Tag: ಬಸನಗೌಡ ಯತ್ನಾಳ್

  • ಮೋಜು, ಮಸ್ತಿ ಮಾಡಲು ಕಾಂಗ್ರೆಸ್ ಪಾದಯಾತ್ರೆ: ಯತ್ನಾಳ್

    ಮೋಜು, ಮಸ್ತಿ ಮಾಡಲು ಕಾಂಗ್ರೆಸ್ ಪಾದಯಾತ್ರೆ: ಯತ್ನಾಳ್

    ಬೆಂಗಳೂರು: ಮೋಜು, ಮಸ್ತಿ ಮಾಡಲು ಕಾಂಗ್ರೆಸ್ ಈ ಪಾದಯಾತ್ರೆಯನ್ನು ಮಾಡುತ್ತಿದೆ ಎಂದು ಶಾಸಕ ಬಸನಗೌಡ ಯತ್ನಾಳ್ ವ್ಯಂಗ್ಯವಾಡಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದಯಾತ್ರೆ ಹೆಸರಲ್ಲಿ ಕಾಂಗ್ರೆಸ್ ನಾಟಕವಾಡುತ್ತಿದೆ. ಪಾದಯಾತ್ರೆಗಾಗಿ ಹೋಟೆಲ್ ಬುಕ್ ಮಾಡಿರುವುದಾಗಿ ಕಾಂಗ್ರಸ್ಸಿಗರು ತಿಳಿಸಿದ್ದಾರೆ. ಆದರೆ ಹೋಟೆಲ್ ಬುಕ್ ಮಾಡಿರುವುದು ಪಾದಯಾತ್ರೆಗಲ್ಲ, ರಾತ್ರಿಯಲ್ಲಾ ಮಜಾ ಮಾಡಲು ಎಂದು ವ್ಯಂಗ್ಯವಾಡಿದರು.

    ತಾಕತ್ ಬಗ್ಗೆ ಮಾತನಾಡುವ ಡಿ.ಕೆ. ಶಿವಕುಮಾರ್ ಜಾಮೀನು ಮೇಲೆ ಹೊರಗಡೆ ಇದ್ದಾರೆ. ಇದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ನೀರಾವರಿ ಮಂತ್ರಿ ಇದ್ದಾಗ ಡಿಕೆಶಿ ಏನು ಮಾಡಿದ್ದರು. ಸೋನಿಯಾ ಗಾಂಧಿ ಗೋವಾದಲ್ಲಿ ಕರ್ನಾಟಕಕ್ಕೆ ನೀರು ಕೊಡಬೇಡಿ ಅಂದಿದ್ದರು. ಆಗ ಏನು ಮಾಡದೇ ಸುಮ್ಮನಿದ್ದ ಕಾಂಗ್ರೆಸ್ ಈಗ ನಾಟಕವಾಡುತ್ತಿದೆ ಎಂದರು. ದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆಯನ್ನು ಕಿತ್ತೆಸೆಯುತ್ತೇವೆ: ಸಿದ್ದರಾಮಯ್ಯ

    ಸಿಎಂ ಆಗಲು ಡಿ.ಕೆ. ಶಿವಕುಮಾರ್ ಪಾದಯಾತ್ರೆಯನ್ನು ಮಾಡುತ್ತಿದ್ದಾರೆ. ಇಂತಹವರು ಸಿಎಂ ಆದರೆ ಏನು ಆಗುತ್ತದೆ ಎನ್ನುವುದನ್ನು ಮೊನ್ನೆ ರಾಮನಗರದಲ್ಲಿ ನಡೆದ ಘಟನೆಯನ್ನು ಜನ ನೋಡಿದ್ದಾರೆ ಎಂದ ಅವರು ಕರ್ನಾಟಕದಲ್ಲಿ ಬೆಂಕಿ ಹಚ್ಚಲು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಸಂವಿಧಾನಾತ್ಮಕ ಹಾಗೂ ಜನಪರ: ಬೊಮ್ಮಾಯಿ

  • ಪಂಚಮಸಾಲಿಗಳಿಗೆ ಮೀಸಲಾತಿ ನೀಡೋದಾಗಿ ಸಿಎಂ ಭರವಸೆ ನೀಡಿದ್ದಾರೆ: ಜಯಮೃತ್ಯುಂಜಯ ಸ್ವಾಮೀಜಿ

    ಪಂಚಮಸಾಲಿಗಳಿಗೆ ಮೀಸಲಾತಿ ನೀಡೋದಾಗಿ ಸಿಎಂ ಭರವಸೆ ನೀಡಿದ್ದಾರೆ: ಜಯಮೃತ್ಯುಂಜಯ ಸ್ವಾಮೀಜಿ

    ಧಾರವಾಡ: ಸಿಎಂ ಬಸವರಾಜ ಬೊಮ್ಮಾಯಿ ಅವರು ಪಂಚಮಸಾಲಿಗಳಿಗೆ ಮೀಸಲಾತಿ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ. ಅವರ ಮೇಲೆ ಸಂಪೂರ್ಣ ಭರವಸೆ ಇದೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿಗಳ ಮೀಸಲಾತಿಯ ಪಾದಯಾತ್ರೆ ಹೋರಾಟಕ್ಕೆ ಒಂದು ವರ್ಷ ತುಂಬುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ನಮ್ಮ ತಾಳ್ಮೆಯನ್ನು ಪರೀಕ್ಷಿಸಬಾರದು. ಯಡಿಯೂರಪ್ಪನವರ ಸಂದರ್ಭದಲ್ಲಿ ನಾವು ತಾಳ್ಮೆ ಏರಿಳಿತ ಆಗಿದ್ದನ್ನು ಕಂಡಿದ್ದೇವೆ. ಆದರೆ ಸಿಎಂ ಬೊಮ್ಮಾಯಿ ಅವರು ಇಂದಿನವರೆಗೆ ಯಾರೂ ಸ್ಪಂದಿಸದಷ್ಟು ಅವರು ಸ್ಪಂದಿಸಿದ್ದಾರೆ. ಅವರ ಮೇಲೆ ಸಂಪೂರ್ಣ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಬೊಮ್ಮಾಯಿ ಅವರು ನಮ್ಮ ಹೋರಾಟ ಸಮಿತಿಯ ಅಧ್ಯಕ್ಷರಾದ ಬಸನಗೌಡ ಪಾಟೀಲ್ ಯತ್ನಾಳ, ಸಚಿವ ಸಿ.ಸಿ. ಪಾಟೀಲ್ ಹಾಗೂ ವಿಜಯಾನಂದ ಕಾಶಪ್ಪನವರನ್ನು ಕರೆದು ಮಾತನಾಡಿಸಿದ್ದಾರೆ. ಬೆಳಗಾವಿ ಹೋರಾಟದ ವೇಳೆ ಸಿಎಂ ಅವರೇ ನಮ್ಮ ಸ್ಥಳಕ್ಕೆ ಬಂದು ಇನ್ನಷ್ಟು ಸಮಯಾವಕಾಶ ಕೇಳಿದ್ದರು. ಪದೇ ಪದೇ ಚುನಾವಣೆ ಬಂದಿದ್ದರಿಂದ ಸಭೆ ಮಾಡಲು ಆಗಿಲ್ಲ ಎಂದು ಹೇಳಿದ್ದರು. ಹೀಗಾಗಿ ಅವರಿಗೆ ಸಮಯ ಕೊಡಲಾಗಿತ್ತು ಎಂದರು.

    ನಾವು ಪಾದಯಾತ್ರೆ ಮಾಡಿ ಒಂದು ವರ್ಷ ತುಂಬಲಿದೆ. ಕೇವಲ ಉತ್ತರ ಕರ್ನಾಟಕಕ್ಕೆ ಮಾತ್ರ ಸಿಮೀತವಾಗಿದ್ದ ಪಂಚಮಸಾಲಿ ಸಮಾಜದ ಪಾದಯಾತ್ರೆಯಿಂದಾಗಿ ಮಲೆನಾಡು ಹಾಗೂ ದಕ್ಷಿಣ ಭಾಗದವರೆಗೂ ವಿಸ್ತರಣೆಗೊಂಡಿದೆ. ಹೀಗಾಗಿ ಕೂಡಲ ಸಂಗಮದಲ್ಲಿ ಜನವರಿ 14ರಂದು ಪಂಚಮಸಾಲಿ ಹೋರಾಟದ ವರ್ಷಾಚರಣೆ ಕಾರ್ಯಕ್ರಮ ನಡೆಸಲಿದ್ದೇವೆ. ಸಿಎಂ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಅಲ್ಲಿ ಕೂಡಾ ನಾವು ಮನವಿ ಕೊಡುತ್ತೇವೆ. ಸಿಎಂ ನಮಗೆ ಆ ದಿನ ಎಳ್ಳು, ಬೆಲ್ಲ ಕೊಡಬಹುದು. ಅದೇ ದಿನ ಮೀಸಲಾತಿ ಘೋಷಣೆ ಮಾಡಿದರೆ ಆಶ್ಚರ್ಯ ಪಡೆಬೇಕಾಗಿಲ್ಲ. ಅವರು ಯುಗಾದಿ ಒಳಗಾದರೂ ಸಿಹಿ ಸುದ್ದಿ ಕೊಡುತ್ತಾರೆ ಎಂಬ ಭರವಸೆ ಇದೆ ಎಂದು ಹೇಳಿದರು. ಇದನ್ನೂ ಓದಿ: ತರಕಾರಿ, ಹಣ್ಣುಗಳನ್ನು ಲಂಚವಾಗಿ ಪಡೆಯುತ್ತಿದ್ದ ಅಧಿಕಾರಿಗಳು!

    ಯಡಿಯೂರಪ್ಪ ನಮ್ಮವರು ಎಂದು ನಂಬಿದ್ದೆವು, ಅವರನ್ನು 10 ವರ್ಷ ನಂಬಿದರೂ ಸಹ ಅವರು ಅವಕಾಶ ಪಡೆದುಕೊಳ್ಳಲಾಗಲಿಲ್ಲ. ಶೇ. 90ರಷ್ಟು ನಮ್ಮ ಸಮಾಜ ಯಡಿಯೂರಪ್ಪ ಅವರನ್ನ ಬೆಂಬಲಿಸಿತ್ತು. ಬಿಜೆಪಿ ಸರ್ಕಾರ ಯಾವತ್ತೂ ಈ ಸಮಾಜದ ಕೈಬಿಡಲ್ಲ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು. ಇದನ್ನೂ ಓದಿ: ಜಾರ್ಖಂಡ್‍ ಭೀಕರ ರಸ್ತೆ ಅಪಘಾತ- ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಣೆ

    ಸಿಎಂ ಶಿಗ್ಗಾವಿಯಲ್ಲಿ ಮೂರು ಬಾರಿ ಗೆಲ್ಲಲು ಯಥೆಚ್ಚ ಬೆಂಬಲ ಕೊಟ್ಟಿದ್ದು ಪಂಚಮಸಾಲಿ ಸಮಾಜವಾಗಿದೆ. ಹೀಗಾಗಿ ಸಿಎಂ ಅನ್ಯಾಯ ಮಾಡಲ್ಲ ಎಂಬ ನಂಬಿಕೆ ಇದೆ. ಯತ್ನಾಳ ಅವರು ಒಂದು ವರ್ಷದಿಂದ ಏನೇನು ಹೇಳಿದ್ದಾರೆ ಅದೆಲ್ಲವೂ ಸತ್ಯ ಆಗಿದೆ. ಯತ್ನಾಳ್ ಅವರೇ ಸಿಎಂ ಆದರೂ ಆಗಬಹುದು. ಏನೇ ಬದಲಾವಣೆ ಆದರೂ ನಮ್ಮ ಸಮಾಜಕ್ಕೆ ಬೊಮ್ಮಾಯಿ ಅವರೇ ನ್ಯಾಯ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ತಂದೆ, ಮಗನಿಂದ ಸುಳ್ಳು ಸುದ್ದಿ – ಮತ್ತೆ ಯತ್ನಾಳ್ ಗುಡುಗು

    ತಂದೆ, ಮಗನಿಂದ ಸುಳ್ಳು ಸುದ್ದಿ – ಮತ್ತೆ ಯತ್ನಾಳ್ ಗುಡುಗು

    ವಿಜಯಪುರ: ಬಿಜೆಪಿ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಾಮಾಜಿಕ ಜಾಲತಾಣದಲ್ಲಿ ಹೊಸ ಪೋಸ್ಟ್ ಮಾಡಿದ್ದಾರೆ. ಪೋಸ್ಟ್ ನಲ್ಲಿ ಯತ್ನಾಳ್ ದೆಹಲಿ ಪ್ರಯಾಣದ ಬಗ್ಗೆ ಸ್ಪಷ್ಟನೆ ನೀಡಿದ್ದು, ನಿನ್ನೆ ಮಾಧ್ಯಮಗೋಷ್ಠಿ ನಡೆಸಿ ಯತ್ನಾಳ್ ವಿರುದ್ಧ ಹರಿಹಾಯ್ದಿದ್ದ ಬಿಜೆಪಿ ಸಚಿವರ ವಿರುದ್ಧ ಯತ್ನಾಳ್ ಗುಡುಗಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ಎಲ್ಲರಿಗೂ ನಮಸ್ಕಾರಗಳು
    ರವಿವಾರ ರಾತ್ರಿ ನಾನು ವಿಜಯಪುರದ ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಡಿಯಲ್ಲಿ ನಿರ್ಮಿಸಲಾದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಶಿಶು ನಿಕೇತನ ಶಾಲೆಯ ಸಿ.ಬಿ.ಎಸ್.ಇ ನೊಂದಣಿ ತುರ್ತು ಕಾರ್ಯ ನಿಮಿತ್ತ ನವ ದೆಹಲಿಗೆ ಬಂದಿದ್ದೇನೆ. ನನಗೆ ಪಕ್ಷದ ಹೈಕಮಾಂಡ್ ಯಾವುದೇ ರೀತಿಯ ತುರ್ತು ಬುಲಾವ್ ಆಗಲಿ ಅಥವಾ ಸಮಯ ಕೊಟ್ಟು ನನ್ನ ವಿಚಾರಣೆಗೆ ಕರೆದಿಲ್ಲ.

    ನಾನು ಯಾವುದೇ ನಾಯಕರ ಭೇಟಿಗೆ ಸಮಯ ಕೇಳಲಿಲ್ಲ. ಮಾಧ್ಯಮಗಳಲ್ಲಿ ತಂದೆ ಮತ್ತು ಮಗ ಸುಳ್ಳು ಸುದ್ದಿ ಮಾಡಿಸಿದ್ದಾರೆ. ಬಲ್ಲ ಮೂಲಗಳಿಂದ ಎಂದು ಹೇಳಿಸಿ ಮತ್ತು ಬರೆಸಿ ರಾಜ್ಯದ ಜನರಲ್ಲಿ ಪಕ್ಷದ ಶಾಸಕರು ಮತ್ತು ಕಾರ್ಯಕರ್ತರಲ್ಲಿ ಆತಂಕ ಉಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಯತ್ನಾಳ್‍ಗೆ ಮುಖಭಂಗ, ಬೀಗ್ ಶಾಕ್ ಎಚ್ಚರಿಕೆ ಮತ್ತು ಬಾಯಿಗೆ ಬೀಗ ಅಂತ ವ್ಯವಸ್ಥಿತ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಯಾರನ್ನೂ ಭೇಟಿಯಾಗಿಲ್ಲ ಮತ್ತು ಯಾರ ಸಮಯ ಕೇಳಲಿಲ್ಲ. ನನ್ನ ಹೋರಾಟ ನನ್ನ ಆದರ್ಶ ಗುರು ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಹಾಗೂ ನಮ್ಮ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರ ಸಂಕಲ್ಪದ ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರ ಮುಕ್ತ ಭಾರತದ ಭಾಗವಾಗಿದೆ. ವೈಯಕ್ತಿಕ ವ್ಯಕ್ತಿ ವಿರುದ್ಧ ಅಲ್ಲ. ನನ್ನ ಮಾತೃ ಪಕ್ಷದ ವಿರುದ್ಧ ಅಲ್ಲವೇ ಅಲ್ಲ. ನಿನ್ನೆ ಕರ್ನಾಟಕ ರಾಜ್ಯದ ಇಬ್ಬರು ಸಚಿವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ನನ್ನ ಬಗ್ಗೆ ಮತ್ತು ನಮ್ಮ ಪೂಜ್ಯರ ಬಗ್ಗೆ ಅತ್ಯಂತ ಹಗುರವಾಗಿ ಮಾತನಾಡಿದ್ದಾರೆ. ಅದಕ್ಕೆ ಸೂಕ್ತ ಉತ್ತರ ದೆಹಲಿಯಿಂದ ಬಂದ ಮೇಲೆ ಕೊಡುತ್ತೇನೆ ಎಂದಿದ್ದಾರೆ.

    ಹಿಂದೂ ಸಮಾಜದಲ್ಲಿನ ಸಾಮಾಜಿಕ ನ್ಯಾಯಕ್ಕಾಗಿ ನನ್ನ ಹೋರಾಟ ನಿಲ್ಲುವುದಿಲ್ಲ, ಅಂಜುವುದಿಲ್ಲ, ಬಗ್ಗುವದು ಇಲ್ಲ ಮತ್ತು ಪಲಾಯನ ಇಲ್ಲವೇ ಇಲ್ಲ. ನ: ಧೈನ್ಯಂ ನ: ಪಲಾಯನಮ್
    ಸತ್ಯ ಮೇವ ಜಯತೆ ಎಂದು ಬರೆದು ಪೋಸ್ಟ್ ಹಾಕಿದ್ದಾರೆ.

  • ಬಿಜೆಪಿ ಕೇಂದ್ರ ಶಿಸ್ತು ಸಮಿತಿಯಿಂದ ಯತ್ನಾಳ್‍ಗೆ ಶೋಕಾಸ್ ನೋಟಿಸ್ ಜಾರಿ

    ಬಿಜೆಪಿ ಕೇಂದ್ರ ಶಿಸ್ತು ಸಮಿತಿಯಿಂದ ಯತ್ನಾಳ್‍ಗೆ ಶೋಕಾಸ್ ನೋಟಿಸ್ ಜಾರಿ

    ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಕೇಂದ್ರ ಶಿಸ್ತು ಸಮಿತಿ ಶೋಕಾಸ್ ನೋಟೀಸ್ ಜಾರಿ ಮಾಡಿದೆ.

    ಸಿಎಂ ಯಡಿಯೂರಪ್ಪ ನಾಯಕತ್ವದ ವಿರುದ್ಧ ಹೇಳಿಕೆ, ಸರ್ಕಾರದ ವಿರುದ್ಧ ಬಹಿರಂಗ ಹೇಕೆ ಕುರಿತು ಕೇಂದ್ರ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿದೆ. ಈಗ ಅಳೆದು ತೂಗಿ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಶೋಕಾಸ್ ನೋಟೀಸ್ ನೀಡಿದೆ.

    ಪಕ್ಷ ವಿರೋಧಿ ಚಟುವಟಿಕೆ, ಅಶಿಸ್ತು ಉಲ್ಲೇಖಿಸಿ ನೋಟೀಸ್ ಜಾರಿ ಮಾಡಿದೆ. ನಾಯಕತ್ವ ವಿಚಾರ, ಸಿಎಂ ಬದಲಾವಣೆ, ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಟೀಕೆಗಾಗಿ ಶೋಕಾಸ್ ನೋಟಿಸ್ ನೀಡಲಾಗಿದೆ.

    ಶಾಸಕ ಬಸನಗೌಡ ಯತ್ನಾಳ್ ಗೆ ಮೂಗುದಾರ ಹಾಕುವಂತೆ ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದರು. ಕೇಂದ್ರ ಶಿಸ್ತು ಸಮಿತಿ ಕ್ರಮಕ್ಕೆ ಸಿಎಂ ಆಗ್ರಹಿಸಿದ್ದರು. ನಾಯಕತ್ವ ಬದಲಾವಣೆ ವಿಚಾರದಲ್ಲಿ ಪದೇ ಪದೇ ಮಾತನಾಡುತ್ತಿದ್ದಕ್ಕೆ ಆಕ್ರೋಶ ವ್ಯಕ್ತವಾಗಿತ್ತು. ಯತ್ನಾಳ್ ಬಿಜೆಪಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಹೈಕಮಾಂಡ್ ಬಿ ಫಾರಂ ನೀಡಿದೆ. ಕ್ರಮ ಕೈಗೊಳ್ಳಲು ಕೇಂದ್ರ ಶಿಸ್ತು ಸಮಿತಿಯೇ ನಿರ್ಧರಿಸಬೇಕು. ಹೀಗಾಗಿ ರಾಜ್ಯ ಬಿಜೆಪಿ ಇಷ್ಟು ದಿನ ಕೈ ಕಟ್ಟಿ ಕುಳಿತಿತ್ತು.

    ಈ ಮೂಲಕ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಗೆ ಒಟ್ಟು ಎರಡು ಸಲ ಶೋಕಾಸ್ ನೋಟಿಸ್ ನೀಡಿದಂತಾಗಿದೆ. 2019ರ ಅಕ್ಟೋಬರ್‍ನಲ್ಲಿ ಉತ್ತರ ಕರ್ನಾಟಕ ಪ್ರವಾಹದ ಬಗ್ಗೆ ಬೇಸರದಿಂದ ದೆಹಲಿ ವರಿಷ್ಠರ ವಿರುದ್ಧವೇ ವಾಗ್ದಾಳಿ ನಡೆಸಿದ್ದ ವಿಚಾರಕ್ಕೆ ಕೇಂದ್ರದ ಶಿಸ್ತು ಸಮಿತಿಯಿಂದ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಈ ವೇಳೆ ನಾನು ನನ್ನ ಇತಿಮಿತಿಯಲ್ಲೇ ಮಾತಾಡಿದ್ದೇನೆ, ಯಾರ ವಿರುದ್ಧವೂ ಮಾತಾಡಿಲ್ಲ, ಜನರ ಬವಣೆ ನೋಡಿ ಮಾತಾಡಿದೆ ಎಂದು ಯತ್ನಾಳ್ ಕಾರಣ ಕೊಟ್ಟಿದ್ದರು.

  • ಅನಾರೋಗ್ಯದ ನಡುವೆಯೂ ಜನಸೇವೆ ಮಾಡಿದ ಯತ್ನಾಳ್

    ಅನಾರೋಗ್ಯದ ನಡುವೆಯೂ ಜನಸೇವೆ ಮಾಡಿದ ಯತ್ನಾಳ್

    ವಿಜಯಪುರ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅನಾರೋಗ್ಯದ ನಡುವೆಯೂ ಜನಸೇವೆ ಮಾಡಿದ್ದಾರೆ.

    ಮಂಗಳವಾರದಿಂದ ಯತ್ನಾಳ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹಾಗಾಗಿ ವೈದ್ಯರು ಯತ್ನಾಳ್ ಅವರಿಗೆ ಡ್ರಿಪ್ ಹಾಕಿ ವಿಶ್ರಾಂತಿ ಮಾಡುವಂತೆ ಸೂಚಿಸಿದ್ದಾರೆ. ವೈದ್ಯರ ಮಾತನ್ನು ಲೆಕ್ಕಿಸದೇ ಯತ್ನಾಳ್ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ.

    ಯತ್ನಾಳ್ ಮೊದಲು ವಿಜಯಪುರ ನಗರದ ವಾರ್ಡ್ ಸಂಖ್ಯೆ 4ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಳಿಕ ಪುರಾತನ ಬಾವಿ ಜೀರ್ಣೋದ್ಧಾರ ಹಾಗೂ ಗಂಗಾ ಪೂಜೆಯಲ್ಲಿ ಯತ್ನಾಳ್ ಭಾಗವಹಿಸುವ ಮೂಲಕ ಜನಸೇವೆಯಲ್ಲಿ ತೊಡಗಿಕೊಂಡರು.

    ವೈದ್ಯರು ಯತ್ನಾಳ್ ಅವರ ಬಲಗೈಗೆ ಸಲಾಯಿನ್ ಸೆಟ್ ಅಳವಡಿಸಿದ್ದಾರೆ. ಹೀಗಿದರೂ ಯತ್ನಾಳ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

  • ನಿಮ್ಮ ಮೇಲೆ ಯಾಕೆ ಕ್ರಮ ಕೈಗೊಳ್ಳಬಾರದು – ಯತ್ನಾಳ್‍ಗೆ ಬಿಜೆಪಿಯಿಂದ ಶೋಕಾಸ್ ನೋಟಿಸ್

    ನಿಮ್ಮ ಮೇಲೆ ಯಾಕೆ ಕ್ರಮ ಕೈಗೊಳ್ಳಬಾರದು – ಯತ್ನಾಳ್‍ಗೆ ಬಿಜೆಪಿಯಿಂದ ಶೋಕಾಸ್ ನೋಟಿಸ್

    ನವದೆಹಲಿ: ಪ್ರವಾಹಕ್ಕೆ ಅನುದಾನ ಪ್ರಕಟಿಸದ್ದಕ್ಕೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸಂಸದರ ವಿರುದ್ಧ ಬಹಿರಂಗವಾಗಿ ಆಕ್ರೋಶ ಹೊರ ಹಾಕಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಪಕ್ಷದ ಕೇಂದ್ರ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದೆ.

    ನೆರೆ ಪರಿಹಾರವನ್ನು ಪ್ರಶ್ನಿಸಿ ರಾಜ್ಯ ಸಂಸದರ ಹೇಳಿಕೆಗಳನ್ನು ಯತ್ನಾಳ್ ಅವರು ಟೀಕೆ ಮಾಡಿದ್ದರು. ಅಲ್ಲದೇ ಸಂಸದ ಈ ನಡೆಯಿಂದ ಮೋದಿ ಸರ್ಕಾರದ ಮೇಲೆ ಕೆಟ್ಟ ಅಭಿಪ್ರಾಯ ಮೂಡುತ್ತಿದೆ ಎಂದಿದ್ದರು.

     

    ಯತ್ನಾಳ್ ಅವರ ಈ ಹೇಳಿಕೆಯಿಂದ ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ್ದಾರೆ ಎಂದು, ಕೇಂದ್ರ ಶಿಸ್ತು ಸಮಿತಿಯ ಓಂ ಪಾಠಕ್ ಅವರು ನೋಟಿಸ್ ನೀಡಿದ್ದಾರೆ. ನೆರೆ ಪರಿಹಾರ ನೀಡಲು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಟೀಕೆ ಮಾಡಿರುವ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ. ಅಲ್ಲದೇ ಈ ಹೇಳಿಕೆಯ ಹಿನ್ನೆಲೆಯಲ್ಲಿ ನಿಮ್ಮ ವಿರುದ್ಧ ಪಕ್ಷ ಏಕೆ ಶಿಸ್ತುಕ್ರಮ ಕೈಗೊಳ್ಳಬಾರದು ಎಂಬುವುದರ ಕುರಿತು ವಿವರಣೆಯನ್ನು 10 ದಿನಗಳ ಒಳಗೆ ನೀಡಲು ಸೂಚನೆ ನೀಡಿದ್ದಾರೆ. ನೋಟಿಸ್ ವಿವರಣೆ ನೀಡದಿದ್ದರೆ ಪಕ್ಷದ ನಿಯಮಗಳ ಅನ್ವಯ ಶಿಸ್ತುಕ್ರಮಕ್ಕೆ ಒಳಪಡಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

    ನೋಟಿಸ್‍ನಲ್ಲೇನಿದೆ?
    ಕೇಂದ್ರ ಶಿಸ್ತು ಸಮಿತಿ ಸದಸ್ಯ ಕಾರ್ಯದರ್ಶಿಯಾಗಿರುವ ಓಂ ಪಾಠಕ್ ಅವರಿಂದ ನೋಟಿಸ್ ಜಾರಿಯಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಪಕ್ಷದ ನಾಯಕರಾಗಿ ಮಾಧ್ಯಮಗಳಲ್ಲಿ ಸುಳ್ಳು ಹೇಳಿಕೆ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೇ ಕರ್ನಾಟಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಸರ್ಕಾರ ಗಮನ ನೀಡುತ್ತಿಲ್ಲ ಎಂಬ ಆರೋಪವನ್ನು ಮಾಡಿ ಸರ್ಕಾರ ಮೇಲೆ ಜನರಿಗೆ ಋಣಾತ್ಮಕ ಅಭಿಪ್ರಾಯ ಮೂಡುವಂತೆ ಮಾಡಿದ್ದೀರಿ. ಈ ಬಗ್ಗೆ ಪಕ್ಷದ ನಾಯಕರಾಗಿ ವಿವರಣೆ ನೀಡಿ ಎಂದು ಸೂಚಿಸಲಾಗಿದೆ.

    ಯತ್ನಾಳ್ ಹೇಳಿದ್ದೇನು?
    ಪರಿಹಾರ ಕೊಡಿಸುವಲ್ಲಿ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಅಂತ ನಮೋ ಬ್ರಿಗೇಡ್‍ನ ಚಕ್ರವರ್ತಿ ಸೂಲಿಬೆಲೆ ಟೀಕಿಸಿದ್ದರು. ಸೂಲಿಬೆಲೆ ಅವರ ಈ ಹೇಳಿಕೆ ಬೆಂಬಲ ನೀಡಿದ್ದ, ಬಿಜೆಪಿ ಶಾಸಕ ಯತ್ನಾಳ್ ಅವರು, ಸೂಲಿಬೆಲೆಗೆ ಬೈಯ್ದು, ಪ್ರಧಾನಿ ಮೋದಿಗೆ ಅವಮಾನ ಮಾಡಬೇಡಿ. ರಾಜ್ಯದ ಸಂಸದರು ಕೆಲಸಕ್ಕೆ ಬಾರದವರಾಗಿದ್ದಾರೆ. ಹುಬ್ಬಳ್ಳಿ- ಬೆಂಗಳೂರಿನಲ್ಲಿ ಇರುವ ಬದಲು ಮೊದಲು ದೆಹಲಿಗೆ ಹೋಗಿ ಕೆಲಸ ಮಾಡಿ. ಅನಂತಕುಮಾರ್ ಬದುಕಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಆಕ್ರೋಶ ಹೊರಹಾಕಿದ್ದರು.

  • ಅನಂತ್‍ಕುಮಾರ್ ಹೆಗಡೆ ಓರ್ವ ಮಾನಸಿಕ ಅಸ್ವಸ್ಥ, ಮನುಷ್ಯನೇ ಅಲ್ಲ: ಸಿದ್ದರಾಮಯ್ಯ ವ್ಯಂಗ್ಯ

    ಅನಂತ್‍ಕುಮಾರ್ ಹೆಗಡೆ ಓರ್ವ ಮಾನಸಿಕ ಅಸ್ವಸ್ಥ, ಮನುಷ್ಯನೇ ಅಲ್ಲ: ಸಿದ್ದರಾಮಯ್ಯ ವ್ಯಂಗ್ಯ

    ಬಾಗಲಕೋಟೆ: ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್‍ಕುಮಾರ್ ಹೆಗಡೆ ಓರ್ವ ಮಾನಸಿಕ ಅಸ್ವಸ್ಥ. ಅವನು ನನ್ನ ಪ್ರಕಾರ ಮನುಷ್ಯನೇ ಅಲ್ಲ. ಆತನಿಗೆ ಕನಿಷ್ಠ ಸಂಸ್ಕಾರವಿಲ್ಲ ಕೇಂದ್ರದಲ್ಲಿ ಮಂತ್ರಿ ಬೇರೆ, ನಾಚಿಕೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

    ಸ್ಥಳೀಯ ಸಂಸ್ಥೆ ಹಾಗೂ ಪರಿಷತ್ ಚುನಾವಣಾ ಪ್ರಚಾರದ ನಿಮಿತ್ತ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ, ಅನಂತ್ ಕುಮಾರ್ ಹೆಗಡೆ ಕ್ಯಾನ್ಸರ್ ಇದ್ದ ಹಾಗೆ. ಅವರನ್ನು ಸಂಪುಟದಲ್ಲಿ ಇಟ್ಟುಕೊಂಡ ಪ್ರಧಾನಿ ನರೇಂದ್ರ ಮೋದಿಗೂ ನಾಚಿಕೆ ಇಲ್ಲ ಎಂದು ವ್ಯಂಗ್ಯವಾಡಿದರು.

    ಬುರ್ಕಾ ಹಾಕಿದವರು, ಗಡ್ಡ ಬಿಟ್ಟವರು, ಟೋಪಿ ಹಾಕಿದವರು ನಮ್ಮ ಬಳಿಗೆ ಬರಬಾರದು ಅಂತಾ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಅನಂತ್‍ಕುಮಾರ್ ಹೆಗಡೆ ಹೇಳುತ್ತಾರೆ. ಇವರಿಗೆ ಮನುಷತ್ವ ಇದೆಯಾ? ಇಂತವರಿಗೆ ಮತ ಹಾಕಬೇಕಾ ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದ ಸಿದ್ದರಾಮಯ್ಯ ಶಾಸಕ ಶ್ರೀರಾಮುಲು ನಾನು ಕೆಲಸ ಮಾಡಿಲ್ಲವೆಂದು ಆರೋಪಿಸಿದ್ದಾರೆ. ಹಾಗಾದರೆ ನನ್ನಷ್ಟು ಕೆಲಸವನ್ನು ಅವರು ಮಾಡಿ ತೋರಿಸಲಿ ಎಂದು ಸವಾಲು ಎಸೆದರು.

    ನಮ್ಮ ಸೋಲಿಗೆ ಬಿಜೆಪಿ ಅಪಪ್ರಚಾರವೇ ಕಾರಣ. ನನ್ನನ್ನು ಹಿಂದೂ ವಿರೋಧಿ ಅಂತಾರೆ. ನಾನು ಹಿಂದೂ ವಿರೋಧಿನಾ? ಗಾಂಧೀಜಿ ಅವರು ಹಿಂದೂ ಹಾಗೂ ಮುಸ್ಲಿಮರು ಒಂದಾಗಿ ಅಂತಾ ಸಲಹೆ ನೀಡಿದ್ದರು. ಹೆಸರಿಗೆ ಮಾತ್ರ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ’. ಇದು ನಾಟಕ ಅಷ್ಟೇ, ಎಲ್ಲವೂ ‘ಸಬ್ ಕಾ ಸತ್ಯಾನಾಶ್’ ಆಗಿದೆ ಎಂದು ದೂರಿದರು.

    ಬಿಜೆಪಿಯವರು ಮೀಸಲಾತಿ ತೆಗೆದು ಹಾಕಲು ಹಾಗೂ ಸಂವಿಧಾನ ಬದಲಾವಣೆ ಮಾಡಲು ಮುಂದಾಗುತ್ತಿದ್ದಾರೆ. ನಾನು ಕೇವಲ ಪ್ರಚಾರಕ್ಕಾಗಿ ಈ ಮಾತುಗಳನ್ನು ಹೇಳುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಯನ್ನು ಗುರುತಿಸಿ ಮತದಾನ ಮಾಡಿ ಎಂದು ರಾಜ್ಯದ ಬಿಜೆಪಿ ನಾಯಕರು ಕೇಳುತ್ತಾರೆ. ಎರಡು ಕೋಟಿ ಜನರಿಗೆ ಉದ್ಯೋಗ ಕೊಡುವುದಾಗಿ ಪ್ರಧಾನಿ ಭರವಸೆ ನೀಡಿ, ಈಡೇರಿಸಲಿಲ್ಲ. ‘ಮನ್ ಕೀ ಬಾತ್’ ಎಂದು ಹೇಳುತ್ತಾರೆ. ಆದರೆ ಅದರಿಂದ ಹೊಟ್ಟೆ ತುಂಬಲ್ಲ, ‘ಕಾಮ್ ಕೀ ಬಾತ್’ ಆಗಬೇಕು ಎಂದು ಕೇಂದ್ರದ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv