Tag: ಬಸನಗೌಡ ತುರವಿಹಾಳ

  • ʻಕೈʼ ಶಾಸಕ ತುರವಿಹಾಳ ಪುತ್ರ, ಸಹೋದರನಿಂದ ಮೊಲ ಬೇಟೆ, ಮಾರಕಾಸ್ರ್ತಹಿಡಿದು ಮೆರವಣಿಗೆ

    ʻಕೈʼ ಶಾಸಕ ತುರವಿಹಾಳ ಪುತ್ರ, ಸಹೋದರನಿಂದ ಮೊಲ ಬೇಟೆ, ಮಾರಕಾಸ್ರ್ತಹಿಡಿದು ಮೆರವಣಿಗೆ

    -ಅರಣ್ಯ ಇಲಾಖೆಯಿಂದ ಕೇಸ್ ದಾಖಲು

    ರಾಯಚೂರು: ಮಸ್ಕಿ ಕಾಂಗ್ರೆಸ್ ಶಾಸಕ ಬಸನಗೌಡ ತುರವಿಹಾಳ (Basanagouda Turvihal) ಪುತ್ರ ಹಾಗೂ ಸಹೋದರ ಮೊಲ ಬೇಟೆ ಹಾಗೂ ಶಸ್ತ್ರಾಸ್ತ್ರಗಳೊಂದಿಗೆ ಮೆರವಣಿಗೆ ಮಾಡಿದ್ದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ  (Wildlife Protection Act) ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಮೊಲಗಳ ಬೇಟೆ ಹಾಗೂ ಬೇಟೆ ಮಾಡಿದ ಉಪಕರಣಗಳ ಪ್ರದರ್ಶನ ಆರೋಪ ಹಿನ್ನೆಲೆ ವನ್ಯಜೀವಿ ಸಂರಕ್ಷಣಾ ಕಾಯಿದೆ 1972, 51, ಸೆಕ್ಷನ್ 9 ಅಡಿಯಲ್ಲಿ ಎ1 ಶಾಸಕರ ಸಹೋದರ ಸಿದ್ದನಗೌಡ, ಎ2 ಶಾಸಕರ ಪುತ್ರ ಸತೀಶ್ ಗೌಡ, ಸ್ಥಳೀಯ ದುರ್ಗೇಶ ಹಾಗೂ ಇತರರ ವಿರುದ್ದ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ:ಬುಧವಾರ ವಕ್ಫ್‌ ಬಿಲ್‌ ಮಂಡನೆ – ಬಿಲ್‌ ಪಾಸ್‌ ಆಗುತ್ತಾ? ಲೋಕಸಭೆಯಲ್ಲಿ ಬಲಾಬಲ ಹೇಗಿದೆ?

    ಸಿಂಧನೂರು ತಾಲೂಕಿನ ತುರವಿಹಾಳ ಗ್ರಾಮದಲ್ಲಿ ಯುಗಾದಿ ಹಾಗೂ ಶಂಕರಲಿಂಗೇಶ್ವರ ಜಾತ್ರೆ ಹಿನ್ನೆಲೆ ರಾಯಚೂರಿನ ಮಸ್ಕಿ ಶಾಸಕ ಬಸನಗೌಡ ತುರವಿಹಾಳ ಪುತ್ರ ಹಾಗೂ ಸಹೋದರ ಮೊಲಗಳ ಬೇಟೆಯಾಡಿ, ಬಳಿಕ ಮಾರಕಾಸ್ತ್ರಗಳನ್ನ ಹಿಡಿದು ಮುಖ್ಯರಸ್ತೆಗಳಲ್ಲಿ ಮೆರವಣಿಗೆ ಮಾಡಿದ್ದರು. ಪ್ರಾಣಿಗಳನ್ನ ಕೊಂದು ಕಟ್ಟಿಗೆಗೆ ನೇತು ಹಾಕಿ ಮಾರಕಾಸ್ತ್ರ ಹಿಡಿದು ಸಂಭ್ರಮಾಚರಿಸಿದ್ದರು. ಅಲ್ಲದೆ ಯಾವುದೇ ಪಶ್ಚಾತ್ತಾಪವಿಲ್ಲದೆ ಅಟ್ಟಹಾಸದ ವಿಡಿಯೋ, ಫೋಟೋಗಳನ್ನು ವಾಟ್ಸಾಪ್ ಸ್ಟೇಟಸ್‌ಗೆ ಹಾಕಿಕೊಂಡು ಸಂಭ್ರಮಿಸಿದ್ದಾರೆ.

    ಈ ಕುರಿತು ಶಾಸಕ ಬಸನಗೌಡ ತುರವಿಹಾಳ ಮಾತನಾಡಿ, ಈ ಘಟನೆಯ ಹೊಣೆಯನ್ನು ಸಾರ್ವಜನಿಕರ ಮೇಲೆ ಹಾಕಿದ್ದಾರೆ. ಮೆರವಣಿಗೆಗೆ ಹೋದಾಗ ಸಾರ್ವಜನಿಕರು ನಮ್ಮ ಸಹೋದರ ಮತ್ತು ಮಗನನ್ನ ಎತ್ತಿಕೊಂಡು ಮೆರವಣಿಗೆ ಮಾಡಿದ್ದಾರೆ. ಅದು ಆಯುಧಗಳಿಗೆ ಪೂಜೆ ಮಾಡುವ ಕಾರ್ಯಕ್ರಮ. ಆಯುಧಗಳನ್ನು ಯಾವುದೇ ಕೆಟ್ಟ ಕಾರ್ಯಕ್ಕೆ ಬಳಸುವಂತದ್ದು ಅಲ್ಲ. ಯಾವ ರೀತಿಯಾಗಿ ಮೊಲಗಳ ಬೇಟೆಯಾಡಿದ್ದಾರೆ ನನಗೆ ಗೊತ್ತಿಲ್ಲ ಎಂದಿದ್ದಾರೆ.

    ಈ ಕುರಿತು ರಾಯಚೂರು ಡಿಎಫ್‌ಓ ಪ್ರವೀಣ್ ಮಾತನಾಡಿ, ಪ್ರಕರಣದ ತೀವ್ರತೆ ಮೇಲೆ ಕ್ರಮ ಜರುಗಿಸುತ್ತೇವೆ. ಶಾಸಕನ ಸಹೋದರ, ಶಾಸಕನ ಪುತ್ರ ಅಂತೇನೂ ಇಲ್ಲಾ, ಯಾರೇ ತಪ್ಪು ಮಾಡಿದ್ದರೂ ಕ್ರಮ ಜರುಗಿಸುತ್ತೇವೆ ಎಂದಿದ್ದಾರೆ.ಇದನ್ನೂ ಓದಿ:ವಕ್ಫ್ ಮಸೂದೆಯ ಪರ ಮತ ಹಾಕಿ – ಸಂಸದರಿಗೆ ಕೇರಳ ಕ್ಯಾಥೋಲಿಕ್ ಬಿಷಪ್ ಸಂಘಟನೆ ಕರೆ

  • ಬಸನಗೌಡ ತುರವಿಹಾಳ ಕಾಂಗ್ರೆಸ್‍ಗೆ ಸೇರ್ಪಡೆ- ರಂಗೇರಿದ ಮಸ್ಕಿ ಉಪಚುನಾವಣಾ ಕಣ

    ಬಸನಗೌಡ ತುರವಿಹಾಳ ಕಾಂಗ್ರೆಸ್‍ಗೆ ಸೇರ್ಪಡೆ- ರಂಗೇರಿದ ಮಸ್ಕಿ ಉಪಚುನಾವಣಾ ಕಣ

    – ಪ್ರತಾಪ್ ಗೌಡ ಪಾಟೀಲ್ ಭರ್ಜರಿ ಪ್ರಚಾರ

    ರಾಯಚೂರು: ಮಸ್ಕಿ ಉಪ ಚುನಾವಣೆ ಘೋಷಣೆಯಾಗುವುದಕ್ಕೂ ಮುನ್ನವೇ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಬಸನಗೌಡ ತುರವಿಹಾಳ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಅಘೋಷಿತ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.

    ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಪಕ್ಷಾಂತರದಿಂದ ತೆರವಾಗಿರುವ ರಾಯಚೂರಿನ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಈಗ ರಾಜಕೀಯ ಚುರುಕುಗೊಂಡಿದೆ. ಉಪ ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಕಾಂಗ್ರೆಸ್, ಬಿಜೆಪಿ ನಡುವೆ ತೀವ್ರ ಪೈಪೋಟಿಯ ವಾತಾವರಣ ನಿರ್ಮಾಣವಾಗಿದೆ.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪ್ರತಾಪ್ ಗೌಡ ಪಾಟೀಲ್ ವಿರುದ್ಧ ಕೇವಲ 213 ಮತಗಳ ಅಂತರದಿಂದ ಪರಾಭವಗೊಂಡಿದ್ದ ಬಸನಗೌಡ ತುರವಿಹಾಳ ಈಗ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಪ್ರತಾಪ್ ಗೌಡ ವಿರುದ್ಧ ಅಕ್ರಮ ಮತದಾನದ ಪ್ರಕರಣ ದಾಖಲಿಸಿದ್ದ ಬಸನಗೌಡರನ್ನು ಬಿಜೆಪಿ ತುಂಗಭದ್ರಾ ಕಾಡಾ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನ ಪಡಿಸಿತ್ತು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪ್ರಕರಣವನ್ನು ವಜಾಗೊಳಿಸಿದೆ. ಹೀಗಾಗಿ ಚುನಾವಣಾ ಕಣ ರಂಗೇರಿದೆ.

    ಬಿಜೆಪಿ ಟಿಕೆಟ್ ಬಹುತೇಕ ಪ್ರತಾಪ್ ಗೌಡ ಅವರಿಗೆ ಖಾಯಂ ಆಗಿರುವುದರಿಂದ ಬಸನಗೌಡ ತುರವಿಹಾಳ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಪಕ್ಷ ಸೇರ್ಪಡೆಯಾಗಿದ್ದಾರೆ. ರಾಯಚೂರು ಜಿಲ್ಲೆಯ ಕಾಂಗ್ರೆಸ್ ಶಾಸಕರು, ಮಾಜಿ ಶಾಸಕರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ನಾಯಕ್ ಸೇರಿ ಹಲವು ಮುಖಂಡರ ಉಪಸ್ಥಿತಿಯಲ್ಲಿ ಕಾಂಗ್ರೆಸ್ ಸೇರಿದ್ದಾರೆ. ಹೀಗಾಗಿ ಮಸ್ಕಿ ಉಪ ಚುನಾವಣೆಯಲ್ಲಿ ಕಳೆದ ಬಾರಿಯಂತೆ ಪ್ರತಾಪ್ ಗೌಡ ಪಾಟೀಲ್ ಹಾಗೂ ಬಸನಗೌಡ ನಡುವೆ ತುರುಸಿನ ಸ್ಪರ್ಧೆ ನಡೆಯುವ ಸಾಧ್ಯತೆಗಳಿವೆ. ಆದರೆ ಇಬ್ಬರು ಅಭ್ಯರ್ಥಿಗಳ ಪಕ್ಷಗಳು ಮಾತ್ರ ಬದಲಾಗಲಿವೆ.

    ತುಂಗಭದ್ರಾ ಕಾಡಾ ಅಧ್ಯಕ್ಷ ಸ್ಥಾನಕ್ಕೆ ಬಸನಗೌಡ ರಾಜೀನಾಮೆ ನೀಡಿದ ಪತ್ರ ಸಹ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಇನ್ನೂ ಪ್ರತಾಪ್ ಗೌಡ ಪಾಟೀಲ್ ಭರ್ಜರಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಕೋವಿಡ್ ನಿಯಮ ಉಲ್ಲಂಘಿಸಿ ನೂರಾರು ಕಾರ್ಯಕರ್ತರೊಂದಿಗೆ ಮಸ್ಕಿಯಲ್ಲಿ ಬೈಕ್ ರ್ಯಾಲಿ ಮಾಡಿದ್ದಾರೆ. ನೂರಾರು ಕಾರ್ಯಕರ್ತರನ್ನ ಸೇರಿ ಪಕ್ಷದ ಕಾರ್ಯಕ್ರಮವನ್ನು ಮಾಡಿದ್ದಾರೆ. ಆದರೆ ಪ್ರತಾಪ್ ಗೌಡ ವಿರುದ್ಧದ ಪ್ರಕರಣ ವಜಾಗೊಂಡಿರುವ ತೀರ್ಪಿನ ಪ್ರತಿ ಇನ್ನೂ ಕೈ ಸೇರಿಲ್ಲ. ತೀರ್ಪಿನ ಪ್ರತಿ ಸಿಕ್ಕ ನಂತರ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಲಾಗುವುದು ಅಂತ ಪ್ರತಾಪ್ ಗೌಡ ಹೇಳಿದ್ದಾರೆ.

    ಬಸವಕಲ್ಯಾಣ, ಬೆಳಗಾವಿ ಚುನಾವಣೆಯೊಂದಿಗೆ ಮಸ್ಕಿ ಉಪ ಚುನಾವಣೆ ನಡೆಯುವ ಸಾಧ್ಯತೆಯಿದೆ. ಡಿಸೆಂಬರ್ ಕೊನೆಯಲ್ಲಿ ಚುನಾವಣೆ ಬರಬಹುದು ನಾವು ಸಿದ್ಧತೆ ಮಾಡಿಕೊಂಡಿದ್ದೇವೆ ಅಂತ ಪ್ರತಾಪ್ ಗೌಡ ಪಾಟೀಲ್ ತಿಳಿಸಿದ್ದಾರೆ. ಚುನಾವಣೆ ಘೋಷಣೆಗೂ ಮುನ್ನವೇ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಸಂಚಲನ ಜೋರಾಗಿದೆ. ಕಾಂಗ್ರೆಸ್ ಬಿಜೆಪಿಗೂ ಮಸ್ಕಿ ಪ್ರತಿಷ್ಠೆಯ ಕಣವಾಗಿದೆ. ಕಾಂಗ್ರೆಸ್ ಟಿಕೆಟ್ ಬಸನಗೌಡಗೆ ಬಹುತೇಕ ಖಚಿತವಾಗಿರುವುದರಿಂದ ಭರ್ಜರಿ ಪೈಪೋಟಿ ನಿರೀಕ್ಷೆಯಿದೆ.