Tag: ಬಡ ಮಕ್ಕಳು

  • ಟೀ ಮಾರಿ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾದ ವ್ಯಾಪಾರಿ

    ಟೀ ಮಾರಿ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾದ ವ್ಯಾಪಾರಿ

    – ಸಲಾಂ ಎಂದ ವಿವಿಎಸ್ ಲಕ್ಷ್ಮಣ್

    ಲಕ್ನೋ: ಉತ್ತರ ಪ್ರದೇಶದ ಚಹಾ ವ್ಯಾಪಾರಿಯೋಬ್ಬರು ಚಹಾ ಮಾರಾಟದಲ್ಲಿ ಬಂದ ಶೇ. 80ರಷ್ಟು ಲಾಭವನ್ನು ಬಡ ಮಕ್ಕಳ ಶಿಕ್ಷಣಕ್ಕಾಗಿ ನೀಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

    ಕಾನ್ಪುರದ ಚಹಾ ವ್ಯಾಪಾರಿ ಮೊಹಮದ್ ಮೆಹಬೂಬ್ ಮಲಿಕ್(45) ಅನೇಕ ವರ್ಷಗಳಿಂದ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗಿದ್ದಾರೆ. ಸುಮಾರು 40 ಮಂದಿ ಮಕ್ಕಳಿಗೆ ಉಚಿತ ಶಿಕ್ಷಣ, ಪಠ್ಯ-ಪುಸ್ತಕ ಹಾಗೂ ಓದಲು ಬೇಕಾಗುವ ವಸ್ತುಗಳನ್ನು ನೀಡಿ ಸಹಾಯ ಮಾಡುತ್ತಿದ್ದಾರೆ. ಚಹಾ ಮಾರಾಟದಲ್ಲಿ ಸಿಗುವ ಲಾಭದಲ್ಲಿ ಶೇ.80ರಷ್ಟು ಭಾಗ ಬಡಮಕ್ಕಳ ಶಿಕ್ಷಣಕ್ಕೆ ಮಲಿಕ್ ನೀಡುತ್ತಿದ್ದಾರೆ. ಈ ಬಗ್ಗೆ ತಿಳಿದು ಟೀಂ ಇಂಡಿಯಾ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಮಲಿಕ್ ಕಾರ್ಯವನ್ನು ಹೊಗಳಿ, ಎಂಥಹ ಪ್ರೇರಣೆ ಎಂದು ಬರೆದು ಟ್ವೀಟ್ ಮಾಡಿ ಮಲಿಕ್‍ಗೆ ಸಲಾಂ ಎಂದಿದ್ದಾರೆ.

    ಬಡ ಕುಟುಂಬದಲ್ಲಿ ಬೆಳೆದ ಮಲಿಕ್ ಅವರಿಗೆ ಪ್ರೌಢಶಾಲೆ ಬಳಿಕ ಓದಲು ಸಾಧ್ಯವಾಗಲಿಲ್ಲ. ಕುಟುಂಬದ ಆರ್ಥಿತ ಪರಿಸ್ಥಿತಿಯಿಂದ ಹೆಚ್ಚಿನ ಶಿಕ್ಷಣ ಪಡೆಯಲು ಆಗಲಿಲ್ಲ. ಆದ್ದರಿಂದ ಶಿಕ್ಷಣದಿಂದ ವಂಚಿತರಾಗಿ ಬಡ ಮಕ್ಕಳು ಕೆಲಸಕ್ಕೆ ಹೋಗುವುದನ್ನ ನೋಡಿದರೆ ನನಗೆ ನನ್ನ ಬಾಲ್ಯ ನೆನಪಾಗುತ್ತೆ. ನನ್ನ ರೀತಿ ಈ ಮಕ್ಕಳು ಶಿಕ್ಷಣ ಪಡೆಯಲಾಗದೆ ಕೊರಗಬಾರದು. ಹೀಗಾಗಿ ನನ್ನ ಸಂಪಾದನೆಯಲ್ಲಿ ಈ 40 ಮಕ್ಕಳಿಕೆ ಶಿಕ್ಷಣ ಕೊಡಿಸುತ್ತಿದ್ದೇನೆ. ಇದರಲ್ಲಿ ನನಗೆ ಖುಷಿ ಸಿಗುತ್ತಿದೆ ಎಂದು ಮಲಿಕ್ ತಿಳಿಸಿದ್ದಾರೆ.

    2017ರಲ್ಲಿ ‘ಮಾ ತುಜೆ ಸಲಾಂ’ ಹೆಸರಿನಲ್ಲಿ ಎನ್‍ಜಿಓ ಆರಂಭಿಸಿದೆ. ಚಹಾ ಮಾರಾಟ ಮಾಡಿ ಬರುವ ಲಾಭದ ಶೇ.80ರಷ್ಟು ಹಣವನ್ನು ನಾನು 40 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಡುವ ಶಾಲೆಗೆ ಖರ್ಚು ಮಾಡುತ್ತಿದ್ದೇನೆ. ಮಕ್ಕಳಿಗಾಗಿ ತಿಂಗಳಿಗೆ ಸುಮಾರು 20 ಸಾವಿರ ಹಣ ಬೇಕಾಗುತ್ತದೆ ಎಂದು ಹೇಳಿದ್ದಾರೆ.

    ಕಾನ್ಪುರದ ಚಹಾ ವ್ಯಾಪಾರಿ ಮೊಹಮದ್ ಮೆಹಬೂಬ್ ಮಲಿಕ್ 40 ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಅವರು ಚಿಕ್ಕ ಚಹಾ ಅಂಗಡಿ ಇಟ್ಟುಕೊಂಡಿದ್ದಾರೆ. ಅದರಿಂದ ಬಂದ ಶೇ. 80ರಷ್ಟು ಲಾಭವನ್ನು ಈ ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡುತ್ತಾರೆ, ಎಂಥಹ ಪ್ರೇರಣೆ! ಎಂದು ಬರೆದು ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿ ಮಲಿಕ್ ಕಾರ್ಯವನ್ನು ಶ್ಲಾಘಿಸಿದ್ದಾರೆ. ಇತ್ತ ನೆಟ್ಟಿಗರು ಕೂಡ ಮಲಿಕ್ ಕಾರ್ಯಕ್ಕೆ ಮನ ಸೋತಿದ್ದಾರೆ.

  • ಮೆಟ್ರೋ ಸೇತುವೆ ಕೆಳಗೆ 300 ಬಡ ಮಕ್ಕಳಿಗೆ ಅಂಗಡಿ ಮಾಲೀಕ ಪಾಠ

    ಮೆಟ್ರೋ ಸೇತುವೆ ಕೆಳಗೆ 300 ಬಡ ಮಕ್ಕಳಿಗೆ ಅಂಗಡಿ ಮಾಲೀಕ ಪಾಠ

    ನವದೆಹಲಿ: ದಿನಸಿ ಅಂಗಡಿ ಮಾಲೀಕರೊಬ್ಬರು ಸರ್ಕಾರ ಅಥವಾ ಯಾವುದೇ ಸಂಘ-ಸಂಸ್ಥೆಯ ನೆರವಿಲ್ಲದೆ, ಕಳೆದ 13 ವರ್ಷಗಳಿಂದ 300 ಬಡ ಮಕ್ಕಳಿಗಾಗಿ ಉಚಿತ ಶಾಲೆ ನಡೆಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

    ಉತ್ತರಪ್ರದೇಶ ಮೂಲದ ರಾಜೇಶ್ ಅವರು ದೆಹಲಿಯಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿದ್ದಾರೆ. ಆದರೆ ಇವರು ಯಮುನಾ ನದಿ ತಟದಲ್ಲಿರುವ ಮೆಟ್ರೋ ರೈಲು ಸೇತುವೆ ಕೆಳಗೆ ಬಡ ಮಕ್ಕಳಿಗಾಗಿ ಉಚಿತ ಶಾಲೆ ನಡೆಸುತ್ತಿದ್ದಾರೆ. ರಾಜೇಶ್ ಅವರು ಕಳೆದ 13 ವರ್ಷದಿಂದ ಈ ಉಚಿತ ಶಾಲೆಯನ್ನು ನಡೆಸಿಕೊಂಡು ಬಂದಿದ್ದಾರೆ. ಯಮುನಾ ತಟದಲ್ಲಿ ಜೋಪಡಿಗಳನ್ನು ಹಾಕಿಕೊಂಡು ಜೀವನ ಸಾಗಿಸುತ್ತಿರುವ ಬಡ ಕುಟುಂಬಗಳು ಹೊತ್ತು ಊಟಕ್ಕಾಗಿ ಕೂಲಿ ಮಾಡಿಕೊಂಡು ಕಷ್ಟ ಪಡುತ್ತಾರೆ. ಹೀಗಿರುವಾಗ ಇಲ್ಲಿನ ಮಕ್ಕಳಿಗೆ ಶಿಕ್ಷಣ ನೀಡೋದು ಬಡ ಪೋಷಕರಿಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಬಡ ಮಕ್ಕಳಿಗೂ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ರಾಜೇಶ್ ಈ ಶಾಲೆ ನಡೆಸುತ್ತಿದ್ದಾರೆ.

    ಬೆಳಗ್ಗೆ 9 ರಿಂದ 11 ಮತ್ತು ಮಧ್ಯಾಹ್ನ 2 ರಿಂದ 4.30 ರವರೆಗೆ ಎರಡು ಪಾಳಿಯಲ್ಲಿ ಮಕ್ಕಳಿಗೆ ರಾಜೇಶ್ ಅವರು ಪಾಠ ಹೇಳಿಕೊಡುತ್ತಾರೆ. ಇವರ ನಿಸ್ವಾರ್ಥ ಸೇವೆಯನ್ನು ಮೆಚ್ಚಿ ಅಕ್ಕ-ಪಕ್ಕದಲ್ಲಿ ವಾಸವಾಗಿರೋ ಏಳು ಮಂದಿ ಶಿಕ್ಷಕರು ತಮ್ಮ ಬಿಡುವಿನ ವೇಳೆಯಲ್ಲಿ ಈ ಶಾಲೆಗೆ ಬಂದು ಪಾಠ ಹೇಳಿಕೊಡುತ್ತಿದ್ದಾರೆ.

    ಇದೊಂದು ಓಪನ್ ಹೌಸ್ ಸ್ಕೂಲ್ ಆಗಿದ್ದು, ಮೆಟ್ರೋ ಸೇತುವೆಯೇ ಇದಕ್ಕೆ ಸೂರಾಗಿದೆ. ಮೆಟ್ರೋ ಕಾಂಪ್ಲೆಕ್ಸ್‌ನ ಗೋಡೆಗೆ ಕಪ್ಪು ಬಣ್ಣ ಬಳಿದು ಅದನ್ನೇ ಬರೆಯುವ ಬೋರ್ಡ್ ಮಾಡಲಾಗಿದೆ. ನೆಲದ ಮೇಲೆ ಕಾರ್ಪೆಟ್ ಹಾಕಿ ಅದರ ಮೇಲೆ ಮಕ್ಕಳನ್ನು ಕೂರಿಸಿ ಇಲ್ಲಿ ಪಾಠ ಮಾಡಲಾಗುತ್ತದೆ. ಅಲ್ಲದೆ ಈ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಹೆಚ್ಚಿಗೆ ಓದುವ ಆಸೆ ಇದ್ದರೆ, ಅವರನ್ನು ರಾಜೇಶ್ ಅವರು ಸರ್ಕಾರಿ ಶಾಲೆಗೆ ಸೇರಿಸುತ್ತಾರೆ. ಅವರು ಹೆಚ್ಚಿನ ಶಿಕ್ಷಣ ಪಡೆಯಲು ಸಹಾಯ ಮಾಡುತ್ತಾರೆ.

    ಅಲ್ಲದೆ ಈ ಶಾಲೆ ಬಗ್ಗೆ ತಿಳಿದ ಕೆಲ ಎನ್‍ಜಿಒ ಹಾಗೂ ಸಾರ್ವಜನಿಕರು ಶಾಲೆಗೆ ನೆರವು ನೀಡಲು ಬರುತ್ತಾರೆ. ಅವರಿಗೆ ನೀವು ಹಣಕ್ಕಿಂತ ಮಕ್ಕಳಿಗೆ ಆಹಾರ, ಅಗತ್ಯ ಪಠ್ಯಪುಸ್ತಕಗಳನ್ನು ನೀಡಿ ಸಹಾಯ ಮಾಡಿ ಎಂದು ಹೇಳುತ್ತಾರೆ. ಜೊತೆಗೆ ಹಲವರು ಇಲ್ಲಿಗೆ ಭೇಟಿ ನೀಡಿ ತಮ್ಮ ಹುಟ್ಟುಹಬ್ಬವನ್ನು ಶಾಲೆಯ ಮಕ್ಕಳ ಜೊತೆ ಆಚರಿಸಿಕೊಂಡು ಖುಷಿಪಡುತ್ತಾರೆ. ಇನ್ನು ಕೆಲವರು ಹಾಗೆ ಸುಮ್ಮನೆ ಬಂದು ಮಕ್ಕಳ ಜೊತೆ ಬೆರೆದು ಸಮಯ ಕಳೆಯುತ್ತಾರೆ.

    2006ರಿಂದ ರಾಜೇಶ್ ಅವರು ಈ ಶಾಲೆಯನ್ನು ನಡೆಸುತ್ತಿದ್ದಾರೆ. ಶಾಲೆಯಲ್ಲಿ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ನೀಡಿ ಸಹಾಯ ಮಾಡುತ್ತಿದ್ದಾರೆ. ಅಲ್ಲದೆ ಈ ಬಡ ಮಕ್ಕಳಿಗೂ ಉತ್ತಮ ಜೀವನ ನಡೆಸುವ ಹಕ್ಕಿದೆ. ಶಿಕ್ಷಣದಿಂದ ಈ ಮಕ್ಕಳು ಮುಂದೆ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತೆ. ಆದ್ದರಿಂದ ಶಾಲೆಯ ಸುತ್ತಮುತ್ತಲು ಇರುವ ಬಡ ಕುಟುಂಬಗಳ ಮಕ್ಕಳಿಗೆ ಓದುವ ಆಸಕ್ತಿಯಿದ್ದರೆ ಅವರನ್ನು ಕರೆದುಕೊಂಡು ಬಂದು ಪಾಠ ಮಾಡಲಾಗುತ್ತದೆ. ಇದರಿಂದ ಮುಂದೆ ಈ ಮಕ್ಕಳು ಸಾಮಾಜದಲ್ಲಿ ಉತ್ತಮ ಜೀವನ ನಡೆಸಲು ನೆರವಾಗುತ್ತೆದೆ ಎಂದು ರಾಜೇಶ್ ಶಾಲೆ ನಡೆಸುತ್ತಿದ್ದಾರೆ.

  • ಕೈತುಂಬ ಸಂಬಳ ಬಿಟ್ಟು, ಪ್ರವಾಹ ಪೀಡಿತ ಮಕ್ಕಳ ವಿದ್ಯಾಭ್ಯಾಸಕ್ಕೆ ಶ್ರಮಿಸುತ್ತಿದ್ದಾರೆ ಐಐಟಿ ಪದವಿಧರ!

    ಕೈತುಂಬ ಸಂಬಳ ಬಿಟ್ಟು, ಪ್ರವಾಹ ಪೀಡಿತ ಮಕ್ಕಳ ವಿದ್ಯಾಭ್ಯಾಸಕ್ಕೆ ಶ್ರಮಿಸುತ್ತಿದ್ದಾರೆ ಐಐಟಿ ಪದವಿಧರ!

    ಅಸ್ಸಾಂ: ಐಐಟಿಯಲ್ಲಿ ಪದವಿ ಓದಿ ಕೈತುಂಬಾ ಸಂಬಳ ಬರುತ್ತಿದ್ದ ಕೆಲಸವನ್ನು ಬಿಟ್ಟು, ಪ್ರವಾಹ ಪೀಡಿತ ಪ್ರದೇಶದಲ್ಲಿ ವಿದ್ಯಾಭ್ಯಾಸದಿಂದ ವಂಚಿತರಾದ ಮಕ್ಕಳಿಗಾಗಿ ಶಾಲೆ ನಿರ್ಮಿಸಿ, ಅವರ ವಿದ್ಯಾಭ್ಯಾಸಕ್ಕೆ ನೆರವಾಗುವ ಮೂಲಕ ಎಂಜಿನಿಯರ್ ಒಬ್ಬರು ಇತರರಿಗೆ ಮಾದರಿಯಾಗಿದ್ದಾರೆ.

    ಹೌದು. ಮಹಾರಾಷ್ಟ್ರದ ಸತಾರಾ ಮೂಲದ ಎಂಜಿನಿಯರ್ ಬಿಪಿನ್ ಧಾನೆ(29) ಬಡ ಮಕ್ಕಳ ಭವಿಷ್ಯಕ್ಕೆ ಒಳ್ಳೆಯ ತಳಹದಿ ಕಲ್ಪಿಸಿಕೊಟ್ಟಿದ್ದಾರೆ. ಬಿಪಿನ್ ಧಾನೆ ಅವರ ತಂದೆ-ತಾಯಿಯ ಕನಸಿನಂತೆ 2013ರಲ್ಲಿ ಐಐಟಿ ಖರಗ್‍ಪುರದಲ್ಲಿ ಪದವಿ ಪಡೆದು, ಸಿಂಗಾಪೂರದ ಕಂಪನಿಯೊಂದರಲ್ಲಿ ಒಳ್ಳೆಯ ಉದ್ಯೋಗವನ್ನೂ ಪಡೆದಿದ್ದರು. ಆದರೆ ಕೈತುಂಬ ಸಂಬಳ ಬರುವ ಕೆಲಸವಿದ್ದರೂ, ಆ ಕೆಲಸದಲ್ಲಿ ನೆಮ್ಮದಿ ಇಲ್ಲ ಎಂದು ಎರಡೇ ವರ್ಷದಲ್ಲಿ ಅದನ್ನು ಬಿಟ್ಟು ಊರಿಗೆ ಮರಳಿದರು.

    ಸ್ವದೇಶಕ್ಕೆ ಮರಳಿದ ಬಳಿಕ ಅಸ್ಸಾಂನಲ್ಲಿನ ಪ್ರವಾಹ ಪೀಡಿತ ದ್ವೀಪ ಜಿಲ್ಲೆಯಾದ ಮಜೂಲಿಗೆ ಬಂದು, ಅಲ್ಲಿನ ಮಕ್ಕಳಿಗೆಂದೇ 2017ರಲ್ಲಿ “ದ ಹಮ್ಮಿಂಗ್‍ಬರ್ಡ್ ಸ್ಕೂಲ್” ಕಟ್ಟಿದರು. ತಾವು ಉದ್ಯೋಗದಲ್ಲಿದಾಗ ಉಳಿತಾಯ ಮಾಡಿಟ್ಟಿದ್ದ ಹಣದಲ್ಲಿ ಬಡ ಮಕ್ಕಳ ಭವಿಷ್ಯ ಕಟ್ಟಲು ಮುಂದಾದರು. ಆಗ ಅಲ್ಲಿನ ಜನ ಜಾಗ, ಬಿದಿರು, ಮರ ಇತ್ಯಾದಿ ಎಲ್ಲ ಅಗತ್ಯ ವಸ್ತುಗಳನ್ನು ನೀಡಿ ಬಿಪಿನ್ ಅವರಿಗೆ ಶಾಲೆ ನಿರ್ಮಿಸಲು ಕೈಜೋಡಿಸಿದರು.

    ನಂತರ ಈ ವಿಷಯ ತಿಳಿದು ಅನೇಕ ಸರ್ಕಾರೇತರ ಸಂಸ್ಥೆಗಳು ಕೂಡ ಬಿಪಿನ್ ನೆರವಿಗೆ ನಿಂತವು. ಮೊದಲು 2017ರಲ್ಲಿ ಪುಟ್ಟದಾಗಿ ಶುರುವಾದ ಈ ಶಾಲೆಯಲ್ಲಿ ಸದ್ಯ 20 ಶಿಕ್ಷಕರು ಹಾಗೂ 10 ಬೋಧಕೇತರ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಸುಮಾರು 240 ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಹಾಗೆಯೇ ಇಲ್ಲಿ ಕೇವಲ ಪಾಠವಷ್ಟೇ ಅಲ್ಲದೆ, ಅಲ್ಲಿನ ಬುಡಕಟ್ಟು ಸಂಪ್ರದಾಯ, ಕ್ರೀಡೆ, ಇತರೇ ಪಠ್ಯೇತರ ಚಟುವಟಿಕೆಗಳಿಗೂ ಮಕ್ಕಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.

    ಈಗಿನ ಕಾಲದಲ್ಲಿ ಕೈತುಂಬ ಸಂಬಳ ಸಿಕ್ಕರೆ ನಮ್ಮ ಪಾಡಿಗೆ ನಾವಿರೋಣ ಎನ್ನುವ ಜನಗಳೇ ಹೆಚ್ಚು. ಆದ್ರೆ ಇಂತಹ ಸ್ವಾರ್ಥ ಪ್ರಪಂಚದಲ್ಲಿ ನಿಸ್ವಾರ್ಥವಾಗಿ ಬಡ ಮಕ್ಕಳ ಜೀವನಕ್ಕೆ ನೆರವಾಗಿರುವ ಬಿಪಿನ್ ಅವರ ಸಾಧನೆ ಎಲ್ಲರ ಮನ ಗೆದ್ದಿದೆ.

    https://www.youtube.com/watch?v=rwoKEpRvkSg