Tag: ಬಡ ಕುಟುಂಬ

  • ಲಾಕ್‍ಡೌನ್ ನಿಂದ ತುತ್ತು ಅನ್ನಕ್ಕಾಗಿ ಪರದಾಡುತ್ತಿವೆ ಕಲಬುರಗಿಯ 30 ಕುಟುಂಬಗಳು

    ಲಾಕ್‍ಡೌನ್ ನಿಂದ ತುತ್ತು ಅನ್ನಕ್ಕಾಗಿ ಪರದಾಡುತ್ತಿವೆ ಕಲಬುರಗಿಯ 30 ಕುಟುಂಬಗಳು

    ಕಲಬುರಗಿ: ಕೊರೊನಾ ಲಾಕ್‍ಡೌನ್ ನಿಂದಾಗಿ ಎಂಥೆಂಥವರ ಬದುಕು ಬೀದಿಗೆ ಬಂದಿದೆ. ಅಂಥದರಲ್ಲಿ ಬೀದಿಲಿ ಬದುಕುವವರ ಕಷ್ಟ ಇದೀಗ ಹೇಳತೀರದಾಗಿದೆ. ಕಲಬುರಗಿಯ ರಾಣೇಸಪೀರ್ ದರ್ಗಾ ಬಳಿ ಪ್ಲಾಸ್ಟಿಕ್ ಬಿಂದಿಗೆ ಮಾರಾಟ ಮಾಡುತ್ತಿದವರ ಉದ್ಯೋಗಕ್ಕೆ ಕತ್ತರಿ ಬಿದಿದ್ದು, ಕಳೆದ 8 ದಿನಗಳಿಂದ ಇಲ್ಲಿನ 30 ಕುಟುಂಬಗಳು ತುತ್ತು ಅನ್ನಕ್ಕೂ ಪರದಾಡುತ್ತಿವೆ.

    ಈ ಹಿಂದೆ ಬೈಕ್ ಗಳ ಮೇಲೆ ಬಡಾವಣೆಗಳಿಗೆ ಹೋಗಿ ಬಿಂದಿಗೆ ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಕಳೆದ 20 ದಿನಗಳಿಂದ ಲಾಕ್‍ಡೌನ್ ಹಿನ್ನೆಲೆ ಇವರು ಯಾವ ಬಡಾವಣೆಗಳಿಗೂ ಹೋಗಿ ಬಿಂದಿಗೆ ಮಾರಾಟ ಮಾಡಿಲ್ಲ. ನಿತ್ಯ 400 ರಿಂದ 500 ರೂಪಾಯಿವರೆಗೆ ಆದಾಯ ಗಳಿಸಿ ತಮ್ಮ ಕುಟುಂಬ ನಿರ್ವಹಣೆಯನ್ನು ಮಾಡುತ್ತಿದ್ದರು. ಆದರೆ ಲಾಕ್‍ಡೌನ್ ಬಳಿಕ ಇವರ ಈ ಉದ್ಯೋಗಕ್ಕೆ ಸಂಪೂರ್ಣ ಕತ್ತರಿ ಬಿದ್ದಿದೆ.

    ಅಲ್ಪ ಸ್ವಲ್ಪ ಉಳಿಸಿದ ಹಣದಿಂದ ಇಷ್ಟು ದಿನ ದಿನಸಿ ಧಾನ್ಯ ಹಾಗೂ ತರಕಾರಿ ಖರೀದಿಸಿ ಜೀವನ ನಡೆಸಿದ್ದಾರೆ. ಆದ್ರೆ ಇವರ ಉಳಿತಾಯದ ಹಣ ಸಹ 8 ದಿನಗಳ ಹಿಂದೆ ಖಾಲಿಯಾಗಿ ತುತ್ತು ಅನ್ನಕ್ಕೆ ಪರದಾಡುವಂತಾಗಿದೆ. ಹೀಗಾಗಿ ಲಾಕ್‍ಡೌನ್ ಮುಗಿಯುವರೆಗೆ ಯಾರಾದ್ರೂ ದಾನಿಗಳು ದಿನಸಿ ಪದಾರ್ಥ ನೀಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.

  • ಮಳೆಯಿಂದ ಕುಸಿದ ಮನೆಯ ಗೋಡೆ – ಸಂಕಟಕ್ಕೆ ಸಿಲುಕಿದ ಬಡ ಕುಟುಂಬ

    ಮಳೆಯಿಂದ ಕುಸಿದ ಮನೆಯ ಗೋಡೆ – ಸಂಕಟಕ್ಕೆ ಸಿಲುಕಿದ ಬಡ ಕುಟುಂಬ

    ಹಾಸನ: ಮಳೆಯಿಂದ ಮನೆಯ ಗೋಡೆ ಕುಸಿತವಾಗಿ ಇಡೀ ಕುಟುಂಬವೇ ಸಂಕಷ್ಟಕ್ಕೆ ಸಿಲುಕಿರುವ ಘಟನೆ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ನಡೆದಿದೆ.

    ಶ್ರೀಕಂಠನಗರದಲ್ಲಿ ಮಂಜುಳಮ್ಮ ಎಂಬುವವರು ತಮ್ಮ ಇಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದರು. ಇರಲು ಮನೆ ಬಿಟ್ಟರೆ ಬೇರೆ ಆಸ್ತಿಯಿಲ್ಲದ ಮಂಜುಳಮ್ಮ ಗಾರೆ ಕೆಲಸ ಮಾಡಿಕೊಂಡು ಇಬ್ಬರು ಹೆಣ್ಣು ಮಕ್ಕಳ ಜೊತೆ ಜೀವನ ಸಾಗಿಸುತ್ತಿದ್ದರು.

    ಲಾಕ್‍ಡೌನ್ ನಂತರ ಸರಿಯಾಗಿ ಕೂಲಿ ಕೆಲಸ ಕೂಡ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಮಳೆಯಿಂದ ಮನೆಗೋಡೆ ಕುಸಿದಿದ್ದು, ಇಡೀ ಕುಟುಂಬ ಸಂಕಟಕ್ಕೆ ಸಿಲುಕಿದೆ. ಅದಷ್ಟು ಬೇಗ ಅಧಿಕಾರಿಗಳು ನಮ್ಮ ಕಷ್ಟಕ್ಕೆ ಸ್ಪಂದಿಸಿ ಸರ್ಕಾರದಿಂದ ಧನ ಸಹಾಯ ಮಾಡಿಸುವಂತೆ ಮನೆ ಹಾನಿಗೊಳಗಾದವರು ಮನವಿ ಮಾಡಿದ್ದಾರೆ.

  • ಬಡ ಕುಟುಂಬಗಳಿಗೆ 10 ಸಾವಿರ ನೆರವು ನೀಡಿ – ಕಾಂಗ್ರೆಸ್‍ನಿಂದ ಆನ್‍ಲೈನ್ ಅಭಿಯಾನ

    ಬಡ ಕುಟುಂಬಗಳಿಗೆ 10 ಸಾವಿರ ನೆರವು ನೀಡಿ – ಕಾಂಗ್ರೆಸ್‍ನಿಂದ ಆನ್‍ಲೈನ್ ಅಭಿಯಾನ

    ನವದೆಹಲಿ: ಲಾಕ್‍ಡೌನ್ ಅವಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಬಡ ಜನರ ನೆರವಿಗೆ ನಿಲ್ಲುವ ಪ್ರಯತ್ನ ಆರಂಭಿಸಿರುವ ಕಾಂಗ್ರೆಸ್, ಈ ಸಂಬಂಧ ಅಭಿಯಾನವೊಂದನ್ನು ಶುರು ಮಾಡಲು ನಿರ್ಧರಿಸಿದೆ.

    ದೇಶದಲ್ಲಿರುವ ಶೇ.50 ಕುಟುಂಬಗಳ ಖಾತೆಗೆ ತಲಾ 10 ಸಾವಿರ ರೂಪಾಯಿ ಹಣ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವ ಅಭಿಯಾನವನ್ನು ಕಾಂಗ್ರೆಸ್ ಹಮ್ಮಿಕೊಂಡಿದ್ದು, ಮೇ 28ರಂದು ಈ ಆನ್‍ಲೈನ್ ಮೂಲಕ ಅಭಿಯಾನಕ್ಕೆ ಚಾಲನೆ ಸಿಗಲಿದೆ. ಸರಣಿ ಸುದ್ದಿಗೋಷ್ಠಿ ನಡೆಸುತ್ತಿರುವ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಹಲವು ಬಾರಿ ಬಡ ಜನರ ಖಾತೆಗಳಿಗೆ ನೇರ ಹಣ ಜಮಾವಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಕೇಂದ್ರ ಸರ್ಕಾರದಿಂದ ಯಾವುದೇ ಮನ್ನಣೆ ಸಿಗದ ಹಿನ್ನೆಲೆಯಲ್ಲಿ ಈ ಅಭಿಯಾನಕ್ಕೆ ಕಾಂಗ್ರೆಸ್ ಮುಂದಾಗಿದೆ.

    ಇದಕ್ಕೂ ಮುನ್ನ ರಾಹುಲ್ ಗಾಂಧಿ, ಭಾರತೀಯ ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ಡಾ.ರಘುರಾಮ್ ರಾಜನ್ ಹಾಗೂ ಖ್ಯಾತ ಆರ್ಥಿಕ ತಜ್ಞ, ನೊಬೆಲ್ ಪ್ರಶಸ್ತಿ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಅವರೊಂದಿಗೆ ವಿಡಿಯೋ ಸಂವಾದ ನಡೆಸಿ ಜನ ಸಾಮಾನ್ಯರಿಗೆ ನಗದು ಹಣದ ಅವಶ್ಯಕತೆ ಬಗ್ಗೆ ಚರ್ಚೆ ನಡೆಸಿದ್ದರು.

    ಈ ನಡುವೆ ಬಡ ಜನರು ಮತ್ತು ವಲಸೆ ಕಾರ್ಮಿಕರ ವಿಚಾರದಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ರಾಜಕೀಯ ಶುರುವಾಗಿದ್ದು, ವಲಸೆ ಕಾರ್ಮಿಕರಿಗೆ ರೈಲು ನೀಡಿ ಕಾಂಗ್ರೆಸ್ ಬೆಚ್ಚ ಭರಿಸುವುದಾಗಿ ಕಾಂಗ್ರೆಸ್ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿತ್ತು. ಇದು ವಿವಾದವಾಗುತ್ತಿದ್ದಂತೆ 85% ಕೇಂದ್ರ ಹಾಗೂ 15% ರಾಜ್ಯ ಸರ್ಕಾರದ ವೆಚ್ಚದಲ್ಲಿ ಶ್ರಮಿಕ್ ಹೆಸರಿನ ವಿಶೇಷ ಟ್ರೈನ್ ಓಡಿಸಲು ಸರ್ಕಾರ ಒಪ್ಪಿಗೆ ನೀಡಿತ್ತು. ಈ ನಡುವೆ ಪ್ರಿಯಾಂಕಾ ಗಾಂಧಿ ಸಾವಿರ ಬಸ್‍ಗಳಲ್ಲಿ ವಲಸೆ ಕಾರ್ಮಿಕರ ಸಂಚಾರಕಕ್ಕೆ ಅನುಮತಿ ಕೇಳಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಮನವಿ ಮಾಡಿದ್ದರು. ಅವಕಾಶ ಸಿಗದ ಬೆನ್ನಲ್ಲೇ ಇದು ಕೂಡಾ ವಿವಾದವಾಗಿತ್ತು.

    ವಲಸೆ ಕಾರ್ಮಿಕರ ಬಳಿಕ ಬಡವರ ಪರ ಧ್ವನಿ ಎತ್ತಿರುವ ಕಾಂಗ್ರೆಸ್ ಈಗ ಆನ್‍ಲೈನ್ ಅಭಿಯಾನದ ಮೂಲಕ ಹತ್ತು ಸಾವಿರ ಹಣದ ನೆರವು ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿದ್ದು ಕೊರೊನಾ ಸಂಕಷ್ಟ ವೇಳೆ ರಾಜಕೀಯ ನುಸುಳಲು ಆರಂಭಿಸಿದೆ.

  • ‘ಮನೆಯೇ’ ಮಂತ್ರಾಲಯ ಇಂಪ್ಯಾಕ್ಟ್ – ಬಡ ಕುಟುಂಬಕ್ಕೆ ಕರವೇ ಕಾರ್ಯಕರ್ತರ ಸ್ಪಂದನೆ

    ‘ಮನೆಯೇ’ ಮಂತ್ರಾಲಯ ಇಂಪ್ಯಾಕ್ಟ್ – ಬಡ ಕುಟುಂಬಕ್ಕೆ ಕರವೇ ಕಾರ್ಯಕರ್ತರ ಸ್ಪಂದನೆ

    ನೆಲಮಂಗಲ: ಪಬ್ಲಿಕ್ ಟಿವಿಯ ‘ಮನೆಯೇ’ ಮಂತ್ರಾಲಯ ಕಾರ್ಯಕ್ರಮಕ್ಕೆ ಬೆಂಗಳೂರು ಹೊರವಲಯ ನೆಲಮಂಗಲ ನಗರದ ವೀವರ್ಸ್ ಕಾಲೋನಿಯ ಆಟೋ ಡ್ರೈವರ್ ಧನಂಜಯ ಎಂಬವರು ಶುಕ್ರವಾರ ಕರೆ ಮಾಡಿ ತಮ್ಮ ಕಷ್ಟವನ್ನ ಹೇಳಿಕೊಂಡಿದ್ದರು.

    ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಮನೆಯಿಂದ ಹೊರಬರದೆ ಹಾಗೂ ಬಡತನದ ಬೇಗೆಯಿಂದ ಸಾಕಷ್ಟು ಸಮಸ್ಯೆ ಎದುರಿಸಿದ್ದ ಕುಟುಂಬಕ್ಕೆ ನೆರವು ಸಿಕ್ಕಿದೆ. ಇಂದು ಈ ಬಡ ಕುಟುಂಬದ ಸದಸ್ಯರಿಗೆ ಕರವೇ ಶಿವರಾಮೇಗೌಡ ಬಣದ ನೆಲಮಂಗಲ ತಾಲೂಕು ಅಧ್ಯಕ್ಷ ಸುರೇಶ್ ನೇತೃತ್ವದಲ್ಲಿ ಕರವೇ ಸ್ನೇಹಿತರು ಮಾನವೀಯತೆ ಮೆರೆದಿದ್ದಾರೆ.

    ಪಬ್ಲಿಕ್ ಟಿವಿಯ ಕರೆಗೆ ಸ್ಪಂದಿಸಿ ಈ ಕುಟುಂಬಕ್ಕೆ 15 ದಿನಕ್ಕೆ ಬೇಕಾಗುವ ಎಲ್ಲಾ ರೀತಿಯ ದಿನಸಿ ಪದಾರ್ಥಗಳು ಹಾಗೂ ತರಕಾರಿ ಹಣ್ಣುಗಳನ್ನು ನೀಡಿ ಸಂಕಷ್ಟದಲ್ಲಿದ್ದ ಆಟೋ ಡ್ರೈವರ್ ಧನಂಜಯ್ ಕುಟುಂಬಕ್ಕೆ ನೆರವು ನೀಡಿದ್ದಾರೆ. ನೆರವಿಗೆ ಧಾವಿಸಿದ ಪಬ್ಲಿಕ್ ಟಿವಿ ತಂಡ ಹಾಗೂ ಕರವೇ ಸ್ನೇಹಿತರಿಗೆ ಆಟೋ ಚಾಲಕನ ಕುಟುಂಬಸ್ಥರು ಧನ್ಯವಾದ ತಿಳಿಸಿದ್ದಾರೆ.

    ಈ ವೇಳೆ ಮಾತನಾಡಿದ ನೆಲಮಂಗಲ ಕರವೇ ಅಧ್ಯಕ್ಷ ಸುರೇಶ್, ಇಂತಹ ಸಾಕಷ್ಟು ಜನರು ಈ ಲಾಕ್‍ಡೌನ್ ಸಮಯದಲ್ಲಿ ಸಮಸ್ಯೆ ಎದುರಿಸುತಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ತಾಲೂಕಿನಲ್ಲಿ ನಮ್ಮ ಸೇವೆಯನ್ನು ಮುಂದುವರಿಸಿ ಜನರ ಏಳಿಗೆಗೆ ನಮ್ಮ ತಂಡ ಶ್ರಮಿಸುವುದಾಗಿ ತಿಳಿಸಿದ್ದಾರೆ.

     

  • ಆಧಾರ ಸ್ತಂಭವಾಗಿದ್ದ ಮಗನ ಕಳಕೊಂಡು ತಂದೆ, ತಾಯಿ ಕಣ್ಣೀರು

    ಆಧಾರ ಸ್ತಂಭವಾಗಿದ್ದ ಮಗನ ಕಳಕೊಂಡು ತಂದೆ, ತಾಯಿ ಕಣ್ಣೀರು

    – ಅಪಘಾತವಲ್ಲ ಕೊಲೆಯೆಂದು ಆರೋಪ

    ಉಡುಪಿ: ಬಡ ಕುಟುಂಬದ ಆಧಾರ ಸ್ತಂಭವಾಗಿದ್ದ ಯುವಕನೊಬ್ಬ ನಡು ವಯಸ್ಸು ದಾಟಿದ ತಂದೆ ತಾಯಿಗೆ ಊರುಗೋಲಾಗಿ, ತಮ್ಮನ ವಿಧ್ಯಾಭ್ಯಾಸಕ್ಕೆ ದಾರಿ ದೀಪವಾಗಲು ತಯಾರಾಗಿದ್ದನು. ಏನಾಯ್ತೋ ಏನೋ ಒಂದು ರಾತ್ರಿ ವಿನೋದ್ ಜೀವನದಲ್ಲಿ ಕೊನೆಯ ರಾತ್ರಿಯಾಯ್ತು. ಕಗ್ಗತ್ತಲ ಕಾಡಿನ ರಸ್ತೆ ಜೀವಕ್ಕೆ ಕುತ್ತು ತಂದಿತ್ತು. ಆದರೆ ವಿನೋದ್ ಸಾವಿನ ಹಿಂದೆ ವ್ಯವಸ್ಥಿತ ಸಂಚಿದೆ ಎಂಬೂದು ಕುಟುಂಬಸ್ಥರ ಆರೋಪವಾಗಿದೆ.

    ಹೌದು. ಮೂರು ತಿಂಗಳ ಹಿಂದೆ ಮಗ ವಿನೋದ್ ಮೃತಪಟ್ಟ ನೆನಪು ತಾಯಿಯನ್ನು ಮತ್ತೆ ಮತ್ತೆ ಬಿಕ್ಕಳಿಸಿ ಅಳುವಂತೆ ಮಾಡುತ್ತಿದೆ. ವಿನೋದ್ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವದ ಯುವಕ. ಬಡ ಕುಟುಂಬವಾದ್ದರಿಂದ ಓದು ನಿಲ್ಲಿಸಿ ಟಿಪ್ಪರ್ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಜೂನ್ 26ರ ರಾತ್ರಿ ಗೆಳೆಯರೆಲ್ಲ ಸೇರಿಕೊಂಡು ಮಂಚಕಲ್ಲುವಿನ ಮರೀನಾ ಬಾರಿನಲ್ಲಿ ಪಾರ್ಟಿ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ಜಗಳವಾಗಿದೆ. 11 ಗಂಟೆ ಸುಮಾರು ಬಾರ್‍ನಿಂದ ಮನೆಗೆ ತನ್ನ ಗೆಳೆಯ ಕುಮಾರನೊಂದಿಗೆ ವಿನೋದ್ ಹೊರಟಿದ್ದಾನೆ. ಮನೆಯಿಂದ ಅರ್ಧ ಕೊಲೋಮೀಟರ್ ದೂರದಲ್ಲಿ ವಿನೋದ್ ಮೃತದೇಹ ಪತ್ತೆಯಾಗಿದೆ. ಅಪಘಾತ ಎಂದು ಎಫ್‍ಐ ಆರ್ ದಾಖಲಾಗಿದೆ. ಆದರೆ ಇದೊಂದು ವ್ಯವಸ್ಥಿತ ಕೊಲೆ ವಿನೋದ್ ಪೋಷಕರು ಆರೋಪಿಸಿದ್ದಾರೆ.

    ಬೈಕ್ ಸ್ಕಿಡ್ ಆಗಿ ವಿನೋದ್ ಮೃತಪಟ್ಟಿದ್ದಾನೆ ಎಂದು ಎಫ್‍ಐಆರ್‍ನಲ್ಲಿ ದಾಖಲಾಗಿದೆ. ಹಿಂಬದಿ ಸವಾರ ಕುಮಾರನಿಗೂ ತರಚಿದ ಗಾಯಗಳಾಗಿದೆ ಅಂತಲೂ ನಮೂದಿಸಲಾಗಿದೆ. ಆದರೆ ಕುಟುಂಬಸ್ಥರು ಇದನ್ನು ಒಪ್ಪುತ್ತಿಲ್ಲ. ಸುತ್ತಮುತ್ತಲ ಸಿಸಿಟಿವಿ ಫೂಟೇಜ್ ಪರಿಶೀಲಿಸುವಾಗ ವಿನೋದ್ ಮತ್ತು ಗೆಳೆಯ ಕುಮಾರ ಜೊತೆಗೆ ಬೈಕಿನಲ್ಲಿ ಹೋಗಿದ್ದಾರೆ. ಅಪಘಾತವಾದ ಸ್ಥಳದಲ್ಲಿ ಯಾವುದೇ ಕುರುಹುಗಳು ಕಾಣಿಸಿಲ್ಲ. ಬೈಕಿಗೆ ಡ್ಯಾಮೇಜಾಗಿಲ್ಲ. ವಿನೋದ್ ಮೃತದೇಹದ ಮೇಲೆ ಗಾಯಗಳಿಲ್ಲ. ಫೋನ್ ನಲ್ಲಿ ಜಗಳದ ಸಂಭಾಷಣೆಗಳು ರೆಕಾರ್ಡ್ ಆಗಿದೆ. ಮರಣೋತ್ತರ ಪರೀಕ್ಷೆ ವರದಿ ಇನ್ನೂ ಬಂದಿಲ್ಲ. ಎಸ್‍ಪಿ, ಎಎಸ್‍ಪಿ, ಸರ್ಕಲ್ ಆಫೀಸ್‍ಗಳಿಗೆ ಎಷ್ಟೇ ಸುತ್ತಿದ್ದರೂ ನ್ಯಾಯ ಸಿಗುತ್ತಿಲ್ಲ ಎಂದು ವಿನೋದ್ ತಾಯಿ ಮಲ್ಲಿಕಾ ಕಣ್ಣೀರು ಹಾಕಿದ್ದಾರೆ.

    ಘಟನೆ ನಡೆದ ದಿನ ಜೊತೆಗಿದ್ದ ಗೆಳೆಯರನ್ನು ಕರೆಸಿ ವಿಚಾರಣೆ ಮಾಡಬೇಕು. ಅಪಘಾತದಿಂದ ಸಾವನ್ನಪ್ಪಿದ್ದರೆ ಮರಣೋತ್ತರ ಪರೀಕ್ಷೆ ವರದಿ ಬರಲಿ, ಸಂಚು ರೂಪಿಸಿ ಕೊಲೆಗೈದಿದ್ದರೆ ಆರೋಪಿಗಳಿಗೆ ಶಿಕ್ಷೆಯಾಗಲಿ ಎಂದು ಕುಟುಂಬಸ್ಥರು ಒತ್ತಾಯಿಸುತ್ತಿದ್ದಾರೆ.

  • ಅಂಗವಿಕಲ ಮಗಳೊಂದಿಗೆ ಬಳೆ, ಸೀರೆ ವ್ಯಾಪಾರ ಮಾಡ್ತಿರೋ ತಾಯಿಗೆ ಬೇಕಿದೆ ಸಹಾಯ

    ಅಂಗವಿಕಲ ಮಗಳೊಂದಿಗೆ ಬಳೆ, ಸೀರೆ ವ್ಯಾಪಾರ ಮಾಡ್ತಿರೋ ತಾಯಿಗೆ ಬೇಕಿದೆ ಸಹಾಯ

    ಹಾವೇರಿ: ಅವರದ್ದು ಕಡುಬಡತನದ ಕುಟುಂಬ. ಮಗಳು ಹುಟ್ಟುತ್ತಾ ಅಂಧೆ, ತಂದೆ ಸ್ವಲ್ಪ ದಿನದಲ್ಲಿಯೇ ನಿಧನ ಹೊಂದಿದ್ದಾರೆ. ತಾಯಿ ಕೂಲಿ ಮಾಡಿಯೇ ಮಗಳನ್ನ ಬೆಳೆಸಿದ್ದಾರೆ. ಅಲ್ಲದೆ ಮಗಳಿಗೆ ಬರೋ ತಿಂಗಳ ಅಂಗವಿಕಲ ವೇತನದಲ್ಲಿ ಬಳೆ ಹಾಗೂ ಸೀರೆ, ಜಾಕೆಟ್‍ಗಳ ವ್ಯಾಪಾರ ಮಾಡಿ ಜೀವನ ಮಾಡುತ್ತಿದ್ದಾರೆ. ಆದ್ರೆ ಇದೀಗ ಕಡುಬಡತನದಲ್ಲಿರೋ ಈ ಕುಟುಂಬ ವ್ಯಾಪಾರ ಹಾಗೂ ಅಂಗಡಿ ಮಾಡಲು ದಾನಿಗಳ ಮೊರೆ ಹೋಗಿದೆ.

    ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಹಿರೇಮಣಕಟ್ಟಿ ಗ್ರಾಮದ ಪುಟ್ಟದೊಂದು ಮನೆಯಲ್ಲಿ ಬಳೆಯ ವ್ಯಾಪಾರ ಮಾಡುತ್ತಿದ್ದಾರೆ. ಮಾತ್ರವಲ್ಲದೇ ಮಗಳ ಕೈಹಿಡಿದುಕೊಂಡು ತಲೆಯ ಮೇಲೆ ಬುಟ್ಟಿಯನ್ನ ಹೊತ್ತು ತಾಯಿ ವ್ಯಾಪಾರಕ್ಕೆ ಹೋಗುತ್ತಿದ್ದಾರೆ. ಮಗಳು ಫಜಲುನಿಸ್ಸ್ ಬಡೇಮಿಯ್ಯಾ ಹುಟ್ಟುತ್ತಾ ಅಂಧೆ. ತಾಯಿ ಶಕುಂದಿ ಬಡೇಮಿಯ್ಯಾ ಆಶ್ರಯದಲ್ಲಿಯೇ ಬೆಳೆದಿದ್ದಾಳೆ. ತಂದೆ ಬೇಗ ನಿಧನ ಹೊಂದಿದ್ದರಿಂದ ಮಗಳಿಗೆ ತಾಯಿಯೇ ಆಸರೆ. ಆದ್ರೆ ಈಗ ತಾಯಿಗೆ ಸುಮಾರು 70 ವರ್ಷ. ಕಳೆದ 20 ವರ್ಷಗಳಿಂದ ತಾಯಿ ಮತ್ತು ಮಗಳು ಬಳೆ ವ್ಯಾಪಾರ ಹಾಗೂ ಜಾಕೆಟ್ ಪೀಸ್ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಪ್ರತಿ ತಿಂಗಳು ಸರ್ಕಾರದಿಂದ ಬರುವ ಅಂಗವಿಕಲ ವೇತನ 1200 ರೂಪಾಯಿ ತೆಗೆದುಕೊಂಡು ತಮ್ಮ ತುತ್ತಿನ ಚೀಲವನ್ನು ತುಂಬಿಸಿಕೊಳ್ಳುತ್ತಿದ್ದಾರೆ. ಆದ್ರೆ ಇದೀಗ ನಮಗೆ ವ್ಯಾಪಾರಕ್ಕಾಗಿ ಒಂದಿಷ್ಟು ಹಣ ಮತ್ತು ಗ್ರಾಮದಲ್ಲಿಯೇ ಸಣ್ಣ ಅಂಗಡಿಯನ್ನ ಹಾಕಿಕೊಟ್ಟರೇ ನಮ್ಮ ಜೀವನ ನಡೆಸುತ್ತಿವೆ ಅಂತಿದ್ದಾರೆ ಈ ತಾಯಿ ಮಗಳು.

    ಮೊದಲು ತಾಯಿ ಗ್ರಾಮದ ಬೇರೆ ಜಮೀನುಗಳಿಗೆ ಹೋಗಿ ಕೂಲಿ ಕೆಲಸ ಮಾಡಿ ತನ್ನ ಮಗಳನ್ನ ಸಾಕುತ್ತಿದ್ದರು. ಆದ್ರೆ ಇದೀಗ ತಾಯಿಗೆ ವಯಸ್ಸಾಗಿದ್ದರಿಂದ ಜಮೀನಿಗೆ ಹೋಗಿ ಕೆಲಸ ಮಾಡುವ ಶಕ್ತಿ ಇಲ್ಲ. ಹಾಗಾಗಿ ಪ್ರತಿ ತಿಂಗಳು ಬರೋ ಮಗಳ ಅಂಗವಿಕಲ ವೇತನದಲ್ಲಿ ಬಳೆಗಳು ಹಾಗೂ ಸೀರೆಯ ಜಾಕೆಟ್ ತಂದು ಮಾರಾಟ ಮಾಡ್ತಿದ್ದಾರೆ. ಅದರಲ್ಲಿ ಬಂದ ಹಣದಲ್ಲಿಯೇ ತಾಯಿ ಮತ್ತು ಮಗಳು ಜೀವನ ನಡೆಸುತ್ತಿದ್ದಾರೆ.

    ಬಸವ ವಸತಿ ಯೋಜನೆಯಲ್ಲಿ ಮನೆ ನಿರ್ಮಾಣ ಮಾಡಲು ಆರಂಭಿಸಿ ಎರಡು ವರ್ಷ ಆಗಿದೆ. ಆದ್ರೆ ಇನ್ನೂ ಮನೆ ಪೂರ್ಣವಾಗಿಲ್ಲ. ಈ ಕುಟುಂಬದ ಬಳೆ ಹಾಗೂ ಸೀರೆ ವ್ಯಾಪಾರಕ್ಕಾಗಿ ದಾನಿಗಳ ಸಹಾಯಬೇಕಿದೆ ಅಂತಾರೆ ಸ್ಥಳೀಯರು. ಮಗಳಿಗೆ ಸ್ಪಲ್ಪ ದೊಡ್ಡ ಪ್ರಮಾಣದಲ್ಲಿ ಬಳೆ ಹಾಗೂ ಸೀರೆ ವ್ಯಾಪಾರ ಮಾಡಿಕೊಡುವ ಆಸೆಯನ್ನು ತಾಯಿ ಹೊಂದಿದ್ದಾರೆ. ದಾನಿಗಳು ಸಹಾಯ ಮಾಡಿ ಈ ಕುಟುಂಬಕ್ಕೆ ದಾರಿದೀಪವಾಗಬೇಕಿದೆ.

    https://www.youtube.com/watch?v=VJXVGw7ajJ8