Tag: ಬಯಲು ಶೌಚಾಲಯ

  • ಐಟಿ ಬಿಟಿ ಸಿಟಿಯಲ್ಲಿ ಬಯಲು ಶೌಚ? ಬೆಂಗಳೂರಿನಲ್ಲಿ ಇದೆಂಥ ನರಕ ಸ್ವಾಮಿ

    ಐಟಿ ಬಿಟಿ ಸಿಟಿಯಲ್ಲಿ ಬಯಲು ಶೌಚ? ಬೆಂಗಳೂರಿನಲ್ಲಿ ಇದೆಂಥ ನರಕ ಸ್ವಾಮಿ

    ಬೆಂಗಳೂರು: ಬಯಲು ಮುಕ್ತ ಶೌಚಾಲಯ, ಕುಡಿಯುವ ನೀರು ದೇಶದ ಎಲ್ಲ ಜನತೆಗೂ ಸಿಗಲೇಬೇಕು. ಇದು ಪ್ರಧಾನಮಂತ್ರಿ ನರೇಂದ್ರ ಮೋದಿ ಆಶಯ. ಆದರೆ ಮೋದಿ ಭಾಷಣಕ್ಕೆ ಮೋದಿ ಪಾರ್ಟಿ ಅಧಿಕಾರಕ್ಕೆ ಬಂದ್ರು ಬೆಲೆ ಸಿಕ್ತಿಲ್ಲ. ಬೆಂಗಳೂರಿನಂತಹ ನಗರದ ಹಲವು ಭಾಗಗಳಲ್ಲಿ ಇಂದು ಕುಡಿಯಲು ನೀರು ಸಿಗುತ್ತಿಲ್ಲ. ಸಿಕ್ಕ ನೀರು ಕುಡಿದ್ರೆ ಶೌಚ ಮಾಡೊದೆಲ್ಲಿ ಅಂತ ಪ್ರಶ್ನಿಸುವವರ ಕಣ್ಣೀರ ಕಥೆ ಇಲ್ಲಿದೆ.

    ಸಿಲಿಕಾನ್ ಸಿಟಿ, ಉದ್ಯಾನನಗರಿ, ಐಟಿ ಬಿಟಿ ಹೀಗೆ ಇಡೀ ವಿಶ್ವದಲ್ಲಿ ಬೆಂಗಳೂರು ನಗರಕ್ಕೆ ತನ್ನದೇ ಆದ ಹೆಸರಿದೆ. ಬೆಂಗಳೂರಿನ ಯಶವಂತಪುರ ಆರ್‍ಎಂಸಿ ಯಾರ್ಡ್ ಬರೋಬ್ಬರಿ 68 ಎಕರೆ ವ್ಯಾಪ್ತಿಯಲ್ಲಿದೆ. ಇಲ್ಲಿ ಕೆಲಸ ಮಾಡುವ ಮಹಿಳೆಯರ ಕಷ್ಟ ಯಾರಿಗೂ ಬೇಡ ಅನ್ನುವಂತಾಗಿದೆ. ಎಪಿಎಂಸಿಯಲ್ಲಿ ನಿತ್ಯ ಸಾವಿರಾರು ಮಹಿಳೆಯರು ಕೆಲಸ ಮಾಡ್ತಾರೆ. ಅವರಿಗೆ ಎಪಿಎಂಸಿಯಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲ. ಇದಕ್ಕಾಗಿ ಅವರು ಬಯಲು ಶೌಚಾಲಯಕ್ಕೆ ಹೋಗುವ ದುಸ್ಥಿತಿ ಎದುರಾಗಿದೆ.

    ಇಲ್ಲಿರುವ ಬಾತ್‍ರೂಂಗಳನ್ನು ಒಡೆದು ಬಿಲ್ಡಿಂಗ್ ಕಟ್ಟಲಾಗಿದೆ. ಇನ್ನೊಂದು ಶೌಚಾಲಯಕ್ಕೆ ಹೋಗೋದಕ್ಕೆ ಸಾಧ್ಯವಾಗದ ಪರಿಸ್ಥಿತಿ ಇದೆ. ಹೀಗಾಗಿ ನಾವು ಇಲ್ಲಿ ನೀರು ಕುಡಿಯೋಕು ಯೋಚನೆ ಮಾಡ್ತೀವಿ. ಬಯಲು ಶೌಚಾಲಯಕ್ಕೆ ಹೋಗುವ ಅನಿವಾರ್ಯತೆ ಇದೆ ಅಂತಾ ಮಹಿಳೆಯರು ಹೇಳುತ್ತಾರೆ.

    ಯಶವಂತಪುರದಲ್ಲಿ 15ಕ್ಕೂ ಹೆಚ್ಚು ಕಡೆ ಶೌಚಾಲಯವಿದೆ. ಆದರೆ ಸ್ವಚ್ಛತೆ ಕೊರತೆ, ನಿರ್ವಹಣೆ ಸಮಸ್ಯೆ ಬಯಲು ಶೌಚಕ್ಕೆ ದಾರಿ ಮಾಡಿಕೊಟ್ಟಿದೆ. ಶೌಚಾಲಯದ ಸಮಸ್ಯೆ ಒಂದೆಡೆಯಾದರೆ ಕುಡಿಯುವ ನೀರಿನ ಸಮಸ್ಯೆ ಮತ್ತೊಂದೆಡೆ. ಹತ್ತಾರು ಎಕರೆಯ ಎಪಿಎಂಸಿಯಲ್ಲಿ ಈಗಲೂ ಕೇವಲ 5 ಕಡೆ ಮಾತ್ರ ನೀರಿನ ವ್ಯವಸ್ಥೆ ಇದೆ. ಅದು ಶುದ್ಧ ಕುಡಿಯುವ ನೀರಲ್ಲ. ಲಕ್ಷ ಜನರ ಸಂಚಾರ ಇರುವ ಕಡೆ ಬೆರಳೆಣಿಕೆಯಷ್ಟು ಶೌಚಾಲಯಗಳಿವೆ. ಕುಡಿಯುವ ನೀರಿನ ನಿರ್ವಹಣೆ ಇಲ್ಲ ಎಂದು ವರ್ತಕರು ಬೇಸರ ವ್ಯಕ್ತಪಡಿಸುತ್ತಾರೆ.

    ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ, ಸಚಿವರಾಗಿರುವ ಎಸ್.ಟಿ.ಸೋಮಶೇಖರ್ ಈ ಬಗ್ಗೆ ಗಮನ ಹರಿಸಬೇಕಿದೆ.

  • ಮಾಜಿ ಸಿಎಂ ತವರಲ್ಲಿ ವಿದ್ಯಾರ್ಥಿಗಳಿಗೆ ಬಯಲೇ ಶೌಚಾಲಯ

    ಮಾಜಿ ಸಿಎಂ ತವರಲ್ಲಿ ವಿದ್ಯಾರ್ಥಿಗಳಿಗೆ ಬಯಲೇ ಶೌಚಾಲಯ

    ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಬಯಲೇ ಶೌಚಾಲಯವಾಗಿರುವ ದುಸ್ಥಿತಿ ನಿರ್ಮಾಣವಾಗಿದೆ.

    ಜಿಲ್ಲೆಯ ನಂಜನಗೂಡು ತಾಲೂಕಿನ ಕಸುವಿನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಇಂತಹ ದುಸ್ಥಿತಿ ಎದುರಿಸುತ್ತಿದ್ದಾರೆ. ಸಮರ್ಪಕ ಶೌಚಾಲಯದ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳು ಶಾಲೆಯ ಬಳಿ ಬೆಳೆದಿರುವ ಮುಳ್ಳಿನ ಪೊದೆಗಳ ಮೊರೆ ಹೋಗಿದ್ದಾರೆ.

    ಹಾವು, ಚೇಳುಗಳ ಆವಾಸ ಸ್ಥಾನವಾಗಿರುವ ಪೊದೆಗಳ ಬಳಿ ಮಕ್ಕಳಿಗೆ ಯಾವುದೇ ಕ್ಷಣದಲ್ಲಾದರೂ ಅಪಾಯ ಸಂಭವಿಸುವ ಸಾಧ್ಯತೆ ಇದೆ. 300 ಕ್ಕೂ ಹೆಚ್ಚು ಮಕ್ಕಳಿರುವ ಪ್ರೌಢಶಾಲೆಯಲ್ಲಿ ಹೆಣ್ಣು ಮಕ್ಕಳೂ ಸಹ ಇದ್ದಾರೆ. ವಿಧ್ಯಾರ್ಥಿನಿಯರಿಗೂ ಇದೇ ಪರಿಸ್ಥಿತಿ ಇದೆ. ಖಾಸಗಿ ಕಂಪನಿ ನೆರವಿನಿಂದ ಶೌಚಾಲಯ ನಿರ್ಮಾಣವಾಗಿದ್ದರೂ ನೀರಿನ ಸಮಸ್ಯೆಯಿಂದ ಅದನ್ನು ಮುಚ್ಚಲಾಗಿದೆ.

    ಖಾಸಗಿ ಶಾಲೆಗಳ ಹಾವಳಿಯಲ್ಲೂ ಈ ಸರ್ಕಾರಿ ಶಾಲೆಗೆ ಪ್ರವೇಶಾತಿ ಗಣನೀಯವಾಗಿದೆ. ಹೀಗಿದ್ದೂ ಅವ್ಯವಸ್ಥೆಯನ್ನ ಸರಿಪಡಿಸುವ ವಿಚಾರದಲ್ಲಿ ಶಾಲಾ ಆಡಳಿತ ಮಂಡಳಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಹಲವಾರು ದಿನಗಳಿಂದಲೂ ಮಕ್ಕಳು ಬಯಲನ್ನೇ ಶೌಚಾಲಯ ಮಾಡಿಕೊಂಡಿದ್ದರೂ ಸರಿಪಡಿಸುವ ಗೋಜಿಗೆ ಹೋಗದೇ ಇರುವುದು ವಿಪರ್ಯಾಸವಾಗಿದೆ.

  • ಬಯಲಿನಲ್ಲಿ ಶೌಚ ಮಾಡಿದ್ರೆ ಇನ್ಮುಂದೆ ಬೀಳುತ್ತೆ ಭಾರೀ ದಂಡ!

    ಬಯಲಿನಲ್ಲಿ ಶೌಚ ಮಾಡಿದ್ರೆ ಇನ್ಮುಂದೆ ಬೀಳುತ್ತೆ ಭಾರೀ ದಂಡ!

    ಮುಂಬೈ: ಇನ್ನು ಮುಂದೆ ಮಹಾರಾಷ್ಟ್ರದಲ್ಲಿ ಬಯಲಿನಲ್ಲಿ ಶೌಚ ಮಾಡಿದರೆ 500 ರೂ. ದಂಡ ವಿಧಿಸಲು ರಾಜ್ಯ ಸರ್ಕಾರ ನಿಯಮವನ್ನು ಜಾರಿ ಮಾಡಿದೆ.

    ಮಹಾರಾಷ್ಟ್ರ ಸರ್ಕಾರ ಬಯಲಿನಲ್ಲಿ ಶೌಚ ಮಾಡೋದು, ಉಗುಳುವುದು, ಮೂತ್ರ ವಿಸರ್ಜನೆ, ರಸ್ತೆ ಬದಿ ಕಸ ಹಾಕೋದು ಸೇರಿದಂತೆ ಎಲ್ಲ ಗಲೀಜು ಕೆಲಸಗಳಿಗೆ ದಂಡವನ್ನು ವಿಧಿಸುವಂತೆ ನಗರ ಅಭಿವೃದ್ಧಿ ಇಲಾಖೆ ಹೊಸ ನಿಯಮವನ್ನು ಜಾರಿಗೆ ತಂದಿದೆ.

    ನಗರ ಪ್ರದೇಶ ಸೇರಿದಂತೆ ಎ, ಬಿ, ಸಿ ಮತ್ತು ಡಿ ಕೆಟಗಿರಿಯ ಸ್ಥಳಗಳಲ್ಲಿಯೂ ದಂಡದ ಪ್ರಮಾಣ ಒಂದೇ ಆಗಿರಲಿದೆ. ಇಂದಿನಿಂದ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಕಿದರೆ ಸ್ಥಳದಲ್ಲಿಯೇ 150 ರೂ. ದಿಂದ 180 ರೂ.ನಷ್ಟು ದಂಡವನ್ನು ಪಾವತಿಸಬೇಕಾಗುತ್ತದೆ.

    ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವ ಮೂಲಕ ಗಲೀಜು ಮಾಡಿದರೆ 100 ರಿಂದ 150 ರೂ. ದಂಡ ಕಟ್ಟಬೇಕಾಗುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜಿಸಿದರೆ 150 ರಿಂದ 200 ರೂ.ವರೆಗೆ ದಂಡವನ್ನು ಪಾವಸಿಬೇಕಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

    ಕೇಂದ್ರ ಸರ್ಕಾರ ಸ್ವಚ್ಛ ಭಾರತ್ ಅಭಿಯಾನವನ್ನ ಆರಂಭಿಸಿದ ರೀತಿಯಲ್ಲಿಯೇ ಮಹಾರಾಷ್ಟ್ರ ಸರ್ಕಾರ ಕೂಡ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದೆ. 2017ರ ಅಕ್ಟೋಬರ್ 1 ರಂದು ಭೇಟಿ ನೀಡಿದ್ದ ವೇಳೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಹಾರಾಷ್ಟ್ರದ ಎಲ್ಲ ನಗರ ಪ್ರದೇಶಗಳು ಬಯಲು ಶೌಚಾಲಯದಿಂದ ಮುಕ್ತವಾಗಿದೆ ಅಂತಾ ಘೋಷಿಸಿದ್ದರು.

  • ಬಯಲಲ್ಲಿ ಶೌಚಾಲಯ ಮಾಡಿದ್ದಕ್ಕೆ ಶಿಕ್ಷಕ ಅಮಾನತು!

    ಬಯಲಲ್ಲಿ ಶೌಚಾಲಯ ಮಾಡಿದ್ದಕ್ಕೆ ಶಿಕ್ಷಕ ಅಮಾನತು!

    ಭೋಪಾಲ್: ಬಯಲಿನಲ್ಲಿ ಶೌಚಾಲಯ ಮಾಡಿದ್ದಕ್ಕೆ ಮಧ್ಯಪ್ರದೇಶದ ಸರ್ಕಾರಿ ಶಿಕ್ಷಕರೊಬ್ಬರನ್ನು ಶಿಕ್ಷಣ ಇಲಾಖೆಯು ಅಮಾನತು ಮಾಡಿದೆ.

    ಅಶೋಕ್ ನಗರ ಜಿಲ್ಲೆಯ ಶಿಕ್ಷಣ ಇಲಾಖೆಯ ಅಧಿಕಾರಿ ಆದಿತ್ಯಾ ನಾರಾಯಣ ಮಿಶ್ರಾ ಅವರು ಈ ಅದೇಶವನ್ನು ಹೊರಡಿಸಿ ಬುಡೇರಾ ಶಾಲೆಯ ಶಿಕ್ಷಕರನ್ನು ಅಮಾನತು ಮಾಡಿದ್ದಾರೆ. ಬಯಲಿನಲ್ಲಿ ಶೌಚಾಲಯ ನಡೆಸಿ ಸರ್ಕಾರಿ ಮಾರ್ಗದರ್ಶಿ ಸೂತ್ರಗಳ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಸ್ವಚ್ಛ ಭಾರತದ ಅಭಿಯಾನದ ಅಡಿಯಲ್ಲಿ ಎಲ್ಲಾ ಶಾಲಾ ಶಿಕ್ಷಕರಿಗೂ ಸ್ವಚ್ಛತೆಯ ಕುರಿತು ಅರಿವು ಮೂಡಿಸುವ ಜವಾಬ್ದಾರಿಯನ್ನು ನೀಡಲಾಗಿತ್ತು. ಆದರೆ ಶಿಕ್ಷಕ ಬಯಲು ಶೌಚಕ್ಕೆ ತೆರಳುವುದನ್ನು ನೋಡಿದವರು ಜಿಲ್ಲೆಯ ಅಧಿಕಾರಿಗಳಿಗೆ ವರದಿ ನೀಡಿದ್ದರು. ಈ ವರದಿಯನ್ನು ಅಧರಿಸಿ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಶಿಕ್ಷಣ ಅಧಿಕಾರಿ ಮಿಶ್ರಾ ತಿಳಿಸಿದ್ದಾರೆ.

    ಇದೇ ವರ್ಷ ಜೂನ್ ತಿಂಗಳಿನಲ್ಲಿ ಮಧ್ಯಪ್ರದೇಶದ ರೈಸನ್ ಜಿಲ್ಲೆಯ ವೀರ್ ಪುರ್ ಪಂಚಾಯತ್ ಅಧಿಕಾರಿಗಳು ಬಯಲು ಶೌಚ ಮಾಡಿದ 13 ಕುಟುಂಬಗಳಿಗೆ 4 ಲಕ್ಷ ರೂ.ಗಳನ್ನು ದಂಡವಾಗಿ ವಿಧಿಸಿದ್ದರು.

    ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ್ ಅಭಿಯಾನವನ್ನು 2014ರ ಅಕ್ಟೋಬರ್ 02 ರಂದು ಆರಂಭಿಸಿದ್ದು, 2019 ರ ವೇಳೆಗೆ ಬಯಲು ಶೌಚಮುಕ್ತ ಭಾರತವನ್ನು ನಿರ್ಮಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ.