Tag: ಬಡವರು

  • ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ವಾರ್ನಿಂಗ್ ಕೊಟ್ಟು ಆಹಾರ ಕಿಟ್ ಹಂಚಿದ ಗೋಪಾಲಯ್ಯ

    ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ವಾರ್ನಿಂಗ್ ಕೊಟ್ಟು ಆಹಾರ ಕಿಟ್ ಹಂಚಿದ ಗೋಪಾಲಯ್ಯ

    ಬೆಂಗಳೂರು: ಕೊರೊನಾ ಮಹಾಮಾರಿ ತೊಲಗುವ ತನಕ ಉಳ್ಳವರು ಬಡವರಿಗೆ ನೆರವು ನೀಡಿ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ. ಗೋಪಾಲಯ್ಯ ಮನವಿ ಮಾಡಿದರು.

    ಬೆಂಗಳೂರು ಹೊರವಲಯ ಟಿ. ದಾಸರಹಳ್ಳಿಯ ಚೊಕ್ಕಸಂದ್ರ ಮುಖ್ಯ ರಸ್ತೆಯಲ್ಲಿ ಪಾಲಿಕೆ ಸದಸ್ಯೆ ಸರ್ವಮಂಗಳ, ಸಿ.ಎಂ ನಾಗರಾಜು ಹಾಗೂ ಸೆಮಿ ಲ್ಯಾಬ್ ಕಂಪನಿ ವತಿಯಿಂದ ಬಡವರಿಗೆ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಗೋಪಾಲಯ್ಯ ಅವರು ಚಾಲನೆ ನೀಡಿದರು. ಬಳಿಕ ಈ ಬಗ್ಗೆ ಮಾತನಾಡಿದ ಅವರು, ಪಡಿತರ ಚೀಟಿದಾರರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಗತ್ಯ ದಿನಸಿ ವಿತರಿಸುತ್ತಿವೆ. ಕಡು ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಬಿಜೆಪಿ ಜನಪ್ರತಿನಿಧಿಗಳು ಹಾಗೂ ಮುಖಂಡರು ನೆರವು ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಕೊರೊನಾ ಇರುವವರೆಗೆ ಜನಸೇವೆ ಮುಂದುವರೆಸುತ್ತೇವೆ ಎಂದರು. ಅಲ್ಲದೆ ಹೊರ ಜಿಲ್ಲೆಯ ಹಾಗೂ ಹೊರ ತಾಲೂಕಿನ ಎಲ್ಲಾ ಕುಟುಂಬಗಳಿಗೆ ಹತ್ತಿರದ ನ್ಯಾಯ ಬೆಲೆ ಅಂಗಡಿಯವರು ದಿನಸಿ ವಿತರಣೆ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.

    ನಂತರ ಟಿ. ದಾಸರಹಳ್ಳಿಯ ಮಾಜಿ ಶಾಸಕ ಮುನಿರಾಜು ಮಾತನಾಡಿ, ಸಂಕಷ್ಟದ ಸಮಯದಲ್ಲಿ ಸಂತ್ರಸ್ತರ ನೆರವಿಗೆ ಜನಪ್ರತಿನಿಧಿಗಳೊಂದಿಗೆ ಸಂಘ ಸಂಸ್ಥೆಗಳು ಕೈಜೋಡಿಸಿದೆ. ಇದರಿಂದ ಅಸಹಾಯಕರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಸೆಮಿ ಲ್ಯಾಬ್ ಕಾರ್ಖಾನೆ ಮಾಲೀಕ ಡಾ. ಮಹಮದ್ ಮಜೀದ್, ಸಿಇಒ ನೀರಜಾ ಶೆಟ್ಟಿ, ಎಂ.ಸಿ ಮುನಿರಾಜು, ನಿಸರ್ಗ ಕೆಂಪರಾಜು, ಕೆ. ಮುನಿರಾಜು, ಜಗದೀಶ್, ಮಂಜುನಾಥ್ ಮೊದಲಾದವರು ಭಾಗಿಯಾಗಿದ್ದರು.

  • 200 ಆಟೋ ಚಾಲಕರಿಗೆ ಸಹಾಯ ಹಸ್ತ ಚಾಚಿದ ಸೀರಿಯಲ್ ನಿರ್ಮಾಪಕ

    200 ಆಟೋ ಚಾಲಕರಿಗೆ ಸಹಾಯ ಹಸ್ತ ಚಾಚಿದ ಸೀರಿಯಲ್ ನಿರ್ಮಾಪಕ

    ಮಡಿಕೇರಿ: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಇಡೀ ದೇಶವೇ ಲಾಕ್‍ಡೌನ್ ಆದ ಬಳಿಕ ಕೋಟ್ಯಂತರ ಜನರ ಆರ್ಥಿಕ ಪರಿಸ್ಥಿತಿ ತೀರ ಹದಗೆಟ್ಟಿದೆ. ಅದರಲ್ಲಿ ಆಟೋ ಚಾಲಕರ ಸ್ಥಿತಿಯೋ ಗಂಭೀರವಾಗಿದೆ. ಇದನ್ನು ಮನಗಂಡ ಸೀರಿಯಲ್ ನಿರ್ಮಾಪಕಯೊಬ್ಬರು 200 ಆಟೋ ಚಾಲಕರಿಗೆ 1 ಲಕ್ಷ ರೂಪಾಯಿ ಮೌಲ್ಯದ ಆಹಾರ ಪದಾರ್ಥಗಳನ್ನು ವಿತರಣೆ ಮಾಡಿ ಸಹಾಯ ಮಾಡಿದ್ದಾರೆ.

    ಕೊಡಗು ಜಿಲ್ಲೆಯ ಕುಶಾಲನಗರದ ನಿರ್ಮಾಪಕ ಮತ್ತು ಉದ್ಯಮಿಯಾಗಿರುವ ಉಮಾಶಂಕರ್ ಅವರು ಸ್ವತಃ ಆಟೋ ಚಾಲಕರಾಗಿದ್ದವರು. ಇಂದು ಆರ್ಥಿಕವಾಗಿ ಸುಧಾರಣೆ ಆಗಿರುವ ಉಮಾಶಂಕರ್ ಕೊರೊನಾದಿಂದ ತಮ್ಮ ಸಹಉದ್ಯೋಗಿಗಳಾಗಿದ್ದ ಆಟೋ ಚಾಲಕರು ತೀವ್ರ ಸಮಸ್ಯೆಗೆ ಸಿಲುಕಿದ್ದಾರೆ ಎಂದು ಅವರಿಗೆ ಸಹಾಯ ಮಾಡಿದ್ದಾರೆ. ಸುಮಾರು 200 ಆಟೋ ಚಾಲಕರಿಗೆ ಉಮಾಶಂಕರ್ ಲಕ್ಷ ರೂಪಾಯಿ ಮೌಲ್ಯದ ಆಹಾರ ಪದಾರ್ಥಗಳ ಕಿಟ್ ಅನ್ನು ವಿತರಣೆ ಮಾಡಿದರು.

    ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರಿಂದ ಆಟೋ ಚಾಲಕರಿಗೆ ಉಮಾಶಂಕರ್ ಕಿಟ್ ವಿತರಣೆ ಮಾಡಿಸಿದರು. ಕುಶಾಲನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಮುಖಂಡರು ಆಟೋ ಚಾಲಕರನ್ನು ನಿಲ್ಲಿಸಿದರು. ಪ್ರತೀ ಆಟೋ ಚಾಲಕರಿಗೆ ಹ್ಯಾಂಡ್ ಸ್ಯಾನಿಟೈಸರ್ ನೀಡಿ ಬಳಿಕ ಸಾಮಾಜಿಕ ಅಂತರ ಕಾಯ್ದುಕೊಂಡೇ ಕಿಟ್ ವಿತರಣೆ ಮಾಡಲಾಯಿತು.

    ಈ ವೇಳೆ ಮಾತನಾಡಿದ ಉಮಾಶಂಕರ್ ಅವರು, ಯಾರೂ ಸಹಾಯ ಮಾಡಿ ಎಂದು ಕೇಳುವುದಿಲ್ಲ. ಆದರೆ ಇಂತಹ ಸ್ಥಿತಿಯಲ್ಲಿ ಜನರ ಪರಿಸ್ಥಿತಿ ಅರ್ಥ ಮಾಡಿಕೊಂಡು ನಿಮ್ಮ ಮನೆಗಳ ಸುತ್ತಮುತ್ತಲಿರುವ ಬಡ ಜನರಿಗೆ ಸಹಾಯ ಮಾಡಿ ಎಂದು ಮನವಿ ಮಾಡಿದರು.

  • ‘ಮನೆಯೇ’ ಮಂತ್ರಾಲಯದ ಕರೆಗೆ ಸ್ಪಂದನೆ – ನಾಲ್ಕು ಲಕ್ಷ ಮೌಲ್ಯದ ಆಹಾರ ಕಿಟ್‌ಗಳನ್ನು ವಿತರಿಸಿದ ಎಂ.ಆರ್ ಬ್ರದರ್ಸ್ ತಂಡ

    ‘ಮನೆಯೇ’ ಮಂತ್ರಾಲಯದ ಕರೆಗೆ ಸ್ಪಂದನೆ – ನಾಲ್ಕು ಲಕ್ಷ ಮೌಲ್ಯದ ಆಹಾರ ಕಿಟ್‌ಗಳನ್ನು ವಿತರಿಸಿದ ಎಂ.ಆರ್ ಬ್ರದರ್ಸ್ ತಂಡ

    ಕಾರವಾರ: ಲಾಕ್‍ಡೌನ್‍ನಿಂದ ಅದೆಷ್ಟೋ ಮಂದಿ ಕಷ್ಟಗಳನ್ನು ಅನುಭವಿಸುತ್ತಿದ್ದು, ಒಂದು ದಿನದ ತುತ್ತಿಗೂ ಕಷ್ಟಪಡುತ್ತಿದ್ದಾರೆ. ಹೀಗಾಗಿ ಇಂತಹ ಕಷ್ಟದಲ್ಲಿರುವ ಜನರಿಗೆ ಸ್ಪಂದಿಸಲು ಪಬ್ಲಿಕ್ ಟಿವಿ ‘ಮನೆಯೇ ಮಂತ್ರಾಲಯ’ ಕಾರ್ಯಕ್ರಮ ನಡೆಸುತ್ತಿದ್ದು, ಜನರು ಪ್ರತಿ ದಿನ ಕ್ರಾರ್ಯಕ್ರಮಕ್ಕೆ ಕರೆ ಮಾಡಿ ತಮ್ಮ ಕಷ್ಟಗಳನ್ನು ಹೇಳಿಕೊಂಡು ಸಹಾಯ ಪಡೆದಿದ್ದಾರೆ. ಈ ಕಾರ್ಯಕ್ರಮದ ಕರೆಗೆ ಸ್ಪಂದಿಸಿದ ಶಿರಸಿಯ ಎಂ.ಆರ್ ಬ್ರದರ್ಸ್ ತಂಡ ಬಡವರಿಗೆ ನಾಲ್ಕು ಲಕ್ಷ ರೂ. ಮೌಲ್ಯದ ಆಹಾರ ಕಿಟ್‍ಗಳನ್ನು ವಿತರಿಸಿ ನೆರವಾಗಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿ ಗುಜುರಿ ವ್ಯಾಪಾರ ಮಾಡುತ್ತಿದ್ದ ನಾಗಪ್ಪ ಎಂಬವರು ಶುಕ್ರವಾರ ‘ಮನಯೇ’ ಮಂತ್ರಾಲಯ ಕಾರ್ಯಕ್ರಮಕ್ಕೆ ಕರೆಮಾಡಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡು ಸಹಾಯ ಬೇಡಿದ್ದರು. ಇದಕ್ಕೆ ಸ್ಪಂದಿಸಿದ ಪಬ್ಲಿಕ್ ಟಿವಿ ಅಭಿಮಾನಿಗಳು ಶಿರಸಿಯ ಫೈಯು ಚೌಟಿ ಅವರ ಸಹಕಾರದಲ್ಲಿ ಗುಜರಿ ವ್ಯಾಪಾರಿ ನಾಗಪ್ಪ ಅವರಿಗೆ ಅಗತ್ಯ ವಸ್ತುಗಳನ್ನು ನೀಡಿ, ಜೊತೆಗೆ ತಾತ್ಕಾಲಿಕವಾಗಿ ಸಹಾಯವಾಗಲು ಹಣ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

    ಇದರ ಜೊತೆಗೆ ಫೈಯು ಚೌಟಿರವರ ಎಂ.ಆರ್ ಬ್ರದರ್ಸ್ ತಂಡವು ಇದೇ ಭಾಗದಲ್ಲಿ ತೊಂದರೆಗೊಳಗಾದ ಬಡವರಿಗೆ ನಾಲ್ಕು ಲಕ್ಷ ರೂ. ಮೌಲ್ಯದ ಆಹಾರ ಕಿಟ್‍ಗಳನ್ನು ವಿತರಿಸುವ ಮೂಲಕ ಸಂಕಷ್ಟದಲ್ಲಿರುವ ಜೀವಗಳಿಗೆ ಆಸರೆಯಾಗಿದ್ದಾರೆ.

  • ಬಡವರಿಗೆ ಸಹಾಯ ಮಾಡಿ ಪರಿಣಿತಿ ಚೋಪ್ರಾ ಜೊತೆ ಕಾಫಿ ಡೇಟ್ ಹೋಗಿ

    ಬಡವರಿಗೆ ಸಹಾಯ ಮಾಡಿ ಪರಿಣಿತಿ ಚೋಪ್ರಾ ಜೊತೆ ಕಾಫಿ ಡೇಟ್ ಹೋಗಿ

    ಮುಂಬೈ: ಬಾಲಿವುಡ್ ಖ್ಯಾತ ನಟಿ ಪರಿಣಿತಿ ಚೋಪ್ರಾ ಹೊಸ ಪ್ರಯತ್ನಕ್ಕೆ ಕೈಹಾಕಿದ್ದು, ಬಡವರಿಗೆ ಸಹಾಯ ಮಾಡಿದವರಿಗೆ ತಮ್ಮ ಜೊತೆ ಕಾಫಿ ಕುಡಿಯುತ್ತಾ ಹರಟೆ ಹೊಡೆಯೋ ಚಾನ್ಸ್ ಸಿಗುತ್ತೆ ಎಂದಿದ್ದಾರೆ.

    ಹೌದು. ಇಡೀ ದೇಶವೇ ಕೊರೊನಾ ವೈರಸ್ ಹಾವಳಿಗೆ ತತ್ತರಿಸಿದೆ. ಇಂತಹ ಸಂಕಷ್ಟದ ಸಮಯದಲ್ಲಿ ನಟಿ ಪರಿಣಿತಿ ಚೋಪ್ರಾ ಅಬಿಮಾನಿಗಳಿಗೆ ಒಂದು ಸ್ಪೆಷಲ್ ಅವಕಾಶ ನೀಡಿದ್ದಾರೆ. ಯಾರು ಬಡವರಿಗೆ, ದಿನಗೂಲಿ ನೌಕರರಿಗೆ ಉಚಿತವಾಗಿ ದಿನಸಿ ಕಿಟ್ ವಿತರಣೆ ಮಾಡುವುದು ಅಥವಾ ಯಾವುದೇ ಸಹಾಯ ಮಾಡಿದರೆ ಅವರೊಂದಿಗೆ ಪರಿಣಿತಿ ಚೋಪ್ರಾ ಕಾಫಿ ಕುಡಿಯುತ್ತಾರೆ.

    ಈ ಬಗ್ಗೆ ತಮ್ಮ ಟ್ವಿಟ್ಟರ್, ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪರಿಣಿತಿ, ವೆಬ್‍ಲಿಂಕ್ ಒಂದನ್ನು ನೀಡಿ ಅದಕ್ಕೆ ಲಾಗಿನ್ ಆಗಿ ದಿನಗೂಲಿ ನೌಕರರಿಗೆ ಸಹಾಯ ಮಾಡಿ ನನ್ನೊಂದಿಗೆ ಕಾಫಿ ಡೇಟ್ ನಲ್ಲಿ ಭಾಗವಹಿಸಿ ಎಂದು ಆಹ್ವಾನ ನೀಡಿದ್ದಾರೆ.

    https://www.instagram.com/p/B_1m88KFfVI/

    ವರ್ಚುಯಲ್ ಕಾಫಿ ಡೇಟ್:
    ಐಡಿಯಾ ಏನೋ ಚೆನ್ನಾಗಿದೆ. ಆದ್ರೆ ಲಾಕ್‍ಡೌನ್‍ನಲ್ಲಿ ಹೇಗಪ್ಪಾ ಪರಿಣಿತಿ ಜೊತೆ ಕಾಫಿ ಕುಡಿಯೋದು? ಹೋಟೆಲ್, ರೆಸ್ಟೋರೆಂಟ್‍ಗಳೆಲ್ಲಾ ತೆರೆದಿಲ್ಲವಲ್ಲಾ ಅಂತ ಪ್ರಶ್ನೆ ಕಾಡೋದು ಸಾಮಾನ್ಯ. ಇದಕ್ಕೆ ಉತ್ತರ ವರ್ಚುಯಲ್ ಡೇಟ್. ಪರಿಣಿತಿ ಜೊತೆ ಕಾಫಿ ಡೇಟ್ ವರ್ಚುಯಲ್ ಆಗಿರಲಿದೆ. ಅಂದರೆ ಪರಿಣಿತಿ ಮತ್ತು ಸಹಾಯ ಮಾಡಿದ ವ್ಯಕ್ತಿ ಅಂತರ್ಜಾಲದ ಮೂಲಕವೇ ಜೊತೆಯಾಗಿ ಕಾಫಿ ಸವಿಯುತ್ತಾ ಕೆಲ ಸಮಯ ಕಳೆಯಲಿದ್ದಾರೆ.

    ಪರಿಣಿತಿ ಕೊರೊನಾ ಸಂಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡುತ್ತಿದ್ದಾರೆ. ಅದಕ್ಕೆಂದೇ ಅವರು ಈ ಕಾಫಿ ಡೇಟ್ ಐಡಿಯಾ ಮುಂದೆ ತಂದಿದ್ದಾರೆ. ಇದೊಂದು ವಿಭಿನ್ನ ಪ್ರಯತ್ನವಾಗಿದ್ದು, ಸಹಾಯ ಮಾಡಿದವರು ಪರಿಣಿತಿ ಜೊತೆ ವರ್ಚುಯಲ್ ಕಾಫಿ ಕುಡಿಯಬಹುದಾಗಿದೆ.

    ಪರಿಣಿತಿ ಅಭಿನಯದ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದೆ. ಸಂದೀಪ್-ಪಿಂಕಿ ಫರಾರ್, ಸೈನಾ, ಲೂಡೋ, ಇಂದೂ ಕಿ ಜವಾನಿ, ಶಕುಂತಲಾ ದೇವಿ, ಕೋಡ್ ನೇಮ್ ಅಬ್ದುಲ್ ಸಿನಿಮಾಗಳು ಲಾಕ್‍ಡೌನ್ ಮುಕ್ತಾಯಗೊಂಡ ಬಳಿಕ ತೆರೆಕಾಣಲಿದೆ ಎನ್ನಲಾಗಿದೆ.

  • ಡ್ಯಾನ್ಸರ್, ಸ್ಲಂ ನಿವಾಸಿಗಳಿಗೆ ತುಪ್ಪದ ಬೆಡಗಿಯ ಸಹಾಯ ಹಸ್ತ

    ಡ್ಯಾನ್ಸರ್, ಸ್ಲಂ ನಿವಾಸಿಗಳಿಗೆ ತುಪ್ಪದ ಬೆಡಗಿಯ ಸಹಾಯ ಹಸ್ತ

    – ನಿರಾಶ್ರಿತರಿಗೆ ಸ್ಯಾನಿಟರಿ ಪ್ಯಾಡ್ಸ್ ವಿತರಣೆ

    ಬೆಂಗಳೂರು: ತುಪ್ಪದ ಬೆಡಗಿ ಎಂದೇ ಖ್ಯಾತಿ ಪಡೆದಿರುವ ಸ್ಯಾಂಡಲ್‍ವುಡ್ ನಟಿ ರಾಗಿಣಿ ದ್ವಿವೇದಿ ನಿರಾಶ್ರಿತರಿಗೆ, ಬಡವರಿಗೆ ಆಹಾರ ಪದಾರ್ಥ, ನಿರಾಶ್ರಿತರಿಗೆ ಸ್ಯಾನಿಟರಿ ಪ್ಯಾಡ್ಸ್ ನೀಡುವ ಮೂಲಕ ನೆರವಾಗುತ್ತಿದ್ದಾರೆ.

    ತಮ್ಮ ಆರ್‍ಡಿ(ರಾಗಿಣಿ ದ್ವಿವೇದಿ) ಫೌಂಡೇಶನ್ ವತಿಯಿಂದ ರಾಗಿಣಿ ದ್ವಿವೇದಿ ಸಿನಿಮಾ ರಂಗದ ಕೂಲಿ ಕಾರ್ಮಿಕರಿಗೆ, ತಂತ್ರಜ್ಞರಿಗೆ ನೆರವು ನೀಡುತ್ತಿದ್ದಾರೆ. ಇಷ್ಟು ಮಾತ್ರವಲ್ಲದೆ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ನೂರು ಡ್ಯಾನ್ಸರ್ಸ್, 40 ಸ್ಲಮ್ ಏರಿಯಾಗಳಲ್ಲಿರುವ ಬಡವರಿಗೆ ದವಸ-ಧಾನ್ಯ ವಿತರಣೆ ಮಾಡುತ್ತಿದ್ದಾರೆ. ಮಾಜಿ ಮೇಯರ್ ಪದ್ಮಾವತಿ ಜೊತೆ ಸೇರಿ ಅನ್ನದಾಸೋಹ ಮತ್ತು ಕಾರ್ಮಿಕರಿಗೆ ಅಗತ್ಯ ವಸ್ತುಗಳನ್ನು ಸಹ ವಿತರಣೆಯನ್ನು ಮಾಡಿದ್ದಾರೆ.

    ಕೆಲ ಮಹಿಳಾ ಹಾಸ್ಟೆಲ್‍ಗಳಿಗಳಲ್ಲಿರುವ ನಿರಾಶ್ರಿತರಿಗೆ ಸ್ಯಾನಿಟರಿ ಪ್ಯಾಡ್ಸ್ ಗಳನ್ನು ವಿತರಿಸುವ ಮೂಲಕ ಮಹಿಳೆಯರ ಸಹಾಯಕ್ಕೂ ರಾಗಿಣಿ ನಿಂತಿದ್ದಾರೆ. ಲಾಕ್‍ಡೌನ್ ಆದಾಗಿನಿಂದಲೂ ಬಡವರಿಗೆ, ನಿರಾಶ್ರಿತರಿಗೆ ರಾಗಿಣಿ ಸಹಾಯ ಮಾಡುತ್ತಿದ್ದು, ಹಲವು ಸಿನಿಮಾ ಕಾರ್ಮಿಕರಿಗೆ ಸಹಾಯ ಮಾಡಿದ್ದಾರೆ. ಕೊರೊನಾ ವಾರಿಯರ್ಸ್‍ಯಿಂದ ಹಿಡಿದು ಬಡ ಜನರ ವರೆಗೆ ರಾಗಿಣಿ ಸಹಾಯ ಮಾಡುತ್ತಿದ್ದಾರೆ.

    ಈ ಹಿಂದೆ ಕೊರೊನಾ ವಾರಿಯರ್ಸ್ ಗಳಾದ ವೈದ್ಯರು, ಪೊಲೀಸ್, ಪೌರ ಕಾರ್ಮಿಕರಿಗೆ ಊಟ ವಿತರಿಸಿದ್ದಾರೆ. ಹಲವು ಆಸ್ಪತ್ರೆಗಳಿಗೆ ನೇರವಾಗಿ ತೆರಳಿ ಸ್ವತಃ ಅವರೇ ಆಹಾರದ ಕಿಟ್ ವಿತರಿಸಿದ್ದಾರೆ. ಈ ಮೂಲಕ ಬಡವರ ಸಹಾಯಕ್ಕೆ ನಿಂತಿದ್ದಾರೆ. ಇಷ್ಟು ಮಾತ್ರವಲ್ಲದೆ ಬೀದಿ ನಾಯಿಗಳು, ಪ್ರಾಣಿಗಳಿಗೂ ರಾಗಿಣಿ ಆಹಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇದೀಗ ಮಹಿಳೆಯರಿಗೆ, ಡ್ಯಾನ್ಸರ್ಸ್‍ಗೆ ಹಾಗೂ ಸ್ಲಂ ನಿವಾಸಿಗಳಿಗೆ ನೆರವಾಗುತ್ತಿದ್ದಾರೆ.

    ತಮ್ಮ ಎಲ್ಲ ಚಟುವಟಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದು, ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಿಮ್ಮ ರೀಲ್ ಜೀವನವನ್ನು ನಾವು ತುಂಬಾ ಇಷ್ಟಪಡುತ್ತೇವೆ. ಅಂತೆಯೇ ಇದೀಗ ರಿಯಲ್ ಜೀವನ ತುಂಬಾ ಅಪ್ಯಾಯಮಾನವಾಗಿದ್ದು, ಇದಕ್ಕೆ ಗೌರವ ಸಲ್ಲಿಸುತ್ತೇವೆ ಎಂದು ಕಮೆಂಟ್ ಮಾಡಿದ್ದಾರೆ. ಹಲವರು ಇದೇ ರೀತಿ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ರಾಗಿಣಿ ದ್ವಿವೇದಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿದ್ದು, ತಮ್ಮ ಸಿನಿಮಾಗಳ ಅಪ್‍ಡೇಟ್ ಜೊತೆಗೆ ಅಡುಗೆ ಮಾಡುವುದು, ಫುಡ್ ಕುರಿತ ಅಪ್‍ಡೇಟ್‍ಗಳನ್ನು ನೀಡುತ್ತಿರುತ್ತಾರೆ. ಅದೇ ರೀತಿ ಮಾನವೀಯ ಗುಣಗಳನ್ನು ತೋರಿಸುವ ಕೆಲಸಗಳ ಕುರಿತು ಸಹ ಮಾಹಿತಿ ಹಂಚಿಕೊಳ್ಳುತ್ತಿರುತ್ತಾರೆ. ಈ ಹಿಂದೆ ಪೌರ ಕಾರ್ಮಿಕರೊಂದಿಗೆ ಚಹಾ ಸೇವಿಸಿ ಅವರ ಕುಶಲೋಪರಿ ವಿಚಾರಿಸಿದ್ದರು. ಇದೀಗ ಸ್ವತಃ ಅವರೇ ಬಡವರ ಸಹಾಯಕ್ಕೆ ನಿಂತಿದ್ದಾರೆ.

  • ಹಸಿದವರಿಗೆ ಹೋಳಿಗೆ, ಪಲಾವ್, ಬಜ್ಜಿ ಬಡಿಸಿದ ಎಚ್‍ಡಿಡಿ

    ಹಸಿದವರಿಗೆ ಹೋಳಿಗೆ, ಪಲಾವ್, ಬಜ್ಜಿ ಬಡಿಸಿದ ಎಚ್‍ಡಿಡಿ

    ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಇಂದು ಬೆಂಗಳೂರು ಹೊರವಲಯ ಹೆಗ್ಗನಹಳ್ಳಿಗೆ ಭೇಟಿ ನೀಡಿ ಹಸಿದವರಿಗೆ ಹೋಳಿಗೆ, ಪಲಾವ್, ಬಜ್ಜಿ ಬಡಿಸಿ ಖುಷಿ ಪಟ್ಟಿದ್ದಾರೆ.

    ಕೊರೊನಾ ಲಾಕ್‍ಡೌನ್ ಹಿನ್ನೆಲೆ ಸ್ಥಳೀಯ ಜೆಡಿಎಸ್ ಮುಖಂಡ ಗಂಗಾಧರ್ ನೇತೃತ್ವದಲ್ಲಿ 4 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಸ್ವತಃ ದೇವೇಗೌಡರೇ ಜನರಿಗೆ ಹೋಳಿಗೆ, ಪಲಾವ್, ಬಜ್ಜಿ ಬಡಿಸಿದರು. ಆ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಜನರಿಗೆ ಆಹಾರ ಕಿಟ್‍ಗಳನ್ನು ವಿತರಿಸಿದರು.

    ಈ ಬಗ್ಗೆ ಮಾತನಾಡಿದ ಎಚ್‍ಡಿಡಿ, ಈ ಭಾಗದಲ್ಲಿ ಹೆಚ್ಚು ಕೂಲಿ ಕಾರ್ಮಿಕರು ಹಾಗೂ ಬಡ ವರ್ಗದ ಜನರು ಇದ್ದಾರೆ. ಹೀಗಾಗಿ ಲಾಕ್‍ಡೌನ್ ಸಮಯದಲ್ಲಿ ಜನರಿಗೆ ಕೆಲಸವಿಲ್ಲದೆ ಕಷ್ಟದಲ್ಲಿದ್ದಾರೆ. ಈ ಜನರಿಗೆ ನಮ್ಮ ಗಂಗಾಧರ್ ಹಾಗೂ ದಾಸರಹಳ್ಳಿಯ ಶಾಸಕ ಮಂಜುನಾಥ್ ಸಹಾಯ ಮಾಡಿ ಜನರ ಹಸಿವನ್ನ ನೀಗಿಸುವ ಕೆಲಸ ಮಾಡುತ್ತಿದ್ದಾರೆ, ಇದು ಬಹಳ ಸಂತಸ ತಂದಿದೆ ಎಂದು ಹೇಳಿದರು.

    ಬಳಿಕ ಕಾರ್ಮಿಕರ ಸ್ಥಳಾಂತರ ವಿಚಾರದಲ್ಲಿ ಶನಿವಾರ ರಾಜ್ಯ ಸರ್ಕಾರ ತಪ್ಪು ಮಾಡಿದೆ. ರೈಲಿನಲ್ಲಿ 1,200 ಕಾರ್ಮಿಕರನ್ನು ಕಳುಹಿಸಿದ್ದಾರೆ. ಕಾರ್ಮಿಕರು ಊಟ, ವಸತಿ ಇಲ್ಲದೆ ಹಸಿವಿನಿಂದ ಬಳಲಿದ್ದಾರೆ. ಜನರ ಪ್ರತಿಭಟನೆ ಹಿನ್ನೆಲೆ ಇಂದು ಸರ್ಕಾರ ಎಲ್ಲಾ ವ್ಯವಸ್ಥೆ ಮಾಡಿದೆ. ಬಹುಶಃ ಇನ್ನೂ ಹೆಚ್ಚಿನ ರೈಲಿನ ವ್ಯವಸ್ಥೆ ಮಾಡಬಹುದು ಎಂದರು. ಇದೇ ವೇಳೆ ಕಾಂಗ್ರೆಸ್ ಪ್ರತಿಭಟನೆ ವಿಚಾರವಾಗಿ ಹೆಚ್ಚು ಪ್ರತಿಕ್ರಿಯಿಸದೆ, ಅವರು ಯಾಕೆ ಪ್ರತಿಭಟನೆ ಮಾಡಬೇಕಿತ್ತು ನನಗೆ ಗೊತ್ತಿಲ್ಲ ಎಂದು ಎಚ್‍ಡಿಡಿ ಸುಮ್ಮನಾದರು.

  • ಬಡವರ ಸಹಾಯಕ್ಕೆ 65 ಸಾವಿರ ಕೋಟಿ ರೂ. ಮೀಸಲಿಡಬೇಕು – ರಘುರಾಮ್ ರಾಜನ್

    ಬಡವರ ಸಹಾಯಕ್ಕೆ 65 ಸಾವಿರ ಕೋಟಿ ರೂ. ಮೀಸಲಿಡಬೇಕು – ರಘುರಾಮ್ ರಾಜನ್

    ನವದೆಹಲಿ: ಕೊರೊನಾ ಸಂಕಷ್ಟ ಸಂದರ್ಭದಲ್ಲಿ ಬಡವರಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರ 65,000 ಕೋಟಿ ರೂ. ಮೀಸಲಿಡಬೇಕು ಎಂದು ಖ್ಯಾತ ಅರ್ಥಶಾಸ್ತ್ರಜ್ಞ ರಘುರಾಮ್ ರಾಜನ್ ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು ಆರ್ಥಿಕ ಪರಿಸ್ಥಿತಿ ಸುಧಾರಣೆ ಬಗ್ಗೆ ಮಾತುಕತೆ ನಡೆಸಿದ್ದಾರೆ.

    ಕೊರೊನಾದಿಂದ ಭಾರತದ ಆರ್ಥಿಕತೆ ಪೆಟ್ಟು ತಿಂದಿದೆ. ಆರ್ಥಿಕತೆಯ ಪುನರಾರಂಭಿಸಬೇಕಾದ ಅನಿವಾರ್ಯತೆ ಇದೆ. ಕೆಲವೊಮ್ಮೆ ಇಂಥ ಘಟನೆಗಳಿಂದ ಆರ್ಥಿಕತೆ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಕೂಡ ಇದ್ದು, ಪರಿಸ್ಥಿತಿಯ ಲಾಭ ಪಡೆಯುವ ಹಲವು ಮಾರ್ಗಗಳಿದ್ದು ಅವುಗಳನ್ನು ಸರ್ಕಾರ ಬಳಸಿಕೊಳ್ಳಬೇಕಿದೆ ಎಂದು ರಾಜನ್ ಹೇಳಿದ್ದಾರೆ.

    ಜಾಗತಿಕ ಆರ್ಥಿಕತೆ ಬಗ್ಗೆ ಪುನರ್ವಿಮರ್ಶೆ ಮಾಡಬೇಕು ಭಾರತದಲ್ಲಿ ಸಾಕಷ್ಟು ಸಂಪನ್ಮೂಲಗಳಿದೆ ನಮ್ಮ ಸೀಮಿತ ಸಾಮರ್ಥ್ಯಗಳಿಗೆ ಹೆಚ್ಚು ಆದ್ಯತೆ ನೀಡಬೇಕು. ಆರ್ಥಿಕತೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದೇಗೆ ಎಂದು ನಿರ್ಧರಿಸಬೇಕು. ಲಾಕ್‍ಡೌನ್ ಮುಗಿದ ಬಳಿಕ ಸಮಸ್ಯೆ ಹೆಚ್ಚಾಗುತ್ತದೆ. ಆ ಸಮಯದಲ್ಲಿ ದೇಶದ ಪರಿಸ್ಥಿತಿ ಇನ್ನಷ್ಟು ದುರ್ಬಲಗೊಳ್ಳುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    ಕೊರೊನಾ ಪರಿಸ್ಥಿತಿಯನ್ನು ಬೇರೆ ರೀತಿಯಲ್ಲಿ ನಿರ್ವಹಿಸಬೇಕು ಸಾಮೂಹಿಕ ಪರೀಕ್ಷೆಗಳನ್ನು ಹೆಚ್ಚು ಮಾಡಬೇಕು. ಜೊತೆಗೆ ಜನರಿಗೆ ಜೀವನೋಪಾಯ ತೆರೆಯುವ ಬಗ್ಗೆ ಸರ್ಕಾರ ಚಿಂತಿಸಬೇಕು ಜನರನ್ನು ಸಾಯಲು ಬಿಡಬಾರದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

    ಸಂದರ್ಶನದಲ್ಲಿ ಮಾತನಾಡಿದ ರಾಹುಲ್ ಗಾಂಧಿ ದಕ್ಷಿಣ ಭಾರತದ ರಾಜ್ಯಗಳ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಕೊರೊನಾ ಪರಿಸ್ಥಿತಿ ನಿಯಂತ್ರಣ ವಿಚಾರದಲ್ಲಿ ದಕ್ಷಿಣ ಭಾರತದ ರಾಜ್ಯಗಳು ಉತ್ತಮ ಕೆಲಸ ಮಾಡುತ್ತಿವೆ. ದಕ್ಷಿಣ ರಾಜ್ಯಗಳಲ್ಲಿ ವಿಕೇಂದ್ರೀಕರಣ ಪದ್ಧತಿ ಇದೆ ಜನರಿಗೆ ಏನು ಮಾಡಬೇಕೆಂದು ಯೋಚಿಸುವ ಶಕ್ತಿ ಇದೆ ಎಂದು ದಕ್ಷಿಣ ಭಾರತದ ರಾಜ್ಯಗಳ ಬಗ್ಗೆ ರಾಹುಲ್ ಗಾಂಧಿ ಮೆಚ್ಚುಗೆ ವ್ಯಕ್ತಪಡಿಸಿದರು.

  • ‘ಏನೇ ಆಗ್ಲಿ 1 ರೂಪಾಯಿಗೇ ಇಡ್ಲಿ ಮಾರುತ್ತೇನೆ’ – ಲಾಕ್‍ಡೌನ್‍ನಲ್ಲೂ ಬಡವರಿಗಾಗಿ ಶ್ರಮಿಸುತ್ತಿರೋ ಅಜ್ಜಿ

    ‘ಏನೇ ಆಗ್ಲಿ 1 ರೂಪಾಯಿಗೇ ಇಡ್ಲಿ ಮಾರುತ್ತೇನೆ’ – ಲಾಕ್‍ಡೌನ್‍ನಲ್ಲೂ ಬಡವರಿಗಾಗಿ ಶ್ರಮಿಸುತ್ತಿರೋ ಅಜ್ಜಿ

    – ಸಾಮಗ್ರಿ ದುಬಾರಿ ಎಂದು ಇಡ್ಲಿ ಬೆಲೆ ಏರಿಕೆ ಮಾಡಲ್ಲ
    – ಇಳಿ ವಯಸ್ಸಲ್ಲೂ ಮಾನವೀಯತೆ ಮೆರೆಯುತ್ತಿರುವ ಅಜ್ಜಿ

    ಚೆನ್ನೈ: ಲಾಕ್‍ಡೌನ್‍ನಲ್ಲಿ ಅಡುಗೆ ಸಾಮಗ್ರಿ ಬೆಲೆ, ದಿನ ಬಳಿಕೆಯ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಿದೆ. ಹಲವರು ಇದೇ ಒಳ್ಳೆಯ ಅವಕಾಶ ದುಬಾರಿ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡಿ ಹಣ ಮಾಡೋಣ ಅಂತ ಪ್ಲಾನ್ ಹಾಕಿ, ಹಣ ಗಳಿಸುತ್ತಿದ್ದಾರೆ. ಆದರೆ ತಮಿಳುನಾಡಿನ ವಡಿವೇಲಪಾಲ್ಯಂ ಗ್ರಾಮದಲ್ಲಿನ ‘ಇಡ್ಲಿ ಪಾಟಿ'(ಇಡ್ಲಿ ಅಜ್ಜಿ) ಎಂದೇ ಖ್ಯಾತಿಗಳಿಸಿರುವ 85 ವರ್ಷದ ವೃದ್ಧೆ ಕಮಲಥಾಲ್ ಅವರು ಲಾಕ್‍ಡೌನ್‍ನಲ್ಲಿಯೂ ಕೇವಲ 1 ರೂಪಾಯಿಗೇ ಇಡ್ಲಿ ಮಾರಾಟ ಮಾಡುತ್ತಿದ್ದಾರೆ. ಸಾಮಗ್ರಿ ಬೆಲೆ ದುಬಾರಿಯಾದರೂ ಬಡವರ ಹಸಿವು ನೀಗಿಸಲು ಕೇವಲ 1 ರೂಪಾಯಿಗೆ ಇಡ್ಲಿ ಮಾರಾಟ ಮಾಡುತ್ತಾ ಮಾನವೀಯತೆ ಮೆರೆದಿದ್ದಾರೆ.

    ವಡಿವೇಲಪಾಲ್ಯಂ ಗ್ರಾಮದ ನಿವಾಸಿ ಕಮಲಥಾಲ್ ಅವರು ಕಳೆದ 30 ವರ್ಷದಿಂದ ಇಡ್ಲಿ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಪ್ರತಿನಿತ್ಯ ಬೆಳಗ್ಗೆ ತಮ್ಮ ಅಂಗಡಿ ಬಾಗಿಲು ತೆಗೆದು, ಸ್ವಾದಿಷ್ಟ ಮತ್ತು ರುಚಿಯಾದ ಸಾಂಬಾರ್, ಚಟ್ನಿ ಜೊತೆಗೆ ಕೇವಲ 1 ರೂಪಾಯಿ ಬೆಲೆಗೆ ಇಡ್ಲಿ ಮಾರಾಟ ಮಾಡುತ್ತಾರೆ. ಇದನ್ನೂ ಓದಿ: ಬಡವರಿಗಾಗಿ ಕೇವಲ 1 ರೂಪಾಯಿಗೆ ಇಡ್ಲಿ ಮಾರುತ್ತಿದ್ದಾರೆ 80ರ ವೃದ್ಧೆ

    ಲಾಕ್‍ಡೌನ್ ಅವಧಿಯಲ್ಲಿ ಅಡುಗೆ ಸಾಮಗ್ರಿ ಬೆಲೆ ಏರಿಕೆಯಾಗಿದೆ. ಈ ಸಂಕಷ್ಟದ ಸಂದರ್ಭದಲ್ಲಿ ಬಡವರಿಗೆ ಹೆಚ್ಚು ಹಣ ಕೊಟ್ಟು ಆಹಾರ ಪಡೆಯಲು ಕಷ್ಟವಾಗುತ್ತದೆ. ಸಾಮಗ್ರಿ ಬೆಲೆ ಹೆಚ್ಚಾದರೂ ನಾನು ಒಂದು ಇಡ್ಲಿಗೆ 1 ರೂಪಾಯಿ ತೆಗೆದುಕೊಳ್ಳುತ್ತೇನೆ. ಲಾಭಕ್ಕಾಗಿ ನಾನು ಈ ಕೆಲಸ ಮಾಡುತ್ತಿಲ್ಲ. ಬಡವರಿಗೆ, ಹಸಿದವರಿಗೆ ಆಹಾರ ನೀಡಬೇಕು ಎನ್ನುವುದು ನನ್ನ ಆಶಯ ಎಂದು ಅಜ್ಜಿ ಹೇಳಿಕೊಂಡಿದ್ದಾರೆ.

    ಸಾಮಗ್ರಿ ಬೆಲೆಯೆಲ್ಲಾ ದುಬಾರಿಯಾಗಿದೆ. ಇಡ್ಲಿ ತಯಾರಿಸಲು ಕಷ್ಟವಾಗುತ್ತಿದೆ. ಆದರೆ ಕೆಲವರು ನನಗೆ ದಿನಸಿ ಸಾಮಗ್ರಿ, ತರಕಾರಿಗಳನ್ನು ತಂದುಕೊಟ್ಟು ಸಹಾಯ ಮಾಡುತ್ತಿದ್ದಾರೆ. ಉದ್ದಿನ ಬೇಳೆ ಬೆಲೆ ಕೆಜಿಗೆ 100 ರೂಪಾಯಿಂದ 150 ರೂಪಾಯಿ ಆಗಿದೆ. ಮೆಣಸು ಕೆಜಿಗೆ 150 ರೂಪಾಯಿಂದ 200 ರೂಪಾಯಿ ಆಗಿದೆ. ಆದರೂ ನಾನು ಇಡ್ಲಿ ಬೆಲೆ ಏರಿಕೆ ಮಾಡಲ್ಲ. ಹೇಗೋ ಈ ಪರಿಸ್ಥಿತಿಯನ್ನು ನಿರ್ವಹಿಸುತ್ತಿದ್ದೇನೆ ಎಂದು ಅಜ್ಜಿ ತಿಳಿಸಿದ್ದಾರೆ.

    ಸದ್ಯ ಅಜ್ಜಿ ದಿನಕ್ಕೆ 300ಕ್ಕೂ ಹೆಚ್ಚು ಮಂದಿಗೆ ಆಹಾರ ನೀಡುತ್ತಿದ್ದಾರೆ. ಅಲ್ಲದೇ ಸಾಮಾಜಿಕ ಅಂತರ ಕಾಯ್ದುಕೊಂಡು ಗ್ರಾಹಕರಿಗೆ ಇಡ್ಲಿ ಪಾರ್ಸಲ್ ನೀಡುತ್ತಿದ್ದಾರೆ. ಬೇರೆ ಬೇರೆ ಪ್ರದೇಶಗಳಿಂದ ಬಂದ ಜನರು ಲಾಕ್‍ಡೌನ್‍ನಿಂದ ಇಲ್ಲೇ ಸಿಲುಕಿಕೊಂಡಿದ್ದಾರೆ. ಲಾಕ್‍ಡೌನ್‍ನಿಂದ ಸಾಕಷ್ಟು ಮಂದಿ ಸಂಕಷ್ಟದಲ್ಲಿದ್ದಾರೆ. ಅವರಿಗೆ ತನ್ನಿಂದ ಸಹಾಯವಾಗಲಿ ಎಂದು ಅಜ್ಜಿ ಇಂದಿಗೂ 1 ರೂಪಾಯಿಗೆ ಇಡ್ಲಿ ಮಾರುತ್ತಾ ಮನವೀಯತೆ ಮೆರೆದಿದ್ದಾರೆ.

  • ಕೊಡಗಿನ ಬಡವರ ಕಷ್ಟಕ್ಕೆ ಮಾಧ್ಯಮ ‘ಸ್ಪಂದನ’

    ಕೊಡಗಿನ ಬಡವರ ಕಷ್ಟಕ್ಕೆ ಮಾಧ್ಯಮ ‘ಸ್ಪಂದನ’

    ಮಡಿಕೇರಿ: ಸಮಾಜದಲ್ಲಿ ಪತ್ರಕರ್ತರಿಂದ ಹೆಚ್ಚು ಪ್ರಚಾರಗಿಟ್ಟಿಸಿಕೊಳ್ಳುವವರೇ ಹೆಚ್ಚು. ಅದರಲ್ಲೂ ಈ ಲಾಕ್‍ಡೌನ್ ಸಮಯದಲ್ಲಿ ಬಡ ಜನರಿಗೆ ಸೇವೆ ಮಾಡುವ ಅನೇಕ ಸಂಘ ಸಂಸ್ಥೆಗಳು ಮಾಧ್ಯಮದವರು ಹಾಗೂ ಪತ್ರಕರ್ತರನ್ನು ಕರೆದುಕೊಂಡು ಹೋಗಿ ಪ್ರಚಾರ ಪಡೆದುಕೊಳ್ಳುತ್ತಾರೆ.

    ಪ್ರಚಾರ ಕೊಡುವ ಪತ್ರಕರ್ತರೇ ಯಾರಿಗೂ ತಿಳಿಯದಂತೆ ಸಂಕಷ್ಟದಲ್ಲಿ ಇರುವವರಿಗೆ ಮಾಧ್ಯಮ ಸ್ಪಂದನ ತಂಡ ಕಟ್ಟಿಕೊಂಡು ಜಿಲ್ಲೆಯ ವಿವಿಧೆಡೆ ತಮ್ಮ ಕೈಯಿಂದ ಆಗುವ ಸಹಾಯವನ್ನು ಮಾಡುತ್ತಿದ್ದಾರೆ. ಹೌದು, ಕೊಡಗಿನಲ್ಲಿ ಹಲವಾರು ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಊಟದ ವ್ಯವಸ್ಥೆಗೂ ಆಹಾರ ಪದಾರ್ಥಗಳು ಸಿಗುವುದು ಕಷ್ಟವಾಗಿದೆ. ಇದರಿಂದಾಗಿ ಕೊಡಗು ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು ಸೇರಿ ಸಂಕಷ್ಟದಲ್ಲಿರುವರಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ.

    ಪತ್ರಕರ್ತರು ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ದಾನಿಗಳ ಮೂಲಕ ಸಮಸ್ಯೆಯನ್ನು ಪರಿಹಾರ ಮಾಡಿಸಿಕೊಡುತ್ತಿದ್ದಾರೆ. ಸಮಸ್ಯೆ ಇರುವ ಕಡೆಗಳಿಂದ ಕರೆ ಬಂದರೆ ತಕ್ಷಣ ಮಾಧ್ಯಮದವರ ತಂಡ ನೆರವಿಗೆ ಬರುತ್ತಿದೆ. ಈಗಾಗಲೇ ಜಿಲ್ಲೆಯ ಹಲವು ಬಡ ಕುಟುಂಬಗಳಿಗೆ ಮಾಧ್ಯಮ ತಂಡದ ಸದಸ್ಯರು ಮನೆಗೆ ನೇರವಾಗಿ ತೆರಳಿ ಆಹಾರ ಪದಾರ್ಥಗಳನ್ನು ವಿತರಿಸುವ ಕೆಲಸ ಮಾಡುತ್ತಿದ್ದಾರೆ.

    ಜಿಲ್ಲೆಯ ವಿವಿಧೆಡೆ ಇರುವ ಪತ್ರಕರ್ತರು ತಮ್ಮ ವೃತ್ತಿಯೊಂದಿಗೆ ಈ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತೋಟದಲ್ಲಿ ಕೂಲಿ ಮಾಡುವ ಕಾರ್ಮಿಕರು, ಅನಾರೋಗ್ಯ ಪೀಡಿತರು ಹಾಗೂ ಬಡವರಿಗೆ ಗರ್ಭಿಣಿಯರಿಗೆ ಮಾಧ್ಯಮ ಸ್ಪಂದನಾ ತಂಡ ನೆರವಾಗುತ್ತಿದೆ. ತಮ್ಮ ಕಾಯಕದ ನಡುವೆಯೂ ಕೊಡಗಿನ ಮಾಧ್ಯಮದ ವರದಿಗಾರರು ಈ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಇತರರಿಗೂ ಮಾದರಿಯಾಗಿದ್ದಾರೆ.

  • ಬಡವರ ಆತ್ಮಗೌರವ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ: ಪಿ.ಚಿದಂಬರಂ

    ಬಡವರ ಆತ್ಮಗೌರವ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ: ಪಿ.ಚಿದಂಬರಂ

    ನವದೆಹಲಿ: ಲಾಕ್‍ಡೌನ್‍ನಿಂದಾಗಿ ಕೆಲಸ ಕಳೆದುಕೊಂಡು, ಹಸಿವಿನಿಂದ ಬಳಲುತ್ತಿರುವ ಬಡವರ ಆತ್ಮಗೌರವವನ್ನು ಕಾಪಾಡುವಲ್ಲಿ ಸರ್ಕಾರ ಎಡವಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಹರಿಹಾಯ್ದಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ, ತುಂಬಾ ಜನರ ಬಳಿ ಹಣವೇ ಇಲ್ಲದಂತಾಗಿದ್ದು, ಬಹುತೇಕರು ಉಚಿತವಾಗಿ ಹಂಚುತ್ತಿರುವ ಊಟಕ್ಕಾಗಿ ಸಾಲು ನಿಲ್ಲುತ್ತಿದ್ದಾರೆ. ಇಂತಹವರಿಗೆ ಸರ್ಕಾರ ಹಣ ನೀಡಬೇಕು ಹಾಗೂ ಉಚಿತ ಆಹಾರ ಪದಾರ್ಥಗಳನ್ನು ನೀಡಬೇಕು. ಕೇವಲ ಹೃದಯವಿಲ್ಲದ ಸರ್ಕಾರ ಮಾತ್ರ ಏನೂ ಮಾಡದಿರಲು ಸಾಧ್ಯ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

    ಸರ್ಕಾರ ಪ್ರತಿ ಬಡ ಕುಟುಂಬಕ್ಕೆ ಹಣ ನೀಡುವ ಮೂಲಕ ಜನರನ್ನು ಹಸಿವಿನಿಂದ ಯಾಕೆ ಕಾಪಾಡುತ್ತಿಲ್ಲ ಹಾಗೂ ಅವರ ಗೌರವವನ್ನೇಕೆ ಉಳಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ 77 ಮಿಲಿಯನ್ ಟನ್ ಧಾನ್ಯಗಳಿದ್ದು, ಅದರಲ್ಲಿ ಸಣ್ಣ ಪ್ರಮಾಣವನ್ನು ಸರ್ಕಾರ ಬಡವರಿಗೇಕೆ ಹಂಚುತ್ತಿಲ್ಲ ಎಂದು ಎರಡು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಎರಡು ಟ್ವೀಟ್‍ಗೆ ಪ್ರತಿಯಾಗಿ ಇನ್ನೊಂದು ಟ್ವೀಟ್ ಮಾಡಿದ್ದಾರೆ. ಈ ಎರಡು ಆರ್ಥಿಕತೆ ಹಾಗೂ ನೈತಿಕತೆಯ ಪ್ರಶ್ನೆಗಳಾಗಿದ್ದು, ಇವೆರಡಕ್ಕೂ ಉತ್ತರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿಫಲರಾಗಿದ್ದಾರೆ ಎಂದು ಅವರನ್ನು ಟ್ಯಾಗ್ ಮಾಡಿದ್ದಾರೆ. ಇಡೀ ದೇಶ ಇದನ್ನು ಅಸಹಾಯಕತೆಯಿಂದ ವಿಕ್ಷೀಸುತ್ತಿದೆ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

    ದೇಶಾದ್ಯಂತ 15 ಸಾವಿರಕ್ಕೂ ಅಧಿಕ ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, 500ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಈ ಆರೋಗ್ಯ ತುರ್ತು ಪರಿಸ್ಥಿತಿಯನ್ನು ನಿಭಾಯಿಸಿದ್ದರ ಕುರಿತು ಪಿ.ಚಿದಂಬರಂ ಕೇಂದ್ರ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದಾರೆ.