Tag: ಬಡ್ಡಿಮಗನ್ ಲೈಫು

  • ಹಳ್ಳಿ ಹಿನ್ನೆಲೆಯಲ್ಲಿ ಪ್ರೇಮಕಥೆ ಹೇಳುತ್ತೆ ಬಡ್ಡಿಮಗನ್ ಲೈಫು!

    ಹಳ್ಳಿ ಹಿನ್ನೆಲೆಯಲ್ಲಿ ಪ್ರೇಮಕಥೆ ಹೇಳುತ್ತೆ ಬಡ್ಡಿಮಗನ್ ಲೈಫು!

    ಕೆಲ ಸಿನಿಮಾಗಳು ಹಾಡು ಮತ್ತು ಟ್ರೇಲರ್ ಮುಂತಾದವುಗಳೊಂದಿಗೆ ಸೃಷ್ಟಿಸೋ ಕ್ರೇಜ್ ಮಜವಾಗಿರುತ್ತದೆ. ಯಾವ ಸದ್ದುಗದ್ದಲವೂ ಇಲ್ಲದಂತೆ ಚಿತ್ರೀಕರಣ ಮುಗಿಸಿಕೊಂಡು ಹೀಗೆ ಕ್ರಿಯೇಟಿವಿಟಿಯಿಂದಲೇ ಸುದ್ದಿ ಮಾಡುವ ಚಿತ್ರಗಳು ಗಟ್ಟಿಯಾದ ಹೂರಣವನ್ನೂ ಹೊಂದಿರುತ್ತವೆಂಬ ನಂಬಿಕೆ ಪ್ರೇಕ್ಷಕರಲ್ಲಿದೆ. ಆ ನಂಬಿಕೆಯನ್ನು ಮತ್ತೊಂದಷ್ಟು ಗಟ್ಟಿಗೊಳಿಸುವಂತೆಯೇ ಬಡ್ಡಿಮಗನ್ ಲೈಫು ಚಿತ್ರ ತೆರೆಗಂಡಿದೆ. ಹಳ್ಳಿ ಹಿನ್ನೆಲೆಯ ಮಜವಾದ ಕಥಾನಕದೊಂದಿಗೆ ಒಂದೊಳ್ಳೆ ಪ್ರೇಮ ಕಥನವನ್ನು ಹೇಳುವ ಬಡ್ಡಿಮಗನ್ ಲೈಫು ಎಲ್ಲರಿಗೂ ಆಪ್ತವಾಗುವಂತೆ ಮೂಡಿ ಬಂದಿದೆ.

    ಇದು ಗ್ರೀನ್ ಚಿಲ್ಲಿ ಎಂಟರ್ ಟೈನ್ಮೆಂಟ್ ಬ್ಯಾನರಿನಡಿಯಲ್ಲಿ ಪವನ್ ನಿರ್ಮಾಣ ಮಾಡಿರುವ ಚಿತ್ರ. ಪವನ್ ಮತ್ತು ಪ್ರಸಾದ್ ನಿರ್ದೇಶನ ಮಾಡಿರೋ ಈ ಸಿನಿಮಾದಲ್ಲಿ ಸರಳವಾಗಿ ಕಾಣುವ ಕಥೆಯನ್ನೇ ವಿರಳವೆನ್ನಿಸುವಂತೆ ಕಟ್ಟಿ ಕೊಟ್ಟಿರುವ ರೀತಿಯಲ್ಲಿಯೇ ಇಲ್ಲಿ ನಿರ್ದೇಶನ ಗೆದ್ದಿದೆ. ಯಾವುದೇ ಗೋಜಲುಗಳಿಲ್ಲದೇ ದೃಶ್ಯ ಕಟ್ಟುತ್ತಾ, ಪ್ರತಿ ಹಂತದಲ್ಲಿಯೂ ಒಂದಷ್ಟು ಟ್ವಿಸ್ಟುಗಳೊಂದಿಗೆ ಭರ್ಜರಿ ಮನೋರಂಜನೆ ಮುಕ್ಕಾಗದಂತೆ ಈ ಸಿನಿಮಾವನ್ನು ರೂಪಿಸುವಲ್ಲಿ ನಿರ್ದೇಶಕರುಗಳು ಗೆದ್ದಿದ್ದಾರೆ. ಇದರೊಂದಿಗೆ ಅಗಾಧ ಪ್ರಮಾಣದಲ್ಲಿ ಹೊತ್ತಿಕೊಂಡಿದ್ದ ನಿರೀಕ್ಷೆಗಳೆಲ್ಲವೂ ನಿಜವಾದಂತಾಗಿದೆ.

    ಆ ಊರಿಗೆಲ್ಲ ಸಾಲ ಕೊಡುತ್ತಲೇ ಭಾರೀ ಪ್ರಮಾಣದಲ್ಲಿ ಬಡ್ಡಿ ತಿನ್ನುವ ಕಸುಬಿನ ಬಡ್ಡಿ ಸೀನಪ್ಪ ಆ ಊರಿಗೇ ಧನಿಕ. ಯಾರೆಂದರೆ ಯಾರೂ ಆತನಿಗೆ ಎದುರು ನಿಂತು ಮಾತಾಡಲು ಹಿಂದೇಟು ಹಾಕುವಂಥಾ ವಾತಾವರಣವಿರುತ್ತದೆ. ಇಂಥವನಿಗೊಬ್ಬಳು ಬೊಂಬೆಯಂಥಾ ಮಗಳು. ತಂದೆಯ ಅಂಕೆಯನ್ನೂ ಮೀರಿ ಆಕೆ ಅದೇ ಊರಿನ ಮಧ್ಯಮ ವರ್ಗದ ಹುಡುಗನೊಂದಿಗೆ ಲವ್ವಲ್ಲಿ ಬಿದ್ದಿರುತ್ತಾಳೆ. ಹೇಳಿ ಕೇಳಿ ಅದು ಪುಟ್ಟ ಊರು. ಅದೆಷ್ಟು ದಿನ ಅಂತ ಇಂಥಾ ಪ್ರೇಮ ಪ್ರಕರಣಗಳು ಗುಟ್ಟಾಗಿರಲು ಸಾಧ್ಯ? ಅದರಂತೆಯೇ ಮಗಳ ಪ್ರೇಮ ಪುರಾಣ ಮನೆ ಮಂದಿಗೆ ಗೊತ್ತಾಗಿ ರಂಪ ರಾಮಾಯಣ ಸಂಭವಿಸಿ ಆಕೆಗೆ ಗೃಹ ಬಂಧನ ಫಿಕ್ಸಾಗುತ್ತದೆ. ಅದನ್ನು ಮೀರಿಕೊಂಡು ಪ್ರೀತಿಸಿದ ಹುಡುಗನೊಂದಿಗೆ ಓಡಿ ಹೋಗೋ ಆ ಜೋಡಿಯ ಕಥೆ ಏನಾಗುತ್ತದೆಂಬುದು ಅಸಲೀ ಕುತೂಹಲ.

    ಈ ಪ್ರೇಮ ಪ್ರಕರಣದ ಜೊತೆ ಜೊತೆಗೆ ಒಂದಷ್ಟು ಅಂಶಗಳನ್ನು ಸೇರಿಸಿಕೊಂಡು ಈ ಕಥೆಯನ್ನು ಹೊಸೆಯಲಾಗಿದೆ. ಇಲ್ಲಿ ಬಲ ರಾಜವಾಡಿ ಬಡ್ಡಿ ಸೀನಪ್ಪನಾಗಿ ಅಕ್ಷರಶಃ ವಿಜೃಂಭಿಸಿದ್ದಾರೆ. ಇನ್ನುಳಿದಂತೆ ಸಚಿನ್ ಶ್ರೀಧರ್ ಮತ್ತು ಐಶ್ವರ್ಯಾ ರಾವ್ ಕೂಡಾ ಚೆಂದಗೆ ನಟಿಸಿದ್ದಾರೆ. ಅದರಲ್ಲಿಯೂ ಐಶ್ವರ್ಯಾ ರಾವ್ ಎಲ್ಲರನ್ನೂ ಸೆಳೆಯುವಂಥಾ ಅಚ್ಚುಕಟ್ಟಾದ ನಟನೆ ನೀಡಿದ್ದಾರೆ. ಹಾಡುಗಳು, ಹಿನ್ನೆಲೆ ಸಂಗೀತ, ಛಾಯಾಗ್ರಹಣ ಸೇರಿದಂತೆ ಎಲ್ಲವನ್ನೂ ಇಲ್ಲಿ ಶ್ರದ್ಧೆಯಿಂದ ರೂಪಿಸಲಾಗಿದೆ. ಒಟ್ಟಾರೆಯಾಗಿ ಈ ಎಲ್ಲ ಅಂಶಗಳೊಂದಿಗೆ ಈ ಸಿನಿಮಾ ಎಲ್ಲರಿಗೂ ಇಷ್ಟವಾಗುವಂತೆ ಮೂಡಿ ಬಂದಿದೆ.

    ರೇಟಿಂಗ್: 3.5/5

  • ಬಡ್ಡಿಮಗನ್ ಲೈಫಿನ ತುಂಬ ಭರ್ಜರಿ ಮನರಂಜನೆ!

    ಬಡ್ಡಿಮಗನ್ ಲೈಫಿನ ತುಂಬ ಭರ್ಜರಿ ಮನರಂಜನೆ!

    ಗ್ರೀನ್ ಚಿಲ್ಲಿ ಎಂಟರ್‌ಟೈನ್‌ಮೆಂಟ್ ಲಾಂಛನದಲ್ಲಿ ಪವನ್ ನಿರ್ಮಾಣ ಮಾಡಿರುವ ಬಡ್ಡಿಮಗನ್ ಲೈಫು ಚಿತ್ರ ಈ ವಾರ ತೆರೆಗಾಣುತ್ತಿದೆ. ಪವನ್ ಮತ್ತು ಪ್ರಸಾದ್ ನಿರ್ದೇಶನ ಈ ಚಿತ್ರ ಪ್ರೇಕ್ಷಕರ ಮುಂದೆ ಅನಾವರಣಗೊಳ್ಳಲು ಕ್ಷಣಗಣನೆ ಶುರುವಾಗಿದೆ. ಅದೆಷ್ಟೋ ವರ್ಷಗಳಿಂದ ಸಿನಿಮಾ ಕನಸಿಟ್ಟುಕೊಂಡು, ಪ್ರೇಕ್ಷಕರ ಮನಸ್ಥಿಯನ್ನು ಚೆನ್ನಾಗಿಯೇ ಅರ್ಥ ಮಾಡಿಕೊಂಡಿರುವ ನಿರ್ದೇಶಕರುಗಳು ಅದಕ್ಕೆ ತಕ್ಕುದಾದ ಕಥೆಯೊಂದಿಗೆ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅದರ ಮಜವೇನೆಂಬುದು ಏನ್ ಚಂದಾನೋ ತಕ್ಕೋ ಎಂಬ ಹಾಡಿನ ಮೂಲಕವೇ ಪ್ರೇಕ್ಷಕರನ್ನು ತಲುಪಿಕೊಂಡಿದೆ.

    ಈ ಚಿತ್ರದಲ್ಲಿ ಸಚಿನ್ ಶ್ರೀಧರ್ ಮತ್ತು ಐಶ್ವರ್ಯಾ ರಾವ್ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಬಲ ರಾಜವಾಡಿ ಇಲ್ಲಿ ಬಡ್ಡಿ ಸೀನಪ್ಪನಾಗಿ ಅಬ್ಬರದ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಸಿನಿಮಾದ ಮೂಲ ಉದ್ದೇಶ ಮನೋರಂಜನೆ. ಒಂದೊಳ್ಳೆ ಕಥೆಯೊಂದಿಗೇ ಚಿತ್ರತಂಡ ಅದನ್ನು ಸಾಧ್ಯವಾಗಿಸಲು ಮುಂದಾಗಿದೆ. ಈಗಾಗಲೇ ನಾನಾ ಥರದಲ್ಲಿ ನಿರೀಕ್ಷೆ ಮೂಡಿಸಿರುವ ಬಡ್ಡಿಮಗನ್ ಲೈಫ್ ಈಗಾಗಲೇ ಪ್ರೇಕ್ಷಕರನ್ನು ತನ್ನ ಕ್ರಿಯೇಟಿವ್ ಹಾದಿಯ ಮೂಲಕವೇ ತಲುಪಿಕೊಂಡು ಮೋಡಿ ಮಾಡಿರುವ ರೀತಿ ಸಾಮಾನ್ಯವಾದುದೇನಲ್ಲ. ಒಂದು ಹಾಡಿನ ಮೂಲಕವೇ ಟಾಕ್ ಕ್ರಿಯೇಟ್ ಮಾಡಿ, ಆ ನಂತರ ಬಿಡುಗಡೆಯಾದ ಟ್ರೇಲರ್ ಮೂಲಕ ಕುತೂಹಲ ನಿಗಿ ನಿಗಿಸುವಂತೆ ನೋಡಿಕೊಳ್ಳುವಲ್ಲಿ ಚಿತ್ರತಂಡ ಗೆದ್ದಿದೆ.

    ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಬೇರೆಯವರ ಬದುಕಿನೊಳಗೆ ಹಣಕಿ ಹಾಕುವುದು ಮತ್ತು ಪರರ ಬಗ್ಗೆ ಮಾತಾಡಿಕೊಳ್ಳೋದೆಂದರೆ ಅದೆಂಥಾದ್ದೋ ಖುಷಿ. ಹಳ್ಳಿಗಾಡಿನಲ್ಲಂತೂ ಅದಕ್ಕೆ ಬೇರೆಯದ್ದೇ ರೀತಿಯ ಮಜವಿರುತ್ತದೆ. ಇಲ್ಲಿರೋದೂ ಕೂಡಾ ಅಂಥಾದ್ದೇ ಕಥೆ. ಕಂಡ ಕಂಡವರಿಗೆ ಸಾಲ ಕೊಟ್ಟು ಅದನ್ನು ವಸೂಲಿ ಮಾಡೋದಕ್ಕೆ ನಿರ್ದಾಕ್ಷಿಣ್ಯವಾದ ವೆರೈಟಿ ವೆರೈಟಿ ದಂಡ ಪ್ರಯೋಗಿಸುವ ಬಡ್ಡಿ ಸೀನಪ್ಪನೆಂಬ ಕ್ಯಾರೆಕ್ಷರಿನ ಸುತ್ತಾ ಕಥೆ ಸುತ್ತುತ್ತದೆ. ಇಲ್ಲಿ ಅಷ್ಟೇ ಮಜವಾದ ಮತ್ತೊಂದಷ್ಟು ಪಾತ್ರಗಳೂ ಸರಿಯುತ್ತಿರುತ್ತವೆ. ಕಥೆ ಯಾವ ಸ್ವರೂಪ ಪಡೆದುಕೊಂಡರೂ ಮನರಂಜನೆ ಕೊಂಚವೂ ಮುಕ್ಕಾಗದಂತೆ ಈ ಚಿತ್ರವನ್ನು ಕಟ್ಟಿ ಕೊಡಲಾಗಿದೆಯಂತೆ.