್ಲಿ ನೀರಿನ ಪ್ರಮಾಣ ಜಾಸ್ತಿಯಾದ ಹಿನ್ನೆಲೆ ಮತ್ತೊಂದು ಪ್ರವಾಹ ಎದುರಿಸಲು ಜಿಲ್ಲಾಡಳಿತ ಸಜ್ಜಾಗುತ್ತಿದೆ.