Tag: ಬರ

  • ಬಿಗಿ ಬಂದೋಬಸ್ತ್ ನಲ್ಲಿ ತುಂಗಭದ್ರಾ ಜಲಾಶಯದಿಂದ ರಾಯಚೂರಿಗೆ ಕುಡಿಯಲು ನೀರು ಬಿಡುಗಡೆ

    ಬಿಗಿ ಬಂದೋಬಸ್ತ್ ನಲ್ಲಿ ತುಂಗಭದ್ರಾ ಜಲಾಶಯದಿಂದ ರಾಯಚೂರಿಗೆ ಕುಡಿಯಲು ನೀರು ಬಿಡುಗಡೆ

    ರಾಯಚೂರು: ಬರಗಾಲ ಹಿನ್ನೆಲೆ ಜಿಲ್ಲೆಗೆ ಕುಡಿಯುವ ನೀರಿಗಾಗಿ ತುಂಗಭದ್ರಾ ಜಲಾಶಯದಿಂದ ಟಿಎಲ್‍ಬಿಸಿ ಗೆ ಇಂದು ನೀರು ಹರಿಸಲಾಗಿದೆ. ನೀರಾವರಿ ಸಲಹಾ ಸಮಿತಿ ತೀರ್ಮಾನದಂತೆ ಏಪ್ರಿಲ್ 10 ರಿಂದ 20 ರವರೆಗೆ 0.9 ಟಿಎಂಸಿ ನೀರನ್ನ ಹರಿಸಲಾಗುತ್ತಿದೆ. ಈ ಹಿನ್ನೆಲೆ ತುಂಗಭದ್ರಾ ಎಡದಂಡೆ ಕಾಲುವೆಯಿಂದ ನೀರನ್ನ ಕದಿಯುವ ಸಾಧ್ಯತೆಯಿದ್ದು ಕಾಲುವೆ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪೊಲೀಸ್ ಸಿಬ್ಬಂದಿ, ಡಿಎಆರ್ ತುಕಡಿ ಹಾಗೂ 100 ಜನ ಗ್ಯಾಂಗ್ ಮನ್‍ಗಳಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

    ಜನ ಜಾನುವಾರುಗಳಿಗೆ ಕುಡಿಯುವ ನೀರನ್ನ ಒದಗಿಸುವ ಉದ್ದೇಶದಿಂದ ದೇವದುರ್ಗದ ಗಣೇಕಲ್ ಜಲಾಶಯ, ಸ್ಥಳೀಯ ಸಂಸ್ಥೆಗಳ ಮತ್ತು ಖಾಸಗಿ ಕೆರೆಗಳು ಹಾಗೂ ಜಿಲ್ಲಾ ಪಂಚಾಯ್ತಿಯ 267 ಕೆರೆಗಳನ್ನ ತುಂಬುವ ಉದ್ದೇಶ ಹೊಂದಲಾಗಿದೆ. ನೀರಿನ ಸಮರ್ಪಕ ಪೂರೈಕೆಗೆ ನೋಡಲ್ ಅಧಿಕಾರಿಗಳು, ಜಿಪಂ ಕುಡಿಯುವ ನೀರು ಸರಬರಾಜು ಅಧಿಕಾರಿಗಳ ತಂಡ ರಚಿಸಿದ್ದು ನೀರಿನ ಸಮಸ್ಯೆ ತಲೆದೋರದಂತೆ ವ್ಯವಸ್ಥೆ ಮಾಡಲಾಗಿದೆ ಅಂತ ಜಿಲ್ಲಾಧಿಕಾರಿ ಬಗಾದಿ ಗೌತಮ್ ಹೇಳಿದ್ದಾರೆ.

    ಸೋಮವಾರ ಬೆಳಗ್ಗೆ 6 ಗಂಟೆಗೆ ಜಲಾಶಯದಿಂದ ನೀರನ್ನ ಬಿಡಲಾಗಿದ್ದು, ಕಾಲುವೆ ಆಶ್ರಿತ ಕೆರೆಗಳಿಗೆ ತಲುಪಲು ಇನ್ನೂ ಎರಡು ದಿನಗಳು ಬೇಕಾಗುತ್ತದೆ. ಬೆಳೆಗಳಿಗೆ ಬಳಸದಂತೆ ಕೇವಲ ಕುಡಿಯುವ ನೀರಿನ ಅವಶ್ಯಕತೆಗೆ ಅನುಗುಣವಾಗಿ ಕಾಲುವೆಗೆ ನೀರನ್ನ ಹರಿಸಲಾಗುತ್ತಿದೆ.

     

  • ಬರದ ಮಧ್ಯೆಯೂ ಗದಗದಲ್ಲಿ ಕೃಷಿ ಹೊಂಡ ತೆಗೆದಾಗ ಸಿಕ್ತು ಜಲಧಾರೆ!

    ಬರದ ಮಧ್ಯೆಯೂ ಗದಗದಲ್ಲಿ ಕೃಷಿ ಹೊಂಡ ತೆಗೆದಾಗ ಸಿಕ್ತು ಜಲಧಾರೆ!

    ಗದಗ: ಜಿಲ್ಲೆಯಲ್ಲಿ ಬರ ಬೆಂಬಿಡದ ಬೆತಾಳನಂತೆ ಕಾಡುತ್ತಿದೆ. ಜನ ಜಾನುವಾರಗಳು ಹನಿ ನೀರಿಗೂ ತತ್ವಾರ ಪಡುವಂತಾಗಿದೆ. ಆದ್ರೆ ಈ ಭೀಕರತೆಯ ಮಧ್ಯದಲ್ಲಿಯೂ ಭೂಮಿ ಅಗೆದಾಗ ನೀರು ಬರುವ ಮೂಲಕ ಅಲ್ಲೊಂದು ವಿಸ್ಮಯ ನಡೆದಿದೆ.

    ಗದಗ ಜಿಲ್ಲೆಯ ರೋಣ ತಾಲೂಕಿನ ಹಿರೇಕೊಪ್ಪ ಗ್ರಾಮದ ಶರಣಪ್ಪ ಬಳೂಟಗಿ ಎಂಬವರ ಜಮೀನಿನಲ್ಲಿ ಸರ್ಕಾರದ ಯೋಜನೆಯಲ್ಲಿ ಕೃಷಿ ಹೊಂಡ ತೆಗೆಸಲು ಮುಂದಾದ ವೇಳೆ ನೀರು ಚಿಮ್ಮಿದೆ. ಇದನ್ನು ಕಂಡ ಜನರು ಆಶ್ಚರ್ಯಚಕಿತರಾಗಿದ್ದಾರೆ. ಇಂತಹ ಬರಗಾಲದಲ್ಲಿ ಅದೂ ಸಾವಿರಾರು ಅಡಿ ಬೋರ್‍ವೆಲ್ ಕೊರೆಸಿದ್ರೂ ಹನಿ ನೀರು ಬರದಿರುವ ಸಂದರ್ಭದಲ್ಲಿ ನೀರು ಕಂಡ ಜಮೀನು ಮಾಲೀಕ ಶರಣಪ್ಪ ಹಾಗೂ ಸ್ಥಳೀಯರು ಸಂತಸಗೊಂಡಿದ್ದಾರೆ. ಈ ನೀರು ಕುಡಿಯುವ ನೀರಿನಷ್ಟೇ ಶುದ್ಧವಾಗಿದೆಯಂತೆ. ಹೀಗಾಗಿ ಇನ್ನಷ್ಟು ಅಭಿವೃದ್ದಿಪಡಿಸಿ ಈ ನೀರನ್ನು ಜನರಿಗೆ ಮತ್ತು ಜಾನುವಾರಗಳಿಗೆ ಉಚಿತವಾಗಿ ಕೊಡೋ ಬಯಕೆ ಈ ರೈತರದ್ದು.

    ಗದಗ ಜಿಲ್ಲೆ ಹಿರೇಕೊಪ್ಪ ಹಾಗೂ ಸುತ್ತಲಿನ ಗ್ರಾಮದಲ್ಲಿ ಸಾವಿರಾರು ಅಡಿ ಆಳ ಕೊಳವೆ ಬಾವಿ ಕೊರೆಸಿದ್ರೂ ನೀರು ಸಿಗದಂತಾಗಿದೆ. ಇಂಥದ್ರಲ್ಲಿ ಶರಣಪ್ಪ ಅವರ ಜಮೀನಿನಲ್ಲಿ ತೆಗೆಸಿದ ಕೃಷಿ ಹೊಂಡದಿಂದ ನೀರು ಜಿನುಗುತ್ತಿರೋದು ಮಾತ್ರ ನಿಜಕ್ಕೂ ಅಚ್ಚರಿಯ ಸಂಗತಿ. ಇದ್ರಿಂದ ಸಂತಸಗೊಂಡ ರೈತ ಶರಣಪ್ಪ ಹಾಗೂ ಸ್ಥಳೀಯರು ಕೃಷಿ ಹೊಂಡಕ್ಕೆ ಪೂಜೆ ಸಲ್ಲಿಸುವ ಮೂಲಕ ಗಂಗಾಮಾತೆಗೆ ಕೃತಜ್ಞತೆ ಸಲ್ಲಿಸಿದ್ರು. ಈ ಸುದ್ದಿ ತಿಳಿದು ಹಿರೇಕೊಪ್ಪ, ಚಿಕ್ಕೊಪ್ಪ, ಬಳೂಟಗಿ, ಬಸಾಪೂರ, ರಾಂಪೂರ, ಗಜೇಂದ್ರಗಡ ಸುತ್ತ ಮುತ್ತಲಿನ ಜನರು ಅಚ್ಚರಿಯಿಂದ ಕೃಷಿ ಹೊಂಡ ವೀಕ್ಷಿಸಲು ಬರ್ತಿದ್ದಾರೆ.

    ಈಗಾಗಲೆ ಈ ಕೃಷಿ ಹೊಂಡದ ನೀರು ಕುಡಿಯಲು ಹಾಗೂ ಜಾನುವಾರಗಳಿಗೆ ಉಪಯೋಗವಾಗ್ತಿದೆ. ಭೀಕರ ಬರಗಾಲದಲ್ಲಿ ಕೃಷಿ ಹೊಂಡ ನಿರ್ಮಿಸುವ ವೇಳೆ ನೀರು ಬಂದಿರುವುದು ಕಂಡು ನಿಜಕ್ಕೂ ಆಶ್ಚರ್ಯ ಮೂಡಿಸಿದ್ರೂ ಸತ್ಯ ಅಂತಿದ್ದಾರೆ ನೋಡಲು ಬಂದ ಜನ. ಒಟ್ಟಿನಲ್ಲಿ ಇಂತಹ ಬರಗಾಲದಲ್ಲಿ ಗಂಗೆ ಚಿಮ್ಮಿರುವುದು ಎಲ್ಲರಿಗೂ ಸಂತಸ ಮೂಡಿಸಿದೆ. ಈ ಅಂತರ್ ಗಂಗೆ ಹೀಗೆ ಇರಲಿ, ಎಲ್ಲರ ದಾಹ ನಿಗಿಸಲಿ ಅನ್ನೋದು ಜನರ ಆಶಯ.

  • ಬಿರುಬೇಸಿಗೆಯ ಮಧ್ಯೆ ರಾಜ್ಯದ ಹಲವೆಡೆ ಮಳೆ

    ಬಿರುಬೇಸಿಗೆಯ ಮಧ್ಯೆ ರಾಜ್ಯದ ಹಲವೆಡೆ ಮಳೆ

    ಬೆಂಗಳೂರು: ಬಿರುಬೇಸಿಗೆಯ ಮಧ್ಯೆ ಅಕಾಲಿಕವಾಗಿ ರಾಜ್ಯದ ಹಲವೆಡೆ ಮಳೆಯಾಗಿದೆ. ಹಾಸನ, ಚಿಕ್ಕಬಳ್ಳಾಪುರ, ನೆಲಮಂಗಲ ಹಾಗೂ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಸುತ್ತಮುತ್ತಲಿನ ಪ್ರದೇಶದಲ್ಲಿ ಗುಡುಗು ಮಿಂಚು ಸಹಿತ ಇಂದು ಮಳೆಯಾಗಿದೆ.

    ಜೋರಾದ ಗಾಳಿ ಬೀಸಿ ಜೈನ ಸಮಾವೇಶದ ಪಂಚಕಲ್ಯಾಣ ಪ್ರತಿಷ್ಟಾನ ಮಹಾಮಹೋತ್ಸವ ಕಾರ್ಯಕ್ರಮದ ಊಟದ ಆವರಣದ ಪೆಂಡಾಲ್ ಬಿದ್ದು ಮೂವರು ಗಾಯಗೊಂಡ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಅರಟಾಳ ಗ್ರಾಮದಲ್ಲಿ ನಡೆದಿದೆ.

    ಬಿಸಿಲಿನಿಂದ ಕಂಗೆಟ್ಟಿದ್ದ ಜನ ಮಳೆಯಿಂದ ಕೂಲ್ ಆಗಿದ್ದಾರೆ. ಈ ಮಧ್ಯೆ, ತೀವ್ರ ಬರಗಾಲದ ನಡುವೆಯೂ ಸಹಕಾರ ಸಂಸ್ಥೆಗಳಿಂದ ರೈತರು ಪಡೆದಿದ್ದ ಶೇ.90ರಷ್ಟು ಸಾಲವನ್ನು ಮರುಪಾವತಿ ಮಾಡಿರುವುದಾಗಿ ತಿಳಿದುಬಂದಿದೆ.

  • ಭೀಕರ ಬರದ ಮಧ್ಯೆಯೂ ಹೊಲದಲ್ಲಿ ಒಂದೆರಡು ಅಡಿ ಅಗೆದರೂ ಜಿನುಗುತ್ತಿದೆ ನೀರು!

    ಭೀಕರ ಬರದ ಮಧ್ಯೆಯೂ ಹೊಲದಲ್ಲಿ ಒಂದೆರಡು ಅಡಿ ಅಗೆದರೂ ಜಿನುಗುತ್ತಿದೆ ನೀರು!

    ಕೊಪ್ಪಳ: ಸತತ 3 ವರ್ಷಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಮಳೆ ಕೊರತೆ ಉಂಟಾಗಿದ್ದರಿಂದ ನೂರಾರು ಅಡಿ ಆಳ ಕೊರೆದ ಕೊಳವೆ ಬಾವಿಗಳೇ ವಿಫಲವಾಗಿವೆ. ಹಳ್ಳ-ಕೊಳ್ಳ, ಕೆರೆ-ಬಾವಿಯಲ್ಲಂತೂ ಪಕ್ಷಿಗಳು ಕುಡಿಯಲೂ ನೀರಿಲ್ಲ. ಬಿರು ಬಿಸಿಲಿಗೆ ಭೂಮಿ ಬಿರಿದು ಬಾಯ್ದೆರೆದು ನಿಂತಿದೆ. ಇಂಥ ಭೀಕರ ಸ್ಥಿತಿಯಲ್ಲೂ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ಗೋಡಿನಾಳ ಗ್ರಾಮವೊಂದರ ಹೊಲದಲ್ಲಿ ಕೈಯಿಂದ ಒಂದೆರಡು ಅಡಿ ಅಗೆದರೂ ನೀರು ಜಿನುಗುತ್ತಿದ್ದು, ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.

    ಇದನ್ನು ಕೆಲವರು ಪವಾಡ ಎಂದು ಅರ್ಥೈಸುತ್ತಿದ್ದರೆ, ಇನ್ನೂ ಹಲವರು ಪ್ರಕೃತಿಯ ವಿಸ್ಮಯದಲ್ಲೊಂದು ಎಂದು ವೈಜ್ಞಾನಿಕ ಕಾರಣ ನೀಡುತ್ತಿದ್ದಾರೆ. ಗೋಡಿನಾಳ ಗ್ರಾಮದ ಸರ್ವೆ ನಂಬರ್ 149ರಲ್ಲಿನ ಜಂಬಣ್ಣ ಕನಕಗಿರಿ ಮತ್ತು ಕನಕರಾಯ ಕನಕಗಿರಿ ಎಂಬವರ ಜಮೀನಿನ ತುಂಬ ಕೈಯಿಂದ ಒಂದೆರಡು ಅಡಿ ತೋಡಿದರೂ ನೀರು ಜಿನುಗಿ ಒರತೆ ಸೃಷ್ಠಿಯಾಗುತ್ತಿದೆ. ಭೀಕರ ಬರದಲ್ಲೂ ಭೂಮಿ ಅಗೆದಲ್ಲೆಲ್ಲ ನೀರು ಬರುತ್ತಿರುವ ವಿಸ್ಮಯ ನೋಡಲು ಸಾವಿರಾರು ಜನ ಜಮೀನಿನ ಕಡೆ ದಾಂಗುಡಿ ಇಟ್ಟಿದ್ದಾರೆ.

    ಇತ್ತೀಚೆಗೆ ನಟ ಯಶ್ ನೇತೃತ್ವದ ಯಶೋಮಾರ್ಗ ಫೌಂಡೇಷನ್‍ನಿಂದ ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆಯಲ್ಲಿ ಹೂಳು ತೆಗೆಯುವಾಗ ನೀರು ಜಿನುಗಿದ್ದು ವರದಿಯಾಗಿತ್ತು. ಆದರೆ ಸದ್ಯ ನೀರು ಬರುತ್ತಿರುವ ಜಮೀನು ಮೆಲ್ಭಾಗದಲ್ಲಿದೆ. ಯಾವುದೇ ಬೋರ್‍ವೆಲ್ ಪೈಪ್‍ಲೈನ್‍ಗಳೂ ಇಲ್ಲಿ ಹಾಯ್ದು ಹೋಗಿಲ್ಲ. ಇನ್ನು ಈ ಜಮೀನಿನ ಸುತ್ತಲೂ ಯಾವುದೇ ಹಳ್ಳ-ಕೊಳ್ಳ, ಕೆರೆ-ಬಾವಿಗಳಿಲ್ಲ. ಕೆರೆ-ಕುಂಟೆ ಅಥವಾ ಯಾವುದೇ ಜಲ ಮೂಲ ಇಲ್ಲ. ಆದ್ದರಿಂದ ಸಾರ್ವಜನಿಕರು ಇದನ್ನು ಪವಾಡ ಎಂದು ಅರ್ಥೈಸುತ್ತಿದ್ದಾರೆ.

    ಇದನ್ನೂ ಓದಿ: ಕೊಪ್ಪಳದಲ್ಲಿ ಯಶೋಮಾರ್ಗದ ಫಲ- ಬತ್ತಿ ಹೋಗಿದ್ದ ಕೆರೆಯಲ್ಲಿ ಉಕ್ಕುತ್ತಿದೆ ಜೀವ ಜಲ

  • ಬಿರು ಬೇಸಿಗೆಯಲ್ಲಿ ಪ್ರತಿದಿನ ಜನರಿಗೆ 60 ಟ್ಯಾಂಕರ್‍ಗಳಷ್ಟು ನೀರು ಪೂರೈಸ್ತಿರೋ ದಾವಣಗೆರೆಯ ರಾಕೇಶ್

    ಬಿರು ಬೇಸಿಗೆಯಲ್ಲಿ ಪ್ರತಿದಿನ ಜನರಿಗೆ 60 ಟ್ಯಾಂಕರ್‍ಗಳಷ್ಟು ನೀರು ಪೂರೈಸ್ತಿರೋ ದಾವಣಗೆರೆಯ ರಾಕೇಶ್

    ದಾವಣಗೆರೆ: ಬಿರು ಬೇಸಿಗೆಯಿಂದಾಗಿ ರಾಜ್ಯದ ಬಹುತೇಕ ಕಡೆ ಕುಡಿಯೋ ನೀರಿಗೂ ಪರದಾಡೋ ಸ್ಥಿತಿ ಇದೆ. ನೀರು ಕೊಡಿ ಸ್ವಾಮಿ ಅಂತಾ ಜನನಾಯಕರನ್ನ ಕೇಳಿದ್ರೆ ಕಿವಿನೇ ಕೇಳಿಸಲ್ಲ. ಇಂಥದ್ದರಲ್ಲಿ ವ್ಯಕ್ತಿಯೊಬ್ಬರು ಉಚಿತವಾಗಿ ಟ್ಯಾಂಕರ್ ಮೂಲಕ ಏರಿಯಾಗಳಿಗೆಲ್ಲಾ ನೀರು ಹಂಚ್ತಿದ್ದಾರೆ.

    ದಾವಣಗೆರೆಯ ನಿಟ್ಟುವಳ್ಳಿ ಬಡಾವಣೆಯ ನಿವಾಸಿ ರಾಕೇಶ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ರಾಕೇಶ್ ಅವರಿಗೆ ಏನಾದರೂ ಸೇವೆ ಮಾಡಬೇಕೆಂಬ ಮಹದಾಸೆ. ಹೀಗಾಗಿ ಜನರ ನೀರಿನ ದಾಹ ತಣಿಸುವ ಕೆಲಸ ಮಾಡ್ತಿದ್ದಾರೆ. ತಮ್ಮ ಜಮೀನಿನಲ್ಲಿರುವ ಕೊಳವೆ ಬಾವಿಯಿಂದ ನೀರನ್ನು ತುಂಬಿಸಿಕೊಂಡು ಬಂದು, ನಿತ್ಯ 5 ಟ್ಯಾಂಕರ್ ಮೂಲಕ ನಗರದ ಪ್ರತಿಯೊಂದು ವಾರ್ಡ್‍ಗೂ ಪೂರೈಕೆ ಮಾಡುತ್ತಿದ್ದಾರೆ. ಪ್ರತಿ ನಿತ್ಯ ಸುಮಾರು 60 ಟ್ಯಾಂಕರ್ ನೀರನ್ನ ಜನರಿಗೆ ನೀಡುತ್ತಾರೆ. ರಾಕೇಶ್ ಸಮಾಜ ಸೇವೆಗೆ ಮನೆಯವರು ಹಾಗೂ ಸ್ನೇಹಿತರೂ ಸಾಥ್ ನೀಡಿದ್ದಾರೆ.

    ಪ್ರತಿವರ್ಷ ದಾವಣಗೆರೆ ಜಿಲ್ಲೆಯ ಸುತ್ತಮುತ್ತ ಯಾವುದೇ ಜಾತ್ರೆ ನಡೆಯಲಿ, ರಾಜೇಶ್ ಅಲ್ಲಿಗೆ ಬರೋ ಜನರ ನೀರಿನ ದಾಹ ನೀಗಿಸ್ತಾರೆ. ತಂದೆಯ ಮಾರ್ಗದರ್ಶನದಲ್ಲಿ ಬೆಳೆದ ರಾಕೇಶ್ ಬಡ ಜನರಿಗೆ ತನ್ನ ಕೈಲಾದಷ್ಟು ಸಹಾಯ ಮಾಡ್ತಿದ್ದಾರೆ. ಇದಕ್ಕಾಗಿ ಆರ್‍ಎಸ್‍ಆರ್ ಅನ್ನೋ ಫೌಂಡೇಶನ್ ಸ್ಥಾಪನೆ ಮಾಡಿದ್ದಾರೆ. ರಾಕೇಶ್ ನಿಜಕ್ಕೂ ಆಧುನಿಕ ಭಗೀರಥರಂತೆ ಕಾಣುತ್ತಾರೆ.

    https://www.youtube.com/watch?v=DZgrB9ObNf8

     

  • 10 ಸಾವಿರ ಗಿಡ ನೆಡಲು ಪಣ- ಪರಿಸರ ರಕ್ಷಣೆಗೆ ಸಜ್ಜಾದ ಚಿತ್ರದುರ್ಗದ ಸಿದ್ದರಾಜು

    10 ಸಾವಿರ ಗಿಡ ನೆಡಲು ಪಣ- ಪರಿಸರ ರಕ್ಷಣೆಗೆ ಸಜ್ಜಾದ ಚಿತ್ರದುರ್ಗದ ಸಿದ್ದರಾಜು

    ಚಿತ್ರದುರ್ಗ: ರಣಭಯಂಕರ ಬರಕ್ಕೆ ರಾಜ್ಯದ ಜನ ತತ್ತರಿಸಿ ಹೋಗಿದ್ದಾರೆ. ಬಿಸಿಲಿನ ತಾಪಕ್ಕೆ ಧರೆಯೇ ಬೆಂಕಿಯುಂಡೆಂಯಂತಾಗಿದೆ. ಇದಕ್ಕೆ ಕಾರಣವೇನು? ನಮ್ಮ ಸ್ವಯಂಕೃತ ಅಪರಾಧವೇ. ಇದನ್ನ ಮನಗಂಡ ಚಿತ್ರದುರ್ಗದ ಪರಿಸರ ಪ್ರೇಮಿ ಸಿದ್ದರಾಜು ಈಗ ಗಿಡ ಬೆಳೆಸೋಕೆ ಟೊಂಕ ಕಟ್ಟಿದ್ದಾರೆ.

    ರಾಜ್ಯದಲ್ಲಿ ಹಿಂದೆಂದೂ ಕಾಣದಂತ ಬರ ಆವರಿಸಿದೆ, ಮಳೆ ಕೈಕೊಟ್ಟಿದೆ. ಎಲ್ಲಿ ನೋಡಿದ್ರೂ ಬಟಾಬಯಲೇ ಕಾಣ್ತಿದೆ. ಇದಕ್ಕೆ ಕಾರಣ ಮಾನವರಾದ ನಮ್ಮ ಸ್ವಯಂಕೃತ ಅಪರಾಧವೇ. ಇದನ್ನೆಲ್ಲಾ ಮನಗಂಡ ಚಿತ್ರದುರ್ಗದ ಬುರುಜನಹಳ್ಳಿಯ ಸಿದ್ದರಾಜು ಜೋಗಿ ಈಗ ಪರಿಸರ ರಕ್ಷಣೆಗೆ ನಿಂತಿದ್ದಾರೆ. ಎಲ್ಲರ ಅನುಮತಿ ಪಡೆದು ತಮ್ಮ ಬಡಾವಣೆಯ ಪ್ರತಿ ಮನೆ ಎದುರು, ರಸ್ತೆ ಬದಿಯಲ್ಲಿ ಸ್ನೇಹಿತರೊಂದಿಗೆ ಗಿಡ ಬೆಳೆಸ್ತಿದ್ದಾರೆ.

    ಎಂಎ, ಬಿ.ಎಡ್ ಓದಿರೋ ಸಿದ್ದರಾಜು ಜೆರಾಕ್ಸ್ ಅಂಗಡಿ ಇಟ್ಟುಕೊಂಡಿದ್ದಾರೆ. ಗಿಡ ನೆಡೋದನ್ನ ಪ್ರವೃತ್ತಿಯಾಗಿಸಿಕೊಂಡು ಪರಿಸರ ಜಾಗೃತಿ ಮೂಡಿಸ್ತಿದ್ದಾರೆ. ಈ ವರ್ಷಾಂತ್ಯಕ್ಕೆ 10 ಸಾವಿರ ಗಿಡಗಳನ್ನ ನೆಟ್ಟು ಚಿತ್ರದುರ್ಗವನ್ನ ಹಸಿರು ದುರ್ಗವನ್ನಾಗಿಸುವ ಪಣ ತೊಟ್ಟಿದ್ದಾರೆ.

    ಹಸಿರೇ ಉಸಿರು ಅಂತ ಈಗಾಗಲೇ ವಿವಿಧ ಜಾತಿಯ 600ಕ್ಕೂ ಹೆಚ್ಚು ಗಿಡಗಳನ್ನ ನೆಟ್ಟಿರೋ ಸಿದ್ದರಾಜು ಮತ್ತವರ ಬಳಗದ ಕೆಲಸವನ್ನ ಗ್ರಾಮಸ್ಥರು ಮುಕ್ತವಾಗಿ ಶ್ಲಾಘಿಸ್ತಾರೆ. ರಾಜ್ಯದ ಪ್ರತಿಯೊಬ್ಬ ಪ್ರಜೆಯೂ ಹೀಗೆ ಒಂದೊಂದು ಗಿಡ ನೆಟ್ಟರೆ ಖಂಡಿತ ಇಂಥ ಭೀಕರ ಬರ, ರಣಭಯಂಕರ ಬಿಸಿಲನ್ನ ತಡೆಯಬಹುದು.

    https://www.youtube.com/watch?v=0fXp6q17b3I

  • ಸೂರ್ಯ ಶಿಕಾರಿಗೆ ಮಹಾರಾಷ್ಟ್ರದಲ್ಲಿ ಐವರು ಬಲಿ

    ಸೂರ್ಯ ಶಿಕಾರಿಗೆ ಮಹಾರಾಷ್ಟ್ರದಲ್ಲಿ ಐವರು ಬಲಿ

    ನವದೆಹಲಿ/ಬೆಂಗಳೂರು: ದೇಶಾದ್ಯಂತ ಸೂರ್ಯ ಶಿಕಾರಿ ಜೋರಾಗಿದೆ. ಬಿಸಿಲಿನ ತಾಪಕ್ಕೆ ಜನ ತತ್ತರಿಸಿ ಹೋಗಿದ್ದಾರೆ.

    ಮಾರ್ಚ್ ತಿಂಗಳಲ್ಲೇ ಮಹಾರಾಷ್ಟ್ರದಲ್ಲಿ 40 ಡಿಗ್ರಿಯಷ್ಟು ಉಷ್ಣಾಂಶ ದಾಖಲಾಗಿದ್ದು, ಬಿಸಿ ತಾಳಲಾರದೆ ವಿವಿಧೆಡೆ ಐವರು ಸಾವನ್ನಪ್ಪಿದ್ದಾರೆ. ಅದ್ರಲ್ಲೂ, ರಾಯಘಡ ಜಿಲ್ಲೆಯ ಭೀರಾ ಗ್ರಾಮದಲ್ಲಿ 46.5 ಡಿಗ್ರಿ ಸೆಲ್ಸಿಯಸ್ ದಾಖಲೆಯ ಉಷ್ಣಾಂಶ ದಾಖಲಾಗಿದೆ. ಹೀಗಾಗಿ, ಭಾರತೀಯ ಹವಾಮಾನ ಇಲಾಖೆ ಈ ಬಗ್ಗೆ ಅಧ್ಯಯನ ನಡೆಸ್ತಿದೆ.

    ರಾಜಸ್ತಾನದ ಬಾರ್ಮೆರ್ ನಲ್ಲಿ 43.4 ಡಿಗ್ರಿ ಸೆಲ್ಸಿಯಸ್, ಹರ್ಯಾಣದ ನಾರ್ನೌಲ್ ನಲ್ಲಿ 42 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಪಂಜಾಬ್ ನ ಲೂಧಿಯಾನಾದಲ್ಲಿ ಕನಿಷ್ಠ ತಾಪಕ್ಕಿಂತ 7 ಡಿಗ್ರಿ ಸೆಲ್ಸಿಯಸ್ ಅಧಿಕವಾಗಿರುವುದಾಗಿ ಹೇಳಿದೆ.

    ರಾಜ್ಯದಲ್ಲೂ ಬಿಸಿಲಿನ ಝಳ ಹೆಚ್ಚಾಗ್ತಿದೆ. ಬೆಂಗಳೂರಿನಲ್ಲಿ 35 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಇದ್ದು, ಇನ್ನೆರಡು ದಿನಗಳಲ್ಲಿ 38 ಡಿಗ್ರಿಗೆ ಏರಲಿದೆ ಎನ್ನಲಾಗಿದೆ. ಬಿಸಿಲ ಬೇಗೆ ಹೆಚ್ಚಾದ ಕಾರಣ ಹೈದರಾಬಾದ್ ಕರ್ನಾಟಕದ 6 ಸೇರಿ ಉತ್ತರದ 8 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಯ ಕೆಲಸದ ಅವಧಿಯನ್ನ ಬೆಳಗ್ಗೆ 8 ರಿಂದ ಮಧ್ಯಾಹ್ನ 1.30ಕ್ಕೆ ಬದಲಾಯಿಸಲಾಗಿದೆ.

    ಬೆಳೆದ ಬೆಳೆ ಒಣಗಿ ಹೋದ ಕಾರಣ ಸಾಲಬಾಧೆಗೆ ಹೆದರಿ ಬಾಗಲಕೋಟೆಯಲ್ಲಿ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಮಧ್ಯೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಆನೆಗಳು ಕೆರೆಯಲ್ಲಿ ಈಜಾಡಿ ಖುಷಿ ಪಟ್ಟಿವೆ.

    ಕಾರವಾರದಲ್ಲಿ ಕಾಳಿಂಗ ಸರ್ಪಕ್ಕೆ ಬಾಟಲಿಯಲ್ಲಿ ನೀರು ಕುಡಿಸಿರುವ ದೃಶ್ಯ ಇಂದು ರಾಷ್ಟ್ರೀಯ ವಾಹಿನಿಯಲ್ಲಿ ಪ್ರಸಾರವಾಗಿದ್ದು ವೈರಲ್ ಆಗಿದೆ.

    https://www.youtube.com/watch?v=7v6NjKWzbSU

    https://www.youtube.com/watch?v=5vi5ECBTGl4

  • ಮದ್ಯಗೋಷ್ಠಿ ತಾಣವಾಗುತ್ತಿವೆ ಎನ್‍ಆರ್‍ಬಿಸಿ ಸೇತುವೆಗಳು: ರೈತರ ಕೂಗು ಕೇಳದ ಸರ್ಕಾರ

    ಮದ್ಯಗೋಷ್ಠಿ ತಾಣವಾಗುತ್ತಿವೆ ಎನ್‍ಆರ್‍ಬಿಸಿ ಸೇತುವೆಗಳು: ರೈತರ ಕೂಗು ಕೇಳದ ಸರ್ಕಾರ

    ರಾಯಚೂರು: ಬಿರು ಬೇಸಿಗೆಯಲ್ಲಿ ಮೇಲಗಡೆ ತಂಪು, ಕೆಳಗಡೆ ತಂಪು, ಅಲ್ಲಲ್ಲಿ ನಿಂತ ನೀರು, ತಣ್ಣನೆ ಮರಳಲ್ಲಿ ಮುಂಜಾನೆಯಿಂದ ಸಂಜೆವರೆಗೂ ಮದ್ಯಪಾನ. ಇದು ರಾಯಚೂರಿನ ದೇವದುರ್ಗದ ನಾರಾಯಣಪುರ ಬಲದಂಡೆ ಕಾಲುವೆಯ ಸೇತುವೆಗಳ ಕೆಳಗೆ ಕಂಡು ಬರುವ ಸಾಮಾನ್ಯ ದೃಶ್ಯ. ಬಿಸಿಲನಾಡು ರಾಯಚೂರಿನಲ್ಲಿ ಬರಗಾಲದಿಂದ ಖಾಲಿ ಖಾಲಿಯಾಗಿರುವ ಎನ್‍ಆರ್‍ಬಿಸಿ ಕಾಲುವೆಗಳು ಈಗ ಮದ್ಯವ್ಯಸನಿಗಳ ಹಾಟ್ ಸ್ಪಾಟ್‍ಗಳಾಗುತ್ತಿವೆ.

    ಬಿರುಬಿಸಿಲಿನ ಝಳತಪ್ಪಿಸಿಕೊಂಡು ಮದ್ಯಪಾನಮಾಡಲು ವ್ಯಸನಿಗಳು ಕಾಲುವೆಯ ಸೇತುವೆಗಳನ್ನ ಬಳಸಿಕೊಳ್ಳುತ್ತಿದ್ದಾರೆ. ಒಂದೆಡೆ ಕಾಲುವೆಗೆ ನೀರು ಹರಿಸುವಂತೆ ರೈತರು ಹೋರಾಟಕ್ಕೆ ಕಿವಿಗೊಡದ ಸರ್ಕಾರದ ನಿಲುವು ಮದ್ಯಪಾನಿಗಳಿಗೆ ಅನುಕೂಲವಾಗಿದೆ. ನೀರಾವರಿ ಸಲಹಾ ಸಮಿತಿ ಕಾಲುವೆಗೆ ಸಮರ್ಪಕವಾಗಿ ನೀರು ಹರಿಸದ ಹಿನ್ನೆಲೆಯಲ್ಲಿ ಕಾಲುವೆಗಳು ಖಾಲಿ ಖಾಲಿಯಾಗಿವೆ. ಹೀಗಾಗಿ ದಾರಿಹೋಕರು, ಪುಂಡಪೋಕರಿಗಳು, ಸುತ್ತಮುತ್ತಲ ಗ್ರಾಮಗಳ ಮದ್ಯವ್ಯಸನಿಗಳಿಗೆ ಸೇತುವೆ ಕೆಳಗಿನ ಕಾಲುವೆ ಜಾಗ ಮದ್ಯಪಾನಕ್ಕೆ ಹೇಳಿಮಾಡಿಸಿದಂತಾಗಿದೆ. ಮದ್ಯಪಾನ ಮಾಡಿ ಬಾಟಲ್, ಪೌಚ್, ನೀರಿನ ಪ್ಲಾಸ್ಟಿಕ್ ಗ್ಲಾಸ್‍ಗಳನ್ನ ಕಾಲುವೆಯಲ್ಲೇ ಎಸೆದು ಹೋಗುತ್ತಿದ್ದಾರೆ.

    ನೀರಾವರಿ ಸಲಹಾ ಸಮಿತಿ ನಾರಾಯಣಪುರ ಬಲದಂಡೆ ಕಾಲುವೆಗೆ ಮಾರ್ಚ್ 26 ರಿಂದ 30 ರವರೆಗೆ ಐದು ದಿನಗಳ ಕಾಲ ನೀರು ಹರಿಸಲು ನಿರ್ಧರಿಸಿದೆ. ಆದ್ರೆ ಸುಮಾರು 50 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆ ಬೆಳೆದಿರುವ ರೈತರಿಗೆ ನೀರು ತಲುಪುವುದು ಅನುಮಾನವಾಗಿದೆ. ಇನ್ನೂ ಕೇವಲ 5 ದಿನ ನೀರು ಹರಿಸಿದರೆ 16, 17, 18 ನೇ ವಿತರಣಾ ಕಾಲುವೆಗೆ ಹನಿ ನೀರು ಸಹ ತಲುಪುವುದಿಲ್ಲ ಅಂತ ರೈತರು ಆರೋಪಿಸಿದ್ದಾರೆ.

    ಏಪ್ರಿಲ್ 10 ರವರೆಗೆ ಕಾಲುವೆಗೆ ನೀರು ಹರಿಸುವಂತೆ ರೈತರು ಹೋರಾಟ ನಡೆಸಿದ್ದಾರೆ. ಕಾಳು ಕಟ್ಟಿರುವ ಭತ್ತ, ಶೇಂಗಾ ,ಕಡಲೆ ಬೆಳೆಗಳು ಒಣಗಿಹೋಗುತ್ತಿದ್ದು, ಕಾಲುವೆಯ ಕೆಳಭಾಗದ ರೈತರು ಬೆಳೆಹಾನಿ ಆತಂಕದಲ್ಲಿದ್ದಾರೆ. ಆದ್ರೆ ಸರ್ಕಾರ ಮಾತ್ರ ಕಾಲುವೆಗೆ ನೀರು ಬಿಡುವ ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಮದ್ಯ ವ್ಯಸನಿಗಳಿಗೆ ಸರ್ಕಾರವೇ ಜಾಗ ಹುಡುಕಿ ಕೊಟ್ಟಂತಾಗಿದೆ.

    ಒಟ್ನಲ್ಲಿ, ಪವಿತ್ರ ಕೃಷ್ಣೆ ಹರಿಯಬೇಕಾದ ಸ್ಥಳದಲ್ಲಿ ಮದ್ಯಗೋಷ್ಠಿಗಳು ನಡೆಯುತ್ತಿವೆ. ಬೆಳಿಗ್ಗೆಯಿಂದಲೇ ಠಿಕಾಣಿ ಹೂಡೋ ಕುಡುಕರು ಸಂಜೆ ವೇಳೆಗೆ ಮನೆಕಡೆ ತೆರಳುತ್ತಿದ್ದಾರೆ. ಕನಿಷ್ಟ ಈಗಲಾದ್ರೂ ಸರ್ಕಾರ ಎಚ್ಚೆತ್ತು ಕುಡುಕರ ತಾಣವಾಗುತ್ತಿರುವ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಸಬೇಕಿದೆ. ರೈತರ ಬೆಳೆಗಳನ್ನ ರಕ್ಷಿಸಬೇಕಿದೆ.

     

  • ಕೊಪ್ಪಳದಲ್ಲಿ ಯಶೋಮಾರ್ಗದ ಫಲ- ಬತ್ತಿ ಹೋಗಿದ್ದ ಕೆರೆಯಲ್ಲಿ ಉಕ್ಕುತ್ತಿದೆ ಜೀವ ಜಲ

    ಕೊಪ್ಪಳದಲ್ಲಿ ಯಶೋಮಾರ್ಗದ ಫಲ- ಬತ್ತಿ ಹೋಗಿದ್ದ ಕೆರೆಯಲ್ಲಿ ಉಕ್ಕುತ್ತಿದೆ ಜೀವ ಜಲ

    – ರಾಕಿಂಗ್ ಸ್ಟಾರ್ ದಂಪತಿಗೆ ರೈತರ ಕೃತಜ್ಞತೆ

    ಕೊಪ್ಪಳ: ಜಿಲ್ಲೆಯಲ್ಲಿರೋ ಕೆರೆ ಬಾವಿ ಬತ್ತಿ ಹೋಗಿದ್ದು, ಭೀಕರ ಬರ ತಾಂಡವಾಡ್ತಿದೆ. ಹೀಗಾಗಿ ಒಂದು ಕೆರೆಯ ಹೂಳು ತೆಗೆಯುವ ಮೂಲಕ ಬರ ನೀಗಿಸಲು ನಟ ಯಶ್ ದಂಪತಿ ಮುಂದಾಗಿದ್ದಾರೆ. ಒಂದು ತಿಂಗಳ ಹಿಂದೆ ಈ ಕೆರೆಗೆ ಭೂಮಿ ಪೂಜೆ ಸಲ್ಲಿಸಿ ಹೂಳು ತೆಗೆಯಲು ಆರಂಭಿಸಿದ್ದು, ಈಗ ನೀರು ಚಿಮ್ಮುತ್ತಿದೆ. ಕೆರೆಯಲ್ಲಿ ನೀರು ಚಿಮ್ಮುತ್ತಿರೋದನ್ನು ನೋಡಿ ಜನ ಸಂತಸಪಟ್ಟಿದ್ದಾರೆ.

    ಸುಮಾರು ಐವತ್ತು ವರ್ಷಗಳಿಂದಲೂ ಕೊಪ್ಪಳದ ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆಯಲ್ಲಿ ಹೂಳು ತುಂಬಿಕೊಂಡಿತ್ತು. 96 ಎಕರೆಯಲ್ಲಿ ತುಂಬಿರೋ ಹೂಳನ್ನ ತಗೆಯಲು ಬೆಂಗಳೂರಿನ ಯಶೋಮಾರ್ಗ ಫೌಂಡೇಶನ್ ಮುಂದಾಯ್ತು. ಕಳೆದ ಫೆಬ್ರವರಿ 28 ರಂದು ಯಶ್ ದಂಪತಿ ಕೆರೆಯಲ್ಲಿ ಹೂಳು ತಗೆಯಲು ಭೂಮಿ ಪೂಜೆ ಮಾಡಿದ್ರು. ಯಶೋಮಾರ್ಗ ಫೌಂಡೇಶನ್ 4 ಕೋಟಿ ವೆಚ್ಚದಲ್ಲಿ ಕೆರೆಯಲ್ಲಿರೋ ಹೂಳು ತಗೆದು ಮಾದರಿ ಕೆರೆಯನ್ನಾಗಿಸಲು ಸಂಕಲ್ಪ ಮಾಡಿದೆ. ಕಳೆದ ಒಂದು ತಿಂಗಳಿಂದ ಈ ಕೆರೆಯಿಂದ ಹೂಳು ತಗೆಯಲಾಗ್ತಿದೆ. ಸದ್ಯ ನಾಲ್ಕೈದು ದಿನಗಳಿಂದ ಹೂಳು ತೆಗೆಯೋ ವೇಳೆ ನೀರು ಚಿಮ್ಮಿದೆ.

    ತಲ್ಲೂರು ಕೆರೆಯಲ್ಲಿ 10 ಅಡಿ ಆಳದಷ್ಟು ಅಗೆದು ಹೂಳು ತೆಗೆಯಲಾಗ್ತಿದ್ದು, ನೀರು ಜಿನುಗುತ್ತಿರೋದ್ರಿಂದ ರೈತರಲ್ಲಿ ಸಂತಸ ಇಮ್ಮಡಿಗೊಂಡಿದೆ. ಈ ಭಾಗದಲ್ಲಿ 400 ಅಡಿ ಭೂಮಿ ಅಗೆದರೂ ಹನಿ ನೀರು ಸಿಗುತ್ತಿರಲಿಲ್ಲ. ಸತತ ಮೂರು ವರ್ಷಗಳ ಭೀಕರ ಬರದಿಂದ ಹನಿ ನೀರು ಕೂಡ ಸಿಗುತ್ತಿರಲಿಲ್ಲ. ಅಲ್ಲದೆ ಜಿಲ್ಲೆಯಲ್ಲಿರೋ ಬಹುತೇಕ ಕೆರೆಗಳು ಬರಿದಾಗಿ ಬಾಯಿ ತೆರೆದಿವೆ. ಇದೀಗ ತಲ್ಲೂರು ಕೆರೆಯಲ್ಲಿ ನೀರು ಚಿಮ್ಮುತ್ತಿರೋದ್ರಿಂದ ಕೆರೆಯಲ್ಲಿ ನೀರು ಆವರಿಸಿದೆ. ಈ ಭಾಗದಲ್ಲಿರೋ ರೈತರು ಹಾಗೂ ದನಕರುಗಳಿಗೆ ತಲ್ಲೂರು ಕೆರೆ ಆಸರೆಯಾಗಿದೆ.

    ತಲ್ಲೂರು ಕೆರೆಯಲ್ಲಿ ನೀರು ಬಂದಿರೋದ್ರಿಂದ ಈ ಭಾಗದ ಜನರ ಮೊಗದಲ್ಲಿ ಸಂತಸ ಕಾಣ್ತಿದೆ. ಹೂಳು ತೆಗೆಯೋ ವೇಳೆ ನೀರು ಬಂದಿರೋದ್ರಿಂದ ಕೆರೆಯ ಹೂಳನ್ನ ತಗೆಯೋ ಕಾರ್ಯ ಇನ್ನಷ್ಟು ವೇಗಗೊಳಿಸಿದ್ರೆ ಕೆರೆಯಲ್ಲಿ ಇನ್ನಷ್ಟು ನೀರು ಬರಹಬುದು ಅನ್ನೋ ನಿರೀಕ್ಷೆ ರೈತರದ್ದಾಗಿದೆ. ಏನೇ ಆಗ್ಲೀ ಬತ್ತಿ ಹೋಗಿದ್ದ ಕೆರೆಯಲ್ಲಿ ನೀರು ಚಿಮ್ಮಿರೋದು ಜನರಲ್ಲಿ ಆಶ್ಚರ್ಯ ಹಾಗೂ ಸಂತಸ ತರಿಸಿದೆ.

  • ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ: ಮೂರು ಹಸುಗಳು ಸಜೀವ ದಹನ

    ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ: ಮೂರು ಹಸುಗಳು ಸಜೀವ ದಹನ

    ಚಾಮರಾಜನಗರ: ತಾಲೂಕಿನ ಬಸವರಾಜಪುರ ಗ್ರಾಮದಲ್ಲಿರೋ ದನದ ಕೊಟ್ಟಿಗೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಮೂರು ಹಸುಗಳು ಸಜೀವ ದಹನಗೊಂಡಿರುವ ಘಟನೆ ನಡೆದಿದೆ.

    ಗ್ರಾಮದ ಬಸವದೇವರು ಎಂಬವರಿಗೆ ಸೇರಿದ ಹಸುಗಳು ಬೆಂಕಿಗಾಹುತಿಯಾಗಿವೆ. ಭಾನುವಾರ ರಾತ್ರಿ ಬೆಂಕಿ ತಗುಲಿದ್ದು, ಹಸುಗಳು ಬೆಂಕಿಯ ತೀವ್ರತೆಗೆ ಸುಟ್ಟು ಕರಕಲಾಗಿವೆ. ಕೊಟ್ಟಿಗೆಯ ಪಕ್ಕದಲ್ಲಿದ್ದ ಮೇವಿಗೂ ಬೆಂಕಿ ತಗುಲಿದ್ದರಿಂದ ತಕ್ಷಣವೇ ಬೆಂಕಿ ಆವರಿಸಿಕೊಂಡಿದೆ ಎಂದು ಹೇಳಲಾಗಿದೆ.

    ಬೇಸಿಗೆ ಮತ್ತು ಬರದಿಂದಾಗಿ ಮೇವಿಗೆ ಅಭಾವ ಇರುವುದರಿಂದ ಕೊಟ್ಟಿಗೆಯಲ್ಲೇ ಮೇವನ್ನು ದಾಸ್ತಾನು ಮಾಡಲಾಗಿತ್ತು. ಒಂದು ಲಕ್ಷಕ್ಕೂ ಅಧಿಕ ಬೆಲೆಬಾಳುವ ಹಸುಗಳನ್ನು ಕಳೆದುಕೊಂಡಿರುವ ರೈತ ಬಸವದೇವರು ಕಂಗಾಲಾಗಿದ್ದಾರೆ. ಈ ಸಂಬಂಧ ಆಲೂರುಒಮ್ಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.