Tag: ಬಬರಿ ಮಸೀದಿ

  • ಓವೈಸಿ ಹೇಳಿಕೆಗೆ ಕಾಂಗ್ರೆಸ್ ನಾಯಕ ಸಲ್ಮಾನ್ ಪ್ರತಿರೋಧ

    ಓವೈಸಿ ಹೇಳಿಕೆಗೆ ಕಾಂಗ್ರೆಸ್ ನಾಯಕ ಸಲ್ಮಾನ್ ಪ್ರತಿರೋಧ

    ನವದೆಹಲಿ: ಸುಪ್ರೀಂ ಕೋರ್ಟ್ ತೀರ್ಪನ್ನು ಭಾರತದ ಮುಸ್ಲಿಮರು ಸ್ವಾಗತಿಸುವುದಿಲ್ಲ ಎಂಬ ಹೈದರಾಬಾದ್ ಸಂಸದ ಅಸಾದುದ್ದಿನ್ ಓವೈಸಿ ಹೇಳಿಕೆಗೆ ಕಾಂಗ್ರೆಸ್ ನಾಯಕ ಸಲ್ಮಾನ್ ನಿಜಾಮಿ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.

    ರಾಮ ಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದ ತೀರ್ಪನ್ನು ಓವೈಸಿ ಪ್ರಶ್ನಿಸಿದ್ದರು. ವಿವಾದಾತ್ಮಕ ಸ್ಥಳದಿಂದ ದೂರದಲ್ಲಿ ಮುಸ್ಲಿಮರಿಗೆ 5 ಎಕರೆ ಜಾಗ ಮಂಜೂರು ಮಾಡಿರುವುದು ಮುಸ್ಲಿಮರ ನಂಬಿಕೆಗೆ ಮಾಡಿದ ಅವಮಾನ ಎಂದು ಟೀಕಿಸಿದ್ದರು.

    ಓವೈಸಿ ಸುಪ್ರೀಂ ಕೋರ್ಟ್ ವಿರುದ್ಧವೇ ಹರಿಹಾಯ್ದಿದ್ದು, 1992ರ ಡಿಸೆಂಬರ್‍ನಲ್ಲಿ ಬಾಬರಿ ಮಸೀದಿಯನ್ನು ನೆಲಸಮ ಮಾಡಿದವರಿಗೇ ಇಂದು ಸುಪ್ರೀಂ ಕೋರ್ಟ್ ಟ್ರಸ್ಟ್ ರಚಿಸಿ ದೇವಸ್ಥಾನ ನಿರ್ಮಿಸಲು ಸೂಚಿಸಿದೆ. ನಮ್ಮ ಕಾನೂನು ಬದ್ಧ ಹಕ್ಕಿಗಾಗಿ ನಾವು ಹೋರಾಡಿದ್ದೆವು. ನಮಗೆ ದಾನವಾಗಿ ಬಂದ 5 ಎಕರೆ ಭೂಮಿ ಅಗತ್ಯವಿಲ್ಲ. ಈ 5 ಎಕರೆ ಭೂಮಿ ಪ್ರಸ್ತಾವವನ್ನು ನಾವು ತಿರಸ್ಕರಿಸಬೇಕು. ನಮಗೆ ಪ್ರೋತ್ಸಾಹ ನೀಡಬೇಡಿ. ನಾನು ಹೈದರಾಬಾದ್ ರಸ್ತೆಯಲ್ಲಿ ಭಿಕ್ಷೆ ಬೇಡಿಯಾದರೂ ಯುಪಿಯಲ್ಲಿ ಮಸೀದಿ ನಿರ್ಮಿಸಲು ಸಾಕಾಗುವಷ್ಟು ಹಣವನ್ನು ಸಂಗ್ರಹಿಸುತ್ತೇನೆ ಎಂದು ಹೇಳಿಕೆ ನೀಡಿದ್ದರು.

    ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕ ನಿಜಾಮಿ ಟ್ವೀಟ್ ಮಾಡುವ ಮೂಲಕ ಓವೈಸಿ ವಿರುದ್ಧ ಹರಿಹಾಯ್ದಿದ್ದು, 5 ಎಕರೆ ಭೂಮಿಯನ್ನು ಏಕೆ ತಿರಸ್ಕರಿಸಬೇಕು. ಓವೈಸಿ ದೇಶದ ಎಲ್ಲ ಮುಸ್ಲಿಮರ ಯಜಮಾನ ಅಲ್ಲ. ಹಿಂದೂಗಳು ಮತ್ತು ಮುಸ್ಲಿಮರು ಇಬ್ಬರೂ ಒಟ್ಟಿಗೆ ಸೇರಿ ಮಸೀದಿಯನ್ನು ನಿರ್ಮಿಸಬೇಕು. ಈ ಕುರಿತು ಯಾರೂ ಅಸೂಯೆ ಪಡಬಾರದು. ದ್ವೇಷ ಮತ್ತು ದುಷ್ಟತನವನ್ನು ಸಕಾರಾತ್ಮಕ ಶಕ್ತಿ ಹಾಗೂ ಆಲೋಚನೆಗಳಿಂದ ಮಾತ್ರ ನಿಭಾಯಿಸಬಹುದು ಎಂದು ತಿಳಿಸಿದರು.

    ರಾಮ ಮಂದಿರದ ಕಡೆಯ ಹಕ್ಕುಗಳನ್ನು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಎತ್ತಿ ಹಿಡಿದಿದೆ. ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಮಸೀದಿ ನಿರ್ಮಾಣಕ್ಕಾಗಿ ಮುಸ್ಲಿಮರಿಗೆ 5 ಎಕರೆ ಜಾಗವನ್ನು ಮಂಜೂರು ಮಾಡುವಂತೆ ಸೂಚಿಸಿದೆ. ಅಲ್ಲದೆ ಇದರ ಜವಾಬ್ದಾರಿಯನ್ನು ವಕ್ಫ್ ಮಂಡಳಿಗೆ ವಹಿಸಿದೆ.