Tag: ಬಳ್ಳಾರಿ

  • 30 ತಿಂಗಳು, 40 ದೇಶ, 1 ಲಕ್ಷ ಕಿ.ಮೀ. ಬೈಕ್‍ನಲ್ಲೇ ದಂಪತಿ ಪ್ರಯಾಣ!

    ಬಳ್ಳಾರಿ: ಗಂಡ ಹೆಂಡತಿ ಇಬ್ಬರೂ ಬೈಕ್ ರೈಡ್ ಮಾಡುತ್ತಾ ಮೂವತ್ತು ತಿಂಗಳು, ನಲವತ್ತು ದೇಶ ಹಾಗೂ ಒಂದು ಲಕ್ಷ ಕಿಲೋ ಮೀಟರ್ ಪ್ರಯಾಣ ಮಾಡಿ ಇದೀಗ ವಿಶ್ವ ವಿಖ್ಯಾತ ಹಂಪಿಗೆ ಬಂದಿದ್ದಾರೆ.

    ಬೈಕ್ ರೈಡ್ ಕ್ರೇಜ್ ಯಾರಿಗೆ ಇಷ್ಟವಿಲ್ಲ ಹೇಳಿ ಕೊಲಂಬಿಯಾದಲ್ಲಿ ವೃತ್ತಿಯಲ್ಲಿ ಇಂಜಿನೀಯರ್ ಆಗಿರುವ ಜಾರ್ಜ್ ಓಸೋರಿಯೋ, ಪತ್ನಿ ಅನಾ ಕಳೆದ ಮೂವತ್ತು ತಿಂಗಳಿನಿಂದ ಬೈಕ್ ಪ್ರಯಾಣ ಆರಂಭಿಸಿ ಈಕ್ವೆಡಾರ್, ಪೆರು, ಬುಲೊವಾಯೋ, ಬ್ರಿಜಿಲ್, ವೆನಿಜುವೆಲಾ, ಉರುಗ್ವೆ, ಅರ್ಜೈಂಟೆನಾ, ಚಿಲಿ, ಸೆಹಗಲ್, ಹಂಗೇರಿಯಾ, ಪರುಗ್ವೇ, ಪನಾಮ, ಜರ್ಮನಿ, ಆಸ್ಟ್ರೀಯಾ, ಸ್ಲೋವೇನಿಯಾ, ಪೋಲೆಂಡ್, ಇಟಲಿ, ಸ್ವಿಜರ್ಲ್ಯಾಂಡ್, ಸುತ್ತಿ ಒಂದು ತಿಂಗಳಿನಿಂದ ಭಾರತವನ್ನು ಸುತ್ತುತ್ತಿದ್ದಾರೆ.

    ತಮ್ಮ ಬೈಕ್‍ಗೆ ಟಿ.ವಿ.ಯಿಂದ ದೂರವಿರಿ, ದುಶ್ಚಟಗಳಿಗೆ ದಾಸರಾಗಬೇಡಿ ಎನ್ನುವ ಸಂದೇಶಗಳನ್ನು ಸಾರುತ್ತಾ ತಾವು ಆ ದೇಶ ಸುತ್ತಿದ ನೆನಪಿಗಾಗಿ ರಾಷ್ಟ್ರಧ್ವಜವನ್ನು ಬೈಕಿಗೆ ಅಂಟಿಸಿಕೊಂಡಿದ್ದಾರೆ ತಾವು ಸುತ್ತುವ ದೇಶದ ಚಿತ್ರಗಳನ್ನು ತಮ್ಮದೇ ವೆಬ್ ಸೈಟ್ ನಲ್ಲಿ ಹಾಕಿ ಆ ದೇಶದ ಕಲೆ ಸಂಸ್ಕೃತಿ ಪರಿಚಯಿಸುತ್ತಿದ್ದಾರೆ.

    ಕೊಪ್ಪಳದ ಜಿಲ್ಲೆಯ ಅಂಜನಾದ್ರಿ, ಪಂಪಾಸರೋವರ ನೋಡಿ ಇದೀಗ ವಿಶ್ವ ವಿಖ್ಯಾತ ಹಂಪಿಗೆ ಆಗಮಿಸದ್ದಾರೆ ಸ್ಮಾರಕಗಳನ್ನು ನೋಡಿ ಹಂಪಿ ಬಜಾರ್ ನಲ್ಲಿ ವಿಶ್ರಾಂತಿ ಪಡೆಯುವಾಗ ದೇಶಿ ವಿದೇಶಿ ಪ್ರವಾಸಿಗರು ಮಾತನಾಡಿಸಿ ಅವರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ತಮ್ಮ ಕ್ಯಾಮರಾಗಳಲ್ಲಿ ಬೈಕ್ ಫೋಟೋ ಕ್ಲಿಕಿಸುತ್ತಿದ್ದರು. ಭಾರತದಲ್ಲಿ ರಸ್ತೆಯು ಬಹಳ ಚೆನ್ನಾಗಿವೆ ಇಲ್ಲಿ ಅನೇಕ ಐತಿಹಾಸಿಕ ಸ್ಥಳಗಳನ್ನು ವಿಶ್ವ ವಿಖ್ಯಾತ ಸ್ಮಾರಕಗಳನ್ನು ನೋಡಿ ಖುಷಿಯಾಗಿದೆ ಎಂದು ಓಸೋರಿಯಾ ದಂಪತಿ ತಿಳಿಸಿದರು.

  • ತಮಗೇ ಬಡತನವಿದ್ರೂ ಅನಾಥರ ಸೇವೆ ಮಾಡ್ತಾರೆ!

    ಬಳ್ಳಾರಿ: ಇವರು ಹಣದಲ್ಲಿ ಶ್ರೀಮಂತರಲ್ಲ. ಆದ್ರೆ ಗುಣದಲ್ಲಿ ಶ್ರೀಮಂತರು. ತಾವೇ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದರೂ ಇನ್ನೊಬ್ಬರ ಕಷ್ಟಕ್ಕೆ ಬೆಳಕಾಗಿದ್ದಾರೆ. ಅನಾಥರು, ಮಾನಸಿಕ ಅಸ್ವಸ್ಥರು, ವೃದ್ಧರಿಗಾಗಿ ಅನಾಥಾಶ್ರಮ ನಡೆಸುತ್ತಿದ್ದಾರೆ. ಬಳ್ಳಾರಿಯ ಆ ಅಪರೂಪದ ಸಮಾಜ ಸೇವಕಿಯೇ ನಮ್ಮ ಪಬ್ಲಿಕ್ ಹೀರೋ.

    ಇವತ್ತಿನ ನಮ್ಮ ಪಬ್ಲಿಕ್ ಹೀರೋ ಪರಿಶುದ್ಧ ರಾಣಿ. ಮೂಲತಃ ಆಂಧ್ರದವರಾದ ಇವರು 20 ವರ್ಷಗಳ ಹಿಂದೆ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಕಂಪ್ಲಿ ಪಟ್ಟಣಕ್ಕೆ ಬಂದು ನೆಲೆಸಿದ್ದಾರೆ. ಇವರ ಪತಿ ಸುರೇಶ್ ಕಾರ್ಪೆಂಟರ್ ಕೆಲಸ ಮಾಡ್ತಾರೆ. ಮೂವರು ಮಕ್ಕಳ ತುಂಬು ಸಂಸಾರ. ಇವರಿಗೆ ಜೀವನವೇ ಕಷ್ಟ. ಪರಿಶುದ್ಧ ರಾಣಿ ತಮ್ಮ ಹೆಸರಿನಷ್ಟೇ ಪರಿಶುದ್ಧ ಮನಸ್ಸಿನಿಂದ ಅನಾಥಾಶ್ರಮ ನಡೆಸುತ್ತಿದ್ದಾರೆ. ಅನಾಥರು, ಮಾನಸಿಕ ಅಸ್ವಸ್ಥರು, ವೃದ್ಧರು ಹೀಗೆ 15ಕ್ಕೂ ಹೆಚ್ಚು ಜನರಿಗೆ ಬೆಳಕಾಗಿದ್ದಾರೆ. ಒಮ್ಮೆ ಜೀಸಸ್ ಕನಸಿನಲ್ಲಿ ಬಂದು ಬಡಬಗ್ಗರ ಸೇವೆ ಮಾಡು ಎಂದಿದ್ದೇ ಪರಿಶುದ್ಧ ರಾಣಿಯವರ ಈ ಸಮಾಜಸೇವೆಗೆ ಕಾರಣವಾಗಿದೆಯಂತೆ.

    ಗಂಡ ತಿಂಗಳಿಗೆ ಕೊಡುವ 15 ಸಾವಿರ ರೂಪಾಯಿಗೆ ತಮ್ಮ ಮನೆ ಪಕ್ಕದಲ್ಲೇ ಒಂದು ಪುಟ್ಟ ಮನೆ ಬಾಡಿಗೆ ಪಡೆದು ಆಶ್ರಮ ನಡೆಸುತ್ತಿದ್ದಾರೆ. ತಮ್ಮ ಮನೆಯಿಂದಲೇ ಅಡುಗೆ ಮಾಡಿಕೊಂಡು ಹೋಗಿ ಊಟ ಮಾಡಿಸ್ತಾರೆ. ಮಕ್ಕಳು ರಜೆ ಇದ್ದಾಗ ಬಂದು ಅಮ್ಮನ ಜೊತೆ ಸೇವೆ ಮಾಡ್ತಾರೆ. ಚರ್ಚ್‍ಗಳ ಕೆಲ ಅನುಯಾಯಿಗಳು ಸ್ವಲ್ಪ ಸಹಾಯ ಮಾಡ್ತಾರೆ. ಸ್ಥಳೀಯರು ಆಗಾಗ ಅಕ್ಕಿ ಹಾಗೂ ಧಾನ್ಯ ನೀಡುತ್ತಾರೆ.

    ಇಷ್ಟೆಲ್ಲಾ ಸೇವೆಗೆ ಮೂಲ ಕಾರಣವಾಗಿರೋ ಪತಿ ಮಾತ್ರ ಪ್ರಚಾರ ಬೇಡ ಎಂದಿದ್ದಾರೆ. ಕಡೇ ಪಕ್ಷ ನಿಮ್ಮ ಗಂಡನನ್ನು ಜನರಿಗೆ ತೋರಿಸುತ್ತೇವೆ ಎಂದ್ರೂ ಪಬ್ಲಿಕ್ ಟಿವಿಗೆ ಪರಿಶುದ್ಧ ರಾಣಿ ಗಂಡನ ಫೋಟೋ ಕೂಡಾ ಕೊಟ್ಟಿಲ್ಲ. ದಾನ, ಧರ್ಮ, ಸೇವೆ ಮಾಡೋದು ಪ್ರಚಾರಕ್ಕಲ್ಲ ಅನ್ನೋದನ್ನ ನಿಜಕ್ಕೂ ಈ ಇವರನ್ನು ನೋಡಿ ಕಲಿಯಬೇಕಿದೆ.

    https://www.youtube.com/watch?v=1qWLKjDuBrk

     

  • ಬಳ್ಳಾರಿಯಲ್ಲಿ ಅದಿರು ಲಾರಿಗಳ ಅಬ್ಬರಕ್ಕೆ ನಿತ್ಯ ಅಮಾಯಕರು ಬಲಿ!

    -ಜನರ ಪಾಲಿಗೆ ಕಿಲ್ಲರ್ ಲಾರಿಗಳಾದ್ರೂ ಜಿಲ್ಲಾಡಳಿತಕ್ಕಿಲ್ಲ ವರಿ

    ಬಳ್ಳಾರಿ: ಜಿಲ್ಲೆಯಲ್ಲಿ ಅದಿರು ಲಾರಿಗಳ ಅಬ್ಬರ ಜೋರಾಗಿಬಿಟ್ಟಿದೆ. ಅದಿರು ಲಾರಿಗಳಿಗೆ ಸಿಲುಕಿ ನಿತ್ಯ ಅಮಾಯಕ ಪ್ರಯಾಣಿಕರು ಬಲಿಯಾಗುತ್ತಿದ್ದಾರೆ. ಗಣಿ ಪ್ರದೇಶವಾದ ಸಂಡೂರು, ತೋರಣಗಲ್‍ನಲ್ಲಿ ಅದಿರು ಲಾರಿಗಳು ಇದೀಗ ಅಕ್ಷರಶಃ ಕಿಲ್ಲರ್ ಲಾರಿಗಳಂತೆ ಓಡಾಡುತ್ತಿವೆ. ಹೀಗಾಗಿ ಜನರು ರಸ್ತೆಯ ಮೇಲೆ ಓಡಾಡಲೂ ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

    ಗಣಿ ನಾಡು ಬಳ್ಳಾರಿ ಜಿಲ್ಲೆಯಲ್ಲಿ ಅದಿರು ಲಾರಿಗಳ ಅಬ್ಬರಕ್ಕೆ ಬ್ರೇಕ್ ಹಾಕೋರೆ ಇಲ್ಲದಂತಾಗಿ ಬಿಟ್ಟಿದೆ. ಗಣಿಗಾರಿಕೆ ನಿಂತರೂ ಅದಿರು ಲಾರಿಗಳ ಅಬ್ಬರ ಮಾತ್ರ ಇನ್ನೂ ತಗ್ಗಿಲ್ಲ. ಸಾಕ್ಟ್ ಯಾರ್ಡ್ ಕಾರ್ಖಾನೆಗಳಿಗೆ ಬೇಗನೇ ಅದಿರು ಸರಬುರಾಜು ಮಾಡಲು ಲಾರಿಗಳು ಓವರ್ ಸ್ಪೀಡ್ ಆಗಿ ಓಡುತ್ತಿರುವುದರಿಂದ ನಿತ್ಯ ಒಂದಿಬ್ಬರು ಅದಿರು ಲಾರಿಗಳಿಗೆ ಆಹಾರವಾಗುವಂತಾಗಿದೆ.

    ಕಳೆದ 5 ವರ್ಷಗಳಲ್ಲಿ 73 ಜನರು ಅದಿರು ಲಾರಿಗಳ ಅಪಘಾತದಲ್ಲಿ ಮೃತಪಟ್ಟರೆ ಬರೋಬ್ಬರಿ 304 ಜನರು ಲಾರಿಗಳ ಅಪಘಾತದಿಂದ ಗಾಯಗೊಂಡು ನಿತ್ಯ ನರಕಯಾತನೆ ಪಡುವಂತಾಗಿದೆ. ಕಳೆದ ಜನವರಿ ತಿಂಗಳೊಂದರಲ್ಲೇ 6 ಜನರು ಮೃತಪಟ್ಟು 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಹೀಗಾಗಿ ಅದಿರು ಲಾರಿಗಳ ಅಬ್ಬರಕ್ಕೆ ಬ್ರೇಕ್ ಹಾಕೋರೂ ಯಾರು ಇಲ್ವಾ ಅನ್ನೋ ಪ್ರಶ್ನೆ ಎದುರಾಗಿದೆ.

    ಅದಿರು ಲಾರಿಗಳ ಅಬ್ಬರಕ್ಕೆ ಅಮಾಯಕ ಜನರು ಬಲಿಯಾಗಿರುವುದನ್ನು ವಿರೋಧಿಸಿ ಸ್ಥಳೀಯ ಸಂಘಟನೆಗಳು ಪ್ರತಿಭಟನೆ ಮಾಡಿದ್ರೆ ಕ್ರಮ ಕೈಗೊಳ್ಳಬೇಕಾದ ಜಿಲ್ಲಾಡಳಿತ ಇದೀಗ ಹೋರಾಟಗಾರರ ವಿರುದ್ಧವೇ ಪ್ರಕರಣ ದಾಖಲಿಸಿ ಹೋರಾಟ ಹತ್ತಿಕ್ಕುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ಅಲ್ಲದೇ ಜನರ ಜೀವ ಕಾಪಾಡಬೇಕಾದ ಜಿಲ್ಲಾಧಿಕಾರಿಗಳೇ ಜನರ ಜೀವ ತಗೆಯುವ ಲಾರಿಗಳ ಪರವಾಗಿ ನಿಂತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

     

  • ಪೊಲೀಸ್ ಇನ್ಸ್ ಪೆಕ್ಟರ್‍ಗೆ ನ್ಯಾಯಾಂಗ ಬಂಧನ: ಧಾರವಾಡ ಸಂಚಾರಿ ಹೈಕೋರ್ಟ್ ಪೀಠ ಆದೇಶ

    – ಕೋರ್ಟ್ ನಿಂದ ಜಾಮೀನು ಮಂಜೂರು

    ಬಳ್ಳಾರಿ: ಕಳ್ಳರನ್ನು ಜೈಲಿಗೆ ಕಳುಹಿಸೋದು ಪೊಲೀಸರ ಕೆಲಸ. ಆದ್ರೆ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರನ್ನು ಧಾರವಾಡ ಸಂಚಾರಿ ಹೈಕೋರ್ಟ್ ಪೀಠ ನ್ಯಾಯಾಂಗ ವಶಕ್ಕೆ ನೀಡಿದ ಘಟನೆ ನಡೆದಿದೆ.

    ಬಳ್ಳಾರಿಯ ಕೌಲ್‍ಬಜಾರ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶಫಿವುಲ್ಲಾ ಆರೋಪಿಯೊಬ್ಬರಿಗೆ ವಾರೆಂಟ್ ಜಾರಿ ಮಾಡದ ಪರಿಣಾಮ ನ್ಯಾಯಾಲಯ ಪೊಲೀಸ್ ಇನ್ಸ್ ಪೆಕ್ಟರ್ ಅವರನ್ನೆ ನ್ಯಾಯಾಂಗ ವಶಕ್ಕೆ ನೀಡಿ ಆದೇಶಿಸಿತ್ತು.

    ಏನಿದು ಪ್ರಕರಣ?:
    ನಗರದ ಕೌಲ್‍ಬಜಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 36/2010 ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಪ್ರಸಾದ್ ಎನ್ನುವವರಿಗೆ ವಾರೆಂಟ್ ಜಾರಿ ಮಾಡಿತ್ತು. ಅಲ್ಲದೇ ಪ್ರಕರಣ ಆರೋಪಿಯಾಗಿರುವ ದಾದಾಪೀರ್ ಎಂಬುವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಆದೇಶ ನೀಡಿತ್ತು. ಆದರೆ ಪೊಲೀಸ್ ಇನ್ಸ್ ಪೆಕ್ಟರ್ ಶಫಿವುಲ್ಲಾ ಕಳೆದ ತಿಂಗಳು ಕಾನ್ ಸ್ಟೇಬಲ್ ಒಬ್ಬರನ್ನು ಕಳಹಿಸಿ ನ್ಯಾಯಾಲಯದ ಸೂಚನೆಯನ್ನು ನಿರ್ಲಕ್ಷಿಸಿದ್ದರು.

    ಬುಧವಾರ ನ್ಯಾಯಾಲಯದ ಮುಂದೆ ಶಫಿವುಲ್ಲಾ ಹಾಜರಾಗಿದ್ದರು. ಈ ವೇಳೆಯಲ್ಲಿ ಆರೋಪಿಗೆ ವಾರೆಂಟ್ ಜಾರಿ ಮಾಡದ ಪರಿಣಾಮ ಶಫಿವುಲ್ಲಾಗೆ ಛೀಮಾರಿ ಹಾಕಿದ ನ್ಯಾಯಾಧೀಶರು ಪಿಐಗೆ ನ್ಯಾಯಾಂಗ ಬಂಧನ ವಿಧಿಸುವಂತೆ ಆದೇಶ ಮಾಡಿದೆ. ಅಲ್ಲದೇ ಎಸ್‍ಪಿ ಆರ್.ಚೇತನ್ ಅವರಿಗೂ ಸಹ ನೋಟಿಸ್ ಜಾರಿ ಮಾಡಿ ವಿವರಣೆ ಕೋರಿದೆ.

    ನ್ಯಾಯಾಂಗ ವಶಕ್ಕೆ ನೀಡುತ್ತಿದಂತೆ ಶಫಿವುಲ್ಲಾ ಅನಾರೋಗ್ಯದ ಕಾರಣ ನೀಡಿ ಆಸ್ಪತ್ರೆಗೆ ದಾಖಲಾಗಿ, ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು. ಇಂದು ಕೋರ್ಟ್ ಷರತ್ತು ಬದ್ದ ಜಾಮೀನು ನೀಡಿದೆ.

     

  • ವಿದ್ಯಾರ್ಥಿಗಳ ಅಧ್ಯಯನಕ್ಕೆ ಮಹಿಳೆಯ ದೇಹದಾನ!

    ಬಳ್ಳಾರಿ: ಮನುಷ್ಯ ಇದ್ದಾಗ ರಕ್ತದಾನ ಮಾಡಬೇಕು ಸತ್ತಾಗ ದೇಹದಾನ ಮಾಡಬೇಕು ಅಂತಾರೆ. ದೇಶದ ಅದೆಷ್ಟೋ ವೈದ್ಯಕೀಯ ವಿದ್ಯಾರ್ಥಿಗಳಿಗೆ ದೇಹದ ಅಂಗಾಂಗಗಳಿಗೆ ಅಧ್ಯಯನ ಮಾಡೋಕೆ ಮೃತ ದೇಹಗಳೇ ಸಿಗುವುದಿಲ್ಲ. ಆದ್ರೆ ಬೈಲಹೊಂಗಲದ ರಾಮಣ್ಣನವರ ಪ್ರತಿಷ್ಠಾನ ಈ ಕೊರತೆಯನ್ನು ನಿಗಿಸುವಲ್ಲಿ ಮುಂದಾಗಿದೆ. ರಾಮಣ್ಣನವರ ಪ್ರತಿಷ್ಠಾನದ ಪರಿಶ್ರಮದಿಂದಾಗಿ ರಾಣೆಬೆನ್ನೂರಿನ ಲೀಲಾವತಿಯವರ ಮೃತದೇಹವನ್ನು ಬಳ್ಳಾರಿಯ ಆಯುರ್ವೇದಿಕ್ ಕಾಲೇಜಿಗೆ ದೇಹದಾನ ಮಾಡಿಸುವಲ್ಲಿ ಯಶ್ವಸಿಯಾಗಿದ್ದಾರೆ.

    ಹೃದಯಾಘಾತದಿಂದ ರಾಣೆಬೆನ್ನೂರಿನ 80 ವರ್ಷದ ಲೀಲಾವತಿಯವರು ಇತ್ತೀಚಿಗಷ್ಟೆ ಮೃತಪಟ್ಟಿದ್ದರು. ಅವರ ಪುತ್ರ ಸಹ ವೈದ್ಯರಾದ ಕಾರಣ ದೇಹದಾನದ ಮಹತ್ವದ ಬಗ್ಗೆ ಅರಿವಿದ್ದ ಲೀಲಾವತಿಯವರು ತಮ್ಮ ದೇಹವನ್ನು ದಾನ ಮಾಡಬೇಕೆಂದು ಜೀವಿತ ವೇಳೆಯಲ್ಲಿ ಪ್ರಮಾಣ ಮಾಡಿದ್ದರು. ಹೀಗಾಗಿ ಅವರ ಕುಟುಂಬದ ಸದಸ್ಯರು ಇದೀಗ ಲೀಲಾವತಿಯವರ ಮೃತದೇಹವನ್ನು ಸಂಸ್ಕಾರ ಮಾಡದೇ ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ದಾನ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.

    ಹೀಗಾಗಿ ಲೀಲಾವತಿಯವರ ದೇಹದಾನವನ್ನು ಪಡೆದ ಬಳ್ಳಾರಿಯ ತಾರಾನಾಥ ಆರ್ಯುವೇದ ಕಾಲೇಜಿನ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳು ಇದೀಗ ಅಂಗಾಗ ರಚನೆಯ ಅಧ್ಯಯನ ಮಾಡಲು ಲೀಲಾವತಿಯವರ ಮೃತದೇಹವನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ. ಮೃತದೇಹಗಳು ಸಿಗದಿದ್ದರೇ ಅಧ್ಯಯನ ತುಂಬಾ ಕಷ್ಟ ಅಂತಾರೆ ಆಯುರ್ವೇದಿಕ್ ಕಾಲೇಜಿನ ಪ್ರಾಧ್ಯಾಪಕ ಡಾ. ರಾಜಶೇಖರ್ ಗಾಣಿಗೇರ್ ಮತ್ತು ವಿದ್ಯಾರ್ಥಿಗಳು.

    ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಂಗಾಗಗಳ ಅಧ್ಯಯನ ಮಾಡೋಕೆ ಮೃತದೇಹ ಬೇಕೆ ಬೇಕು. ಆದ್ರೆ ಮೆಡಿಕಲ್ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡೋಕೆ ಮೃತದೇಹ ಸಿಗೋದೇ ಅಪರೂಪ. ಹೀಗಾಗಿ ರಕ್ತದಾನ ಮಾಡಿದಂತೆ ದೇಹದಾನ ಮಾಡಲು ಜಾಗೃತಿ ಕಾರ್ಯಕ್ರಮಗಳು ನಡೆಸಲಾಗುತ್ತೆ. ಆದ್ರೆ ಬಹುತೇಕರು ಮೃತದೇಹಗಳಿಗೆ ಅಂತ್ಯಸಂಸ್ಕಾರ ಮಾಡುತ್ತಾರೆ. ಹೀಗಾಗಿ ದೇಹದಾನ ಮಾಡೋರು ತುಂಬಾ ಅಪರೂಪ. ಆದ್ರೆ ಬೈಲಹೊಂಗಲದ ಡಾಕ್ಟರ್ ಮಾಲತೇಶ ರಾಮಣ್ಣನವg ತಂದೆಯ ದೇಹವನ್ನು ದಾನ ಮಾಡುವ ಮೂಲಕ ದೇಹದಾನ ಜಾಗೃತಿ ಮೂಡಿಸುತ್ತಿದ್ದಾರೆ.

    ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಂಗಾಂಗ ರಚನೆ ಕಲಿಕೆಗೆ ವರ್ಷಕ್ಕೊಂದು ಮೃತದೇಹ ಬೇಕೇ ಬೇಕು. ಅದೆಷ್ಟೋ ಕಾಲೇಜಿನಲ್ಲಿನ ವಿದ್ಯಾರ್ಥಿಗಳು ದೇಹದ ಅಂಗಾಂಗ ರಚನೆ ಬಗ್ಗೆ ಪ್ರಾಕ್ಟಿಕಲ್ಲಾಗಿ ಅಧ್ಯಯನ ಮಾಡದೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹೀಗಾಗಿ ದೇಹ ಮಣ್ಣಲ್ಲಿ ಮಣ್ಣಾಗುವ ಬದಲು ಬೇರೊಬ್ಬರಿಗೆ ಸಹಾಯವಾಗಲು ದೇಹದಾನ ಮಾಡುವ ಮೂಲಕ ಸಹಕರಿಸಬೇಕು ಎಲ್ಲರೂ ಮುಂದಾಗಬೇಕಿದೆ.