Tag: ಬಲಿ ಪಾಡ್ಯಮಿ

  • ದೀಪಾವಳಿ ವಿಶೇಷ – ಬಲಿಪಾಡ್ಯಮಿಯನ್ನು ಯಾಕೆ ಆಚರಿಸಲಾಗುತ್ತದೆ? ಏನಿದು ಪುರಾಣ ಕಥೆ?

    ದೀಪಾವಳಿ ವಿಶೇಷ – ಬಲಿಪಾಡ್ಯಮಿಯನ್ನು ಯಾಕೆ ಆಚರಿಸಲಾಗುತ್ತದೆ? ಏನಿದು ಪುರಾಣ ಕಥೆ?

    ದೀಪಾವಳಿಯನ್ನು (Deepavali) ಒಟ್ಟು ಮೂರು ದಿನ ಆಚರಿಸಲಾಗುತ್ತದೆ. ಮೊದಲ ದಿನ ಮನೆಯವರೆಲ್ಲರೂ ಎಣ್ಣೆ ಸ್ನಾನ ಮಾಡುವ ನರಕ ಚತುದರ್ಶಿ, ಮರು ದಿವಸ ಅಮಾವಾಸ್ಯೆ, ಮೂರನೇ ದಿನವೇ ಬಲಿ ಪಾಡ್ಯಮಿ. ದೀಪಾವಳಿ ಬಲಿಪಾಡ್ಯಮಿಯೊಂದಿಗೆ (Balipadyami) ಈ ಮೂರು ದಿನಗಳ ಹಬ್ಬ ಮುಗಿಯುತ್ತದೆ. ಅಮಾವಾಸ್ಯೆಯ ನಂತರದ ಪಾಡ್ಯದಂದು ದಾನವ ಅರಸನಾದ ಬಲೀಂದ್ರನ ಪೂಜೆಯನ್ನು ನಡೆಸುವುದರಿಂದ ಈ ದಿನವನ್ನು ಬಲಿಪಾಡ್ಯಮಿ ಎಂದೇ ಕರೆಯಲಾಗುತ್ತದೆ. ಹಿರಣ್ಯ ಕಶ್ಯಪುವಿನ ವಂಶಸ್ಥನಾದ ಇವನು ದಾನವನಾದರೂ ಈ ದಿನ ಬಲೀಂದ್ರನನ್ನು ಭಕ್ತಿ ಶ್ರದ್ಧೆಯಿಂದ ಆಚರಿಸಲಾಗುತ್ತದೆ.

    ಪೌರಾಣಿಕ ಕಥೆಯ ಪ್ರಕಾರ ಮಹಾವಿಷ್ಣುವಿನ ಭಕ್ತ, ದಾನಶೂರ ದೈತ್ಯರಾಜ ಬಲಿ ಚಕ್ರವರ್ತಿ (Bali Maharaja) ಪ್ರಜೆಗಳನ್ನು ಅತ್ಯಂತ ಯೋಗಕ್ಷೇಮದಿಂದ ನೋಡಿಕೊಳ್ಳುತ್ತಿರುತ್ತಾನೆ. ರಾಕ್ಷಸ ರಾಜನಾದರೂ ದಾನ ಧರ್ಮದಿಂದ ಹೆಸರುವಾಸಿಯಾಗಿದ್ದ ಬಲಿ ಮಹಾರಾಜನಿಗೆ ತನ್ನ ರೀತಿಯಲ್ಲಿ ಬೇರೆ ಯಾರು ಪ್ರಜೆಗಳನ್ನು ನೋಡಿಕೊಳ್ಳುವುದಿಲ್ಲ ಎಂಬ ಅಹಂಕಾರ ತಲೆಗೆ ಏರುತ್ತದೆ. ಬಲಿ ರಾಜನ ಸುತ್ತಮುತ್ತಲಿರುವವರೆಲ್ಲ ಕೆಟ್ಟವರಾಗಿರುತ್ತಾರೆ. ತಾನು ಕೆಟ್ಟವನಲ್ಲದಿದ್ದರೂ ತನ್ನ ಸುತ್ತಲಿನ ರಾಕ್ಷಸರು ಮಾಡುತ್ತಿರುವ ಕೆಲಸಗಳನ್ನು ಪರೋಕ್ಷವಾಗಿ ಆತ ಪ್ರೋತ್ಸಾಹ ನೀಡುತ್ತಿರುತ್ತಾನೆ. ಇವರ ಕಾಟ ಹೆಚ್ಚಾಗುತ್ತಿದ್ದಂತೆ ಹೇಗಾದರೂ ಮಾಡಿ ಬಲಿಯನ್ನು ಸಂಹಾರ ಮಾಡಬೇಕೆಂದು ದೇವತೆಗಳು ವಿಷ್ಣುವಿನ ಮೊರೆ ಹೋಗುತ್ತಾರೆ.

    ದೇವತೆಗಳಿಗೆ ಅಭಯ ನೀಡಿದ ವಿಷ್ಣು ವಾಮನನ (ಬಾಲಕ) ರೂಪದಲ್ಲಿ ಬಲಿ ಮಹಾರಾಜನ ಬಳಿ ಬಂದು ದಾನವನ್ನು ಕೇಳುತ್ತಾನೆ. ಬಲೀಂದ್ರ ರಾಜ ಕೊಡುಗೈ ದಾನಿ. ನಿನಗೆ ಏನು ಬೇಕೆಂದು ಕೇಳು ಎಂದು ವಾಮನನಿಗೆ (Vamana) ಹೇಳುತ್ತಾನೆ. ಆಗ ವಾಮನ, ನನ್ನ ಮೂರು ಹೆಜ್ಜೆ ಊರುವಷ್ಟು ಭೂಮಿಯನ್ನು ದಾನವಾಗಿ ನೀಡಬಹುದೇ ಎಂದು ಕೇಳುತ್ತಾನೆ.  ಇದನ್ನೂ ಓದಿ: ದೀಪಾವಳಿ: ವ್ಯಾಪಾರ ವೃದ್ಧಿಗೆ ಮಾಡಿ ಧನಲಕ್ಷ್ಮಿ ಪೂಜೆ

    ಪ್ರಜಾಪರಿಪಾಲನೆಯಲ್ಲಿ ಹೆಸರು ಮಾಡಿರುವ ನನಗೆ ಈ ಪುಟ್ಟ ಬಾಲಕನ ಬೇಡಿಕೆಯನ್ನು ಈಡೇರಿಸುವ ಯೋಗ್ಯತೆ ಇಲ್ವಾ ಎಂಬ ಅಹಂಕಾರದಿಂದ ಬಲೀಂದ್ರ ಮಹಾರಾಜ ವಾಮನನಿಗೆ, ನೀನು ಕೇಳಿದ ಮೂರು ಹೆಜ್ಜೆ ಊರುವಷ್ಟು ಜಾಗ ನೀಡುತ್ತೇನೆ ಎಂದು ವಚನವನ್ನು ಕೊಡುತ್ತಾನೆ.

    ಭೂಮಿಯನ್ನು ದಾನ ಪಡೆಯುವಾಗ ವಾಮನಮೂರ್ತಿ ಆಕಾಶದ ಉದ್ದಕ್ಕೂ ಬೆಳೆಯುತ್ತಾನೆ. ಒಂದು ಪಾದವನ್ನು ಭೂಮಿ ಮೇಲೆ, ಮತ್ತೊಂದು ಪಾದವನ್ನು ಆಕಾಶದ ಮೇಲೆ ಇರಿಸುತ್ತಾನೆ. ಇನ್ನೊಂದು ಪಾದ ಇಡಲು ಜಾಗ ಕಾಣುತ್ತಿಲ್ಲ ಎಲ್ಲಿ ಇಡಬೇಕು ಎಂದು ಕೇಳಿದಾಗ ಬಲಿ ಚಕ್ರವರ್ತಿಗೆ ಜ್ಞಾನೋದಯವಾಗಿ ನನ್ನ ತಲೆ ಮೇಲೆ ಪಾದ ಇಡು ಎಂದು ಹೇಳುತ್ತಾನೆ.

    ನನ್ನ ತಲೆ ಮೇಲೆ ನಿಮ್ಮ ಪಾದ ಇಡುವ ಮೂಲಕ ನನ್ನಲ್ಲಿರುವ ಅಹಂಕಾರವೆಲ್ಲ ನಾಶವಾಗಲಿ ಎಂದು ವಾಮನನ ಬಳಿ ಬಲಿ ಕ್ಷಮೆ ಕೇಳುತ್ತಾನೆ. ವಾಮನ ತನ್ನ ಪಾದವನ್ನು ಬಲೀಂದ್ರ ಮಹಾರಾಜನ ಮೇಲೆ ಇರಿಸಿ ಪಾತಾಳಕ್ಕೆ ಕಳುಹಿಸುತ್ತಾನೆ.

    ತಲೆ ಮೇಲೆ ಕಾಲನ್ನು ಇಡುವ ಮುನ್ನ ವಾಮನ ಬಳಿ ಬಲಿ, ನಾನು ನನ್ನ ಮಕ್ಕಳಂತೆ ಪ್ರಜೆಗಳನ್ನು ನೋಡಿದ್ದೇನೆ. ಹೀಗಾಗಿ ಪ್ರಜೆಗಳನ್ನು ನೋಡಲು ಅವಕಾಶ ನೀಡಬೇಕೆಂದು ಪ್ರಾರ್ಥನೆ ಮಾಡಿಕೊಳ್ಳುತ್ತಾನೆ. ಈ ಪ್ರಾರ್ಥನೆ ಸ್ವೀಕರಿಸಿದ ವಾಮನ ಅಸ್ತು ಎಂದು ಹೇಳಿ ತಲೆಯ ಮೇಲಿಟ್ಟು ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ತುಳಿದುಬಿಡುತ್ತಾನೆ.  ಇದನ್ನೂ ಓದಿ: ದೀಪಾವಳಿಯಲ್ಲಿ ಗೋಪೂಜೆಯ ಮಹತ್ವವೇನು?

     

    ಬಲಿಯ ಭಕ್ತಿಯನ್ನು ಮತ್ತು ದಾನಶೀಲಗುಣವನ್ನು ಮೆಚ್ಚಿದ ವಿಷ್ಣು ಪ್ರತಿವರ್ಷ ಒಂದು ದಿನ ಅವನ ಹೆಸರಿನಲ್ಲಿ ಪೂಜೆ ನಡೆಯುವಂತೆ ವರ ನೀಡುತ್ತಾನೆ. ಅದೇನೆಂದರೆ ಆಶ್ವಯುಜ ಮಾಸದಲ್ಲಿ ಮೂರು ದಿವಸಗಳ ಕಾಲ ನೀನು ಭೂಲೋಕಕ್ಕೆ ಬರಬಹುದು. ಅಲ್ಲಿ ನಿನ್ನನ್ನು ಜನತೆ ಪೂಜೆ ಮಾಡುವರು. ಇದರ ಫಲವಾಗಿಯೇ ದೀಪಾವಳಿ ಸಮಯದಲ್ಲಿ ಎಲ್ಲರೂ ದೀಪ ಹಚ್ಚಿ ಬಲೀಂದ್ರ ಪೂಜೆ ಕೈಗೊಳ್ಳುತ್ತಾರೆ. ಆಶ್ವಯುಜ ಕೃಷ್ಣ ಚತುರ್ದಶಿ, ಅಮಾವಾಸ್ಯೆ ಮತ್ತು ಕಾರ್ತಿಕ ಶುದ್ಧ ಪಾಡ್ಯ. ಇದನ್ನು ಬಲಿರಾಜ್ಯವೆಂದು ಹೇಳುತ್ತಾರೆ. ಆ ರೀತಿ ಆಚರಿಸಲ್ಪಡುವ ಕೊನೆಯ ದಿನವೇ ಬಲಿಪಾಡ್ಯಮಿ. ಈ ಅವಧಿಯಲ್ಲಿ ಬಲಿ ಚಕ್ರವರ್ತಿ ಪಾತಾಳದಿಂದ ಭೂಲೋಕ ಸಂಚಾರಕ್ಕೆ ಬರುತ್ತಾನೆಂಬ ನಂಬಿಕೆಯಲ್ಲಿ ಬಲೀಂದ್ರ ಪೂಜೆ ನಡೆಯುತ್ತದೆ.

    ದೀಪಾವಳಿಯ ದಿನದಂದು ಪ್ರಜೆಗಳನ್ನು ನೋಡಲು ಬಲೀಂದ್ರ ಮಹಾರಾಜ ಬರುತ್ತಾನೆ ಎಂಬ ನಂಬಿಕೆಯಿಂದ ಜನರು ಅಭ್ಯಂಜನ ಸ್ನಾನಾದಿಗಳನ್ನು ಮಾಡಿಕೊಂಡು ಮನೆಯ ಎಲ್ಲ ಪಾತ್ರೆಗಳಲ್ಲಿ ಶುದ್ಧವಾದ ನೀರನ್ನು ತುಂಬಿಸುತ್ತಾರೆ. ಎಣ್ಣೆ ಸ್ನಾನ ಮಾಡುವಾಗ ಸಪ್ತ ಚಿರಂಜೀವಿಗಳನ್ನು ಹೇಳುವ ಅಶ್ವತ್ಥಾಮೋ ಬಲಿರ್ವ್ಯಾಸೋ ಹನೂಮಾಶ್ಛ ವಿಭೀಷಣಃ | ಕೃಪಃ ಪರಶುರಾಮಶ್ಚ ಸಪ್ತೇತೇಃ ಚಿರಂಜೀವಿನಃ | ಶ್ಲೋಕವನ್ನು ಹೇಳುತ್ತಾರೆ. ಹಿಂದೂ ಪುರಾಣಗಳ ಪ್ರಕಾರ ರಾಮಾಯಣ ಮತ್ತು ಮಹಾಭಾರತಗಳಿಗೆ ಸಂಬಂಧಿಸಿದ ಏಳು ಪೌರಾಣಿಕ ವ್ಯಕ್ತಿಗಳನ್ನು ಚಿರಂಜೀವಿಗಳು ಎಂದು ನಂಬಲಾಗಿದೆ. ಅಶ್ವತ್ಥಾಮ, ಬಲೀಂದ್ರ, ವೇದವ್ಯಾಸ, ಹನುಮಂತ, ವಿಭೀಷಣ, ಕೃಪಾಚಾರ್ಯ, ಪರಶುರಾಮನನ್ನು ಸ್ತುತಿಸಿದರೆ ಆಯಸ್ಸು ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ.

     

  • ಬಲಿ ಪಾಡ್ಯಮಿಯಂದು ಗೋಪೂಜೆ ಯಾಕೆ ಮಾಡುತ್ತಾರೆ? ಕಥೆ ಏನು ಹೇಳುತ್ತೆ?

    ಬಲಿ ಪಾಡ್ಯಮಿಯಂದು ಗೋಪೂಜೆ ಯಾಕೆ ಮಾಡುತ್ತಾರೆ? ಕಥೆ ಏನು ಹೇಳುತ್ತೆ?

    ಲಿ ಪಾಡ್ಯಮಿಯಂದೇ ಗೋವರ್ಧನ ಪೂಜೆಯನ್ನು ಮಾಡಿ, ಗೋವುಗಳನ್ನು ಅಲಂಕರಿಸಿ, ಹಾಲು ಹಿಂಡುವ ಪಾತ್ರೆಗಳನ್ನು ಪೂಜಿಸಲಾಗುತ್ತದೆ. ಗೋಶಾಲೆಯನ್ನು ದೀಪದಿಂದ ಬೆಳಗಿ, ಹಸುಗಳಿಗೆ ಅಕ್ಕಿ, ಬೆಲ್ಲ, ಹಿಂಡಿ, ತಿನಿಸುಗಳನ್ನು ನೀಡಲಾಗುತ್ತದೆ. ಗೋಪೂಜೆಯನ್ನ ಯಾಕೆ ಮಾಡಲಾಗುತ್ತದೆ ಎನ್ನುವುದಕ್ಕೂ ಪುರಾಣ ಕಥೆಯಿದೆ.

    ಕೃಷ್ಣ ನಂದಗೋಕುಲದಲ್ಲಿದ್ದಾಗ ಅಲ್ಲಿದ್ದ ಗೋಪ, ಗೋಪಿಯರು ಪ್ರತಿವರ್ಷ ಮಳೆ ಬರಲಿ ಎಂದು ಎಲ್ಲರು ಇಂದ್ರದೇವನ ಪೂಜೆಯನ್ನು ಮಾಡುತ್ತಿದ್ದರು. ಇದರಿಂದಾಗಿ ಇಂದ್ರನಿಗೆ ನಾನು ಮಳೆ ಬರಿಸುವುದರಿಂದಲೇ ಪ್ರಪಂಚದಲ್ಲಿ ಎಲ್ಲವೂ ನಡೆಯುತ್ತಿದೆ ಎಂದು ಗರ್ವದಿಂದ ಬೀಗಿದ. ಇದನ್ನೂ ಓದಿ:ದೀಪಾವಳಿಯಂದು ಬಲೀಂದ್ರ ಪೂಜೆಯನ್ನು ಯಾಕೆ ಮಾಡುತ್ತಾರೆ? ರೈತರು ಹೇಗೆ ಬಲಿಯನ್ನು ಸ್ವಾಗತಿಸುತ್ತಾರೆ?

    ಇಂದ್ರ ತಾನು, ತನ್ನಿಂದ ಎಂದು ಗರ್ವದಲ್ಲಿ ಬೀಗುತ್ತಿರುವ ವಿಚಾರ ಕೃಷ್ಣನಿಗೆ ತಿಳಿಯುತ್ತದೆ. ಈ ಕಾರಣಕ್ಕೆ ಈತನ ಗರ್ವ ಇಳಿಸಲು ಇಂದ್ರನಿಗೆ ಪೂಜೆ ಮಾಡದೇ ಗೋವರ್ಧನ ಪರ್ವತಕ್ಕೆ ಪೂಜೆ ಮಾಡಬೇಕೆಂದು ಗೋಪಾಲಕರಿಗೆ ಸೂಚಿಸಿದ. ನಮಗೆ ಮಳೆ ಗೋವರ್ಧನ ಪರ್ವತದಿಂದ ಬರುತ್ತಿದೆ, ಅದಕ್ಕಾಗಿ ನಾವು ಇನ್ನು ಮುಂದೆ ಗೋವರ್ಧನ ಪರ್ವತವನ್ನು ಪೂಜೆ ಮಾಡಬೇಕೇ ವಿನಾಃ ಇಂದ್ರದೇವನ ಪೂಜೆ ಮಾಡುವುದು ಬೇಡ ಎಂದು ಸೂಚಿಸಿದ. ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಮಾಡಿ ಗರಿಗರಿಯಾದ ಶಂಕರಪೊಳೆ

    ಕೃಷ್ಣನ ಸೂಚನೆಯ ಹಿನ್ನೆಲೆಯಲ್ಲಿ ಗೋವರ್ಧನ ಪರ್ವತದ ಪೂಜೆ ಮಾಡಲು ಶುರು ಮಾಡಿದರು. ನನಗೆ ಪೂಜೆ ಮಾಡುವುದನ್ನು ಬಿಟ್ಟು ಗೋವರ್ಧನ ಪರ್ವತಕ್ಕೆ ಪೂಜೆ ಮಾಡುವುದನ್ನು ನೋಡಿ ಇಂದ್ರನಿಗೆ ಕೋಪ ಬಂತು. ಗೋಪಾಲರಿಗೆ ಪಾಠ ಕಲಿಸಲು ಇಂದ್ರನು ತುಂಬಾ ರಭಸವಾಗಿ ಮಳೆಯನ್ನು ಸುರಿಸಲು ಪ್ರಾರಂಭಿಸಿದನು. ಇದರಿಂದಾಗಿ ನದಿಯು ತುಂಬಿ ಹರಿಯಲಾರಂಭಿಸಿತು. ಎಲ್ಲ ಜನರು ಗಾಬರಿಯಿಂದ ಶ್ರೀಕೃಷ್ಣನ ಬಳಿಗೆ ಸಹಾಯ ಕೇಳಲು ಓಡಿದರು. ಇದನ್ನೂ ಓದಿ: ದೀಪಾವಳಿಯಂದು ಎಣ್ಣೆ ಸ್ನಾನ ಮಾಡೋದು ಯಾಕೆ? ನರಕಕ್ಕೆ ಹೋಗಲ್ಲ ಯಾಕೆ?

    ಆಗ ಶ್ರೀಕೃಷ್ಣನು, ನೀವು ಯಾರು ಭಯ ಪಡುವ ಅಗತ್ಯವಿಲ್ಲ. ಎಲ್ಲರು ಒಟ್ಟು ಸೇರೋಣ. ನಾವು ಪೂಜಿಸಿದ ಗೋವರ್ಧನ ಪರ್ವತವೇ ನಮ್ಮನ್ನು ರಕ್ಷಿಸುತ್ತದೆ ಎಂದು ಅಭಯವನ್ನು ಇತ್ತ. ಎಲ್ಲ ಜನ ಸೇರಿದ ನಂತರ ಕೃಷ್ಣ ತನ್ನ ಕಿರು ಬೆರಳಿನಿಂದ ಗೋವರ್ಧನ ಪರ್ವತವನ್ನು ಎತ್ತಿ ಹಿಡಿದು ಗ್ರಾಮಸ್ಥರನ್ನು ರಕ್ಷಿಸಿದ. ಬಲಿ ಪಾಡ್ಯಮಿಯಂದು ಕೃಷ್ಣ ಗೋವರ್ಧನ ಪರ್ವತವನ್ನು ಎತ್ತಿದ ಹಿನ್ನೆಲೆಯಲ್ಲಿ ಈ ದಿನ ಈಗಲೂ ಗೋವುಗಳಿಗೆ ವಿಶೇಷ ಪೂಜೆ ಮಾಡಲಾಗುತ್ತದೆ.

    https://www.youtube.com/watch?v=bdq-b9Difjs