Tag: ಬರ

  • ಶಿರಸಿಯನ್ನೂ ಕಾಡಿತ್ತು ಬರಗಾಲ – ಸರ್ಕಾರ ಕೈ ಕೊಟ್ರೂ ಜೀವಜಲ ತಂದ್ರು ಶ್ರೀನಿವಾಸ್ ಹೆಬ್ಬಾರ್

    ಶಿರಸಿಯನ್ನೂ ಕಾಡಿತ್ತು ಬರಗಾಲ – ಸರ್ಕಾರ ಕೈ ಕೊಟ್ರೂ ಜೀವಜಲ ತಂದ್ರು ಶ್ರೀನಿವಾಸ್ ಹೆಬ್ಬಾರ್

    ಕಾರವಾರ: ಬೇಸಿಗೆ ಶುರುವಾಗ್ತಿದ್ದು, ರಾಜ್ಯದ 156 ತಾಲೂಕುಗಳಲ್ಲಿ ಬರ ತಾಂಡವ ಆಡ್ತಿದೆ. ಸರ್ಕಾರ ಇನ್ನೂ ಎಚ್ಚೆತ್ತುಕೊಂಡಿಲ್ಲ ಅನ್ನೋದು ವಿಪಕ್ಷಗಳ ಟೀಕೆ. ಆದರೆ, ಎರಡು ವರ್ಷದ ಹಿಂದೆ ಇದೇ ರೀತಿ ಶಿರಸಿಯಲ್ಲಿ ಬರ ಕಾಡಿದಾಗ ಭಗೀರಥರಂತೆ ಕೆಲಸ ಮಾಡಿ ನೀರು ತಂದಿದ್ದಾರೆ ಪಬ್ಲಿಕ್ ಹೀರೋ ಶ್ರೀನಿವಾಸ್ ಹೆಬ್ಬಾರ್.

    ಮೂಲತಃ ಕುಮಟಾದವರಾದ ಶ್ರೀನಿವಾಸ್ ಉದ್ಯಮಿಯಾಗಿ ಶಿರಸಿ ಭಾಗದಲ್ಲಿ ಸಮಾಜ ಸೇವೆ ಮೂಲಕ ಹೆಸರು ಮಾಡಿದ್ದಾರೆ. ಹಸಿರಿನಿಂದ ಸಮೃದ್ಧವಾಗಿದ್ದರೂ ಮಳೆ ಕೊರತೆಯಿಂದಾಗಿ 2016-17ರಲ್ಲಿ ಶಿರಸಿ ನೀರಿನ ಸಮಸ್ಯೆ ಎದುರಾಗಿತ್ತು. ಜಿಲ್ಲಾಡಳಿತ ಕೈಚೆಲ್ಲಿದಾಗ ಶ್ರೀನಿವಾಸ್ ಹೆಬ್ಬಾರ್ ಅಧ್ಯಕ್ಷತೆಯಲ್ಲಿ `ಶಿರಸಿ ಜೀವಜಲ ಕಾರ್ಯಪಡೆ’ ರಚನೆಯಾಯ್ತು. 2017 ಫೆಬ್ರವರಿ 28ರಂದು ಶಿರಸಿಯ ಆನೆಹೊಂಡ ಕೆರೆಯ ಹೂಳೆತ್ತಲು ಜನ, ದಾನಿಗಳು 25 ಲಕ್ಷ ಹಣ ನೀಡಿದ್ರು. ಆದರೂ ಸಾಲಲಿಲ್ಲ. ಆಗ ಶ್ರೀನಿವಾಸರು ಸ್ವಂತ ಕರ್ಚಿನಿಂದ ಹಿಟಾಚಿ, ಜೆಸಿಬಿ ಹಾಗೂ ಟಿಪ್ಪರ್ ಖರೀದಿಸಿ ಉಚಿತವಾಗಿ 7 ಕೆರೆಗಳ ಹೂಳೆತ್ತಿ ಅಭಿವೃದ್ಧಿ ಮಾಡಿದ್ದಾರೆ.

    ಕೆರೆ ಹೂಳು ಒಂದು ಸಮಸ್ಯೆಯಾದ್ರೆ, ಒತ್ತುವರಿ ಮತ್ತೊಂದು ತಲೆನೋವಾಗಿತ್ತು. ಆದರೆ ಹೆಬ್ಬಾರ್ ಅವರ ಸಂಧಾನದಿಂದ ಅರ್ಧ ಎಕರೆ ವಿಸ್ತೀರ್ಣವಿದ್ದ ಆನೆಹೊಂಡದ ಕೆರೆ ಈಗ 12 ಅಡಿ ತುಂಬಿ 80 ಲಕ್ಷ ಲೀಟರ್ ನೀರು ಸಂಗ್ರಹವಾಗಿದೆ. ಇದರಂತೆ ಶಿರಸಿಯ 1 ಎಕರೆ ವಿಸ್ತೀರ್ಣವಿದ್ದ ಹಳದೋಟದ ಕೆರೆ ಹೂಳೆತ್ತಿ 1 ಕೋಟಿ ನೀರು, ಸುಪ್ರಸನ್ನ ಕೆರೆ, ಬೆಳ್ಳಕ್ಕಿ ಕೆರೆ ಹೊಳೆತ್ತಿ ಮೂರುವರೆ ಕೋಟಿ ಲೀಟರ್ ನೀರು ಸಂಗ್ರಹವಾಗುವಂತೆ ಮಾಡಿದ್ದಾರೆ. ಇದರಿಂದ 200ಕ್ಕೂ ಹೆಚ್ಚು ಬಾವಿಗಳಲ್ಲಿ ನೀರು ತುಂಬಿದೆ ಎಂದು ಸ್ಥಳೀಯ ನಿವಾಸಿ ವಿ ಎಂ ಹೆಗಡೆ ಹೇಳಿದ್ದಾರೆ.

    ಇದರ ಜೊತೆಗೆ, ಧಾರ್ಮಿಕ ಮಹತ್ವ ಹೊಂದಿದ್ದ ಐತಿಹಾಸಿಕ ಶಂಕರ ಹೊಂಡವನ್ನು ಹೂಳು, ಗಲೀಜು ಮುಕ್ತಗೊಳಿಸಿದ್ದಾರೆ. ಕೆರೆ ಸುತ್ತಲೂ ವಾಕಿಂಗ್ ಟ್ರಾಕ್, ವಿಹಾರಕ್ಕೆ ಪೆಡಲ್ ಬೋಟ್, ವ್ಯಾಯಾಮಕ್ಕೆ ಸಲಕರಣೆ ವ್ಯವಸ್ಥೆ ಮಾಡಿದ್ದಾರೆ. ವಿದ್ಯುತ್ ಬಿಲ್ ಸಹ ತಾವೇ ಭರಿಸುತ್ತಿದ್ದಾರೆ. ಸ್ಥಳಕ್ಕೆ ರಾಕಿಂಗ್ ಸ್ಟಾರ್ ಯಶ್, ಪ್ರಕಾಶ್ ರೈ ಭೇಟಿ ನೀಡಿ ಖುಷಿ ವ್ಯಕ್ತಪಡಿಸಿದ್ದಾರೆ.

    https://www.youtube.com/watch?v=e-xj22YzrZ8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಎಂ ಮೇಲೆ ಉತ್ತರ ಕರ್ನಾಟಕ ನಿಂಬೆ ರೈತರು ಗರಂ!

    ಸಿಎಂ ಮೇಲೆ ಉತ್ತರ ಕರ್ನಾಟಕ ನಿಂಬೆ ರೈತರು ಗರಂ!

    ವಿಜಯಪುರ: ಸಿಎಂ ಕುಮಾರಸ್ವಾಮಿ ರೈತರ ಸಾಲ ಮನ್ನ ಮಾಡಿದ್ದರೂ ಅವರ ಮೇಲೆ ಮತ್ತೆ ಉತ್ತರ ಕರ್ನಾಟಕದ ರೈತರು ಗರಂ ಆಗಿದ್ದಾರೆ.

    ನಿಂಬೆನಾಡು ವಿಜಯಪುರದ ಜನ ಬರದ ನಡುವೆಯೂ ಹೇಗೋ ಸಾಲಸೂಲ ಮಾಡಿ ನಿಂಬೆ ಬೆಳೆದಿದ್ದರು. ಆದರೆ ನೀರಿನ ಕೊರತೆಯಿಂದಾಗಿ ಕೈಗೆ ಬಂದ ಬೆಳೆ ಒಣಗಿ ಹೋಗುತ್ತಿದ್ದು ರೈತರು ಕಂಗೆಟ್ಟಿದ್ದಾರೆ. ಇದನ್ನೂ ಓದಿ: ಇಂಡಿ ನಿಂಬೆಗೆ ಜಿಐ ಮಾನ್ಯತೆ ಪಡೆಯಲು ಸದ್ದಿಲ್ಲದೆ ನಡೆಯುತ್ತಿದೆ ಸಿದ್ಧತೆ

    ಬೇರೆ ದಾರಿ ಇಲ್ಲದೆ ರೈತರು ಇದೀಗ ಸಾಲಮಾಡಿ ದುಡ್ಡು ಕೊಟ್ಟು ನೀರು ಕೊಂಡುಕೊಂಡು ಜಮೀನುಗಳಿಗೆ ನೀರುಣಿಸುತ್ತಿದ್ದಾರೆ. ಇನ್ನು ಕಾಲುವೆಗಳಿದ್ದರೂ ಅದರಲ್ಲಿ ನೀರಿಲ್ಲ. ಅಲ್ಲದೇ ಜಿಲ್ಲೆಯ ನಿಂಬೆ ಪ್ರದೇಶವಾದ ಇಂಡಿ ತಾಲೂಕು ಬರಪೀಡಿತ ಅಂತ ಘೋಷಣೆಯಾಗಿದ್ದರೂ ಈವರೆಗೆ ಅಲ್ಲಿನ ರೈತರಿಗೆ ಪರಿಹಾರ ಬಂದಿಲ್ಲ.

    ಕೇಂದ್ರ ಬರ ಅಧ್ಯಯನ ತಂಡ ಸೇರಿದಂತೆ ರಾಜ್ಯ ಬರ ಅಧ್ಯಯನ ತಂಡ ಭೇಟಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರು ಸರ್ಕಾರ ರೈತರ ಕಣ್ಣೊರೆಸಲು ಮುಂದಾಗಬೇಕು ಎಂದು ರೈತರು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬರ ಅಧ್ಯಯನಕ್ಕೆ ಬಂದಿದ್ದ ಕೇಂದ್ರದ ತಂಡಕ್ಕೆ, ಸರ್ಕಾರಿ ಶಾಲೆಯಲ್ಲಿ ಭರ್ಜರಿ ಬಾಡೂಟ ಹಾಕಿಸಿದ ಜಿಲ್ಲಾಧಿಕಾರಿ

    ಬರ ಅಧ್ಯಯನಕ್ಕೆ ಬಂದಿದ್ದ ಕೇಂದ್ರದ ತಂಡಕ್ಕೆ, ಸರ್ಕಾರಿ ಶಾಲೆಯಲ್ಲಿ ಭರ್ಜರಿ ಬಾಡೂಟ ಹಾಕಿಸಿದ ಜಿಲ್ಲಾಧಿಕಾರಿ

    ದಾವಣಗೆರೆ: ಜಿಲ್ಲೆಯ ಹರಪ್ಪನಹಳ್ಳಿಯಲ್ಲಿ ಬರ ಅಧ್ಯಯನಕ್ಕೆಂದು ಕೇಂದ್ರದಿಂದ ಬಂದಿದ್ದ ತಂಡವನ್ನು ಮೆಚ್ಚಿಸಲು ಜಿಲ್ಲಾಧಿಕಾರಿಗಳು ಸರ್ಕಾರಿ ಶಾಲೆಯಲ್ಲಿ ಭರ್ಜರಿ ಬಾಡೂಟ ಹಾಕಿಸಿದ್ದಾರೆ.

    ಹೌದು, ಬರಗಾಲ ಪೀಡಿತ ತಾಲೂಕು ಎಂದೇ ಹೆಸರು ಪಡೆದಿರುವ ಹರಪ್ಪನಹಳ್ಳಿ ಪಟ್ಟಣಕ್ಕೆ ಭಾನುವಾರ ಕೇಂದ್ರದ ಬರ ಅಧ್ಯಯನ ತಂಡ ಭೇಟಿ ನೀಡಿತ್ತು. ಈ ವೇಳೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅಧಿಕಾರಿಗಳನ್ನು ಮೆಚ್ಚಿಸಲು ಸರ್ಕಾರಿ ಶಾಲೆಯಲ್ಲೇ ಭರ್ಜರಿ ಬಾಡೂಟವನ್ನು ಹಾಕಿಸಿದ್ದಾರೆ.

    ಜಿಲ್ಲಾಧಿಕಾರಿಗಳ ಸೂಚನೆಯಂತೆ ಹರಪ್ಪನಹಳ್ಳಿ ಪಟ್ಟಣದ ನಜೀರ್ ನಗರದ ಮೋರಾರ್ಜಿ ವಸತಿಯುತ ಶಾಲೆಯಲ್ಲಿ ಕೇಂದ್ರ ಅಧಿಕಾರಿಗಳಿಗೆಂದೇ ಬಾಡೂಟ ಸಿದ್ದಪಡಿಸಿದ್ದರು. ಇದರಲ್ಲಿ ಚಿಕನ್ ಮಸಾಲ, ಮಟನ್ ಚಾಪ್ಸ್, ಎಗ್ ಮಸಾಲ, ರೋಟಿ ಹಾಗೂ ರಾಗಿಮುದ್ದೆಯನ್ನು ಮಾಡಿಸಿದ್ದರು.

    ಜಿಲ್ಲಾಧಿಕಾರಿಗಳ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ರೈತರು, ತಾಲೂಕಿನ ಬರ ಅಧ್ಯಯನಕ್ಕಿಂತ ಕೇಂದ್ರದ ತಂಡಕ್ಕೆ ಬಾಡೂಟವೇ ಪ್ರಮುಖವಾಗಿತ್ತು. ಕೇವಲ ಎರಡು ಮೂರು ಕಡೆ ಪರಿಶೀಲನೆ ನಡೆಸಿ, ಹೋದ್ಯಾ ಪುಟ್ಟ, ಬಂದ್ಯಾ ಪುಟ್ಟ ಎಂಬಂತೆ ಅಧ್ಯಯನ ಮಾಡಿದ್ದಾರೆ. ಕಳೆದ ಬಾರಿಯೂ ಇದೇ ರೀತಿ ಅಧ್ಯಯನ ಮಾಡಿಕೊಂಡು ಹೋಗಿದ್ದರು. ಆದರೆ ರೈತರಿಗೆ ಪರಿಹಾರ ನೀಡುವಲ್ಲಿ ವಿಫಲವಾಗಿದ್ದರು. ಈಗ ಪುನಃ ಅದೇ ರೀತಿ ಈ ಬಾರಿಯೂ ಮಾಡಿಕೊಂಡು ಹೋಗುತ್ತಿದ್ದಾರೆಂದು ಅಸಮಾಧಾನ ಹೊರಹಾಕಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • 15 ವರ್ಷದಿಂದ ಫ್ಲೋರೈಡ್ ನೀರು- ಗ್ರಾಮಸ್ಥರಿಗೆ ಅನಾರೋಗ್ಯದಿಂದ ಸಾವಿನ ಭೀತಿ..!

    15 ವರ್ಷದಿಂದ ಫ್ಲೋರೈಡ್ ನೀರು- ಗ್ರಾಮಸ್ಥರಿಗೆ ಅನಾರೋಗ್ಯದಿಂದ ಸಾವಿನ ಭೀತಿ..!

    ರಾಯಚೂರು: ಬಿಸಿಲನಾಡು ರಾಯಚೂರಲ್ಲಿ ಕುಡಿಯೋ ನೀರಿನ ತೊಂದರೆ ಒಂದೆಡೆಯಾದರೆ ನಾಗಲಾಪುರ ಗ್ರಾಮದಲ್ಲಿ ನೀರು ಕುಡಿಯುವುದೇ ದೊಡ್ಡ ಸಮಸ್ಯೆಯಾಗಿದೆ. ಅದರಲ್ಲೂ ಬೋರ್‍ವೆಲ್ ನೀರು ಕುಡಿದರೆ ಸಾವಿನ ಭೀತಿ ಎದುರಾಗಿದೆ.

    ರಾಯಚೂರು ತಾಲೂಕಿನ ನಾಗಲಾಪುರ ಸುಮಾರು ನೂರು ಮನೆಗಳಿರೋ ಗ್ರಾಮ. ಇಲ್ಲಿ 500 ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ಇದರಲ್ಲಿ 250 ಕ್ಕೂ ಹೆಚ್ಚು ಜನ ಒಂದಿಲ್ಲೊಂದು ಅನಾರೋಗ್ಯ ಸಮಸ್ಯೆಯನ್ನ ಎದುರಿಸುತ್ತಲೇ ಇದ್ದಾರೆ. ಇವರಲ್ಲಿ 20 ಜನ ಈಗಾಗಲೇ ಸಂಪೂರ್ಣವಾಗಿ ಹಾಸಿಗೆ ಹಿಡಿದಿದ್ದಾರೆ. ಕೆಲವರು ಕೋಲು, ವಾಕಿಂಗ್ ಸ್ಟಿಕ್ ಸಹಾಯದಿಂದ ಓಡಾಡುತ್ತಿದ್ದಾರೆ. ಬಹಳ ಜನ ನಿತ್ಯ ಕೈಕಾಲು ನೋವು ಅನುಭವಿಸುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಇವರು ನಿತ್ಯ ಕುಡಿಯುತ್ತಿರೋ ನೀರು. ಇಲ್ಲಿನ ಜನ ಕಳೆದ 15 ವರ್ಷದಿಂದ ಫ್ಲೋರೈಡ್ ನೀರೇ ಕುಡಿಯುತ್ತಿದ್ದಾರೆ.

    ಈ ಗ್ರಾಮಕ್ಕೆ ನೀರಿನ ಮೂಲವೇ ಇಲ್ಲದ ಕಾರಣ ಪಕ್ಕದ ಗ್ರಾಮ ನಾಗಲಾಪುರ ಕ್ಯಾಂಪ್‍ನಿಂದ ಕೊಳವೆಬಾವಿ ನೀರನ್ನ ಇಲ್ಲಿಗೆ ಸರಬರಾಜು ಮಾಡಲಾಗುತ್ತಿದೆ. ಕಳೆದ 15 ವರ್ಷಗಳಿಂದ ಈ ನೀರನ್ನ ಕುಡಿಯುತ್ತಿರೋ ಜನ ನರ, ಕೀಲು, ಮೂಳೆ ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ಗ್ರಾಮದ ನೀರಿನ ಮಾದರಿಯನ್ನ ಪಬ್ಲಿಕ್ ಟಿವಿ ಪ್ರಯೋಗಾಲಯಕ್ಕೆ ಕಳುಹಿಸಿ ವರದಿಯನ್ನ ಪಡೆದಿದೆ. ವರದಿಯಿಂದ ನೀರಿನಲ್ಲಿ ಫ್ಲೋರೈಡ್, ನೈಟ್ರೇಟ್, ಸಲ್ಫೆಟ್ ಅಂಶ ಮೀತಿಮೀರಿ ಇರೋದು ಬಯಲಾಗಿದೆ. ಒಂದು ಲೀಟರ್ ನೀರಿಗೆ 200 ರಿಂದ 400 ಮಿಲಿಗ್ರಾಂ ಇರಬೇಕಾದ ಸಲ್ಫೇಟ್ 700 ಮಿಲಿಗ್ರಾಂ ಇದೆ. 1 ರಿಂದ 1.5 ಮಿಲಿಗ್ರಾಂ ಇರಬೇಕಾದ ಫ್ಲೋರೈಡ್ 2.01 ಮಿಲಿಗ್ರಾಂ ಇದೆ.

    ಈ ಫ್ಲೋರೈಡ್ ನೀರು ಕುಡಿದ ಗ್ರಾಮಸ್ಥರು ಸಾವಿನ ಭೀತಿ ಎದುರಿಸುತ್ತಿದ್ದಾರೆ. ಸಂಬಂಧಪಟ್ಟವರು ಇನ್ನಾದ್ರೂ ಎಚ್ಚೆತ್ತುಕೊಂಡು ಗ್ರಾಮಕ್ಕೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಜ್ಯದ 86 ತಾಲೂಕುಗಳು ಬರಪೀಡಿತ

    ರಾಜ್ಯದ 86 ತಾಲೂಕುಗಳು ಬರಪೀಡಿತ

    ಬೆಂಗಳೂರು: ರಾಜ್ಯದ ಕೆಲವೆಡೆ ಅತೀವೃಷ್ಟಿ, ಬಹುತೇಕ ಕಡೆ ಅನಾವೃಷ್ಟಿ. ಮುಂಗಾರು ಮಳೆ ಜೊತೆಗೆ ಹಿಂಗಾರು ಮಳೆಯೂ ಕೈಕೊಟ್ಟ ಪರಿಣಾಮ 23 ಜಿಲ್ಲೆಗಳ 86 ತಾಲೂಕುಗಳಲ್ಲಿ ಬರ ತಾಂಡವವಾಡುತ್ತಿದೆ. ಮಲೆನಾಡು, ಕರಾವಳಿ ಭಾಗ ಹೊರತುಪಡಿಸಿದರೆ ಉಳಿದೆಲ್ಲಾ ಕಡೆ ಮಳೆ ಕೊರತೆ ಉಂಟಾಗಿದೆ.

    ಕೇಂದ್ರ ಸರ್ಕಾರ ನಿಗದಿ ಮಾಡಿದ ಮಾನದಂಡಗಳ ಅನುಸಾರ 86 ತಾಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತ ಅಂತಾ ಘೋಷಿಸಿದೆ. ಸಚಿವ ದೇಶಪಾಂಡೆ ನೇತೃತ್ವದಲ್ಲಿ ನಡೆದ ಸಂಪುಟ ಉಪಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬರದಿಂದಾಗಿ ಸುಮಾರು 8 ಸಾವಿರ ಕೋಟಿ ಮೌಲ್ಯದ ಬೆಳೆ ನಷ್ಟ ಸಂಭವಿಸಿದೆ. 15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ಒಣಗಿ ಹೋಗಿದೆ.

    ಬರಪೀಡಿತ ತಾಲೂಕುಗಳಲ್ಲಿ ಕುಡಿಯುವ ನೀರಿಗೆಂದು ತುರ್ತಾಗಿ 43 ಕೋಟಿ ರೂಪಾಯಿ. ಜಾನುವಾರುಗಳ ಮೇವಿಗೆಂದು ಸರ್ಕಾರ 15 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಈ ನಡುವೆ ರಾಜ್ಯದ ಅತೀವೃಷ್ಟಿ ಮತ್ತು ಅನಾವೃಷ್ಟಿಯ ಬಗ್ಗೆ ಅಧ್ಯಯನ ನಡೆಸಲು ಇಂದು ಕೇಂದ್ರ ತಂಡ ರಾಜ್ಯಕ್ಕೆ ಆಗಮಿಸುತ್ತಿದೆ.

    ರಾಜ್ಯದ ಯಾವ ಜಿಲ್ಲೆಗಳಲ್ಲಿ ಎಷ್ಟೆಷ್ಟು ತಾಲೂಕುಗಳು ಬರಪೀಡಿತ ಪಟ್ಟಿ ಇಲ್ಲಿದೆ

    * ಬೆಂಗಳೂರು ಗ್ರಾಮಾಂತರ – 1, ರಾಮನಗರ -2, ಕೋಲಾರ – 6
    * ಚಿಕ್ಕಬಳ್ಳಾಪುರ – 6, ತುಮಕೂರು – 9, ಚಿತ್ರದುರ್ಗ – 4
    * ದಾವಣಗೆರೆ – 2, ಚಾಮರಾಜನಗರ – 2, ಮಂಡ್ಯ – 5
    * ಬಳ್ಳಾರಿ – 6, ಕೊಪ್ಪಳ- 4, ರಾಯಚೂರು – 5
    * ಕಲಬುರ್ಗಿ – 6, ಯಾದಗಿರಿ -3, ಬೀದರ್ – 2
    * ಬೆಳಗಾವಿ – 2, ಬಾಗಲಕೋಟೆ – 4, ವಿಜಯಪುರ – 5
    * ಗದಗ – 5, ಹಾವೇರಿ – 1, ಧಾರವಾಡ – 2
    * ಹಾಸನ – 3, ಚಿಕ್ಕಮಗಳೂರು – 1

    ಮಂಗಳವಾರ ಸಂಜೆ ಮೈಸೂರು, ಕೊಡಗು, ಹಾಸನ, ಮಂಡ್ಯ, ತುಮಕೂರು, ನೆಲಮಂಗಲ ಸೇರಿ ರಾಜ್ಯದ ಹಲವೆಡೆ ಗುಡುಗು ಸಿಲಿಡಿಲು ಸಹಿತ ಮಳೆ ಆಗಿದೆ. ತುಮಕೂರು ಜಿಲ್ಲೆ ಶಿರಾ ತಾಲೂಕಿನ ತಗರುಗುಂಟೆಯಲ್ಲಿ ಸಿಡಿಲು ಬಡಿದು ನವೀನ್ ಎಂಬ ಯುವಕ ಸಾವನ್ನಪ್ಪಿದ್ದಾನೆ. ತಾಲೂಕಿನ ಗುಟ್ಟೆ ಗ್ರಾಮದಲ್ಲಿ ಸಿಡಿಲು ಬಡಿದು ಹಸು, ಕೋತಿ ಸಾವನ್ನಪ್ಪಿದೆ.

    ಮೈಸೂರಲ್ಲಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಮಳೆ ಅಡ್ಡಿ ಉಂಟು ಮಾಡಿತು. ಮಹಾರಾಣಿ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಳೆಯಲ್ಲೇ ವಿದ್ಯಾರ್ಥಿಗಳು ಸಿಎಂ ಭಾಷಣ ಆಲಿಸಿದರು. ಮಂಡ್ಯ, ಹಾಸನದಲ್ಲಿ ಬಿದ್ದ ಮಳೆಯಿಂದ ರೈತ ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾನೆ. ಕೊಡಗು ಜಿಲ್ಲೆಯ ಮಕ್ಕಂದೂರು, ನಾಪೋಕ್ಲು ಸೇರಿ ಹಲವೆಡೆ ಧಾರಾಕಾರ ಮಳೆ ಸುರಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಳೆ ಕೊರತೆ: ಮೊಳಕೆ ಬಾರದ ಬಿತ್ತನೆ ಬೀಜ-ಸಂಕಷ್ಟದಲ್ಲಿ ರೈತ

    ಮಳೆ ಕೊರತೆ: ಮೊಳಕೆ ಬಾರದ ಬಿತ್ತನೆ ಬೀಜ-ಸಂಕಷ್ಟದಲ್ಲಿ ರೈತ

    ತುಮಕೂರು: ಕೊಡಗು, ಕರಾವಳಿ ಪ್ರದೇಶದಲ್ಲಿ ಮಹಾಮಳೆಗೆ ಜನರು ತತ್ತರಿಸಿದ್ದರೆ, ಇತ್ತ ತುಮಕೂರು ಜಿಲ್ಲೆಯಲ್ಲಿ ನಿಯಮಿತ ಮಳೆ ಬೀಳದೆ ಮತ್ತೆ ಬರ ಆವರಿಸುವ ಆತಂಕ ಜನರಲ್ಲಿ ಎದುರಾಗಿದೆ.

    ಮಳೆಯನ್ನೇ ನಂಬಿ ರೈತರು ಈಗಾಗಲೇ ಬಿತ್ತನೆ ಕಾರ್ಯವನ್ನು ಪೂರ್ಣಗೊಳಿಸಿದ್ದು, ಮಳೆ ಕೈಕೊಟ್ಟ ಕಾರಣದಿಂದ ಬಿತ್ತನೆ ಮಾಡಿದ್ದ ಬೆಳೆ ನೆಲಕಚ್ಚಿವೆ. ಜಿಲ್ಲೆಯಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ರಾಗಿ, ಭತ್ತ, ಶೇಂಗಾ ಮಳೆ ಇಲ್ಲದೆ ಕಮರಿ ಹೋಗಿವೆ.

    ಈಗಾಗಲೇ ಜಿಲ್ಲೆಯಲ್ಲಿ ಮುಂಗಾಯ ಕೈಕೊಟ್ಟಿದ್ದು, ಈ ವರ್ಷವಾದರು ಉತ್ತಮ ಬೆಳೆ ನಿರೀಕ್ಷೆ ಇದ್ದ ರೈತರು ನಿರಾಸೆ ಅನುಭವಿಸಿದ್ದಾರೆ. ಈ ಕುರಿತು ಪಬ್ಲಿಕ್ ಟಿವಿ ಯೊಂದಿಗೆ ತಮ್ಮ ಅಳಲು ತೊಡಿಕೊಂಡಿರುವ ರೈತರು, ಕಳೆದ ಬಾರಿಯೂ ಮಳೆ ಕೈಕೊಟ್ಟು ನಷ್ಟ ಅನುಭವಿಸಿದ್ದೆವು. ಈ ಬಾರಿಯೂ ಬರ ಪರಿಸ್ಥಿತಿ ಮುಂದುವರಿದಿದ್ದು, ಮಲೆನಾಡು ಪ್ರದೇಶದಲ್ಲಿ ಭಾರೀ ಮಳೆಯಾದರು ಕೂಡ ನಮ್ಮಲ್ಲಿ ಮೋಡಗಳು ಮಾತ್ರ ಕಾಣಿಸಿಕೊಳ್ಳುತ್ತಿದೆ. ಆದರೆ ಇದುವರೆಗೂ ಒಂದು ಹನಿ ಮಳೆ ಬಂದಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ಬಹುತೇಕ ಸಣ್ಣ ಭೂ ಇಳುವರಿದಾರರೆ ಇರುವ ಕಾರಣ ಅಲ್ಪ ಸ್ವಲ್ಪ ಪ್ರದೇಶದಲ್ಲಿ ವೆಚ್ಚ ಮಾಡಿ ಬಿತ್ತನೆ ಮಾಡಿದ್ದ ರೈತರು ಕೈ ಚೆಲ್ಲಿ ಕೂರುವ ಪರಿಸ್ಥಿತಿ ಎದುರಾಗಿದೆ. ಇನ್ನು ಮಳೆಯ ಕೊರತೆ ಕಾರಣದಿಂದ ಜಾನುವಾರುಗಳ ಮೇವಿಗೂ ಸಮಸ್ಯೆ ಎದುರಾಗಿದ್ದು, ಹೈನುಗಾರಿಕೆಯನ್ನು ಉಪಕಸುಬಾಗಿ ಸ್ವೀಕರಿಸಿದ್ದ ರೈತ ಮಹಿಳೆಯರು ಸಂಕಷ್ಟ ಎದುರಿಸುತ್ತಿದ್ದಾರೆ. ಹಲವು ರೈತರು ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿದ್ದು, ಬರ ಪೀಡಿತ ಜಿಲ್ಲೆ ಎಂದು ಘೋಷಿಸಿ ರೈತರ ಸಂಕಷ್ಟಕ್ಕೆ ನೆರವು ನೀಡಬೇಕು ಎಂದು ಮನವಿ ಮಾಡಿದ್ದಾರೆ.

    ರಾಜ್ಯದ ಒಂದು ಭಾಗದಲ್ಲಿ ಭಾರೀ ಮಳೆಗೆ ಜನ ತತ್ತರಿಸಿ ಮನೆ, ಜಮೀನು ಕಳೆದು ಕೊಂಡು ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರೆ. ಆದರೆ ಜಿಲ್ಲೆಯ ರೈತರು ಮಾತ್ರ ತಲೆ ಮೇಲೆ ಕೈ ಇಟ್ಟು ಮಳೆಗಾಗಿ ಆಕಾಶದತ್ತ ಮುಖ ಮಾಡಿ ನಿಂತಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಬರದ ಚಾಯೆ ಕಾಣಿಸಿಕೊಂಡಿದ್ದು, ಕೋಲಾರ, ಚಿಕ್ಕಬಳ್ಳಾಪುರ, ಕೊಪ್ಪಳ, ಬಳ್ಳಾರಿ, ಕಲಬುರಗಿ ಜಿಲ್ಲೆಗಳ ಹಲವು ತಾಲೂಕು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯ ಕೊರತೆ ಎದುರಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬರ ಇದ್ರೂ ಡಬಲ್ ಆಯ್ತು ತಮಿಳುನಾಡು ಶಾಸಕರ ಸಂಬಳ

    ಬರ ಇದ್ರೂ ಡಬಲ್ ಆಯ್ತು ತಮಿಳುನಾಡು ಶಾಸಕರ ಸಂಬಳ

    ಚೆನ್ನೈ: ತಮಿಳುನಾಡಿನಲ್ಲಿ ಬರವಿದ್ದರೂ ಅಲ್ಲಿನ ಸರ್ಕಾರ ಶಾಸಕರಿಗೆ ಮಾತ್ರ ಭರಪೂರ ವೇತನವನ್ನು ಪ್ರಕಟಿಸಿದೆ. ಶಾಸಕರ ವೇತನವನ್ನು 1,05,000 ರೂಪಾಯಿಗೆ ಏರಿಸಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಪ್ರಕಟಿಸಿದ್ದಾರೆ.

    ಶಾಸಕರ ಮಾಸಿಕ ಸಂಬಳವನ್ನು 55 ಸಾವಿರ ರೂ. ನಿಂದ 1.05 ಲಕ್ಷ ರೂ. ಏರಿಸಲಾಗುವುದು ಎಂದು ಅವರು ಸದನಲ್ಲಿ ಪ್ರಕಟಿಸಿದರು.

    ಅಷ್ಟೇ ಅಲ್ಲದೇ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿಗೆ ನೀಡಲಾಗುತ್ತಿದ್ದ ಅನುದಾನವನ್ನು 2 ಕೋಟಿ ರೂ. ನಿಂದ 2.5 ಕೋಟಿ ರೂ. ಏರಿಸಲಾಗಿದೆ. ಪರಿಷ್ಕೃತ ವೇತನವು ಜುಲೈ 1ರಿಂದಲೇ ಜಾರಿಯಾಗಲಿದೆ

    ತಮಿಳುನಾಡು ಸರ್ಕಾರ ಈ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಹಲವು ರಾಜ್ಯಗಳು ಶಾಸಕರ ಸಂಬಳವನ್ನು ಏರಿಸುವ ಸಾಧ್ಯತೆಯಿದೆ.

    ಕರ್ನಾಟಕದಲ್ಲಿ ಶಾಸಕರಿಗೆ ಸಂಬಳ ಎಷ್ಟಿದೆ?
    ರಾಜ್ಯಸರ್ಕಾರ 2015ರ ಮಾರ್ಚ್ ನಲ್ಲಿ ಶಾಸಕರ ಸಂಬಳವನ್ನು ಏರಿಕೆ ಮಾಡಿತ್ತು. ವೇತನ 25 ಸಾವಿರ ರೂ., ಆಪ್ತ ಸಹಾಯಕರ ವೇತನ 10 ಸಾವಿರ ರೂ., ಅಂಚೆ ವೆಚ್ಚ 5 ಸಾವಿರ ರೂ., ದೂರವಾಣಿ ವೆಚ್ಚ 20 ಸಾವಿರ ರೂ., ಕ್ಷೇತ್ರ ಭತ್ಯೆ 40 ಸಾವಿರ ರೂ., ಕ್ಷೇತ್ರ ಪ್ರಯಾಣ ಭತ್ಯೆ 45 ಸಾವಿರ ರೂ., ಒಟ್ಟು ಮೊತ್ತ1.40 ಲಕ್ಷ ರೂ. ಸಿಗುತ್ತದೆ.

    ಇದನ್ನೂ ಓದಿ: ನಮ್ಮ ಸಂಸದರಿಗೆ ಈಗ ಎಷ್ಟು ಸಂಬಳ? ಭತ್ಯೆ ಎಷ್ಟು ಸಿಗುತ್ತೆ?

    ಇದನ್ನೂ ಓದಿ: ಭಾರತೀಯ ಮೂಲದ ಸಿಇಒ ಸುಂದರ್ ಪಿಚೈಗೆ ಗೂಗಲ್ 2016ರಲ್ಲಿ ನೀಡಿದ ಸಂಬಳ ಎಷ್ಟು ಗೊತ್ತೆ?

  • ಸಾಲ ಮನ್ನಾ ಖುಷಿಯಲ್ಲಿರೋ ಸಿಎಂಗೆ ಕೇಂದ್ರದಿಂದ ಖಡಕ್ ಎಚ್ಚರಿಕೆ

    ಸಾಲ ಮನ್ನಾ ಖುಷಿಯಲ್ಲಿರೋ ಸಿಎಂಗೆ ಕೇಂದ್ರದಿಂದ ಖಡಕ್ ಎಚ್ಚರಿಕೆ

    ಬೆಂಗಳೂರು: ರೈತರ ಸಾಲ ಮನ್ನಾ ಖುಷಿಯಲ್ಲಿರುವ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಖಡಕ್ ವಾರ್ನಿಂಗ್ ಕೊಟ್ಟಿದೆ.

    ರೈತರ ಉದ್ದಾರಕ್ಕಾಗಿ, ಉತ್ತಮ ರಸ್ತೆಗಳ ನಿರ್ಮಾಣದ ಹೆಸರಿನಲ್ಲಿ ಬಹುರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ತೆಗೆದುಕೊಂಡಿರುವ ಸಾಲವನ್ನೇ ಸರಿಯಾಗಿಯೇ ಬಳಸಿಕೊಂಡಿಲ್ಲ ಅಂತ ಗರಂ ಆಗಿ ಪತ್ರ ಬರೆದಿದೆ.

    ಮಿಲಿಯನ್ ಗಟ್ಲೆ ಸಾಲವಿದೆ.  ಆದರೆ ಆ ಯೋಜನೆಗಳು ಮಾತ್ರ ಶೇ.20ರಷ್ಟು ಮುಗಿದಿಲ್ಲ. ಇನ್ನು ಆ ಯೋಜನೆಗೆ ನಿಗದಿಪಡಿಸಿರುವ ಸಮಯ ಶೇ. 60ರಷ್ಟು ಮುಗಿದಿದೆ ಅಂತಾ ಖಾರವಾಗಿ ಪತ್ರಬರೆಯಲಾಗಿದೆ.

    ಕೇಂದ್ರ ಆರ್ಥಿಕ ವ್ಯವಹಾರಗಳ ಇಲಾಖೆಯು ಕಾರ್ಯದರ್ಶಿ ಪತ್ರ ಬರೆದಿದ್ದು ಈ ಕೂಡಲೇ ಆ ವಿಳಂಬವನ್ನು ತಪ್ಪಿಸಲು ಕ್ರಮ ಕೈಗೊಳ್ಳಿ ಅಂಥ ತಾಕಿತು ಮಾಡಿದ್ದಾರೆ.

    ಡ್ಯಾಂ ಪುನರ್ ವಸತಿ ಮತ್ತು ನಿರ್ವಹಣೆ ಯೋಜನೆ, ಸಮಗ್ರ ಕರ್ನಾಟಕ ಜಲಸಂಪನ್ಮೂಲ ನಿರ್ವಹಣಾ ಯೋಜನೆಗಳಲ್ಲಿ ಪ್ರಗತಿಯಾಗಿಲ್ಲ ಅಂತ ತಿಳಿಸಲಾಗಿದೆ. 2011ರಲ್ಲಿ 1357 ಮಿಲಿಯನ್ ಡಾಲರ್‍ಗಳು ಸಾಲ ಪಡೆಯಲಾಗಿದೆ.ಇದರಲ್ಲಿ ಶೇ. ಅರ್ಧದಷ್ಟು ಹಣ ಕೂಡ ಬಿಡುಗಡೆಯಾಗಿದೆ. ಆದ್ರೆ ಯೋಜನೆಗಳು ಮಾತ್ರ ಶೇ.20ರಷ್ಟು ಪ್ರಗತಿಯಾಗಿಲ್ಲ ತಿಳಿಸಿದೆ.

    ರಸ್ತೆಯ ನಿರ್ಮಾಣ ಯೋಜನೆಗಳಿಗೂ ಎಡಿಬಿ, ಐಬಿಆರ್‍ಡಿ ಹಣಕಾಸು ಸಂಸ್ಥೆಗಳಿಂದ 750 ಕೋಟಿ ಸಾಲ ಪಡೆಯಲಾಗಿದೆ. ಇದನ್ನು ಕೂಡಲೇ ಸರಿಪಡಿಸಿ ಅಂತ ರಾಜ್ಯ ಮುಖ್ಯಕಾರ್ಯದರ್ಶಿಗೆ ಕೇಂದ್ರ ತಾಕಿತು ಮಾಡಿದೆ.

     

     

  • ಮೌಢ್ಯ ವಿರೋಧಿ ಸರ್ಕಾರದಿಂದ ಮೌಢ್ಯಾಚರಣೆ: ಮಳೆಗಾಗಿ ಪರ್ಜನ್ಯ ಹೋಮಕ್ಕೆ ಸಿದ್ಧತೆ

    ಮೌಢ್ಯ ವಿರೋಧಿ ಸರ್ಕಾರದಿಂದ ಮೌಢ್ಯಾಚರಣೆ: ಮಳೆಗಾಗಿ ಪರ್ಜನ್ಯ ಹೋಮಕ್ಕೆ ಸಿದ್ಧತೆ

    ಬೆಂಗಳೂರು: ರಾಜ್ಯದಲ್ಲಿ ರಣಭೀಕರ ಬರ ಇದ್ದರೂ ಸಮರ್ಪಕವಾಗಿ ನಿಭಾಯಿಸದ ಆಡಳಿತ-ವಿಪಕ್ಷ, ರಾಜ್ಯ-ಕೇಂದ್ರ ಅಂತ ಹೇಳಿ ಸರ್ಕಾರ-ಜನಪ್ರತಿನಿಧಿಗಳು ಕೆಸರೆರಚಾಟದಲ್ಲೇ ಕಾಲಕಳೆದ್ರು. ವಿಪಕ್ಷಗಳು ಮಳೆಗಾಲದ ಆರಂಭದಲ್ಲಿ ಬರ ಅಧ್ಯಯನ ಪ್ರವಾಸ ಕೈಗೊಂಡು ನಗೆಪಾಟಲಿಗೀಡಾದ್ರೆ, ಈಗ ಸರ್ಕಾರ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಪರ್ಜನ್ಯ ಹೋಮ ನಡೆಸಲು ಮುಂದಾಗಿದೆ.

    ಅದರಲ್ಲೂ ಮೌಢ್ಯ ವಿರೋಧಿ ಅಂತ ಹೇಳೋ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಕೇರಳ ಪಂಡಿತರನ್ನ ಕರೆಸಿ ನೀರಾವರಿ ನಿಗಮ ಹೋಮ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

    ರಾಜ್ಯದ ಜೀವನದಿಗಳಾದ ಉತ್ತರದ ಕೃಷ್ಣಾನದಿ ಮೂಲದ ಮಹಾಬಲೇಶ್ವರದಲ್ಲಿ ಶುಕ್ರವಾರ, ದಕ್ಷಿಣದ ಕಾವೇರಿ ನದಿಮೂಲ ಭಾಗಮಂಡಲದಲ್ಲಿ ಶನಿವಾರ ಪರ್ಜನ್ಯ ಹೋಮ ನಡೆಸಲು ಸಿದ್ಧತೆ ನಡೆದಿದೆ. ಇದಕ್ಕಾಗಿ ಎರಡೂ ಕಡೆ 20 ಲಕ್ಷ ರೂ. ಖರ್ಚು ಮಾಡಲು ಸರ್ಕಾರ ಮುಂದಾಗಿದೆ.

    ಟಿಆರ್‍ಪಿಗಾಗಿ ಮಾಡ್ತಿದ್ದೀರಿ: ಪರ್ಜನ್ಯ ಹೋಮ ಮಾಡ್ತಿರೋದ್ರ ಬಗ್ಗೆ ಸಂಜೆ 5 ಗಂಟೆ ನ್ಯೂಸ್‍ನಲ್ಲಿ ಜಲಸಂಪನ್ಮೂಲ ಸಚಿವರಾದ ಎಂ.ಬಿ. ಪಾಟೀಲ್ ಅವರನ್ನು ಪಬ್ಲಿಕ್ ಟಿವಿ ಸಂಪರ್ಕಿಸಿತು. ಈ ವೇಳೆ ದೂರವಾಣಿಯಲ್ಲಿ ಮಾತನಾಡಿದ ಸಚಿವರು ಸರ್ಕಾರದ ನಡೆಯನ್ನ ಬಲವಾಗಿ ಸಮರ್ಥಿಸಿಕೊಂಡು, ಇದ್ದಕ್ಕಿದ್ದಂತೆ ಭಾವೋದ್ವೇಗಕ್ಕೆ ಒಳಗಾಗಿ, ಟಿಆರ್‍ಪಿಗಾಗಿ ನೀವಿದನ್ನು ವಿವಾದ ಮಾಡ್ತಿದ್ದೀರಾ ಅಂದ್ರು. ಅಷ್ಟೇ ಅಲ್ಲ, ಇಂಥದ್ದನ್ನ ಕಡಿವಾಣ ಹಾಕೋಕೆ ಸದನ ಸಮಿತಿ ಮಾಡ್ತಿದ್ದೀವಿ ಅಂತ ಹೇಳಿದರು.

    ಈ ಸಂಬಂಧ ಫೇಸ್‍ಬುಕ್‍ನಲ್ಲಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡ ಎಂಬಿ ಪಾಟೀಲ್, ನಗರೀಕರಣದ ಪರಿಣಾಮದಿಂದಾಗಿ ಕರ್ನಾಟಕ ಭೀಕರ ಬರವನ್ನು ಎದುರಿಸುತ್ತಿದೆ. ಹೀಗಾಗಿ ರೈತರ ಸಲಹೆಯ ಮೇರೆಗೆ ನಾವು ಪೂಜೆಯನ್ನು ನಡೆಸುತ್ತಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಪೂಜೆಗೆ ಆಗಮಿಸಬೇಕೆಂದು ಅವರು ಕೇಳೀಕೊಂಡಿದ್ದಾರೆ.

    ನಾವು ನಂಬಲ್ಲ: ಮಳೆಗಾಗಿ ಪರ್ಜನ್ಯ ಹೋಮದ ಮೂಲಕ ಮೌಢ್ಯ ಆಚರಣೆ ಮಾಡ್ತಿರೋ ಸಿಎಂ, ನಾವಿದನ್ನೆಲ್ಲಾ ನಂಬೋದಿಲ್ಲ ಅಂತ ಬೆಂಗಳೂರಿನಲ್ಲಿ ರಾಗ ಎಳೆದಿದ್ದಾರೆ. ವಿಕಾಸಸೌಧದಲ್ಲಿ ಮಕ್ಕಳ ಜೊತೆ ಮಕ್ಕಳ ರಕ್ಷಣೆ, ಆರೋಗ್ಯ, ಶಿಕ್ಷಣ, ಸಂಬಂಧಪಟ್ಟಂತೆ ಸಂವಾದ ನಡೆಸಿದ್ರು.

    ಈ ವೇಳೆ, ಸಿಎಂಗೆ ಮಕ್ಕಳು ಪ್ರಶ್ನೆಗಳ ಸುರಿಮಳೆ ಎದುರಾಯ್ತು. ಅದರಲ್ಲಿ ಗಮನ ಸೆಳೆದಿದ್ದು, ವಾಮಾಚಾರ, ಮೂಢನಂಬಿಕೆ ಹೆಸರಲ್ಲಿ ಮಕ್ಕಳ ಬಲಿ. ಇದರ ಬಗ್ಗೆ ಸರ್ಕಾರ ಯಾವ ಕ್ರಮಕೈಗೊಂಡಿದೆ ಅಂತ ರಾಮನಗರದ ವಿದ್ಯಾರ್ಥಿನಿ ಅಮೂಲ್ಯ ಪ್ರಶ್ನಿಸಿದ್ರು.

    ಉತ್ತರ ಕೊಟ್ಟ ಸಿಎಂ, ಸಮಾಜದಲ್ಲಿ ಮೂಢನಂಬಿಕೆ ಹೆಚ್ಚಿದೆ. ಮೌಢ್ಯದ ವಿರುದ್ಧ ಕಾನೂನಿಗೆ ಚಿಂತನೆ ನಡೆದಿದೆ ಅಂದ್ರು. ತಮ್ಮ ಕಾರಿನ ಮೇಲೆ ಕಾಗೆ ಕೂತದ್ದು, ಚಾಮರಾಜನಗರಕ್ಕೆ ಎಂಟ್ರಿ ಕೊಟ್ಟದ್ದು ಎಲ್ಲವನ್ನೂ ಉದಾಹರಣೆ ಸಹಿತ ವಿವರಿಸಿದ್ರು. ಇದೇ ವೇಳೆ, ನಾನು ಮೊದಲು ಸಿಗರೇಟ್ ಸೇದ್ತಿದೆ. ಸಮಸ್ಯೆ ಆದ ಕಾರಣ ಬಿಟ್ಟುಬಿಟ್ಟೆ ಅಂತ ಹೇಳಿದ್ರು. ಇನ್ನು, ತಂದೆ ಸಾಲತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿ ಕುಟುಂಬಕ್ಕೆ ದಿಕ್ಕಿಲ್ಲದಂತಾಗಿದೆ ಅಂತ ನೋವು ತೋಡಿಕೊಂಡ ರೈತನ ಮಗನಿಗೆ 5 ಲಕ್ಷ ಕೊಡುವಂತೆ ಸಿಎಂ ಸೂಚಿಸಿದ್ರು.

    ಪಬ್ಲಿಕ್ ಟಿವಿಗೆ ನೀರಾವರಿ ಸಚಿವ ಎಂಬಿ ಪಾಟೀಲ್ ಪ್ರತಿಕ್ರಿಯೆ ನೀಡಿದ ವಿಡಿಯೋ ಇಲ್ಲಿದೆ.

    https://www.youtube.com/watch?v=Uz2rsEJ-xKw

  • ಕೊಪ್ಪಳ: ಹನಿ ನೀರಿಗೂ ತತ್ವಾರ, ಆದ್ರೆ ಇಲ್ಲಿ ಪೆಟ್ಟಿ ಅಂಗಡಿಯಲ್ಲೂ ಸಿಗುತ್ತೆ ಮದ್ಯ

    ಕೊಪ್ಪಳ: ಹನಿ ನೀರಿಗೂ ತತ್ವಾರ, ಆದ್ರೆ ಇಲ್ಲಿ ಪೆಟ್ಟಿ ಅಂಗಡಿಯಲ್ಲೂ ಸಿಗುತ್ತೆ ಮದ್ಯ

    ಕೊಪ್ಪಳ: ಜಿಲ್ಲೆಯ ಗಂಗಾವತಿಯಲ್ಲಿ ಬೀದಿಗೊಂದು ಬಾರ್ ಇದೆ. ಸ್ವತಃ ಇಲ್ಲಿನ ಶಾಸಕ ಇಕ್ಬಾಲ್ ಅನ್ಸಾರಿ ಲಿಕ್ಕರ್ ಲಾಬಿ ನಡೆಸ್ತಿದ್ದಾರೆ ಅನ್ನೋದನ್ನ ಮೊನ್ನೆಯಷ್ಟೇ ದಾಖಲೆ ಸಮೇತ ಬಹಿರಂಗಪಡಿಸಿದ್ವಿ. ಆದ್ರೆ ಇಷ್ಟೇ ಅಲ್ಲ ಇಲ್ಲಿ ಸಣ್ಣ ಪುಟ್ಟ ಪಾನ್ ಶಾಪ್, ಕಿರಾಣಿ ಅಂಗಡಿ, ಡಾಬಾ, ಹೋಟೆಲ್‍ಗಳಲ್ಲೂ ಮದ್ಯ ಪೂರೈಕೆ ಆಗ್ತಿದೆ. ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ಈ ಅಕ್ರಮ ದಂಧೆ ಬಯಲಾಗಿದೆ.

    ಈ ಕ್ಷೇತ್ರದ ಜನರು ಹನಿ ಹನಿ ನೀರಿಗೂ ಪರದಾಡುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಸಿ ನೀರು ಪೂರೈಕೆ ಬಗ್ಗೆ ಚಿಂತಿಸಬೇಕಾದ ಇಲ್ಲಿನ ಶಾಸಕರು ಬೀದಿಗೊಂದು ಬಾರ್ ಅಂಗಡಿ ತೆರೆದು ಲಾಭಿ ನಡೆಸ್ತಿದ್ದಾರೆ. ಈ ಕೆಲಸಕ್ಕೆ ಬೇರೆ ಬೇರೆ ಪಕ್ಷದವರ ಕೂಡ ಕೈಜೋಡಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಬಕಾರಿ ಅಧಿಕಾರಿಯನ್ನ ಕೇಳಿದ್ರೆ ಮೇಲಾಧಿಕಾರಿಗಳನ್ನ ಕೇಳಿ ಎಂದು ಉಡಾಫೆ ಉತ್ತರ ನೀಡಿದ್ದಾರೆ.

    ಇನ್ನು ಈ ಕ್ಷೇತ್ರದ ಜನತೆ ಹನಿ ಹನಿ ನೀರಿಗೆ ಪರದಾಡ್ತಿದ್ದಾರೆ. ಕಿಲೋಮೀಟರ್‍ಗಟ್ಟಲೇ ಸೈಕಲ್‍ನಲ್ಲಿ ಹೋಗಿ ನೀರು ತರೋ ಪರಿಸ್ಥಿತಿ ಇದೆ. ಮದ್ಯವನ್ನ ಸಲೀಸಾಗಿ ಒದಗಿಸೋ ನಮ್ಮ ಶಾಸಕರಿಗೆ ನೀರು ಪೂರೈಸೋದು ಮಾತ್ರ ತಿಳೀತಿಲ್ಲ ಅಂತ ಸ್ಥಳೀಯರು ಆರೋಪಿಸಿದ್ದಾರೆ.

    ಇದನ್ನೂ ಓದಿ: ಕೊಪ್ಪಳದಲ್ಲಿ ಶಾಸಕ ಇಕ್ಬಾಲ್ ಅನ್ಸಾರಿ ಮದ್ಯಕೋಟೆ?- ಇಲ್ಲಿ ಎಂಆರ್‍ಪಿಗಿಂತ ದುಪ್ಪಟ್ಟು ವಸೂಲಿ