Tag: ಬಮೂಲ್

  • ಬಮೂಲ್ ಅಧ್ಯಕ್ಷರಾಗಿ ಮಾಜಿ ಸಂಸದ ಡಿ.ಕೆ.ಸುರೇಶ್ ಅವಿರೋಧ ಆಯ್ಕೆ

    ಬಮೂಲ್ ಅಧ್ಯಕ್ಷರಾಗಿ ಮಾಜಿ ಸಂಸದ ಡಿ.ಕೆ.ಸುರೇಶ್ ಅವಿರೋಧ ಆಯ್ಕೆ

    ಬೆಂಗಳೂರು: ಸಹಕಾರ ಹಾಲು ಒಕ್ಕೂಟ (Bamul)ದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಡಿ.ಕೆ.ಸುರೇಶ್ (D.K.Suresh) ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಬಮೂಲ್ ಆಡಳಿತ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಸುರೇಶ್ ಅವರು ಬೆಂಗಳೂರು ಡೈರಿ ಸರ್ಕಲ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದರು. ಈ ಸ್ಥಾನಕ್ಕೆ ಬೇರೆ ಯಾರೂ ಉಮೇದುವಾರಿಕೆ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಗುತ್ತಿಗೆ ಆಯ್ತು ಈಗ ವಸತಿ ಯೋಜನೆಯಲ್ಲೂ ಮುಸ್ಲಿಮ್‌ ಮೀಸಲಾತಿ ಶೇ.15ಕ್ಕೆ ಹೆಚ್ಚಳ

    ನಂತರ ಮಾತನಾಡಿದ ಅವರು, ಬೆಂಗಳೂರು ಸಹಕಾರ ಹಾಲು ಒಕ್ಕೂಟ ನಿಯಮಿತ (ಬಮೂಲ್)ನಲ್ಲಿ 16 ನಿರ್ದೇಶಕರ ಪೈಕಿ 14 ಜನ ಚುನಾವಣೆ ಮೂಲಕ ಆರಿಸಲಾಗಿದ್ದು, ಇಬ್ಬರು ಸರ್ಕಾರದಿಂದ ನಾಮನಿರ್ದೇಶನಗೊಂಡಿದ್ದಾರೆ. ಬಮೂಲ್‌ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನನ್ನನ್ನು ಅಧ್ಯಕ್ಷನನ್ನಾಗಿ, ಮಾಗಡಿ ತಾಲೂಕಿನ ಕುದೂರು ರಾಜಣ್ಣ ಅವರನ್ನು ಉಪಾಧ್ಯಕ್ಷರನ್ನಾಗಿ ಎಲ್ಲಾ ನಿರ್ದೇಶಕರು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ನಮ್ಮ ಪಕ್ಷದ ಅಧ್ಯಕ್ಷರಾದ ಡಿಸಿಎಂ ಡಿ.ಕೆ.ಶಿವಕುಮಾರ್, ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್.ಮುನಿಯಪ್ಪ, ಶಾಸಕರಾದ ಬಾಲಕೃಷ್ಣ, ಸಿ.ಪಿ.ಯೋಗೇಶ್ವರ್, ಇಕ್ಬಾಲ್ ಹುಸೇನ್, ಶಿವಣ್ಣ, ಶರತ್ ಬಚ್ಚೇಗೌಡ, ಕೃಷ್ಣ ಬೈರೇಗೌಡರು ಸೇರಿದಂತೆ ಬಮೂಲ್‌ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಸಕರ ಸರ್ವಸಮ್ಮತದ ತೀರ್ಮಾನದಂತೆ ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

    ಈ ಸಂದರ್ಭದಲ್ಲಿ ಎಲ್ಲರಿಗೂ ನಾನು ವೈಯಕ್ತಿಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇಂದು ನಡೆದ ಚುನಾವಣೆಯಲ್ಲಿ ಸಹಕಾರ ಸಂಸ್ಥೆ ಜವಾಬ್ದಾರಿಯನ್ನು ನನಗೆ ನೀಡಿದ್ದಾರೆ. ಈ ಒಕ್ಕೂಟದ ಹಾಲು ಉತ್ಪಾದಕರು, ರೈತ ಬಾಂಧವರು ನಮ್ಮ ಮೇಲೆ ನಿರೀಕ್ಷೆ ಇಟ್ಟು ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಅವರಿಗೂ ಧನ್ಯವಾದ ತಿಳಿಸುತ್ತೇನೆ. ಹಾಲು ಉತ್ಪಾದಕರು, ನಿರ್ದೇಶಕರು ಬದಲಾವಣೆ ತರುವ ನಿರೀಕ್ಷೆ ಹೊಂದಿದ್ದು, ಎಲ್ಲರ ಸಹಕಾರ ಪಡೆದು ಬೆಂಗಳೂರು ಸಹಕಾರ ಹಾಲು ಒಕ್ಕೂಟ ಹಾಗೂ ರೈತರಿಗೆ ನ್ಯಾಯ ಒದಗಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಕೇತಗಾನಹಳ್ಳಿ ಭೂ ಒತ್ತುವರಿ ಪ್ರಕರಣ – ಹೆಚ್‌ಡಿಕೆಗೆ ಬಿಗ್ ರಿಲೀಫ್

    ಕನಕಪುರ ಹಾಲು ಒಕ್ಕೂಟದಲ್ಲಿ ಇತ್ತೀಚೆಗೆ ಪರಿಸರಸ್ನೇಹಿ ಹಾಲಿನ ಪ್ಯಾಕೆಟ್ ಪರಿಚಯಿಸಿದ್ದೀರಿ. ಅದನ್ನು ಬಮೂಲ್‌ಗೂ ವಿಸ್ತರಣೆ ಮಾಡುತ್ತೀರಾ ಎಂದು ಕೇಳಿದಾಗ, ನಾವು ಪರಿಸರ ಸ್ನೇಹಿ ಹಾಲಿನ ಪ್ಯಾಕೆಟ್ ಅನ್ನು ಪರಿಚಯಿಸಿದ್ದು, ಇದನ್ನು ಬೆಂಗಳೂರಿಗೆ ಮಾತ್ರವಲ್ಲ ಕರ್ನಾಟಕ ರಾಜ್ಯಾದ್ಯಂತ ಪರಿಚಯಿಸುವ ಚಿಂತನೆ ಇದೆ. ಪ್ರಾಯೋಗಿಕವಾಗಿ ಒಂದು ಪಂಚಾಯ್ತಿ ಮಟ್ಟದಲ್ಲಿ ಇದನ್ನು ವಿತರಣೆ ಮಾಡಿದ್ದೇವೆ. ಮುಂದಿನ ಆಡಳಿತ ಮಂಡಳಿಯಲ್ಲಿ ಇದರ ಸಾಧಕ-ಬಾಧಕಗಳನ್ನು ವಿಸ್ತೃತವಾಗಿ ಚರ್ಚೆ ಮಾಡಿ ತೀರ್ಮಾನ ಮಾಡಲಾಗುವುದು. ಮಾರುಕಟ್ಟೆ ವ್ಯಾಪ್ತಿ ಹೆಚ್ಚಿಸಿ, ಹಾಲು ಉತ್ಪಾದಕರಿಗೆ ನ್ಯಾಯ ಒದಗಿಸುವ ಜವಾಬ್ದಾರಿ ನಮ್ಮ ಮೇಲಿದ್ದು, ಹಂತಹಂತವಾಗಿ ಇದನ್ನು ಮಾಡುತ್ತೇವೆ. ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಸೇರಿ ಸಂಘದ ಆಗುಹೋಗುಗಳ ಬಗ್ಗೆ ಸರ್ಕಾರದ ಜತೆ ಚರ್ಚಿಸಿ, ಬದಲಾವಣೆ ತರಬೇಕಾಗಿದೆ. ಈ ನಿಟ್ಟಿನಲ್ಲಿ ಮಾಧ್ಯಮ ಸೇರಿದಂತೆ ಎಲ್ಲರ ಸಹಕಾರ ಕೋರುತ್ತೇನೆ. ರೈತರ ಬದುಕು ಹಾಲಿನ ಕ್ಷೇತ್ರದಲ್ಲಿದೆ. ನೀವು ನನ್ನ ಮೇಲೆ ಹಾಗೂ ಒಕ್ಕೂಟದ ಮೇಲೆ ನಂಬಿಕೆ ಇಟ್ಟಿದ್ದು, ಇದಕ್ಕೆ ನ್ಯಾಯವನ್ನು ಒದಗಿಸುವಂತೆ ಬದಲಾವಣೆ ತರುವ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.

  • ಪಕ್ಷದ ಮುಖಂಡರ ಒತ್ತಾಯದ ಮೇರೆಗೆ ಬಮೂಲ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ: ಡಿಕೆ ಸುರೇಶ್

    ಪಕ್ಷದ ಮುಖಂಡರ ಒತ್ತಾಯದ ಮೇರೆಗೆ ಬಮೂಲ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ: ಡಿಕೆ ಸುರೇಶ್

    ಬೆಂಗಳೂರು: ಪಕ್ಷದ ಮುಖಂಡರ ಒತ್ತಾಯದ ಮೇರೆಗೆ ಬೆಂಗಳೂರು ಸಹಕಾರ ಹಾಲು ಒಕ್ಕೂಟದ (BAMUL) ಕನಕಪುರ ನಿರ್ದೇಶಕ ಸ್ಥಾ‌ನಕ್ಕೆ ಸ್ಪರ್ಧಿಸಿದ್ದೇನೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ (DK Suresh) ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಚುನಾವಣೆಯಲ್ಲಿ ಎಲ್ಲಾ ಹಿರಿಯ ನಾಯಕರು, ಶಾಸಕರು ಹಾಗೂ ಹಾಲು ಉತ್ಪಾದಕರ ಸಲಹೆ ಹಾಗೂ ಪಕ್ಷದ ನಾಯಕರ ಸೂಚನೆ ಮೇರೆಗೆ ಇಂದು ಜಿಲ್ಲಾ ಮುಖಂಡರ ಸಮ್ಮುಖದಲ್ಲಿ ಕನಕಪುರ ಕ್ಷೇತ್ರದ ನಿರ್ದೇಶಕ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯ ಮುಖಂಡರ ತೀರ್ಮಾನ ಹಾಗೂ ಸಹಕಾರದೊಂದಿಗೆ ನಾಮಪತ್ರ ಸಲ್ಲಿಸಲಾಗಿದೆ ಎಂದರು.

    ವಿಶ್ರಾಂತಿ ಅವಧಿ ಮುಗಿಸಿದ ಮೇಲೆ ಕೆಎಂಎಫ್ ಅಧ್ಯಕ್ಷ (KMF President) ಸ್ಥಾನಕ್ಕೆ ಸುರೇಶ್ ಕಣ್ಣಿಟ್ಟಿದ್ದಾರೆ ಎಂದು ಕೇಳಿದಾಗ, ಸದ್ಯಕ್ಕೆ ಕೆಎಂಎಫ್ ವಿಚಾರ ಚರ್ಚೆಯಲ್ಲಿಲ್ಲ. ಕಳೆದ 10 ವರ್ಷಗಳಿಂದ ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷರಾಗಿ, ನಿರ್ದೇಶಕರುಗಳಾಗಿ ನಮ್ಮ ಪಕ್ಷದ ಮುಖಂಡರು ಸೇವೆ ಸಲ್ಲಿಸಿದ್ದಾರೆ. ‌ಹಾಗಾಗಿ ಇದರಲ್ಲಿ ವಿಶೇಷತೆ ಏನೂ ಇಲ್ಲ. ನಾನು ಅವರೆಲ್ಲರ ಜೊತೆ ಇರಬೇಕು ಎಂದು ಒತ್ತಾಯ ಮಾಡಿದ ಕಾರಣಕ್ಕೆ ಜೊತೆಯಾಗಿ ನಿಂತಿದ್ದೇನೆ ಎಂದು ಉತ್ತರಿಸಿದರು. ಇದನ್ನೂ ಓದಿ: ಆರ್‌ಸಿಬಿ, ಕೆಕೆಆರ್‌ ಪಂದ್ಯ 5 ಓವರ್‌ಗೆ ಸೀಮಿತವಾಗುತ್ತಾ?

     

    ಮುಂದೆ ನೀವು ಕೆಎಂಎಫ್ ಅಧ್ಯಕ್ಷ ಸ್ಥಾನದ ಅಲಂಕರಿಸುವ ಲೆಕ್ಕಾಚಾರದೊಂದಿಗೆ ನಿಮ್ಮ ನಾಮಪತ್ರ ಕುತೂಹಲ ಮೂಡಿಸಿದೆ ಎಂದು ಕೇಳಿದಾಗ, ಮಾಧ್ಯಮಗಳು ಹಾಗೂ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಲೆಕ್ಕಾಚಾರಗಳು ಚರ್ಚೆಯಾಗುತ್ತಿವೆ. ಬೆಂಗಳೂರು ಹಾಲು ಒಕ್ಕೂಟಕ್ಕೆ ಸೇರುವ ಎಲ್ಲಾ ತಾಲೂಕುಗಳು ಹಾಲು ಉತ್ಪಾದನೆಯಲ್ಲಿ ಸಾಕಷ್ಟು ಸಾಧನೆ ಮಾಡಿದ್ದು, ಅನೇಕ ರೈತರು ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಹಾಲು ಹಾಗೂ ರೇಷ್ಮೆ ನಮ್ಮ ರೈತರ ಜೀವನಾಡಿ. ಇವೆರಡಕ್ಕೂ ನ್ಯಾಯ ಕೊಡಿಸುವುದು ಒಕ್ಕೂಟಕ್ಕೆ ಸೇರಿದ ಎಲ್ಲಾ ನಾಯಕರ ಅಭಿಪ್ರಾಯ. ಅವರ ತೀರ್ಮಾನದಂತೆ ಅರ್ಜಿ ಸಲ್ಲಿಸಿದ್ದೇನೆ. ಸ್ಪರ್ಧೆಯಿಂದ ಡಿ.ಕೆ ಸಹೋದರರು ಹಾಗೂ ದೇವೇಗೌಡರ ಕುಟುಂಬದ ನಡುವಣ ಹೋರಾಟ ಎಂದು ಬಿಬಿತವಾಗಿ ಚರ್ಚೆ ಮಾಡುವವರು ಯಾವ ರೀತಿ ಬೇಕಾದರೂ ಚರ್ಚೆ ಮಾಡುತ್ತಾರೆ. ನಮ್ಮ ಉದ್ದೇಶ ರೈತರ ಹಿತ ಕಾಪಾಡುವುದು. ಕ್ಷೀರ ಕ್ಷೇತ್ರದಲ್ಲಿ ಗಣನೀಯ ಬದಲಾವಣೆ ತರಬೇಕು ಎಂಬ ರೈತರ ಇಚ್ಛೆಗೆ ಕೆಲಸ ಮಾಡಬೇಕು. ಅದನ್ನು ಪಾಲಿಸಲು ನಾನು ಬದ್ಧನಾಗಿದ್ದೇನೆ ಎಂದರು. ಇದನ್ನೂ ಓದಿ: ಪಾಕ್ ವಿರುದ್ಧ ವಿದೇಶಗಳಿಗೆ ಸರ್ವಪಕ್ಷ ನಿಯೋಗ – ಯಾವ ದೇಶಕ್ಕೆ ಯಾರು ಹೋಗ್ತಾರೆ?

    ಕೆಎಂಎಫ್ ಅಧ್ಯಕ್ಷ ಸ್ಥಾನದ ಮೇಲೆ ಸಿದ್ದರಾಮಯ್ಯ (Siddaramaiah) ಹಾಗೂ ಡಿ.ಕೆ. ಶಿವಕುಮಾರ್ (DK Shivakumar) ಅವರ ಬಣದ ನಡುವೆ ಸ್ಪರ್ಧೆ ಎಂಬುದಿಲ್ಲ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದವರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾರೆ, ಶಿವಕುಮಾರ್ ಅವರು ಪಕ್ಷದ ಅಧ್ಯಕ್ಷರಾಗಿದ್ದಾರೆ. ಇಲ್ಲಿ ಯಾರ ಪರ ವಿರೋಧವಿಲ್ಲ. ಒಕ್ಕೂಟದ ಅಧ್ಯಕ್ಷ ಸ್ಥಾನ, ಚುನಾವಣೆ ಹಾಗೂ ಮತದಾನದ ಆಧಾರದ ಮೇಲೆ ನಡೆಯುತ್ತದೆ. ಅದರ ಆಧಾರದ ಮೇಲೆ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ನಲ್ಲಿ ಯಾರ ಬೆಂಬಲಿಗರು ಮುಂದಿದ್ದಾರೆ ಎಂದು ತೀರ್ಮಾನ ಮಾಡಲಾಗುವುದು. ಸಹಕಾರಿ ಚುನಾವಣೆಯಲ್ಲಿ ಪಕ್ಷ, ವ್ಯಕ್ತಿ ಇಲ್ಲ. ಸಹಕಾರ ಕ್ಷೇತ್ರ ಸೇವಾಮನೋಭಾವ ಇಟ್ಟುಕೊಂಡು ಕೆಲಸ ಮಾಡುವ ಕ್ಷೇತ್ರ. ಇದರಲ್ಲಿ ರಾಜಕೀಯ ಒಳ್ಳೆಯದಲ್ಲ. ಹಾಲಿನ ವ್ಯವಸ್ಥೆಯಲ್ಲಿ ರಾಜಕೀಯ ಪ್ರವೇಶವಾದರೆ ರೈತರ ಬದುಕಿಗೆ ಪೆಟ್ಟು ನೀಡುತ್ತದೆ. ಹೀಗಾಗಿ ಇಲ್ಲಿ ರಾಜಕೀಯ ಬೆರೆಸದೆ ಸರ್ಕಾರದ ಜತೆ ಹೊಂದಾಣಿಕೆ ಮಾಡಿಕೊಂಡು ರೈತರ ಪರವಾಗಿ ಕೆಲಸ ಮಾಡಬೇಕಾಗುತ್ತದೆ ಎಂದರು.

  • ರೈತರಿಗೆ ಸಿಹಿ, ಗ್ರಾಹಕರಿಗೆ ಕಹಿ – ಹೆಚ್ಚಳವಾಗಲಿದೆ ಹಾಲಿನ ದರ

    ರೈತರಿಗೆ ಸಿಹಿ, ಗ್ರಾಹಕರಿಗೆ ಕಹಿ – ಹೆಚ್ಚಳವಾಗಲಿದೆ ಹಾಲಿನ ದರ

    ಬೆಂಗಳೂರು: ಕೊರೊನಾ ಕೋಟ್ಯಂತರ ಸಮಸ್ಯೆಗಳನ್ನು ತಂದೊಡ್ಡಿ, ಇದೀಗ ಚೇತರಿಕೆ ಕಾಣುತ್ತಿರುವಾಗ ರಾಜ್ಯದ ರೈತರಿಗೆ ಸಿಹಿ ಸುದ್ದಿಯೊಂದು ಬಂದರೆ ಇತ್ತ ಗ್ರಾಹಕರಿಗೆ ಇದು ಶಾಕಿಂಗ್ ನ್ಯೂಸ್ ಆಗಿ ಪರಿಣಮಿಸಿದೆ.

    ಬಮೂಲ್ ರೈತರಿಂದ ಖರೀದಿಸುವ ಹಾಲಿನ ದರ ಹೆಚ್ಚಳ ಮಾಡಿ ರೈತರಿಗೆ ಸಿಹಿ ನೀಡಿದೆ. ಪ್ರತಿ ಲೀ. ಹಾಲಿಗೆ ರೈತರಿಗೆ ನೀಡುತ್ತಿದ್ದ ಹಣವನ್ನು 2 ರೂಪಾಯಿ ಹೆಚ್ಚಳ ಮಾಡಲಾಗಿದೆ ಎಂದು ಬೆಂಗಳೂರು ಸಹಕಾರ ಹಾಲು ಒಕ್ಕೂಟದ ನಿರ್ಧಾರ ಎಂದು ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದ್ದಾರೆ.

    ಕೋವಿಡ್ ಸಮಯದಲ್ಲಿ ಖರೀದಿ ಬೆಲೆ 2 ರೂ ಕಡಿಮೆ ಮಾಡಲಾಗಿತ್ತು. ಇದೀಗ ಮತ್ತೆ 2 ರೂ ಹೆಚ್ಚಳ ಮಾಡಲಾಗಿದೆ. ಬಮೂಲ್‍ಗೆ ಪ್ರತಿದಿನ 17.2 ಲಕ್ಷ ಲೀ. ಹಾಲು ಮಾರಾಟವಾಗುತ್ತಿದೆ. 2209 ಹಾಲು ಉತ್ಪಾದಕ ಪ್ರಾಥಮಿಕ ಕೇಂದ್ರ ಸಂಘಗಳು, 1,24,600 ಉತ್ಪಾದಕರು ಬಮೂಲ್‍ನಡಿಯಲ್ಲಿದ್ದಾರೆ.

    ಲಾಕ್ ಡೌನ್ ಮುನ್ನ 19 ಲಕ್ಷ ಲೀಟರ್ ಹಾಲು ಬಮೂಲ್‍ನಲ್ಲಿ ಮಾರಾಟವಾಗುತ್ತಿತ್ತು. ಲಾಕ್ ಡೌನ್ ವೇಳೆ 7 ಲಕ್ಷ ಲೀಟರ್ ಮಾರಾಟ ಕುಸಿತ ಕಂಡಿತು. ಆಗ ರೈತರಿಗೆ 2 ರೂ ಖರೀದಿ ದರ ಕಡಿತ ಮಾಡಲಾಗಿತ್ತು. ಈಗ ಮತ್ತೆ ಲಾಭದತ್ತ ನಡೆಯುತ್ತಿದ್ದು ರೈತರಿಗೆ ಮತ್ತೆ ಬೆಲೆ ಹೆಚ್ಚಿಸಿ ಸಿಹಿ ನೀಡಲು ತಯಾರಿ ನಡೆಸುತ್ತಿದೆ.

    ಇತ್ತ ರೈತರಿಗೆ ಸಿಹಿಯಾದರೇ ಅತ್ತ ಗ್ರಾಹಕರಿಗೆ ಇದು ಹೊರೆಯಾಗುವ ಎಲ್ಲಾ ಲಕ್ಷಣಗಳಿದ್ದು, ಹಾಲಿನ ಮಾರಾಟ ದರದಲ್ಲಿ 5 ರೂ. ಹೆಚ್ಚಳಕ್ಕೆ ಬಮೂಲ್ ಕೆಎಂಎಫ್‍ಗೆ ಮನವಿ ಮಾಡಿಕೊಂಡಿದೆ.

  • ಅಧಿಕಾರಿಗಳು, ರೈತರ ಮಾತಿನ ಚಕಮಕಿ- ಹಾಲು ಹಾಕಿಸಿಕೊಳ್ಳೋದನ್ನೇ ನಿಲ್ಲಿಸಿದ ಡೈರಿ

    ಅಧಿಕಾರಿಗಳು, ರೈತರ ಮಾತಿನ ಚಕಮಕಿ- ಹಾಲು ಹಾಕಿಸಿಕೊಳ್ಳೋದನ್ನೇ ನಿಲ್ಲಿಸಿದ ಡೈರಿ

    – ಸಾವಿರ ಲೀಟರಿಗೂ ಅಧಿಕ ಹಾಲು ಕೆರೆ ಪಾಲು

    ರಾಮನಗರ: ಬಮೂಲ್(ಬೆಂಗಳೂರು ಸಹಕಾರ ಹಾಲು ಒಕ್ಕೂಟ ನಿಯಮಿತ) ಅಧಿಕಾರಿಗಳು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪರಿಣಾಮ ಅಧಿಕಾರಿಗಳು ರೈತರು ತಂದ ಹಾಲನ್ನು ಸ್ವೀಕರಿಸದೆ ದ್ವೇಷ ಸಾಧಿಸುತ್ತಿದ್ದಾರೆ.

    ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಅಗರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಗರ ಗ್ರಾಮದಲ್ಲಿ ಮೂರು ದಿನಗಳ ಹಿಂದೆ ಬಮೂಲ್ ಅಧಿಕಾರಿಗಳು ಡೈರಿಗೆ ಬಂದಿದ್ದಾಗ, ರೈತರು ಡೈರಿ ಕಾರ್ಯದರ್ಶಿ ಬಳಿ ಲೆಕ್ಕ ಪತ್ರದ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆ ಆತ ಸರಿಯಾಗಿ ಮಾಹಿತಿ ನೀಡಿಲ್ಲ. ಅಲ್ಲದೆ ಅಧಿಕಾರಿಗಳು ಸಹ ಸರಿಯಾಗಿ ಸ್ಪಂದಿಸಿಲ್ಲ. ಆದರೆ ಕಳೆದ ಎರಡು ದಿನಗಳಿಂದ ರೈತು ಡೈರಿಗೆ ತಂದ ಹಾಲನ್ನು ಪಡೆದುಕೊಂಡು ನಂತರ ಸಾವಿರ ಲೀಟರ್‍ಗೂ ಹೆಚ್ಚು ಹಾಲನ್ನು ಕೆರೆಗೆ ಚೆಲ್ಲಿದ್ದಾರೆ. ಅಲ್ಲದೆ ಗ್ರಾಮದ ರೈತರ ಹಾಲು ಬೇಡವೇ ಬೇಡ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದರಿಂದ ಆಕ್ರೋಶಗೊಂಡ ರೈತರು, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಒಟ್ಟಾಗಿ ರಾಮನಗರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಹಾಲು ಪಡೆದು ಕೆರೆಗೆ ಚೆಲ್ಲಿರುವ ಬಗ್ಗೆ ಹಾಗೂ ಎರಡು ದಿನಗಳಿಂದ ಹಾಲನ್ನು ಹಾಕಿಸಿಕೊಳ್ಳದೇ ನಷ್ಟವನ್ನುಂಟು ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಈ ಸಂಬಂಧ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರೈತರು ಒತ್ತಾಯಿಸಿದರು.