Tag: ಬಸವರಾಜ್

  • ಭಾರತೀಯ ಮಕ್ಕಳ ಸರ್ವಾಂಗಿಣ ಅಭಿವೃದ್ಧಿಗಾಗಿ ನೂತನ ಶಿಕ್ಷಣ ನೀತಿ ಜಾರಿ: ಬೊಮ್ಮಾಯಿ

    ಭಾರತೀಯ ಮಕ್ಕಳ ಸರ್ವಾಂಗಿಣ ಅಭಿವೃದ್ಧಿಗಾಗಿ ನೂತನ ಶಿಕ್ಷಣ ನೀತಿ ಜಾರಿ: ಬೊಮ್ಮಾಯಿ

    ಹುಬ್ಬಳ್ಳಿ: ಭಾರತೀಯ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ನೂತನ ಶಿಕ್ಷಣ ನೀತಿ ಜಾರಿಗೊಳಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

    ಜಿಲ್ಲೆಯ ಪ್ರವಾಸ ಕೈಗೊಂಡಿರುವ ಅವರು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ನೂತನ ಶಿಕ್ಷಣ ನೀತಿ ಕುರಿತು ಶಿಕ್ಷಣ ತಜ್ಞರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ವಲಯದ ಮೂರು ವರ್ಷಗಳ ಕಾಲ ಚರ್ಚಿಸಿ ಸಮಗ್ರವಾಗಿ ರೂಪಿಸಲಾಗಿದೆ. 21 ಶತಮಾನಕ್ಕೆ ತಕ್ಕಂತೆ, ದೇಶದ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಅಂತರಾಷ್ಟ್ರೀಯ ಮಟ್ಟದ ಪೈಪೋಟಿಗೆ ಸಿದ್ದಪಡಿಸುವುದು, ಕೌಶಲ್ಯವನ್ನು ಹೆಚ್ಚಿಸವುದು ಶಿಕ್ಷಣ ನೀತಿಯ ಉದ್ದೇಶವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಗದಗಿಗೆ ಸಿಎಂ ಬಾರ್ತಾರೆಂದು ತರಾತುರಿಯಲ್ಲಿ ರಸ್ತೆ ದುರಸ್ತಿ

    ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರುವ ಪ್ರಯತ್ನವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೈಗೊಂಡಿದ್ದಾರೆ. ಭಾರತೀಯರಿಂದ ಭಾರತೀಯ ಮಕ್ಕಳಿಗಾಗಿ ರೂಪಿಸಿರುವ ಶಿಕ್ಷಣ ವ್ಯವಸ್ಥೆ ಇದಾಗಿದೆ ಎಂದರು.

    ಕೋವಿಡ್ ಲಾಕ್‍ಡೌನ್ ತೆರವಿನ ನಂತರ, ಜನರು ಸಾಮಾನ್ಯ ಜೀವನಕ್ಕೆ ಮರಳುತ್ತಿದ್ದಾರೆ. ವ್ಯಾಪಾರ ವಹಿವಾಟುಗಳು ಸಹಜವಾಗಿ ನಡೆಯುತ್ತಿವೆ ಈ ಸಂದರ್ಭದಲ್ಲಿ ಬಂದ್ ಕರೆ ನೀಡುವುದು ಸರಿಯಲ್ಲ. ಪಂಚಮಸಾಲಿ ಮೀಸಲಾತಿಗೆ ಕುರಿತು ಸದನದಲ್ಲಿ ಉತ್ತರಿಸಿದ್ದೇನೆ ಎಂದರು.

    ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ, ಬೃಹತ್ ಮಧ್ಯಮ ಕೈಗಾರಿಕೆ ಸಚಿವ ಮುರಗೇಶ್ ನಿರಾಣಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಪೊಲೀಸ್ ಆಯುಕ್ತ ಲಾಭುರಾಮ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

  • ಸಿದ್ದರಾಮಯ್ಯ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಸಂಸದ ಬಸವರಾಜ್

    ಸಿದ್ದರಾಮಯ್ಯ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಸಂಸದ ಬಸವರಾಜ್

    ತುಮಕೂರು: ಮಾಜಿ ಸಿಎಂ ಸಿದ್ದರಾಮಯ್ಯ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಹಾಗಾಗಿ ಸಿಎಂ ಯಡಿಯೂರಪ್ಪರ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾರೆ ಎಂದು ಸಂಸದ ಜಿ.ಎಸ್.ಬಸವರಾಜ್ ಕಿಡಿಕಾರಿದರು.

    ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನರನ್ನು ಆಕರ್ಷಣೆ ಮಾಡಲು ಸಿದ್ದರಾಮಯ್ಯ ಈ ರೀತಿ ಮಾತನಾಡಬಹುದು, ಆದರೆ ಅವರ ಮಾತು ಸರಿಯಲ್ಲ ಎನ್ನುವ ಮೂಲಕ ಯಡಿಯೂರಪ್ಪರ ವಿರುದ್ಧ ಹಮಾರಾ ಕುತ್ತಾ ಹಮಾರ ಗಲಿಮೇ ಶೇರ್ ಎಂದಿದ್ದ ಸಿದ್ದರಾಮಯ್ಯ ಹೇಳಿಕೆಯನ್ನು ಖಂಡಿಸಿದರು.

    ಸಿದ್ದರಾಮಯ್ಯ ಸೋನಿಯಾ ಗಾಂಧಿ ಮುಂದೆ ಹೋಗಿ ರೋಪ್ ಹಾಕ್ತಾರಾ? ಸೋನಿಯಾ ಗಾಂಧಿ ಮುಂದೆ ನಿಂತು ಕೈ ಮುಗಿತಾರೆ, ಹೊರತು ಏನೂ ಮಾಡಲ್ಲ. ಹಾಗೇನೇ ಯಡಿಯೂರಪ್ಪ ಹೋಗಿ ಮೋದಿ ಅವರನ್ನು ಬೈಯೋಕಾಗುತ್ತಾ? ಎಂದು ಪ್ರಶ್ನಿಸಿದರು.

    ಸಿಎಂ ಬದಲಾವಣೆ ವಿಚಾರ ಕುರಿತು ಮಾತನಾಡಿದ ಅವರು, ಯಡಿಯೂರಪ್ಪ ಸ್ವಂತ ಕ್ವಾಲಿಟಿ ಹೊಂದಿದ್ದಾರೆ. ಪಕ್ಷದಲ್ಲಿ ಹಿಡಿತ ಸಾಧಿಸಿದ್ದಾರೆ. ಪ್ರಬಲ ಸಮುದಾಯವನ್ನು ಪ್ರತಿನಿಸುತ್ತಿದ್ದಾರೆ. ಯಡಿಯೂರಪ್ಪರನ್ನು ಬಿಟ್ಟರೆ ಪರ್ಯಾಯ ನಾಯಕರು ಬಿಜೆಪಿಯಲ್ಲಿ ಇಲ್ಲ. ಸಿದ್ದರಾಮಯ್ಯ ಸಿಎಂ ಆದಗಲೂ ಬದಲಾವಣೆ ಕೂಗು ಕೇಳಿ ಬಂದಿತ್ತು. ಸಿದ್ದರಾಮಯ್ಯರನ್ನು ಬದಲಿಸಿ ದಲಿತ ಸಿಎಂ ಮಾಡಬೇಕು ಎಂಬ ಕೂಗು ಇತ್ತು. ಎಸ್.ಎಂ ಕೃಷ್ಣ ಸಿಎಂ ಆದಾಗ ಮಾತ್ರ ಯಾರೂ ಸಿಎಂ ಬದಲಾವಣೆ ಮಾಡಬೇಕು ಅಂದಿರಲಿಲ್ಲ. ಸ್ವತಃ ವಿರೋಧ ಪಕ್ಷದವರೂ ಚಕಾರ ಎತ್ತಿರಲಿಲ್ಲ ಎಂದರು.

    ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿ ಫೈಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹೈಕಮಾಂಡ್ ಒಪ್ಪಿದರೆ ಡಿಕೆಶಿನೂ ಸಿಎಂ ಆಗಬಹುದು. ಆದರೆ ಜಿ.ಪರಮೇಶ್ವರ್ ಕೇವಲ ಡಿಸಿಎಂ ಆದಾಗಲೇ ಝಿರೋ ಟ್ರಾಫಿಕ್ ಮಾಡಿಕೊಂಡು ಓಡಾಡುತ್ತಿದ್ದರು. ಇನ್ನೇನು ಸಿಎಂ ಆಗಿಬಿಟ್ಟರೆ ಇಡೀ ತುಮಕೂರು ಜಿಲ್ಲೆನೇ ಝಿರೋ ಮಾಡಿಬಿಡುತ್ತಾರೆ. ಸಿಎಂ ಬರುತ್ತಾ ಇದ್ದಾರೆ ಅಂದರೆ ಪೊಲೀಸರು ನಮ್ಮನ್ನ ಮೂತ್ರ ಮಾಡಲಿಕ್ಕೆ ಹೋಗಲೂ ಬಿಡಲ್ಲ ಎಂದು ಜಿ.ಪರಮೇಶ್ವರ್ ವಿರುದ್ಧ ವ್ಯಂಗ್ಯವಾಡಿದರು.

    ಎಚ್‍ಡಿಕೆ ಹಾಗೂ ಸಂಸದೆ ಸುಮಲತಾ ಮಾತಿನ ಸಮರ ಕುರಿತು ಮಾತನಾಡಿದ ಅವರು, ಸುಮಲತಾ ಒಬ್ಬ ಹೈಲಿ ಡಿಗ್ನಿಪೈಡ್ ಮಹಿಳಾ ಸಂಸದೆ. ಅವರು ಸಂಸತ್ತಿನಲ್ಲಿ ಮಾತನಾಡುವ ಗಾಂಭೀರ್ಯತೆ ನೋಡಿದರೆ ನಾವು ಹೆಮ್ಮೆ ಪಡಬೇಕು. ಆದರೆ ಕುಮಾರಸ್ವಾಮಿ ಆ ಹೆಣ್ಣುಮಗಳ ಬಗ್ಗೆ ಹಾಗೇ ಹೇಳಬಾರದಿತ್ತು. ಸಂಸದ ಪ್ರಜ್ವಲ್ ರೇವಣ್ಣರನ್ನ ಕೇವಲ ಸುಮಲತಾ ಮಾತ್ರ ಹೊಗಳಲಿಲ್ಲ. ನಾನು ಹೊಗಳಿದ್ದೇನೆ. ಆತ ಸಂಸತ್ತಿನಲ್ಲಿ ಮಾತಾಡಿದ್ದು ನೋಡಿ ನಾನು ಬೆನ್ನು ತಟ್ಟಿ ಬಂದಿದ್ದೇನೆ. ಇದನ್ನೇ ಮುಂದುವರಿಸು ಎಂದಿದ್ದೇನೆ. ಪ್ರಜ್ವಲ್ ಗೆ ಉತ್ತಮ ರಾಜಕೀಯ ಭವಿಷ್ಯವಿದೆ ಎನ್ನುವ ಮೂಲಕ ಪ್ರಜ್ವಲ್ ರೇವಣ್ಣರನ್ನು ಹೊಗಳಿದರು.  ಇದನ್ನೂ ಓದಿ: ಮಂಡ್ಯದಲ್ಲಿ ಸುಮಲತಾ V/S ಕುಮಾರಸ್ವಾಮಿ – ಹೆಚ್‍ಡಿಕೆ ಪರ ಪ್ರತಾಪ್ ಸಿಂಹ ಬ್ಯಾಟಿಂಗ್

  • ಕಲಬುರಗಿಯಲ್ಲಿ ಹಳದಿ ಕಲ್ಲಂಗಡಿ ಫುಲ್ ಫೇಮಸ್- ಯಲ್ಲೋ ವಾಟರ್‌ಮೆಲನ್‌ಗೆ ಭರ್ಜರಿ ಡಿಮ್ಯಾಂಡ್

    ಕಲಬುರಗಿಯಲ್ಲಿ ಹಳದಿ ಕಲ್ಲಂಗಡಿ ಫುಲ್ ಫೇಮಸ್- ಯಲ್ಲೋ ವಾಟರ್‌ಮೆಲನ್‌ಗೆ ಭರ್ಜರಿ ಡಿಮ್ಯಾಂಡ್

    ಕಲಬುರಗಿ: ಬೇಸಿಗೆ ಕಾಲ ಬಂದ್ರೆ ಸಾಕು ನಾವು ನೀವೆಲ್ಲ ಕೆಂಪ್ಪು ಬಣ್ಣದ ಕಲ್ಲಂಗಡಿಯ ಮೊರೆ ಹೋಗುತ್ತೇವೆ. ಆದರೆ ಕಲಬುರಗಿಯ ಓರ್ವ ಯುವಕ ವಿದೇಶಿ ತಳಿಯ ಹಳದಿ ಕಲ್ಲಂಗಡಿ ಬೆಳೆದು ಸೈ ಎನ್ನಿಸಿಕೊಂಡಿದ್ದಾನೆ.

    ಹೌದು. ಬೇಸಿಗೆ ಕಾವು ಹೆಚ್ಚಾಗ್ತಿದೆ. ಬೆಳಗ್ಗಿನಿಂದಲೇ ಸೂರ್ಯ ಶಿಕಾರಿ ಶುರುವಾಗುತ್ತೆ. ಬೇಸಿಗೆಯಲ್ಲಿ ದಾಹ ನೀಗಿಸೋದ್ರಲ್ಲಿ ಕಲ್ಲಂಗಡಿ ಹಣ್ಣಿಗೆ ಮೊದಲ ಸ್ಥಾನ. ಕಲ್ಲಂಗಡಿ ಅಂದ್ರೆ ಹಸಿರು- ಕೆಂಪು ಇರತ್ತೆ. ಆದರೆ ಹಳದಿ ಬಣ್ಣದ ಕಲ್ಲಂಗಡಿ ಅಂದ್ರೆ ನಂಬಲೇಬೇಕು. ಕಲಬುರಗಿಯ ಯುವಕ ಬೆಳೆದಿರೋ ಹಳದಿ ಬಣ್ಣದ ಕಲ್ಲಂಗಡಿ ಹಣ್ಣು ಫುಲ್ ಫೇಮಸ್ ಆಗಿದೆ.

    ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಕೊರಳ್ಳಿ ಗ್ರಾಮದ ನಿವಾಸಿ ಬಸವರಾಜ್ ಪಾಟೀಲ್ ಬಿ.ಕಾಂ ಪದವೀಧರ. ಆದರೂ ಕೃಷಿಯಲ್ಲಿ ಹೆಚ್ಚು ಉತ್ಸಾಹ ಇರೋದ್ರಿಂದ 2 ಎಕರೆ ಪ್ರದೇಶದಲ್ಲಿ ಮಲೇಷಿಯಾದಲ್ಲಿ ಬೆಳೆಯುವ ಹಳದಿ ಕಲ್ಲಂಗಡಿ ತಳಿಯ ಹಣ್ಣನ್ನು ಬೆಳೆದಿದ್ದಾರೆ. ಇದಕ್ಕೀಗ ಮಾರ್ಕೆಟ್‍ನಲ್ಲಿ ಈ ಹಣ್ಣಿಗೆ ಫುಲ್ ಡಿಮ್ಯಾಂಡ್ ಬಂದಿದೆ.

    ಹಳದಿ ಕಲ್ಲಂಗಡಿ ಹಣ್ಣು ತುಂಬಾ ರುಚಿಕರವಾಗಿದೆ. ಹೆಚ್ಚು ಇಳುವರಿ ಸಹ ಬರುತ್ತದೆ. ಕೆಂಪು ಕಲ್ಲಂಗಡಿ ಹೋಲ್‍ಸೆಲ್ ಪ್ರತಿ ಕೆ.ಜಿಗೆ 6 ರಿಂದ 8 ರೂಪಾಯಿವರೆಗೆ ಮಾರಾಟವಾದ್ರೆ, ಮಲೇಷಿಯಾ ತಳಿಯ ಈ ಹಳದಿ ಕಲ್ಲಂಗಡಿ ಕೆಜಿಗೇ 15 ರೂಪಾಯಿಗೆ ಮಾರಾಟವಾಗುತ್ತಿದೆ.

    ಸದ್ಯ ಕಲಬುರಗಿಯ ಈ ವಾಟರ್‍ಮೆಲನ್ ಹೈದಾರಾಬಾದ್, ಮುಂಬೈಯ ಮಾಲ್‍ಗಳಿಗೆ ಮಾರಾಟವಾಗುತ್ತಿದೆ. ಕೃಷಿಯಲ್ಲಿಯೇ ಮನಸ್ಸು ಮಾಡಿದ್ರೆ ಲಕ್ಷಾಂತರ ರೂಪಾಯಿ ಹೇಗೆ ಸಂಪಾದಿಸಬಹುದು ಎಂಬುದನ್ನ ಬಸವರಾಜ್ ತೋರಿಸಿಕೊಟ್ಟಿದ್ದಾರೆ.

  • ಪ್ರವಾಹ ಪರಿಹಾರ ಪಡೆಯದ ಸಂತ್ರಸ್ತರು ದಡ್ಡರು- ಸಂಸದ ಬಸವರಾಜು

    ಪ್ರವಾಹ ಪರಿಹಾರ ಪಡೆಯದ ಸಂತ್ರಸ್ತರು ದಡ್ಡರು- ಸಂಸದ ಬಸವರಾಜು

    ತುಮಕೂರು: ನೆರೆ ಪರಿಹಾರಕ್ಕಾಗಿ ಸಂತ್ರಸ್ತರೇ ಮುಂದೆ ಬರುತ್ತಿಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿಕೆಯ ಬೆನ್ನಲ್ಲೇ ಇದೀಗ ಸಂಸದ ಸಂಸದ ಜಿ.ಎಸ್ ಬಸವರಾಜು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೆರೆ ಸಂತ್ರಸ್ತರಲ್ಲಿ ಮೂರು ವರ್ಗಗಳಿವೆ. ಇಂಟೆಲೆಕ್ಚುವಲ್(ಬೌದ್ಧಿಕ), ವಿದ್ಯಾವಂತರು ಮತ್ತು ದಡ್ಡರು. ಈ ದಡ್ಡರಿಗೆ ಏನೂ ಗೊತ್ತಿರಲ್ಲ. ಅವರಿಗೆ ಯಾರೂ ಗೈಡ್ ಮಾಡಲ್ಲ. ಅಂತವರು ಪರಿಹಾರ ಪಡೆಯಲು ಬರುತ್ತಿಲ್ಲ. ಅವರನ್ನು ನಾವೇ ಕರೆದುಕೊಂಡು ಬಂದು ಅರ್ಜಿ ಹಾಕಿಸಬೇಕು ಎನ್ನುವುದು ಅವರ ಮನಸ್ಸಿನಲ್ಲಿದೆ ಎಂದು ಸಂಸದರು ತಿಳಿಸಿದ್ದಾರೆ.

    ಕೇಂದ್ರದಿಂದ ನೆರೆಪರಿಹಾರ ಬಂದಿರೋದು ಪ್ರಾಥಮಿಕ ಹಂತ ಅಷ್ಟೇ. ಮುಂದಿನ ದಿನದಲ್ಲಿ ಹೆಚ್ಚಿನ ಪರಿಹಾರ ಬರಲಿದೆ. ಹಿಂದಿನ ಸರ್ಕಾರ ರಾಜ್ಯದ ಬೊಕ್ಕಸ ಖಾಲಿ ಮಾಡಿ ಹೋಗಿತ್ತು. ಈಗ ಯಡಿಯೂರಪ್ಪ ಬಂದ ಮೇಲೆ ಖಜಾನೆ ಸಮತೋಲನ ಕಾಪಾಡಿಕೊಂಡಿದೆ. ಅತ್ಯುತ್ತಮ ರೀತಿಯಲ್ಲಿ ತೆರಿಗೆ ಹಣ ಬರುತ್ತಿದೆ ಎಂದರು. ಇದನ್ನೂ ಓದಿ: ನೆರೆ ಪರಿಹಾರ ಪಡೆಯಲು ಸಂತ್ರಸ್ತರೆ ಮುಂದೆ ಬರುತ್ತಿಲ್ಲ: ಮಾಧುಸ್ವಾಮಿ

    ಇದೇ ವೇಳೆ ಬಸವರಾಜು ಅವರನ್ನ ಕಳ್ಳ ಮತ್ತು ಅಯೋಗ್ಯ ಎಂದು ಕರೆದಿದ್ದ ಎಸ್.ಆರ್ ಶ್ರೀನಿವಾಸ್ ಮೇಲೆ ಹರಿಹಾಯ್ದ ಸಂಸದರು, ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್ ಗೆ ತಲೆಕೆಟ್ಟಿದೆ. ಅವರಿಗೆ ಬುದ್ಧಿ ಭ್ರಮಣೆಯಾಗಿದೆ. ಹಾಗಾಗಿ ದೇವೇಗೌಡರಿಗೂ ಅವರು ಬೈತಾರೆ. ನಾನು ಅವರಷ್ಟು ಕೀಳುಮಟ್ಟಕ್ಕೆ ಇಳಿದು ಮಾತನಾಡಲ್ಲ. ನಾನು ಏನು ಸಹಾಯ ಮಾಡಿದ್ದೇನೆಂದು ಶ್ರೀನಿವಾಸ್ ಅವರ ಅಪ್ಪನಿಗೂ ಗೊತ್ತು. ಆಗ ಇವನು ಚಡ್ಡಿ ಹಾಕಿಕೊಂಡು ತಿರುಗುತ್ತಿದ್ದನು. ಆತ ನನ್ನ ಮುಂದೆ ಬಂದು ಮಾತನಾಡಲಿ ಎಂದು ಕಿಡಿಕಾರಿದರು.

    ಫೋನ್ ಕದ್ದಾಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ನನ್ನ ಫೋನ್ ಕೂಡ ಕದ್ದಾಲಿಕೆ ಆಗಿದೆ. ಕುಮಾರಸ್ವಾಮಿ ಅವಧಿಯಲ್ಲಿ ಸ್ವಾಮೀಜಿ, ರಾಜಕಾರಣಿಗಳು ಲೋಕಸಭಾ ಚುನಾವಣೆಯ ಅಭ್ಯರ್ಥಿಗಳು ಹೀಗೆ ಎಲ್ಲರ ಎಲ್ಲಾ ಫೋನ್ ಕದ್ದಾಲಿಕೆ ಮಾಡಿದ್ದಾರೆ. ಏನಕ್ಕೆ ಮಾಡಿದ್ದಾರೆ ಎಂದು ಅವರನ್ನೇ ಹೋಗಿ ಕೇಳಿ. ನಾನು ಎಚ್‍ಡಿಕೆ ತಂದೆಯ ಎದುರಾಳಿಯಾಗಿದ್ದಕ್ಕೆ ಲೋಕಸಭಾ ಎಲೆಕ್ಷನ್ ಸಮಯದಲ್ಲಿ ನನ್ನ ಫೋನ್ ಕೂಡ ಕದ್ದಾಲಿಕೆ ಮಾಡಿದ್ದಾರೆ ಎಂದು ಸಿಡಿಮಿಡಿಗೊಂಡರು.

  • ಸಂಸದ ಬಸವರಾಜ್ ಜೊತೆಗೆ ಮುದ್ದೆ ಊಟ ಸವಿದ ಪ್ರಜ್ವಲ್ ರೇವಣ್ಣ

    ಸಂಸದ ಬಸವರಾಜ್ ಜೊತೆಗೆ ಮುದ್ದೆ ಊಟ ಸವಿದ ಪ್ರಜ್ವಲ್ ರೇವಣ್ಣ

    ಹಾಸನ: ತುಮಕೂರು ಸಂಸದ ಬಸವರಾಜ್ ಜೊತೆಗೆ ಮುದ್ದೆ ಊಟ ಮಾಡಿದ ಹಾಸನದ ನೂತನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.

    ಸಂಸದ ಪ್ರಜ್ವಲ್ ರೇವಣ್ಣ, ಬಸವರಾಜ್ ಅವರು ಜೊತೆ ಕುಳಿತು ಊಟ ಮಾಡುತ್ತಿರುವ ಫೋಟೋವನ್ನು ಪ್ರಜ್ವಲ್ ರೇವಣ್ಣ ಅಭಿಮಾನಿಗಳು ಟ್ವಿಟ್ಟರ್ ಮತ್ತು ಫೇಸ್‍ಬುಕ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, “ಡೆಲ್ಲಿ ಅಲ್ಲ ಅಮೆರಿಕಕ್ಕೆ ಹೋದ್ರೂ ನಮಗೆ ರಾಗಿ ಮುದ್ದೆ ಇರ್ಬೇಕ್” ಎಂದು ಬರೆದುಕೊಂಡಿದ್ದರು.

    https://twitter.com/NammaMP_Prajwal/status/1146099514907873280

    ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರೆ ಕೆಲವರು ಮೆಚ್ಚುಗೆ ಸೂಚಿಸಿದ್ದಾರೆ. ದೇವೇಗೌಡರು ತಮ್ಮ ಸ್ವಕ್ಷೇತ್ರ ಹಾಸನವನ್ನು ಮೊಮ್ಮಗನಿಗೆ ಬಿಟ್ಟುಕೊಟ್ಟು ತುಮಕೂರಿನಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಈಗ ದೇವೇಗೌಡರನ್ನು ಸೋಲಿಸಿದ ಬಿಜೆಪಿ ಸಂಸದರ ಜೊತೆ ಊಟಮಾಡಿದ ಪ್ರಜ್ವಲ್ ಅವರನ್ನು ಕೆಲವರು ಟೀಕಿಸಿ ಕಾಮೆಂಟ್ ಮಾಡಿದ್ದಾರೆ.

    ಕೆಲವರು ನೀವು ದೇವೇಗೌಡರ ಮೊಮ್ಮಗನಾಗಿದ್ದರೆ ಬಸವರಾಜು ಅವರ ಜೊತೆ ಕುಳಿತು ಊಟ ಮಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಯಾವುದೇ ಕಾರಣಕ್ಕೂ ತುಮಕೂರು ಸಂಸದರ ಜೊತೆ ಕುಳಿತುಕೊಳ್ಳಬಾರದು ಎಂದು ಕಾಮೆಂಟ್ ಮಾಡಿದ್ದಾರೆ.

  • ಅಂಧನಾದ್ರೂ ಒಳಗಣ್ಣಿಂದ ಚಮತ್ಕಾರ- ಥಟ್ ಅಂತ ಲೆಕ್ಕಕ್ಕೆ ಉತ್ತರ ಹೇಳ್ತಾರೆ ಅಥಣಿಯ ಬಸವರಾಜ್

    ಅಂಧನಾದ್ರೂ ಒಳಗಣ್ಣಿಂದ ಚಮತ್ಕಾರ- ಥಟ್ ಅಂತ ಲೆಕ್ಕಕ್ಕೆ ಉತ್ತರ ಹೇಳ್ತಾರೆ ಅಥಣಿಯ ಬಸವರಾಜ್

    ಚಿಕ್ಕೋಡಿ(ಬೆಳಗಾವಿ): ಯಪ್ಪಾ.. ಏನ್ ಕಷ್ಟನಪ್ಪಾ.. ಈ ಗಣಿತ. ಅಂತ ಬಹುಪಾಲು ಜನ ಹೇಳ್ತಿರ್ತಾರೆ. ಆದ್ರೆ, ಕಣ್ಣು ಕಾಣದಿದ್ದರೂ ಯಾವುದೇ ಲೆಕ್ಕವನ್ನ ಬಿಡಿಸಿ ಥಟ್ ಅಂತ ಉತ್ತರ ಹೇಳ್ತಾರೆ ಇವತ್ತಿನ ನಮ್ಮ ಪಬ್ಲಿಕ್‍ಹೀರೋ ಅಥಣಿಯ ಬಸವರಾಜ್.

    ಜನ್ಮ ದಿನಾಂಕ ಹೇಳಿದ ತಕ್ಷಣ ಹುಟ್ಟಿದ ವಾರ ಹೇಳ್ತಿರೋ ಬಸವರಾಜ್, ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದವರು. ಹುಟ್ಟಿನಿಂದಲೇ ಅಂಧರಾಗಿರೋ ಬಸವರಾಜ ಅವರಿಗೆ ಸ್ಮರಣಶಕ್ತಿ ಜಾಸ್ತಿ. ಎಷ್ಟರ ಮಟ್ಟಿಗೆ ಅಂದರೆ ಕ್ಷಣಮಾತ್ರದಲ್ಲಿ ಗುಣಾಕಾರ, ಭಾಗಾಕಾರ, ಕೂಡಿಸೋದು, ಕಳೆಯೋದರ ಜೊತೆಗೆ ಗಣಿತದ ಅನೇಕ ಫಾರ್ಮುಲಾಗಳನ್ನ ಹೇಳ್ತಾರೆ.

    ಅಂಧನಾಗಿದ್ದರೂ ದಿನದ ಯಾವುದೇ ಸಮಯದಲ್ಲಿ ಟೈಮ್ ಕೇಳಿದ್ರೆ ನಿಖರವಾಗಿ ಹೇಳ್ತಾರೆ. ನೋಟ್‍ಗಳನ್ನ ಮುಟ್ಟಿ ಇದು ಇಷ್ಟೇ ಮೌಲ್ಯದ್ದು ಅಂತಾರೆ. ಕುಟುಂಬದ ನಿರ್ವಹಣೆಗಾಗಿ ಬೇರೆ ಬೇರೆ ಶಾಲಾ ಕಾಲೇಜುಗಳಿಗೆ ತೆರಳಿ ಉಪನ್ಯಾಸ ನೀಡ್ತಿದ್ದಾರೆ.

    ಬಸವರಾಜ್ ಅವರ ಈ ಅದಮ್ಯ ಶಕ್ತಿಗೆ ಪ್ರತಿಷ್ಠಿತ ಅಬ್ದುಲ್ ಕಲಾಂ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ ಸೇರಿದಂತೆ ಸಾಕಷ್ಟು ಪ್ರಶಸ್ತಿಗಳು ಸಂದಿವೆ. ಪ್ರಧಾನಿ ಮೋದಿ ಸಹ ಶಹಬ್ಬಾಷ್ ಹೇಳಿದ್ದಾರೆ. ಅಷ್ಟೇ ಅಲ್ಲ, ದುಬೈನ ಸಂಘ ಸಂಸ್ಥೆಗಳೂ ಬೆರಗಾಗಿ ಸನ್ಮಾನ ಮಾಡಿವೆ ಅಂತ ಸ್ಥಳೀಯ ನಿವಾಸಿ ಸಂತೋಷ್ ತಿಳಿಸಿದ್ದಾರೆ.

    ಬಸವರಾಜ್ ಅವರು ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಕ್ರಿಕೆಟ್ ಕಾಮೆಂಟರಿ ಹೇಳ್ತಾರೆ.

    https://www.youtube.com/watch?v=hJjnI-RA890