Tag: ಬಬ್ಬರ್ ಖಲ್ಸಾ

  • ರಾಜಕಾರಣಿಗಳ ಮೇಲೆ ದಾಳಿಗೆ ಸಂಚು – ಇಬ್ಬರು ಉಗ್ರರು ಅರೆಸ್ಟ್

    ರಾಜಕಾರಣಿಗಳ ಮೇಲೆ ದಾಳಿಗೆ ಸಂಚು – ಇಬ್ಬರು ಉಗ್ರರು ಅರೆಸ್ಟ್

    – ದೆಹಲಿಗೆ ಪಿಸ್ತೂಲ್ ಖರೀದಿಸಲು ಬಂದು ಪೊಲೀಸರ ಬಲೆಗೆ

    ನವದೆಹಲಿ: ರಾಷ್ಟ್ರ ರಾಜಧಾನಿಯ ವಿಶೇಷ ಪೊಲೀಸ್ ಪಡೆ ಇಬ್ಬರು ಬಬ್ಬರ್ ಖಲ್ಸಾ ಇಂಟರ್ ನ್ಯಾಷನಲ್ (ಬಿಕೆಐ) ಉಗ್ರ ಸಂಘಟನೆಯ ಉಗ್ರರನ್ನು ಬಂಧಿಸಿದ್ದಾರೆ.

    ಬಂಧಿತರನ್ನು ದಿಲಾವರ್ ಸಿಂಗ್ ಮತ್ತು ಕುಲ್ವಂತ್ ಸಿಂಗ್ ಎಂದು ಗುರುತಿಸಲಾಗಿದೆ. ಈ ಇಬ್ಬರು ಉಗ್ರರು ಪಂಜಾಬ್‍ನಿಂದ ದೆಹಲಿಗೆ ಪಿಸ್ತೂಲ್ ಖರೀದಿ ಮಾಡಲು ಬಂದಿದ್ದರು ಎನ್ನಲಾಗಿದೆ. ಜೊತೆಗೆ ದೆಹಲಿ ಮತ್ತು ಪಂಜಾಬ್ ಮೂಲದ ಕೆಲ ರಾಜಕಾರಣಿಗಳನ್ನು ಕೊಲ್ಲಲು ಅವರು ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಡಿಸಿಪಿ ಸಂಜೀವ್ ಯಾದವ್, ಇಬ್ಬರು ಉಗ್ರರನ್ನು ವಾಯುವ್ಯ ದೆಹಲಿಯಲ್ಲಿ ಬಂಧಿಸಲಾಗಿದೆ. ಸ್ಥಳೀಯರು ಕೊಟ್ಟ ಮಾಹಿತಿ ಮೇರೆಗೆ ಅವರನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಇಬ್ಬರು ಪಂಜಾಬ್‍ನಿಂದ ದೆಹಲಿಗೆ ಪಿಸ್ತೂಲ್ ಖರೀದಿ ಮಾಡಲು ಬಂದಿದ್ದಾರೆ. ಜೊತೆಗೆ ಉತ್ತರ ಪ್ರದೇಶ ಮೂಲದ ಡೀಲರ್ ಬಳಿ 6 ಪಿಸ್ತೂಲ್‍ಗಳನ್ನು ಖರೀದಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

    ಬಂಧಿತರಿಂದ ಆರು ಪಿಸ್ತೂಲ್ ಮತ್ತು ಎರಡು ಗ್ರೇನೆಡ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಅವರು ದೆಹಲಿ ಮತ್ತು ಪಂಜಾಬ್ ಮೂಲದ ಕೆಲ ರಾಜಕಾರಣಿಗಳನ್ನು ಕೊಲ್ಲಲು ಪ್ಲಾನ್ ಮಾಡಿದ್ದರು. ಅವರು ಟಾರ್ಗೆಟ್ ಮಾಡಿದ್ದ ರಾಜಕಾರಣಿಗಳು ಯಾರೂ ಎಂಬ ವಿಚಾರ ನಮಗೆ ಗೊತ್ತಾಗಿದೆ. ಆದರೆ ಈಗ ಅವರ ಹೆಸರುಗಳನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಯಾದವ್ ಮಾಹಿತಿ ನೀಡಿದ್ದಾರೆ.

    ದೆಹಲಿ ಪೊಲೀಸರು ಬಂಧಿಸಿರುವ ದಿಲಾವರ್ ಸಿಂಗ್ ಸಕ್ರಿಯ ಬಬ್ಬರ್ ಖಲ್ಸಾ ಇಂಟರ್ ನ್ಯಾಷನಲ್ ಉಗ್ರ ಸಂಘಟನೆಯ ಭಯೋತ್ಪಾದಕನಾಗಿದ್ದು, ಈತನ್ನು 2019ರಲ್ಲಿ ದುಬೈನಿಂದ ಗಡಿಪಾರು ಮಾಡಿಲಾಗಿತ್ತು. ನಂತರ ಈತ ಭಾರತಕ್ಕೆ ಬಂದಿದ್ದು, ಪಂಜಾಬ್ ಪೊಲೀಸರು ಈತನನ್ನು ಬಂಧಿಸಿದ್ದರು. ಆದರೆ ದಿಲಾವರ್ ಬೇಲ್ ಪಡೆದು ಹೊರಗೆ ಬಂದಿದ್ದಾನೆ. ಉಗ್ರನಿಗೆ ಜಾಮೀನು ಸಿಕ್ಕಿದ್ದು ಹೇಗೆ ಎಂದು ದೆಹಲಿ ಪೊಲೀಸರು ಪ್ರಶ್ನೆ ಮಾಡಿದ್ದಾರೆ.