Tag: ಬಟ್ಟೆ ಗೋದಾಮು

  • ಮಧ್ಯರಾತ್ರಿ ಹೊತ್ತಿ ಉರಿದ ಗೋದಾಮು- 9 ಮಂದಿ ಸಾವು, ಇಬ್ಬರು ಗಂಭೀರ

    ಮಧ್ಯರಾತ್ರಿ ಹೊತ್ತಿ ಉರಿದ ಗೋದಾಮು- 9 ಮಂದಿ ಸಾವು, ಇಬ್ಬರು ಗಂಭೀರ

    ನವದೆಹಲಿ: ಮಧ್ಯರಾತ್ರಿ ವೇಳೆ ದೆಹಲಿಯ ಕಿರಾರಿ ಪ್ರದೇಶದಲ್ಲಿದ್ದ ಬಟ್ಟೆ ಗೋದಾಮು ಬೆಂಕಿಗಾಹುತಿಯಾಗಿದೆ. ಬೆಂಕಿ ಅನಾಹುತದಲ್ಲಿ 9 ಮಂದಿ ಸಾವನ್ನಪ್ಪಿದ್ದು, ಇಬ್ಬರು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

    ಮಧ್ಯರಾತ್ರಿ ಸುಮಾರು 12:30ರ ವೇಳೆಗೆ ಗೋದಾಮಿನಲ್ಲಿ ಬೆಂಕಿ ಹೊತ್ತಿಕೊಂಡಿದೆ. 4 ಅಂತಸ್ತಿನ ಗೋದಾಮು ಇದಾಗಿದ್ದು, ಮೊದಲು ಕೆಳ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಈ ಬೆಂಕಿ ಕಟ್ಟಡದ ಮೂರನೇ ಮಹಡಿಯವರೆಗೂ ತಲುಪಿದ್ದು, ಗೋದಾಮಿನ ತುಂಬ ಬಟ್ಟೆ ತುಂಬಿದ್ದ ಕಾರಣಕ್ಕೆ ಬೆಂಕಿ ಬಹುಬೇಗ ಮೂರನೇ ಮಹಡಿವರೆಗೂ ಆವರಿಸಿತು. ಇದನ್ನು ಕಂಡ ತಕ್ಷಣ ಸ್ಥಳೀಯರು ಅಗ್ನಿ ಶಾಮಕದಳಕ್ಕೆ ಕರೆ ಮಾಡಿದ್ದು, ಸ್ಥಳಕ್ಕೆ ಬಂದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವುದಕ್ಕೆ ಹರಸಾಹಸ ಪಟ್ಟಿದ್ದಾರೆ.

    ಬೆಂಕಿ ಅವಘಡಕ್ಕೆ ನಿಖರ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಆದರೆ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಈ ಅನಾಹುತ ಸಂಭವಿಸಿದೆ ಎಂದು ಊಹಿಸಲಾಗಿದೆ. ಅಗ್ನಿ ಅನಾಹುತದಲ್ಲಿ ಸಾವನ್ನಪ್ಪಿದ 9 ಮಂದಿ ಒಂದೇ ಕುಟುಂಬದವರು ಎಂದು ಹೇಳಲಾಗುತ್ತಿದ್ದು, 8 ಮಂದಿಯ ಮೃತದೇಹಗಳನ್ನು ಗುರುತಿಸಲಾಗಿದೆ. ಆದರೆ ಓರ್ವ ಮಹಿಳೆ ಗುರುತು ಮಾತ್ರ ಇನ್ನೂ ತಿಳಿದು ಬಂದಿಲ್ಲ.

    ಗೋದಾಮಿಗೆ ಬೆಂಕಿ ಹೊತ್ತಿಕೊಂಡಿದ್ದಾಗ ಮಹಿಳೆಯರು, ಮಕ್ಕಳು ಸೇರಿದಂತೆ ಒಟ್ಟು 12 ಮಂದಿ ಅದರೊಳಗೆ ಸಿಲುಕಿಕೊಂಡಿದ್ದರು. ತಕ್ಷಣ ರಕ್ಷಣಾ ಕಾರ್ಯದಲ್ಲಿ ಅಗ್ನಿ ಶಾಮಕ ಸಿಬ್ಬಂದಿ ತೊಡಗಿ ಅವರನ್ನು ರಕ್ಷಿಸಿ, ಸ್ಥಳೀಯ ಆಸ್ಪತ್ರೆ ಹಾಗೂ ಸಂಜಯ್ ಗಾಂಧಿ ಮೆಮೊರಿಯಲ್ ಆಸ್ಪತ್ರೆಗೆ ದಾಖಲಿಸಿದರು. ಅವರಲ್ಲಿ 9 ಮಂದಿ ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.