Tag: ಬರ

  • ಬತ್ತಿದ ಲಕ್ಷ್ಮಣ ತೀರ್ಥ: ಕಾಫಿ ಬೆಳೆ ಬಿಟ್ಟು ಹೋಂ ಸ್ಟೇ ಆರಂಭಿಸಲು ಮುಂದಾದ ಜನ!

    ಬತ್ತಿದ ಲಕ್ಷ್ಮಣ ತೀರ್ಥ: ಕಾಫಿ ಬೆಳೆ ಬಿಟ್ಟು ಹೋಂ ಸ್ಟೇ ಆರಂಭಿಸಲು ಮುಂದಾದ ಜನ!

    ಮಡಿಕೇರಿ: ಕಾವೇರಿ ತವರಲ್ಲೂ ಬರದ ಛಾಯೆ ಎದ್ದಿದೆ. ಕಾವೇರಿಯ ಒಡಲು ಬತ್ತುತ್ತಿದೆ. ಪ್ರಕೃತಿಯ ಮಡಿಲಲ್ಲಿ ನೀರಿಗೆ ಹಾಹಾಕಾರ. ಬೇಸಿಗೆಗೂ ಮುನ್ನ ತತ್ತರಿಸಿದ ಕಾವೇರಿ ತವರಿನ ಜನರು. ದಕ್ಷಿಣ ಕೊಡಗಿನ ಜೀವ ನದಿಯಾದ ಲಕ್ಷಣ ತೀರ್ಥ ನದಿಯು ಬತ್ತಿಹೋಗಿದ್ದು ನೇರೆ ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.

    ಕಾವೇರಿ ತವರು ಪ್ರಾಕೃತಿಕ ಸೌಂದರ್ಯದ ನೆಲೆವೀಡು ಕೊಡಗು ಜಿಲ್ಲೆಯಲ್ಲಿ ಈಗ ಭೀಕರ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಜೀವನಾಡಿ ಕಾವೇರಿ ಹಾಗು ಲಕ್ಷ್ಮಣ ತೀರ್ಥ ನದಿ ಬತ್ತಿದ್ದು, ಜಿಲ್ಲೆಯ ಪ್ರಮುಖ ಉದ್ಯಮವಾಗಿರುವ ಕಾಫಿ ಶೇ.30 ಭತ್ತ ಶೇ.50 ರಷ್ಟು ಕುಸಿತ ಕಂಡಿದ್ದು ಬೆಳೆಗಾರನ ಬದುಕು ದುಸ್ತರವಾಗಿದೆ.

    ಈ ಬಾರಿ ಜಿಲ್ಲೆಯಲ್ಲಿ ಬರಗಾಲದ ಪರಿಸ್ಥಿತಿ ಉದ್ಭವಿಸಿದ್ದು ಬೇಸಿಗೆಯಲ್ಲಿ ಮತ್ತಷ್ಟು ಭೀಕರವಾಗುವ ಸಾಧ್ಯತೆಗಳಿದೆ. ಕೊಡಗು ಜಿಲ್ಲೆ ಸತತವಾಗಿ ಎರಡು ವರ್ಷ ಬರಗಾಲವನ್ನು ಎದುರಿಸುತ್ತಿದೆ. ಜೀವನದಿ ಕಾವೇರಿ ಹರಿದು ಹೋಗುವ ವ್ಯಾಪ್ತಿಯಲ್ಲೂ ಬರದ ಛಾಯೆ ಉದ್ಭವಿಸಿದೆ. ಈಗ ಲಕ್ಷ್ಮಣ ತೀರ್ಥ ನದಿಯು ಇದೀಗ ಸಂಪೂರ್ಣವಾಗಿ ಬತ್ತಿಹೋಗಿದೆ.

    ಕೊಡಗಿನ ಬಾಳೆಲೆ ಕುಟ್ಟ ಮಾಯಮುಡಿ ಹಾಗೂ ಪಕ್ಕದ ಜಿಲ್ಲೆಯದ ಮೈಸೂರು ಜಿಲ್ಲೆಯ ಹುಣಸೂರು ಗ್ರಾಮಗಳ ರೈತರು ಈ ಲಕ್ಷ್ಮಣ ತೀರ್ಥ ನದಿಯ ನೀರನ್ನೆ ಅವಲಂಬಿಸಿದ್ದು ಈಗ ಭಾರೀ ಕಷ್ಟವಾಗಿದೆ ಎಂದು ರೈತ ಬೋಪಯ್ಯ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಈ ಭಾಗದ ಜನ-ಜಾನುವಾರುಗಳು ಸಮಸ್ಯೆಯಿಂದ ನರಳುವುದು ಮಾತ್ರ ತಪ್ಪುವುದಿಲ್ಲ. ಹವಾಮಾನದ ವೈಪರೀತ್ಯದಿಂದಾಗಿ ಮಳೆಯೂ ಈ ವರ್ಷ ಕೈಕೊಟ್ಟಿದೆ. ಪರಿಣಾಮ ಲಕ್ಷ್ಮಣ ತೀರ್ಥ ನದಿ ಸೇರಿದಂತೆ, ಸಣ್ಣಪುಟ್ಟ ಹೊಳೆಗಳು, ಕೆರೆಗಳು ಈಗಾಗಲೇ ಬತ್ತಿ ಹೋಗಿದೆ.

    ಗ್ರಾಮೀಣ ಭಾಗದಲ್ಲೂ ಸೇರಿದಂತೆ ನಗರ ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುತ್ತಿದೆ. ದುರಾದೃಷ್ಟಕರ ಸಂಗತಿ ಎಂದರೆ ಕಾಫಿ ಬೆಳೆ ಕೈಕೊಟ್ಟಿರುವ ಹಿನ್ನಲೆಯಲ್ಲಿ ಜಿಲ್ಲೆಯ ಕೆಲವು ಕಾಫಿ ಬೆಳೆಗಾರರು ಈಗ ಹೋಂಸ್ಟೇ ಆರಂಭಿಸಿದ್ದು, ಕೃಷಿಯನ್ನು ಮರೆತಿದ್ದಾರೆ. ಈ ಹಿನ್ನೆಲೆ ಹೋಂಸ್ಟೇ ಸಂಸ್ಕøತಿಗೆ ಕೊಡಗಿನ ಬಹುತೇಕ ಬೆಳೆಗಾರರು ಮಾರು ಹೋಗಿದ್ದಾರೆ. ಇದರಿಂದ ಪರಿಸರ ನಾಶ, ಅನಗತ್ಯ ಯೋಜನೆಗಳು ಜಿಲ್ಲೆಯ ಪರಿಸರವನ್ನು ಹಾಳು ಮಾಡುತ್ತಿವೆ ಎಂಬ ಆರೋಪ ಕೇಳಿಬಂದಿದೆ.

    ಹೈಟೆನ್ಷನ್ ಮಾರ್ಗ, ಅಕ್ರಮ ರೆಸಾರ್ಟ್ ತಲೆ ಎತ್ತಿರುವುದು, ಮರಳು ದಂಧೆ, ಮರ ಮಾಫಿಯಾ, ಅರಣ್ಯ ನಾಶದಿಂದ ಕೊಡಗಿನ ಪ್ರಾಕೃತಿಕ ಪರಿಸರವೇ ಬದಲಾಗಿದೆ. ಈ ಪರಿಣಾಮದಿಂದಾಗಿ ಜಿಲ್ಲೆಯಲ್ಲಿ ಬರದ ತಾಂಡವ ಹೆಚ್ಚಾಗಿದೆ. ಇವುಗಳಿಗೆ ತುರ್ತಾಗಿ ಕಡಿವಾಣ ಹಾಕಬೇಕಿದೆ ಎಂದು ಕೊಡಗು ಜಿಲ್ಲೆಯ ರೈತಸಂಘದ ಅಧ್ಯಕ್ಷ ಮನು ಸೋಮಯ್ಯ ಹೇಳಿದ್ದಾರೆ.

  • ಕೂಗಾಟ, ಹಾರಾಟದಲ್ಲಿಯೇ ರಾಯಚೂರು ಸಾಮಾನ್ಯ ಸಭೆ ಅಂತ್ಯ

    ಕೂಗಾಟ, ಹಾರಾಟದಲ್ಲಿಯೇ ರಾಯಚೂರು ಸಾಮಾನ್ಯ ಸಭೆ ಅಂತ್ಯ

    ರಾಯಚೂರು: ರಾಯಚೂರು ನಗರಸಭೆ ಸಭಾಂಗಣದಲ್ಲಿ ನಡೆದ ಮಹಾ ಸಾಮಾನ್ಯ ಸಭೆ ಸದಸ್ಯರ ಕೂಗಾಟ, ಹಾರಾಟಗಳಿಗೆ ಬಲಿಯಾಯಿತು. ಸಭೆ ಆರಂಭದಿಂದಲೂ ವೈಯಕ್ತಿಕ ಸಮಸ್ಯೆಗಳನ್ನು ತೋಡಿಕೊಂಡ ಸದಸ್ಯರು ಅಧಿಕಾರಿಗಳು ಮಾತು ಕೇಳ್ತಿಲ್ಲಾ ಎಂದು ಹರಿಹಾಯ್ದರು. ನಗರಸಭೆಯಲ್ಲಿ ಸದಸ್ಯರನ್ನು ಕೇಳುವವರಿಲ್ಲ ಅಂತ ತಮ್ಮ ಗೋಳು ತೋಡಿಕೊಂಡರು.

    ಸದಸ್ಯೆ ಸೀಮಾ ನದಾಫ್ ತಮ್ಮ ವಾರ್ಡಿನ ಕಬರಸ್ತಾನದಲ್ಲಿ ತಮಗೇ ತಿಳಿಯದಂತೆ ಶೌಚಾಲಯ ನಿರ್ಮಿಸಿದ್ದಾರೆ ಅಂತ ಕೂಗಾಡಿದರು. ಇತರೆ ಸದಸ್ಯರು ಬೆಂಬಲ ಕೊಡದಿದ್ದಕ್ಕೆ ಖುರ್ಚಿಯಿಂದ ಎದ್ದು ಅಧ್ಯಕ್ಷೆ, ಉಪಾಧ್ಯಕ್ಷ, ಪೌರಾಯುಕ್ತರ ವಿರುದ್ಧ ಆರೋಪಿಸಿ ಪ್ರತಿಭಟನೆ ನಡೆಸಿದರು. ಗೊತ್ತುವಳಿಗಳು ಚರ್ಚಿಸದೇ ಎಸ್ ಪಾಸ್ ಆಗುತ್ತಿವೆ ಅಂತ ಸದಸ್ಯ ನರಸಪ್ಪ ಟೇಬಲ್ ಹಾರಿ ಸಭಾಂಗಣದ ಬಾವಿಗೆ ಇಳಿದು ನಗರಸಭೆ ಉಪಾಧ್ಯಕ್ಷ ಜಯಣ್ಣ ವಿರುದ್ಧ ಕೂಗಾಡಿ ಗೊಂದಲ ಸೃಷ್ಟಿ ಮಾಡಿದರು.

    ಇನ್ನೂ ಸದಸ್ಯ ಮೆಹಬೂಬ್ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ದೀಪಾಲಂಕಾರಕ್ಕೆ ನಗರಸಭೆಯಿಂದ ನೀಡಲಾದ 3 ಲಕ್ಷ 90 ಸಾವಿರ ರೂಪಾಯಿ ಲೆಕ್ಕ ತೋರಿಸುವಂತೆ ಆಗ್ರಹಿಸಿ ಕಳ್ಳಲೆಕ್ಕಗಳಲ್ಲಿ ನಗರಸಭೆ ಮುಳುಗಿದೆ ಎಂದು ಆರೋಪಿಸಿದರು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸದಸ್ಯರೆಲ್ಲರೂ ಪಕ್ಷಭೇದ ಮರೆತು ನಗರಸಭೆ ಸದಸ್ಯರಿಗೆ ಬೆಲೆ ಸಿಗುತ್ತಿಲ್ಲ ಅಂತ ಕೂಗಾಡಿದರು. ಗದ್ದಲ, ಗಲಾಟೆಯಲ್ಲಿ 41 ಗೊತ್ತುವಳಿಗಳನ್ನು ಎಸ್ ಪಾಸ್ ಮೂಲಕ ಅಂಗೀಕರಿಸಲಾಯಿತು.

    ನಗರದಲ್ಲಿ ದಿನೇ ದಿನೇ ಗಂಭೀರವಾಗುತ್ತಿರುವ ಕುಡಿಯುವ ನೀರಿನ ಸಮಸ್ಯೆ ಕುರಿತಾಗಲಿ, ಅಸಮರ್ಪಕವಾಗಿ ಸಾಗಿರುವ ಒಳಚರಂಡಿ ಕಾಮಗಾರಿಯ ತೊಂದರೆ, ರಸ್ತೆ, ಶೌಚಾಲಯ, ವಿದ್ಯುತ್ ದೀಪದ ಬಗ್ಗೆ ಗಂಭೀರ ಚರ್ಚೆ ನಡೆಯದೇ ಬರೀ ಗಲಾಟೆಯಲ್ಲಿ ಸಭೆ ಮುಕ್ತಾಯಗೊಂಡಿತು.

     

  • ಯಾದಗಿರಿ: ಜನತೆಗೆ ಮರೀಚಿಕೆಯಾದ ಶುದ್ಧ ಕುಡಿಯುವ ನೀರು

    ಯಾದಗಿರಿ: ಜನತೆಗೆ ಮರೀಚಿಕೆಯಾದ ಶುದ್ಧ ಕುಡಿಯುವ ನೀರು

    – 3 ತಿಂಗಳಿನಿಂದ ಕಲುಷಿತ ನೀರು ಕುಡಿಯುತ್ತಿರೋ ಜನ

    ಯಾದಗಿರಿ: ನಗರದ ಜನತೆಗೆ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದೆ. ಶುದ್ಧ ನೀರು ಪೂರೈಸಿ ಜನರ ಆರೋಗ್ಯ ಕಾಪಾಡಬೇಕಾದ ನಗರಸಭೆ ಮಾತ್ರ ನಿಷ್ಕಾಳಜಿ ವಹಿಸಿದೆ. ನಗರಸಭೆ ಕಲುಷಿತ ನೀರು ಪೂರೈಸುತ್ತಿರುವ ಪರಿಣಾಮ ಜನತೆ ಅನಾರೋಗ್ಯದಿಂದ ಬಳಲುವಂತಾಗಿದೆ.

    ನಗರದ ಜನರಿಗೆ ಯಾದಗಿರಿ ನಗರಸಭೆ ಗಲೀಜು ನೀರು ಪೂರೈಸುತ್ತಿದೆ. ಕಳೆದ 3 ತಿಂಗಳಿನಿಂದ ಗಲೀಜು ನೀರನ್ನೇ ಜನತೆ ಸೇವನೆ ಮಾಡುತ್ತಿದ್ದಾರೆ. ನೀರು ಪೂರೈಸುವ ಪೈಪ್ ಲೈನ್ ಚರಂಡಿ ನೀರಿನಲ್ಲಿ ಸೇರಿಕೊಂಡ ಪರಿಣಾಮ ಚರಂಡಿ ನೀರು ನಲ್ಲಿಯ ಮೂಲಕ ಹರಿದುಬರುತ್ತಿದೆ.

    ವಾರ್ಡ್ 6ರ ಸವಿತಾ ನಗರ, ಮೈಲಾಪುರ ಅಗಸಿ ಹಾಗೂ ಇನ್ನಿತರೆ ಬಡಾವಣೆಯಲ್ಲಿ ಕಳೆದ ಮೂರು ತಿಂಗಳಿನಿಂದ ಮಲಿನವಾದ ನೀರು ಪೂರೈಸಲಾಗುತ್ತಿದೆ. ಕುಡಿಯುವ ನೀರು ಚರಂಡಿ ನೀರಿನೊಂದಿಗೆ ಮಿಶ್ರಣವಾಗಿ ಗಲೀಜು ನೀರು ಸರಬರಾಜಾಗುತ್ತಿದೆ. ಬೇಸಿಗೆಯಲ್ಲಿ ಸಮರ್ಪಕವಾಗಿ ನೀರು ಪೂರೈಕೆಯಾಗದ ಹಿನ್ನಲೆಯಲ್ಲಿ ಹಾಗೂ ನೀರಿನ ಕೊರತೆಯಿಂದಾಗಿ ನಗರದ ನಿವಾಸಿಗಳು ಇದೇ ನೀರನ್ನ ಸ್ವಲ್ಪಮಟ್ಟಿಗೆ ಶುದ್ಧೀಕರಿಸಿ ದಾಹ ತಣಿಸಿಕೊಳ್ಳುತ್ತಿದ್ದಾರೆ.

    ಈ ಬಗ್ಗೆ ನಗರದ ನಿವಾಸಿಗಳು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕೇವಲ ಭರವಸೆ ನೀಡುವ ಕೆಲಸ ಮಾಡಿದ್ದಾರೆ. ಈಗಾಗಲೇ ನಗರದ ಜನತೆ ನೀರಿಗಾಗಿ ಹಾಹಾಕರ ಪಡುತ್ತಿದ್ದಾರೆ. ಇದ್ದಷ್ಟಾದರೂ ನಮಗೆ ಶುದ್ಧವಾದ ನೀರು ಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಎಂದು ಅಳಲು ತೊಡಿಕೊಳ್ಳುತ್ತಿದ್ದಾರೆ. ಇನ್ನು ಮುಂದಾದರು ನಗರಸಭೆ ಎಚ್ಚೆತ್ತುಕೊಂಡು ಸಮಸ್ಯೆಗಳನ್ನು ಬಗೆಹರಿಸಿ ನಗರದ ನಿವಾಸಿಗಳಿಗೆ ಶುದ್ಧವಾದ ನೀರು ಪೂರೈಸುವ ಕೆಲಸ ಮಾಡಬೇಕಿದೆ.

     

  • ಬಿರು ಬೇಸಿಗೆಯಲ್ಲಿ ಮಳೆ ತರಿಸಬಲ್ಲ ಡ್ರೋನ್ ವಿನ್ಯಾಸಗೊಳಿಸಿದ್ದಾರೆ ಉಡುಪಿ ಯುವಕರು

    ಬಿರು ಬೇಸಿಗೆಯಲ್ಲಿ ಮಳೆ ತರಿಸಬಲ್ಲ ಡ್ರೋನ್ ವಿನ್ಯಾಸಗೊಳಿಸಿದ್ದಾರೆ ಉಡುಪಿ ಯುವಕರು

    ಉಡುಪಿ: ಡ್ರೋನ್ ಕ್ಯಾಮೆರಾ ಭಾರತ ದೇಶದ ಸೈನ್ಯದಲ್ಲಿ ಮಹತ್ವದ ಪಾತ್ರವಹಿಸ್ತಾಯಿದೆ. ಅದು ಬಿಟ್ಟರೆ ಡ್ರೋನ್ ಯೂಸ್ ಆಗೋದು ವಿಭಿನ್ನ ದೃಶ್ಯಾವಳಿಗಳ ಶೂಟಿಂಗ್‍ಗಾಗಿ. ಇದೇ ಡ್ರೋನನ್ನು ಉಪಯೋಗಿಸಿಕೊಂಡು ಕರ್ನಾಟಕದ ಬರವನ್ನು ನೀಗಿಸಿ ಮಳೆ ಬರಿಸೋದಕ್ಕೆ ಹೊರಟಿದೆ ಉಡುಪಿಯ ಒಂದು ಟೀಂ.

    ಡ್ರೋನ್..! ಕ್ಯಾಮೆರಾ ತಂತ್ರಜ್ಞಾನದ ಸದ್ಯದ ಅತ್ಯುನ್ನತ ಸಂಶೋಧನೆಗಳಲ್ಲಿ ಒಂದು. ನಿಂತಲ್ಲಿಂದ ಬರಿಗಣ್ಣಿನಲ್ಲಿ ನೋಡಲಾಗದ- ಪಕ್ಷಿನೋಟವನ್ನು ಸೆರೆ ಹಿಡಿಯುವ ವಿಭಿನ್ನ ತಂತ್ರಜ್ಞಾನ. ಭೂಮಿಯಿಂದ ವಿಮಾನದಂತೆ ಹಾರಿ ಮತ್ತೆ ಭೂಮಿಗೆ ಇಳಿಯುವ ಸಾಧನ. ಸೈನ್ಯದಲ್ಲಿ ದೇಶದ ರಕ್ಷಣೆಯಲ್ಲಿ ಈ ಡ್ರೋನ್ ಉಪಯೋಗವಾಗುತ್ತಿದೆ. ಅದು ಬಿಟ್ಟರೆ, ಸಿನೆಮಾ ಗಳಲ್ಲಿ ಸುಂದರ ದೃಶ್ಯ ಸೆರೆ ಹಿಡಿಯಲು ಫೋಟೋ ಕ್ಲಿಕ್ ಮಾಡಲು ಡ್ರೋನ್ ಬಳಕೆಯಾಗ್ತಿದೆ. ಆದ್ರೆ ಡ್ರೋನನ್ನು ಬೇರೆಯದೇ ಕಾರಣಕ್ಕೆ ಉಪಯೋಗಿಸಬಹುದು.

    ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ರತ್ನಾಕರ್ ಮತ್ತು ಪ್ರಜ್ವಲ್ ದೊಡ್ಡ ಗಾತ್ರದ ಡ್ರೋನ್ ತಯಾರಿ ಮಾಡಿದ್ದಾರೆ. ಇದು ಮಾಮೂಲಿ ಡ್ರೋನ್ ಅಲ್ಲ. ಸಿಲ್ವರ್ ಅಯೋಡೈಸ್ಟ್ ಸೆಲ್‍ಗಳನ್ನು ಹೊತ್ತು ಬಾನೆತ್ತರಕ್ಕೆ ಹಾರುತ್ತದೆ. ನೀರಿಯುವ ಮೋಡಗಳ ಮೇಲೆ ಅದನ್ನು ಸಿಡಿಸುತ್ತದೆ. ಬಿರು ಬೇಸಿಗೆಯಲ್ಲಿ ಮಳೆ ತರಿಸುತ್ತದೆ. ಮೋಡ ಬಿತ್ತನೆಗಾಗಿ ಈ ಡ್ರೋನ್ ಸಿಸ್ಟಮನ್ನು ಇವರಿಬ್ಬರು ಕಂಡು ಹುಡುಕಿದ್ದಾರೆ.

    ಕ್ಲೌಡ್ ಸೀಡಿಂಗ್ ಡ್ರೋನ್‍ನಲ್ಲಿ ಕಡಿಮೆ ಖರ್ಚಿನಲ್ಲಿ ಮೋಡ ಬಿತ್ತನೆ ಮಾಡಬಹುದು. ಇದರಲ್ಲಿ ವೇ ಪಾಯಿಂಟ್ ಟೆಕ್ನಾಲಜಿ ಅಪ್ಲೈ ಮಾಡಿದ್ದೇವೆ. 11 ಲಕ್ಷ ರೂಪಾಯಿ ಸದ್ಯ ಖರ್ಚಾಗಿದೆ. ನಾನು ಪಿಯುಸಿ ಕಲಿತವ. ಟೆಕ್ನಿಕಲಿ ನಾನು ಅಷ್ಟು ಪರಿಣಿತ ಅಲ್ಲ. ಹೀಗಾಗಿ ಏರೋನಾಟಿಕಲ್ ಕಲಿತಿರುವ ಪ್ರಜ್ವಲ್ ಅವರ ಸಹಾಯ ಪಡೆದಿದ್ದೇನೆ. ಪ್ರಧಾನಿ ಮೋದಿಯವರ ಸ್ಟಾರ್ಟ್ ಅಪ್ ಇಂಡಿಯಾ ಗೂ ಇದು ಅನ್ವಯವಾಗುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಉತ್ತೇಜನ ನೀಡಿದರೆ ನಾವು ಮಾಡಿದ ಶ್ರಮ ರಾಜ್ಯ- ದೇಶದ ಜನರಿಗೆ ಉಪಯೋಗವಾಗುತ್ತದೆ ಎಂದು ಡ್ರೋನ್ ವಿನ್ಯಾಸಕ ರತ್ನಾಕರ್ ಹೇಳುತ್ತಾರೆ.

    ಡ್ರೋನ್‍ನಲ್ಲಿ ಮೋಡ ಬಿತ್ತನೆ ಮಾಡಬಹುದು. ತಯಾರಿ ಮಾಡಿರುವ ಮಷೀನ್ ಸಮರ್ಥವಾಗಿದೆ ಎಂದು ಇಸ್ರೋದ ವಿಜ್ಞಾನಿಯೊಬ್ಬರು ಹೇಳಿದ್ದಾರೆ. ಡ್ರೋನ್ ಉಪಯೋಗವಾಗಬೇಕಾದ್ರೆ ಅದಕ್ಕೆ ಸರ್ಕಾರದ ಸಪೋರ್ಟ್ ಬೇಕು. ಇದೊಂದು ಉತ್ತಮ ಆವಿಷ್ಕಾರ. ಕಡಿಮೆ ಖರ್ಚಿನಲ್ಲಿ ಮೋಡ ಬಿತ್ತನೆ ಮಾಡಬಹುದು ಎಂದು ಹೇಳಿದ್ದಾರೆ. ಇದು ಯಶಸ್ವಿಯಾದ್ರೆ ರಾಜ್ಯಕ್ಕೆ ಮತ್ತು ದೇಶಕ್ಕೆ ಕೊಡುಗೆಯಾಗಲಿದೆ. ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕಿದೆ. ಸಿಎಂ ಮತ್ತು ಕೃಷಿ ಸಚಿವರಿಗೆ ಈ ತಂತ್ರಜ್ಞಾನದ ಪರಿಚಯಿಸುತ್ತೇನೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

  • ನೀರಿಗಾಗಿ ರಾಯಚೂರು ಜನಪ್ರತಿನಿಧಿಗಳ ಆಗ್ರಹ: ಖಾಲಿ ಮಡಿಕೆ ಹಿಡಿದು ಸಭೆಯಲ್ಲಿ ಪ್ರತಿಭಟನೆ

    ನೀರಿಗಾಗಿ ರಾಯಚೂರು ಜನಪ್ರತಿನಿಧಿಗಳ ಆಗ್ರಹ: ಖಾಲಿ ಮಡಿಕೆ ಹಿಡಿದು ಸಭೆಯಲ್ಲಿ ಪ್ರತಿಭಟನೆ

    ರಾಯಚೂರು: ಬೇಸಿಗೆ ಆರಂಭವಾದಾಗಿನಿಂದ ಜನ ನೀರಿಗಾಗಿ ಪರದಾಡುತ್ತಿದ್ದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಅಂತ ಆರೋಪಿಸಿ ರಾಯಚೂರು ಜಿಲ್ಲಾ ಪಂಚಾಯ್ತಿ ಸದಸ್ಯರು ಪ್ರತಿಭಟನೆ ಮಾಡಿದರು.

    ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆಯಬೇಕಿದ್ದ ಸಾಮಾನ್ಯ ಸಭೆಗೆ ಖಾಲಿ ಮಣ್ಣಿನ ಮಡಿಕೆ ಹಿಡಿದು ಹೋರಾಟ ಆರಂಭಿಸಿದ ಸದಸ್ಯರು ಸಭೆ ಬಹಿಷ್ಕರಿಸಿ ಕೆಳಗೆ ಕುಳಿತು ಪ್ರತಿಭಟಿಸಿದರು. ಕಾಟಾಚಾರಕ್ಕೆ ಸಭೆಗಳನ್ನು ನಡೆಸಲಾಗುತ್ತಿದೆ. ನಾವು ಗ್ರಾಮಗಳಿಗೆ ತೆರಳದಂತೆ ಜನ ಬಯ್ಯುತ್ತಿದ್ದಾರೆ, ಕೂಡಲೇ ನೀರು ಕೊಡಿ ಎಂದು ಆಗ್ರಹಿಸಿದರು.

    ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋಗಿದ್ದರೂ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಅಂತ ಆರೋಪಿಸಿದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆದಿಮನೆ ವೀರಲಕ್ಷ್ಮಿ, ಸಿಇಓ ಕೂರ್ಮಾರಾವ್ ವಿರುದ್ಧ ಘೋಷಣೆಗಳನ್ನ ಕೂಗಿದ್ರು. ಅಧ್ಯಕ್ಷರು ನಮ್ಮ ಜೊತೆ ಹೋರಾಟಕ್ಕಿಳಿದು ಅಧಿಕಾರಿಗಳ ಧೋರಣೆ ಖಂಡಿಸಬೇಕು ಎಂದು ಪ್ರತಿಭಟನಾ ಸದಸ್ಯರು ಅಗ್ರಹಿಸಿದರು.

    ಬರಗಾಲ ನಿರ್ವಹಣೆಗೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಸಭೆಯಲ್ಲಿ ಕುಳಿತು ಚರ್ಚಿಸಿದರೆ ಬಗೆಹರಿಸಬಹುದು ಅಂತ ಜಿ.ಪಂ. ಕಾರ್ಯ ನಿರ್ವಾಹಕಾಧಿಕಾರಿ ಕೂರ್ಮರಾವ್ ಮನವೊಲಿಸುವ ಪ್ರಯತ್ನ ಮಾಡಿದರು. ಹಟ ಬಿಡದ ಸದಸ್ಯರು ಸಭಾ ತ್ಯಾಗಮಾಡಿ ಸಭೆಯಿಂದ ಹೊರನಡೆದರು.

     

  • ಕೊಪ್ಪಳದಲ್ಲಿ ಲೋನ್ ಮಾಫಿಯಾ; ರೈತರ ಹೆಸರಲ್ಲಿ ಹಣ ಗುಳಂ ಮಾಡುತ್ತಿರುವ ಏಜೆಂಟ್ ಗಳು!

    ಕೊಪ್ಪಳದಲ್ಲಿ ಲೋನ್ ಮಾಫಿಯಾ; ರೈತರ ಹೆಸರಲ್ಲಿ ಹಣ ಗುಳಂ ಮಾಡುತ್ತಿರುವ ಏಜೆಂಟ್ ಗಳು!

    ಕೊಪ್ಪಳ: ಭೀಕರ ಬರಕ್ಕೆ ತುತ್ತಾದ ರೈತರು ಮಾಡಿದ ಸಾಲ ಹೇಗೇ ತೀರಿಸೋದಪ್ಪ ಎಂದು ತಲೆ ಮೇಲೆ ಕೈ ಹೊತ್ತು ಕೂತಿದ್ರೆ, ಕೆಲ ಖದೀಮರು ರೈತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ರಾಷ್ಟ್ರೀಕೃತ ಬ್ಯಾಂಕ್ ನಲ್ಲೇ ಲಕ್ಷಾಂತರ ರೂಪಾಯಿ ಸಾಲ ಪಡೆಯುತ್ತಿದ್ದಾರೆ. ಈ ಮೂಲಕ ರೈತರಿಗೆ ವಂಚಿಸಿದ್ದಲ್ಲದೇ ಸರ್ಕಾರಕ್ಕೂ ಮೋಸ ಮಾಡುವ ದಂಧೆ ಹಿಂದುಳಿದ ಜಿಲ್ಲೆ ಎಂದೇ ಹಣೇ ಪಟ್ಟಿ ಹೊತ್ತಿರುವ ಕೊಪ್ಪಳ ಜಿಲ್ಲೆಯಲ್ಲಿ ನಡೆಯುತ್ತಿದೆ.

    ಭತ್ತದ ಕಣಜ ಎಂಬ ಖ್ಯಾತಿಯ ಗಂಗಾವತಿ ತಾಲೂಕಿನಲ್ಲಿ ಲೋನ್ ಮಾಫಿಯಾ ಹೆಚ್ಚು ನಡೆಯುತ್ತಿದ್ದು, ಕೆಲ ಪ್ರಕರಣ ಬೆಳಕಿಗೆ ಬಂದಿವೆ. ಗಂಗಾವತಿ ತಾಲೂಕಿನ ಸಿದ್ದಾಪುರ ಗ್ರಾಮದ ನಿವಾಸಿ ಮಹಮ್ಮದ್ ಅಬ್ದುಲ್ ಮಾಜೀದ್ ಎಂಬಾತ ತನ್ನ ಹೆಸರಿನಲ್ಲಿ 1 ಗುಂಟೆ 20 ಎಕರೆ ಜಮೀನಿದ್ದು, ಅದನ್ನೆ 21 ಎಕರೆ 20 ಗುಂಟೆ ಎಂದು ನಕಲಿ ದಾಖಲೆ ಸೃಷ್ಟಿ ಮಾಡಿಕೊಂಡು ಒಂದೇ ತಿಂಗಳಲ್ಲಿ ಮೂರು ಬ್ಯಾಂಕ್ ಗಳಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದಾನೆ. ಗಂಗಾವತಿ ನಗರದ ಎಸ್‍ಬಿಎಚ್ ಬ್ಯಾಂಕ್ ನಲ್ಲಿ ಮೂರು ತಿಂಗಳಲ್ಲಿ ಮೂರು ಭಾರಿ ಸಾಲ ಮಾಡಿದ್ದು ಅದರ ಮೊತ್ತ 22 ಲಕ್ಷ ರೂ. ಇದೆ. ಅದರಂತೆ ಸಿದ್ದಾಪುರ ಶಾಖೆಯ ಕೃಷ್ಣಾ ಪ್ರಗತಿ ಗ್ರಾಮೀಣ ಬ್ಯಾಂಕ್ ನಲ್ಲಿ 15 ಲಕ್ಷ ರೂಪಾಯಿ ಸಾಲ ಮಾಡಿದ್ದಾನೆ. ಒಬ್ಬ ವ್ಯಕ್ತಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಇಷ್ಟೊಂದು ಸಾಲ ಮಾಡಿದ್ದಾನೆಂದ್ರೆ ಇದಕ್ಕೆ ಬ್ಯಾಂಕಿನ ಸಿಬ್ಬಂದಿ ಸಾಥ್ ಕೊಟ್ಟಿರುವುದು ಕಾಣುತ್ತದೆ. ಈ ಬಗ್ಗೆ ಸ್ಥಳೀಯರಾದ ಮೆಹೆಬೂಬ್ ಸಾಬ್ ಎಂಬವರು ಬ್ಯಾಂಕ್ ಗಳಿಗೆ ದೂರು ನೀಡಿದ್ರು ಯಾವುದೇ ಪ್ರಯೋಜನವಾಗಿಲ್ಲ.

    ಗಂಗಾವತಿ ತಾಲೂಕಿನಾದ್ಯಾಂತ ಲೋನ್ ಮಾಫಿಯಾ ಜೋರಾಗಿದೆ. ಮಾಫಿಯಾದಲ್ಲಿ ಬ್ಯಾಂಕ್ ಅಧಿಕಾರಿಗಳು, ಮಧ್ಯವರ್ತಿಗಳು ಮತ್ತು ನಕಲಿ ದಾಖಲೆ ಸೃಷ್ಟಿ ಮಾಡುವವರು ಶಾಮೀಲಾಗಿದ್ದಾರೆ. ಎಂ.ಎ.ಮನನ್ ಎಂಬಾತ ನಕಲಿ ದಾಖಲೆ ಸೃಷ್ಟಿ ಮಾಡುತ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳ ಬಳಿ ಕೇಳೋಕೆ ಹೋದ್ರೆ ಕಕ್ಕಾಬಿಕ್ಕಿಯಾದ ಅಧಿಕಾರಿಗಳು ನಾವೇನು ಮಾಡಿಲ್ಲ ಎಂದು ಕೇಳಿದವರಿಗೇ ಜೋರು ಮಾಡಿ ಹೇಳಿಕೆ ನೀಡಲು ನಿರಾಕರಿಸುತ್ತಿದ್ದಾರೆ.

    ಬ್ಯಾಂಕ್ ಗಳು ಸಾಲ ಕೊಡುವ ಮುನ್ನ ಎಲ್ಲಾ ರೀತಿಯ ಪೂರ್ವಾ ಪರ ಯೋಚಿಸಿ ಸಾಲ ನೀಡಬೇಕು. ಜನ ಸಾಮಾನ್ಯರ ಪ್ರಕರಣದಲ್ಲಿ ಅಗತ್ಯಕ್ಕೂ ಹೆಚ್ಚು ದಾಖಲೆಗಳನ್ನು ಎಲ್ಲ ಮ್ಯಾನೇಜರ್ ಗಳೂ ಕೇಳುತ್ತಾರೆ. ಗಂಗಾವತಿಯಲ್ಲಿ ಇಷ್ಟೆಲ್ಲ ನಡೆಯುತ್ತಿದ್ದರೂ ಯಾರೊಬ್ಬರಿಗೂ ಮಾಹಿತಿಯೇ ಇಲ್ಲ ಎಂಬುವುದು ಸಾಕಷ್ಟು ಅನುಮಾನ ಹುಟ್ಟು ಹಾಕಿದೆ. ಬದಲಾಗಿ ಬ್ಯಾಂಕ್ ಅಧಿಕಾರಿಗಳು ಜೇಬು ತುಂಬಿಸುಕೊಳ್ಳುವ ತಂತ್ರ ರೂಪಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಅಗತ್ಯವಿದೆ.

     

  • ಮೆಣಸಿನಕಾಯಿ ಬೆಲೆ ಕುಸಿತ: ನಷ್ಟದಲ್ಲಿ ರಾಯಚೂರು ರೈತರು

    ಮೆಣಸಿನಕಾಯಿ ಬೆಲೆ ಕುಸಿತ: ನಷ್ಟದಲ್ಲಿ ರಾಯಚೂರು ರೈತರು

    -ಎಕರೆಗೆ 30 ಸಾವಿರ ರೂಪಾಯಿ ನಷ್ಟ

    -ಮಳೆ, ನೀರಿಲ್ಲದೆ ಇಳುವರಿ ಕುಂಠಿತ

    ರಾಯಚೂರು: ಜಿಲ್ಲೆಯ ಸಾವಿರಾರು ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆದಿದ್ದ ರೈತರಿಗೆ ಈ ಬಾರಿ ಖಾರ ತಟ್ಟಿದೆ. ನದಿ, ಕಾಲುವೆಗಳಲ್ಲಿ ನೀರು ಬತ್ತಿರುವುದು ಒಂದೆಡೆಯಾದ್ರೆ, ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತ ದೊಡ್ಡ ಹೊಡೆತ ನೀಡಿದೆ. ಪ್ರತಿಯೊಬ್ಬ ರೈತ ಕೂಡ ಲಕ್ಷಾಂತರ ರೂಪಾಯಿ ನಷ್ಟ ಹೊಂದಿ ಬೀದಿಗೆ ಬಂದಿದ್ದಾನೆ.

    ರಾಯಚೂರು ಜಿಲ್ಲೆಯ ಜೀವಜಲದ ಮೂಲಗಳಾದ ತುಂಗಾಭದ್ರ, ಕೃಷ್ಣ ನದಿಗಳು ಈಗ ರೈತರನ್ನ ಕೈ ಬಿಟ್ಟಿವೆ. ಇನ್ನು ಅಂತರ್ಜಲದ ಮಟ್ಟ ಕೂಡ ಕುಸಿಯುತ್ತಿದೆ. ಹೀಗಾಗಿ ಜಿಲ್ಲೆಯ ಸುಮಾರು 60 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಮೆಣಸಿನಕಾಯಿ ಬೆಳೆಗೆ ನೀರಿಲ್ಲದೆ ಇಳುವರಿ ಕುಗ್ಗಿದೆ. ಪ್ರತೀ ವರ್ಷ ಎಕರೆಗೆ 25 ರಿಂದ 30 ಕ್ವಿಂಟಾಲ್‍ನಷ್ಟು ಬರುತ್ತಿದ್ದ ಬೆಳೆ ಈ ವರ್ಷ ಕೇವಲ 10 ರಿಂದ 13 ಕ್ವಿಂಟಾಲ್ ಬಂದಿದೆ. ಅಲ್ಲಿಗೆ ಎಕರೆಗೆ ಒಂದು ಲಕ್ಷದ ರೂ.ವರೆಗೆ ಖರ್ಚು ಮಾಡಿರುವ ರೈತರಿಗೆ ಎಕರೆಗೆ ಸುಮಾರು 30 ಸಾವಿರ ರೂಪಾಯಿ ನಷ್ಟವಾಗಿದೆ.

    ಮಾರುಕಟ್ಟೆಯಲ್ಲಿ ಕ್ವಿಂಟಾಲ್‍ಗೆ 12 ಸಾವಿರ ರೂಪಾಯಿಯಿದ್ದ ಬೆಲೆ ಈಗ 3 ರಿಂದ 5 ಸಾವಿರ ರೂಪಾಯಿಯಿದೆ. ಅಂದ್ರೆ ಪ್ರತಿ ಕ್ವಿಂಟಾಲ್‍ಗೆ ಸುಮಾರು 7 ಸಾವಿರ ರೂಪಾಯಿ ಇಳಿದಿದೆ. ಒಂದೆಡೆ ಮಳೆ ಕೈಕೊಟ್ಟರೆ, ಮತ್ತೊಂದೆಡೆ ಬೋರ್‍ವೆಲ್‍ನಿಂದ ನೀರು ಹಾಯಿಸಲು ರೈತರಿಗೆ ವಿದ್ಯುತ್ ಸಮಸ್ಯೆ ಕೂಡ ಇದೆ.

    ಕಳೆದ ಎಂಟತ್ತು ವರ್ಷಗಳಲ್ಲಿ ಅನುಭವಿಸದ ನಷ್ಟವನ್ನ ಮೆಣಸಿನಕಾಯಿ ಬೆಳೆಗಾರರು ಈ ವರ್ಷ ಅನುಭವಿಸಿದ್ದಾರೆ. ಬೆಲೆ ಪಾತಾಳಕ್ಕೆ ಕುಸಿದಿದ್ದರೂ ಸರ್ಕಾರ ಇದುವರೆಗೂ ಬೆಂಬಲ ಬೆಲೆ ಘೋಷಿಸಿಲ್ಲ. ಅಲ್ಲದೆ ಇತ್ತೀಚಿಗೆ ಸುರಿದ ಮಳೆಗೆ ಒಣಗಲು ಬಿಟ್ಟಿದ್ದ ಲಕ್ಷಾಂತರ ರೂಪಾಯಿ ಬೆಳೆ ಹಾನಿಯಾಗಿದೆ. ಹೀಗಾಗಿ ಮೆಣಸಿನಕಾಯಿ ಸಂಗ್ರಹಕ್ಕೆ ಗೋದಾಮುಗಳ ವ್ಯವಸ್ಥೆ ಮಾಡಬೇಕು ಹಾಗೂ ಬೆಳೆ ನಷ್ಟ ಪರಿಹಾರ ನೀಡಬೇಕು ಅಂತ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

    ಒಟ್ನಲ್ಲಿ, ಬರಗಾಲದ ನಡುವೆಯೂ ಅಷ್ಟೋ ಇಷ್ಟೋ ಲಾಭದ ನಿರೀಕ್ಷೆಯಲ್ಲಿದ್ದ ಮೆಣಸಿನಕಾಯಿ ಬೆಳೆಗಾರರು ಭಾರೀ ನಷ್ಟವನ್ನೇ ಅನುಭವಿಸಿದ್ದಾರೆ. ಈಗಲಾದ್ರೂ ಸರ್ಕಾರ ರೈತರ ಕಡೆ ಗಮನಹರಿಸಬೇಕಿದೆ.

     

  • ಕೊಪ್ಪಳ: 42 ವರ್ಷಗಳಲ್ಲಿಯೇ ಭೀಕರ ಬರಕ್ಕೆ ತುತ್ತಾಗಿದೆ, ಗುಳೆ ಹೋಗಿದ್ದಾರೆ ಜನ!

    ಕೊಪ್ಪಳ: 42 ವರ್ಷಗಳಲ್ಲಿಯೇ ಭೀಕರ ಬರಕ್ಕೆ ತುತ್ತಾಗಿದೆ, ಗುಳೆ ಹೋಗಿದ್ದಾರೆ ಜನ!

    ಮುಕ್ಕಣ್ಣ ಕತ್ತಿ

    ಕೊಪ್ಪಳ: ಬರಪೀಡಿತ ಜಿಲ್ಲೆ ಅಂತಾನೇ ಹಣೆಪಟ್ಟಿ ಕಟ್ಟಿಕೊಂಡಿರೋ ಜಿಲ್ಲೆ. ಈ ಜಿಲ್ಲೆಯಲ್ಲಿ ಬಿರು ಬಿಸಿಲಿಗೆ ಒಣಗಿ ಬಾಯಿಬಟ್ಟಿರೋ ಹೊಲ, ಕೆರೆಗಳು.. ಉದ್ಯೋಗ ಅರಿಸಿ ಗುಳೆಹೋಗಿ ಖಾಲಿ ಹೊಡೆಯುತ್ತಿರೋ ತಾಂಡಾಗಳು. ರಣ ರಣ ಬಿಸಿಲಿನಲ್ಲಿ ಬದುಕನ್ನರಿಸಿ ಹೊರಟ ಜೀವಗಳು.. ಇವೆಲ್ಲಾ ಕೊಪ್ಪಳ ಜಿಲ್ಲೆಯ ಬರದ ಭೀಕರತೆ..ಕೊಪ್ಪಳ ಅಂದ್ರೆ ಬರ.. ಬರ ಅಂದ್ರೆ ಕೊಪ್ಪಳ ಅನ್ನುವಷ್ಟರ ಮಟ್ಟಿಗೆ ಬರ ತಾಂಡವಾಡ್ತಿದೆ.

    ಹೌದು. ಕೊಪ್ಪಳ ಜಿಲ್ಲೆಯಲ್ಲೀಗ ಭೀಕರ ಬರಗಾಲದ ಕರಿ ಛಾಯೆ ಆವರಿಸಿದೆ. ಕಳೆದ 42 ವರ್ಷಗಳಲ್ಲಿಯೇ ಭೀಕರ ಅನ್ನುವಂತಹ ಬರಗಾಲ ಈ ಬಾರಿ ಕೊಪ್ಪಳ ಜಿಲ್ಲೆಯನ್ನ ಕಾಡ್ತಿದೆ. ಕುಡಿಯೋ ನೀರಿಗೆ ತಾತ್ವಾರ, ಹೊಲ ಗದ್ದೆಗಳೆಲ್ಲಾ ಒಣಗಿ ಹೋಗಿವೆ. ಕೆರೆಗಳೆಲ್ಲಾ ಬಿರುಕು ಬಿಟ್ಟಿವೆ. ಇಂತಹ ಸಂದರ್ಭದಲ್ಲಿ ಇಡೀ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಸ್ತಬ್ಧವಾಗಿ ಹೊಲಗಳು ರಣಗುಡ್ತಿವೆ.

    ಕಳೆದ 15 ವರ್ಷಗಳಲ್ಲಿ 11 ವರ್ಷ ಕೊಪ್ಪಳ ಜಿಲ್ಲೆಗೆ ಬರ ಅಂಟಿಕೊಂಡಿದೆ. ಕೊಪ್ಪಳ ಜಿಲ್ಲೆಯ ಉತ್ತರ ಒಣವಲಯ 3ರ ಅಡಿಯಲ್ಲಿ ಬರುತ್ತದೆ. ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ 599.80 ಮಿ.ಮಿ ಇದೆ. ಶೇ.55, ಶೇ.60 ಕೆಂಪು ಭೂಮಿ ಉಳಿದಂತೆ ಕಪ್ಪು ಭೂಮಿ ಹೊಂದಿದೆ. 2016 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜೂನ್ ರಿಂದ ಸೆಪ್ಟೆಂಬರ್ ವರಗೆ ವಾಡಿಕೆ ಮಳೆ 376 ಮಿಮೀ ಬೀಳಬೇಕಿತ್ತು. ಆದ್ರೆ ವಾಸ್ತವಿಕವಾಗಿ ಆಗಿದ್ದು 317 ಮಿ.ಮಿ ಅಂದ್ರೆ ಶೇ.16 ರಷ್ಟು ಕೊರತೆ ಇತ್ತು. ಮುಂದೆ ಹಿಂಗಾರಿನಲ್ಲಿ ವಾರ್ಷಿಕ ವಾಡಿಕೆ ಮಳೆ 142 ಮಿ.ಮಿ ಇತ್ತು. ಆಗಿದ್ದು ಮಾತ್ರ ಕೇವಲ `18 ಮಿಮಿ ಅಂದ್ರೆ 87% ರಷ್ಟು ಮಳೆಯ ಕೊರತೆ. ಇದರಿಂದಾಗಿ ಒಣಬೇಸಾಯ ಆಧಾರಿತ ಜಿಲ್ಲೆಯಾಗಿರೋ ಕೊಪ್ಪಳ ಭೀಕರ ಬರಗಾಲಕ್ಕೆ ತುತ್ತಾಗಿದೆ ಅಂತಾ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹೇಳ್ತಾರೆ.

    ಇನ್ನು ಮುಂಗಾರು ಬಿತ್ತನೆ ಕ್ಷೇತ್ರ 2,52,500 ಹೆಕ್ಟೆರ್ ಇದ್ದು, ಈ ಸಲದ ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದು 2,67,235 ಹೆಕ್ಟೆರ್ ಅಂದರೆ 105% ರಷ್ಟು ಬಿತ್ತನೆಯಾಗಿತ್ತು. ಯಾಕೆಂದರೆ ಮುಂಗಾರು ಆರಂಭದಲ್ಲಿ ಜೋರಾಗಿ ಸುರಿದಿದ್ದು ರೈತರಲ್ಲಿ ಆಶಾಭಾವನೆ ಹುಟ್ಟಿಸಿತ್ತು. ಇದರಲ್ಲಿ ಬರಗಾಲಕ್ಕೆ ತುತ್ತಾಗಿರುವ ಪ್ರದೇಶ 19,00,037 ಹೆಕ್ಟೆರ್ ಪ್ರದೇಶದಲ್ಲಿ ಹಾನಿ ಸಂಭವಿಸಿತ್ತು. ಅದೇ ರೀತಿ ಹಿಂಗಾರು ಬಿತ್ತನೆ ಕ್ಷೇತ್ರ 1,52,200 ಹೆಕ್ಟೆರ್ ಇದೆ. ಪ್ರಸಕ್ತ ಹಿಂಗಾರಿನಲ್ಲಿ ಶೇ.65 ಬಿತ್ತನೆಯಾಗಿತ್ತು. ಇದು ಸಂಪೂರ್ಣವಾಗಿ ಮಳೆಯಾಶ್ರಿತ ಪ್ರದೇಶವಾಗಿತ್ತು. ಇದ್ರಲ್ಲಿ ಶೇ.100 ಹಾನಿಗೊಳಗಾಗಿದೆ. ಜಿಲ್ಲೆಯ ಪ್ರಮುಖ ಬೆಳೆಗಳಾದ ಮೆಜ್ಜೆ ಜೋಳ, ಸಜ್ಜೆ, ಹೆಸರು, ತೊಗರಿ, ಶೆಂಗಾ, ಸೂರ್ಯಕಾಂತಿ, ಕಡಲೆ, ಹುರುಳಿ ಕುಸುಬೆ, ಜೋಳದ ಬೆಳೆಗಳು ಸಂಪೂರ್ಣವಾಗಿ ಹಾಳಾಗಿ ಇಡೀ ಜಿಲ್ಲೆಯ ರೈತರು ಕಣ್ಣೀರಿನಲ್ಲಿ ಕೈತೊಳೆಯುವ ಪರಿಸ್ಥಿತಿ ಉಂಟಾಗಿದೆ.

    ಡ್ಯಾಂನಲ್ಲಿರೋದು 4 ಟಿಎಂಸಿ: ಇನ್ನು ಕೊಪ್ಪಳ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಾಗಿರೋ 126.55 ಕೋಟಿಯಷ್ಟು ಬೆಳೆ ಹಾನಿ ಪರಿಹಾರಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಹಿಂಗಾರಿನಲ್ಲಿ ಬೆಳೆ ಹಾನಿಯಾಗಿರೋ ನಷ್ಟ ಒಟ್ಟು 66.42 ಕೋಟಿಯಷ್ಟು ಅಂದಾಜಿಸಿದೆ. ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಾಗಿರೋ ಬೆಳೆಹಾನಿ ಪ್ರದೇಶಕ್ಕೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಿ ಜಿಲ್ಲೆಯ ವಾಸ್ತವ ಬರ ಸ್ಥಿತಿಯ ಬಗ್ಗೆ ಅಧ್ಯಯನ ನಡೆಸಿದೆ. ಕೊಪ್ಪಳ ಜಿಲ್ಲೆಯ ನಾಲ್ಕು ತಾಲೂಕುಗಳಾದ ಕೊಪ್ಪಳ, ಯಲಬುರ್ಗಾ, ಕುಷ್ಟಗಿ, ಗಂಗಾವತಿ ಬರಪೀಡಿತ ಪ್ರದೇಶ ಅಂತ ಘೋಷಣೆ ಆಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಮುಂಗಾರು ಮತ್ತು ಹಿಂಗಾರು ಕೈಕೊಟ್ಟಿರೋದ್ರಿಂದ 180 ಕೋಟಿಗೂ ಅಧಿಕ ಅನುದಾನ ನೀಡಲು ಸರಕಾರಕ್ಕೆ ಜಿಲ್ಲಾಡಳಿತ ಪ್ರಸ್ತಾವನೆ ಸಲ್ಲಿಸಿದೆ.

    ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳ ಜೀವನಾಡಿ ತುಂಗಭದ್ರೆ ತಳ ಕಂಡಿದೆ. ಈ ಸಲ ಎರಡನೇ ಬೆಳೆಗೆ ನೀರು ನೀಡದೆಯಿರೋದ್ರಿಂದ ನೀರಾವರಿಯ ರೈತರು ಸಹ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೊತೆಗೆ ಈಗ ಡ್ಯಾಂನಲ್ಲಿರೋದು ನೀರು ಕೇವಲ 4 ಟಿಎಂಸಿಯಷ್ಟು. ಈ ನೀರು ಮೂರು ಜಿಲ್ಲೆಗಳ ಜನರ ನೀರಿನ ದಾಹವನ್ನ ಜೂನ್ ರವರೆಗೆ ತೀರಿಸಬೇಕಿದೆ. ಈಗಾಗ್ಲೆ ಕೊಪ್ಪಳ ನಗರ ಕೂಡಾ ತುಂಗಭದ್ರಾ ಡ್ಯಾಂನಿಂದ ಬರೋ ನೀರಿಗೆ ತತ್ವಾರ ಎದುರಾಗಿದೆ.

    ಗುಳೆ ಪರ್ವ ಆರಂಭ: ಕೊಪ್ಪಳ ಜಿಲ್ಲೆಯಲ್ಲಿ ಸ್ಥಾಪಿಸಿರೋ ಹಲವಾರು ದೊಡ್ಡ ದೊಡ್ಡ ಉದ್ಯಮಗಳಲ್ಲಿ ಸ್ಥಳೀಯರಿಗೆ ಉದ್ಯೋಗಗಳೇ ಇಲ್ಲ. ಏನಿದ್ರೂ ಹೊರಗಿನವರದೇ ಕಾರುಬಾರು. ಜಿಲ್ಲೆಯಲ್ಲಿ ಎಲ್ಲೂ ಕೆಲಸವೇ ಇಲ್ಲ. ಬೇರೆ ದಾರಿ ಕಾಣದೆ ಅನ್ನಕ್ಕಾಗಿ, ಕೂಲಿಗಾಗಿ ಜನರು ಗುಳೆ ಹೊರಟಿದ್ದಾರೆ. ಕೇವಲ ಕೆಲವೇ ಜನರಲ್ಲ ಊರಿಗೆ ಊರೇ ಗುಳೆ ಹೊರಟಿದೆ.

    ಕೊಪ್ಪಳ ಜಿಲ್ಲೆಯಲ್ಲಿ ಸಾವಿರಾರು ಜನ ಗುಳೆ ಹೊರಟಿದ್ದಾರೆ, ಹೋಗಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ಗುಳೆ ಪರ್ವ ಆರಂಭವಾಗ್ತಿದೆ. ಇದು ಕೊಪ್ಪಳ ಜಿಲ್ಲೆಯಲ್ಲಿ ಸ್ವಾಭಾವಿಕ ಪ್ರಕ್ರಿಯೆಯಾಗಿ ಹೋಗಿರುವುದು ನಾಚಿಕೆಗೇಡಿನ ಸಂಗತಿ. ಸರಕಾರದ ಅಧಿಕೃತ ಮಾಹಿತಿ ಪ್ರಕಾರ 2015-16 ಸಾಲಿನಲ್ಲಿ ವಲಸೆ ಹೋದ ಕುಟುಂಬಗಳ ಸಂಖ್ಯೆ 6,000 ಕ್ಕೂ ಹೆಚ್ಚು. ವಲಸೆ ಹೋದ ಕುಟುಂಬದ ಸದಸ್ಯರ ಸಂಖ್ಯೆ 13682. ಅಂದ್ರೆ ನಿಜವಾದ ಸಂಖ್ಯೆ ಇದರ ಮೂರು ಪಟ್ಟು ಹೆಚ್ಚಿದೆ. ಈ ಸಲವಂತೂ ಹತ್ತುಪಟ್ಟು ಹೆಚ್ಚಾಗಿದೆ. ಕೊಪ್ಪಳ ಜಿಲ್ಲೆಯ ಹಲವಾರು ಗ್ರಾಮಗಳು, ತಾಂಡಾಗಳಲ್ಲಿ ಜನರೇ ಇಲ್ಲವೇ ಇಲ್ಲ ಎನ್ನುವಂತಾಗಿದೆ. ಕೊಪ್ಪಳ ಜಿಲ್ಲೆಯ ಯಲಮಗಿರಿ, ಕುಣಕೇರಿ ತಾಂಡಾ ಗುಳೆ ಹೋಗುವ ಕಾರಣಕ್ಕೆ ಹೆಸರು ಮಾಡುತ್ತೆ. ಈ ಊರಿನಲ್ಲಿ ಸರಕಾರದ ಯಾವುದೇ ಯೋಜನೆಗಳು ತಲುಪಿಲ್ಲ. ಅಂದಾಜು 300-400 ಜನರಿರೋ ಈ ತಾಂಡಾದ ಶೇ.90ರಷ್ಟು ಜನ ಗುಳೆ ಹೋಗಿದ್ದಾರೆ.

    ಗುಳೆ ಹೋಗಲು ಕಾರಣ?: ಹೆಚ್ಚಿನ ದುಡಿಮೆಗಾಗಿ ಗುಳೆ ಹೋಗೋದು, ಮಕ್ಕಳ ಶಿಕ್ಷಣ ಇಲ್ಲವೇ ಅವಕಾಶಗಳನ್ನು ಹುಡುಕಿಕೊಂಡು ಹೋಗುವುದು ಒಂದೆಡೆಯಾದ್ರೆ, ಊರಲ್ಲಿ ಕೆಲಸವಿಲ್ಲದೇ ಕೂಲಿಗೂ ಗತಿಯಿಲ್ಲದೇ ಕನಿಷ್ಠ ಪಕ್ಷ ಬದುಕಿದರೆ ಸಾಕು, ದಿನದ ಅನ್ನವನ್ನಾದರೂ ಹುಟ್ಟಿಸಿಕೊಂಡರೇ ಸಾಕು ಎನ್ನುವ ಪರಿಸ್ಥಿತಿಯಲ್ಲಿ ಊರು ಬಿಟ್ಟು ಬೇರೆ ಬೇರೆ ನಗರಗಳಿಗೆ ಗುಳೆ ಹೋಗುತ್ತಿದ್ದಾರೆ.

    ಕಬ್ಬು ಕಟಾವು, ಗೌಂಡಿ ಕೆಲಸ, ಕೂಲಿ ಕೆಲಸಕ್ಕೆ ಗುಳೆ ಹೋಗುತ್ತಾರೆ. ಇಲ್ಲಿಂದ ಬೆಂಗಳೂರು, ಮಂಗಳೂರು, ತಮಿಳುನಾಡು, ಗೋವಾ, ರತ್ನಗಿರಿ, ಕಾರವಾರ, ಹುಬ್ಬಳ್ಳಿ, ಬಳ್ಳಾರಿ, ಮಂಡ್ಯ, ತುಮಕೂರು ಸೇರಿದಂತೆ ಕೆಲಸ ಸಿಕ್ಕಲ್ಲಿ ಗುಳೆ ಹೊರಟಿದ್ದಾರೆ. ಇಡೀ ಗ್ರಾಮದಲ್ಲಿ ಈಗ ಕಾಣಸಿಗುವುದು ವಯಸ್ಸಾದ ಅಜ್ಜ ಅಜ್ಜಿಯರು ಇಲ್ಲವೇ ದೈಹಿಕವಾಗಿ ದುರ್ಬಲರಾಗಿರುವವರು ಮಾತ್ರ. ಕಸ್ತೂರಮ್ಮ ಎನ್ನುವ ಅಜ್ಜಿಯ ಮಕ್ಕಳೆಲ್ಲಾ ದುಡಿಯುವುದಕ್ಕೆ ಹೋಗಿದ್ದಾರೆ. ಮನೆಯಲ್ಲಿ ಅಜ್ಜ-ಅಜ್ಜಿ ಮಾತ್ರ ಇದ್ದಾರೆ. ನಡೆಯಲೂ ಆಗದ ಸ್ಥಿತಿಯಲ್ಲಿರುವ ಈ ಅಜ್ಜಿಗೆ ಕುಡಿಯುವ ನೀರು ಕೊಡಲು ಮೊಮ್ಮಗಳು ಬರಬೇಕು. ನಿಸ್ಸಾಯಕರಾಗಿರುವ ಈ ಜೀವಗಳು ಇಂದು ಕಣ್ಣೀರು ಹಾಕುತ್ತಿವೆ. ನಮ್ಮ ನೋಡಿಕೊಳ್ಳೋವ್ರು ಯಾರು ಅಂತ ವಯೋವೃದ್ಧರು ಚಿಂತೆಗಿಡಾಗಿ ತಾಂಡಾ, ಹಳ್ಳಿಗಳು ವೃದ್ಧಾಶ್ರಮಗಳಾಗ್ತಿವೆ.

    ಮಹಾನಗರದತ್ತ ಕೆಲ ಕುಟುಂಬಗಳು: ಕೊಪ್ಪಳ ತಾಲೂಕಿನ ಕುಣಿಕೇರಿ ತಾಂಡಾ, ಕುಷ್ಟಗಿ ತಾಲ್ಲೂಕಿನ ಹುಲಿಯಾಪೂರ ತಾಂಡಾ, ಕಳಮಳ್ಳಿ ತಾಂಡಾ, ತಾವರಗೇರಾ, ಯಲಬುರ್ಗಾ ತಾಲ್ಲೂಕಿನ ಆಸುಪಾಸಿನ ಹಳ್ಳಿಗಳಲ್ಲಿ ಸಾವಿರಾರು ಕುಟುಂಬಗಳು ಈಗಾಗಲೇ ಮಹಾನಗರಗಳ ಹಾದಿ ಹಿಡಿದು ಹೊರಟಿವೆ. ಇದಕ್ಕೆ ಜಿಲ್ಲೆಯಲ್ಲಿ ಸರಿಯಾದ ಉದ್ಯೋಗ ಸಿಗದಿರೋದು. ಉದ್ಯೋಗ ಖಾತ್ರಿ ಅಡಿ ಕೂಲಿ ಕೆಲಸ ಸಿಕ್ಕಿದರೂ ಕೂಲಿ ಹಣ ಪಡೆಯಲು ಹಲವು ಪ್ರಕ್ರಿಯೆಗಳನ್ನು ಪಾಲಿಸ ಬೇಕಾಗಿರುವುದು, ಸಿಗುವ ಹಣದಲ್ಲೂ ಮಧ್ಯವರ್ತಿಗಳಿಗೆ ಪಾಲು ಕೊಡಬೇಕಾ ಗುವುದು ಹೀಗೆ ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ವಲಸೆ ಹೋಗ್ತಿದ್ದಾರೆ.

    ಜಾನುವಾರುಗಳ ಮಾರಾಟ: ಜಿಲ್ಲಾಡಳಿತ ಕೊಪ್ಪಳ ಜಿಲ್ಲೆಯಲ್ಲಿ ಪ್ರತಿ ವಿಧಾನಸಭಾಕ್ಷೇತ್ರಕ್ಕೆ ಒಂದರಂತೆ ಐದು ಗೋಶಾಲೆಗಳನ್ನು ತೆರೆದಿದೆ. ಆದ್ರೆ ಅವು ನೆಪಕ್ಕೆ ಮಾತ್ರ ಎನ್ನುವಂತಾದ್ರೂ ಕೆಲವಡೆ ಜಾನುವಾರುಗಳ ಹಸಿವನ್ನ ನೀಗಿಸ್ತಿವೆ. ಇನ್ನು ಕೆಲವಡೆ ರೈತ್ರು ತಮ್ಮ ಜಾನುವಾರುಗಳನ್ನ ಸಾಕಲು ಸಾಧ್ಯವಾಗದೆ ಮಾರಾಟ ಮಾಡ್ತಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಗಿಣಗೇರಿಯ ಒಂದೆ ಸಂತೆವೊಂದರಲ್ಲಿ 17,143 ಜಾನುವಾರುಗಳು ಮಾರಾಟವಾಗಿವೆ ಅಂದ್ರೆ ಬರಗಾಲದ ಭೀಕರತೆಯ ಅರಿವಾಗ್ತದೆ. ಜಿಲ್ಲೆಯ ವೆಂಕಟಗಿರಿ, ಕನಕಗಿರಿ, ಅಳವಂಡಿ, ಕಲಕೇರಿ, ತಲ್ಲೂರುಗಳಲ್ಲಿ ಗೋಶಾಲೆ ಆರಂಭವಾಗಿವೆ. ಜಿಲ್ಲೆಯಲ್ಲಿ ಅಂದಾಜು ಜಾನುವಾರುಗಳು 3,39,947 ಇವೆ. ಮೇವು 3,50,071 ಮೆಟ್ರಿಕ್ ಟನ್ ನಷ್ಟಿದೆ. ಹೀಗೆ ಗೋ ಶಾಲೆಯಲ್ಲಿ ಅಗತ್ಯ ಮೇವು ನೀರು ಸಂಗ್ರಹಿಸಲಾಗಿದೆ. ಮೇವು ಬ್ಯಾಂಕ್ ಕೂಡಾ ಆರಂಭಿಸಲಾಗಿದೆ. ಇನ್ನು ಜಿಲ್ಲೆ ಹೋಬಳಿವಾರು ಗೋಶಾಲೆ ಆರಂಭಿಸಬೇಕೆನ್ನೋದು ರೈತರ ಒತ್ತಾಯವಾಗಿದೆ.

    ಇನ್ನು ನರೇಗಾ ಯೋಜನೆಯಡಿ ಕೆಲವಡೆ ಜಿಲ್ಲೆಯಲ್ಲಿ ಗುಳೆ ಹೋಗುವುದನ್ನ ತಪ್ಪಿಸಲು ಉದ್ಯೋಗ ನೀಡಲಾಗ್ತಿದೆ. ಉದ್ಯೋಗ ಪಡೆದಿರೋ ಜನ್ರು ದುಡಿಯೋ ಕೈಗೆ ಕೆಲ್ಸ ಸಿಕ್ತು ಅಂತಾ ಕೆಲ್ಸ ಮಾಡ್ತಿದ್ದಾರೆ. ಉದ್ಯೋಗ ಖಾತ್ರಿಯೋಜನೆಯನ್ನು ಜಿಲ್ಲೆಯಲ್ಲಿ ಗುಳೆ ಹೋಗ್ತಿರೋ ಗ್ರಾಮಗಳಲ್ಲಿ ಆರಂಭಿಸೋವತ್ತ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕಿದೆ.

    ಬರಡಾದ ಹಿರೇಹಳ್ಳ ಡ್ಯಾಂ: ಕೊಪ್ಪಳ ಜಿಲ್ಲೆಯ ಒಟ್ಟು 739 ಜನ ವಸತಿ ಗ್ರಾಮಗಳಲ್ಲಿ 232 ಗ್ರಾಮಗಳು ಭೀಕರವಾದ ಕುಡಿಯೋ ನೀರಿನ ಸಮಸ್ಯೆಯನ್ನ ಎದುರಿಸ್ತಿವೆ. ಸಿಂಗಟಾಲೂರು, ಕೃಷ್ಣ ಬಿ ಸ್ಕಿಂ ಎಂದು ಹೇಳುವುದೇ ಆಯಿತೇ ಹೊರತು ಅದರಿಂದ ಜನಸಾಮಾನ್ಯರ ಭವಣೆ ತಪ್ಪುವ ಲಕ್ಷಣಗಳೇ ಕಾಣುತ್ತಿಲ್ಲ. ಹಿರೇಹಳ್ಳ ಡ್ಯಾಂ ಬತ್ತಿಬರಡಾಗಿದೆ. ಈ ಭಾಗದ ಹಳ್ಳಿಗಳಿಗೆ ಪೂರೈಕೆ ಆಗ್ತಿದ್ದ ನೀರು ಸ್ತಗಿತವಾಗಿದೆ. ಅಂತರ್ಜಲಮಟ್ಟ ಪಾತಾಳಕ್ಕೆ ಕುಸಿದಿದೆ. ಕೊಪ್ಪಳ ಜಿಲ್ಲೆಯಲ್ಲಿನ ಪ್ರಮುಖ ಕೆರೆಗಳು ಬತ್ತಿ ಬರಡಾಗಿವೆ. ಕುಷ್ಟಗಿ ತಾಲೂಕಿನ ಗಡಿಹಳ್ಳಿಗಳಲ್ಲಿ ನೀರಿನ ಬವಣೆ ಹೇಳತೀರದಾಗಿದೆ. ಕೆಲವಡೆ ಕೆರೆ ತುಂಬಿಸೋ ಕಾರ್ಯವಾದ್ರೆ ಆ ನೀರು ಖಾಲಿಯಾಗಿವೆ. ಆದ್ರೆ ಕೈಕೊಟ್ಟ ಮಳೆ ಎಲ್ಲ ಯೋಜನೆಗಳನ್ನು ಉಲ್ಟಾ ಮಾಡಿದೆ. ಜಿಲ್ಲೆಯಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ಮಾಸಿಕ ಬಾಡಿಗೆ ಆಧಾರದ ಮೇಲೆ ತೆಗೆದುಕೊಳ್ಳಲಾಗೋದು ಅಂತ ಜಿಲ್ಲಾಡಳಿತ ಹೇಳ್ತಿದೆ.

    ಶುದ್ಧ ಕುಡಿಯೋ ಘಟಕಗಳು ಮಂಜೂರಾದಷ್ಟು ಪೂರ್ಣಗೊಂಡಿಲ್ಲ. ಇದು ಸಹ ಜನ ನೀರಿಗಾಗಿ ಹಾಹಾಕಾರ ಪಡುವಂತೆ ಮಾಡಿದೆ. ಸೂಚಿಸುತ್ತದೆ ಕುಷ್ಟಗಿ, ಯಲಬುರ್ಗಾ, ಕೊಪ್ಪಳ ತಾಲೂಕಿನ ಗ್ರಾಮಗಳಲ್ಲಿ ಫ್ಲೋರೈಡ್ ನೀರೆಗತಿ. ಕುಷ್ಟಗಿ ತಾಲೂಕಿನಲ್ಲಿ ನೀರಿಗಾಗಿ ಮೈಲುದೂರು ಹೋಗಿ ತರುವಂತಾಗಿದೆ. ಇಲ್ಲಿವ್ರಗೂ ಜಿಲ್ಲಾಡಳಿತ ಕುಡಿಯೋ ನೀರಿಗಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಇನ್ಮೇಲಾದ್ರೂ ಜಿಲ್ಲಾಡಳಿತ ಬರವನ್ನ ಗಂಭೀರವಾಗಿ ಪರಿಗಣಿಸಿ ಬರ ಎದುರಿಸಬೇಕಿದೆ.

     

  • ಬಳ್ಳಾರಿ: ಬಿಸಿಲಿಗೆ ಕರಗಿಹೋಯ್ತು ವಿದೇಶಗಳಿಗೆ ರಫ್ತಾಗುತ್ತಿದ್ದ ಕರಿಬೇವು!

    ಬಳ್ಳಾರಿ: ಬಿಸಿಲಿಗೆ ಕರಗಿಹೋಯ್ತು ವಿದೇಶಗಳಿಗೆ ರಫ್ತಾಗುತ್ತಿದ್ದ ಕರಿಬೇವು!

    ವೀರೇಶ್ ದಾನಿ 

    ಬಳ್ಳಾರಿ: ಜಿಲ್ಲೆಯಲ್ಲಿ ಈ ಭಾರಿ ಎಂದೂ ಕಂಡರಿಯದ ಭೀಕರ ಬರಗಾಲ ಪರಿಸ್ಥಿತಿ ಆವರಿಸಿದೆ. ಬರದ ತೀವ್ರತೆಗೆ ರೈತರು ಬೆಳೆದ ಬೆಳೆಗಳಲ್ಲಾ ಒಣಗಿ ಹೋಗಿವೆ. ಅದರಲ್ಲೂ ಅರಬ್ ದೇಶಗಳು ಸೇರಿದಂತೆ ವಿವಿಧ ದೇಶಗಳಿಗೆ ರಪ್ತಾಗುತ್ತಿದ್ದ ಕರಿಬೇವು ಸೊಪ್ಪಿಗೂ ಈ ಬಾರಿ ಬರದ ಬಿಸಿ ತಟ್ಟಿದೆ. ನೀರಿಲ್ಲದ ಪರಿಣಾಮ ಕರಿಬೇವು ಬೆಳೆದ ರೈತರ ಬೆಳೆಗಳಲ್ಲಾ ಸಂಪೂರ್ಣ ಒಣಗಿ ಹೋಗಿವೆ.

    ಎಲ್ಲರ ಮನೆಯ ಅಡುಗೆಯ ಒಗ್ಗರಣೆಗೆ ಕರಿಬೇವು ಸೊಪ್ಪು ಬೇಕೆ ಬೇಕು. ಅದರಲ್ಲೂ ದೂರದ ಅರಬ್ ದೇಶಗಳಿಗೆ ರಪ್ತಾಗುತ್ತಿದ್ದ ಬಳ್ಳಾರಿಯ ಸುವಾಸನೆ ಭರಿತ ಕರಬೇವು ಸೊಪ್ಪಿನ ಬೆಳೆಗಳೆಲ್ಲಾ ಈ ಬಾರಿ ಜಿಲ್ಲೆಯಲ್ಲಿ ಒಣಗಿ ಹೋಗಿವೆ. ಅಷ್ಟೊಂದು ಪ್ರಮಾಣದಲ್ಲಿ ಕರಿಬೇವು ಸೊಪ್ಪಿಗೂ ಬರದ ಬಿಸಿ ತಟ್ಟಿದೆ. ರೈತರಿಗೆ ಆದಾಯ ತರುತ್ತಿದ್ದ ಕರಿಬೇವು ಬೆಳೆಯೆಲ್ಲಾ ಒಣಗಿ ಹೋದ ಪರಿಣಾಮ ಬಳ್ಳಾರಿ ತಾಲೂಕಿನ ಬೆಳಗಲ್, ಬೆಳಗಲ್ ತಾಂಡಾ ಸೇರಿದಂತೆ ಹಲವು ಹಳ್ಳಿಗಳಲ್ಲಿ ಬೆಳೆದ ನೂರಾರು ಎಕರೆಯಲ್ಲಿನ ಕರಿಬೇವು ಬೆಳೆ ಇದೀಗ ನೀರಿಲ್ಲದೆ ಸಂಪೂರ್ಣವಾಗಿ ನಾಶವಾಗಿದೆ.

    ಬಳ್ಳಾರಿ ಜಿಲ್ಲೆಯಲ್ಲಿ ಕಳೆದ 4-5 ವರ್ಷಗಳಿಂದ ಸರಿಯಾಗಿ ಮಳೆಯಾಗದ ಪರಿಣಾಮ, ರೈತರ ತೋಟಗಾರಿಕೆ ಬೆಳೆಗಳಿಗೂ ನೀರು ಪೂರೈಕೆ ಆಗುತ್ತಿಲ್ಲ. ಇನ್ನು ರೈತರು ಬೋರ್‍ವೆಲ್ ಗಳನ್ನು 500 ರಿಂದ 700 ಅಡಿ ಕೊರೆದರು ನೀರು ಸಿಗುತ್ತಿಲ್ಲ.

    ಒರಿಸ್ಸಾ ರಾಜ್ಯದಿಂದ ಲಕ್ಷಾಂತರ ರೂಪಾಯಿ ಕೊಟ್ಟು ಬೀಜ ಖರೀದಿಸಿ ಕರಿಬೇವು ಸೊಪ್ಪು ಬೆಳೆದಿದ್ದವರಿಗೆ ನೀರು ಸಿಗದ ಪರಿಣಾಮ ರೈತರು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಕಡಿಮೆ ನೀರು ಬಳಸಿ ತೋಟಗಾರಿಕೆ ಮಾಡುವ ಮೂಲಕ ಕರಿಬೇವು ಬೆಳೆದಿದ್ದ ರೈತರಿಗೆ ಇದೀಗ ಸರ್ಕಾರ ಬರ ಪರಿಹಾರ ನೀಡುವ ಮೂಲಕ ನಷ್ಟ ಹೊಂದಿರುವ ರೈತರ ಸಹಾಯಕ್ಕೆ ಮುಂದಾಗಬೇಕಿದೆ.

     

  • ಬರದ ನಡುವೆಯೂ ಜನಪ್ರತಿನಿಧಿಗಳ `ಕಾರ್’ಬಾರ್- 13 ಹೊಸ ಸ್ವಿಫ್ಟ್ ಕಾರುಗಳ ಖರೀದಿ

    ಬರದ ನಡುವೆಯೂ ಜನಪ್ರತಿನಿಧಿಗಳ `ಕಾರ್’ಬಾರ್- 13 ಹೊಸ ಸ್ವಿಫ್ಟ್ ಕಾರುಗಳ ಖರೀದಿ

    ಬೆಂಗಳೂರು: ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ. ಕುಡಿಯಲು ನೀರಿಲ್ಲ, ಜಾನುವಾರುಗಳಿಗೆ ಮೇವಿಲ್ಲ. ಇಡೀ ರಾಜ್ಯ ಬರದ ಬೇಗೆಯಲ್ಲಿ ಸುಟ್ಟು ಹೋಗಿದೆ. ಹೀಗಿದ್ರೂ, ನಮ್ಮನ್ನಾಳುವ ಜನ ಪ್ರತಿನಿಧಿಗಳ ಶೋಕಿಗೆ ಮಾತ್ರ ಬರವಿಲ್ಲ. ಬರಗಾಲದಲ್ಲಿ ಜನ ಜಾನುವಾರು ಸಾಯ್ತಿದ್ರು ವಿಧಾನ ಪರಿಷತ್ ಸದಸ್ಯರಿಗೆ ಓಡಾಡೋಕೆ ಹೊಸ ಕಾರುಗಳನ್ನ ಖರೀದಿ ಮಾಡಲಾಗಿದೆ.

    ಇತ್ತೀಚೆಗೆ ಸುಮಾರು 87 ಲಕ್ಷ ರೂ. ಹಣ ಖರ್ಚು ಮಾಡಿ 13 ಹೊಸ ಸ್ವಿಫ್ಟ್ ಡಿಸೈರ್ ಕಾರ್‍ಗಳನ್ನು ಖರೀದಿ ಮಾಡಲಾಗಿದೆ. ಸದ್ಯ ವಿಧಾನ ಪರಿಷತ್ ಸೇವೆಗೆ ಸಭಾಪತಿಗಳು, ಸಭಾ ನಾಯಕರು, ವಿಪಕ್ಷ ನಾಯಕರು, ಸಚೇತಕರ ಕಾರುಗಳನ್ನು ಹೊರತುಪಡಿಸಿ 31 ಕಾರುಗಳು ಇವೆ. ಸದ್ಯ ಅವೆಲ್ಲ ಚೆನ್ನಾಗಿಯೇ ಓಡ್ತಿವೆ. ಹೀಗಿದ್ರೂ 13 ಹೊಸ ಕಾರುಗಳನ್ನ ಖರೀದಿಸಲಾಗಿದೆ. ಖರೀದಿಯಲ್ಲೂ ಅವ್ಯವಹಾರದ ಆರೋಪ ಕೇಳಿ ಬಂದಿದ್ದು ಈ ಮಾಡೆಲ್ ಕಾರಿನ ಬೆಲೆ 6 ಲಕ್ಷದಷ್ಟು ಇದೆ. ಆದ್ರೆ ಅಧಿಕಾರಿಗಳೇ ನೀಡಿರುವ ಮಾಹಿತಿ ಪ್ರಕಾರ ಒಂದು ಕಾರಿಗೆ ಸುಮಾರು 6.70 ಲಕ್ಷ ಖರ್ಚು ಮಾಡಲಾಗಿದೆ. ಅಂದರೆ ಒಂದು ಕಾರಿನ ಮೇಲೆ 70 ಸಾವಿರದಷ್ಟು ಹೆಚ್ಚು ಹಣ ನೀಡಲಾಗಿದೆ.

    ಕಾರುಗಳು ಸರಿಯಿದ್ರೂ ಅಥವಾ ಸಣ್ಣ ಪುಟ್ಟ ರಿಪೇರಿ ಇದ್ರೂ ಅದನ್ನು ಸರಿಪಡಿಸುವ ಬದಲಾಗಿ ಹೊಸ ಕಾರು ಖರೀದಿಸೋದು ಎಷ್ಟು ಸರಿ? ಬರದ ಹೊಡೆತಕ್ಕೆ ತತ್ತರಿಸಿರೋ ಇಂತಹ ಸಮಯದಲ್ಲಿ ಇದೆಲ್ಲಾ ಬೇಕಿತ್ತಾ ಎಂದು ಪ್ರಜ್ಞಾವಂತ ನಾಗರಿಕರು ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ.