Tag: ಬಳ್ಳಾರಿ

  • ಚಿತ್ರಮಂದಿರದಲ್ಲಿ ಬಾಹುಬಲಿ ಟ್ರೇಲರ್ ಬಿಡುಗಡೆ ಮಾಡದಂತೆ ಕರವೇ ಪ್ರತಿಭಟನೆ

    ಚಿತ್ರಮಂದಿರದಲ್ಲಿ ಬಾಹುಬಲಿ ಟ್ರೇಲರ್ ಬಿಡುಗಡೆ ಮಾಡದಂತೆ ಕರವೇ ಪ್ರತಿಭಟನೆ

    ಬಳ್ಳಾರಿ: ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ಬಾಹುಬಲಿ-2 ಚಿತ್ರದ ಟ್ರೇಲರ್ ಬಿಡುಗಡೆ ಮಾಡದಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬಳ್ಳಾರಿ ನಗರದ ರಾಧಿಕಾ ಚಿತ್ರಮಂದಿರದ ಮುಂದೆ ಪ್ರತಿಭಟನೆ ನಡೆಸಿದರು.

    ಇಂದು ರಾಧಿಕಾ ಚಿತ್ರಮಂದಿರದಲ್ಲಿ ಬಾಹುಬಲಿ-2ರ ಟ್ರೇಲರ್ ಬಿಡುಗಡೆ ಆಗಬೇಕಿತ್ತು. ಟ್ರೇಲರ್ ಬಿಡುಗಡೆ ಮಾಡದಂತೆ ಒತ್ತಾಯಿಸಿ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರು ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ನಟ ಸತ್ಯರಾಜ್ ಕರ್ನಾಟಕದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಟ್ರೇಲರ್ ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿ ಪ್ರತಿಭಟಿಸಿದರು.

    ಕರವೇ ಕಾರ್ಯಕರ್ತರು ಚಿತ್ರಮಂದಿರದ ಮುಂದೆ ಕಪ್ಪು ಬಾವುಟ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರು ಕೆಲ ಕಾಲ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ನಂತರ ಪೊಲೀಸರ ಸೂಚನೆ ಮೇರೆಗೆ ಚಿತ್ರಮಂದಿರ ಮಾಲೀಕರು ಟ್ರೇಲರ್ ಬಿಡುಗಡೆ ಮುಂದೂಡಿಕೆ ಮಾಡಿದ್ದಾರೆ.

    ಇಂದು ರಾಜಮೌಳಿ ನಿರ್ದೇಶನದ ಬಾಹುಬಲಿ-2 ಚಿತ್ರದ ಟ್ರೇಲರ್ ಯೂಟ್ಯೂಬ್‍ನಲ್ಲಿ ಬಿಡುಗಡೆಯಾಗಿದೆ. ಟ್ರೇಲರ್ ಇಂದು ಬೆಳಗ್ಗೆ ಬಿಡುಗಡೆಯಾದ ಕೇವಲ 5 ಗಂಟೆಯಲ್ಲಿ 7 ಲಕ್ಷಕ್ಕೂ ಅಧಿಕ ವ್ಯೂ ಕಂಡಿದೆ. ಸಿನಿಮಾ ಏಪ್ರಿಲ್ 28 ರಂದು ಜಗತ್ತಿನಾದ್ಯಂತ ತೆರೆಕಾಣಲಿದೆ.

    ಇದನ್ನೂ ಓದಿ: ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಯಾಕೆ?… ಬಾಹುಬಲಿ ಟ್ರೇಲರ್ ನೋಡಿ…

  • ಬಳ್ಳಾರಿ: ಬಿಸಿಲಿಗೆ ಕರಗಿಹೋಯ್ತು ವಿದೇಶಗಳಿಗೆ ರಫ್ತಾಗುತ್ತಿದ್ದ ಕರಿಬೇವು!

    ಬಳ್ಳಾರಿ: ಬಿಸಿಲಿಗೆ ಕರಗಿಹೋಯ್ತು ವಿದೇಶಗಳಿಗೆ ರಫ್ತಾಗುತ್ತಿದ್ದ ಕರಿಬೇವು!

    ವೀರೇಶ್ ದಾನಿ 

    ಬಳ್ಳಾರಿ: ಜಿಲ್ಲೆಯಲ್ಲಿ ಈ ಭಾರಿ ಎಂದೂ ಕಂಡರಿಯದ ಭೀಕರ ಬರಗಾಲ ಪರಿಸ್ಥಿತಿ ಆವರಿಸಿದೆ. ಬರದ ತೀವ್ರತೆಗೆ ರೈತರು ಬೆಳೆದ ಬೆಳೆಗಳಲ್ಲಾ ಒಣಗಿ ಹೋಗಿವೆ. ಅದರಲ್ಲೂ ಅರಬ್ ದೇಶಗಳು ಸೇರಿದಂತೆ ವಿವಿಧ ದೇಶಗಳಿಗೆ ರಪ್ತಾಗುತ್ತಿದ್ದ ಕರಿಬೇವು ಸೊಪ್ಪಿಗೂ ಈ ಬಾರಿ ಬರದ ಬಿಸಿ ತಟ್ಟಿದೆ. ನೀರಿಲ್ಲದ ಪರಿಣಾಮ ಕರಿಬೇವು ಬೆಳೆದ ರೈತರ ಬೆಳೆಗಳಲ್ಲಾ ಸಂಪೂರ್ಣ ಒಣಗಿ ಹೋಗಿವೆ.

    ಎಲ್ಲರ ಮನೆಯ ಅಡುಗೆಯ ಒಗ್ಗರಣೆಗೆ ಕರಿಬೇವು ಸೊಪ್ಪು ಬೇಕೆ ಬೇಕು. ಅದರಲ್ಲೂ ದೂರದ ಅರಬ್ ದೇಶಗಳಿಗೆ ರಪ್ತಾಗುತ್ತಿದ್ದ ಬಳ್ಳಾರಿಯ ಸುವಾಸನೆ ಭರಿತ ಕರಬೇವು ಸೊಪ್ಪಿನ ಬೆಳೆಗಳೆಲ್ಲಾ ಈ ಬಾರಿ ಜಿಲ್ಲೆಯಲ್ಲಿ ಒಣಗಿ ಹೋಗಿವೆ. ಅಷ್ಟೊಂದು ಪ್ರಮಾಣದಲ್ಲಿ ಕರಿಬೇವು ಸೊಪ್ಪಿಗೂ ಬರದ ಬಿಸಿ ತಟ್ಟಿದೆ. ರೈತರಿಗೆ ಆದಾಯ ತರುತ್ತಿದ್ದ ಕರಿಬೇವು ಬೆಳೆಯೆಲ್ಲಾ ಒಣಗಿ ಹೋದ ಪರಿಣಾಮ ಬಳ್ಳಾರಿ ತಾಲೂಕಿನ ಬೆಳಗಲ್, ಬೆಳಗಲ್ ತಾಂಡಾ ಸೇರಿದಂತೆ ಹಲವು ಹಳ್ಳಿಗಳಲ್ಲಿ ಬೆಳೆದ ನೂರಾರು ಎಕರೆಯಲ್ಲಿನ ಕರಿಬೇವು ಬೆಳೆ ಇದೀಗ ನೀರಿಲ್ಲದೆ ಸಂಪೂರ್ಣವಾಗಿ ನಾಶವಾಗಿದೆ.

    ಬಳ್ಳಾರಿ ಜಿಲ್ಲೆಯಲ್ಲಿ ಕಳೆದ 4-5 ವರ್ಷಗಳಿಂದ ಸರಿಯಾಗಿ ಮಳೆಯಾಗದ ಪರಿಣಾಮ, ರೈತರ ತೋಟಗಾರಿಕೆ ಬೆಳೆಗಳಿಗೂ ನೀರು ಪೂರೈಕೆ ಆಗುತ್ತಿಲ್ಲ. ಇನ್ನು ರೈತರು ಬೋರ್‍ವೆಲ್ ಗಳನ್ನು 500 ರಿಂದ 700 ಅಡಿ ಕೊರೆದರು ನೀರು ಸಿಗುತ್ತಿಲ್ಲ.

    ಒರಿಸ್ಸಾ ರಾಜ್ಯದಿಂದ ಲಕ್ಷಾಂತರ ರೂಪಾಯಿ ಕೊಟ್ಟು ಬೀಜ ಖರೀದಿಸಿ ಕರಿಬೇವು ಸೊಪ್ಪು ಬೆಳೆದಿದ್ದವರಿಗೆ ನೀರು ಸಿಗದ ಪರಿಣಾಮ ರೈತರು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಕಡಿಮೆ ನೀರು ಬಳಸಿ ತೋಟಗಾರಿಕೆ ಮಾಡುವ ಮೂಲಕ ಕರಿಬೇವು ಬೆಳೆದಿದ್ದ ರೈತರಿಗೆ ಇದೀಗ ಸರ್ಕಾರ ಬರ ಪರಿಹಾರ ನೀಡುವ ಮೂಲಕ ನಷ್ಟ ಹೊಂದಿರುವ ರೈತರ ಸಹಾಯಕ್ಕೆ ಮುಂದಾಗಬೇಕಿದೆ.

     

  • ಬಳ್ಳಾರಿಯಲ್ಲಿ ಜೀವಜಲಕ್ಕಾಗಿ ಹಾಹಾಕಾರ- ಆಂಧ್ರದ ಬಿಂದಿಗೆ ನೀರಿಗೆ 10 ರೂ. ಕೊಡ್ಬೇಕು

    ಬಳ್ಳಾರಿಯಲ್ಲಿ ಜೀವಜಲಕ್ಕಾಗಿ ಹಾಹಾಕಾರ- ಆಂಧ್ರದ ಬಿಂದಿಗೆ ನೀರಿಗೆ 10 ರೂ. ಕೊಡ್ಬೇಕು

    – ಇರೋ ಬೋರ್‍ವೆಲ್‍ಗಳಲ್ಲಿ ವಿಷಯುಕ್ತ ನೀರು

    ಬಳ್ಳಾರಿ: ರಾಜ್ಯದಲ್ಲಿ ಈ ಬಾರಿ ಕಂಡು ಕೇಳರಿಯದ ಬರಗಾಲ ಆವರಿಸಿದೆ. ಕುಡಿಯುವ ನೀರಿಗಾಗಿ ಜನರು ಪರಿತಪಿಸುವಂತಾಗಿದೆ. ಅತ್ತ ಗಣಿನಾಡು ಬಳ್ಳಾರಿಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಅಲ್ಲಿನ ಪರಿಸ್ಥಿತಿ ಯಾವ ಹಂತಕ್ಕೆ ತಲುಪಿದೆಯೆಂದರೆ ಕುಡಿಯಲು ನೀರು ಬೇಕಾದ್ರೆ ದುಡ್ಡು ಕೊಡಲೇಬೇಕಾದ ಪರಿಸ್ಥಿತಿ ಎದುರಾಗಿದೆ.

    ವಾಹನದಲ್ಲಿ ಸಿಂಟ್ಯಾಕ್ಸ್ ಇಟ್ಟುಕೊಂಡು ನೀರಿನ ಬ್ಯುಸಿನೆಸ್. ದುಡ್ಡು ಕೊಟ್ಟು ನೀರು ತುಂಬಿಸಿಕೊಳ್ತಿರುವ ಜನ. ಈ ದೃಶ್ಯ ಕಂಡು ಬಂದಿದ್ದು ಗಣಿನಾಡು ಬಳ್ಳಾರಿಯಲ್ಲಿ. ಇಲ್ಲಿನ ಚಳ್ಳರ್ಗುಕಿ, ಯಾಳ್ಬಿ, ಕಗ್ಗಲ್ ಮತ್ತು ಸಂಡೂರಿನ ಕುಡತಿನಿ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಹೀಗಾಗಿ ಒಂದು ಬಿಂದಿಗೆ ನೀರಿಗೆ 10 ರೂಪಾಯಿ ಕೊಡಬೇಕಾದ ಪರಿಸ್ಥಿತಿ ಬಂದೊದಗಿದೆ.

    ಈ ಗ್ರಾಮಗಳಲ್ಲಿ ಹೆಸರಿಗೇನೋ ಬೋರ್‍ವೆಲ್‍ಗಳಿವೆ. ಆದ್ರೆ ಅವುಗಳಲ್ಲಿ ಬರ್ತಿರೋದು ಮಾತ್ರ ಫ್ಲೋರೈಡ್‍ಯುಕ್ತ ನೀರು. ಆ ನೀರು ಕುಡಿದರೆ ವಾಂತಿ, ಬೇದಿ, ಹೊಟ್ಟೆನೋವು, ಕೀಲುಬೇನೆಯಂತಹ ರೋಗಗಳಿಗೆ ತುತ್ತಾಗೋದು ಗ್ಯಾರಂಟಿ. ಹೀಗಾಗಿ ಆಂಧ್ರದಿಂದ ಪೂರೈಕೆಯಾಗ್ತಿರುವ ನೀರೇ ಇವರ ಪಾಲಿಗೆ ಜೀವಜಲವಾಗಿದೆ.

    ಜಿಲ್ಲಾಡಳಿತ ಕೆಲವೆಡೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ರೂ ಅವುಗಳಿಂದ ಜನರಿಗೆ ಪ್ರಯೋಜನವೇ ಅಗಿಲ್ಲ. ಜನನಾಯಕರು ಇನ್ನಾದ್ರೂ ಎಚ್ಚೆತ್ತುಕೊಂಡು ಜನರ ದಾಹ ತಣಿಸುವ ಕೆಲಸ ಮಾಡಬೇಕಿದೆ.

  • ಕುರುಗೋಡು ದೊಡ್ಡ ಬಸವೇಶ್ವರ ರಥೋತ್ಸವ: ಚಕ್ರಕ್ಕೆ ಸಿಲುಕಿ ಓರ್ವ ಸಾವು

    ಕುರುಗೋಡು ದೊಡ್ಡ ಬಸವೇಶ್ವರ ರಥೋತ್ಸವ: ಚಕ್ರಕ್ಕೆ ಸಿಲುಕಿ ಓರ್ವ ಸಾವು

    ಬಳ್ಳಾರಿ: ಭಾನುವಾರದಂದು ಜಿಲ್ಲೆಯ ದೇವಾಲಯಗಳ ನಗರ ಕುರುಗೋಡಿನಲ್ಲಿ ನಡೆದ ದೊಡ್ಡಬಸವೇಶ್ವರ ರಥೋತ್ಸವದಲ್ಲಿ ರಥದ ಚಕ್ರಕ್ಕೆ ಸಿಲುಕಿ ಓರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ.

    ಸಿರುಗುಪ್ಪ ತಾಲೂಕಿನ ಸಿರಿಗೆರೆ ಗ್ರಾಮದ ನಿವಾಸಿ ಸಿದ್ದಲಿಂಗಪ್ಪ (25) ಮೃತ ಯುವಕ. ತೇರನ್ನು ಎಳೆಯುವಾಗ ನೋಡಲು ಬಂದ ಸಿದ್ದಲಿಂಗಪ್ಪ ತೇರಿಗೆ ಹಾಕುತ್ತಿದ್ದ ಸನ್ನೆ ಸಲಕರಣೆ ತಗುಲಿ ಕೆಳಗೆ ಬಿದ್ದಿದ್ದಾರೆ. ಇದರಿಂದ ಅವರ ಎರಡೂ ಕಾಲುಗಳಿಗೆ ತೀವ್ರವಾಗಿ ಗಾಯವಾಗಿದ್ದು, ತಕ್ಷಣ ಅವರನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕರೆ ತಂದು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಿದ್ದಲಿಂಗಪ್ಪ ಸಾವನ್ನಪ್ಪಿದ್ದಾರೆ.

    ಇದನ್ನೂ ಓದಿ: ವೀಡಿಯೋ: ಕೊಟ್ಟೂರೇಶ್ವರ ಜಾತ್ರೆಯಲ್ಲಿ ರಥ ಬೀಳೋ ಮೊದ್ಲೇ ನಡೆದಿತ್ತು ಅಚ್ಚರಿ

    ಪ್ರತಿ ವರ್ಷದಂತೆ ಹೋಳಿ ಹುಣ್ಣಿಮೆ ದಿನ ಕುರುಗೋಡು ದೊಡ್ಡ ಬಸವೇಶ್ವರ ರಥೋತ್ಸವ ನಡೆಯುತ್ತದೆ. ಈ ಬಾರಿಯೂ ಕೂಡ ರಾಜ್ಯದ ವಿವಿಧಡೆಯಿಂದ ಬಂದ ಸಾವಿರಾರು ಭಕ್ತರು ವರ್ಣಾಲಂಕೃತ ರಥೋತ್ಸವಕ್ಕೆ ಹಣ್ಣು, ಹೂ ಎಸೆದು ಭಕ್ತಿ ಅರ್ಪಿಸಿದರು. ಒಂದು ವಾರದ ಕಾಲ ಜಾತ್ರಾ ಮಹೋತ್ಸವ ನಡೆಯುತ್ತದೆ. ಸುತ್ತ ಮುತ್ತಲಿನ ಹಳ್ಳಿಗಳ ಜನತೆ ತಮ್ಮ ಕೃಷಿಗೆ ಅಗತ್ಯವಾದ ಸಾಮಾಗ್ರಿಗಳನ್ನು ಈ ಜಾತ್ರೆಯಲ್ಲಿ ಖರೀದಿಸುತ್ತಾರೆ.

    ಇದನ್ನೂ ಓದಿ: ಬಳ್ಳಾರಿ ಕೊಟ್ಟೂರೇಶ್ವರ ಜಾತ್ರೆಯಲ್ಲಿ ಉರುಳಿ ಬಿದ್ದ ರಥ

  • ಗಣಿ ನಾಡಿನಲ್ಲಿ 625 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಶುರುವಾಗಿದೆ ಹಾಹಾಕಾರ !

    ಗಣಿ ನಾಡಿನಲ್ಲಿ 625 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಶುರುವಾಗಿದೆ ಹಾಹಾಕಾರ !

    -ಮಾಡೋಕೆ ಕೆಲಸವಿಲ್ಲದೆ ಗುಳೆ ಹೊರಟಿದೆ ಕೂಲಿ ಕಾರ್ಮಿಕ ವರ್ಗ
    -ಮೇವಿಲ್ಲದೆ ಕಂಗಾಲಾಗಿವೆ ಜಾನುವಾರುಗಳು

    ವಿರೇಶ್ ದಾನಿ

    ಬಳ್ಳಾರಿ: ಗಣಿ ಜಿಲ್ಲೆ ಈಗ ಅಕ್ಷರಶಃ `ಬರ’ ಪೀಡಿತ ಜಿಲ್ಲೆಯಾಗಿ ಮಾರ್ಪಡಾಗಿದೆ. ಹಿಂದೆಂದೂ ಕಾಣದ ಭೀಕರ ಕ್ಷಾಮ ಈ ಬಾರಿ ಬಳ್ಳಾರಿ ಜಿಲ್ಲೆಯಲ್ಲಿ ಎದುರಾಗಿದೆ. ಒಂದೆಡೆ ಮಳೆಯಾಶ್ರಿತ ಹಾಗೂ ನೀರಾವರಿ ಪ್ರದೇಶಗಳಲ್ಲಿ ನೀರು, ಮೇವು, ಉದ್ಯೋಗಕ್ಕಾಗಿ ಪರದಾಟ ಕಂಡು ಬರುತ್ತಿದ್ದರೆ ಇನ್ನೊಂದೆಡೆ ಬೇಸಿಗೆಯಲ್ಲಿ ಬಿರು ಬಿಸಿಲಿನ ತಾಪದ ಜೊತೆಗೆ ದಾಹವೂ ಹೆಚ್ಚಾಗಿದೆ. ಇನ್ನು ಸತತ 3 ವರ್ಷಗಳ ಬರದಿಂದಾಗಿ ರೈತರ ಬದುಕು ಅಕ್ಷರಶಃ ಅತಂತ್ರವಾಗಿದೆ. ಸಾಕಷ್ಟು ಸಂಖ್ಯೆಯ ಕೃಷಿ ಕಾರ್ಮಿಕರು ಹಾಗೂ ರೈತ ಸಮೂಹ ಈಗ ನಗರ ಪ್ರದೇಶದತ್ತ ಕೆಲಸ ಅರಸಿ ಗುಳೆ ಹೊರಟಿದ್ದಾರೆ.

    ಬಳ್ಳಾರಿ ಜಿಲ್ಲೆಯಲ್ಲಿ ಮಳೆಯಾಶ್ರಿತ ತಾಲೂಕುಗಳಾದ ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಸಂಡೂರು ಮತ್ತು ಹೂವಿನಹಡಗಲಿಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು, ಮೇವಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ. ತುಂಗಭದ್ರ ಜಲಾಶಯದ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಹೊಸಪೇಟೆ, ಸಿರುಗುಪ್ಪ, ಬಳ್ಳಾರಿ ತಾಲೂಕುಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಜಿಲ್ಲೆಯ ಎಲ್ಲ ಕೆರೆ-ಕಟ್ಟೆಗಳು ನೀರಿಲ್ಲದೆ ಸಂಪೂರ್ಣವಾಗಿ ಖಾಲಿಯಾಗಿವೆ. ಇನ್ನು ಜಿಲ್ಲೆಯ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ ಕೇವಲ 4 ಟಿಎಂಸಿ ಮಾತ್ರ ಡೆಡ್ ಸ್ಟೋರೇಜ್ ನೀರು ಸಂಗ್ರಹವಿರುವುದರಿಂದ ಜಿಲ್ಲೆಯಲ್ಲಿ ಈ ಬಾರಿ ಕುಡಿಯುವ ನೀರಿನ ಅಭಾವ ತ್ರೀವಗೊಂಡಿದೆ.

    ಸಂಡೂರು ತಾಲೂಕಿನಲ್ಲಿ 30ಕ್ಕೂ ಅಧಿಕ ಕೆರೆಗಳಿದ್ದು, ಚೋರುನೂರು, ಬೊಮ್ಮಘಟ್ಟ ಸೇರಿ ಬೆರಳೆಣಿಕೆ ಕೆರೆಗಳಲ್ಲಿ ಅಲ್ಪ ಪ್ರಮಾಣದ ನೀರಿದೆ. ಉಳಿದಂತೆ ಬಹುತೇಕ ಕೆರೆಗಳು ಬತ್ತಿಹೋಗಿವೆ. ಸಿರಗುಪ್ಪ ತಾಲೂಕಿನ 31 ಕೆರೆಗಳಲ್ಲಿ ಸಿರಿಗೇರಿ, ಕರೂರು, ರಾರಾವಿ, ಹಳೇಕೋಟೆ ಗ್ರಾಮದ ಕೆರೆಗಳು ಹೊರತುಪಡಿಸಿ ಇನ್ನುಳಿದವುಗಳಲ್ಲಿ ಕೊಂಚ ನೀರು ಸಂಗ್ರಹವಿದೆ.

    ಶೇ.35 ರಷ್ಟು ಮಳೆ ಅಭಾವ: ಜಿಲ್ಲೆಯಲ್ಲಿ ಕಳೆದ ಮುಂಗಾರು ಹಾಗೂ ಹಿಂಗಾರು ಮಳೆ ಪ್ರಮಾಣವು ವಾಡಿಕೆಗಿಂತಲೂ ಶೇ.35 ರಷ್ಟು ಕಡಿಮೆ ದಾಖಲಾಗಿದೆ. ಮುಂಗಾರು ಹಂಗಾಮಿನಲ್ಲಿ 1.98 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಕೃಷಿ ಬೆಳೆ ಹಾನಿಯಾಗಿ ಸುಮಾರು 139.98 ಕೋಟಿ ರೂ. ನಷ್ಟವಾಗಿದೆ. 7947 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ತೋಟಗಾರಿಕೆ ಬೆಳೆ ಹಾನಿಯಿಂದಾಗಿ 709.91 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

    ಮುಂಗಾರು ಬೆಳೆ ಹಾನಿ ಪರಿಹಾರ ನೀಡಲು ಜಿಲ್ಲೆಯ 1.53 ಲಕ್ಷ ರೈತರನ್ನು ಗುರುತಿಸಲಾಗಿದೆ. ಇನ್ನು ಹಿಂಗಾರು ಹಂಗಾಮಿನ ಸ್ಥಿತಿ ಇದಕ್ಕಿಂತಲೂ ಭಿನ್ನವಾಗಿಲ್ಲ. ಕೃಷಿಯಲ್ಲಿ 1.41 ಲಕ್ಷ ಹೆಕ್ಟೇರ್ ಗುರಿಯಲ್ಲಿ 29657 ಹೆಕ್ಟೇರ್ ಹಾಗೂ ತೋಟಗಾರಿಕೆಯಲ್ಲಿ 3602 ಹೆಕ್ಟೇರ್ ಪೈಕಿ 932 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ತುಂಗಭದ್ರ ಜಲಾಶಯವನ್ನು ಅವಲಂಬಿಸಿರುವ ಜಿಲ್ಲೆಯ ರೈತರು ಭತ್ತ, ಕಬ್ಬು ನಾಟಿ ಮಾಡುವುದೇ ಹೆಚ್ಚು. ಆದರೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರಥಮ ಬೆಳೆಗೂ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಇನ್ನು 2ನೇ ಬೆಳೆಯ ಮಾತಂತೂ ಇಲ್ಲವಾಗಿದೆ.

    ಖಾರವಾದ ಮಿರ್ಚಿ: 2ನೇ ಬೆಳೆ ಬಿತ್ತನೆಗೆ ನೀರಿನ ಅಭಾವದ ಹಿನ್ನೆಲೆಯಲ್ಲಿ ಸಿರುಗುಪ್ಪ ಮತ್ತು ಬಳ್ಳಾರಿ ತಾಲೂಕಿನ ಬಹುತೇಕ ರೈತರು ಈ ಬಾರಿ ಮೆಣಸಿನಕಾಯಿ ಬೆಳೆಯನ್ನು ಹೆಚ್ಚಾಗಿ ಬೆಳೆದರು. ಉತ್ತಮ ಇಳುವರಿಯೂ ಬಂತು. ಆದರೆ ಮಾರುಕಟ್ಟೆಯಲ್ಲಿ ಧಾರಣೆ ಕುಸಿತದಿಂದಾಗಿ ರೈತರ ಪಾಲಿಗೆ ಮಿರ್ಚಿಯಂತೂ ಬಲು ಖಾರವಾಗಿಯೇ ಪರಿಣಮಿಸಿದೆ. ಹೀಗಾಗಿ ಮೆಣಸಿನಕಾಯಿ ಬೆಳೆ ಬೆಳೆದ ರೈತರಿಗೆ ಈ ಭಾರಿ ಮೆಣಸಿನಕಾಯಿ ಅಕ್ಷರಶಃ ಖಾರವಾಗಿ ಬಿಟ್ಟಿದೆ.

    625 ಗ್ರಾಮಗಳಲ್ಲಿ ನೀರಿಗೆ ಹಾಹಾಕಾರ: ಜಿಲ್ಲೆಯಾದ್ಯಂತ ಈ ವರ್ಷ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದ್ದು, 625 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಈ ಪೈಕಿ ಬಳ್ಳಾರಿ ತಾಲೂಕಿನ 59, ಹೂವಿನಹಡಗಲಿಯ 65, ಹ.ಬೊ.ಹಳ್ಳಿಯ 99, ಹೊಸಪೇಟೆಯ 66, ಕೂಡ್ಲಿಗಿಯ 145, ಸಂಡೂರಿನ 93 ಹಾಗೂ ಸಿರುಗುಪ್ಪ ತಾಲೂಕಿನ 98 ಗ್ರಾಮಗಳು ಸೇರಿವೆ. ಖಾಸಗಿ ಮಾಲೀಕರಿಂದ 73 ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ಜಿಲ್ಲಾಡಳಿತ ನೀರು ಪೂರೈಸುತ್ತಿದ್ದು ಪ್ರತಿಯೊಂದಕ್ಕೆ ಮಾಸಿಕ 7-9 ಸಾವಿರ ರೂ. ಬಾಡಿಗೆ ನಿಗದಿಪಡಿಸಲಾಗಿದೆ. ಆದ್ರೂ ಜಿಲ್ಲೆಯಲ್ಲಿ ಜನರಿಗೆ ಸರಿಯಾಗಿ ಕುಡಿಯೋಕೆ ನೀರು ಸಿಗದೆ ಹಾಹಾಕಾರ ತೀವ್ರಗೊಂಡಿದೆ.

    ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹವು ತಳ ಮುಟ್ಟಿರುವುದರಿಂದ ಕಾಲುವೆಗಳಿಗೆ ನಿಗದಿತ ಅವಧಿಗಿಂತ ಮುಂಚಿತವಾಗಿ ನೀರಿನ ಹರಿವು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಸುಮಾರು 400-500 ಅಡಿಯಷ್ಟು ಆಳವಾಗಿ ಬೋರವೆಲ್ ಕೊರೆದರೂ ನೀರು ಸಿಗದಂತಾಗಿದೆ. ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಂತೂ ಸಾವಿರ ಅಡಿಯಷ್ಟು ಆಳವಾಗಿ ಬೊರವೆಲ್ ಕೊರೆದರೂ ನೀರು ಸಿಗದಿರುವುದು ಜನರನ್ನು ಆತಂಕಕ್ಕೆ ಈಡು ಮಾಡಿದೆ.

    10-15 ದಿನಕ್ಕೊಮ್ಮೆ ನೀರು ಬಂದ್ರೆ ಪುಣ್ಯ: ತುಂಗಭದ್ರಾ ಜಲಾಶಯದಲ್ಲಿ ಈ ಬಾರಿ ನೀರಿನ ಮಟ್ಟ ಡೆಡ್ ಸ್ಟೋರೇಜ್ ತಲುಪಿದ ಪರಿಣಾಮ ಬಳ್ಳಾರಿ ಮಹಾನಗರದ ಜನರಿಗೆ ಸರಿಯಾಗಿ ನೀರು ಸಿಗದಂತಾಗಿದೆ. ಡ್ಯಾಂನಲ್ಲಿ ನೀರು ಕಡಿಮೆಯಾಗಿರುವುದರಿಂದ ಬಿಸಿಲಿನ ಬಿಸಿಯೊಂದಿಗೆ ನೀರಿನ ದಾಹ ಇದೀಗ ಬಳ್ಳಾರಿ ನಗರದ ಸಾರ್ವಜನಿಕರಿಗೆ ಮುಟ್ಟಿದೆ. ನಗರದ ಎಲ್ಲ 35 ವಾರ್ಡ್‍ಗಳಲ್ಲೂ 10-12 ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದ್ದು, ಅದೂ ಕೆಲ ನಿಮಿಷಗಳಿಗೆ ಮಾತ್ರ ನೀರು ಪೊರೈಕೆಯಾಗುತ್ತಿರುವುದರಿಂದ ಜನರು ಕುಡಿಯುವ ನೀರಿಗೆ ಹಾಹಾಕಾರ ಎದುರಿಸುವಂತಾಗಿದೆ.

    ಜಲಾಶಯದ ಪಕ್ಕದಲ್ಲೇ ಇರುವ ಹೊಸಪೇಟೆ ನಗರದಲ್ಲೂ ನೀರಿಗಾಗಿ ಹಾಹಾಕಾರ ಉಂಟಾಗಿದೆ. 2-3 ದಿನಕ್ಕೊಮ್ಮೆ ಸರದಿ ಪ್ರಕಾರ ನೀರು ಸರಬರಾಜು ಮಾಡಲಾಗುತ್ತಿದೆ. ಇನ್ನುಳಿದಂತೆ ಜಿಲ್ಲೆಯ ಸಿರಗುಪ್ಪ, ಕಂಪ್ಲಿ, ಕುರುಗೋಡು, ಕೂಡ್ಲಿಗಿ, ಹಡಗಲಿ, ಸಂಡೂರು, ಕುರೇಕುಪ್ಪ, ಕಮಲಾಪುರ, ಹ.ಬೊ.ಹಳ್ಳಿ, ತೆಕ್ಕಲಕೋಟೆ, ಕೊಟ್ಟೂರು, ಕುಡತಿನಿ, ಮರಿಯಮ್ಮನಹಳ್ಳಿ ಸೇರಿದಂತೆ ಬಹುತೇಕ ನಗರ ಪ್ರದೇಶಗಳಲ್ಲಿನ ಸ್ಥಿತಿ ಭಿನ್ನವಾಗಿಲ್ಲ.

    ಸಂಡೂರು ತಾಲೂಕಿನ ಬಂಡ್ರಿ, ಸಿ.ಕೆ.ಹಳ್ಳಿ ಸೇರಿದಂತೆ 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕೊಳವೆ ಬಾವಿಗಳಿದ್ದರೂ ನೀರಿಲ್ಲ. ನೀರಿದ್ದರೆ ಪೈಪ್ ಲೈನ್ ಜೋಡಣೆಯಾಗಿಲ್ಲ. ಎರಡೂ ಇದ್ದರೂ ವಿದ್ಯುತ್ ಸಂಪರ್ಕವಿಲ್ಲದ ಸ್ಥಿತಿ. ತೋರಣಗಲ್, ವಿಠಲಾಪುರ ಸೇರಿ ತಾಲೂಕಿನ ಬಹುತೇಕ ಗ್ರಾಮಸ್ಥರಿಗೆ ಫ್ಲೋರೈಡ್‍ಯುಕ್ತ ನೀರೇ ಗತಿ. ಕೂಡ್ಲಿಗಿ ತಾಲೂಕಿನ ಕಾನಾಮಡುಗು, ಹೊಸಹಳ್ಳಿ, ಹುಡೇಂ, ಕಡೇಕೊಳ್ಳ, ನಿಂಬಳಗೆರೆ, ರಾಂಪುರ, ದೂಪದಹಳ್ಳಿ ಹೂವಿನಹಡಗಲಿ ತಾಲೂಕಿನ ಸೋವೇನಹಳ್ಳಿ, ಹಿರೆ ಮಲ್ಲನಕೆರೆ, ಸೋಗಿ, ಹಕ್ಕಂಡಿ, ಹೊಳಗುಂದಿ, ಬಸರಹಳ್ಳಿ ತಾಂಡ, ಕಾಲ್ವಿ ತಾಂಡ, ಎಂ.ಕಲ್ಲಹಳ್ಳಿ, ಕೆಂಚಮ್ಮನಹಳ್ಳಿ, ಗ್ರಾಮಗಳಲ್ಲಿ ಈಗಾಗಲೇ ಕುಡಿಯುವ ನೀರಿನ ತೀವ್ರ ಸಮಸ್ಯೆ ಉಂಟಾಗಿದೆ.

    ಕಳೆದ ಜುಲೈ ತಿಂಗಳಿಂದಲೇ ಟ್ಯಾಂಕರ್ ನೀರು: ಸಂಡೂರು ತಾಲೂಕಿನ ಅಂತಾಪುರ, ಕೊಡಾಲು, ಕೊರಚರಹಟ್ಟಿ, ಚಿಕ್ಕಂತಾಪುರಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು, ಕಳೆದ ಜುಲೈ ತಿಂಗಳಿಂದಲೇ ಈ ಗ್ರಾಮದ ಜನರಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಇಲ್ಲಿ ಖಾಸಗಿ ಬೋರ್‍ವೆಲ್‍ಗಳಿಂದ ನೀರು ಖರೀದಿಸಲಾಗಿತ್ತಾದರೂ ಬೋರ್‍ಗಳಲ್ಲೂ ನೀರು ಕಡಿಮೆಯಾಗಿದ್ದರಿಂದ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.

    ಅಂತರ್ಜಲ ಮಟ್ಟ ಕುಸಿತ: ಮಳೆ ಅಭಾವದಿಂದಾಗಿ ಅಂತರ್ಜಲ ಮಟ್ಟವು ನೂರಾರು ಅಡಿ ಆಳಕ್ಕೆ ಕುಸಿದಿದೆ. ಜಿಲ್ಲೆಯ ಹಗರಿಬೊಮ್ಮನಹಳ್ಳಿ, ಸಂಡೂರು ಮತ್ತು ಕೂಡ್ಲಿಗಿ ತಾಲೂಕುಗಳಲ್ಲಿ 500 ರಿಂದ 700 ಅಡಿ ಆಳ ಕೊರೆದರೂ ನೀರು ಸಿಗುತ್ತಿಲ್ಲ. ಭುಜಂಗನಗರದಲ್ಲಿ ಕಳೆದ ಮೇ ತಿಂಗಳಿಂದ ಬಳಕೆ ಮಾಡಿರುವ ಕೆಲವು ಖಾಸಗಿ ಬೋರ್‍ವೆಲ್‍ನವರಿಗೆ ಹಣ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಕಳೆದೆರಡು ತಿಂಗಳಿಂದ ಖಾಸಗಿ ಬೋರ್‍ವೆಲ್‍ನವರು ನೀರು ಸರಬರಾಜು ಮಾಡುವುದನ್ನು ನಿಲ್ಲಿಸಿದ್ದಾರೆ. ಜಿಲ್ಲೆಯ ಸುಮಾರು 212 ಗ್ರಾಮಗಳ ಜನರು ಫ್ಲೋರೈಡ್‍ಯುಕ್ತ ನೀರನ್ನೇ ಸೇವಿಸುವ ಅನಿವಾರ್ಯತೆ ಎದುರಾಗಿದೆ.

    ಮೇವಿಗೂ ಬರ: ಅಚ್ಚರಿ ಎಂದರೆ ಜಿಲ್ಲೆಯ ಮಳೆಯಾಶ್ರಿತ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಮೇವಿನ ಸಮಸ್ಯೆ ಎದುರಾಗಿದೆ. ಮೇವಿಲ್ಲದೇ ಜಾನುವಾರು ಕಸಾಯಿಖಾನೆ ಸೇರುತ್ತಿವೆ. ಸಮಸ್ಯಾತ್ಮಕ ಪ್ರದೇಶದಲ್ಲಿ ಮೇವಿನ ಬ್ಯಾಂಕ್ ಇಲ್ಲವೇ ಗೋಶಾಲೆ ಸ್ಥಾಪಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಆದರೆ ಪಶು ಸಂಗೋಪನಾ ಇಲಾಖೆ ಮಾಹಿತಿಗಳ ಪ್ರಕಾರ ಮೇವಿನ ಸಮಸ್ಯೆ ಎಲ್ಲಿಯೂ ಇಲ್ಲ. ಜಿಲ್ಲೆಯಲ್ಲಿ 4.84 ಲಕ್ಷ ಜಾನುವಾರುಗಳಿದ್ದು, 7.09 ಲಕ್ಷ ಟನ್ ಮೇವು ಸಂಗ್ರಹವಿದೆ. ಲಭ್ಯವಿರುವ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಪ್ರತಿ ವಾರ 16,956 ಟನ್ ಮೇವಿನ ಅವಶ್ಯಕತೆ ಇದೆ. ಪ್ರಸ್ತುತ 42 ವಾರಗಳಿಗೆ ಸಾಕಾಗುವಷ್ಟು ಮೇವಿನ ದಾಸ್ತಾನು ಇದೆ. ಆದರೆ ಮುಂದಿನ ದಿನಗಳಲ್ಲಿ 131 ಗ್ರಾಮಗಳಲ್ಲಿ ಮೇವಿನ ಕೊರತೆ ಎದುರಾಗಬಹುದಾಗಿದ್ದು, 13,103 ಟನ್ ಮೇವಿನ ಅಗತ್ಯವಿದೆ ಎಂದು ಪಶು ಸಂಗೋಪನಾ ಇಲಾಖೆ ಅಂದಾಜಿಸಿದೆ.

    20.92 ಲಕ್ಷ ಮಾನವ ದಿನಗಳ ಸೃಷ್ಟಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ ಈ ವರ್ಷ 2.23 ಲಕ್ಷ ಜಾಬ್ ಕಾರ್ಡ್ ವಿತರಿಸಲಾಗಿದ್ದು, 20.92 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಲಾಗಿದೆ. ಅರಣ್ಯ, ತೋಟಗಾರಿಕೆ, ರೇಷ್ಮೆ, ಕೃಷಿ ಮತ್ತು ಜಲಾನಯನ, ಪಶುಸಂಗೋಪನೆ, ಮೀನುಗಾರಿಕೆ, ಗ್ರಾಮೀಣ ಕುಡಿಯುವ ನೀರು ಪೂರೈಕೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಈ ಯೋಜನೆಯನ್ನು ವಿಸ್ತರಿಸಲಾಗಿದೆ.

    ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ, ನೆಲ್ಕುದ್ರಿ, ತಂಬ್ರಹಳ್ಳಿ, ಕೋಗಳಿ, ಅಲಬೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕರು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿದ್ದಾರೆ. ಬರಗಾಲದ ಹಿನ್ನೆಲೆಯಲ್ಲಿ ಮಾನವ ದಿನಗಳನ್ನು 100 ರಿಂದ 150 ಕ್ಕೆ ಹೆಚ್ಚಿಸಲಾಗಿದೆ. ಆದರೂ ಜಿಲ್ಲೆಯಲ್ಲಿ ಜನರು ಗುಳೆ ಹೋಗುವುದು ಮಾತ್ರ ನಿಂತಿಲ್ಲ.

    125 ಕೋಟಿ ಬರ ಪರಿಹಾರ ಪ್ರಸ್ತಾವನೆ: ಕೇಂದ್ರ ಬರ ಅಧ್ಯಯನ ತಂಡವೂ ಈಚೆಗೆ ಜಿಲ್ಲೆಗೆ ಭೇಟಿ ನೀಡಿ ಇಲ್ಲಿನ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿದೆ. ತಂಡದ ಎದುರಿಗೆ ರೈತರು ತಮ್ಮ ಗೋಳನ್ನೂ ತೋಡಿಕೊಂಡಿದ್ದಾರೆ. ಕುಡಿಯುವ ನೀರು, ಮೇವು ಹಾಗೂ ಉದ್ಯೋಗ ಸಮಸ್ಯೆಯನ್ನು ತೆರೆದಿಟ್ಟಿದ್ದಾರೆ. ಬರ ಪರಿಹಾರ ಕಾಮಗಾರಿಗಳನ್ನು ಸಮರ್ಪಕವಾಗಿ ಕೈಗೆತ್ತಿಕೊಳ್ಳಲು 125 ಕೋಟಿ ರೂ. ಅನುದಾನ ಬೇಡಿಕೆಯನ್ನು ಜಿಲ್ಲಾಡಳಿತ ಕೇಂದ್ರ ತಂಡಕ್ಕೆ ಸಲ್ಲಿಸಿದೆ.

    ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಹಿಂಗಾರು ಬೆಳೆ ಹಾನಿಗೆ 813.88 ಲಕ್ಷ ರೂ., ದೊಡ್ಡ ರೈತರ ಬೆಳೆಗೆ 201.38 ಲಕ್ಷ ರೂ.ಗಳನ್ನು ಇನ್‍ಪುಟ್ ಸಬ್ಸಿಡಿಗಾಗಿ, ಮೇವು ದಾಸ್ತಾನಿಗೆ 382 ಲಕ್ಷ ರೂ., ಗೋಶಾಲೆ ನಿರ್ವಹಣೆಗೆ 800 ಲಕ್ಷ ರೂ., ಗ್ರಾಮೀಣ ಕುಡಿಯುವ ನೀರು ಪೂರೈಕೆಗೆ 2150 ಲಕ್ಷ ರೂ., ನಗರ ನೀರು ಸರಬರಾಜುಗೆ 1975 ಲಕ್ಷ ರೂ., ಬಹು ಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಗಳ ಪುನಶ್ಚೇತನಕ್ಕಾಗಿ 6,200 ಲಕ್ಷ ರೂ. ಹೀಗೆ ಒಟ್ಟು 12,522.31 ಲಕ್ಷ ರೂ. ಅನುದಾನವನ್ನು ರಾಷ್ಟ್ರೀಯ ಪ್ರಕೃತಿ ವಿಕೋಪ ನಿಧಿಯಿಂದ ಬಿಡುಗಡೆ ಮಾಡುವಂತೆ ಮನವಿ ಮಾಡಿದೆ. ಆದರೆ ಕೇಂದ್ರ ಸರ್ಕಾರ ಈ ಮನವಿಗೆ ಎಷ್ಟರ ಮಟ್ಟಿಗೆ ಸ್ಪಂದಿಸಲಿದೆ ಎಂಬುದು ಕಾದು ನೋಡಬೇಕಿದೆ.

     

  • 3 ವರ್ಷದಿಂದ ತ್ರಿಚಕ್ರ ವಾಹನದಲ್ಲೇ ವಿಶ್ವಪರ್ಯಟನೆ ಮಾಡುತ್ತಿದೆ ಈ ಜೋಡಿ!

    3 ವರ್ಷದಿಂದ ತ್ರಿಚಕ್ರ ವಾಹನದಲ್ಲೇ ವಿಶ್ವಪರ್ಯಟನೆ ಮಾಡುತ್ತಿದೆ ಈ ಜೋಡಿ!

    ಬಳ್ಳಾರಿ: ಬೈಕ್‍ನಲ್ಲಿ ದೇಶ ಸುತ್ತೋರನ್ನ ನೀವೂ ನೋಡಿರಬಹುದು. ಆದ್ರೆ ಇಲ್ಲೊಬ್ಬರು  ತ್ರಿಚಕ್ರ ವಾಹನದಲ್ಲಿ ಇಡೀ ವಿಶ್ವ ಪರ್ಯಟನೆ ಮಾಡುತ್ತಿದ್ದಾರೆ.

    ಸ್ವಿಜರ್ಲ್ಯಾಂಡ್ ಪಾಸ್ಕಲ್ ಎಂಬವರು ತನ್ನ  ತ್ರಿಚಕ್ರ ವಾಹನದಲ್ಲೆ ವಿಶ್ವದ ಎಲ್ಲ ದೇಶಗಳನ್ನು ಸುತ್ತುತ್ತಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ಬೈಕ್ ಟೂರ್ ಆರಂಭಿಸಿರುವ ಇವರು ಇದೀಗ ವಿಶ್ವ ವಿಖ್ಯಾತ ಹಂಪಿಗೆ ಆಗಮಿಸಿದ್ದಾರೆ.

    ವೃತ್ತಿಯಲ್ಲಿ ತೋಟಗಾರಿಕೆ ಕೆಲಸಗಾರರಾಗಿರುವ ಪಾಸ್ಕಲ್ ತನ್ನೊಂದಿಗೆ ಜರ್ಮನಿಯ ಪಾಯ್ ಹೈಡನ್ ಎನ್ನುವ ಸ್ನೇಹಿತೆಯನ್ನು ಕರೆದುಕೊಂಡು ವಿಶ್ವ ಪರ್ಯಟನೆ ಮಾಡುತ್ತಿದ್ದಾರೆ. ಇವರ ಸ್ನೇಹಿತೆ ಕೂಡ ಜೊತೆಯಲ್ಲಿ ಬೈಕ್‍ನಲ್ಲೆ ವಿಶ್ವ ಪರ್ಯಟನೆ ಹೊರಟಿರುವುದು ನಿಜಕ್ಕೂ ವಿಶೇಷವಾಗಿದೆ. ಈ ಜೋಡಿ ಇದೀಗ ಪಾಸ್ಕಲ್ ಜೆ ರಾಬಿನ್‍ಸನ್ ದಿ ಲೆಕ್ನೋ, ಪಾಯ ಹೈಡನ್ ದಿ ಕ್ಷೀಣ್ ಅಂತಾ ಎಲ್ಲರಿಗೂ ಪರಿಚಯ ಮಾಡಿಕೊಳ್ಳುತ್ತಿದ್ದಾರೆ.

    ದೇಶದಿಂದ ದೇಶಕ್ಕೆ ಪ್ರಯಾಣ ಬೆಳೆಸುತ್ತಿರುವ ಈ ಜೋಡಿ ತಾವು ಭೇಟಿ ನೀಡಿದ ಎಲ್ಲ ದೇಶಗಳ ರಾಷ್ಟ್ರಧ್ವಜಗಳ ಸ್ಟಿಕರ್‍ಗಳನ್ನು ತಮ್ಮ ಬೈಕ್‍ಗೆ ಅಂಟಿಸಿಕೊಂಡು ಪ್ರಯಾಣ ಮಾಡುತ್ತಿದ್ದಾರೆ.

  • ಬಳ್ಳಾರಿಯಲ್ಲಿ ಸಾಮಿಲ್ ಗೆ ಬೆಂಕಿ: ಕೋಟ್ಯಾಂತರ ರೂ. ಮೌಲ್ಯದ ಮರಗಳು ಭಸ್ಮ

    ಬಳ್ಳಾರಿಯಲ್ಲಿ ಸಾಮಿಲ್ ಗೆ ಬೆಂಕಿ: ಕೋಟ್ಯಾಂತರ ರೂ. ಮೌಲ್ಯದ ಮರಗಳು ಭಸ್ಮ

    – ಕಿಡಿಗೇಡಿಗಳ ಮೇಲೆ ಶಂಕೆ

    ಬಳ್ಳಾರಿ: ಇಲ್ಲಿನ ತೋರಣಗಲ್‍ನಲ್ಲಿ ಸಾಮೀಲ್‍ಗೆ ಬೆಂಕಿ ಬಿದ್ದು ಕೋಟ್ಯಾಂತರ ರುಪಾಯಿ ಬೆಲೆ ಬಾಳುವ ಮರದ ದಿಮ್ಮಿಗಳು ಗುರುವಾರ ರಾತ್ರಿಯಿಡೀ ಹೊತ್ತಿ ಉರಿದ ಘಟನೆ ನಡೆದಿದೆ.

    ಜಮಾಲುದ್ದಿನ್ ಅನ್ನೋರಿಗೆ ಸೇರಿದ್ದ ಸಾಮಿಲ್‍ನಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ. ಅಂದಾಜು ಒಂದೂವರೆ ಕೋಟಿ ರೂ. ಮೌಲ್ಯದ ಮರದ ದಿಮ್ಮಿಗಳು ಸುಟ್ಟು ಕರಕಲಾಗಿವೆ. ಇನ್ನು ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ 4 ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟರು.

    ಸದ್ಯ ಬೆಂಕಿ ಹತೋಟಿಗೆ ಬಂದಿದ್ದು, ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಯಾರೋ ಕಿಡಿಗೇಡಿಗಳು ಬೇಕಂತಾನೇ ಬೆಂಕಿ ಹಚ್ಚಿರುವ ಸಾಧ್ಯತೆಯಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.

    https://www.youtube.com/watch?v=HG9POo_H1ls&feature=youtu.be

  • ಬಳ್ಳಾರಿ: ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಿಡಿಬಂಡಿ ರಥೋತ್ಸವ

    ಬಳ್ಳಾರಿ: ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಿಡಿಬಂಡಿ ರಥೋತ್ಸವ

    ಬಳ್ಳಾರಿ: ನಗರದ ಅಧಿ ದೇವತೆ, ಶತಮಾನಗಳ ಇತಿಹಾಸವಿರುವ ಶ್ರೀ ಕನಕ ದುರ್ಗಮ್ಮ ದೇವಿಯ ವಾರ್ಷಿಕ ಸಿಡಿಬಂಡಿ ರಥೋತ್ಸವ ಫಾಲ್ಗುಣ ಶುದ್ಧ ದಶಮಿಯಾದ ಮಂಗಳವಾರ ಲಕ್ಷಾಂತರ ಭಕ್ತರ ನಡುವೆ ವಿಜೃಂಭಣೆಯಿಂದ ನೆರವೇರಿತು.

    ಜಿಲ್ಲೆಯಲ್ಲಷ್ಟೇ ಅಲ್ಲದೇ, ಚಿತ್ರದುರ್ಗ, ಕೊಪ್ಪಳ, ರಾಯಚೂರು, ದಾವಣಗೆರೆ, ಶಿವಮೊಗ್ಗ, ಗದಗ, ಧಾರವಾಡ, ನೆರೆಯ ಆಂಧ್ರಪ್ರದೇಶದ ಕರ್ನೂಲು, ಅನಂತಪುರ, ಕಡಪಾ ಜಿಲ್ಲೆಗಳಿಂದ ಸಹಸ್ರಾರು ಜನರು ಸಿಡಿಬಂಡಿ ರಥೋತ್ಸವಕ್ಕೆ ಆಗಮಿಸಿದ್ದರು. ಬೆಳಿಗ್ಗೆಯಿಂದ ಶ್ರೀ ಕನಕ ದುರ್ಗಮ್ಮದೇವಿಗೆ ವಿವಿಧ ಪೂಜೆಗಳನ್ನು ಸಮರ್ಪಿಸಲಾಗಿತ್ತು. ದೇವಿಗೆ ಚಿನ್ನದ ಕವಚ ಹಾಗೂ ನವರತ್ನ ಖಚಿತ ಕಿರೀಟದ ಅಲಂಕಾರ ಮಾಡಲಾಗಿತ್ತು.

    ಸಿಡಿಬಂಡಿಯನ್ನು ಸಿಂಗರಿಸುವ ಹಾಗೂ ಸಿಡಿಬಂಡಿಯನ್ನು ದೇವಸ್ಥಾನದ ಸುತ್ತ ಮೂರು ಬಾರಿ ಪ್ರದಕ್ಷಿಣೆ ಮಾಡಿಸುವುದು ಸಜ್ಜನ ಗಾಣಿಗ ಸಮುದಾಯದ ಜನರಿಂದ ಶತಮಾನಗಳಿಂದ ನಡೆದುಕೊಂಡುಬಂದ ಈ ಕಾರ್ಯವನ್ನು ಜನ ನಿಷ್ಠೆಯಿಂದ ನೆರವೇರಿಸಿದ್ರು.

    ನಿನ್ನೆ ಸಂಜೆ ನಗರದ ಕೌಲ್ ಬಜಾರ್ ಪ್ರದೇಶದಿಂದ ಸಿಡಿಬಂಡಿಯನ್ನು ಎಳೆಯಲು ಮೂರು ಜೋಡಿ ಎತ್ತುಗಳನ್ನು ಗಾಣಿಗ ಸಮುದಾಯ ಹೋರಿಗಳನ್ನು ಮೆರವಣಿಗೆಯಲ್ಲಿ ತರಲಾಯಿತು. ಸೂರ್ಯಾಸ್ತಮದ ವೇಳೆ ಸಿಡಿ ಬಂಡಿ ರಥೋತ್ಸವ ಆರಂಭವಾಯಿತು.

    ಈ ಬಾರಿ ಎತ್ತುಗಳು ಹೊಸದಾಗಿ ಇದ್ದರಿಂದ ಆರಂಭದಲ್ಲಿ ಸಿಡಿಬಂಡಿಯ ನೊಗವನ್ನು ಸರಿಯಾಗಿ ತೆಗೆದುಕೊಳ್ಳದೆ ಬಳಗ ಎಸೆದವು. ಅದನ್ನು ನಿರ್ವಹಿಸುವ ಜನತೆ ಕೂಡಲೇ ಅದನ್ನು ಸರಿಪಡಿಸಿ ಸಿಡಿಬಂಡಿಯನ್ನು ದೇವಸ್ಥಾನದ ಸುತ್ತ ಮೂರು ಸುತ್ತು ಹಾಕಲಾಯಿತು. ಸಿಡಿ ಬಂಡಿಗೆ ಭಕ್ತರು ಕೋಳಿ, ಬಾಳೆಹಣ್ಣು, ಉತ್ತತ್ತಿ, ಹೂ ಎಸೆದು ನೆರೆದ ಸಾವಿರಾರು ಜನತೆ ತಮ್ಮ ಹರಕೆ ತೀರಿಸಿದರು.

    ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಸೇರಿದ್ದರಿಂದ ಪೊಲೀಸರು ಯಾವುದೇ ಅಹಿತಕರ ಘಟನೆ ಜರುಗದಂತೆ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

  • ಬಳ್ಳಾರಿ ವಿಮ್ಸ್ ಡಾಕ್ಟರ್ ಎಡವಟ್ಟಿಗೆ ಬಾಣಂತಿ, ಮಗು ಸಾವು?

    ಬಳ್ಳಾರಿ ವಿಮ್ಸ್ ಡಾಕ್ಟರ್ ಎಡವಟ್ಟಿಗೆ ಬಾಣಂತಿ, ಮಗು ಸಾವು?

    – ಆಸ್ಪತ್ರೆ ಎದುರು ಶವಗಳನ್ನಿಟ್ಟು ಪ್ರತಿಭಟನೆ
    – ಶವ ನೀಡಲು ಹಣ ಕೇಳಿದ ಸಿಬ್ಬಂದಿ!

    ಬಳ್ಳಾರಿ: ವಿಮ್ಸ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಮಹಿಳೆ ಹಾಗೂ ಮಗುವೊಂದು ಮೃತಪಟ್ಟಿದೆ.

    ಸಂಡೂರು ತಾಲೂಕಿನ ಕೆರೆ ರಾಂಪುರ ಗ್ರಾಮದ ಸುಜಾತಾರನ್ನು ಭಾನುವಾರ ಸಂಜೆ ಹೆರಿಗೆಗಾಗಿ ವಿಮ್ಸ್ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಆದ್ರೆ ವಿಮ್ಸ್ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡದ ಪರಿಣಾಮ ಮಗುವಿನ ಜೊತೆ ಸುಜಾತಾ ಮೃತಪಟ್ಟಿದ್ದಾರೆ. ಹೀಗಾಗಿ ವಿಮ್ಸ್ ವೈದ್ಯರ ನಿರ್ಲಕ್ಷ ಖಂಡಿಸಿ ಸುಜಾತಾ ಸಂಬಂಧಿಕರು ವಿಮ್ಸ್ ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.

    ಸಂಜೆ ಹೆರಿಗೆಗಾಗಿ ಸುಜಾತಾ ಆಗಮಿಸಿದ ವೇಳೆಯಲ್ಲಿ ಹೆರಿಗೆ ನಂತರ ಮಗು ಮತ್ತು ಬಾಣಂತಿ ಆರೋಗ್ಯವಾಗಿದ್ದಾರೆಂದು ಹೇಳಿದ ವೈದ್ಯರು ನಂತರ ಏಕಾಎಕಿ ಮಗು ಮತ್ತು ತಾಯಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಶವ ನೀಡಲು ಹಣ ಕೊಡಿ ಅಂತಾ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಹೀಗಾಗಿ ವಿಮ್ಸ್ ವೈದ್ಯರ ನಿರ್ಲಕ್ಷಕ್ಕೆ ಸುಜಾತಾ ಬಲಿಯಾಗಿದ್ದಾರೆ ಎಂದು ಆರೋಪಿಸಿ ಸಂಬಂಧಿಕರು ಇಂದು ಬೆಳಗ್ಗೆಯಿಂದ ವಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

    ಘಟನಾ ಸ್ಥಳಕ್ಕೆ ಆಗಮಿಸಿದ ವಿಮ್ಸ್ ನಿರ್ದೇಶಕ ಕೃಷ್ಣಮೂರ್ತಿ ಪ್ರತಿಭಟನಾಕಾರರ ಮನವೊಲಿಸಲು ಹಾರಿಕೆ ಉತ್ತರ ನೀಡಿದ ಪರಿಣಾಮ ಪ್ರತಿಭಟನಾಕಾರರು ಆಕ್ರೋಶ ಮತ್ತಷ್ಟೂ ಹೆಚ್ಚಾಗಿದೆ. ಹೀಗಾಗಿ ಪ್ರತಿಭಟನೆಗೆ ಬೆಚ್ಚಿದ ವಿಮ್ಸ್ ನಿರ್ದೇಶಕರು ಪ್ರತಿಭಟನಾ ಸ್ಥಳದಿಂದ ತಪ್ಪಿಸಿಕೊಂಡು ಓಡಿ ಹೋಗಲು ಯತ್ನಿಸಿದರು. ಆದ್ರೆ ಪ್ರತಿಭಟನಾಕಾರರು ಪಟ್ಟು ಬಿಡದೆ ವಿಮ್ಸ್ ನಿದೇರ್ಶಕರಿಗೆ ದಿಗ್ಬಂಧನ ಹಾಕಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪಟ್ಟು ಹಿಡಿದು ಕುಳಿತಿದ್ದಾರೆ.

    ಹೀಗಾಗಿ ಲಂಚಕ್ಕೆ ಬೇಡಿಕೆಯಿಟ್ಟ ನಾಲ್ಕು ಸಿಬ್ಬಂದಿಯನ್ನು ಅಮಾನತು ಮಾಡಿ ನಿರ್ದೇಶಕ ಕೃಷ್ಣಮೂರ್ತಿ ಆದೇಶ ಹೊರಡಿಸಿದ್ದಾರೆ. ಆದ್ರೆ ಮೃತ ಮಹಿಳೆಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವವರೆಗೂ ಹೋರಾಟ ಕೈಬಿಡಲ್ಲ ಎಂದು ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.

     

  • ವೀಡಿಯೋ: ಕೊಟ್ಟೂರೇಶ್ವರ ಜಾತ್ರೆಯಲ್ಲಿ ರಥ ಬೀಳೋ ಮೊದ್ಲೇ ನಡೆದಿತ್ತು ಅಚ್ಚರಿ

    ವೀಡಿಯೋ: ಕೊಟ್ಟೂರೇಶ್ವರ ಜಾತ್ರೆಯಲ್ಲಿ ರಥ ಬೀಳೋ ಮೊದ್ಲೇ ನಡೆದಿತ್ತು ಅಚ್ಚರಿ

    – ಭಕ್ತರನ್ನ ಹೆದರಿಸಿ ಓಡಿಸಿದ್ದ ಬಸವಣ್ಣ

    ಬಳ್ಳಾರಿ: ಕಳೆದು ತಿಂಗಳು ಜಿಲ್ಲೆಯಲ್ಲಿ ನಡೆದ ಕೊಟ್ಟೂರೇಶ್ವರ ಜಾತ್ರೆಯಲ್ಲಿ ದೇವರ ರಥ ಬಿದ್ದು ಭಕ್ತರನ್ನು ಆತಂಕಕ್ಕೀಡು ಮಾಡಿತ್ತು. ಆದ್ರೆ ರಥ ಬೀಳುವ ಮೊದಲೇ ಅದರ ಬಗ್ಗೆ ಸೂಚನೆ ಸಿಕ್ಕಿತ್ತು ಅಂತ ಭಕ್ತರು ಇದೀಗ ಮಾತನಾಡಿಕೊಳ್ತಿದ್ದಾರೆ.

    ಇದಕ್ಕೆ ಸಾಕ್ಷಿ ಎಂಬಂತೆ ರಥ ಬೀಳುವ ಮೂರು ನಿಮಿಷಗಳ ಮೊದಲು ದೇವಸ್ಥಾನಕ್ಕೆ ಸೇರಿದ್ದ ಗೂಳಿಯೊಂದು ಭಕ್ತರನ್ನ ಓಡಿಸಿದೆ. ಆಶ್ಚರ್ಯ ಅಂದ್ರೆ ರಥ ಬೀಳುವ ಜಾಗದಲ್ಲಿದ್ದ ಭಕ್ತರನ್ನೇ ಚದುರಿಸಿದ್ದು, ಬಸವಣ್ಣ ಯಾರಿಗೂ ಸಣ್ಣ ಗಾಯವನ್ನೂ ಮಾಡಿಲ್ಲ. ಬಸವಣ್ಣನ ಎಚ್ಚರಿಕೆಯಿಂದಲೇ 60 ಅಡಿ ರಥ ನೆಲಕ್ಕೆ ಉರುಳಿದ್ರೂ ಯಾವುದೇ ಸಾವು ಸಂಭವಿಸಿಲ್ಲ ಅಂತಾ ಜನ ಹೇಳ್ತಿದ್ದಾರೆ.

    ಕಳೆದ ಫೆಬ್ರವರಿ 22ರಂದು ಜಿಲ್ಲೆಯ ಕೂಡ್ಲಗಿ ತಾಲೂಕಿನ ಕೊಟ್ಟೂರು ಗುರುಬಸವೇಶ್ವರ ರಥೋತ್ಸವದ ವೇಳೆಯಲ್ಲಿ ಚಕ್ರದ ಅಚ್ಚು ಮುರಿದು ರಥ ಮಗುಚಿ ಬಿದ್ದಿತ್ತು. ಪ್ರತಿ ವರ್ಷ ನಡೆಯುವ ಗುರು ಬಸವೇಶ್ವರ ರಥೋತ್ಸವದಲ್ಲಿ ಲಕ್ಷಾಂತರ ಜನರು ಭಾಗವಹಿಸುತ್ತಾರೆ. ಈ ವರ್ಷವೂ ಭಾರೀ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು.

    ಇದನ್ನೂ ಓದಿ: ಬಳ್ಳಾರಿ ಕೊಟ್ಟೂರೇಶ್ವರ ಜಾತ್ರೆಯಲ್ಲಿ ಉರುಳಿ ಬಿದ್ದ ರಥ

    https://www.youtube.com/watch?v=ixTDEO3xgk4&feature=youtu.be