Tag: ಬಡವರು

  • ರೈತರಿಂದ 70 ಸಾವಿರ ಕಲ್ಲಂಗಡಿ ಖರೀದಿಸಿ ಬಡವರಿಗೆ ನೀಡಿದ ಈಶ್ವರಪ್ಪ

    ರೈತರಿಂದ 70 ಸಾವಿರ ಕಲ್ಲಂಗಡಿ ಖರೀದಿಸಿ ಬಡವರಿಗೆ ನೀಡಿದ ಈಶ್ವರಪ್ಪ

    ಶಿವಮೊಗ್ಗ: ಕೊರೊನಾ ಮಹಾಮಾರಿ ಸೋಂಕು ರೈತರಿಗೂ ಬೆಂಬಿಡದೇ ಕಾಡುತ್ತಿದ್ದು, ತಾವು ಬೆಳೆದ ಬೆಳೆ, ಹಣ್ಣುಗಳನ್ನು ಮಾರಾಟ ಮಾಡಲಾಗದೇ ರೈತರು ಒದ್ದಾಡುತ್ತಿದ್ದಾರೆ. ಈ ವೇಳೆ ಸರ್ಕಾರವೇನಾದರೂ ಸಹಾಯ ಮಾಡಲಿ ಎಂದು ಗೋಗರೆಯುತ್ತಿದ್ದಾರೆ.

    ಈ ರೀತಿಯ ಸಂದರ್ಭದಲ್ಲಿ ಹಣ್ಣು ಬೆಳೆದ ಬೆಳೆಗಾರರಿಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಬೆಂಬಲವಾಗಿ ನಿಂತಿದ್ದು, ಸುಮಾರು 70 ಸಾವಿರ ಕಲ್ಲಂಗಡಿ ಹಣ್ಣನ್ನು ತಾವೇ ಸ್ವಂತ ಹಣದಿಂದ ಖರೀದಿ ಮಾಡಿದ್ದಾರೆ. ಜೊತೆಗೆ ಇದನ್ನು ಸಾರ್ವಜನಿಕರಿಗೆ ವಿತರಿಸುವ ಕೆಲಸ ಕೂಡ ಮಾಡುತ್ತಿದ್ದಾರೆ.

    ಹಣ್ಣು ಬೆಳೆಗಾರರಿಗೆ ನಷ್ಟವುಂಟಾಗಬಾರದು ಎಂಬ ಹಿನ್ನೆಲೆಯಲ್ಲಿ ಸಚಿವರು ತಾವೇ ಖರೀದಿಸಿ, ರೈತರ ಕೈ ಹಿಡಿದಿದ್ದಾರೆ. ಈಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ ಹಣ್ಣು ಬೆಳೆಗಾರರು ವಿವಿಧ ಹಣ್ಣುಗಳನ್ನು ಬೆಳೆದು ಕೆಲವು ಕಡೆಗಳಲ್ಲಿ ನಾಶ ಮಾಡಿದ್ದರು. ಆದರೆ ಕೆಲವು ಭಾಗದಲ್ಲಿ ಕಲ್ಲಂಗಡಿ ಬೆಳೆದು ಮಾರಾಟ ಮಾಡಲಾಗದೆ, ಸೂಕ್ತ ಬೆಲೆ ಸಿಗದೇ ಕಂಗಾಲಾಗಿದ್ದ ಬೆಳಗಾರರಿಗೆ ಸಚಿವ ಈಶ್ವರಪ್ಪ ಬೆನ್ನೆಲುಬಾಗಿ ನಿಂತಿದ್ದಾರೆ. ವಿವಿಧ ಬೆಳೆಗಾರರಿಂದ ಸುಮಾರು 70 ಸಾವಿರ ಕಲ್ಲಂಗಡಿ ಹಣ್ಣನ್ನು ಖರೀದಿಸಿ ಮಾನವೀಯತೆ ಮೆರೆದಿದ್ದಾರೆ.

    ಅದರಂತೆ ಇಂದು ಈ ಹಣ್ಣುಗಳ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಗರದ ಕೋಟೆ ಸೀತಾರಾಮಾಂಜನೇಯ ದೇವಾಲಯದ ಬಳಿ ಹಣ್ಣುಗಳು ತುಂಬಿದ್ದ ವಾಹನಗಳಿಗೆ ಚಾಲನೆ ನೀಡಿದರು. ನಗರದ 35 ವಾರ್ಡ್ ಗಳಿಗೆ ತೆರಳಿ ಅಲ್ಲಿನ ಅರ್ಹ ಬಡವರಿಗೆ ಈ ಹಣ್ಣನ್ನು ಉಚಿತವಾಗಿ ಹಂಚುವ ಕಾರ್ಯವನ್ನು ಇಂದು ಸಚಿವ ಈಶ್ವರಪ್ಪ ಮಾಡುತ್ತಿದ್ದಾರೆ.

  • ಬಡ ರೈತರ ಬೆನ್ನಿಗೆ ನಿಂತ ಮಾಜಿ ಶಾಸಕ- ತರಕಾರಿ, ಅಕ್ಕಿ, ಜೋಳ ಖರೀದಿಸಿ ಹಂಚಿಕೆ

    ಬಡ ರೈತರ ಬೆನ್ನಿಗೆ ನಿಂತ ಮಾಜಿ ಶಾಸಕ- ತರಕಾರಿ, ಅಕ್ಕಿ, ಜೋಳ ಖರೀದಿಸಿ ಹಂಚಿಕೆ

    ಬಳ್ಳಾರಿ: ಕೊರೊನಾ ವೈರಸ್ ನಿಂದಾಗಿ ರೈತರು ಕಂಗಾಲಾಗಿ ಹೋಗಿದ್ದಾರೆ. ಈ ವರ್ಷ ಉತ್ತಮ ಇಳುವರಿ ಬಂದರೂ ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗದೇ ತಾವೇ ಸ್ವತಃ ತಮ್ಮ ಕೈಯಾರೆ ನಾಶಮಾಡುವ ಸ್ಥಿತಿ ಬಂದೊದಗಿದೆ.

    ಸರಿಯಾದ ಬೆಲೆ ಸಿಗದೆ ಬೆಳೆಗಳನ್ನು ನಾಶ ಮಾಡುತ್ತಿರುವ ಬಡ ರೈತರ ಬೆನ್ನಿಗೆ ಕಾಂಗ್ರೆಸ್ ಮುಖಂಡ ಸಿರಾಜ್ ಶೇಕ್ ನಿಂತಿದ್ದಾರೆ. ಬಳ್ಳಾರಿ ಜಿಲ್ಲೆಯ ಬಹುತೇಕ ರೈತರು ತಾವು ಬೆಳೆದ ಬೆಳೆಗಳನ್ನು ಸಾಗಿಸಲು ಸಾಧ್ಯವಾಗದೆ ಬೆಳೆಗಳನ್ನು ನಾಶ ಮಾಡುತ್ತಿದ್ದಾರೆ. ಇದರಿಂದ ಬೇಸರಗೊಂಡ ಮಾಜಿ ಶಾಸಕರು ಬಡ ರೈತರ ತೋಟಕ್ಕೆ ತಾವೇ ಸ್ವತಃ ತೆರಳಿ ಅವುಗಳನ್ನು ಖರೀದಿ ಮಾಡಿ ಮಾರುಕಟ್ಟೆಯ ಬೆಲೆ ನೀಡುತ್ತಿದ್ದಾರೆ. ಬಳಿಕ ಖರೀದಿ ಮಾಡಿದ್ದನ್ನು ಜಿಲ್ಲೆಯ ಬಡ ಜನರಿಗೆ ಹಂಚಿದ್ದಾರೆ.

    ಬಳ್ಳಾರಿ ಜಿಲ್ಲೆಯ ಹಗರಿ ಬೊಮ್ಮನಹಳ್ಳಿ ಸುತ್ತಮುತ್ತಲಿನ ಬಡ ರೈತರನ್ನು ಆಯ್ಕೆ ಮಾಡಿ ಅವರ ತೋಟಕ್ಕೆ ತೆರಳಿ ಅವರು ಬೆಳೆದ ಈರುಳ್ಳಿ, ತರಕಾರಿಗಳನ್ನು ಕೊಂಡುಕೊಂಡು ಸೂಕ್ತ ಹಣ ನೀಡುತ್ತಿದ್ದಾರೆ. ಇದರಿಂದಾಗಿ ಬಡ ರೈತರಿಗೂ ಹಾಗೂ ಆಹಾರ ಇಲ್ಲದೇ ಹಸಿವಿನಿಂದ ಇರುವ ಜನರಿಗೆ ಸಾಕಷ್ಟು ಅನುಕೂಲ ಆಗಿದೆ. ಇದೇ ರೀತಿಯಲ್ಲಿ ಸ್ಥಳೀಯ ನಾಯಕರು ಬಡ ರೈತರ ಬೆಳೆಗಳನ್ನು ಖರೀದಿ ಮಾಡಿ ಬಡ ಜನರಿಗೆ ಹಂಚಿದ್ರೆ ಇಬ್ಬರಿಗೂ ಅನುಕೂಲವಾಗಲಿದೆ ಎಂದಿದ್ದಾರೆ. ಸರ್ಕಾರ ಸಹ ಇದೇ ರೀತಿಯಲ್ಲಿ ಯೋಜನೆ ಜಾರಿ ಮಾಡಲಿ ಎಂದು ಒತ್ತಾಯ ಮಾಡಿದ್ದಾರೆ.

  • ಆಹಾರ ಕಿಟ್‍ಗಾಗಿ ನೂಕು ನುಗ್ಗಲು- ಲಾಕ್‍ಡೌನ್ ವಿಸ್ತರಣೆಯಾದ್ರೂ  ಪಾಲನೆಯಾಗದ ಸಾಮಾಜಿಕ ಅಂತರ

    ಆಹಾರ ಕಿಟ್‍ಗಾಗಿ ನೂಕು ನುಗ್ಗಲು- ಲಾಕ್‍ಡೌನ್ ವಿಸ್ತರಣೆಯಾದ್ರೂ ಪಾಲನೆಯಾಗದ ಸಾಮಾಜಿಕ ಅಂತರ

    ರಾಯಚೂರು: ಕೊರೊನಾ ಮಹಾಮಾರಿ ತಲ್ಲಣ ಉಂಟು ಮಾಡಿದ್ದು ಎಷ್ಟೇ ಕಠೀಣ ನಿರ್ಧಾರ ಕೈಗೊಂಡರೂ ಹತೋಟಿಗೆ ಬರುತ್ತಿಲ್ಲ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಲಾಕ್‍ಡೌನ್ ಅವಧಿಯನ್ನು ಮೇ 3ರ ವರೆಗೆ ವಿಸ್ತರಿಸಿದ್ದಾರೆ. ಇಷ್ಟಾದರೂ ಬುದ್ಧಿ ಕಲಿಯದ ಜನ ಮಾತ್ರ ಆಹಾರ ಕಿಟ್‍ಗಾಗಿ ಮುಗಿಬಿದ್ದಿದ್ದಾರೆ.

    ರಾಯಚೂರಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು, ಆಹಾರ ಕಿಟ್‍ಗಾಗಿ ಜನ ನೂಕುನುಗ್ಗಲು ಮಾಡಿ ಕಿತ್ತಾಡಿಕೊಂಡಿದ್ದಾರೆ. ಇದರಿಂದಾಗಿ ಆಹಾರ ಕಿಟ್ ವಿತರಣೆಯನ್ನೇ ನಿಲ್ಲಿಸಲಾಯಿತು.

    ಕೆಲ ದಾನಿಗಳು ನಗರದ ಎಪಿಎಂಸಿಯಲ್ಲಿ ಹಮಾಲರು ಸೇರಿ 1,500 ಕುಟುಂಬಗಳಿಗೆ ಆಹಾರ ಕಿಟ್ ವಿತರಣೆಗೆ ಮುಂದಾಗಿದ್ದರು. ಆದರೆ ಕೆಲಸವಿಲ್ಲದೆ ಕಾಲ ಕಳೆಯುತ್ತಿದ್ದ ಹಮಾಲರು ಹಾಗೂ ಅವರ ಕುಟುಂಬ ಆಹಾರ ಕಿಟ್‍ಗಾಗಿ ನೂಕುನುಗ್ಗಲು ಮಾಡಿದರು. ಕಿಟ್ ಪಡೆಯಲು ಮಹಿಳೆಯರು ಹಾಗೂ ಪುರುಷರು ಗುಂಪು ಸೇರಿ ಸಾಮಾಜಿಕ ಅಂತರವನ್ನೇ ಮರೆತರು. ಎಪಿಎಂಸಿ ಅಧಿಕಾರಿಗಳ ಮಾತಿಗೂ ಬೆಲೆ ಕೊಡದೆ ಆಹಾರ ಕಿಟ್ ಗಾಗಿ ಕಿತ್ತಾಡಿದರು. ಇದರಿಂದಾಗಿ ಕೆಲಕಾಲ ಆಹಾರ ವಿತರಣೆಯನ್ನು ಅಧಿಕಾರಿಗಳು ಸ್ಥಗಿತಗೊಳಿಸಿದರು.

  • 25 ಸಾವಿರ ಬ್ಯಾಗ್ ಪಡಿತರ ವಿತರಿಸಲಿದ್ದಾರೆ ಪ್ರಜ್ವಲ್ ರೇವಣ್ಣ

    25 ಸಾವಿರ ಬ್ಯಾಗ್ ಪಡಿತರ ವಿತರಿಸಲಿದ್ದಾರೆ ಪ್ರಜ್ವಲ್ ರೇವಣ್ಣ

    – ಮಗನ ಕೆಲಸಕ್ಕೆ ತಾಯಿ ಭವಾನಿ ರೇವಣ್ಣ ಸಾಥ್

    ಹಾಸನ: ಕೊರೊನಾ ಲಾಕ್‍ಡೌನ್‍ನಿಂದ ತೊಂದರೆ ಅನುಭವಿಸುತ್ತಿರುವ ಜನರಿಗೆ ಸಹಾಯ ಮಾಡುವ ಸಲುವಾಗಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯೆ ಭವಾನಿ ರೇವಣ್ಣ ನೇತೃತ್ವದಲ್ಲಿ ಸುಮಾರು 25 ಸಾವಿರ ದವಸ, ಧಾನ್ಯದ ಬ್ಯಾಗ್ ರೆಡಿ ಮಾಡಲಾಗುತ್ತಿದೆ.

    ಪ್ರತಿ ಬ್ಯಾಗ್‍ನಲ್ಲಿ ಅಕ್ಕಿ, ಸಕ್ಕರೆ, ಎಣ್ಣೆ ಸೇರಿದಂತೆ ಸುಮಾರು 10 ದಿನಸಿ ಪದಾರ್ಥಗಳು ಇರಲಿವೆ. ಸೋಮವಾರದಿಂದ 25 ಸಾವಿರ ಆಹಾರ ಧಾನ್ಯದ ಬ್ಯಾಗ್‍ಗಳನ್ನು ಜಿಲ್ಲೆಯಾದ್ಯಂತ ಹಂಚಲು ತೀರ್ಮಾನಿಸಲಾಗಿದೆ. ಒಂದೊಂದು ಬ್ಯಾಗ್‍ನಲ್ಲೂ ಸುಮಾರು ನಾಲ್ಕು ಜನರಿಗೆ ಹತ್ತು ದಿನಕ್ಕೆ ಆಗುವಷ್ಟು ದವಸ ಧಾನ್ಯ ಇರಲಿದ್ದು ಸುಮಾರು ಒಂದು ಲಕ್ಷ ಜನರಿಗೆ ಇದರಿಂದ ಅನುಕೂಲವಾಗಲಿದೆ.

    ಒಂದು ವೇಳೆ ಕೊರೊನಾ ಲಾಕ್‍ಡೌನ್ ಏಪ್ರಿಲ್ 14ರ ನಂತರ ಮುಂದುವರಿದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ದವಸ ಧಾನ್ಯ ಒದಗಿಸಲು ವ್ಯವಸ್ಥೆ ಮಾಡುವುದಾಗಿ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಭವಾನಿ ರೇವಣ್ಣ ತಿಳಿಸಿದ್ದಾರೆ. ಸಿಎಂ ಯಡಿಯೂರಪ್ಪ ಹೀಗಾಗಲೇ ಲಾಕ್‍ಡೌನ್ ವಿಸ್ತರಣೆ ಮಾಡಿದ್ದಾರೆ. ಧವಸ ಧಾನ್ಯ ತುಂಬಿದ 25 ಸಾವಿರ ಚೀಲಗಳನ್ನು ಪ್ಯಾಕ್ ಮಾಡಲಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ರೈತರಿಂದ ತರಕಾರಿ ಖರೀದಿಸಿ ಬಡವರಿಗೆ ಹಂಚುತ್ತಿರುವ ಶಾಸಕ

    ರೈತರಿಂದ ತರಕಾರಿ ಖರೀದಿಸಿ ಬಡವರಿಗೆ ಹಂಚುತ್ತಿರುವ ಶಾಸಕ

    – ಬೆಲೆಯಿಲ್ಲದೆ ಕಂಗಾಲಾಗಿದ್ದ ರೈತರಿಗೆ ನೆರವು
    – ಅಕ್ಕಿ, ಬೇಳೆ ಜೊತೆ ರೈತರಿಂದ ಖರೀದಿಸಿದ ತರಕಾರಿ ಹಂಚಿಕೆ

    ಕೋಲಾರ: ಕೊರೊನಾ ಲಾಕ್‍ಡೌನ್‍ನಿಂದಾಗಿ ರೈತರು ಬೆಳೆಗಳನ್ನು ಮಾರಾಟ ಮಾಡಲಾಗದೆ ಕಂಗಾಲಾಗಿದ್ದು, ಬೆಲೆ, ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಶಾಸಕ ಕೆ.ವೈ.ನಂಜೇಗೌಡ ಕ್ಷೇತ್ರದ ರೈತರು ಹಾಗೂ ಹಸಿದವರಿಗೆ ನೆರವಾಗಿದ್ದಾರೆ.

    ದೇಶದ ಅದೆಷ್ಟೋ ರೈತರು ತಾವು ಬೆಳೆದ ಬೆಳೆಗಳನ್ನು ಬೀದಿಗೆ ಸುರಿದು ತಮ್ಮ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದನ್ನರಿತ ಕೋಲಾರ ಜಿಲ್ಲೆ ಮಾಲೂರು ಶಾಸಕ ಕೆ.ವೈ.ನಂಜೇಗೌಡ ತಮ್ಮ ಕ್ಷೇತ್ರದ ರೈತರ ನೆರವಿಗೆ ನಿಲ್ಲಬೇಕೆಂದು ನಿರ್ಧರಿಸಿ ವಿಭಿನ್ನ ಪ್ರಯತ್ನವೊಂದಕ್ಕೆ ಕೈ ಹಾಕಿದ್ದಾರೆ. ಈ ಮೂಲಕ ಇತರ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ತಮ್ಮ ಕ್ಷೇತ್ರದಲ್ಲಿ ರೈತರು ಬೆಳೆದಿರುವ ಬೆಳೆಗಳನ್ನು ತಾವೇ ಖರೀದಿ ಮಾಡಿ ಅದನ್ನು ತಮ್ಮ ಕ್ಷೇತ್ರದಲ್ಲಿನ ಬಿಪಿಎಲ್ ಕಾರ್ಡುದಾರರಿಗೆ ಹಂಚಲು ನಿರ್ಧರಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಸ್ವತಃ ಶಾಸಕರೇ ತಮ್ಮ ಕ್ಷೇತ್ರದಲ್ಲಿ ತರಕಾರಿ ಬೆಳೆದಿರುವ ರೈತರ ತೋಟಗಳಿಗೆ ತೆರಳಿ ಎಲೆಕೋಸು, ಟೊಮ್ಯಾಟೋ, ಕುಂಬಳಕಾಯಿ, ಸೇರಿದಂತೆ ಹಲವು ಬೆಳೆಗಳನ್ನು ರೈತರಿಗೂ ನಷ್ಟವಾಗದಂತೆ, ಬೆಳೆಯೂ ಹಾಳಾಗದಂತೆ ಖರೀದಿಸಿ ಜನರಿಗೆ ಹಂಚಲು ನಿರ್ಧರಿಸಿದ್ದಾರೆ.

    ಈ ಮೂಲಕ ಶಾಸಕ ನಂಜೇಗೌಡ ವಿಭಿನ್ನವಾಗಿ ಸಹಾಯ ಮಾಡಲು ಮುಂದಾಗಿದ್ದಾರೆ. ರೈತರಿಗೂ ಅನುಕೂಲವಾಗಬೇಕು ಜೊತೆಗೆ ಹಸಿದವರ ಹೊಟ್ಟೆಯೂ ತುಂಬಬೇಕು ಎನ್ನುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂದು ಮಾಲೂರು ತಾಲೂಕಿನ ಅನಿಗಾನಹಳ್ಳಿ, ಓಬಟ್ಟಿ, ಟೇಕಲ್‍ನ ವಿವಿಧ ರೈತರ ತೋಟಗಳಿಗೆ ತೆರಳಿ ತರಕಾರಿ ಖರೀದಿಸಿದ್ದಾರೆ. ಇದರಿಂದ ರೈತರಿಗೂ ಅನುಕೂಲ ವಾಗಿದ್ದು, ಹಾಳಾಗುತ್ತಿದ್ದ ಬೆಳೆಯಿಂದ ಕೊನೆ ಪಕ್ಷ ನಾವು ಹಾಕಿದ ಬಂಡವಾಳವಾದರೂ ಸಿಕ್ಕರೆ ಸಾಕು ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಇತ್ತ ಬಡವರ ಹೊಟ್ಟೆ ಸಹ ತುಂಬುತ್ತಿದೆ.

  • ಮನೆ ಕೆಲ್ಸದ ಜೊತೆ ಬಿಡುವಿನ ವೇಳೆ ಮಾಸ್ಕ್ ತಯಾರಿಸಿ ಬಡವರಿಗೆ ವಿತರಣೆ

    ಮನೆ ಕೆಲ್ಸದ ಜೊತೆ ಬಿಡುವಿನ ವೇಳೆ ಮಾಸ್ಕ್ ತಯಾರಿಸಿ ಬಡವರಿಗೆ ವಿತರಣೆ

    ಮಡಿಕೇರಿ: ಕೊರೊನಾ ಬಗ್ಗೆ ಸರ್ಕಾರ ಎಷ್ಟೇ ಅರಿವು ಮೂಡಿಸುತ್ತಿದ್ದರೂ ಜನತೆ ಎಚ್ಚೆತ್ತುಕೊಳ್ಳತ್ತಿಲ್ಲ. ಹೊರಗೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಬಳಸುವಂತೆ ಮನವಿ ಮಾಡುತ್ತಿದ್ದರೂ ಅದರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.

    ಇದೇ ಸಂದರ್ಭವನ್ನು ಬಂಡವಾಳ ಮಾಡಿಕೊಂಡ ಹಲವರು ತುರ್ತು ಅಗತ್ಯವಿರುವ ಮಾಸ್ಕ್ ಗಳನ್ನು ದುಬಾರಿ ಬೆಲೆಗೆ ಮಾರಿ ಜನರ ಜೇಬಿಗೆ ಕತ್ತರಿ ಹಾಕಲು ಹೊರಟಿದ್ದಾರೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಮಡಿಕೇರಿ ನಗರದ ಮುಳಿಯ ಲೇಔಟ್‍ನ ನಿವಾಸಿ ಗೌರಿಯವರು ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ತಾವೇ ಮಾಸ್ಕ್ ಹೊಲೆದು ಬಡವರಿಗೆ ಹಂಚುತ್ತಿದ್ದಾರೆ.

    ಜೀವನ ನಡೆಸಲು ನಾಲ್ಕೈದು ಮನೆಗಳಲ್ಲಿ ಕೆಲಸ ಮಾಡಿಕೊಂಡು ಬಿಡುವಿನ ಸಮಯದಲ್ಲಿ ತಾವು ಇರುವ ಬಾಡಿಗೆ ಮನೆಯಲ್ಲೆ ಮಷಿನ್ ಮೂಲಕ ಗೌರಿ ಅವರೇ ಮಾಸ್ಕ್ ಹೊಲೆದು ಬಡವರಿಗೆ ಹಂಚುತ್ತಿದ್ದಾರೆ. ಜೊತೆಗೆ ಮನೆ ಕೆಲಸಕ್ಕೆ ಹೋಗುವ ಬಿಡುವಿನ ವೇಳೆಯಲ್ಲಿ ಮನೆ, ಮನೆಗಳಿಗೆ ತೆರಳಿ ಮಾಸ್ಕ್ ಹಂಚಿ ಬರುತ್ತಾರೆ. ಈ ವೇಳೆ ಜನರಿಗೆ ಕೊರೊನಾದಿಂದ ಪಾರಾಗುವಂತೆ ಮನವರಿಕೆ ಮಾಡಿ ಸಮಾಜ ಸೇವೆ ಕೂಡ ಮಾಡುತ್ತಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಗೌರಿಯವರು, ಔಷಧಿ ಅಂಗಡಿಯಲ್ಲಿ ಮಾಸ್ಕ್ ಹೆಚ್ಚಾಗಿ ಸಿಗುತ್ತಿಲ್ಲ ಬಡವರು ಹೋಗಿ ಕೇಳಿದರೆ ಸುಮಾರು 100, 50, 30 ಹೀಗೆಲ್ಲಾ ಹಣವನ್ನು ತೆಗೆದುಕೊಳ್ಳುತ್ತಾರೆ. ಮೊದಲೇ ಜನ ಸಮಾನ್ಯರು ಹಣವಿಲ್ಲದೆ ತುಂಬ ಕಷ್ಟದಲ್ಲಿ ಇದ್ದಾರೆ. ಹಾಗಾಗಿ ಈ ರೀತಿಯಲ್ಲಿ ಸೇವೆ ಮಾಡುತ್ತಿರುವುದು ಒಂದು ರೀತಿಯಲ್ಲಿ ಖುಷಿ ಹಾಗೂ ತೃಪ್ತಿ ತಂದಿದೆ ಎಂದು ತಾವು ಮಾಡುವ ಕೆಲಸದ ಬಗ್ಗೆ ಗೌರಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಬಡವರಿಗೆ, ನಿರಾಶ್ರಿತರಿಗೆ ಊಟ ಪ್ಯಾಕ್ ಮಾಡಿದ ಕರಂದ್ಲಾಜೆ

    ಬಡವರಿಗೆ, ನಿರಾಶ್ರಿತರಿಗೆ ಊಟ ಪ್ಯಾಕ್ ಮಾಡಿದ ಕರಂದ್ಲಾಜೆ

    ಬೆಂಗಳೂರು: ಸಂಸದೆ ಶೋಭಾ ಕರಂದ್ಲಾಜೆ ಇಂದು ಬೆಂಗಳೂರು ಹೊರವಲಯ ನೆಲಮಂಗಲ ನಗರದ ಬಸವಣ್ಣದೇವರ ಮಠಕ್ಕೆ ಭೇಟಿ ನೀಡಿದ್ದಾಗ ಬಡವರಿಗೆ, ನಿರಾಶ್ರಿತರಿಗೆ ತಾವೇ ಊಟ ಪ್ಯಾಕ್ ಮಾಡಿದ್ದಾರೆ.

    ಪ್ರತಿನಿತ್ಯ ಸುಮಾರು 2,000 ಜನಕ್ಕೆ ಊಟ ತಯಾರಿಸುವ ಕೇಂದ್ರ ಇದ್ದಾಗಿದ್ದು, ಬಸವಣ್ಣದೇವರ ಮಠಕ್ಕೆ ಸಂಸದೆ 250 ಕೆ.ಜಿ ಅಕ್ಕಿ, 50 ಕೆ.ಜಿ ಬೇಳೆ ಪ್ಯಾಕೆಟ್ ನೀಡಿ, ಶ್ರೀಗಳ ಹಾಗೂ ಸ್ವಯಂ ಸೇವಕ ತಂಡಕ್ಕೆ ಧನ್ಯವಾದ ಹೇಳಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದೆ, ಲಾಕ್‍ಡೌನ್ ಮುಂದುವರಿಕೆ ವಿಚಾರದ ಬಗ್ಗೆ ಪ್ರಧಾನಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಯುತ್ತಿದೆ. ದೇಶದ ಪರಿಸ್ಥಿತಿಯನ್ನು ನೋಡಿಕೊಂಡು ಪ್ರಧಾನಿಗಳು ಕ್ರಮ ಕೈಗೊಳ್ತಾರೆ ಅದನ್ನು ಪಾಲಿಸಬೇಕು ಎಂದಿದ್ದಾರೆ.

    14ನೇ ತಾರೀಖಿಗೆ ಲಾಕ್‍ಡೌನ್ ಮುಗಿಯುವ ವಿಶ್ವಾಸ ಇತ್ತು. ಆದರೆ ದೆಹಲಿಯ ತಬ್ಲಿಘಿ ಸಂಘಟನೆ ಸಮಾವೇಶದಿಂದ ಕೊರೊನಾ ಸೋಂಕು ಹೆಚ್ಚಾಗಿ ಹರಡಿದೆ. ಸುಮಾರು 40% ಕೊರೊನಾ ಹಬ್ಬಲು ತಬ್ಲಿಘಿ ಕೊಡುಗೆ ಇದೆ. ತಬ್ಲಿಘಿ ಸಂಘಟನೆಯಲ್ಲಿ ಭಾಗಿಯಾದವರು ಸಾವಿರಾರು ಮಂದಿಗೆ ಕೊರೊನಾ ಹಬ್ಬಿಸಿದ್ದಾರೆ. ಇದರಿಂದ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗ್ತಿದೆ ಎಂದರು.

    ಈ ವೇಳೆ ಪವಾಡ ಶ್ರೀ ಬಸವದೇವರ ಮಠದ ಸಿದ್ಧಲಿಂಗ ಸ್ವಾಮೀಜಿ, ಮಾಜಿ ಶಾಸಕ ನಾಗರಾಜು, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲ್ಲಯ್ಯ, ತಹಶಿಲ್ದಾರ್ ಶ್ರೀನಿವಾಸಯ್ಯ, ಪಿಎಸ್‍ಐ ಮಂಜುನಾಥ್ ಹಾಗೂ ಸ್ವಯಂ ಸೇವಕರು ದಾನಿಗಳು ಹಾಜರಿದ್ದರು.

  • ಮಂಗಳಮುಖಿಯರು ಸೇರಿ ಹಲವು ಬಡವರಿಗೆ ರಾಧಿಕಾ ಸಹಾಯ ಹಸ್ತ

    ಮಂಗಳಮುಖಿಯರು ಸೇರಿ ಹಲವು ಬಡವರಿಗೆ ರಾಧಿಕಾ ಸಹಾಯ ಹಸ್ತ

    ಬೆಂಗಳೂರು: ಕೊರೊನಾ ವೈರಸ್ ಯಾವ ರೀತಿಯ ಅವಂತಾರ ಸೃಷ್ಟಿಸಿದೆ ಎಂಬುದು ತಿಳಿದೇ ಇದೆ. ಬಡವರು ಕೊರೊನಾ ವೈರಸ್ ಹಾಗೂ ಲಾಕ್‍ಡೌನ್ ಸುಳಿಗೆ ಸಿಕ್ಕಿ ನಲುಗಿ ಹೋಗಿದ್ದಾರೆ. ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಎದುರಾಗಿದೆ. ಸರ್ಕಾರ ಎಷ್ಟೇ ಕ್ರಮ ಕೈಗೊಂಡರೂ ಹತೋಟಿಗೆ ಬರುತ್ತಿಲ್ಲ. ಇಂತಹ ಸಂದರ್ಭದಲ್ಲಿ ಹಲವು ನಟ, ನಟಿಯರು ಹಾಗೂ ಧನಿಕರು ಸಹಾಯಕ್ಕೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಸಹ ನೆರವಾಗುತ್ತಿದ್ದಾರೆ.

    ಸದಾ ಭಿಕ್ಷಾಟನೆ ಮಾಡಿಯೇ ಜೀವನ ಸಾಗಿದುತ್ತಿದ್ದ ಮಂಗಳಮುಖಿಯರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಅಲ್ಲದೆ ಲಾಕ್‍ಡೌನ್ ಸುಳಿಗೆ ಹಲವು ದಿನಗೂಲಿ ಕಾರ್ಮಿಕರು ಸಹ ಸಿಲುಕಿಕೊಂಡಿದ್ದಾರೆ. ಅಂತಹವರಿಗೆ ರಾಧಿಕಾ ಕುಮಾರಸ್ವಾಮಿಯವರು ಸಹಾಯ ಮಾಡಿದ್ದಾರೆ.

    ಮಂಗಳಮುಖಿಯರು ಹಾಗೂ ಬಡವರನ್ನು ಹುಡುಕಿಕೊಂಡು ಹೋಗಿ ಅಕ್ಕಿ, ಬೇಳೆ ಸೇರಿದಂತೆ ವಿವಿಧ ರೀತಿಯ ಆಹಾರ ಸಾಮಗ್ರಿಗಳನ್ನು ದಾನ ಮಾಡುತ್ತಿದ್ದಾರೆ. ಈ ಮೂಲಕ ಅವರ ಕಷ್ಟಕ್ಕೆ ನೆರವಾಗುತ್ತಿದ್ದಾರೆ. ಸಹಾಯ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ವಿವಿಧ ರೀತಿಯ ಆಹಾರ ಸಾಮಾಗ್ರಿಗಳನ್ನು ಸ್ವತಃ ಅವರೇ ಕೈಯಾರೇ ಹಂಚಿದ್ದಾರೆ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ವಿಡಿಯೋ ಪೋಸ್ಟ್ ಮಾಡಿರುವ ಅವರು, ನಾವೆಲ್ಲರೂ ಮಾನವರು, ಇಂತಹ ಸಮಯದಲ್ಲಿ ದುರ್ಬಲರಿಗೆ, ಅಗತ್ಯವಿರುವವರಿಗೆ ಸಹಾಯ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಭಾವಿಸುತ್ತೇನೆ. ಹೀಗಾಗಿ ಬೆಂಗಳೂರಿನಲ್ಲಿ ಅಗತ್ಯವಿರುವವರಿಗೆ ಸ್ವಯಂ ಪ್ರೇರಣೆಯಿಂದ ಆಹಾರ ಪದಾರ್ಥ ವಿತರಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಅಂದಹಾಗೆ ನಟಿ ರಾಧಿಕಾ ಕುಮಾರಸ್ವಾಮಿಯವರು ಮಾಗಡಿ ರೋಡ್, ಕೆಂಗೇರಿ, ನಾಯಂಡಹಳ್ಳಿ ಮುಂತಾದ ಏರಿಯಾಗಳಲ್ಲಿ ದಿನಸಿ ವಿತರಿಸಿದ್ದು, 1200ಕ್ಕೂ ಹೆಚ್ಚು ಮನೆಗಳಿಗೆ ಹಂಚಿಕೆ ಮಾಡಿದ್ದಾರೆ. ವಿಶೇಷವಾಗಿ ಮಂಗಳ ಮುಖಿಯರಿಗೆ ರಾಧಿಕಾ, ದಿನಸಿ ಹಂಚಿದ್ದಾರೆ.

    ಈಗಾಗಲೇ ಹಲವು ನಟ, ನಟಿಯರು ಸಹಾಯ ಮಾಡಿದ್ದು, ಪಿಎಂ ಕೇರ್ಸ್ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ಸಂದಾಯ ಮಾಡಿದ್ದಾರೆ. ಇನ್ನೂ ಕೆಲವರು ನೇರವಾಗಿ ಸಿನಿಮಾ ದಿನಗೂಲಿ ಕಾರ್ಮಿಕರು ಹಾಗೂ ಬಡವರ ಖಾತೆಗೆ ನೇರವಾಗಿ ಹಣ ಹಾಕಿದ್ದಾರೆ. ಇನ್ನೂ ಹಲವರು ಅಗತ್ಯ ಇರುವವರ ಮನೆಗಳಿಗೆ ಆಹಾರ ಪದಾರ್ಥ ಹಾಗೂ ಅಗತ್ಯ ವಸ್ತುಗಳನ್ನು ತಲುಪಿಸುತ್ತಿದ್ದಾರೆ. ಇದೆಲ್ಲದರ ಮಧ್ಯೆ ಇದೀಗ ರಾಧಿಕಾ ಕುಮಾರಸ್ವಾಮಿಯವರು ಸಹಾಯ ಮಾಡಿದ್ದಾರೆ.

  • ಸರ್ಕಾರದ ದಿಟ್ಟ ಕ್ರಮದಿಂದ ರಾಜ್ಯದಲ್ಲಿ ಕೊರೊನಾ ಹತೋಟಿಯಲ್ಲಿದೆ: ಆರ್. ಅಶೋಕ್

    ಸರ್ಕಾರದ ದಿಟ್ಟ ಕ್ರಮದಿಂದ ರಾಜ್ಯದಲ್ಲಿ ಕೊರೊನಾ ಹತೋಟಿಯಲ್ಲಿದೆ: ಆರ್. ಅಶೋಕ್

    ನೆಲಮಂಗಲ: ಅಸಂಘಟಿತ ವಲಯ, ಕಡು ಬಡವರು ಹಾಗೂ ನಿರ್ಗತಿಕರ ಹಸಿವು ನೀಗಿಸಲು ಸರ್ಕಾರ ಸರ್ವ ಸನ್ನದ್ಧವಾಗಿದ್ದು, ದಿನಸಿ ಹಾಗೂ ಸಿದ್ಧ ಆಹಾರ ಪೂರೈಕೆಗೆ ದಿಟ್ಟ ಕ್ರಮ ಕೈಗೊಂಡಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

    ಬೆಂಗಳೂರು ಹೊರವಲಯ ಟಿ. ದಾಸರಹಳ್ಳಿಯ ಮಲ್ಲಸಂದ್ರ ವಾರ್ಡಿನ ಸೆಲೆಕ್ಷನ್ ಕಾರ್ನರ್ ನಲ್ಲಿ ಯಡಿಯೂರಪ್ಪ ಕ್ಯಾಂಟೀನ್‍ಗೆ ಚಾಲನೆ ನೀಡಿ ಆರ್. ಅಶೋಕ್ ಅವರು ಮಾತನಾಡಿದರು. ಲಾಕ್‍ಡೌನ್ ತುರ್ತು ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿರುವುದರಿಂದ ಕೊರೊನಾ ಸೋಂಕು ಹತೋಟಿಯಲ್ಲಿದೆ. ಜನರ ಆರೋಗ್ಯದ ದೃಷ್ಟಿಯಿಂದ ಲಾಕ್‍ಡೌನ್ ಉಲ್ಲಂಘಿಸಿ ಅನಗತ್ಯವಾಗಿ ಓಡಾಡವರಿಗೆ ಎಚ್ಚರಿಕೆ ನೀಡಲಾಗಿದೆ, ಜೊತೆಗೆ ಮುಲಾಜಿಲ್ಲದೆ ಅವರ ವಾಹನಗಳನ್ನು ವಶಪಡಿಸಿಕೊಳ್ಳಲು ಪೊಲೀಸರಿಗೆ ಹೆಚ್ಚಿನ ಅಧಿಕಾರವನ್ನು ನೀಡಲಾಗಿದೆ ಎಂದರು.

    ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಈಗಾಗಲೇ 20 ಕೋಟಿ ಹಣ ವ್ಯಯಿಸಲಾಗಿದೆ. ಇತ್ತ 395 ಕೋಟಿ ರೂ. ಕೇಂದ್ರ ಸರ್ಕಾರದಿಂದ ಬಂದಿದ್ದು, ಕಡು ಬಡವರ ಊಟ ವಸತಿ ಸೇರಿದಂತೆ ತುರ್ತು ಕೆಲಸಗಳಿಗೆ ಹಣ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ತಿಳಿಸಿದರು. ಅಸಂಘಟಿತ ವಲಯದ ಒಂದು ಲಕ್ಷ ಕಾರ್ಮಿಕರಿಗೆ 15 ಕೆಜಿ ಆಹಾರ ಪದಾರ್ಥ ಗಳಿರುವ ಚೀಲವನ್ನು ಒದಗಿಸಲು ತೀರ್ಮಾನಿಸಲಾಗಿದ್ದು, ಈಗಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ 20 ಸಾವಿರ ಫಲಾನುಭವಿಗಳಿಗೆ ಆಹಾರ ಸಾಮಾಗ್ರಿ ನೀಡಲಾಗಿದೆ. ಇನ್ನೂ 30 ಸಾವಿರ ಕಾರ್ಮಿಕರಿಗೆ ಸಾಮಾಗ್ರಿನೀಡಲಾಗುವುದು, ಅದನ್ನು ನಗರದ ವಿಧಾನಸಭಾ ಕ್ಷೇತ್ರಗಳಲ್ಲಿ ಜನಪ್ರತಿನಿಧಿಗಳ ಸಹಯೋಗದೊಂದಿಗೆ ವಿತರಿಸಲಾಗುವುದು ಎಂದು ಸಚಿವರು ತಿಳಿಸಿದರು.

    ಕಂದಾಯ ಇಲಾಖೆಯಿಂದ ವೃದ್ಧಾಪ್ಯ, ವಿಧವಾ ವೇತನ ಸೇರಿದಂತೆ ಇತರೆ ಮಾಸಾಶನಗಳನ್ನು ಎರಡು ತಿಂಗಳಿಗೆ ಮುಂಗಡವಾಗಿ ಬಿಡುಗಡೆಗೊಳಿಸಲಾಗಿದೆ. ರೈತರ ತೋಟಗಾರಿಕಾ, ಕೃಷಿ ಉತ್ಪನ್ನಗಳ ಮಾರಾಟ, ಸಾಗಾಟಕ್ಕೆ ಈಗಾಗಲೇ ದಿಟ್ಟ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಮಾರುಕಟ್ಟೆಗೆ ಬರಲು ತೊಂದರೆಯಾಗುವ ರೈತರ ಉತ್ಪನ್ನಗಳನ್ನು ಖರೀದಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

    ಈ ವೇಳೆ ಮಾಜಿ ಶಾಸಕ ಮುನಿರಾಜು ಅವರು ಮಾತನಾಡಿ, ಬಡವರ ಹಸಿವು ನೀಗಿಸಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಕ್ಷೇತ್ರದ ಮಟ್ಟದಲ್ಲಿ ಪಡಿತರ ಚೀಟಿ ಇಲ್ಲದ ಕಡು ಬಡವರಿಗೆ ತಿಂಡಿ, ಊಟ ಹಾಗೂ ಅಗತ್ಯ ದಿನಸಿಗಳನ್ನು ಯಡಿಯೂರಪ್ಪ ಕ್ಯಾಂಟೀನ್ ಮೂಲಕ ಪೂರೈಸಲಾಗುತ್ತಿದೆ. ಎಷ್ಟೇ ಜನ ಬಂದರೂ ಶುಚಿ, ರುಚಿಯ ಆಹಾರ ಪಟ್ಟಣಗಳನ್ನು ವಿತರಿಸಲಾಗುವುದು ಜೊತೆಗೆ ಸೋಂಕು ಹರಡದಂತೆ ಜಾಗೃತಿಯನ್ನೂ ಮೂಡಿಸಲಾಗುವುದು ಎಂದರು.

    ದಾಸರಹಳ್ಳಿ ಬಿಜೆಪಿ ಕ್ಷೇತ್ರಾಧ್ಯಕ್ಷ ಎನ್. ಲೋಕೇಶ್, ಸ್ಥಳೀಯ ಪಾಲಿಕೆ ಸದಸ್ಯರು ಹಾಗೂ ದಾನಿಗಳ ನೆರವಿನಿಂದ ಕ್ಯಾಂಟೀನ್ ನಡೆಸಲಾಗುತ್ತಿದ್ದು, ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವ ತನಕ ಮುಂದುವರಿಸಲಾಗುವುದು ಎಂದರು. ಈ ವೇಳೆ ಬೆಂಗಳೂರು ಜಿ.ಪಂ ಅಧ್ಯಕ್ಷ ಮರಿಸ್ವಾಮಿ, ಮುಖಂಡರಾದ ಬಿಎಂ ನಾರಾಯಣ್, ಗಂಗರಾಜು, ರವಿಗೌಡ ಮತ್ತಿತರು ಉಪಸ್ಥಿತರಿದ್ದರು.

  • ಬಡವರಿಗೆ ಊಟ ನೀಡದೆ ಖಾಸಗಿ ಆಸ್ಪತ್ರೆಗೆ ಕಟೀಲಿನಿಂದ ಆಹಾರ ರವಾನೆ

    ಬಡವರಿಗೆ ಊಟ ನೀಡದೆ ಖಾಸಗಿ ಆಸ್ಪತ್ರೆಗೆ ಕಟೀಲಿನಿಂದ ಆಹಾರ ರವಾನೆ

    ಮಂಗಳೂರು: ನಿರ್ವಸಿತ ಕೂಲಿ ಕಾರ್ಮಿಕರಿಗೆ ಮತ್ತು ನಿರ್ಗತಿಕರಿಗೆ ಮುಜರಾಯಿ ಇಲಾಖೆಯ ಎ ದರ್ಜೆಯ ದೇವಸ್ಥಾನಗಳಿಂದ ಊಟ ನೀಡಲು ಸರಕಾರ ಆದೇಶ ಮಾಡಿದೆ. ಆದರೆ ಎ ದರ್ಜೆಯ ಹೆಚ್ಚಿನ ದೇವಸ್ಥಾನಗಳಿಂದ ಈ ಆದೇಶ ಪಾಲನೆಯಾಗುತ್ತಿಲ್ಲ.

    ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಎ ದರ್ಜೆಯ ದೇವಸ್ಥಾನ ಆಗಿರುವ ಕಟೀಲು ದುರ್ಗಾಪರಮೇಶ್ವರಿ ದೇಗುಲದಿಂದ ಖಾಸಗಿ ಕೆಎಂಸಿ ಆಸ್ಪತ್ರೆಗೆ ಗುಪ್ತವಾಗಿ ಊಟ ರವಾನಿಸುತ್ತಿರುವ ವಿಡಿಯೋ ಈಗ ಹರಿದಾಡುತ್ತಿದೆ. ದೇವಸ್ಥಾನದ ಅಕ್ಕಿ ಬಳಸಿ, ಅಲ್ಲಿನ ಅಡುಗೆ ಕಾರ್ಮಿಕರ ಮೂಲಕ ಊಟ ರೆಡಿ ಮಾಡಲಾಗುತ್ತಿದ್ದು ದಿನವೊಂದಕ್ಕೆ ಎರಡು ಸಾವಿರ ಜನರಿಗೆ ಊಟ ತಯಾರಿಸಿ ಕೊಡಲಾಗುತ್ತಿದೆ. ದೇವಸ್ಥಾನದ ದುಡ್ಡಲ್ಲಿ ಊಟ ರೆಡಿ ಮಾಡಿಸಿ, ಕೆಎಂಸಿ ಆಸ್ಪತ್ರೆಗೆ ಮಾರಾಟ ಮಾಡಲಾಗುತ್ತಿದೆ ಅನ್ನುವ ಆರೋಪ ಕೇಳಿಬಂದಿದೆ.

    ದೇವಸ್ಥಾನಕ್ಕೆ ಸಾರ್ವಜನಿಕರಿಗೆ ಪ್ರವೇಶ ಇಲ್ಲದಿರುವ ಸಂದರ್ಭ ಇಷ್ಟೊಂದು ಭೋಜನ ತಯಾರಿಸುತ್ತಿರುವುದಲ್ಲದೆ, ಖಾಸಗಿ ಆಸ್ಪತ್ರೆಯ ಅಂಬುಲೆನ್ಸ್ ನಲ್ಲಿ ಊಟ ರವಾನಿಸುತ್ತಿರುವ ಬಗ್ಗೆ ಸಾರ್ವಜನಿಕರು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ದೇವಸ್ಥಾನದ ಆಡಳಿತ ವಹಿಕೊಂಡಿರುವ ಆಸ್ರಣ್ಣರ ಕಾರುಬಾರಿನಲ್ಲಿ ಸರ್ಕಾರಿ ದೇವಸ್ಥಾನದಿಂದ ಊಟ ಮಾರಾಟ ಮಾಡಲಾಗುತ್ತಿದೆಯೇ ಅನ್ನುವ ಪ್ರಶ್ನೆ ಎದುರಾಗಿದೆ.

    ಬಡ ಕೂಲಿ ಕಾರ್ಮಿಕರಿಗೆ ಊಟ ಪೂರೈಸುವ ಬಗ್ಗೆ ಪ್ರಶ್ನೆ ಮಾಡಿದರೆ ಅಡುಗೆ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ ಎಂದು ನೆಪ ಹೇಳುತ್ತಾರೆ. ಈಗ ಕೆಎಂಸಿ ಅಂಬುಲೆನ್ಸ್ ನಲ್ಲಿ ಊಟ ರವಾನಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.