Tag: ಬಸನಗೌಡ ಪಾಟೀಲ್

  • ವಿಜಯೇಂದ್ರ ಕುಟುಂಬದವರೇ ಹಾವು ಚೇಳುಗಳು: ಯತ್ನಾಳ್

    ವಿಜಯೇಂದ್ರ ಕುಟುಂಬದವರೇ ಹಾವು ಚೇಳುಗಳು: ಯತ್ನಾಳ್

    – ಬಿಎಸ್‍ವೈಗೆ ಮುಕ್ತವಾಗಿ ಕೆಲಸ ಮಾಡಲು ಬಿಡುತ್ತಿಲ್ಲ
    – ಮಾರಿಷಸ್‍ಗೆ ಹೋಗಿದ್ದು ಯಾಕೆ?

    ವಿಜಯಪುರ: ಹಾವು ಚೇಳುಗಳು ಅವರ ಮನೆಯಲ್ಲಿಯೇ ಇದೆ. ವಿಜಯೇಂದ್ರ ಕುಟುಂಬದವರೇ ಹಾವು ಚೇಳುಗಳು ಎಂದು ಯತ್ನಾಳ್ ವಿಜಯೇಂದ್ರ ವಿರುದ್ಧ ಕಿಡಿಕಾರಿದ್ದಾರೆ.

    ವಿಜಯಪುರದಲ್ಲಿ ಮಾತನಾಡಿದ ಅವರು, ಹಾವು ಚೇಳುಗಳು ಎಲ್ಲೂ ಇಲ್ಲ. ವಿಜಯೇಂದ್ರ ಕುಟುಂಬದವರೇ ಹಾವು ಚೇಳುಗಳು. ಪಾಪ ಯಡ್ಡಿಯೂರಪ್ಪನವರಿಗೆ ಮುಕ್ತವಾಗಿ ಕೆಲಸ ಮಾಡಲು ಬಿಡುತ್ತಾನೆ ಇಲ್ಲ. ಕಾವೇರಿ ಮನೆಯಲ್ಲಿ ಒಂದು ರೀತಿ ಯಡ್ಡಿಯೂರಪ್ಪನವರನ್ನು ಹಿಡಿದಿಟ್ಟುಕೊಂಡಿದ್ದಾರೆ. ಯಡ್ಡಿಯೂರಪ್ಪ ಸಿಎಂ ಆಗುವ ಮುನ್ನ ಅವರ ಮನೆಯಲ್ಲಿ ಯಾರು ಇರುತ್ತಿರಲಿಲ್ಲ. ಅಲ್ಲಿ ಅಡುಗೆ ಮಾಡುವವರು, ಉಸ್ತುವಾರಿ ಮಾಡುವವರು ಮಾತ್ರ ಇರುತ್ತಿದ್ದರು. ಈಗ ಸಿಎಂ ಅದ ತಕ್ಷ ಇಡೀ ಕುಟುಂಬ ಬಂದು ಕಾವೇರಿ ಮನೆ ಸೇರಿಬಿಟ್ಟಿದ್ದಾರೆ ಎಂದು ದೂರಿದರು.

    ಇದೇ ರೀತಿ ಮುಂದುವರೆದರೆ ಪಕ್ಷಕ್ಕೆ ಹಾನಿ ಆಗುತ್ತದೆ. ನಿಮ್ಮ ಕುಟುಂಬದಲ್ಲಿರುವವರು ಒಬ್ಬರು ರಾಜಕಾರಣ ಮಾಡಿ. ಉಳಿದವರು, ನಿಮಗೆ ಸಾಕಷ್ಟು ಉದ್ಯೋಗಗಳಿವೆ, ಸಾಕಷ್ಟು ಮನೆಗಳಿವೆ ಅದನ್ನು ಮಾಡಿ ಎಂದು ಸಲಹೆ ನೀಡಿದರು. ಸಿಎಂ ಮನೆಯಲ್ಲಿ ಕುಳಿತು ವಸೂಲಿ ಏನು ಮಾಡುತ್ತಿದ್ದಿರಿ? ವರ್ಗಾವಣೆ ದಂಧೆ ಏನು ಮಾಡುತ್ತಿದ್ದಿರಿ? ಇದೆಲ್ಲವನ್ನು ನೀವೆ ಮಾಡುತ್ತಿದ್ದಿರಿ? ಯಡ್ಡಿಯೂರಪ್ಪನವರಿಗೆ ಪಾಪ ವಯಸ್ಸಾಗಿದೆ. ಅವರಿಗೇನು ತಿಳಿತಾ ಇಲ್ಲ. ಅದನ್ನ ಇಡೀ ಕುಟುಂಬದ ಮಕ್ಕಳು, ಮೊಮ್ಮಕ್ಕಳು ದುರಪಯೋಗ ತಗೆದುಕೊಳ್ಳುತ್ತಿದ್ದಾರೆ ಎಂದರು.

    ಸುಮಾರು 35 ಜನ ಕಾವೇರಿ ಗೃಹದಲ್ಲಿದ್ದಾರೆ. ಅಲ್ಲದೆ ಮೊನ್ನೆ ಇಡೀ ಕುಟುಂಬ ವಿಶೇಷ ವಿಮಾನ ತೆಗೆದುಕೊಂಡು ಮಾರಿಷಸ್‍ಗೆ ಹೋಗಿದ್ದಾರೆ. ಅಲ್ಲೇನು ಕೆಲಸ ಇತ್ತು. ಅಲ್ಲಿ ಏನು ಹಣದ ವ್ಯವಹಾರ ಆಯ್ತು. ಇದು ನಾಡಿನ ಜನರಿಗೆ ಗೊತ್ತಾಗಬೇಕು ಎಂದರು.

    ಭ್ರಷ್ಟಾಚಾರದ ವಿರುದ್ದ ಕುಟುಂಬ ಶಾಹಿ ವಿರುದ್ಧ ನಮ್ಮ ಹೋರಾಟ ಇದೆ. ನಮ್ಮ ಹೋರಾಟ ಬಿಜೆಪಿ ವಿರುದ್ಧ ಅಲ್ಲ. ನಮ್ಮ ಹೋರಾಟ ತತ್ವಾಧಾರಿತ ಹೋರಾಟ. ಅದಕ್ಕೆ ಯಡ್ಡಿಯೂರಪ್ಪ ನವರು ಸಾಕಷ್ಟು ದುಡಿದಿದ್ದಾರೆ ಅವರನ್ನ ಮುಕ್ತವಾಗಿ ಬಿಡಿ ಎಂದರು.

    ಎಂದಿಗೂ ಲಿಂಗಪೂಜೆ ಮಾಡದ ವಿಜಯೇಂದ್ರ ಚಿತ್ರದುರ್ಗ ಸ್ವಾಮೀಜಿ ಹಿಡಿದುಕೊಂಡು ಲಿಂಗಪೂಜೆ ಮಾಡಿ ಫೋಟೋ ತೆಗೆಸಿಕೊಂಡಿದ್ದಾರೆ. ಪ್ರತಿದಿನ ಪೂಜೆ ಮಾಡುತ್ತಾರೆ. ಬರೀ ನಾಟಕ ಕಂಪನಿ 10ಕೋಟಿ ರೂ. ಖರ್ಚು ಮಾಡಿ ಬೆಂಗಳೂರಿನಲ್ಲಿ ಚಿತ್ರದುರ್ಗ ಸ್ವಾಮೀಜಿಗಳನ್ನು ಹಿಡಿದುಕೊಂಡು ಕಾರ್ಯಕ್ರಮ ಮಾಡಿದರು. ಅಂದು ಸುತ್ತೂರು ಸ್ವಾಮೀಜಿ ಇವರಿಗೆ ನೆನಪಿಗೆ ಬರಿಲಿಲ್ಲ. ಈಗ ಮೈಸೂರಿಗೆ ಹೋಗಿ ಸುತ್ತೂರು ಸ್ವಾಮೀಜಿಗಳಿಗೆ ಜೈ ಎಂದು ಹೇಳುತ್ತಾರೆ. ಅವರು ಸಿಗದಿದ್ದರೆ ಮುಂದೆ ತುಮಕೂರು ಸ್ವಾಮೀಜಿಗಳನ್ನು ಹಿಡಿದುಕೊಂಡು ಜೈ ಎನ್ನುತ್ತಾರೆ. ಅಲ್ಲಿಯೂ ಲಾಭವಾಗದಿದ್ದರೆ ಅಮಿತ್‍ಗೆ ಶಾ ಜೈ ಎನ್ನುತ್ತಾರೆ ಎಂದು ವಿಜಯೇಂದ್ರ ಕಾಲೆಳೆದರು.

    ವಿಜಯೇಂದ್ರ ಇವತ್ತು ಸುತ್ತುರು ಶ್ರೀಗಳಿಗೆ ನೇತೃತ್ವ ತಗೆದುಕೊಳ್ಳಲು ಹೇಳುತ್ತಿದ್ದಾರೆ. ಮೊನ್ನೆ ವೀರಶೈವ ಲಿಂಗಾಯತರನ್ನು ಒಡೆಯಲು ಪ್ರಯತ್ನ ಮಾಡಿದರು. ವಿಫಲ ಆಯ್ತು, ಇದೀಗ ಸುತ್ತೂರು ಶ್ರೀಗಳ ಆಶ್ರಯಕ್ಕೆ ಹೋಗುತ್ತಾರೆ. ತಮಗೆ ಹೇಗೆ ಬರುತ್ತೆ ಹಾಗೆ ವೀರಶೈವ ಲಿಂಗಾಯತರು ಇವರಿಗೆ ಅನುಕೂಲ ಆಗುವ ರೀತಿಯಲ್ಲಿ ಕೆಲಸ ಮಾಡಬೇಕು ಎಂದರು.

  • ‘ವಿಧಾನಸೌಧದಲ್ಲಿ ಕುಳಿತುಕೊಳ್ಳೋರು, ಗೂಟದ ಕಾರು ಬೇಕೆನ್ನೋರಿಗೆ ಸಚಿವ ಸ್ಥಾನ ಕೊಡ್ಬೇಡಿ’

    ‘ವಿಧಾನಸೌಧದಲ್ಲಿ ಕುಳಿತುಕೊಳ್ಳೋರು, ಗೂಟದ ಕಾರು ಬೇಕೆನ್ನೋರಿಗೆ ಸಚಿವ ಸ್ಥಾನ ಕೊಡ್ಬೇಡಿ’

    – ಬಿಎಸ್‍ವೈಗೆ ಯತ್ನಾಳ್ ಸಲಹೆ

    ಹುಬ್ಬಳ್ಳಿ: ತೀವ್ರ ಕಂಗ್ಗಟ್ಟಾಗಿರುವ ಸಂಪುಟ ವಿಸ್ತರಣೆಯನ್ನ ಶುಕ್ರವಾರದೊಳಗೆ ಮಾಡಿ. ಸಂಪುಟ ವಿಸ್ತರಣೆ ಅನ್ನೋದು ಒಂದು ರೀತಿ ಪ್ರಹಸನವಾಗಿದೆ. ಬೆಳಗ್ಗೆಯಿಂದ ರಾತ್ರಿಯವರೆಗೂ ಬರೀ ಮಾಧ್ಯಮಗಳಲ್ಲಿ ಸಂಪುಟ ವಿಸ್ತರಣೆಯದ್ದೇ ಚರ್ಚೆಯಾಗುತ್ತಿದೆ. ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳ ಬಗ್ಗೆ ಗಮನಹರಿಸಬೇಕಾಗಿದೆ. ಅದಕ್ಕಾಗಿ ಸಂಪುಟ ವಿಸ್ತರಣೆ ಅತ್ಯಗತ್ಯವಾಗಿದೆ ಎಂದು ಕೇಂದ್ರದ ಮಾಜಿ ಸಚಿವ, ಶಾಸಕ ಬಸನಗೌಡ ಪಾಟೀಲ ಸಲಹೆ ನೀಡಿದ್ದಾರೆ.

    ಹುಬ್ಬಳ್ಳಿಯಲ್ಲಿಂದು ನೈರುತ್ಯ ರೈಲ್ವೆ ವಲಯದ ವಿಭಾಗದ ರಸ್ತೆ ಮೇಲ್ಸೇತುವೆ ಲೋಕಾರ್ಪಣೆ ಸಮಾರಂಭಕ್ಕೂ ಮುನ್ನ ಮಾತನಾಡಿದ ಅವರು, ಸಂಪುಟ ವಿಸ್ತರಣೆಗೆ ಹೈಕಮಾಂಡ್ ಹಾಗೂ ಸಿಎಂ ಸೂಕ್ತ ಕೈಗೊಳ್ಳಬೇಕು. ಸಂಪುಟ ವಿಸ್ತರಣೆ ವೇಳೆ ಕೆಲವರು ತ್ಯಾಗ ಮಾಡಲಿ. ನನಗೂ ಸಚಿವ ಸ್ಥಾನ ಕೊಡಬೇಕಿತ್ತು. ಆದರೆ ನಾನು ಕೂಡ ತ್ಯಾಗ ಮಾಡಿದ್ದೇನೆ. ನಾನು ಸಚಿವ ಸ್ಥಾನದ ಆಕ್ಷಾಂಕಿಯಲ್ಲ. ಅಲ್ಲದೇ ಕೇವಲ ವಿಧಾನಸೌಧದಲ್ಲಿ ಕುಳಿತುಕೊಳ್ಳುವವರಿಗೆ ಸಚಿವ ಸ್ಥಾನ ನೀಡಬಾರದು. ಗೂಟದ ಕಾರು ಬೇಕು ಎನ್ನುವವರಿಗೆ ಸಚಿವ ಸ್ಥಾನ ನೀಡಬಾರದು. ಕೆಲಸ ಮಾಡುವವರಿಗೆ ಸಚಿವ ಸ್ಥಾನ ನೀಡಲಿ ಎಂದು ಸಿಎಂ ಬಿಎಸ್‍ವೈಗೆ ಯತ್ನಾಳ್ ಸಲಹೆ ನೀಡಿದರು.

    ಸಂಪುಟ ವಿಸ್ತರಣೆ ವೇಳೆ ಮೊದಲು ಪಕ್ಷಕ್ಕೆ ಬಂದವರಿಗೆ ಸಚಿವ ಸ್ಥಾನ ಹಂಚಿಕೆ ಮಾಡಲಿ. ಅವರು ಪಕ್ಷಕ್ಕೆ ಬಂದಿದ್ದಕ್ಕೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅವರು ಬಿಜೆಪಿಗೆ ಬರದಿದ್ದರೆ ನಾವೂ ಮೂರೂವರೆ ವರ್ಷ ವಿರೋಧ ಪಕ್ಷದಲ್ಲಿ ಇರಬೇಕಾಗಿತ್ತು. ಹೀಗಾಗಿ ಪಕ್ಷ ತೊರೆದು ಬಂದವರಿಗೆ ಸಚಿವ ಸ್ಥಾನ ಹಂಚಿಕೆ ಮೊದಲ ಆದ್ಯತೆಯಾಗಿದೆ ಎಂದರು.

    ಮಿಣಿ ಮಿಣಿ ಪೌಡರ್ ಬಗ್ಗೆ ಕುಮಾರಸ್ವಾಮಿ ಬಿಜೆಪಿಯವರದ್ದು ವಿಕೃತಿ ಮನಸ್ಸು ಎಂದು ಜರಿದಿದ್ದಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಹೆಚ್‍ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆ ಮಿಣಿ ಮಿಣಿ ಪೌಡರ್ ಎಲ್ಲಿತ್ತೋ ಏನೋ? ನಾನಂತೂ ನೋಡಿಲ್ಲ. ಇದೂ ಕುಮಾರಸ್ವಾಮಿಯವರೇ ಸೃಷ್ಟಿಸಿದ ಪೌಡರ್. ಮಿಣಿ ಮಿಣಿ ಪೌಡರ್ ಬಗ್ಗೆ ಬಿಜೆಪಿಯವರು ಮಾತನಾಡಿದ್ರೆ ವಿಕೃತಿ ಮನಸ್ಸು ಅಂತಾರೆ. ಆದರೆ ಕುಮಾರಸ್ವಾಮಿಯವರದ್ದು ವಿಕೃತ ಮನಸ್ಸು ಎಂದು ಎಚ್‍ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.

    ಹೆಚ್‍ಡಿಕೆ ಸಿಡಿ ಯತ್ನಾಳ್ ಬಳಿ ಇದೆಯಂತೆ!:
    ಕುಮಾರಸ್ವಾಮಿ ಬರೀ ಸಿಡಿ ಸಿಡಿ ಅಂತಾರೆ. ಸಿಡಿ ಮಾಡುತ್ತೇನೆ, ಸಿಡಿ ಬಿಡುಗಡೆ ಮಾಡುತ್ತೇನೆ ಅನ್ನುವವರದ್ದು ವಿಕೃತಿ ಮನಸ್ಸು. ಅವರ ಸಿಡಿಗಳು ನಮ್ಮ ಬಳಿಯೂ ಇವೆ. ಕುಮಾರಸ್ವಾಮಿಯವರ ಏನೇನೂ ಮಾಡುತ್ತಾರೆ ಎಂದು ನಮಗೂ ಗೊತ್ತಿದೆ. ನಮಗೂ ಸಿಡಿ ಬಿಡುಗಡೆ ಮಾಡೋಕೆ ಬರುತ್ತೆ ಎಂದು ಕುಮಾರಸ್ವಾಮಿ ವಿರುದ್ಧ ಯತ್ನಾಳ್ ಕಿಡಿಕಾರೋ ಮೂಲಕ ಸಿಡಿ ವಿಚಾರ ಪ್ರಸ್ತಾಪ ಮಾಡಿರುವುದು ಕುತೊಹಲ ಮೂಡಿಸಿದೆ.

  • ಬಿಎಸ್‍ವೈ ಎದುರೇ ಚೇರ್‌ಗಳಿಂದ ಬಡಿದಾಡಿಕೊಂಡ ಬಿಜೆಪಿ ಕಾರ್ಯಕರ್ತರು!

    ಬಿಎಸ್‍ವೈ ಎದುರೇ ಚೇರ್‌ಗಳಿಂದ ಬಡಿದಾಡಿಕೊಂಡ ಬಿಜೆಪಿ ಕಾರ್ಯಕರ್ತರು!

    ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷರಾದ ಬಿಎಸ್ ಯಡಿಯೂರಪ್ಪ ಅವರ ಎದುರೇ ಪಕ್ಷದ ಕಾರ್ಯಕರ್ತರು ಬಡಿದಾಡಿಕೊಂಡಿರುವ ಘಟನೆ ವಿಜಯಪುರದ ಜಿಲ್ಲಾ ಪಂಚಾಯತ್ ಆವರಣದಲ್ಲಿ ನಡೆಯುತ್ತಿರುವ ಶಕ್ತಿ ಕೇಂದ್ರದ ಸಮಾವೇಶದಲ್ಲಿ ನಡೆದಿದೆ.

    ಸಮಾವೇಶದಲ್ಲಿ ಭಾಗವಹಿಸಿದ್ದ ಯಡ್ಡಿಯೂರಪ್ಪ ಸಮ್ಮುಖದಲ್ಲೇ ಕಾರ್ಯಕರ್ತರು ಹಿಗ್ಗಾ ಮುಗ್ಗಾ ಥಳಿಸಿಕೊಂಡಿದ್ದು, ಚೇರ್ ಹಾಗೂ ಕೈ ಕೈ ಮಿಲಾಯಿಸಿದ್ದಾರೆ. ರಮೇಶ್ ಜಿಗಜಿಣಗಿ ಬೆಂಬಲಿಗರಿಂದ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಮಾಹಿತಿ ಲಭಿಸಿದ್ದು, ಹಾಲಿ ಸಂಸದ ರಮೇಶ ಜಿಗಜಿಣಗಿ ಅವರಿಗೆ ಈ ಬಾರಿ ಪಕ್ಷದ ಟಿಕೆಟ್ ನೀಡದೆ ಬೇರೆ ಅವರಿಗೆ ಟಿಕೆಟ್ ನೀಡುವಂತೆ ಬಿಎಸ್‍ವೈ ಅವರಿಗೆ ಮನವಿ ಸಲ್ಲಿಸಲು ಕೆಲ ಕಾರ್ಯಕರ್ತರು ಬಂದ ಸಂದರ್ಭದಲ್ಲಿ ಹಲ್ಲೆ ಮಾಡಲಾಗಿದೆ ಎಂದು ಹೇಳಲಾಗ್ತಿದೆ.

    ರಾಜ್ಯ ಬಿಜೆಪಿ ಘಟಕವೂ ಲೋಕಸಭಾ ಚುನಾವಣೆಯ ಸಿದ್ಧತೆಯಲ್ಲಿ ಪಕ್ಷದ ಸಂಘಟನೆ ಹಾಗೂ ಕಾರ್ಯಕರ್ತರಲ್ಲಿ ಪ್ರಚಾರಕ್ಕೆ ಶಕ್ತಿ ತುಂಬಲು ರಾಷ್ಟ್ರಿಯ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ಎಲ್ಲಾ ನಾಯಕರು ಕಾರ್ಯಪ್ರವೃತ್ತಿ ಆಗಿದ್ದಾರೆ. ಆದರೆ ವಿಜಯಪುರ ಜಿಲ್ಲಾ ರಾಜಕೀಯದಲ್ಲಿ ಮಾತ್ರ ಬಣದ ರಾಜಕೀಯ ಆರಂಭವಾಗಿದೆ.

    ಲೋಕಸಭಾ ಚುನಾವಣೆಯ ರಣಕಹಳೆಯನ್ನ ಬಿಜೆಪಿ ವಿಜಯಪುರ ಮೀಸಲು ಕ್ಷೇತ್ರದಲ್ಲಿ ಚಾಲನೆ ನೀಡಲಾಯಿತು. ಮೋದಿ ವಿಜಯ ಸಂಕಲ್ಪ ಯಾತ್ರೆಯ ವಿಜಯಪುರ ಬಾಗಲಕೋಟ ಶಕ್ತಿ ಕೇಂದ್ರದ ಸಮಾವೇಶವನ್ನ ಆಯೋಜಿಸಲಾಗಿದ್ದು, ಸಮಾವೇಶಕ್ಕೆ ಮಾಜಿ ಸಿಎಂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಕೇಂದ್ರ ಕೃಷಿ ಸಚಿವ ಪುರುಷೋತ್ತಮ, ವಿಜಯಪುರ ಸಂಸದ ಹಾಗೂ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ, ಬಾಗಲಕೋಟ ಸಂಸದ ಪಿ ಸಿ ಗದ್ದಿಗೌಡರ್, ಮಾಜಿ ಸಚಿವರಾದ ಮುರಗೇಶ್ ನಿರಾಣಿ, ಗೋವಿಂದ್ ಕಾರಜೋಳ ಸೇರಿ ಹಲವರು ಮಾಜಿ ಹಾಲಿ ಶಾಸಕರು ಭಾಗಿಯಾಗಿದ್ದರು.

    ಇತ್ತ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್, ಪ್ರಹ್ಲಾದ್ ಜೋಶಿ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಬಿಜೆಪಿ ನಾಯಕರು ಗೈರಾಗಿದ್ದರು. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಕೂಡ ಗೈರಾಗಿದ್ದಾರೆ. ನಿನ್ನೆ ರಮೇಶ್ ಜಿಗಜಿಣಗಿ ವಿರುದ್ಧ ಫೇಸ್ ಬುಕ್ ಮೂಲಕ ಬಸವರಾಜ್ ಯತ್ನಾಳ ಅವರು ವಾಗ್ದಾಳಿ ನಡೆಸಿ ಸಮಾವೇಶಕ್ಕೆ ಗೈರಾಗುವ ಮೂಲಕ ಟಾಂಗ್ ನೀಡಿದ್ದಾರೆ.

    ಸಚಿವ ರಮೇಶ್ ಜಿಗಜಿಣಗಿ ಹಾಗೂ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ನಡುವಿನ ಭಿನ್ನಮತವನ್ನು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಶಮನಗೊಳಿಸುತ್ತಾರೆಂಬ ನಿರೀಕ್ಷೆ ಮಾಡಲಾಗಿತ್ತು. ಆದರೆ ಬಿಎಸ್‍ವೈ ಅವರ ಎದುರೇ ಅಸಮಾಧಾನ ಸ್ಫೋಟಗೊಂಡಿದ್ದು, ತೀವ್ರ ಮುಜಗರಕ್ಕೆ ಕಾರಣವಾಗಿದೆ ಎನ್ನಲಾಗಿದೆ.

    ಪರೋಕ್ಷ ಟಾಂಗ್ ನೀಡಿದ್ದ ಜಿಗಜಿಣಗಿ :
    ಜಿಲ್ಲಾ ಬಿಜೆಪಿ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ್ದ ಜಿಗಜಿಣಗಿ ಅವರು, ಈ ಹಿಂದೆ ಸಂಸದರಾಗಿದ್ದವರು ಮಾಡಲಾರದಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನೂರಾರು ಕೋಟಿ ಅನುದಾನ ತಂದಿದ್ದೇನೆ. ಒಂದು ವೇಳೆ ಹಿಂದಿನ ಸಂಸದರು ಯಾರಾದರೂ ನನಗಿಂತ ಹೆಚ್ಚಿನ ಕೆಲಸ ಮಾಡಿದ್ದರೆ, ಅನುದಾನ ತಂದಿದ್ದರೆ ಸಾಬೀತುಪಡಿಸಿದರೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು.

    ಇದಕ್ಕೆ ಟಾಂಗ್ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದ ಬಸನಗೌಡ ಪಾಟೀಲರು, 10 ವರ್ಷಗಳಲ್ಲಿ ಸಂಸದರ ನಿಧಿ ಎಲ್ಲಿ ಮತ್ತು ಯಾವ ಹಳ್ಳಿಗೆ ಮುಟ್ಟಿತು? ವಿನಾಶಕಾಲೇ ವಿಪರೀತ ಬುದ್ಧಿ, ಯಾವ ಹಳ್ಳಿಗೆ ಎಷ್ಟು ಹಣ ಮುಟ್ಟಿದೆ, ಸಂಸದರ ಆದರ್ಶ ಗ್ರಾಮದ ಪರಿಸ್ಥಿತಿ ಹೇಗಿದೆ, ಅದು ಜಿಲ್ಲೆಯಲ್ಲೇ ಅತ್ಯಂತ ಹಿಂದುಳಿದಿದೆ, ಹಿಂದಿನ ಯಾವ ಸಂಸದರೂ ಮಾಡದಷ್ಟು ಅಭಿವೃದ್ಧಿಯನ್ನು ನಾನು ಮಾಡಿದ್ದೇನೆ ಎಂದು ಹೇಳಲು ನಾಚಿಕೆಯಾಗಬೇಕು ಎಂದು ಟೀಕಿಸಿದ್ದರು. ಇವರ ಹೇಳಿಕೆಯನ್ನು ಹಲವು ಬಿಜೆಪಿ ಕಾರ್ಯಕರ್ತರು ಶೇರ್ ಮಾಡಿ ಬೆಂಬಲ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಧಾನ ಮಂಡಲ ಅಧಿವೇಶನಕ್ಕೆ ಚಕ್ಕರ್ – ಚಲನಚಿತ್ರಕ್ಕೆ ಶಾಸಕ ಹಾಜರ್

    ವಿಧಾನ ಮಂಡಲ ಅಧಿವೇಶನಕ್ಕೆ ಚಕ್ಕರ್ – ಚಲನಚಿತ್ರಕ್ಕೆ ಶಾಸಕ ಹಾಜರ್

    ವಿಜಯಪುರ: ವಿಧಾನ ಮಂಡಲ ಅಧಿವೇಶನಕ್ಕೆ ಚಕ್ಕರ್ ಹಾಕಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಚಲನಚಿತ್ರ ವೀಕ್ಷಣೆ ಮಾಡಿದ್ದಾರೆ.

    ಬಸನಗೌಡ ಪಾಟೀಲ್ ಯತ್ನಾಳ್ ‘ಉರಿ’ ಸಿನಿಮಾವನ್ನು ವಿಜಯಪುರದ ಅಪ್ಸರಾ ಚಿತ್ರಮಂದಿರದಲ್ಲಿ ವೀಕ್ಷಣೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಸಾವರ್ಜನಿಕರಿಗೂ ಉಚಿತವಾಗಿ ಸಿನಿಮಾ ವೀಕ್ಷಣೆಗೆ ಬಸನಗೌಡ ಪಾಟೀಲ್ ಅವಕಾಶ ಒದಗಿಸಿದ್ದು, ಸಾರ್ವಜನಿಕರೊಂದಿಗೆ ಕುಳಿತು ಚಿತ್ರವನ್ನು ವೀಕ್ಷಿಸಿದ್ದಾರೆ. ಇದನ್ನೂ ಓದಿ: ಅಧಿವೇಶನದ ಮೊದಲ ದಿನವೇ 12 ಶಾಸಕರು ಗೈರು

    ಸಿನಿಮಾ ವೀಕ್ಷಿಸಿದ ಬಳಿಕ ಮಾತನಾಡಿದ ಯತ್ನಾಳ್, ಇದೊಂದು ದೇಶಾಭಿಮಾನದ ಚಿತ್ರವಾಗಿದೆ. ಇಂದು ಸಿನಿಮಾದ ಕೊನೆಯ ಪ್ರದರ್ಶನವಾದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಉಚಿತ ವೀಕ್ಷಣೆಗೆ ನಾವು ಅವಕಾಶ ಕಲ್ಪಿಸಿದ್ದೆವು. ನಮಗಾಗಿ ದೇಶದ ಗಡಿಯಲ್ಲಿ ಪ್ರತಿನಿತ್ಯ ಹೋರಾಡುವ ಸೈನಿಕರ ಕಾರ್ಯವನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ ಎಂದು ಹೇಳಿದ್ದಾರೆ.

    ಇನ್ನೂ ಇವತ್ತಿನ ಅಧಿವೇಶನ ಅಷ್ಟೊಂದು ಪ್ರಾಮುಖ್ಯತೆ ಹೊಂದಿಲ್ಲ. ಗುರುವಾರದ್ದು ಮುಖ್ಯವಾಗಿರುತ್ತದೆ. ಆದ್ದರಿಂದ ಗುರುವಾರ ನಾನು ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಅಧಿವೇಶನಕ್ಕೆ ಬಾರದ ಬಿಜೆಪಿ ಶಾಸಕರು ನನ್ನ ಹಾಗೆ ಯಾವುದೋ ಒಳ್ಳೆಯ ಕೆಲಸದಲ್ಲಿರಬೇಕು. ನಮ್ಮಲ್ಲಿ ಯಾವುದೇ ಅತೃಪ್ತಿ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಯತ್ನಾಳ್ ಟಾಂಗ್ ಕೊಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv