Tag: ಬಸನಗೌಡ ದದ್ದಲ

  • ಕನ್ನಡ ಕೋಟ್ಯಧಿಪತಿಯಲ್ಲಿ 50 ಲಕ್ಷ ಬಹುಮಾನ – ವಾಲ್ಮೀಕಿ ಹಗರಣದಲ್ಲಿ 50 ಲಕ್ಷ‌ ಪಡೆದರೇ?

    ಕನ್ನಡ ಕೋಟ್ಯಧಿಪತಿಯಲ್ಲಿ 50 ಲಕ್ಷ ಬಹುಮಾನ – ವಾಲ್ಮೀಕಿ ಹಗರಣದಲ್ಲಿ 50 ಲಕ್ಷ‌ ಪಡೆದರೇ?

    – ಬಸನಗೌಡ ದದ್ದಲ ಮಾಜಿ ಪಿಎ ಪಂಪಣ್ಣ ಮನೆ ಮೇಲೆ ಇಡಿ ದಾಳಿ

    ರಾಯಚೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ(Karnataka Maharshi Valmiki Scheduled Tribe Development Corporation Ltd) 187 ಕೋಟಿ ರೂ. ಹಗರಣ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ನಡೆದಿರುವ ಜಾರಿ ನಿರ್ದೇಶನಾಲಯ (ED) ದಾಳಿ ಎರಡನೇ ದಿನವೂ ಮುಂದುವರಿದಿದೆ.

    ವಾಲ್ಮೀಕಿ ನಿಗಮ ಅಧ್ಯಕ್ಷ ಹಾಗೂ ಶಾಸಕ ಬಸನಗೌಡ ದದ್ದಲ (Basanagouda Daddal) ಹಾಗೂ ಅವರ ಮಾಜಿ ಪಿಎ ಪಂಪಣ್ಣ (Pampanna) ಮನೆಯಲ್ಲಿ ಇಡಿ ಅಧಿಕಾರಿಗಳು ಬೀಡು ಬಿಟ್ಟಿದ್ದು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

    ರಾಯಚೂರು ತಾಲೂಕು ಪಂಚಾಯತ್‌ನಲ್ಲಿ ಕೇಸ್ ವರ್ಕರ್ ಆಗಿ ಕೆಲಸ‌ ಮಾಡುತ್ತಿರುವ ಪಂಪಣ್ಣ ರಾಥೋಡ್ ಕತೆ ನಿಜಕ್ಕೂ ರೋಚಕವಾಗಿದೆ. ಕಡು ಬಡತನದಲ್ಲಿ ಬೆಳೆದು ಬಂದ ಪಂಪಣ್ಣ ತಾನು ಮಹಾ ಬುದ್ದಿವಂತ ಎನ್ನುವುದನ್ನು ಈ ಹಿಂದೆಯೇ ಸಾಬೀತು ಮಾಡಿದ್ದಾರೆ. ಕನ್ನಡದ ಖಾಸಗಿ ವಾಹಿನಿಯ ರಿಯಾಲಿಟಿ ಶೋ ನಲ್ಲಿ 50 ಲಕ್ಷ ಗೆಲ್ಲುವ ಮೂಲಕ ಪಂಪಣ್ಣ ಇಡೀ ಕರ್ನಾಟಕಕ್ಕೆ ಪರಿಚಯವಾಗಿದ್ದರು.  ಇದನ್ನೂ ಓದಿ: ಕೇವಲ ನಾಮ್‌ಕಾವಸ್ತೆ ಹೋರಾಟ – ರಾಜ್ಯ ಬಿಜೆಪಿ ವಿರುದ್ಧ ಹೈಕಮಾಂಡ್‌ ಗರಂ

    ದೇವದುರ್ಗ ಮೂಲದ ಪಂಪಣ್ಣ ಸ್ಮಶಾನದಲ್ಲಿ ಇಡುವ ಎಡೆಯನ್ನು ತಿಂದು ಬೆಳೆದವರು ಅನ್ನೋ ವಿಚಾರ ಸಂಚಲನ ಮೂಡಿಸಿತ್ತು.

    2012 ರಲ್ಲಿ ನಟ ಪುನೀತ್ ರಾಜ್ ಕುಮಾರ್ (Puneeth Rajkumar) ನಡೆಸಿಕೊಡ್ತಿದ್ದ ಕನ್ನಡ ಕೋಟ್ಯಧಿಪತಿ (Kannada Kotyadipathi) ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಪಂಪಣ್ಣ ಕೊನೆಯವರೆಗೂ ಉಳಿದಿದ್ದರು. ಈ ಶೋ ನಲ್ಲಿ 50 ಲಕ್ಷ ರೂ. ಗೆದ್ದಿದ್ದರು. ಒಂದು ಕೋಟಿ ರೂಪಾಯಿಗೆ ಕೇಳಿದ ಕೊನೆ ಪ್ರಶ್ನೆವರೆಗೂ ಸೇಫ್ ಆಗಿ ಆಡಿದ್ದ ಪಂಪಣ್ಣ ಬಳಿಕ ಕನ್ನಡ ಕೋಟ್ಯಧಿಪತಿಯಾಗಲು ಇದ್ದ ಕೊನೆ ಪ್ರಶ್ನೆಗೆ ಉತ್ತರಿಸಲು ಆಗದೇ ಆಟದಿಂದ ನಿರ್ಗಮಿಸಿ 50 ಲಕ್ಷ ರೂಪಾಯಿ ಪಡೆದಿದ್ದರು.

    2012 ರಲ್ಲಿ ಶಿಕ್ಷಕ ವೃತ್ತಿಯಲ್ಲಿದ್ದ ಪಂಪಣ್ಣ 50 ಲಕ್ಷ‌ ರೂ. ಗೆದ್ದ ಬಳಿಕ ಅಂದಿನ ರಾಯಚೂರು ಸಂಸದರಿಗೆ ಸರ್ಕಾರಿ ಆಪ್ತ ಸಹಾಯಕರಾಗಿ ಸೇರಿಕೊಂಡರು. ಬಳಿಕ ಪಿಡಿಓ ಹುದ್ದೆಗೆ ನಿಯೋಜನೆಗೊಂಡರು. ಕಾರ್ಯಕ್ಕೆ ಹಾಜರಾಗದೇ ಜನಪ್ರತಿನಿಧಿಗಳ ಆಪ್ತ ಸಹಾಯಕ ಕೆಲಸವನ್ನೇ ಹುಡುಕಿಕೊಂಡು ಮಾಡತೊಡಗಿದ್ದರು. ಶಾಸಕ ಬಸನಗೌಡ ದದ್ದಲ್‌ ಅವರಿಗೂ ಆಪ್ತ ಸಹಾಯಕರಾಗಿ ಕೆಲಸ ಮಾಡಿದ್ದರು.

     

    ಸದ್ಯ ರಾಯಚೂರಿನ (Raichuru) ಬಿಚ್ಚಾಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದಾರೆ. ಆದರೆ ಇಲ್ಲೂ ಕೆಲಸಕ್ಕೆ ಹಾಜರಾಗದೇ ತಾಲೂಕು ಪಂಚಾಯತಿ ಕಚೇರಿಯಲ್ಲಿ ಕೇಸ್ ವರ್ಕರ್ ಆಗಿ ಉಳಿದಿದ್ದಾರೆ. ರಾಯಚೂರಿನ ನೂತನ ವಿಧಾನ ಪರಿಷತ್ ಸದಸ್ಯರೊಬ್ಬರಿಗೆ ಆಪ್ತ ಸಹಾಯಕರಾಗಿ ಹೋಗಲು ಪ್ರಯತ್ನ ನಡೆಸಿದ್ದರು. ಆದರೆ ವಾಲ್ಮೀಕಿ ನಿಗಮದ ಹಗರಣದಲ್ಲಿ ಹೆಸರು ಕೇಳಿ ಬಂದಿದ್ದರಿಂದ ಆ ನೂತನ ಎಂಎಲ್‌ಸಿ ಪಂಪಣ್ಣನನ್ನ ತಮ್ಮ ಪಿಎ ಆಗಿ ಸೇರಿಸಿಕೊಂಡಿಲ್ಲ.

    ವಾಲ್ಮೀಕಿ ನಿಗಮದ ಹಗರಣದಲ್ಲಿ 50 ಲಕ್ಷ ರೂಪಾಯಿ ಪಡೆದಿರುವ ಆರೋಪ ಹಿನ್ನೆಲೆ ನಗರದ ಆಜಾದ್ ನಗರದಲ್ಲಿರುವ ರಾಯಲ್ ಫೋರ್ಟ್ ಅಪಾರ್ಟ್ಮೆಂಟ್‌ನ ಪಂಪಣ್ಣ ಫ್ಲಾಟ್ ಮೇಲೆ ದಾಳಿ ಮಾಡಿರುವ ಇಡಿ ಅಧಿಕಾರಿಗಳು ಬುಧವಾರದಿಂದ ತಪಾಸಣೆ ನಡೆಸುತ್ತಿದ್ದಾರೆ. ಪಂಪಣ್ಣನ ಫ್ಲಾಟ್ ‌ನಲ್ಲಿ ಮಹತ್ವದ ದಾಖಲೆಗಳು ಸಿಕ್ಕಿದ್ದು ಅಧಿಕಾರಿಗಳು ದಾಖಲೆಗಳನ್ನ ಸ್ಕ್ಯಾನ್ ಮಾಡಿ ಹಿರಿಯ ಅಧಿಕಾರಿಗಳಿಗೆ ರವಾನಿಸಿದ್ದಾರೆ.

     

  • ನಾಗೇಂದ್ರ ಬೆನ್ನಲ್ಲೇ ದದ್ದಲ್, ‌ ಬೋಸರಾಜು ರಾಜೀನಾಮೆಗೆ JDS ಒತ್ತಾಯ

    ನಾಗೇಂದ್ರ ಬೆನ್ನಲ್ಲೇ ದದ್ದಲ್, ‌ ಬೋಸರಾಜು ರಾಜೀನಾಮೆಗೆ JDS ಒತ್ತಾಯ

    ರಾಯಚೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಪ್ರಕರಣ (Karnataka Maharshi Valmiki Scheduled Tribe Development Corporation Ltd) ಸಂಬಂಧ ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ನೀಡಿದ ಬೆನ್ನಲ್ಲೇ ಇದೀಗ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಹಾಗೂ  ಎನ್.ಎಸ್.ಬೋಸರಾಜು ರಾಜೀನಾಮೆಗೆ ಒತ್ತಾಯ ಕೇಳಿ ಬಂದಿದೆ.

    ರಾಯಚೂರಿನಲ್ಲಿ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ ವಿರೂಪಾಕ್ಷಿ ಈ ಇಬ್ಬರು ಕೂಡಲೇ ರಾಜಿನಾಮೆ ಕೊಡಬೇಕು ಅಂತ ಒತ್ತಾಯಿಸಿದ್ದಾರೆ. ಹಗರಣದಲ್ಲಿ ಶಾಸಕ ಬಸನಗೌಡ ದದ್ದಲ ಹಾಗೂ ತೆಲಂಗಾಣ ಚುನಾವಣಾ ಉಸ್ತುವಾರಿ ಎನ್.ಎಸ್. ಬೋಸರಾಜು ಪಾತ್ರದವಿದೆ ಅಂತ ಆರೋಪಿಸಿದ್ದಾರೆ.

    187 ಕೋಟಿ ಹಗರಣದ ಹಿಂದೆ ಸಿಎಂ ಹಾಗೂ ಡಿಸಿಎಂ ಹಸ್ತ ಇದೆ. ಬಸನಗೌಡ ದದ್ದಲ ಭ್ರಷ್ಟಾಚಾರಕ್ಕೆ ಮೂಲ ಕಾರಣ. ಬಂಧನಕ್ಕೊಳಗಾದ ನಾಗರಾಜ ನೆಕ್ಕಂಟಿ, ನಾಗೇಶ್ವರ ಎನ್.ಎಸ್.ಬೋಸರಾಜು ಆತ್ಮೀಯ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಎಸ್‌ಐಟಿ ಹಾಗೂ ಸಿಬಿಐ ಎನ್.ಎಸ್.ಬೋಸರಾಜು ಹಾಗೂ ದದ್ದಲ ಬಸನಗೌಡ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಇಬ್ಬರನ್ನೂ ವಿಚಾರಣೆಗೆ ಒಳಪಡಿಸಬೇಕು ಮತ್ತು ಬಂಧಿಸಬೇಕು ಅಂತ ಒತ್ತಾಯಿಸಿದ್ದಾರೆ.

    ಕೆಲವರು ಪ್ರಕರಣ ದಾಖಲಾಗುತ್ತಿದ್ದಂತೆ ಹಣ ಹಿಂದಿರುಗಿಸಿದ್ದಾರೆ.ಹಣ ಹಿಂದಿರುಗಿಸುವಲ್ಲಿ ಶಾಸಕ ಬಸನಗೌಡ ದದ್ದಲ ಪಾತ್ರವಿದೆ ಅಂತ ಗಂಭೀರವಾಗಿ ಆರೋಪ ಮಾಡಿದ್ದಾರೆ. ಜೆಡಿಎಸ್ ನಿಯೋಗ ರಾಜ್ಯಪಾಲರನ್ನ ಭೇಟಿ ಮಾಡಿ ಮನವಿ ಪತ್ರ ಕೊಡುತ್ತಿದ್ದೇವೆ. ಇಡೀ ರಾಜ್ಯಾದ್ಯಂತ ಹಗರಣ ವಿರುದ್ದ ಹೋರಾಟ ಮಾಡುತ್ತೇವೆ ಅಂತ ರಾಯಚೂರು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ಹೇಳಿದ್ದಾರೆ.

  • ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್-ಬಿಜೆಪಿ ಭರ್ಜರಿ ಪೈಪೋಟಿ

    ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್-ಬಿಜೆಪಿ ಭರ್ಜರಿ ಪೈಪೋಟಿ

    ರಾಯಚೂರು: ಜಿಲ್ಲೆಯ ರಾಯಚೂರು ಗ್ರಾಮೀಣ ಕ್ಷೇತ್ರ (Raichur Rural Constituency) ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾಗಿದ್ದು ಹಲವಾರು ವಿಶೇಷತೆಗಳನ್ನು ಹೊಂದಿದೆ. 2008 ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಕಲ್ಮಲಾ ಕ್ಷೇತ್ರ ರಾಯಚೂರು ಗ್ರಾಮೀಣ ಕ್ಷೇತ್ರವಾಗಿ ಮರುನಾಮಕರಣವಾಯಿತು. ಮರು ವಿಂಗಡಣೆಗೂ ಮುನ್ನ ಕಲ್ಮಲಾ ಕ್ಷೇತ್ರದಲ್ಲಿ ಗೆದ್ದ ಬಹುತೇಕರು ಮಂತ್ರಿಗಳಾಗಿ ಮೆರೆದದ್ದು ಈ ಕ್ಷೇತ್ರದ ವಿಶೇಷತೆ.

    ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಭರ್ಜರಿ ಪೈಪೋಟಿ ಎದುರಾಗುವ ಸಾಧ್ಯತೆಯಿದ್ದು, ಕಾಂಗ್ರೆಸ್ (Congress) ಹಾಗೂ ಬಿಜೆಪಿ (BJP) ಮಧ್ಯೆ ನೇರ ಹಣಾಹಣಿ ಇದೆ. ಜೆಡಿಎಸ್ ಪಕ್ಷ ಸಹ ಪೈಪೋಟಿಯಲ್ಲಿದೆ. ಆಮ್ ಆದ್ಮಿ ಪಕ್ಷ ಸೇರಿದಂತೆ ಹಲವು ಅಭ್ಯರ್ಥಿಗಳು ಕಣದಲ್ಲಿದ್ದಾರೆ.

    ಕಾಂಗ್ರೆಸ್ ಪಕ್ಷದಿಂದ ಹಾಲಿ ಶಾಸಕ ಬಸನಗೌಡ ದದ್ದಲ, ಬಿಜೆಪಿ ಪಕ್ಷದಿಂದ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್, ಜೆಡಿಎಸ್‌ನಿಂದ ಸಣ್ಣ ನರಸಿಂಹ ನಾಯಕ್ ಕಣದಲ್ಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ 2ನೇ ಬಾರಿಗೆ ಗೆಲುವು ಸಾಧಿಸಿ ಕ್ಷೇತ್ರದಲ್ಲಿ ಒಮ್ಮೆ ಗೆದ್ದವರು ಸತವಾಗಿ 2 ಬಾರಿ ಗೆಲ್ಲುವುದು ಸುಲಭವಲ್ಲ ಎನ್ನೋದನ್ನು ಸುಳ್ಳು ಮಾಡಲು ಹೊರಟಿದ್ದಾರೆ. ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಮತ್ತೊಮ್ಮೆ ಮತದಾರರ ವಿಶ್ವಾಸ ಸಾಧಿಸಲು ಹರಸಾಹಸ ನಡೆಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಸಣ್ಣ ನರಸಿಂಹ ನಾಯಕ್ ಕ್ಷೇತ್ರದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

    ಅಭ್ಯರ್ಥಿಗಳ ಪ್ಲಸ್ ಮತ್ತು ಮೈನಸ್:
    ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಲಿ ಶಾಸಕ ಬಸನಗೌಡ ದದ್ದಲ ಹೆಸರು ಉಳಿಸಿಕೊಂಡಿದ್ದಾರೆ. ಹೀಗಾಗಿ ಜನರ ಒಲವು ಇನ್ನೂ ಕಾಂಗ್ರೆಸ್ ಕಡೆ ಕಾಣುತ್ತಿದೆ. ಕ್ಷೇತ್ರದ ಜನರ ಜೊತೆ ಸದಾ ಸಂಪರ್ಕದಲ್ಲಿರುವುದು, ಹೆಚ್ಚು ಆಶ್ವಾಸನೆಗಳನ್ನು ಕೊಡದೆ, ಕ್ಷೇತ್ರದ ಜನರ ನಂಬಿಕೆಯನ್ನು ಉಳಿಸಿಕೊಂಡಿರುವುದು ಬಸನಗೌಡ ದದ್ದಲ್‌ಗೆ ಪ್ಲಸ್ ಆಗಲಿದೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿನ ಒಳರಾಜಕೀಯ, ಪರಿಶಿಷ್ಟ ಪಂಗಡ ಸಮುದಾಯ ಮುಖಂಡರಾಗಿದ್ದ ಮಾಜಿ ಸಂಸದ ಬಿವಿ ನಾಯಕ್ ಬಿಜೆಪಿ ಸೇರ್ಪಡೆಯಾಗಿದ್ದು ಸ್ವಲ್ಪ ಹಿನ್ನಡೆ ಉಂಟು ಮಾಡಬಹುದು.

    ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ ಕ್ಷೇತ್ರದ ತುಂಬಾ ಓಡಾಟ ನಡಿಸಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳು, ನೆರೆ ಸಂದರ್ಭದಲ್ಲಿ ಬಿಎಸ್‌ವೈ ಅಭಿವೃದ್ಧಿ ಕೆಲಸಗಳು ಅಭ್ಯರ್ಥಿಗೆ ಪ್ಲಸ್ ಆಗಬಹುದು. ಶಾಸಕರಾಗಿದ್ದಾಗ ನೀಡಿದ ಭರಪೂರ ಭರವಸೆಗಳು ಭರವಸೆಗಳಾಗೇ ಉಳಿದಿರುವುದು, ಚುನಾವಣೆಯಲ್ಲಿ ಸೋತ ಬಳಿಕ ಕ್ಷೇತ್ರದ ಜನರಿಂದ ದೂರ ಉಳಿದದ್ದು ಮೈನಸ್ ಆಗಬಹುದು. ಇದನ್ನೂ ಓದಿ: ಮಾನ್ವಿ ಕ್ಷೇತ್ರದಲ್ಲಿ ಖಾತೆಯನ್ನೇ ತೆರೆಯದ ಬಿಜೆಪಿ – ಈ ಬಾರಿ ಯಾರ ಕೈ ಹಿಡಿಯಲಿದ್ದಾನೆ ಮತದಾರ?

    ಜೆಡಿಎಸ್ ಅಭ್ಯರ್ಥಿ ಸಣ್ಣ ನರಸಿಂಹ ನಾಯಕ್ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾಗಿದ್ದು, ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ತನ್ನದೇ ಆದ ಮತ ಬ್ಯಾಂಕ್ ಇರುವುದು ಪ್ಲಸ್ ಆಗಬಹುದು. ಆದರೆ ಕ್ಷೇತ್ರದ ಎಲ್ಲಾ ಭಾಗಗಳ ಜನರೊಂದಿಗೆ ಉತ್ತಮ ಒಡನಾಟ ಇಲ್ಲದಿರುವುದು ಅಭ್ಯರ್ಥಿಗೆ ಮೈನಸ್ ಆಗಬಹುದು.

    ಚುನಾವಣೆಯಲ್ಲಿ ಚರ್ಚೆಗೆ ಗ್ರಾಸವಾಗುವ ವಿಷಯಗಳು:
    ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಕುಡಿಯುವ ನೀರು, ರಸ್ತೆ ಸಮಸ್ಯೆ, ಕೃಷ್ಣಾ ನದಿ ನಡುಗಡ್ಡೆ ಗ್ರಾಮಗಳಿಗೆ ಸೇತುವೆ ನಿರ್ಮಾಣ ಕಾಮಗಾರಿ ಅಪೂರ್ಣವಾಗಿರುವ ವಿಷಯಗಳು ಚರ್ಚೆಯ ಮುನ್ನೆಲೆಗೆ ಬರುತ್ತಲೇ ಇರುತ್ತವೆ. ಕ್ಷೇತ್ರದ ಬಹುತೇಕ ಗ್ರಾಮಗಳು ಕೃಷ್ಣಾ ನದಿ ದಂಡೆಯಲ್ಲಿ ಬರುವುದರಿಂದ ಪ್ರವಾಹ ಭೀತಿ, ಗ್ರಾಮ ಸ್ಥಳಾಂತರ ವಿಷಯಗಳು ಚರ್ಚೆಯಾಗುತ್ತವೆ.

    2023ರ ಚುನಾವಣೆಗೆ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 2,27,761 ಇದೆ. ಇದರಲ್ಲಿ ಪುರುಷರು 1,12,041, ಮಹಿಳೆಯರು 1,15,665 ಹಾಗೂ 55 ತೃತೀಯ ಲಿಂಗಿ ಮತದಾರರಿದ್ದಾರೆ. ಜಾತಿವಾರು ಅಂದಾಜು ಮತದಾರರ ಸಂಖ್ಯೆ ಈ ರೀತಿ ಇದೆ.
    ಪರಿಶಿಷ್ಟ ಜಾತಿ – 45,000
    ಪರಿಶಿಷ್ಟ ಪಂಗಡ – 30,000
    ಗಂಗಾಮತಸ್ಥರು – 28,000
    ಕುರುಬರು – 35,000
    ಲಿಂಗಾಯತ – 25,000
    ಮುಸ್ಲಿಂ – 20,000 ಹಾಗೂ ಇತರೆ ಜಾತಿಯ ಉಳಿದ ಮತದಾರರಿದ್ದಾರೆ.

    ಇದುವರೆಗೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ 8 ಬಾರಿ, ಜನತಾದಳ, ಜೆಡಿಎಸ್, ಜೆಎಸ್‌ಪಿ, ಬಿಜೆಪಿ, ಪಕ್ಷೇತರ ತಲಾ 1 ಬಾರಿ ಗೆದ್ದಿವೆ. 2008 ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಕ್ಷೇತ್ರದಲ್ಲಿ ಒಂದು ಬಾರಿ ಗೆದ್ದವರು ಮತ್ತೊಮ್ಮೆ ಗೆದ್ದಿಲ್ಲ. ಈ ಬಾರಿ ಕಾಂಗ್ರೆಸ್ ಬಿಜೆಪಿ ಮಧ್ಯೆ ಪೈಪೋಟಿಯಿದ್ದು ಜೆಡಿಎಸ್ ಅಭ್ಯರ್ಥಿ ಸಹ ಗೆಲುವಿಗಾಗಿ ಸೆಣೆಸಾಟ ನಡೆಸಿದ್ದಾರೆ. ಇದನ್ನೂ ಓದಿ: ಕರ್ನಾಟಕ ಬಿಜೆಪಿ ಕಾರ್ಯಕರ್ತರಿಗೆ ಮೋದಿ ನೀಡಿದ ಸಂದೇಶ ಏನು?