ಮಂಗಳೂರು: ಮಾಮೂಲಿಯಾಗಿ ಎಲ್ಲರೂ ಒಂದು ಕೈಯಲ್ಲಿ ಬರೆಯೋದು ನಾವೆಲ್ಲ ನೋಡಿದ್ದೇವೆ, ನಾವೂ ಬರೆಯುತ್ತೇವೆ. ಆದರೆ ಮಂಗಳೂರಿನ ಬಾಲಕಿಯೋರ್ವಳು ಎರಡು ಕೈಗಳಲ್ಲಿಯೂ ಏಕಕಾಲದಲ್ಲಿ ಬೇರೆ ಬೇರೆ ವಿಚಾರಗಳನ್ನು ಬರೆಯುತ್ತಾಳೆ. ಅದು ಉಲ್ಟಾ ಬರವಣಿಗೆಯೂ ಇರಲಿ, ಮಿರರ್ ಏಫೆಕ್ಟ್ ರೈಟಿಂಗೂ ಇರಲಿ ಎಲ್ಲವನ್ನೂ ಆಕೆ ಸಲೀಸಾಗಿ ಬರೆಯುತ್ತಾಳೆ.

ಏಕಕಾಲಕ್ಕೆ ಎರಡು ಕೈಗಳಿಂದ ಬರೆಯುವ ಅದ್ಭುತ ಕಲೆ ಹೊಂದಿರುವ ಬಾಲಕಿ ಹೆಸರು ಆದಿ ಸ್ವರೂಪ. ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್-ಸುಮಾಡ್ಕರ್ ದಂಪತಿಯ ಪುತ್ರಿಯಾಗಿರುವ ಈಕೆ ಬರವಣೆಗೆಯಲ್ಲಿಯೇ ಇದೀಗ ವಿಶ್ವ ದಾಖಲೆ ಮಾಡಿದ್ದಾಳೆ. ಎರಡು ಕೈಯಲ್ಲಿ ಹತ್ತು ರೀತಿಯಲ್ಲಿ ಬರೆಯುವುದನ್ನು ಈ ಬಾಲಕಿ ಕರಗತ ಮಾಡಿಕೊಂಡು ಎಲ್ಲರಲ್ಲೂ ಅಚ್ಚರಿ ಮೂಡಿಸುವಂತೆ ಮಾಡಿದ್ದಾಳೆ.

ಸದ್ಯ ಇಂಗ್ಲೀಷ್ ಪದಗಳನ್ನು ಸುಂದರವಾಗಿ ಒಂದು ನಿಮಿಷಕ್ಕೆ 45 ಪದಗಳಂತೆ ಯುನಿಡೈರೆಕ್ಷನಲ್ ವಿಭಾಗದ ಶೈಲಿಯಲ್ಲಿ ಬರೆದು ವಿಶ್ವ ದಾಖಲೆ ಮಾಡಿದ್ದಾಳೆ. ಉತ್ತರ ಪ್ರದೇಶದ ಬರೇಲಿಯಾ ಲಾಟಾ ಫೌಂಡೇಶನ್ ಸಂಸ್ಥೆ ಎಕ್ಸ್ ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ದಾಖಲೆ ಘೋಷಿಸಿದೆ.

ಈಕೆಯ ತಂದೆ ಗೋಪಾಡ್ಕರ್ ಅವರ ಶಿಕ್ಷಣ ಸಂಸ್ಥೆ ಸ್ವರೂಪ ಅಧ್ಯಯನ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ನಿತ್ಯ ಎಡ ಕೈಯಲ್ಲಿ ಬರೆಯುವ ಅಭ್ಯಾಸ ಮಾಡಿಸಲಾಗುತ್ತೆ. ಈ ಸಂದರ್ಭ ಆರಂಭಿಸಿದ ಆದಿ ಸ್ವರೂಪ ಇದೀಗ ಎರಡು ವರ್ಷದಲ್ಲಿ ಎರಡೂ ಕೈಯಲ್ಲಿ ತನ್ನದೇ ಆದ ಯುನಿಡೈರೆಕ್ಷನಲ್, ರಿವರ್ಸ್ ರನ್ನಿಂಗ್, ಮಿರರ್ ಇಮೇಜ್, ಹೆಟೆರೋಟೋಪಿಕ್, ಹೆಟೆರೋ ಲಿಂಗ್ವಿಸ್ಟಿಕ್, ಎಕ್ಸ್ ಚೇಂಜ್, ಡ್ಯಾನ್ಸಿಂಗ್ ಮತ್ತು ಬ್ಲೈಂಡ್ ಫೋಲ್ಡಿಂಗ್ ಎನ್ನುವ ಹತ್ತು ವಿಧಾನಗಳನ್ನು ಪ್ರಯೋಗ ಮಾಡಿದ್ದಾಳೆ.

ಈ ಬಾಲಕಿ ಕೇವಲ ಈ ಸಾಧನೆ ಮಾತ್ರವಲ್ಲದೇ ಸಾಹಿತ್ಯ, ಸಂಗೀತ, ಯಕ್ಷಗಾನ, ಚಿತ್ರಕಲೆ, ಮಿಮಿಕ್ರಿ, ಬೀಟ್ ಬಾಕ್ಸ್ ಮುಂತಾದವುಗಳಲ್ಲಿಯೂ ತೊಡಗಿಸಿಕೊಂಡಿದ್ದಾಳೆ. ಇದರ ಜೊತೆ ನೂರಾರು ಫೋನ್ ನಂಬರ್‍ಗಳನ್ನು ನಿಮಿಷಾರ್ಧದಲ್ಲೇ ನೆನಪಿಗೆ ದಾಖಲಿಸಿಕೊಳ್ಳುತ್ತಾಳೆ. ಇದೀಗ ಹತ್ತನೇ ತರಗತಿಯಲ್ಲಿ ಶಾಲೆಗೆ ಹೋಗದೆ ಮನೆಯಲ್ಲೇ ತಂದೆ ತಾಯಿಯ ಜೊತೆ ಸ್ವಕಲಿಕೆಯಲ್ಲೇ ಎರಡು ಕೈಗಳಲ್ಲಿ ಎಕ್ಸಾಂ ಬರೆಯುವ ನಿರ್ಧಾರ ಮಾಡಿದ್ದಾಳೆ.
https://twitter.com/ANI/status/1305756846481985536