Tag: ಬಳ್ಳಾರಿ

  • ಬಳ್ಳಾರಿಯಲ್ಲಿ ರಾಜ್ಯ ಮಟ್ಟದ ಬೃಹತ್ ಕೌಶಲ್ಯ ಉದ್ಯೋಗ ಮೇಳ ಆರಂಭ

    ಬಳ್ಳಾರಿಯಲ್ಲಿ ರಾಜ್ಯ ಮಟ್ಟದ ಬೃಹತ್ ಕೌಶಲ್ಯ ಉದ್ಯೋಗ ಮೇಳ ಆರಂಭ

    ಬಳ್ಳಾರಿ: ಜಿಲ್ಲೆಯ ತೋರಣಗಲ್‍ನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಕಾರ್ಮಿಕ ಇಲಾಖೆ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಕೌಶಲ್ಯ ಮತ್ತು ಉದ್ಯೋಗ ಮೇಳ ಆರಂಭವಾಗಿದೆ.

    ಕಾರ್ಮಿಕ ಸಚಿವ ಸಂತೋಷ್ ಲಾಡ್ ಮೇಳಕ್ಕೆ ಚಾಲನೆ ನೀಡಿ ಮಾತನಾಡಿ, ಈ ಮೇಳಕ್ಕೆ ರಾಜ್ಯದ ವಿವಿಧಡೆಯಿಂದ 36 ಸಾವಿರದ 500 ಅಭ್ಯರ್ಥಿಗಳು ಉದ್ಯೋಗ ಬಯಸಿ ನೊಂದಣಿ ಮಾಡಿಕೊಂಡಿದ್ದಾರೆ. 96 ಕಂಪನಿಗಳು ಇದರಲ್ಲಿ ಪಾಲ್ಗೊಂಡಿದ್ದು 11 ಸಾವಿರದ 218 ಜನರಿಗೆ ಉದ್ಯೋಗಕ್ಕೆ ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗಕ್ಕೆ ಆಫರ್ ಲೆಟರ್ ನೀಡಲಿದ್ದಾರೆಂದು ತಿಳಿಸಿದರು.

    ಉದ್ಯೋಗ ಮೇಳದಲ್ಲಿ ಟಾಟಾ, ಹಿಂದುಜಾ, ಹೊಂಡಾ ಸೇರಿದಂತೆ ಒಟ್ಟು 96 ಕಂಪನಿಗಳು ಭಾಗವಹಿಸಿವೆ. ಉದ್ಯೋಗ ಸಂದರ್ಶನಕ್ಕಾಗಿ 150 ಕೌಂಟರ್‍ಗಳನ್ನು ತೆರೆಯಲಾಗಿದೆ. ಉದ್ಯೋಗಕ್ಕಾಗಿ 7600 ಐಟಿಐ, 7000 ಪಿಯುಸಿ, 3200 ಎಸ್‍ಎಸ್‍ಎಲ್‍ಸಿ, 500 ಬಿಇ, 2500 ಸ್ನಾತೋಕತ್ತರ ಮತ್ತು 5500 ಇತರೆ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ತಮ್ಮ ಹೆಸರನ್ನು ನೊಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ ಶೇಕಡಾ 82 ರಷ್ಟು ಅಭ್ಯರ್ಥಿಗಳು ಜಿಲ್ಲೆಯವರಾಗಿದ್ದಾರೆ.

    ನಿಗಮದಿಂದ ಮುಂದಿನ ದಿನದಲ್ಲಿ ಭಾರತ ಸೈನ್ಯದಲ್ಲಿ ಸೇರಲು ಬಯಸುವ ಒಂದು ಸಾವಿರ ಯುವ ಜನತೆಗೆ ಬೆಳಗಾವಿ ಮತ್ತು ಮಡಿಕೇರಿಯಲ್ಲಿ ಎರೆಡು ತಿಂಗಳು ತರಬೇತಿ ನೀಡಲಿದೆ. ಈ ತಿಂಗಳ 19 ರಂದು ಬೆಂಗಳೂರಿನಲ್ಲಿ ಹಿರಿಯ ನಾಗರಿಕರಿಗೂ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರುಳಿಧರ ಹಾಲಪ್ಪ ಹೇಳಿದರು.

    ವಿಧಾನ ಪರಿಷತ್ ಸದಸ್ಯರಾದ ಅಮರನಾಥ್ ಪಾಟೀಲ್, ಅಲ್ಲಂ ವೀರಭದ್ರಪ್ಪ ಹಾಗೂ ಸಂಡೂರು ಶಾಸಕ ತುಕಾರಾಂ ಸೇರಿದಂತೆ ಹಲವು ಗಣ್ಯರು ಉದ್ಯೋಗ ಮೇಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

     

  • ಸ್ವಂತ ದುಡ್ಡಲ್ಲೇ ಉಚಿತ ಊಟ : ಬುದ್ದಿಮಾಂದ್ಯ ಮಕ್ಕಳ ಪಾಲಿನ ಅಮ್ಮ

    ಸ್ವಂತ ದುಡ್ಡಲ್ಲೇ ಉಚಿತ ಊಟ : ಬುದ್ದಿಮಾಂದ್ಯ ಮಕ್ಕಳ ಪಾಲಿನ ಅಮ್ಮ

    ಬಳ್ಳಾರಿ: ಸಾಮಾನ್ಯ ಮಕ್ಕಳಿಗೆ ಶಿಕ್ಷಣ ಕೊಡೋದು ಸುಲಭದ ಕೆಲಸ. ಆದ್ರೆ ಬುದ್ದಿಮಾಂದ್ಯ ಮಕ್ಕಳಿಗೆ ಶಿಕ್ಷಣ ಕೊಡೋದು ಮಾತ್ರ ಕಡುಕಷ್ಟ. ಆದ್ರೆ ಅಂತಹ ಅಸಾಧ್ಯವನ್ನು ತಮ್ಮ ಸ್ವಂತ ದುಡ್ಡಲ್ಲೇ `ಸಾಧ್ಯ’ ಎಂಬ ಶಾಲೆಯ ಮೂಲಕ ಮಾಡಿದ್ದಾರೆ ನಮ್ಮ ಪಬ್ಲಿಕ್ ಹೀರೋ.

    ಕೆ.ಟಿ.ಆರತಿ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ವಸತಿಸಹಿತ ಬುದ್ದಿಮಾಂದ್ಯ ಶಾಲೆ ಆರಂಭಿಸಿ 35 ಮಕ್ಕಳಿಗೆ ವಿಶೇಷ ಶಿಕ್ಷಣ ನೀಡುತ್ತಿದ್ದಾರೆ. ಕೊಡಗು ಮೂಲದವರಾದ ಆರತಿ ಅವರು ಮಂಗಳೂರು ವಿವಿಯಲ್ಲಿ ಎಂಎಸ್‍ಡಬ್ಲೂನಲ್ಲಿ 2ನೇ ಶ್ರೇಯಾಂಕ ಪಡೆದು ಈ ಶಾಲೆಯನ್ನು ಆರಂಭಿಸಿದ್ದಾರೆ.

    ಮೊದಲಿನಿಂದಲೂ ಬುದ್ದಿಮಾಂದ್ಯ ಮಕ್ಕಳಿಗಾಗಿ ಏನಾದರೂ ಸಹಾಯ ಮಾಡಬೇಕೆಂಬ ಆಸೆ ಇತ್ತು. ಈ ಹಿಂದೆ ಜಿಂದಾಲ್ ಸಂಸ್ಥೆಯಲ್ಲಿ ಬುದ್ದಿಮಾಂದ್ಯ ಶಾಲೆಯಲ್ಲಿ ಕೆಲಸ ಮಾಡಿದ್ರು. ಗಂಡ ಕೂಡಾ ಇದೇ ಜಿಂದಾಲ್‍ನಲ್ಲಿ ಕೆಲಸ ಮಾಡ್ತಿದ್ದರು. ಬಳಿಕ ತಾವೇ `ಸಾಧ್ಯ’ ಹೆಸರಿನಲ್ಲಿ ಬುದ್ದಿಮಾಂದ್ಯ ಶಾಲೆ ಆರಂಭಿಸಿ ಸಮಾಜ ಸೇವೆ ಮಾಡ್ತಿದ್ದಾರೆ.

    ಪತಿ ಹಾಗೂ ಕುಟುಂಬದವರಿಂದ ಆರತಿಗೆ ಧನ ಸಹಾಯ ಸಿಗುತ್ತದೆ. ಕೇವಲ ಕಟ್ಟಡದ ಬಾಡಿಗೆಗಾಗಿ ಪೋಷಕರಿಂದ ಅಲ್ಪಸ್ವಲ್ಪ ಹಣ ಪಡೆಯುತ್ತಾರೆ. ಬಡ ಪೋಷಕರು ಫೀಜ್ ಕೊಡದಿದ್ರೂ ಆ ಮಕ್ಕಳಿಗೂ ಶಿಕ್ಷಣ ನೀಡ್ತಿದ್ದಾರೆ. ಪ್ರತಿ 7 ಮಕ್ಕಳಿಗೆ ಒಬ್ಬರು ಶಿಕ್ಷಕರು ಮತ್ತು ಆಯಾರನ್ನು ನೇಮಿಸಿಕೊಂಡಿದ್ದಾರೆ. ಶಿಕ್ಷಣದ ಜೊತೆ ಮಕ್ಕಳಿಗೆ ಪೇಪರ್ ಕವರ್ಸ್, ಕ್ಯಾಂಡಲ್ಸ್ ಮಾಡೋದನ್ನ ಕಲಿಸುತ್ತಿದ್ದಾರೆ.

    ಆರತಿಯವರಿಗೆ ಸ್ವಂತ ಕಟ್ಟಡವೊಂದನ್ನು ಕಟ್ಟಿ ಅಲ್ಲಿ ಮತ್ತಷ್ಟು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವ ಆಸೆ ಇದೆ. ಅವರ ಆಸೆ ಈಡೇರಿಸಲು ಒಂದಿಷ್ಟು ಸಹೃದಯಿಗಳು ಕೈ ಜೋಡಿಸಲಿ ಎಂಬುದು ನಮ್ಮ ಆಶಯ.

    https://www.youtube.com/watch?v=0TSWuWHwZXQ

     

  • ಪತ್ನಿ, ನಾದಿನಿ ಜೊತೆ ಮೂವರು ಮಕ್ಕಳೂ ಸೇರಿ ಐವರನ್ನು ಕೊಚ್ಚಿ ಕೊಂದ!

    ಪತ್ನಿ, ನಾದಿನಿ ಜೊತೆ ಮೂವರು ಮಕ್ಕಳೂ ಸೇರಿ ಐವರನ್ನು ಕೊಚ್ಚಿ ಕೊಂದ!

    – ಕೊಲೆ ಮಾಡಿ ಪೊಲೀಸರಿಗೆ ಶರಣಾದ ರಾಕ್ಷಸ!

    – ಬಳ್ಳಾರಿಯ ಚಪ್ಪರದಳ್ಳಿಯಲ್ಲಿ ಭೀಕರ ಹತ್ಯಾಕಾಂಡ

    ಬಳ್ಳಾರಿ: ಪಾಪಿ ಪತಿಯೊಬ್ಬ ಹೆಂಡತಿ ಮತ್ತು ಹೆಂಡತಿ ತಂಗಿ, ತನ್ನ ಮೂವರು ಮಕ್ಕಳೂ ಸೇರಿ ಒಟ್ಟಾರೆ 5 ಮಂದಿಯನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಭೀಕರ ಹತ್ಯಾಕಾಂಡ ಹೊಸಪೇಟೆ ತಾಲೂಕಿನ ಕಂಪ್ಲಿ ಪಟ್ಟಣದ ಚಪ್ಪರದಳ್ಳಿಯಲ್ಲಿ ನಡೆದಿದೆ.

    ಕೂಲಿ ಕೆಲಸ ಮಾಡುತಿದ್ದ ತಿಪ್ಪಯ್ಯ ಎನ್ನುವ ವ್ಯಕ್ತಿ ತನ್ನ ಪತ್ನಿ ಪಕ್ಕೀರಮ್ಮ (36), ಪತ್ನಿ ತಂಗಿ ಗಂಗಮ್ಮ(30), ಮಕ್ಕಳಾದ ಪವಿತ್ರ (6), ಮಗ ರಾಜು(8), ಬಸಮ್ಮ (10) ಳನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

    ಈತನ ಇನ್ನೋರ್ವ ಪುತ್ರಿ 12 ವರ್ಷದ ರಾಜೇಶ್ವರಿ ಬೇರೆ ಊರಿನಲ್ಲಿದ್ದಿದ್ದರಿಂದ ಬದುಕಿದ್ದಾಳೆ. ಕೌಟುಂಬಿಕ ಕಲಹವೇ ಈ ಹತ್ಯಾಕಾಂಡಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ತನ್ನವರನ್ನೆಲ್ಲಾ ಕೊಂದ ಬಳಿಕ ಕೆಂಚನಗುಡ್ಡದ ತಿಪ್ಪಯ್ಯ ಕಂಪ್ಲಿ ಪೊಲೀಸ್ ಠಾಣೆಗೆ ಬಂದು ಪೊಲೀಸರಿಗೆ ಶರಣಾಗಿದ್ದಾನೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಐವರು ಒಂದೇ ಮನೆಯ ಒಂದೇ ಕೊಠಡಿಯಲ್ಲಿ ಕೊಲೆಯಾದ ಪರಿಣಾಮ ಮನೆ ತುಂಬೆಲ್ಲಾ ರಕ್ತ ಮಡುಗಟ್ಟಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಆರೋಪಿಯ ವಿಚಾರಣೆ ಮುಂದುವರೆಸಿದ್ದಾರೆ.

  • ಬಳ್ಳಾರಿ ಕೊಟ್ಟೂರೇಶ್ವರ ಜಾತ್ರೆಯಲ್ಲಿ ಉರುಳಿ ಬಿದ್ದ ರಥ

    ಬಳ್ಳಾರಿ ಕೊಟ್ಟೂರೇಶ್ವರ ಜಾತ್ರೆಯಲ್ಲಿ ಉರುಳಿ ಬಿದ್ದ ರಥ

     

    ಬಳ್ಳಾರಿ: ಜಿಲ್ಲೆಯ ಕೂಡ್ಲಗಿ ತಾಲೂಕಿನ ಕೊಟ್ಟೂರು ಗುರು ಬಸವೇಶ್ವರ ರಥೋತ್ಸವ ವೇಳೆಯಲ್ಲಿ ಚಕ್ರದ ಅಚ್ಚು ಮರಿದು ರಥ ಮುಗುಚಿ ಬಿದ್ದಿದೆ.

    ಚಕ್ರದ ಅಚ್ಚು ಮುರಿದು 60 ಅಡಿ ಎತ್ತರದ ರಥ ಬಿದ್ದಿದೆ. ರಥದ ಕೆಳಗೆ 50 ಕ್ಕೂ ಹೆಚ್ಚು ಭಕ್ತಾದಿಗಳು ಸಿಲುಕಿರುವ ಶಂಕೆಯಿದ್ದು, ಪರಿಹಾರ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.

    ರಥದ ಕೆಳಗೆ ಸಿಲುಕಿರುವ ಭಕ್ತಾದಿಗಳನ್ನು ರಕ್ಷಿಸುವ ಕಾರ್ಯ ಪೊಲೀಸರು ಮತ್ತು ಸ್ಥಳೀಯರ ಸಹಾಯದಿಂದ ಸಾಗಿದೆ. ರಥ ಕೆಳಗೆ ಸಿಲುಕಿರುವ ಭಕ್ತರ ನರಳಾಟ, ಚೀರಾಟ ಜೋರಾಗಿದೆ.

    ಪ್ರತಿ ವರ್ಷ ನಡೆಯುವ ಗುರು ಬಸವೇಶ್ವರ ರಥೋತ್ಸವದಲ್ಲಿ ಲಕ್ಷಾಂತರ ಜನರು ಭಾಗವಹಿಸುತ್ತಿದ್ದು, ಈ ವರ್ಷವೂ ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.

    .

    https://www.youtube.com/watch?v=iwUr8Y0qoQQ

     

     

    https://www.youtube.com/watch?v=oOGOlAPVqEE

     

  • ಬಯಲಿಗೆ ಬರುತ್ತಿವೆ ತುಂಗಭದ್ರಾ ಜಲಾಶಯದಲ್ಲಿನ ಮೊಸಳೆಗಳು!

    ಬಯಲಿಗೆ ಬರುತ್ತಿವೆ ತುಂಗಭದ್ರಾ ಜಲಾಶಯದಲ್ಲಿನ ಮೊಸಳೆಗಳು!

    ಬಳ್ಳಾರಿ: ಜಿಲ್ಲೆಯಲ್ಲಿರುವ ತುಂಗಭದ್ರಾ ಜಲಾಶಯದ ನೀರಿನ ಮಟ್ಟ ದಿನೇ ದಿನೇ ತಳ ಮುಟ್ಟುತ್ತಿದೆ. 100 ಟಿಎಂಸಿ ಸಾಮಥ್ರ್ಯದ ಜಲಾಶಯದಲ್ಲೀಗ ಕೇವಲ 4 ಟಿಎಂಸಿ ನೀರು ಮಾತ್ರ ಬಾಕಿ ಉಳಿದಿದ್ದು, ಡ್ಯಾಂನಲ್ಲಿದ್ದ ಮೊಸಳೆಗಳು ಬಯಲಿಗೆ ಬರುತ್ತಿವೆ.

    ಟಿಬಿ ಡ್ಯಾಂನಲ್ಲಿ ಹತ್ತಕ್ಕೂ ಹೆಚ್ಚು ಮೊಸಳೆಗಳಿವೆ. ಡ್ಯಾಂನಲ್ಲಿ ನೀರಿನ ಮಟ್ಟ ಕಡಿಮೆಯಾದ ಪರಿಣಾಮ ಜಲಾಶಯದಲ್ಲಿನ ಮೊಸಳೆಗಳು ಇದೀಗ ಒಂದೊಂದಾಗಿ ನೀರಿನಿಂದ ಹೊರಬರುತ್ತಿವೆ. ಇದು ಡ್ಯಾಂ ನೋಡಲು ಆಗಮಿಸುವ ಪ್ರವಾಸಿಗರಲ್ಲಿ ಭಯ ಮೂಡಿಸಿದೆ.

    ಮೊಸಳೆಗಳು ನೀರಿನಿಂದ ಹೊರಗೆ ಬರುತ್ತಿರುವ ಪರಿಣಾಮ ಅನಾಹುತವಾಗುವ ಮುನ್ನವೇ ಟಿಬಿ ಬೋರ್ಡ್ ಅಧಿಕಾರಿಗಳು ಎಚ್ಚೆತ್ತುಕೊಂಡು ಮೊಸಳೆಗಳನ್ನು ಬೇರೆಡೆ ಸಾಗಿಸಬೇಕಾಗಿದೆ. ಡ್ಯಾಂನಲ್ಲಿ ಡೆಡ್ ಸ್ಟೋರೇಜ್ ನೀರು ಬಾಕಿಯಿರುವ ಪರಿಣಾಮ ಮೊಸಳೆಗಳಿಗೆ ಆಹಾರ ಸಿಗದೆ ನೀರಿನಿಂದ ಹೊರಬರುತ್ತಿವೆ ಎನ್ನಲಾಗಿದೆ. ಆದ್ರೆ ಅಧಿಕಾರಿಗಳು ಅನಾಹುತವಾಗುವ ಮುನ್ನವೇ ಕ್ರಮ ಕೈಗೊಳ್ಳಬೇಕಾಗಿರುವುದು ಅವಶ್ಯವಾಗಿದೆ.

  • ಹಲ್ಲೆಯಲ್ಲಿ ದವಡೆ ಹಲ್ಲು ಮುರಿದು ಶ್ವಾಸಕೋಶದೊಳಗೆ ರಕ್ತ: ವ್ಯಕ್ತಿ ಸಾವು

    ಹಲ್ಲೆಯಲ್ಲಿ ದವಡೆ ಹಲ್ಲು ಮುರಿದು ಶ್ವಾಸಕೋಶದೊಳಗೆ ರಕ್ತ: ವ್ಯಕ್ತಿ ಸಾವು

    ರಾಯಚೂರು: ಸಿಂಧನೂರು ತಾಲೂಕಿನ ಅರಗಿನಮರ ಕ್ಯಾಂಪ್‍ನಲ್ಲಿ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಫೆಬ್ರವರಿ 12 ರಂದು ಮಾರಕಾಸ್ತ್ರಗಳಿಂದ ಹಲ್ಲೆಗೊಳಗಾದ 35 ವರ್ಷದ ಗಂಗಾಧರ ಚಿಕಿತ್ಸೆ ಫಲಕಾರಿಯಾಗದೆ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

    ರಾತ್ರಿ ವೇಳೆ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು ಮಲಗಿದ್ದ ಗಂಗಾಧರ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಕೂಡಲೇ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ದವಡೆ ಹಲ್ಲು ಮುರಿದು ಶಾಸ್ವಕೋಶದೊಳಗೆ ರಕ್ತ ಹರಿದ ಹಿನ್ನೆಲೆ ಗಂಗಾಧರ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

    ಅವಿವಾಹಿತನಾಗಿರುವ ಗಂಗಾಧರ್ ಮನೆಯ ಪಕ್ಕದಲ್ಲೇ ಪ್ರತ್ಯೇಕ ಕೋಣೆಯಲ್ಲಿ ಮಲಗಿದ್ದರು. ಎಂದಿನಂತೆ ಫೆ. 12ರಂದು ಕೂಡ ಬಾಗಿಲನ್ನು ಹಾಕದೇ ಮಲಗಿದ್ದ ಗಂಗಾಧರ್ ಮೇಲೆ ಹಲ್ಲೆ ನಡೆದಿತ್ತು. ಘಟನೆ ಹಿನ್ನೆಲೆ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸ್ ವಿಶೇಷ ತಂಡ ರಚಿಸಲಾಗಿದ್ದು ತನಿಖೆ ಮುಂದುವರೆದಿದೆ.

  • ಹಳೆ ದೋಸ್ತಿಯನ್ನೇ ಕೋರ್ಟಿಗೆಳೆದ ಕರುಣಾಕರರೆಡ್ಡಿ- ಸಂಸದ ಶ್ರೀರಾಮುಲುಗೆ ಸಮನ್ಸ್

    ಹಳೆ ದೋಸ್ತಿಯನ್ನೇ ಕೋರ್ಟಿಗೆಳೆದ ಕರುಣಾಕರರೆಡ್ಡಿ- ಸಂಸದ ಶ್ರೀರಾಮುಲುಗೆ ಸಮನ್ಸ್

    ಬಳ್ಳಾರಿ: ಅಂದು ಅವರಿಬ್ಬರ ಮಧ್ಯೆ ಬಿಡಿಸಲಾಗದ ದೋಸ್ತಿಯಿತ್ತು. ಆದ್ರೆ ಇಂದು ಕರುಣಾಕರರೆಡ್ಡಿ ಆತ್ಮೀಯ ಗೆಳೆಯ ಶ್ರೀರಾಮುಲು ವಿರುದ್ಧ ತೊಡೆ ತಟ್ಟಿ ನಿಂತಿದ್ದಾರೆ.

    ಗೆಳತನಕ್ಕಾಗಿ ಸರ್ಕಾರವನ್ನೆ ಅಲ್ಲಾಡಿಸಿದ್ದ ರೆಡ್ಡಿ ರಾಮುಲು ಸಹೋದರರ ಮಧ್ಯೆ ಇದೀಗ ಎಲ್ಲವೂ ಸರಿಯಿಲ್ಲ ಅನ್ನೋದು ತಿಳಿದುಬಂದಿದೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸಂಸದ ಶ್ರೀರಾಮುಲು ವಿರುದ್ಧ ಮಾಜಿ ಸಚಿವ ಕರುಣಾಕರರೆಡ್ಡಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.

    ಬಳ್ಳಾರಿಯ ಸುಷ್ಮಾ ಸ್ವರಾಜ್ ಕಾಲೋನಿಯಲ್ಲಿ ಸಂಸದ ಶ್ರೀರಾಮುಲು ಹಾಗೂ ಕರುಣಾಕರರೆಡ್ಡಿ ಒಂದಾಗಿ ಖರೀದಿಸಿದ್ದ 10 ಎಕರೆ ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಕರುಣಾಕರರೆಡ್ಡಿ ಬಳ್ಳಾರಿಯ ಸಿಜೆಎಂ ನ್ಯಾಯಾಲಯದಲ್ಲಿ ಆಸ್ತಿ ಮಾಲಿಕತ್ವದ ದಾವೆ ಹೂಡಿದ್ದಾರೆ.

    ಕರುಣಾಕರರೆಡ್ಡಿ ದೂರಿನ ಹಿನ್ನಲೆಯಲ್ಲಿ ನ್ಯಾಯಾಲಯ ಆಸ್ತಿ ಮಾಲೀಕತ್ವ ವಿಚಾರಕ್ಕೆ ಸಂಬಂಧಿಸಿದಂತೆ ಮೂವರಿಗೆ ಸಮನ್ಸ್ ಜಾರಿ ಮಾಡಿದೆ. ಸಂಸದ ಶ್ರೀರಾಮುಲು, ಕೆ ತಿಮ್ಮರಾಜು ಹಾಗೂ ರಾಘವೇಂದ್ರ ಎಂಬವರಿಗೆ ಸಮನ್ಸ್ ಜಾರಿಯಾಗಿದೆ. ಹೀಗಾಗಿ ರೆಡ್ಡಿ ರಾಮುಲು ಸಹೋದರ ಮಧ್ಯೆ ಎಲ್ಲವೂ ಸರಿಯಿಲ್ಲ ಅನ್ನೋದು ಮತ್ತೊಮ್ಮೆ ದೃಢಪಟ್ಟಿದೆ.

  • ಬಳ್ಳಾರಿಯ ವಿಮ್ಸ್ ನಲ್ಲಿ ಭಾರಿ ಅಗ್ನಿ ಅವಘಡ- ಆಸ್ಪತ್ರೆಯಿಂದ ಹೊರಗೆ ಓಡಿದ ರೋಗಿಗಳು!

    ಬಳ್ಳಾರಿಯ ವಿಮ್ಸ್ ನಲ್ಲಿ ಭಾರಿ ಅಗ್ನಿ ಅವಘಡ- ಆಸ್ಪತ್ರೆಯಿಂದ ಹೊರಗೆ ಓಡಿದ ರೋಗಿಗಳು!

    ಬಳ್ಳಾರಿ: ಜಿಲ್ಲೆಯ ವಿಮ್ಸ್ ಆಸ್ಪತ್ರೆಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಶಾರ್ಟ್ ಸರ್ಕ್ಯೂ ಟ್‍ನಿಂದ ಸಂಭವಿಸಿದ ಅಗ್ನಿ ಅವಘಡಕ್ಕೆ ಸಾಕಷ್ಟು ಪ್ರಮಾಣದ ಔಷಧಿಗಳು ಮತ್ತು ಹಳೆಯ ವಾರ್ಡನಲ್ಲಿದ್ದ ಬೆಡ್‍ಗಳು ಸುಟ್ಟು ಭಸ್ಮವಾಗಿವೆ.

    ಎಂಎಸ್1 ವಾರ್ಡನಲ್ಲಿ ಕಾಣಿಸಿಕೊಂಡ ಬೆಂಕಿಯಲ್ಲಿ ಅದೃಷ್ಟವಶಾತ್ ಯಾವುದೇ ರೋಗಿಗಳಿಗೆ ಅನಾಹುತವಾಗಿಲ್ಲ. ಶಾರ್ಟ್ ಸರ್ಕ್ಯೂ ಟ್‍ನಿಂದ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ವಾರ್ಡ್ ಪಕ್ಕದಲ್ಲಿದ್ದ ರೋಗಿಗಳು ಹಾಗೂ ಸಂಭಧಿಕರು ಆಸ್ಪತ್ರೆಯಿಂದ ಹೊರಗೆ ಓಡಿ ಹೋಗಿದ್ದಾರೆ.

    ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ 2 ವಾಹನಳು ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

     

  • ಸಾವಿನಲ್ಲೂ ಒಂದಾದ ದಂಪತಿ- ಪತ್ನಿ ತೊಡೆಯ ಮೇಲೆ ಮಲಗಿದ್ದಾಗಲೇ ಪ್ರಾಣ ಬಿಟ್ಟ ಪತಿ!

    ಬಳ್ಳಾರಿ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕೊಮಾರನಹಳ್ಳಿ ತಾಂಡಾದ ದಂಪತಿ ಸಾವಿನಲ್ಲೂ ಒಂದಾದ ಘಟನೆ ನಡೆದಿದೆ.

    65 ವರ್ಷದ ಚಂದ್ರನಾಯ್ಕ ಹಾಗೂ 60 ವರ್ಷದ ರುಕ್ಮಿಣಿಬಾಯಿ ಸಾವಿನಲ್ಲೂ ಒಂದಾದ ದಂಪತಿ. ಚಂದ್ರನಾಯ್ಕ ಇಂದು ಸಂಜೆ ಪತ್ನಿಯ ತೊಡೆಯ ಮೇಲೆ ಮಲಗಿದ್ದಾಗಲೇ ಪ್ರಾಣ ಬಿಟ್ಟಿದ್ದಾರೆ. ನಂತರ ಕೆಲವೇ ಕ್ಷಣಗಳಲ್ಲಿ ಪತ್ನಿ ರುಕ್ಮಿಣಿಬಾಯಿಯೂ ಸಾವನ್ನಪ್ಪಿದ್ದಾರೆ.

    ದಂಪತಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಒಂದೆಡೆ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ರೆ, ಊರಿನ ಜನರು ಮೃತ ದಂಪತಿ ನೋಡಿ ಎಂತಾ ಸಾವೂ. ಜೊತೆ ಜೊತೆ ಬಾಳಿ ಸಾವಿನಲ್ಲೂ ಕೂಡಾ ಒಂದಾದ್ರೂ ಅಂತಿದ್ದಾರೆ.

  • ಕಪ್ಪತಗುಡ್ಡ ಉಳಿಸಲು ಉಪವಾಸ ಸತ್ಯಾಗ್ರಹ – 3 ದಿನಗಳ ಹೋರಾಟಕ್ಕೆ ಗಣ್ಯರ ಸಾಥ್

    – ಇತ್ತ ಬಳ್ಳಾರಿಯಲ್ಲಿ ಬೂದಿಗುಡ್ಡ ಸಂರಕ್ಷಣೆ ಕೂಗು

    ಬಳ್ಳಾರಿ,ಗದಗ: ಉತ್ತರ ಕರ್ನಾಟಕದ ಸಹ್ಯಾದ್ರಿ, ಸಸ್ಯಕಾಶಿ ಕಪ್ಪತ್ತಗುಡ್ಡದ ಸಂರಕ್ಷಣೆಗಾಗಿ ಹೋರಾಟ ತೀವ್ರಗೊಂಡಿದೆ. ಕಪ್ಪತ್ತಗುಡ್ಡ ಬಗೆಯಲು ಹವಣಿಸುತ್ತಿರುವ ಬಲ್ದೋಟಾ ಕಂಪನಿ ವಿರುದ್ಧದ ಹೋರಾಟಕ್ಕೆ ಹೊಸ ರೂಪು ನೀಡಲಾಗಿದೆ. ಅಹೋರಾತ್ರಿ ಧರಣಿ ಜೊತೆಗೆ ಮೂರು ದಿನಗಳ ಕಾಲ ಉಪವಾಸಕ್ಕೆ ತೀರ್ಮಾನಿಸಲಾಗಿದೆ.

    ಇದರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಹೆಚ್‍ಎಸ್ ದೊರೆಸ್ವಾಮಿ, ಹಿರಿಯ ಸಾಹಿತಿ ಪಾಟೀಲ್ ಪುಟ್ಟಪ್ಪ, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಎಸ್.ಆರ್ ಹಿರೇಮಠ್, ತೋಂಟದಾರ್ಯ ಸ್ವಾಮೀಜಿ ಭಾಗವಹಿಸುತ್ತಿದ್ದಾರೆ. ಬೆಳಗ್ಗೆ ತೋಂಟದ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ತೋಂಟದಾರ್ಯ ಮಠದಿಂದ ಗಾಂಧಿ ವೃತ್ತದವರೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಧರಣಿ ವೇಳೆ ಬೀದಿನಾಟಕ, ಜನಪರ ಗೀತೆ ಹಾಡಿ ಸಾರ್ವಜನಿಕರನ್ನು ಜಾಗೃತಿಗೊಳಿಸಲಾಗಿದೆ.

    ಇತ್ತ ಬಳ್ಳಾರಿ ಹೊಸಪೇಟೆಯಲ್ಲೂ ಬೂದಿಗುಡ್ಡ ರಕ್ಷಣೆಗಾಗಿ ಸ್ಥಳೀಯರು ಸಿಡಿದೆದ್ದಿದ್ದಾರೆ. ತೋರಣಗಲ್ ಬಳಿ ರಾಷ್ಟ್ರೀಯ ಹೆದ್ದಾರಿಯನ್ನು ವಿಸ್ತರಣೆ ಮಾಡಲಾಗ್ತಿದೆ. ಆದ್ರೆ ಈ ಕಾಮಗಾರಿಯಿಂದ ಸಾವಿರಾರು ವರ್ಷಗಳ ಇತಿಹಾಸವಿರುವ ಬೂದಿಗುಡ್ಡ ನಾಶವಾಗುವ ಪರಿಸ್ಥಿತಿ ಬಂದಿದೆ. ಹೀಗಾಗಿ ಶಿಲಾಯುಗ ಕಾಲದ ಬೂದಿಗುಡ್ಡವನ್ನು ರಕ್ಷಣೆಗಾಗಿ ಕೂಗು ಜೋರಾಗಿದೆ. ಬೂದಿಗುಡ್ಡ ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಸುಪರ್ದಿಗೆ ಬರುತ್ತದೆ. ಜಿಲ್ಲಾಡಳಿತ ಈ ಹಿಂದೆ ಇದರ ಸುತ್ತಮುತ್ತ ಸಂರಕ್ಷಣಾ ಗೋಡೆ ಸಹ ನಿರ್ಮಿಸಿದೆ. ಆದ್ರೆ ಈಗ ರಾಷ್ಠೀಯ ಹೆದ್ದಾರಿ ಪ್ರಾಧಿಕಾರ ಬೂದಿಗುಡ್ಡವನ್ನು ಒಡೆದು ಹಾಕಿ ರಸ್ತೆ ಅಗಲೀಕರಣಕ್ಕೆ ಮುಂದಾಗಿರೋದು ಹೇಗೆ ಅನ್ನೋದು ಎಲ್ಲರ ಪ್ರಶ್ನೆ.