Tag: ಬಡ್ತಿ

  • ಉದ್ಯೋಗಿಗಳಿಗೆ ಈಗ ಬೋನಸ್ ಇಲ್ಲ, ಹೊಸ ನೇಮಕಾತಿ ಸ್ಥಗಿತಗೊಳಿಸಿದ ಆ್ಯಪಲ್

    ಉದ್ಯೋಗಿಗಳಿಗೆ ಈಗ ಬೋನಸ್ ಇಲ್ಲ, ಹೊಸ ನೇಮಕಾತಿ ಸ್ಥಗಿತಗೊಳಿಸಿದ ಆ್ಯಪಲ್

    ನವದೆಹಲಿ: ಆ್ಯಪಲ್ ಕಂಪನಿಯು (Apple Company) ವೆಚ್ಚವನ್ನು ಕಡಿತಗೊಳಿಸುವ ಸಲುವಾಗಿ ತನ್ನ ಕಂಪನಿಯ ಕಾರ್ಪೊರೇಟ್ ವಿಭಾಗದ ಉದ್ಯೋಗಿಗಳ ಬೋನಸ್‌ಗಳನ್ನು (Bonus) ವಿಳಂಬಗೊಳಿಸಲು ನಿರ್ಧರಿಸಿದೆ ಹಾಗೂ ಹಲವು ಉದ್ಯೋಗಿಗಳ ಬೋನಸ್ ಕೂಡಾ ಕಡಿಮೆಗೊಳಿಸುತ್ತದೆ ಎಂದು ವರದಿಗಳು ತಿಳಿಸಿವೆ.

    ಈ ವರದಿಗಳು ನಿಜವಾದಲ್ಲಿ ಉದ್ಯೋಗಿಗಳ ಒಂದು ವರ್ಗಕ್ಕೆ ಮುಂದಿನ ತಿಂಗಳು ಬಡ್ತಿ (Promtion) ದೊರೆಯುವುದಿಲ್ಲ. ಉದ್ಯೋಗಿಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ಕಂಪನಿಯು ವರ್ಷಕ್ಕೆ ಎರಡು ಬಾರಿ (ಎಪ್ರಿಲ್ ಮತ್ತು ಅಕ್ಟೋಬರ್) ತನ್ನ ಉದ್ಯೋಗಿಗಳಿಗೆ ಬೋನಸ್ ನೀಡುತ್ತದೆ. ಬಡ್ತಿ ಹಾಗು ಬೋನಸ್ ಹೊರತಾಗಿ ಆ್ಯಪಲ್ ಕಂಪನಿಯು ನೇಮಕಾತಿಯನ್ನು (Recruitment) ಸ್ಥಗಿತಗೊಳಿಸುವ ನಿರೀಕ್ಷೆಯಿದೆ. ಇದಕ್ಕೂ ಮೊದಲು 2020ರಲ್ಲಿ ಗೂಗಲ್, ಮೆಟಾ ಹಾಗು ಇನ್ನಿತರೆ ಟೆಕ್ ಕಂಪನಿಗಳು ಲೆಕ್ಕಕ್ಕಿಂತ ಜಾಸ್ತಿ ಉದ್ಯೋಗಿಗಳ ನೇಮಕಾತಿಯನ್ನು ಮಾಡಿಕೊಂಡು ಪ್ರಸ್ತುತ ಸಾವಿರಾರು ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸುತ್ತಿದೆ. ಇದನ್ನೂ ಓದಿ: Infosys ಅಧ್ಯಕ್ಷ ಸ್ಥಾನಕ್ಕೆ ಮೋಹಿತ್ ಜೋಶಿ ರಾಜೀನಾಮೆ 

    ಆ್ಯಪಲ್ ಕಂಪನಿಯ ಹೆಚ್‌ಆರ್ ತಂಡವು ಉದ್ಯೋಗಿಗಳ ಹಾಜರಾತಿಯನ್ನು ಸೂಕ್ಷ್ಮರೀತಿಯಲ್ಲಿ ಗಮನಿಸುತ್ತಿದೆ. ಈ ಕಂಪನಿಯು ಮನೆಯಿಂದ ಕೆಲಸ ಮಾಡುವುದನ್ನು ಕೊನೆಗೊಳಿಸಿ ಉದ್ಯೋಗಿಗಳು ವಾರಕ್ಕೆ ಮೂರು ಸಲ ಕಚೇರಿಗೆ ಬಂದು ಕೆಲಸ ಮಾಡುವಂತೆ ಹೇಳಿದೆ. ಇದನ್ನೂ ಓದಿ: ಕೋವಿಡ್‌ ಬಳಿಕ ಏರಿಕೆಯಾಗಿದ್ದ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ಬೆಲೆ ಭಾರೀ ಇಳಿಕೆ

    ಕಂಪನಿಯು ಕಳೆದ ಎರಡು ವರ್ಷಗಳಿಂದ ಇತರೆ ಕಂಪನಿಗಳ ತರಹ ಅಧಿಕ ನೇಮಕಾತಿಯನ್ನು ಮಾಡಿಕೊಳ್ಳದೆ ಎಚ್ಚರಿಕೆಯಿಂದ ನೇಮಕ ಮಾಡಿಕೊಳ್ಳುವ ಮೂಲಕ ಸಾಮೂಹಿಕ ವಜಾಗೊಳಿಸುವಿಕೆಯನ್ನು (Mass Layoff) ತಪ್ಪಿಸಿದೆ. ಈ ಕಂಪನಿಯು 2020 ಮತ್ತು 2021ರ ನಡುವೆ ಕೇವಲ 7,000 ಸಾವಿರ ಉದ್ಯೋಗಿಗಳನ್ನು ಮಾತ್ರ ನೇಮಕ ಮಾಡಿಕೊಂಡಿದೆ. ವರದಿಗಳ ಪ್ರಕಾರ ಅದೇ ಕಂಪನಿಯು 2022ನೇ ವರ್ಷದ ಸೆಪ್ಟೆಂಬರ್ ತಿಂಗಳ ಒಳಗಾಗಿ 1,64,000 ಉದ್ಯೋಗಿಗಳನ್ನು ನೇಮಿಸಿಕೊಂಡಿದೆ. ಇದು 2021ನೇ ವರ್ಷದ ನೇಮಕಾತಿಯಿಂದ ಶೇ.6.5ರಷ್ಟು ಹೆಚ್ಚಳವಾಗಿದೆ. ಇದನ್ನೂ ಓದಿ: ಮತ್ತೆ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾದ ಮೆಟಾ 

    ಆ್ಯಪಲ್ ಕಂಪನಿಯ ಷೇರುದಾರರ ಸಭೆಯ ಸಂದರ್ಭದಲ್ಲಿ ಕಂಪನಿಯ ಕಾರ್ಯ ನಿರ್ವಾಹಕ (CEO) ಟಿಮ್ ಕುಕ್ (Tim Cook) ಅವರು, ಹಣದ ವಿಷಯದಲ್ಲಿ ಕಂಪನಿಯು ವಿಶೇಷವಾದ ಜಾಗರೂಕತೆಯನ್ನು ಮುಂದುವರೆಸಿದೆ. ನಾವು ಹಣಖರ್ಚು ವಿಷಯದಲ್ಲಿ ಬಹಳ ವಿವೇಕವಾಗಿ ಹಾಗೂ ಚಿಂತನಾಶೀಲರಾಗಿದ್ದೇವೆ ಮತ್ತು ನೇಮಕಾತಿ ಮಾಡಿಕೊಳ್ಳುವುದರಲ್ಲಿ ಉದ್ದೇಶಪೂರ್ವಕವಾಗಿ ಮುಂದುವರೆಯುತ್ತೇವೆ ಎಂದು ಷೇರುದಾರರಿಗೆ ಮಾಹಿತಿಯನ್ನು ತಿಳಿಸಿದರು. ಇದನ್ನೂ ಓದಿ: ಚೀನಾದಿಂದ ಬೆಂಗಳೂರಿಗೆ ಶಿಫ್ಟ್ – ಸ್ಥಾಪನೆಯಾಗಲಿದೆ ಐಫೋನ್ ತಯಾರಿಕಾ ಘಟಕ, 1 ಲಕ್ಷ ಮಂದಿಗೆ ಉದ್ಯೋಗ

  • ಬಂಧಿತರು ಟಾಪ್‌ 45 ರ‍್ಯಾಂಕ್ ಒಳಗಡೆಯವರು – ಬಡ್ತಿ ಆಸೆಗೆ ಬಿದ್ದು ಟಾಪರ್‌ ಆದ್ರಾ?

    ಬಂಧಿತರು ಟಾಪ್‌ 45 ರ‍್ಯಾಂಕ್ ಒಳಗಡೆಯವರು – ಬಡ್ತಿ ಆಸೆಗೆ ಬಿದ್ದು ಟಾಪರ್‌ ಆದ್ರಾ?

    ಬೆಂಗಳೂರು/ಕಲಬುರಗಿ: ಪೊಲೀಸ್ ಇಲಾಖೆಯಲ್ಲಿ ಟಾಪರ್ಸ್‌ಗಳಿಗೆ ಬೇಗ ಬಡ್ತಿ ಸಿಗುತ್ತದೆ. ಈ ಆಸೆಗೆ ಬಿದ್ದು ಪಿಎಸ್‌ಐ(ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌) ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಅಕ್ರಮ ಎಸಗಿರುವ ಅನುಮಾನ ಬಂದಿದೆ.

    ಹೌದು. ಬಂಧಿತ ಆರೋಪಿಗಳೆಲ್ಲರೂ ಪಿಎಸ್‌ಐ ಪರೀಕ್ಷೆಯಲ್ಲಿ ಟಾಪರ್ಸ್‌ ಆಗಿದ್ದಾರೆ. ಇಲಾಖೆಯಲ್ಲಿ ಪ್ರಥಮವಾಗಿ 50 ಜನರಿಗೆ ಬಡ್ತಿ ಸಿಗುತ್ತದೆ. ಬಂಧಿತ ಆರೋಪಿಗಳೆಲ್ಲರೂ ಟಾಪ್ 45 ರ‍್ಯಾಂಕ್ ಒಳಗಡೆ ಇದ್ದಾರೆ.

    ಈಗ ಬಂಧಿತರ ಹಿನ್ನೆಲೆ ಏನು? ಯಾರ ಜೊತೆ ಸಂಪರ್ಕದಲ್ಲಿದ್ದರು ಆ ಮಾಹಿತಿಗಳನ್ನು ಕಲೆ ಹಾಕಲು ಪೊಲೀಸರು ಮುಂದಾಗುತ್ತಿದ್ದಾರೆ. ಇದನ್ನೂ ಓದಿ: PSI ಅಕ್ರಮ – ಮಹಿಳಾ ವಿಭಾಗದ ಟಾಪರ್ ರಚನಾ ವಿರುದ್ಧ ಎಫ್‌ಐಆರ್

    ಅಕ್ರಮ ನೇಮಕಾತಿ ಪ್ರಕರಣದಲ್ಲಿ ಸಿಐಡಿ ಇದುವರೆಗೂ 545 ಅಭ್ಯರ್ಥಿಗಳ ಪೈಕಿ 400ಕ್ಕೂ ಅಧಿಕ ಜನರನ್ನು ವಿಚಾರಣೆ ನಡೆಸಿದೆ. ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಎಲ್ಲ 545 ಅಭ್ಯರ್ಥಿಗಳಿಗೆ ಓಎಂಆರ್ ಶೀಟ್ ಜೊತೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿತ್ತು. ಕಾರ್ಬನ್ ಶೀಟ್ ಕಳೆದು ಹೋಗಿದೆ. ಆರೋಗ್ಯ ಸರಿಯಿಲ್ಲ ಎಂದು ಕೆಲ ಅಭ್ಯರ್ಥಿಗಳು ವಿಚಾರಣೆಗೆ ಗೈರಾಗಿದ್ದಾರೆ.

    ಪಿಎಸ್ಐ ನೇಮಕಾತಿ ಅಕ್ರಮ ಸಂಬಂಧ ಬೆಂಗಳೂರಿನ ಹೈಗ್ರೌಂಡ್ ಪೊಲೀಸರು ಭಾನುವಾರ 12 ಪರೀಕ್ಷಾರ್ಥಿಗಳನ್ನು ಬಂಧಿಸಿದ್ದಾರೆ. ಎಲ್ಲರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. 8ನೇ ಎಸಿಎಂಎಂ ನ್ಯಾಯಾಧೀಶರು 12 ಆರೋಪಿಗಳನ್ನು ನ್ಯಾಯಾಲಯ 10 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.

    ವಿಚಾರಣೆಗೆ ಹಾಜರಾದ 400 ಮಂದಿ ಪೈಕಿ 22 ಮಂದಿ ಲಿಸ್ಟ್ ಔಟ್ ಮಾಡಿಕೊಂಡಿದೆ. ಇದೀಗ ಈ 22ರಲ್ಲಿ 12 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ 12 ಅಭ್ಯರ್ಥಿಗಳದ್ದು ಓಎಂಆರ್‌ ಶೀಟ್ ನಲ್ಲಿ ಅಟೆಂಡ್ ಮಾಡಿರೋ ಪ್ರಶ್ನೆಗೂ ಕಾರ್ಬನ್ ಕಾಪಿಯಲ್ಲಿ ವ್ಯತ್ಯಾಸ ಕಂಡು ಬಂದಿದೆ. ಬಂಧನಕ್ಕೊಳಗಾಗಿರುವ 12 ಜನರು ಬೆಂಗಳೂರು ಮೂಲದವರಾಗಿದ್ದಾರೆ.

  • ದೆಹಲಿ ಕರ್ನಾಟಕ ಭವನದಲ್ಲಿ ಗೋಲ್‍ಮಾಲ್- ನಿಯಮ ಮೀರಿ ಬಡ್ತಿ, ಸೇವಾವಧಿ ವಿಸ್ತರಣೆಗೆ ಶಿಫಾರಸು

    ದೆಹಲಿ ಕರ್ನಾಟಕ ಭವನದಲ್ಲಿ ಗೋಲ್‍ಮಾಲ್- ನಿಯಮ ಮೀರಿ ಬಡ್ತಿ, ಸೇವಾವಧಿ ವಿಸ್ತರಣೆಗೆ ಶಿಫಾರಸು

    ನವದೆಹಲಿ: ಕರ್ನಾಟಕ ಭವನದ ಕಾನೂನು ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಮಿಳುನಾಡು ಮೂಲದ ಪಿ.ಎನ್.ರಾಮನಾಥನ್‍ಗೆ (ರಾಜ) ಅಕ್ರಮ ಬಡ್ತಿ ಮತ್ತು ನಿಯಮ ಮೀರಿ ಸೇವಾವಧಿ ವಿಸ್ತರಿಸಲು ಶಿಫಾರಸು ಮಾಡಿರುವ ಆರೋಪ ಕೇಳಿ ಬಂದಿದೆ.

    ಸೇವಾ ಹಿರಿತನದಲ್ಲಿ 9ನೇ ಸ್ಥಾನದಲ್ಲಿರುವ ಪಿ.ಎನ್.ರಾಮನಾಥನ್ ನಿಯಮ ಮೀರಿ ಬಡ್ತಿ ನೀಡುವ ಪ್ರಕ್ರಿಯೆ ನಡೆದಿದ್ದು, ಇಲ್ಲಿ ಗೋಲ್‍ಮಾಲ್ ನಡೆದಿರುವುದಾಗಿ ಕರ್ನಾಟಕ ಭವನದ ಹಲವು ಸಿಬ್ಬಂದಿ ಆರೋಪಿಸಿದ್ದಾರೆ.

    ಪಿ.ಎನ್.ರಾಮನಾಥ್‍ಗೂ ಮುನ್ನ ಸೇನಾ ಹಿರಿತನದಲ್ಲಿ ಎಂಟು ಮಂದಿ ಕಾರ್ಯ ನಿರ್ವಹಿಸುತ್ತಿದ್ದು, ಅವರೆಲ್ಲರನ್ನು ನಿರ್ಲಕ್ಷಿಸಿ ರಾಮನಾಥನ್‍ಗೆ ಮಣೆ ಹಾಕಲಾಗಿದೆ ಅಲ್ಲದೇ ಬಡ್ತಿ ಜೊತೆಗೆ ಸೇವಾವಧಿ ಅವಧಿ ವಿಸ್ತರಣೆ ಮಾಡಿ ನಿವಾಸಿ ಆಯುಕ್ತರು ಶಿಫಾರಸು ಮಾಡಿದ್ದಾರೆ. ಈ ಹಿಂದೆ ನಿವಾಸಿ ಆಯುಕ್ತರಾಗಿದ್ದ ನಿಲಯ್ ಮಿತಾಶ್ ಅವರ ಮೇಲೆ ರಾಮನಾಥ್ ರಾಜಕೀಯ ಪ್ರಭಾವ ಬೀರಿದ್ದು, ಅವರು ತಮ್ಮ ವರ್ಗಾವಣೆಗೂ ಮುನ್ನ ರಾಮನಾಥನ್ ಸೇವಾ ಅವಧಿ ವಿಸ್ತರಣೆಗೆ ಶಿಫಾರಸು ಮಾಡಿದ್ದರು.

    ರಾಮನಾಥನ್ ಬಡ್ತಿ ಮತ್ತು ಸೇವಾವಧಿ ವಿಸ್ತರಣೆಗೆ ಈಗ ತಕರಾರು ಕೇಳಿ ಬಂದ ಹಿನ್ನೆಲೆ ರಾಜ್ಯ ಸಚಿವ ಸಂಪುಟದ ಅನುಮೋದನೆ ಪಡೆಯಲು ಪ್ರಯತ್ನ ಮಾಡಲಾಗುತ್ತಿದೆ. ರಾಜ್ಯ ರಾಜಕಾರಣಿಗಳ ಮೇಲೂ ಪ್ರಭಾವ ಬೀರುವ ಶಕ್ತಿ ಇರುವ ಈ ತಮಿಳು ಅಧಿಕಾರಿ ಸಚಿವ ಸಂಪುಟ ಒಪ್ಪಿಗೆ ಪಡೆಯಲಿದ್ದು ಅಕ್ರಮವಾಗಿ ಬಡ್ತಿ ಹಾಗೂ ಸೇವಾವಧಿ ವಿಸ್ತರಣೆ ಮಾಡಿಸಿಕೊಳ್ಳಲಿದ್ದಾರೆ ಎಂದು ಹಲವು ಕರ್ನಾಟಕ ಭವನದ ನೌಕರರು ಆರೋಪಿಸಿದ್ದಾರೆ.

  • ಪತ್ನಿಗೆ ಆ್ಯಸಿಡ್ ಕುಡಿಸಿದ್ದ ಪೊಲೀಸ್‍ ಪೇದೆಗೆ ಪ್ರಮೋಷನ್, ವಿಚಾರಣೆಯ ನೆಪದಲ್ಲಿ ಪತ್ನಿಗೆ ತಾಪತ್ರಯ

    ಪತ್ನಿಗೆ ಆ್ಯಸಿಡ್ ಕುಡಿಸಿದ್ದ ಪೊಲೀಸ್‍ ಪೇದೆಗೆ ಪ್ರಮೋಷನ್, ವಿಚಾರಣೆಯ ನೆಪದಲ್ಲಿ ಪತ್ನಿಗೆ ತಾಪತ್ರಯ

    ಬಳ್ಳಾರಿ: ಪತ್ನಿಗೆ ಆ್ಯಸಿಡ್ ಕುಡಿಸಿದ ತಪ್ಪಿಗೆ ಜೈಲು ಸೇರಬೇಕಾದ ಪೊಲೀಸ್ ಪೇದೆಗೆ ಇಲಾಖೆ ರಾಜಾತಿಥ್ಯ ನೀಡಿ ಸಲುಹುತ್ತಿದೆ. ಮತ್ತೊಂದೆಡೆ ಆ್ಯಸಿಡ್ ಕುಡಿದು ಹಾಸಿಗೆಯಲ್ಲಿ ಜೀವಂತ ಶವದಂತೆ ಕಾಲ ಕಳೆಯುತ್ತಿರುವ ಪೇದೆಯ ಪತ್ನಿಗೆ ಇದೀಗ ವಿಚಾರಣೆಯ ನೆಪದಲ್ಲಿ ಪೊಲೀಸ್ ಇಲಾಖೆ ತಾಪತ್ರಯ ನೀಡುತ್ತಿದೆ. ಪೇದೆಯ ವಿರುದ್ಧ ಹೋರಾಟಕ್ಕೆ ನಿಂತ  ಪತ್ನಿ ನ್ಯಾಯಕ್ಕಾಗಿ ದೂರದ ಠಾಣೆಗಳಲ್ಲಿ ವಿಚಾರಣೆ ಎದುರಿಸುವಂತಾಗಿದೆ.

    ಕೌಲಬಜಾರ್ ಠಾಣೆಯಲ್ಲಿ ಕಾನ್ಸ್ ಟೇಬಲ್ ಆಗಿದ್ದ ವೆಂಕಟೇಶ್ ಆಶಾರನ್ನ 2006ರಲ್ಲಿ ಮದುವೆಯಾಗಿದ್ದ. ದಂಪತಿಗೆ ಎರಡು ಮಕ್ಕಳು ಕೂಡ ಇವೆ. ಆದ್ರೆ ವೆಂಕಟೇಶನಿಗೆ ಇದ್ದಕ್ಕಿದ್ದಂತೆ ಏನಾಯ್ತೋ ಏನೋ ಪತ್ನಿಯಿಂದ ವಿಚ್ಛೇದನ ಬಯಸಿದ್ದ. ಇದಕ್ಕೆ ವಿರೋಧಿಸಿದ ಹೆಂಡತಿಗೆ ಆ್ಯಸಿಡ್ ಕುಡಿಸಿ ಮನೆಯಿಂದ ಹೊರಹಾಕಿದ್ದ.

    ಮಹಿಳೆಗೆ ನ್ಯಾಯ ಕೊಡಿಸಬೇಕಾದ ಪೊಲೀಸ್ ಇಲಾಖೆ ವೆಂಕಟೇಶ್‍ಗೆ ಬಡ್ತಿ ನೀಡಿ ರಾಜಾತಿಥ್ಯ ನೀಡಿದೆ. ವೆಂಕಟೇಶ್ ಸದ್ಯ ತೊರಣಗಲ್‍ನಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿದ್ದಾನೆ.

    ಅತ್ತ ನಡೆದಾಡಲೂ ಆಗದ ಆಶಾ ಅವರಿಗೆ ದೂರದ ಕಂಪ್ಲಿ ಠಾಣೆಗೆ ವಿಚಾರಣೆಗೆ ಆಗಮಿಸುವಂತೆ ನೋಟಿಸ್ ನೀಡಿದ್ದಾರೆ. ವಿಚಾರಣೆ ಮಾಡೋಕೆ ಎಸ್‍ಪಿ ಕಚೇರಿ, ಡಿವೈಎಸ್‍ಪಿ ಕಚೇರಿಗಳು ಇದ್ದಾಗಲೂ ದೂರದ ಕಂಪ್ಲಿ ಠಾಣೆಗೆ ವಿಚಾರಣೆಗೆ ಆಗಮಿಸುವಂತೆ ನೋಟಿಸ್ ನೀಡಿರುವುದು ನಿಜಕ್ಕೂ ದುರಂತವಾಗಿದೆ.

    ಪತಿ ವೆಂಕಟೇಶ್ ತನ್ನ ಸೇವಾ ಪುಸ್ತಕದಲ್ಲಿ ಪತ್ನಿಯ ಹೆಸರನ್ನೇ ನಮೂದಿಸಿಲ್ಲ. ಒಟ್ನಲ್ಲಿ ರಿಪಬ್ಲಿಕ್ ಆಫ್ ಬಳ್ಳಾರಿಯಲ್ಲಿ ಪೊಲೀಸರಿಗೊಂದು, ಜನಸಾಮಾನ್ಯರಿಗೊಂದು ನ್ಯಾಯ ಎನ್ನುಂತಾಗಿದೆ.