Tag: ಬಯಲು

  • ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ- ಬಯಲಲ್ಲೇ ಹೆಣ್ಣು ಮಗುವಿಗೆ ಜನ್ಮ

    ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ- ಬಯಲಲ್ಲೇ ಹೆಣ್ಣು ಮಗುವಿಗೆ ಜನ್ಮ

    – ಚಿತ್ರದುರ್ಗದಲ್ಲಿ ಅಮಾನವೀಯ ಘಟನೆ

    ಚಿತ್ರದುರ್ಗ: ಆರೋಗ್ಯ ಕೇಂದ್ರದ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಮಹಿಳೆಯೊಬ್ಬರು ಬಯಲಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಅಮಾನವೀಯ ಘಟನೆಯೊಂದು ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಸಂಬಂಧಿಕರು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

    ಘಟನೆ ವಿವರ:
    ಸೋಮವಾರ 11 ಗಂಟೆ ಸುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಪತಿ ಚೌಡಪ್ಪ ಕೂಡಲೇ ಗಂಗಮಲ್ಲಮ್ಮ(30) ಅವರನ್ನು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಅಲ್ಲಿ ಮಧ್ಯಾಹ್ನದವರೆಗೆ ಕಾಯುವಂತೆ ಹೇಳಿದ್ದಾರೆ. ಅಲ್ಲದೇ ಸ್ವಲ್ಪ ಸಮಯದ ಬಳಿಕ ಬಂದು ಇದು ಊಟದ ಸಮಯವಾಗಿದೆ. ಹೀಗಾಗಿ ಮನೆಗೆ ತೆರಳಿ ಮಧ್ಯಾಹ್ನದ ನಂತರ ಬನ್ನಿ ಎಂದು ಆರೋಗ್ಯ ಕೇಂದ್ರದ ನರ್ಸ್ ಹಾಗೂ ವೈದ್ಯರು ಸೂಚಿಸುವ ಮೂಲಕ ಅಮಾನವೀಯತೆ ಮೆರೆದಿದ್ದಾರೆ ಎಂದು ಪತಿ ಚೌಡಪ್ಪ ಆರೋಪಿಸಿದ್ದಾರೆ.

    ವೈದ್ಯರ ಸೂಚನೆಯಂತೆ ಚೌಡಪ್ಪ, ತನ್ನ ಗರ್ಭಿಣಿ ಪತ್ನಿಯನ್ನು ಆರೋಗ್ಯ ಕೇಂದ್ರದಿಂದ ಮನೆಗೆ ಕರೆದೊಯ್ಯುತ್ತಿರುವಾಗ ಮಾರ್ಗ ಮಧ್ಯೆ ಗಂಗಮಲ್ಲಮ್ಮ ಅವರಿಗೆ ಪ್ರಸವ ನೋವು ಜಾಸ್ತಿಯಾಗಿದೆ. ಹೀಗಾಗಿ ಮಹಿಳೆಯರು ಬಯಲಲ್ಲೇ ಗರ್ಭಿಣಿ ಸುತ್ತ ಬಟ್ಟೆ ಹಿಡಿದು ನಿಂತು ಹೆರಿಗೆ ಮಾಡಿಸಿದ್ದಾರೆ. ನಂತರ ಬಾಣಂತಿ ಹಾಗೂ ಮಗುವನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

    ಈ ಘಟನೆ ಸುದ್ದಿಯಾಗುತ್ತಿದ್ದಂತೆಯೇ ಚಿತ್ರಹಳ್ಳಿ ಆರೋಗ್ಯ ಕೇಂದ್ರದ ಸಿಬ್ಬಂದಿ ವಿರುದ್ಧ ಸಂಬಂಧಿಕರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ನಿರ್ಲಕ್ಷ್ಯ ತೋರಿದ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಹೀಗಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನೀರಜ್ ಪಾಟೀಲ್ ಅವರು ಪ್ರತಿಕ್ರಿಯಿಸಿ, ಈ ಕುರಿತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೈತ ಸಂಪರ್ಕ ಕೇಂದ್ರ ಅಧಿಕಾರಿಗಳಿಂದ ಅಕ್ರಮ: ಶಾಸಕ ದೇವಾನಂದ ತರಾಟೆ

    ರೈತ ಸಂಪರ್ಕ ಕೇಂದ್ರ ಅಧಿಕಾರಿಗಳಿಂದ ಅಕ್ರಮ: ಶಾಸಕ ದೇವಾನಂದ ತರಾಟೆ

    ವಿಜಯಪುರ: ರೈತ ಸಂಪರ್ಕ ಕೇಂದ್ರವೊಂದಕ್ಕೆ ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಅವರು ದಿಢೀರ್ ಭೇಟಿ ನೀಡಿದ್ದು, ಅಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ಬಯಲಿಗೆಳೆದಿದ್ದಾರೆ.

    ಜಿಲ್ಲೆಯ ಇಂಡಿ ತಾಲೂಕಿನ ಚಡಚಣ ರೈತ ಸಂಪರ್ಕ ಕೇಂದ್ರದಲ್ಲಿ ರೈತರ ಶೋಷಣೆ ನಡೆಯುತ್ತಿದೆ ಎಂಬ ಮಾಹಿತಿಯನ್ನು ಶಾಸಕ ದೇವಾನಂದ ಅವರು ಪಡೆದಿದ್ದರು. ಈ ಹಿನ್ನೆಲೆಯಲ್ಲಿ ರೈತ ಸಂಪರ್ಕ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ್ದು, ಅಕ್ರಮ ಅರಿತು ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.

    ಸಬ್ಸಿಡಿ ದರದಲ್ಲಿ ರೈತರಿಗೆ ವಿತರಿಸಬೇಕಾಗಿದ್ದ ಸಲಕರಣೆಗಳನ್ನು ಖಾಸಗಿ ಜಮೀನಿನಲ್ಲಿ ಇಡಲಾಗಿದೆ ಎನ್ನುವ ಮಾಹಿತಿಯನ್ನು ಶಾಸಕ ದೇವಾನಂದ ಪಡೆದುಕೊಂಡಿದ್ದರು. ಹೀಗಾಗಿ ಅಲ್ಲಿಗೇ ಭೇಟಿ ನೀಡಿ, ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ಬೀಜ, ಔಷಧಿ ಮತ್ತು ಡೀಸೆಲ್ ಪಂಪ್‍ಸೆಟ್ ಎಂಜಿನ್ ಪತ್ತೆ ಹಚ್ಚಿದ್ದಾರೆ. ಅಧಿಕಾರಿಗಳು ಡೀಸೆಲ್ ಎಂಜಿನ್ ಯಾರಿಗೂ ಗೊತ್ತಾಗಬಾರದು ಎಂದು ಕಟ್ಟಿಗೆ ಬಾಕ್ಸ್‍ನಲ್ಲಿ ಇಟ್ಟಿದ್ದರು. ಕಟ್ಟಿಗೆ ಬಾಕ್ಸ್ ಒಡೆದು ಅಧಿಕಾರಿಗಳ ಅಕ್ರಮವನ್ನು ಬಯಲಿಗೆಳೆದಿದ್ದಾರೆ. ಈ ವೇಳೆ ಯಾವುದೇ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸದೇ ಇರುವುದಕ್ಕೆ ಶಾಸಕರು ಅಸಮಾಧಾನ ಹೊರಹಾಕಿದರು.

    ಅಧಿಕಾರಿಗಳ ಅಕ್ರಮ ಸಂಗ್ರಹಣೆ ಆರೋಪದ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ದೇವಾನಂದ ಚವ್ಹಾಣ ಅವರು, ಅಧಿಕಾರಿಗಳ ಅಕ್ರಮದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಗಮನಕ್ಕೆ ತರಲಾಗುವುದು. ಅಲ್ಲದೇ, ಅಧಿಕಾರಿಗಳ ವಿರುದ್ಧ ಚಡಚಣ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತೇನೆ ಎಂದು ಶಾಸಕರು ಹೇಳಿದರು.