Tag: ಬಬ್ಲಿಕ್ ಟಿವಿ

  • ಕೇಸ್ ಫೈಟ್ ಮಾಡಲು ಹಣ ಇಲ್ಲ, ಕಿಡ್ನಿ ಮಾರಲು ಅನುಮತಿ ನೀಡಿ – ಮೋದಿಗೆ ಕೈದಿ ಪತ್ರ

    ಕೇಸ್ ಫೈಟ್ ಮಾಡಲು ಹಣ ಇಲ್ಲ, ಕಿಡ್ನಿ ಮಾರಲು ಅನುಮತಿ ನೀಡಿ – ಮೋದಿಗೆ ಕೈದಿ ಪತ್ರ

    ಲಖ್ನೌ: ಕೈದಿಯೋರ್ವ ತನ್ನ ಮೇಲಿರುವ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಲು ಹಣದ ಅವಶ್ಯಕತೆ ಇದ್ದು, ತನ್ನ ಕಿಡ್ನಿ ಮಾರಲು ಅನುಮತಿ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾನೆ.

    ಲಸ್ಕರ್ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ರಾಜು (30) ಅಲಿಯಾಸ್ ಮದನ್ ಈ ಪತ್ರವನ್ನು ಬರೆದಿದ್ದಾನೆ. ಮಹಿಳೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಯತ್ನ ಕೇಸಿಗೆ ಸಂಬಂಧಪಟ್ಟಂತೆ 2014 ರಲ್ಲಿ ಜೈಲು ಸೇರಿದ್ದ ಈತ ಈಗಲೂ ನ್ಯಾಯಾಂಗ ಬಂಧನದಲ್ಲೇ ಇದ್ದಾನೆ.

    ಈ ಕೊಲೆಗೂ ತನಗೂ ಯಾವುದೇ ಸಂಬಂಧವಿಲ್ಲ, ಆದರೂ ನನ್ನನ್ನು ಕೇಸ್ ನಲ್ಲಿ ಜೈಲಿಗೆ ಹಾಕಿದ್ದಾರೆ ಎಂದು ಆರೋಪಿಸಿ ಪ್ರಧಾನಿ ಮೋದಿ ಅವರಿಗೆ ಪತ್ರದಲ್ಲಿ ದೂರು ನೀಡಿದ್ದಾನೆ.

    ಸದ್ಯ ನಾನು ಬಡವ ಹಾಗೂ ಅಸಹಾಯಕನಾಗಿದ್ದೇನೆ. ಈ ಪ್ರಕರಣದಲ್ಲಿ ಕಾನೂನು ಹೋರಾಟ ನಡೆಸಲು ನನ್ನ ಹತ್ತಿರ ಹಣ ಇಲ್ಲ. ಅದ್ದರಿಂದ ನನ್ನ ಕಿಡ್ನಿ ಮಾರಿ ಬಂದ ಹಣದಲ್ಲಿ ನ್ಯಾಯಕ್ಕಾಗಿ ಕಾನೂನು ರೀತಿಯಲ್ಲಿ ಹೋರಾಡಬೇಕು. ಅಲ್ಲದೇ ಯಾರಿಂದಲೂ ನನಗೆ ನೈತಿಕ ಸಹಾಯ ಇಲ್ಲ. ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುಕ್ಕಿಂತ ನನ್ನ ಕಿಡ್ನಿ ಮಾರಿ ಬಂದ ಹಣದಲ್ಲಿ ಕಾನೂನು ಹೋರಾಟ ನಡೆಸುವುದೇ ಉಳಿದಿರುವ ದಾರಿ ಎಂಬುದಾಗಿ ಪತ್ರ ಬರೆದಿದ್ದಾನೆ.

    ರಾಜು ತನ್ನ ಕಿಡ್ನಿ ಮಾರಲು ಸಹಾಯ ಮಾಡುವಂತೆ ಜೈಲು ಅಧಿಕಾರಿಗಳನ್ನು ಕೇಳಿಕೊಂಡಿದ್ದಾನೆ. ಆದರೆ ಪತ್ರದ ಕುರಿತು ಪ್ರತಿಕ್ರಿಯೆ ನೀಡಿರುವ ಜೈಲಿನ ಮುಖ್ಯ ಅಧಿಕಾರಿ, ನನಗೆ ರಾಜು ಪ್ರಧಾನಿಯವರಿಗೆ ಪತ್ರ ಬರೆದಿರುವ ವಿಷಯ ತಿಳಿದಿಲ್ಲ, ಅದಾಗಿಯೂ ಈ ಕುರಿತಂತೆ ಪರಿಶೀಲಿಸುವುದಾಗಿ ಹೇಳಿದ್ದಾರೆ. ಅಂದಹಾಗೆ ಕೈದಿ ರಾಜು ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದಾನೆ.

    ಈ ಕುರಿತಂತೆ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ವಕೀಲರಾದ ಸುರಜ್ಪೂರ್ ಮಾತನಾಡಿ, ರಾಜು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಆತನ ಪರವಾಗಿ ಉಚಿತವಾಗಿ ವಾದ ಮಂಡಿಸುವುದಾಗಿ ತಿಳಿಸಿದ್ದಾಗಿ ವರದಿಯಾಗಿದೆ.

  • ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ನಾಟಿ ಕೋಳಿಗಳಿಗೂ ಅರ್ಧ ಟಿಕೆಟ್ ಕೊಟ್ಟ ಕಂಡಕ್ಟರ್!

    ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ನಾಟಿ ಕೋಳಿಗಳಿಗೂ ಅರ್ಧ ಟಿಕೆಟ್ ಕೊಟ್ಟ ಕಂಡಕ್ಟರ್!

     ಚಿಕ್ಕಬಳ್ಳಾಪುರ: 5 ವರ್ಷದೊಳಗಿನ ಮಕ್ಕಳಿಗೆ ಕೆಎಸ್‌ಆರ್‌ಟಿಸಿ ಬಸ್‍ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಇದೆ. ಇನ್ನೂ 5 ವರ್ಷ ಮೇಲ್ಪಟ್ಟು 6 ರಿಂದ 12 ವರ್ಷದ ಒಳಗಿನ ಮಕ್ಕಳ ಪ್ರಯಾಣಕ್ಕೆ ಅರ್ಧ ಟಿಕೆಟ್ ತೆಗೆದುಕೊಳ್ಳಬೇಕು. ಆದರೆ ಜಿಲ್ಲೆಯಲ್ಲಿ ಕಂಡಕ್ಟರ್ ಒಬ್ಬರು ಕೋಳಿಯೊಂದಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಅರ್ಧ ಟಿಕೆಟ್ ನೀಡಿ ಸುದ್ದಿಯಾಗಿದ್ದಾರೆ.

    ಹೌದು, ಬಸ್ ನಲ್ಲಿ ಕೋಳಿಗಳಿಗೆ ಟಿಕೆಟ್ ತೆಗೆದುಕೊಳ್ಳಬೇಕೇ ಎಂದು ಅಚ್ಚರಿಯಾಗಬೇಡಿ. ಇಂತಹದೊಂದು ಘಟನೆ ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆದಿದೆ. ಪ್ರಯಾಣಿಕರೊಬ್ಬರು ಬಸ್ ನಲ್ಲಿ ನಾಟಿಕೋಳಿ ತೆಗೆದುಕೊಂಡು ಹೋಗುತ್ತಿರುವಾಗ ಕಂಡಕ್ಟರ್ ಕೋಳಿಗೂ ಅರ್ಧ ಟಿಕೆಟ್ ನೀಡಿದ್ದಾರೆ.

    ಭಾನುವಾರ ಪೆದ್ದೇನಹಳ್ಳಿ ಗ್ರಾಮದ ಶ್ರೀನಿವಾಸ್ ಎಂಬುವವರು ಗೌರಿಬಿದನೂರು ಸಂತೆಯಲ್ಲಿ 2 ನಾಟಿಕೋಳಿಗಳನ್ನು ಖರೀದಿಸಿದ್ರು. ಅವನ್ನು ತೆಗೆದುಕೊಂಡು ಕೆಎಸ್‌ಆರ್‌ಟಿಸಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಕಂಡಕ್ಟರ್ ನಿಮಗೆ ಮಾತ್ರವಲ್ಲದೇ ಪ್ರತಿ ಕೋಳಿಗೆ ಅರ್ಧ ಟಿಕೆಟ್ ಖರೀದಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಗೌರಿಬಿದನೂರಿನಿಂದ ಮುದ್ದಲೋಡು ಸ್ಟೇಜ್‍ಗೆ ಟಿಕೆಟ್ ಖರೀದಿಸಬೇಕಿದ್ದ ಪ್ರಯಾಣಿಕನಿಗೆ ಕಂಡಕ್ಟರ್ ಒಟ್ಟು 1 ಫುಲ್ ಆಫ್ 2 ಆಫ್ ಟಿಕೆಟ್ ನೀಡಿದ್ದಾರೆ.

    ಜೀವ ಇರುವ ಏನನ್ನೇ ತಂದರೂ ಟಿಕೆಟ್ ಪಡೆಯಬೇಕು ಎಂದು ರೂಲ್ಸ್ ಇದೆ ಎಂದು ಹೇಳಿದ ಕಂಡಕ್ಟರ್, ಪ್ರಯಾಣಿಕ ಶ್ರೀನಿವಾಸ್‍ಗೆ 24 ರೂ., ಮತ್ತು ಎರಡು ಕೋಳಿಗೆ 12 ರೂ.ಗಳಂತೆ ಒಟ್ಟು 24 ರೂ. ಸೇರಿ ಒಟ್ಟು 48 ರೂ.ಗಳ ಟಿಕೆಟ್ ನೀಡಿದ್ದಾರೆ. ಕೋಳಿಗಳಿಗೂ ಟಿಕೆಟ್ ಪಡೆಯಬೇಕೆಂಬ ಕೆಎಸ್‌ಆರ್‌ಟಿಸಿ ಯ ಹೊಸ ನಿಯಮವನ್ನು ಕಂಡಕ್ಟರ್ ಬಾಯಿಂದ ಕೇಳಿ ಪ್ರಯಾಣಿಕ ಒಂದು ಕ್ಷಣ ಕಕ್ಕಾಬಿಕ್ಕಿಯಾಗಿದ್ದಾರೆ.

    ಅಷ್ಟಕ್ಕೆ ಸುಮ್ಮನಾಗದ ಶ್ರೀನಿವಾಸ್ ಕೋಳಿಗಳಿಗೆ ಏನು ಪ್ರತ್ಯೇಕ ಸೀಟು ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಕೋಳಿಗೆ ಟಿಕೆಟ್ ನೀಡಿರುವ ಹಾಗೇ ಟಿಕೆಟ್‍ನ ಹಿಂದೆ ಬರೆದುಕೊಡುವಂತೆ ಒತ್ತಾಯಿಸಿದ್ದಾರೆ. ಹೀಗಾಗಿ ಕಂಡಕ್ಟರ್ ಟಿಕೆಟ್ ಹಿಂದೆ ಕೋಳಿಗೆ ಅರ್ಧ ಟಿಕೆಟ್ ನೀಡಿರುತ್ತೇನೆ ಎಂದು ಬರೆದುಕೊಟ್ಟಿದ್ದಾರೆ.

    ಸಾಂದರ್ಭಿಕ ಚಿತ್ರ

    ಕೋಳಿಗೂ ಟಿಕೆಟ್ ನೀಡಿದ್ದಕ್ಕೆ ಬಸ್ಸಿನಲ್ಲಿದ್ದ ಪ್ರಯಾಣಿಕರು ನಿಬ್ಬೆರಗಾಗಿದ್ದು, ಇನ್ನುಳಿದ ಸಹ ಪ್ರಯಾಣಿಕರು ತಾವು ತಂದಿದ್ದ ಕೋಳಿಗಳನ್ನು ಕಂಡಕ್ಟರ್ ಗೆ ಕಾಣದಂತೆ ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

    ಕುರಿ, ನಾಯಿಗಳಾದರೆ, ಸಾರ್ವಜನಿಕರು ನಿಲ್ಲಬಹುದಾದ ಜಾಗ ಆಕ್ರಮಿಸಿಕೊಳ್ಳುತ್ತದೆ. ಅದಕ್ಕೆ ಟಿಕೆಟ್ ಪಡೆಯುವುದರಲ್ಲಿ ಅರ್ಥ ಇದೆ. ಆದರೆ ಕಾಲಿನ ಬಳಿ ಬಿದ್ದಿದ್ದ ಕೋಳಿಗೆ ಟಿಕೆಟ್ ನೀಡಲಾಗಿದೆ. ಕೋಳಿಗೆ ಟಿಕೆಟ್ ಎಂದರೆ ಹೇಗೆ ಅಂತ ಶ್ರೀನಿವಾಸ್ ನಿರ್ವಾಹಕನನ್ನು ಪ್ರಶ್ನಿಸಿದ್ದಾರೆ.

    ಈ ವಿಚಾರದ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿರುವ ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ವಿಭಾಗದ ಮ್ಯಾನೇಜರ್ ಅಪ್ಪಿರೆಡ್ಡಿ, ಪ್ರಾಣಿಗಳನ್ನ ಸಾಗಿಸುವಾಗ ಟಿಕೆಟ್ ಪಡೆಯಲೇಬೇಕು. ನಾಯಿಗೆ ಫುಲ್ ಟಿಕೆಟ್, ಕೋಳಿ, ಪಾರಿವಾಳ, ಪಕ್ಷಿಗಳಾದ್ರೆ ಅರ್ಧ ಟಿಕೆಟ್ ಪಡೆಯಬೇಕು ಎನ್ನುವ ನಿಯಮವಿದೆ ಅಂತ ಸ್ಪಷ್ಟಪಡಿಸಿದರು.

    ಕೋಳಿಗೆ ಕೊಟ್ಟ ಅರ್ಧ ಟಿಕೆಟ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮತ್ತೊಂದೆಡೆ ಆ ಟಿಕೆಟ್‍ನಲ್ಲಿ ಕೋಳಿಗಳ ಬದಲು ಮಕ್ಕಳು ಎಂದು ನಮೂದಾಗಿದೆ. ಹೀಗಾಗಿ ಕೋಳಿಗಳಿಗೆ ಮಕ್ಕಳು ಯಾವಾಗ ಆದವು ಎಂದು ಹಾಸ್ಯವಾಗಿ ಪ್ರಶ್ನಿಸಿ ನೆಟ್ಟಿಗರು ಶೇರ್ ಮಾಡುತ್ತಿದ್ದಾರೆ.