Tag: ಬಫರ್ ಝೋನ್

  • ಬಫರ್‌ ವಲಯದಲ್ಲಿ ಮನೆ ನಿರ್ಮಿಸಿದವರಿಗೆ ಬಿಬಿಎಂಪಿ ಶಾಕ್‌

    ಬಫರ್‌ ವಲಯದಲ್ಲಿ ಮನೆ ನಿರ್ಮಿಸಿದವರಿಗೆ ಬಿಬಿಎಂಪಿ ಶಾಕ್‌

    ಬೆಂಗಳೂರು: ಬಫರ್ ವಲಯದಲ್ಲಿ (Buffer Zone) ಮನೆಗಳನ್ನು ನಿರ್ಮಾಣ ಮಾಡಿದವರಿಗೆ ಬಿಬಿಎಂಪಿ (BBMP) ಶಾಕ್‌ ನೀಡಲು ಮುಂದಾಗಿದೆ. ಮೊದಲು ವಿದ್ಯುತ್ ಕಡಿತ ಮಾಡಿ ನಂತರ ಬಫರ್ ಝೋನ್‌ನಲ್ಲಿ ನಿರ್ಮಾಣ ಆಗಿರುವ ಕಟ್ಟಡಗಳ ತೆರವಿಗೆ ಪ್ಲ್ಯಾನ್ ಮಾಡಿದ್ದು, ನಿರ್ಮಾಣ ಹಂತದ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ಮಾಡುತ್ತಿದೆ.

    ಬೆಂಗಳೂರಿನಲ್ಲಿ ರಾಜ ಕಾಲುವೆ, ಸರ್ಕಾರಿ ಜಾಗ, ಕೆರೆ ಒತ್ತುವರಿ ಮಾಡಿ ಮನೆ ನಿರ್ಮಾಣ ಮಾಡಿದ ಪ್ರಕರಣ ಜಾಸ್ತಿ ಇದೆ. ಇವುಗಳನ್ನೇ ತೆರವು ಮಾಡಿಸಲು ಬಿಬಿಎಂಪಿ ಹೆಣಗಾಡುತ್ತಿದೆ. ಈಗ ಬಫರ್ ಝೋನ್‌ ಗುರಿಯಾಗಿಸಿಕೊಂಡು ಕಾರ್ಯಾಚರಣೆ ಮಾಡಲು ಮುಂದಾಗಿದೆ.  ಇದನ್ನೂ ಓದಿ: ʻದೈಹಿಕ ಸಂಬಂಧʼ ಅಂದ್ರೆ ಲೈಂಗಿಕ ದೌರ್ಜನ್ಯ ಎಂದರ್ಥವಲ್ಲ – ಪೋಕ್ಸೋ ಕೇಸ್‌ ಆರೋಪಿ ಖುಲಾಸೆಗೊಳಿಸಿದ ದೆಹಲಿ ಹೈಕೋರ್ಟ್

    ಬಫರ್ ವಲಯದಲ್ಲಿ, ಚರಂಡಿ, ಕಾಲುವೆ ಮೇಲೆ ಮನೆ ನಿರ್ಮಾಣ ಮಾಡಲಾಗಿದೆ. ಆ ರೀತಿ ಬಫರ್ ಝೋನ್‌ ಮೇಲೆ ಕಟ್ಟಡ ನಿರ್ಮಾಣ ಮಾಡುತ್ತಿರುವ ಕಡೆ ಗುರುತು ಮಾಡಿ ಬೆಸ್ಕಾಂ ಕಡೆಯಿಂದ ನೋಟಿಸ್ ಕೊಡಿಸಲು ಪಾಲಿಕೆ ಚಿಂತನೆ ನಡೆಸಿದೆ. ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನೋಟಿಸ್ ಕೊಡಿಸುವ ತೀರ್ಮಾನಕ್ಕೆ ಬರಲಾಗಿದೆ.

    ಯಲಹಂಕದ ನರಸೀಪುರ ಸೇರಿದಂತೆ ಹಲವು ಕಡೆ ಕೆರೆ ಜಾಗವನ್ನು ಒತ್ತುವರಿ ಮಾಡಿ ಮನೆ ನಿರ್ಮಾಣ ನಿರ್ಮಿಸಲಾಗುತ್ತಿದೆ. ನಿರ್ಮಾಣ ಹಂತದಲ್ಲಿರುವಾಗಲೇ ಬೆಸ್ಕಾಂ ಕಡೆಯಿಂದ ನೋಟಿಸ್ ಕೊಡಿಸಿ, ವಿದ್ಯುತ್ ಸಂಪರ್ಕ ಕಡಿತ ಮಾಡಿ ನಂತರ ಸೂಕ್ತ ಕ್ರಮ ಜರುಗಿಸುವಂತೆ ಮುಖ್ಯ ಆಯುಕ್ತರು ಎಲ್ಲಾ ವಲಯದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಎಲ್ಲಾ ಕಡೆ ಕೂಡ ಬೆಸ್ಕಾಂ ಕಡೆಯಿಂದ ಬಿಬಿಎಂಪಿ ನೋಟಿಸ್ ನೀಡಿ ಕಟ್ಟಡ ತೆರವು ಮಾಡುತ್ತಾ? ಅಥವಾ ಒತ್ತಡಕ್ಕೆ ಮಣಿದು ಸುಮ್ಮನಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

     

  • ಭದ್ರಾ ಹುಲಿ ಯೋಜನೆ: ಬಫರ್ ಝೋನ್ ವಿರುದ್ಧ ಸಿಡಿದೆದ್ದ ಅನ್ನದಾತ

    ಭದ್ರಾ ಹುಲಿ ಯೋಜನೆ: ಬಫರ್ ಝೋನ್ ವಿರುದ್ಧ ಸಿಡಿದೆದ್ದ ಅನ್ನದಾತ

    – ಚುನಾವಣೆ ಬಹಿಷ್ಕಾರ ಎಚ್ಚರಿಕೆ, ಎನ್‍ಆರ್ ಪುರ ಬಂದ್ ಯಶಸ್ವಿ

    ಚಿಕ್ಕಮಗಳೂರು: ಭದ್ರಾ ಹುಲಿ ಯೋಜನೆಯ ಬಫರ್ ಝೋನ್ ಹಾಗೂ ಪರಿಸರ ಸೂಕ್ಷ್ಮ ವಲಯದ ವಿರುದ್ಧ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಸರ್ವ ಪಕ್ಷ, ವಿವಿಧ ಸಂಘಟನೆಗಳು ಹಾಗೂ ಮಲೆನಾಡು ಹಿತರಕ್ಷಣಾ ಸಮಿತಿ ಕರೆ ನೀಡಿದ್ದ ಎನ್.ಆರ್.ಪುರ ತಾಲೂಕು ಬಂದ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಬೆಳಗ್ಗೆ 7 ಗಂಟೆಯಿಂದಲೇ ತಾಲೂಕಿನ ಎಲ್ಲಾ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ತಾಲೂಕಿನ ಜನರು ಬಂದ್‍ಗೆ ಬೆಂಬಲ ಸೂಚಿಸಿದ್ದರು. ಸುಮಾರು ಐದು ಸಾವಿರಕ್ಕೂ ಅಧಿಕ ಜನ ಸುರಿಯೋ ಮಳೆಯಲ್ಲೇ ನಗರದ ಸರ್ಕಾರಿ ಬಸ್ ನಿಲ್ದಾಣದಿಂದ ತಾಲೂಕು ಕಚೇರಿವರೆಗೆ ಪಾದಯಾತ್ರೆ ನಡೆಸಿ ಸರ್ಕಾರ ಹಾಗೂ ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

    ತಾಲೂಕಿನ ಹತ್ತಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ವ್ಯಾಪ್ತಿಯ 30ಕ್ಕೂ ಅಧಿಕ ಹಳ್ಳಿಗಳು ಸೇರಿದಂತೆ ದೇವಸ್ಥಾನ, ಮಠ, ಚರ್ಚ್, ಮಸೀದಿಗಳ ಜೊತೆ ಸಾವಿರಾರು ಅನ್ನದಾತರ ಬದುಕು ಕೂಡ ಇತಿಹಾಸದ ಪುಟ ಸೇರಲಿವೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. ಬದುಕಿನ ಉಳಿವಿಗಾಗಿ ಎನ್.ಆರ್ ಪುರ ತಾಲೂಕು ಬಂದ್ ಗೆ ಕೊಟ್ಟಿದ್ದ ಕರೆಗೆ ನಿರೀಕ್ಷೆಗೂ ಮೀರಿ ರೈತರು ಪಾಲ್ಗೊಂಡಿದ್ದು ಬಂದ್ ಯಶಸ್ವಿಯಾಗಿದೆ. ಇದೇ ಮೊದಲ ಬಾರಿಗೆ ಸಾವಿರಾರು ಸಂಖ್ಯೆಯಲ್ಲಿ ಹಳ್ಳಿ-ಹಳ್ಳಿಯಿಂದ ರೈತರು ಬಂದು ಜನವಿರೋಧಿ ನೀತಿ ವಿರುದ್ಧ ಕಿಡಿ ಕಾರಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ನೆರೆದ ರೈತರು, ಭದ್ರಾ ಹುಲಿ ಯೋಜನೆಯ ಬಫರ್ ಝೋನ್ ಹಾಗೂ ಪರಿಸರ ಸೂಕ್ಷ್ಮ ವಲಯ ಯೋಜನೆಯ ವಿರುದ್ಧ ಅಸಮಾಧಾನ ಹೊರಹಾಕಿದರು.

    ಪಕ್ಷಾತೀತವಾಗಿ ನಡೆದ ಈ ಬಂದ್‍ಗೆ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು, ವಿವಿಧ ಸಂಘಟನೆ ಹಾಗೂ ರೈತರು ಭಾಗವಹಿಸಿದ್ದರು. ಮೆರವಣಿಗೆಯ ಬಳಿಕ ತಾಲೂಕು ಕಚೇರಿಯಲ್ಲಿ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಯಾವುದೇ ಕಾರಣಕ್ಕೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜನವಿರೋಧಿ ಯೋಜನೆಯನ್ನು ಜಾರಿಗೆ ತಂದು ಜನರ ಬದುಕಿಗೆ ಕಲ್ಲು ಹಾಕೋ ಕೆಲಸ ಮಾಡಬಾರದು. ಒಂದು ವೇಳೆ ಆ ಪ್ರಯತ್ನಕ್ಕೆ ಮುಂದಾದರೆ ತಾಲೂಕಿನ ಜನ ಮುಂದಿನ ಎಲ್ಲಾ ಚುನಾವಣೆಗಳನ್ನ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ. ಸಾವಿರಾರು ಜನರು ಭಾಗಿಯಾಗಿದ್ದ ಪ್ರತಿಭಟನಾ ಸಮಾವೇಶದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಡಿ.ಎನ್.ಜೀವರಾಜ್, ಶಾಸಕ ಟಿ.ಡಿ.ರಾಜೇಗೌಡ ಸೇರಿದಂತೆ ಮೂರು ಪಕ್ಷಗಳ ಮುಖಂಡರು ಭಾಗಿಯಾಗಿದ್ದರು.

  • ಬಫರ್ ಝೋನ್‍ನಲ್ಲಿ ಭರ್ಜರಿಯಾಗಿ ಮಟನ್ ಮಾರಾಟ

    ಬಫರ್ ಝೋನ್‍ನಲ್ಲಿ ಭರ್ಜರಿಯಾಗಿ ಮಟನ್ ಮಾರಾಟ

    ಹಾವೇರಿ: ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚು ವ್ಯಾಪಿಸುತ್ತಿದೆ. ಅದರೆ ಇಷ್ಟೆಲ್ಲ ಭಯ ಇದ್ದರೂ ಬಫರ್ ಝೋನ್‍ನಲ್ಲಿ ಭರ್ಜರಿಯಾಗಿ ಮಟನ್ ಮಾರಾಟ ಮಾಡಲಾಗಿದೆ.

    ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿಆಲೂರು ಗ್ರಾಮದ ಬಫರ್ ಝೋನ್‍ನಲ್ಲಿ ಎಗ್ಗಿಲ್ಲದೆ ಮಟನ್ ಮಾರಾಟ ಮಾಡಲಾಗಿದೆ. ಹಾನಗಲ್ ತಾಲೂಕಿನಲ್ಲಿ 30 ಪ್ರಕರಣಗಳು ಪತ್ತೆಯಾಗಿದ್ದು, ಇಷ್ಟಾದರೂ ಜನ ಎಚ್ಚೆತ್ತುಕೊಂಡಿಲ್ಲ. ಮಾತ್ರವಲ್ಲದೆ ಇದೇ ಗ್ರಾಮದ ಕೆಸಳಗಿನ ಓಣಿಯಲ್ಲಿ ಸೋಮವಾರ ರಾತ್ರಿ ಖಾಸಗಿ ಆಸ್ಪತ್ರೆಯ ಸಿಬ್ಬಂದಿಯೊಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಸೋಂಕಿತೆ ವಾಸವಾಗಿದ್ದ ಪ್ರದೇಶವನ್ನು ಈಗಾಗಲೇ ಸೀಲ್‍ಡೌನ್ ಮಾಡಲಾಗಿದ್ದು, ಸುತ್ತಲಿನ 200 ಮೀಟರ್ ಪ್ರದೇಶವನ್ನು ಬಫರ್ ಝೋನ್ ಎಂದು ಜಿಲ್ಲಾಡಳಿತ ಗುರುತಿಸಿದೆ.

    ಜಿಲ್ಲಾಡಳಿತದ ಆದೇಶಕ್ಕೆ ಡೋಂಟ್ ಕೇರ್ ಎಂದು ಭರ್ಜರಿಯಾಗಿ ಮಟನ್ ಮಾರಾಟ ಮಾಡಲಾಗಿದೆ. ಮಟನ್ ಮಾರಾಟ ಬಂದ್ ಮಾಡುವಂತೆ ಸ್ಥಳೀಯರು ಹೇಳಿದ್ದಾರೆ. ಇಷ್ಟಾದರೂ ಕೇಳದ ಅಂಗಡಿ ಮಾಲೀಕ ಸ್ಥಳೀಯರ ಜೊತೆ ಜಟಾಪಟಿ ನಡೆಸಿದ್ದಾನೆ. ಮಟನ್ ಮಾರಾಟ ಬಂದ್ ಮಾಡಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.