Tag: ಬರ

  • ರಾಜ್ಯವನ್ನು ಮತ್ತೆ ಆವರಿಸುತ್ತಾ ಭೀಕರ ಕ್ಷಾಮ?

    ರಾಜ್ಯವನ್ನು ಮತ್ತೆ ಆವರಿಸುತ್ತಾ ಭೀಕರ ಕ್ಷಾಮ?

    ಬೆಂಗಳೂರು: ರಾಜ್ಯಕ್ಕೆ ಮತ್ತೊಂದು ಭೀಕರ ಕ್ಷಾಮ ಎದುರಾಗಲಿದೆ. ಮೇ ಹೋಗಿ ಜೂನ್ ಕೂಡ ಮುಗಿಯುತ್ತಾ ಬಂದಿದೆ. ಆದರೂ ರಾಜ್ಯದ ಹಲವೆಡೆ ಮಳೆಯಾಗುತ್ತಿಲ್ಲ. ಜಲಾಶಯಗಳಲ್ಲಿ ನೀರು ಕಾಣಿಸಿಕೊಂಡಿಲ್ಲ. ಬಿತ್ತನೆ ಕಾರ್ಯ ಆಗಿಲ್ಲ. ಹೀಗಾಗಿ ರಾಜ್ಯ ಮತ್ತೊಮ್ಮೆ ಭೀಕರ ಬರಗಾಲವನ್ನು ಎದುರಿಸಲು ಸಜ್ಜಾಗಬೇಕಾಗಿದೆ.

    ರಾಜ್ಯದ 26 ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿದ್ದು, ಕೆರೆ- ಕುಂಟೆಗಳು, ಜಲಾಶಯಗಳು ಒಣಗಿ ಹೋಗಿವೆ. ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆ ಜೋರಾಗಿದೆ. ರೈತರು ಬಿತ್ತನೆ ಮಾಡಲು ಸಾಧ್ಯವಾಗದೇ ಪರದಾಡ್ತಿದ್ದಾರೆ. ಅದರಲ್ಲೂ ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಮಳೆ ಪ್ರಮಾಣದಲ್ಲಿ ಭಾರೀ ಕುಸಿತವಾಗಿದೆ.

    ರಾಜ್ಯದಲ್ಲಿ ಮತ್ತೆ ಭೀಕರ ಬರ?
    ರಾಜ್ಯದಲ್ಲಿ ವಾಡಿಕೆಗಿಂತ ಶೇ.31ರಷ್ಟು ಕಡಿಮೆ ಮಳೆಯಾಗಿದೆ. ಕರಾವಳಿ ಪ್ರದೇಶದಲ್ಲಿ ಶೇ.47, ಮಲೆನಾಡು ಪ್ರದೇಶದಲ್ಲಿ ಶೇ.49ರಷ್ಟು ನೀರಿನ ಕೊರತೆಯಿದೆ. ಕಳೆದ ವರ್ಷ 145 ಟಿಎಂಸಿ ನೀರು ಹರಿದಿದ್ದು, ಈ ಬಾರಿ ಜೂನ್ ನಲ್ಲಿ ಕೇವಲ 6 ಟಿಎಂಸಿ ನೀರು ಮಾತ್ರ ಜಲಾಶಯಗಳಿಗೆ ಹರಿದು ಬಂದಿದೆ.

    ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಕಳೆದ 46 ವರ್ಷಗಳಲ್ಲೇ ಕಡಿಮೆ ನೀರು ಸಂಗ್ರಹವಾಗಿದೆ. ಕಳೆದ ಬಾರಿ 54 ಟಿಎಂಸಿ ನೀರು, ಈ ಬಾರಿ 2.35 ಟಿಎಂಸಿ ನೀರು ಸಂಗ್ರಹವಾಗಿದೆ. ಜುಲೈನಲ್ಲಿ ವಾಡಿಕೆಯಷ್ಟು ಮಳೆ ಸುರಿದರೂ ಜಲಾಶಯಗಳು ತುಂಬುವುದು ಕಷ್ಟವಾಗಲಿದೆ. ಮಳೆಯ ಕೊರತೆಯಿಂದ ಅಂತರ್ಜಲ ಪ್ರಮಾಣ ಶೇ.85 ರಷ್ಟು ಕುಸಿತವಾಗಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೇ ಬೆಂಗಳೂರಿಗೆ ಕುಡಿಯುವ ನೀರು ಸರಬರಾಜು ಕಷ್ಟವಾಗಲಿದೆ ಎಂಬುದಾಗಿ ತಿಳಿದುಬಂದಿದೆ.

  • ಮಳೆಗಾಗಿ ಉಡುಪಿಯಲ್ಲಿ ಬ್ಯಾಂಡ್, ವಾದ್ಯ, ತಾಳ ಮೇಳಗಳೊಂದಿಗೆ ಕಪ್ಪೆ ಮದುವೆ – ವಿಡಿಯೋ ನೋಡಿ

    ಮಳೆಗಾಗಿ ಉಡುಪಿಯಲ್ಲಿ ಬ್ಯಾಂಡ್, ವಾದ್ಯ, ತಾಳ ಮೇಳಗಳೊಂದಿಗೆ ಕಪ್ಪೆ ಮದುವೆ – ವಿಡಿಯೋ ನೋಡಿ

    ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಹಿಂದೆಂದೂ ಕಂಡರಿಯದ ಕುಡಿಯುವ ನೀರಿನ ಬರ ಬಂದಿದೆ. ಮಳೆರಾಯನಿಗೆ ಕಾದ ಜನ ಸುಸ್ತಾಗಿದ್ದಾರೆ. ಈ ಕಾರಣದಿಂದ ಮಳೆಗಾಗಿ ಉಡುಪಿಯಲ್ಲಿ ಕಪ್ಪೆ ಮದುವೆ ಮಾಡಿಸಿದ್ದಾರೆ.

    ಜಿಲ್ಲೆಯಲ್ಲಿ ಮಳೆಬಾರದ ಹಿನ್ನಲೆಯಲ್ಲಿ ಕುಡಿಯುವ ನೀರಿಗೂ ಅಭಾವ ಹೆಚ್ಚಾಗಿದೆ. ಮಳೆ ಬರಲಿ ಎಂದು ಪೂಜೆ-ಪುನಸ್ಕಾರ ಮಾಡಿದ್ದಾರೆ. ಯಾವುದಕ್ಕೂ ವರುಣದೇವ ಜಗ್ಗದ ಕಾರಣ ಇವತ್ತು ಕಪ್ಪೆ ಮದುವೆ ಮಾಡಿಸಿ ಮಳೆಗಾಗಿ ಪ್ರಾರ್ಥನೆ ಮಾಡಿದ್ದಾರೆ.

    ಇಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಮತ್ತು ಪಂಚರತ್ನ ಟ್ರಸ್ಟ್ ಆಯೋಜಿಸಿದ್ದ ಮಂಡೂಕ ಕಲ್ಯಾಣೋತ್ಸವದಲ್ಲಿ ವರ್ಷಾ ಹೆಸರಿನ ವಧು ಕಪ್ಪೆ, ಹಾಗೂ ವರುಣ ಹೆಸರಿನ ವರ ಕಪ್ಪೆಯ ವಿವಾಹ ನಡೆಯಿತು. ಇದಕ್ಕೂ ಮೊದಲು ಕಪ್ಪೆಗಳ ದಿಬ್ಬಣವನ್ನು ಬ್ಯಾಂಡ್, ವಾದ್ಯ, ತಾಳ ಮೇಳದ ನಡುವೆ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚಾರ ಮಾಡಿಸಲಾಯಿತು.

    ನಂತರ ಪ್ರತಿಷ್ಠಿತ ಕಿದಿಯೂರ್ ಹೊಟೇಲ್ ಆವರಣದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ಶಾಸ್ತ್ರ ನೆರವೇರಿತು. ಗಂಡು ಹೆಣ್ಣಿನ ಕಡೆಯವರು ಸೇರಿ ಅರಸಿನದ ಕೊಂಬು ಮಾಂಗಲ್ಯ ಕಟ್ಟಿ, ಹಾರ ಬದಲಾಯಿಸಿ ಮಂಡೂಕಗಳಿಗೆ ಕಲ್ಯಾಣ ಭಾಗ್ಯ ಕರುಣಿಸಿದರು. ಮದುವೆಯ ನಂತರ ಮಣಿಪಾಲದ ಮಣ್ಣಪಳ್ಳ ಹಳ್ಳಕ್ಕೆ ಎರಡೂ ಕಪ್ಪೆಗಳನ್ನು ಮಧುಚಂದ್ರಕ್ಕೆ ಬಿಡಲಾಗಿದೆ.

    2018ರಲ್ಲೂ ಬರದ ಸ್ಥಿತಿ ಉಂಟಾದಾಗ ಕಪ್ಪೆ ಮದುವೆ ಮಾಡಲಾಗಿತ್ತು. ಕಾಕತಾಳಿಯವೋ ಎಂಬಂತೆ ಅಂದು ಧಾರಾಕಾರ ಮಳೆ ಸುರಿದಿತ್ತು.

  • ಆಪರೇಷನ್ ಕಮಲದ ಬ್ಯುಸಿಯಲ್ಲಿ ಬಿಎಸ್‍ವೈಯಿಂದ ಇಂದು ಹಳ್ಳಿಗಳತ್ತ ಯಾತ್ರೆ

    ಆಪರೇಷನ್ ಕಮಲದ ಬ್ಯುಸಿಯಲ್ಲಿ ಬಿಎಸ್‍ವೈಯಿಂದ ಇಂದು ಹಳ್ಳಿಗಳತ್ತ ಯಾತ್ರೆ

    ಬೆಂಗಳೂರು: ಒಂದು ಕಡೆ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯಕ್ಕೆ ರೆಡಿಯಾಗಿದ್ದರೆ, ಇತ್ತ ಯಡಿಯೂರಪ್ಪ ಬರ ಅಧ್ಯಯನ ಪ್ರವಾಸ ಕೈಗೊಂಡಿದ್ದಾರೆ.

    ಮಳೆ ಆಗುವುದಕ್ಕೆ ಈಗ ಒಂದು ದಿನವಷ್ಟೇ ಬಾಕಿ ಇದೆ. ಅಲ್ಲದೆ ಉತ್ತರ ಕರ್ನಾಟಕದ ಹಲವೆಡೆ ಈಗಾಗಲೇ ಮಳೆಯಾಗುತ್ತಿದೆ. ಇದರ ನಡುವೆ ಬಿಎಸ್ ಯಡಿಯೂರಪ್ಪ ಅವರಿಗೆ ಈಗ ಬರದ ನೆನಪಾದಂತಿದೆ.

    ಉತ್ತರ ಕರ್ನಾಟಕ ಭಾಗದಲ್ಲಿ 3 ದಿನಗಳ ಕಾಲ ಯಡಿಯೂರಪ್ಪ ಬರ ಅಧ್ಯಯನ ಕೈಗೊಂಡಿದ್ದಾರೆ. ಬಿಎಸ್‍ವೈ ಇಂದು ಬೆಳಗ್ಗೆ 11 ಗಂಟೆಗೆ ಬಾಗಲಕೋಟೆಯ ಬದಾಮಿ ತಾಲೂಕಿಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಹುನಗುಂದ ತಾಲೂಕಿನಲ್ಲಿ ಬರ ಪರಿಶೀಲನೆ ಮಾಡಿದ ಬಳಿಕ ರಾತ್ರಿ ಕೊಪ್ಪಳದಲ್ಲಿ ವಾಸ್ತವ್ಯ ಹೂಡಲಿದ್ದಾರೆ.

    ಶನಿವಾರ ಕೊಪ್ಪಳ, ರಾಯಚೂರಿನ ಲಿಂಗಸುಗೂರಿನಲ್ಲಿ ಪರಿಶೀಲನೆ ಮಾಡಲಿದ್ದಾರೆ. ಜೂನ್ 9ರಂದು ಗುರುಮಿಠಕಲ್ ಕ್ಷೇತ್ರದಲ್ಲಿ ಬರ ಅಧ್ಯಯನ ಮಾಡಿ ವಾಪಸ್ಸಾಗಲಿದ್ದಾರೆ.

  • ಮೇವು ವಿತರಣೆಗೆ ಎಂಎಲ್‍ಎ ಬರಬೇಕು – ಬರದಿಂದ ತತ್ತರಿಸುತ್ತಿದ್ರು ಅಧಿಕಾರಿಗಳ ದರ್ಬಾರ್

    ಮೇವು ವಿತರಣೆಗೆ ಎಂಎಲ್‍ಎ ಬರಬೇಕು – ಬರದಿಂದ ತತ್ತರಿಸುತ್ತಿದ್ರು ಅಧಿಕಾರಿಗಳ ದರ್ಬಾರ್

    ಚಿಕ್ಕಬಳ್ಳಾಪುರ: ಜಿಲ್ಲೆಯ ಜನ ಬರಗಾಲದಿಂದ ನೀರಿಲ್ಲದೇ ಪರದಾಡುತ್ತಿದ್ದು, ಇತ್ತ ರೈತರು ಜಾನುವಾರುಗಳಿಗೆ ಕನಿಷ್ಟ ಮೇವು ನೀಡಲಾಗದ ದುಸ್ಥಿತಿ ಎದುರಿಸುತ್ತಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಸರ್ಕಾರದಿಂದ ಬಂದಿರುವ ಮೇವನ್ನು ವಿತರಣೆ ಮಾಡಲು ಕುಂಟು ನೆಪ ಹೇಳುತ್ತಿದ್ದಾರೆ.

    ಜಿಲ್ಲಾಡಳಿತ ಕಳೆದ ಎರಡು ದಿನಗಳ ಹಿಂದೆಯೇ ಜಾನುವಾರುಗಳಿಗೆ ಮೇವು ಸರಬರಾಜು ಮಾಡಲು ಬಾಗೇಪಲ್ಲಿ ತಾಲೂಕಿನ ಮಿಟ್ಟೇಮರಿ ಹೋಬಳಿಗೆ 5 ಟನ್ ಮೇವು ಸರಬರಾಜು ಮಾಡಿದೆ. ಆದರೆ ಜಾನುವಾರುಗಳಿಗೆ ಮೇವು ವಿತರಣೆ ಮಾಡಬೇಕಾದ ಆಧಿಕಾರಿಗಳು ಮಿಟ್ಟೆಮರಿ ಗ್ರಾಮದ ಪಶು ಆಸ್ಪತ್ರೆಯ ಗೋಡಾನ್ ನಲ್ಲಿ ಮೇವು ದಾಸ್ತಾನು ಮಾಡಿ ಗೋಡಾನ್‍ಗೆ ಬೀಗ ಹಾಕಿಕೊಂಡಿದ್ದಾರೆ.

    ಮೇವು ಬಂದಿರುವ ವಿಷಯ ತಿಳಿದು ಆಸ್ಪತ್ರೆ ಬಳಿ ಮೇವು ಕೊಡಿ ಅಂತ ರೈತರು ಕೇಳಿದರೆ, ಶಾಸಕರು ಬಂದು ಉದ್ಘಾಟನೆ ಮಾಡಿದ ನಂತರ ಕೊಡುತ್ತೇವೆ ಎಂದಿದ್ದಾರೆ. ಇದರಿಂದ ಅಸಮಾಧಾನಗೊಂಡಿರುವ ರೈತರು ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜಾನುವಾರುಗಳಿಗೆ ಮೇವು ಇಲ್ಲದೆ ಮರದ ಎಲೆಗಳನ್ನ ತಂದು ಹಾಕುತ್ತಿದ್ದೇವೆ ಇಷ್ಟು ದಿನ ಮೇವು ಇರಲಿಲ್ಲ. ಈಗ ಮೇವು ಬಂದಿದೆ. ಈಗ ಕೊಡಿ ಅಂದರೂ ಎಂಎಲ್‍ಎ, ಎಂಪಿ ಬರಬೇಕು ಅಂತಿದ್ದಾರೆ ಎಂದು ರೈತ ಲಕ್ಷ್ಮೀಪತಿ ಹಾಗೂ ಮಂಜುನಾಥ್ ಆರೋಪಿಸಿದ್ದಾರೆ.

    ಈ ಸಂಬಂಧ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿರುವ ಶಾಸಕ ಸುಬ್ಬಾರೆಡ್ಡಿ, ಕಳೆದ ಎರಡು ದಿನಗಳ ಹಿಂದೆ ಮೇವು ಬಂದಿದೆ. ನಿನ್ನೆ ರಂಜಾನ್ ರಜೆ ಇದ್ದ ಕಾರಣ ಕೊಟ್ಟಿರಲಿಲ್ಲ. ಇನ್ನೂ ನಾನು ಬರೋವರಗೆ ಕೊಡಬೇಡಿ ಅಂತ ಹೇಳಲಿಲ್ಲ. ರೈತರು ಬಂದರೆ ಕೊಡಿ ಎಂದು ಹೇಳಿದ್ದೇನೆ. ಇಂದಿನಿಂದಲೇ ಬಂದವರಿಗೆ ಮೇವು ವಿತರಣೆ ಮಾಡುವಂತೆ ಸೂಚನೆ ನೀಡುವುದಾಗಿ ತಿಳಿಸಿದರು.

  • ಧರ್ಮಸ್ಥಳ ಬಳಿಕ ಸಿದ್ದಗಂಗಾ ಮಠದಲ್ಲೂ ನೀರಿಗೆ ಬರ!

    ಧರ್ಮಸ್ಥಳ ಬಳಿಕ ಸಿದ್ದಗಂಗಾ ಮಠದಲ್ಲೂ ನೀರಿಗೆ ಬರ!

    ತುಮಕೂರು: ಎಲ್ಲೆಲ್ಲೂ ನೀರಿಗೆ ಬರ. ಧರ್ಮಸ್ಥಳದ ಆ ದೇವರಿಗೂ ಬರ ತಟ್ಟಿತ್ತು. ಇದೀಗ ತುಮಕೂರಿನ ಸಿದ್ದಗಂಗಾ ಮಠದಲ್ಲೂ ನೀರಿಗೆ ಬವಣೆ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಜೂನ್ ತಿಂಗಳಲ್ಲಿ ಮಳೆ ಬಾರದೇ ಇದ್ದರೆ ನೀರಿಗಾಗಿ ಪರದಾಟಪಡಬೇಕಾಗುತ್ತದೆ.

    ಧರ್ಮಸ್ಥಳದಲ್ಲಿ ನೀರಿನ ಲಭ್ಯತೆ ಕಡಿಮೆಯಾದ ಹಿನ್ನೆಲೆಯಲ್ಲಿ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರು ಸದ್ಯಕ್ಕೆ ಮಂಜುನಾಥನ ದರ್ಶನಕ್ಕೆ ಬರಬೇಡಿ ಎಂದು ಭಕ್ತರಲ್ಲಿ ಮನವಿ ಮಾಡಿದ್ದರು. ಇದೀಗ ತ್ರಿವಿಧ ದಾಸೋಹದ ಕ್ಷೇತ್ರ ತುಮಕೂರಿನ ಸಿದ್ದಗಂಗಾ ಮಠದಲ್ಲೂ ನೀರಿನ ಸಮಸ್ಯೆಗೆ ಬರ ಎದುರಾಗುವ ಪರಿಸ್ಥಿತಿ ಬಂದಿದೆ.

    ಸಿದ್ದಗಂಗಾ ಮಠದಲ್ಲಿ ದಿನಕ್ಕೆ ಸಾವಿರಾರು ಭಕ್ತಾದಿಗಳು ದಾಸೋಹ ಮಾಡುತ್ತಾರೆ. 10 ಸಾವಿರ ವಿದ್ಯಾಥಿಗಳು ವ್ಯಾಸಂಗ ಮಾಡುತ್ತಾರೆ. ಮಠದ ಉಪಯೋಗಕ್ಕೆ ಸರಿ ಸುಮಾರು ದಿನವೊಂದಕ್ಕೆ 80 ಸಾವಿರ ಲೀಟರ್ ನೀರು ಬೇಕಾಗುತ್ತೆ. ಈಗ ವಿದ್ಯಾರ್ಥಿಗಳು ರಜೆ ನಿಮಿತ್ತ ಊರಿಗೆ ಹೋಗಿದ್ರಿಂದ 50 ಸಾವಿರ ಲೀಟರ್ ನೀರಿನ ಅಗತ್ಯತೆ ಇದೆ.

    ಸದ್ಯಕ್ಕೆ 50 ಸಾವಿರ ಲೀಟರ್ ನೀರು ಸುಲಭವಾಗಿ ದೊರೆಯುತ್ತೆ. ಆದರೆ ಜೂನ್ ತಿಂಗಳಲ್ಲಿ ಶಾಲೆ ಆರಂಭವಾಗೋದ್ರಿಂದ 80 ಸಾವಿರ ಲೀಟರ್ ನೀರು ಬೇಕಾಗುತ್ತದೆ. ಜೂನ್ ತಿಂಗಳಲ್ಲಿ ಮಳೆಯಾದರೆ ನೀರಿನ ಸಮಸ್ಯೆ ಆಗಲ್ಲ. ಇಲಾಂದ್ರೆ ನೀರಿಗೆ ಬರ ಬರಲಿದೆ ಎಂದು ಹೇಳಲಾಗುತ್ತಿದೆ.

    ಮಠದಲ್ಲಿ ನೂರಾರು ಜಾನುವಾರುಗಳಿದರೂ ಅವುಗಳ ಸಾಕಾಣಿಕೆಗೆ ನೀರಿನ ಅವಶ್ಯಕತೆ ಇದೆ. ಸುಮಾರು 30 ಬೋರ್‍ವೆಲ್‍ಗಳಿವೆ. ಅವುಗಳಲ್ಲಿ 5-6 ಬೋರ್ ವೆಲ್ ಕೈ ಕೊಟ್ಟಿವೆ. ಇನ್ನುಳಿದವುಗಳಲ್ಲಿ ಅಲ್ಪ ಸ್ವಲ್ಪ ನೀರು ಬರುತ್ತಿದೆ. ಈ ನೀರಿನಿಂದಲೇ ನಿತ್ಯದ ಕೆಲಸ ಸಾಗಿದೆ. ಮಹಾನಗರ ಪಾಲಿಕೆಯಿಂದ ನೀಡುತ್ತಿದ್ದ ಹೇಮಾವತಿ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಮೈದಾಳ ಕೆರೆಯಿಂದ ನೀರು ಹರಿಸುವ ಯೋಜನೆಯೂ ಸ್ಥಗಿತಗೊಂಡಿದೆ.

  • ಧರ್ಮಸ್ಥಳದಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಸರ್ಕಾರ ಚಿಂತನೆ

    ಧರ್ಮಸ್ಥಳದಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಸರ್ಕಾರ ಚಿಂತನೆ

    ಬೆಂಗಳೂರು: ಧರ್ಮಸ್ಥಳದಲ್ಲಿ ಚೆಕ್ ಡ್ಯಾಂ ನಿರ್ಮಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

    ಈ ಬಾರಿ ಧರ್ಮಸ್ಥಳದಲ್ಲೂ ನೀರಿನ ಅಭಾವ ಉಂಟಾಗಿದ್ದು, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯಸರ್ಕಾರ ಚೆಕ್ ಡ್ಯಾಂ ನಿರ್ಮಿಸಿ ನೀರಿನ ಸಮಸ್ಯೆ ಪರಿಹರಿಸಲು ಮುಂದಾಗಿದೆ.

    ಮುಖ್ಯಮಂತ್ರಿ ಸಲಹೆ ಮೇರೆಗೆ ರಾಜ್ಯದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಧರ್ಮಸ್ಥಳದಲ್ಲಿರುವ ನೀರಿನ ಅಭಾವದ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಇನ್ನೊಂದು ಚೆಕ್‍ಡ್ಯಾಂ ನಿರ್ಮಾಣ ಮಾಡಿಕೊಡುವಂತೆ ಶ್ರೀ ಹೆಗ್ಗಡೆಯವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿಗಳ ಸೂಚನೆಯಂತೆ ದ.ಕ. ಜಿ.ಪಂ. ಸಿಇಒ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆಗಾಗಿ ಇಂದು ಸಂಜೆ ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಟ್ವಿಟ್ಟರ್‍ ನಲ್ಲಿ ತಿಳಿಸಿದ್ದಾರೆ.

    ಕೆಲವು ದಿನಗಳ ಹಿಂದೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಡಾ.ಡಿ ವೀರೇಂದ್ರ ಹೆಗ್ಗಡೆ ಅವರು, 15 ದಿನ ಮಳೆ ಬರದಿದ್ದರೆ ಮಂಜುನಾಥನ ಅಭಿಷೇಕಕ್ಕೂ ನೀರಿಲ್ಲ. ಈಗ ಅಭಿಷೇಕಕ್ಕೆ ನೇತ್ರಾವತಿಯಲ್ಲಿ ತಾತ್ಕಲಿಕವಾಗಿ ನೀರಿದೆ ಎಂದು ತಮ್ಮ ಕಳವಳವನ್ನು ಹೊರಹಾಕಿದ್ದರು.

    ಶ್ರೀ ಕ್ಷೇತ್ರದಲ್ಲಿ ನೀರಿನ ಅಭಾವ ಇರುವ ಹಿನ್ನೆಲೆ ಧರ್ಮಸ್ಥಳಕ್ಕೆ ಬರುವ ಯಾತ್ರಾರ್ಥಿಗಳ ಉಪಯೋಗಕ್ಕೆ ಅಧಿಕ ಪ್ರಮಾಣದ ನೀರು ಬೇಕಾಗುತ್ತದೆ. ಆದ್ದರಿಂದ ಭಕ್ತಾದಿಗಳು ಹಾಗೂ ಪ್ರವಾಸಿಗರು ತಮ್ಮ ಪ್ರವಾಸವನ್ನು ಕೆಲವು ದಿನಗಳ ಕಾಲ ಮುಂದೂಡಿ ಸಹಕರಿಸುವಂತೆ ವೀರೇಂದ್ರ ಹೆಗ್ಗಡೆಯವರು ಮನವಿಯನ್ನು ಮಾಡಿಕೊಂಡಿದ್ದರು.

  • ಸುಳ್ಳು ಹೇಳಿದರೆ ಬರೆ ಎಳಿಬೇಕಾಗುತ್ತೆ – ತಪ್ಪು ವರದಿ ಕೊಟ್ಟ ಅಧಿಕಾರಿಗೆ ಸಚಿವ ವೆಂಕಟರಮಣಪ್ಪ ಕ್ಲಾಸ್

    ಸುಳ್ಳು ಹೇಳಿದರೆ ಬರೆ ಎಳಿಬೇಕಾಗುತ್ತೆ – ತಪ್ಪು ವರದಿ ಕೊಟ್ಟ ಅಧಿಕಾರಿಗೆ ಸಚಿವ ವೆಂಕಟರಮಣಪ್ಪ ಕ್ಲಾಸ್

    ಚಿತ್ರದುರ್ಗ: ಚಿತ್ರದುರ್ಗ ಉಸ್ತುವಾರಿ ಸಚಿವ ವೆಂಕಟರಮಣಪ್ಪ ತಪ್ಪು ವರದಿ ಕೊಟ್ಟ ಅಧಿಕಾರಿಗಳಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಬರ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವ ಬಿಸಿ ಮುಟ್ಟಿಸಿದ್ದಾರೆ. ವೆಂಕಟರಮಣಪ್ಪ ಅವರು ಪರಿಶೀಲನೆಗೆ ಬಂದ ವೇಳೆ ಅಧಿಕಾರಿಗಳು ತಪ್ಪು ವರದಿಯನ್ನು ತೋರಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸಚಿವರು, ನಿನ್ ತಲೆ, ನಿನ್ ನೇಣು ಹಾಕಬೇಕು. ಸುಳ್ಳು ಹೇಳಿದರೆ ಬರೆ ಎಳಿಬೇಕಾಗುತ್ತೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

    ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಚಳ್ಳಕೆರೆ ಎಇಇ ಭೀಮಾ ನಾಯಕ್‍ಗೆ ತರಾಟೆಗೆ ತೆಗೆದುಕೊಂಡು, ಬಳಿಕ ಹಿರಿಯೂರು ಎಕ್ಸಿಕ್ಯುಟಿವ್ ಎಂಜಿನಿಯರ್ ಗೂ ಎಚ್ಚರಿಕೆ ಕಾಮಗಾರಿ ತ್ವರಿತವಾಗಿ ಮುಗಿಸದಿದ್ದರೆ ಎತ್ತಂಗಡಿ ಮಾಡುತ್ತೀವಿ ಎಂದು ಎಚ್ಚರಿಕೆ ನೀಡಿದರು.

    ಅಷ್ಟೇ ಅಲ್ಲದೆ ಇಂದು ಜಿಲ್ಲೆಯ ರೈತರು ನಡೆಸಿದ ಪ್ರತಿಭಟನೆಯ ಬಿಸಿ ಸಚಿವರಿಗೆ ತಟ್ಟಿದೆ. ಹೌದು. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿಯಲ್ಲಿ ಬೆಳೆ ವಿಮೆ ಹಾಗೂ ಬೆಳೆ ನಷ್ಟ ಪರಿಹಾರವನ್ನು ರೈತರ ಖಾತೆಗೆ ಜಮಾ ಮಾಡಲು ವಿಳಂಬ ಮಾಡಲಾಗುತ್ತಿದೆ. ಇದರಿಂದ ಆಕ್ರೋಶಗೊಂಡ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರೈತರು ರಾಜ್ಯ ಸರ್ಕಾರ ಹಾಗೂ ಉಸ್ತುವಾರಿ ಸಚಿವರ ವಿರುದ್ಧ ಪ್ರತಿಭಟನೆ ನಡೆಸಿದ್ದರು.

    ಈ ವೇಳೆ ಬೆಳೆ ವಿಮೆ ಅನುದಾನ ತುರ್ತಾಗಿ ಬಿಡುಗಡೆ ಮಾಡುವಂತೆ ರೈತರು ಒತ್ತಾಯಿಸಿದ್ದು, ರೈತರ ಬಳಿಗೆ ಧಾವಿಸಿದ ಸಚಿವರು ಈ ಬಗ್ಗೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗುವುದು ಹಾಗು ಶೀಘ್ರವಾಗಿ ಸಮಸ್ಯೆ ಬಗೆಹರಿಸುತ್ತೇವೆಂಬ ಭರವಸೆಯನ್ನ ನೀಡಿದರು. ಕೆಲವು ರೈತರು ತಕ್ಷಣ ಬರ ಪರಿಹಾರ ಹಣಕ್ಕೆ ವ್ಯವಸ್ಥೆ ಮಾಡಬೇಕು. ಈಗಾಗಲೇ ನಮ್ಮ ಕುಟುಂಬಸ್ಥರ ಒಡವೆಗಳನ್ನು ಅಡವಿಟ್ಟು ಬೆಳೆ ಬೆಳೆದರೂ ಸಹ ಬೆಳೆನಾಶದಿಂದ ನಾವು ಹಾಳಾಗಿದ್ದೇವೆ ಹೀಗಾಗಿ ಕೂಡಲೇ ನಷ್ಟ ಪರಿಹಾರ ಬಿಡುಗಡೆ ಮಾಡುವಂತೆ ಪಟ್ಟು ಹಿಡಿದರು. ಆಗ ರೈತರು ಹಾಗೂ ಸಚಿವರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ನಾನು ಸಹ ನಿಮ್ಮಂತೆ ರೈತ ಸಮಾಧಾನವಾಗಿರಿ ಎಂದು ಸಚಿವ ಪರಿಸ್ಥಿತಿ ತಿಳಿಗೊಳಿಸಿದರು.

  • ಕಾಫಿನಾಡಿನಲ್ಲಿ ಒಂದೆಡೆ ಮಳೆ, ಇನ್ನೊಂದೆಡೆ ಬರ- ಎರಡಕ್ಕೂ ಪ್ರತ್ಯಕ್ಷ ಸಾಕ್ಷಿಯಾದ ಫೋಟೋಗಳು

    ಕಾಫಿನಾಡಿನಲ್ಲಿ ಒಂದೆಡೆ ಮಳೆ, ಇನ್ನೊಂದೆಡೆ ಬರ- ಎರಡಕ್ಕೂ ಪ್ರತ್ಯಕ್ಷ ಸಾಕ್ಷಿಯಾದ ಫೋಟೋಗಳು

    ಚಿಕ್ಕಮಗಳೂರು: ಸಾವಿರ ಪದಗಳಲ್ಲಿ ಹೇಳಲಾಗದ್ದನ್ನ ಒಂದು ಫೋಟೋ ಹೇಳುತ್ತೆ ಅನ್ನೋದು ಅಕ್ಷರಶಃ ಸತ್ಯ. ಯಾಕೆಂದರೆ, ಅಂತಹ ಅಪರೂಪದ ಫೋಟೋಗಳಿಗೆ ಕಾಫಿನಾಡಿನ ಮಲೆನಾಡು ಹಾಗೂ ಬಯಲುಸೀಮೆ ಭಾಗ ಸಾಕ್ಷಿಯಾಗಿದೆ.

    ಹೌದು. ಕಳೆದ ಎರಡು ದಶಕಗಳಿಂದ ಭೀಕರ ಬರಗಾಲಕ್ಕೆ ತುತ್ತಾಗಿರೋ ಕಡೂರು ತಾಲೂಕಿನಲ್ಲಿ ಹನಿ ನೀರಿಗೂ ಹಾಹಾಕಾರವಿದೆ. ಜಾನುವಾರುಗಳ ಸ್ಥಿತಿಯಂತೂ ಶೋಷಣೀಯ ಆಗಿಬಿಟ್ಟಿದೆ. ಇಂತಹ ಸಂದರ್ಭದಲ್ಲಿ ಮತಿಘಟ್ಟ ಗ್ರಾಮದಲ್ಲಿ ನೀರಿಗಾಗಿ ಇಟ್ಟಿದ್ದ ಖಾಲಿಕೊಡಗಳಲ್ಲಿ ಜಾನುವಾರು ನೀರು ಕುಡಿಯಲು ಪ್ರಯತ್ನಿಸ್ತಿರೋ ಫೋಟೋ ಭಾವನಾತ್ಮಕವಾಗಿದ್ದು, ಕಲ್ಲು ಮನಸ್ಸಿನವರನ್ನು ಕರಗಸುವಂತಿದೆ.

    ಅಲ್ಲದೆ ಅಪ್ಪಟ ಮಲೆನಾಡು ಎನ್.ಆರ್.ಪುರ ತಾಲೂಕಿನ ಖಾಂಡ್ಯದಲ್ಲಿ ಎರಡು ದಿನ ಹಿಂದೆ ಸುರಿದ ಮಳೆ-ಗಾಳಿಗೆ ಬೃಹತ್ ಮರವೊಂದು ಮನೆ ಮೇಲೆ ಬಿದ್ದಿದ್ದು, ಆ ಮನೆಯ ಹೊರಭಾಗದಲ್ಲಿ ಇಬ್ಬರು ಪುಟ್ಟ ಮಕ್ಕಳು ನಿಂತು ಮನೆಯನ್ನ ನೋಡ್ತಿರೋ ದೃಶ್ಯ ಕೂಡ ಮನಮುಟ್ಟುವಂತಿದೆ. ಇಂತಹ ಫೋಟೋಗಳು ಸಾಮಾನ್ಯವಾಗಿದ್ದರು ಅದರ ಹಿಂದಿನ ಭಾವನೆ, ನೋವು, ಕಷ್ಟ-ಕಾರ್ಪಣ್ಯಗಳು ಮಾತ್ರ ಬಹುದೊಡ್ಡದಾಗಿದೆ.

  • ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ನರಸಿಂಹ ಝರಣಾ ದರ್ಶನಕ್ಕೆ ನಿಷೇಧ!

    ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ನರಸಿಂಹ ಝರಣಾ ದರ್ಶನಕ್ಕೆ ನಿಷೇಧ!

    ಬೀದರ್: ದಕ್ಷಿಣ ಭಾರತದ ಸುಪ್ರಸಿದ್ಧ ಹಾಗೂ ಪೌರಾಣಿಕ ನರಸಿಂಹ ಝರಣಾ ಧಾರ್ಮಿಕ ಕ್ಷೇತ್ರಕ್ಕೂ ಬರದ ಬಿಸಿ ತಟ್ಟಿದ್ದು, 400 ವರ್ಷಗಳ ಇತಿಹಾಸವಿರುವ ದೇವರ ದರ್ಶನಕ್ಕೆ ಜಲಕ್ಷಾಮ ಹಿನ್ನೆಲೆಯಲ್ಲಿ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ದೇವರ ದರ್ಶನಕ್ಕೆ ದೇವಸ್ಥಾನ ಆಡಳಿತ ಮಂಡಳಿ ನಿಷೇಧ ಹೇರಿದೆ.

    ಗಡಿ ಭಾಗದ ಪವಿತ್ರ ತಾಣಗಳಲ್ಲಿ ಒಂದಾಗಿರುವ ದೇವಸ್ಥಾನಕ್ಕೆ ರಾಜ್ಯ ಹಾಗೂ ಹೊರ ರಾಜ್ಯದಿಂದ ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದರು. ಆದ್ರೆ ನರಸಿಂಹ ಝರಣಾ ಧಾರ್ಮಿಕ ಕ್ಷೇತ್ರಕ್ಕೂ ಬರದ ಬಿಸಿ ತಟ್ಟಿದ್ದು, 400 ವರ್ಷಗಳ ಇತಿಹಾಸವಿರುವ ದೇವರ ದರ್ಶನಕ್ಕೆ ಜಲಕ್ಷಾಮ ಹಿನ್ನೆಲೆಯಲ್ಲಿ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ದೇವರ ದರ್ಶನಕ್ಕೆ ದೇವಸ್ಥಾನ ಆಡಳಿತ ಮಂಡಳಿ ನಿಷೇಧ ಹೇರಿದೆ. ದೇವಸ್ಥಾನದ ಗುಹೆಯಲ್ಲಿ ಇರುತ್ತಿದ್ದ ಸುಮಾರು 300 ಮೀಟರ್ ನೀರಿನಲ್ಲಿ ನಡೆದುಕೊಂಡು ಹೋಗಿ ಗರ್ಭಗುಡಿಯಲ್ಲಿ ನೆಲೆಸಿರುವ ಝರಣಾ ನರಸಿಂಹ ಸ್ವಾಮಿ ದರ್ಶನ ಪಡೆಯುವುದು ಇಲ್ಲಿನ ವಿಶೇಷವಾಗಿತ್ತು.

    ಈ ರೀತಿ ನೀರಿನಲ್ಲಿ ನಡೆದು ಹೋಗಿ ದರ್ಶನ ಪಡೆಯುವುದರಿಂದ ರೋಗಗಳು ನಿವಾರಣೆಯಾಗುತ್ತವೆ ಎಂಬ ಪ್ರತೀತಿ ಕೂಡಾ ಇದೆ. ಆದರೆ ಈ ಬಾರಿ ಜಿಲ್ಲೆ ಬಾರಿ ಬರಗಾಲಕ್ಕೆ ತುತ್ತಾಗಿದ್ದು ನರಸಿಂಹ ಝರಣಾಗೂ ಬರದ ಬಿಸಿ ತಟ್ಟಿದೆ. ದರ್ಶನಕ್ಕೆ ಬಂದ ಭಕ್ತರಿಗೆ ಮೂಲ ದರ್ಶನ ಭಾಗ್ಯ ಸಿಗದೇ ಹೊರಗಿನ ಮೂರ್ತಿ ದರ್ಶನ ಪಡೆದು ನಿರಾಸೆಯಿಂದ ವಾಪಸಾಗುತ್ತಿದ್ದಾರೆ.

    ದೇವಸ್ಥಾನದ ಸುತ್ತಮುತ್ತ ಬೋರ್ ವೆಲ್ ಕೊರೆಯುತ್ತಿರವುದರಿಂದ ನೀರಿನ ಸಮಸ್ಯೆ ಎದುರಾಗಿದ್ದು, ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ದೇವಸ್ಥಾನದ ಪ್ರಧಾನ ಅರ್ಚಕರು ಮನವಿ ಮಾಡಿಕೊಂಡಿದ್ದಾರೆ.

  • ಶ್ರೀಗಳಿಗೆ ಭಾರತರತ್ನ ಕೊಡದಿರುವುದು ಎಲ್ಲರಿಗಿಂತ ನನಗೆ ಹೆಚ್ಚು ನೋವು ತಂದಿದೆ – ಬಿಎಸ್‍ವೈ

    ಶ್ರೀಗಳಿಗೆ ಭಾರತರತ್ನ ಕೊಡದಿರುವುದು ಎಲ್ಲರಿಗಿಂತ ನನಗೆ ಹೆಚ್ಚು ನೋವು ತಂದಿದೆ – ಬಿಎಸ್‍ವೈ

    ಚಿತ್ರದುರ್ಗ: ಲಿಂಗೈಕ್ಯರಾದ ತುಮಕೂರು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ನೀಡದಿರುವುದು ಎಲ್ಲರಿಗಿಂತ ಹೆಚ್ಚಾಗಿ ನನಗೆ ನೋವು ತಂದಿದೆ. ಆದ್ರೆ ಏನ್ ಮಾಡೋದು ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಪ್ರಶ್ನಿಸಿ ಬೇಸರ ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಯ ಹಿರಿಯೂರು, ಚಳ್ಳಕೆರೆ ತಾಲೂಕಿನ ವಿವಿಧೆಡೆ ಬರ ವೀಕ್ಷಣೆ ಮಾಡಿದ ಬಳಿಕ ಖಂಡೇನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡದಿರುವುದು ನೋವು ತಂದಿದೆ. ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನಕ್ಕಾಗಿ ಶಕ್ತಿಮೀರಿ ಪ್ರಯತ್ನಿಸಿದ್ದೇವೆ. ಈ ವಿಷಯದಲ್ಲಿ ಎಲ್ಲರಿಗಿಂತ ಹೆಚ್ಚು ನನಗೆ ನೋವಾಗಿದೆ, ಏನುಮಾಡುವುದು ಎಂದು ವಿಷಾದ ವ್ಯಕ್ತಪಡಿಸಿದರು. ಇದನ್ನೂ ಓದಿ:  ಭಾರತ ರತ್ನ – ಲತಾಗಿಲ್ಲದ ನಿಯಮಾವಳಿ ಸಿದ್ದಗಂಗಾ ಶ್ರೀಗಳಿಗೆ ಮಾತ್ರ ಯಾಕೆ?

    ಚಿತ್ರದುರ್ಗ ಜಿಲ್ಲೆಯಲ್ಲಿ ನಾಲ್ಕು ವರ್ಷದಿಂದ ಬರ ತಾಂಡವವಾಡುತ್ತಿದೆ. ಬೆಳೆ ವಿಫಲವಾಗಿ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬರ ವೀಕ್ಷಣೆ ವರದಿಯನ್ನು ಸರ್ಕಾರಕ್ಕೆ ನೀಡುತ್ತೇವೆ. ಅಧಿವೇಶನದಲ್ಲಿ ಬರ, ರೈತರ ಸ್ಥಿತಿಗತಿ ಬಗ್ಗೆ ಮಾತನಾಡುತ್ತೇವೆ. ಸಾಲ ಮನ್ನಾ ಮಾಡುತ್ತೇವೆ ಎಂದು ಸರ್ಕಾರ ಕಾಲಹರಣ ಮಾಡಿದೆ. ರಾಜ್ಯದಿಂದ ಕೊಟ್ಟಿರುವ ವರದಿಗೆ ಸ್ಪಂದಿಸಿ ಕೇಂದ್ರದಿಂದ ಪರಿಹಾರ ಕೊಡಿಸುತ್ತೇವೆ. ರಾಜ್ಯದ ಬಗ್ಗೆ ಮೋದಿ ಸರ್ಕಾರ ತಾರತಮ್ಯ ಮಾಡುವುದಿಲ್ಲ ಎಂದು ಅವರು ಭರವಸೆ ನೀಡಿದರು.

    ಇದೇ ವೇಳೆ ಕಾಂಗ್ರೆಸ್ ಶಾಸಕ ಆನಂದಸಿಂಗ್ ಹಾಗೂ ಕಂಪ್ಲಿ ಶಾಸಕ ಗಣೇಶ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಸಮ್ಮಿಶ್ರ ಸರ್ಕಾರದ ಸಿಎಂ, ಮಂತ್ರಿಗಳು ಬರ ವೀಕ್ಷಿಸಿಲ್ಲ. ಬರ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಂಡಿಲ್ಲ. ಬೆಂಗಳೂರಿನಲ್ಲಿ ಕುಳಿತು ಪ್ರಧಾನಿ ಮೋದಿ ಕಡೆ ಬೆರಳು ತೋರುತ್ತಾರೆ ಎಂದು ಸರ್ಕಾರದ ವಿರುದ್ಧ ಗುಡುಗಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv