Tag: ಬಜೆಟ್ 2019

  • ಜಾರಿಯಾಗಿರೋ ರೈಲ್ವೇ ಯೋಜನೆ ಪೂರ್ಣಗೊಳಿಸಲು ದಶಕಗಳೇ ಬೇಕು: ಸೀತಾರಾಮನ್

    ಜಾರಿಯಾಗಿರೋ ರೈಲ್ವೇ ಯೋಜನೆ ಪೂರ್ಣಗೊಳಿಸಲು ದಶಕಗಳೇ ಬೇಕು: ಸೀತಾರಾಮನ್

    ನವದೆಹಲಿ: ಈಗಾಗಲೇ ಜಾರಿಯಾಗಿರುವ ಯೋಜನೆಗಳನ್ನು ಪೂರ್ಣಗೊಳಿಸಲು ರೈಲ್ವೇಗೆ ವಾರ್ಷಿಕವಾಗಿ 1.5 ರಿಂದ 1.6 ಲಕ್ಷ ಕೋಟಿ ಅನುದಾನ ಬೇಕಿದೆ. ಈ ಯೋಜನೆ ಪೂರ್ಣಗೊಳಿಸಲು ಹಲವು ದಶಕಗಳು ಬೇಕು. ಈ ಕಾರಣಕ್ಕೆ ಖಾಸಗಿಯವರ ಜೊತೆಗೂಡಿ ಯೋಜನೆಗಳನ್ನು ವೇಗವಾಗಿ ಪೂರ್ಣಗೊಳಿಸಲು ಮುಂದಾಗಿದ್ದೇವೆ ಎಂದು ಸೀತಾರಾಮನ್ ಹೇಳಿದ್ದಾರೆ.

    ರೈಲ್ವೇ ಮೂಲಭೂತ ಸೌಕರ್ಯಕ್ಕಾಗಿ 2018-2030ರ ಅವಧಿಗೆ 50 ಲಕ್ಷ ಕೋಟಿಯ ಅವಶ್ಯಕತೆ ಇದೆ. ಅಭಿವೃದ್ಧಿ ಪಥದತ್ತ ಶರವೇಗದಿಂದ ಸಾಗುತ್ತಿರುವ ಭಾರತದಲ್ಲಿ ಪ್ರಯಾಣಿಕರ ಅನಕೂಲ ಮತ್ತು ಉತ್ತಮ ಸೇವೆಗಾಗಿ ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಕಾರ್ಯ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಸರಕುಗಳನ್ನು ನದಿ ಮಾರ್ಗದ ಮೂಲಕ ಸಾಗಿಸಲು ಸರ್ಕಾರ ಚಿಂತನೆ ನಡೆಸಿದೆ. ಕೇವಲ ರೈಲ್ವೇ ಮತ್ತು ರಸ್ತೆ ಮಾರ್ಗ ಬಳಸಿದ್ರೆ ಹೆಚ್ಚು ಸಮಯ ತೆಗೆದುಕೊಳ್ಳಲಿದೆ. ಹಾಗಾಗಿ ಸರ್ಕಾರ ನದಿ ಮಾರ್ಗವನ್ನು ಚಿಂತಿಸಿದೆ ಎಂದರು.

    ಉಪನಗರಗಳಿಗೆ ರೈಲ್ವೇ ಸಂಪರ್ಕ ಕಲ್ಪಿಸುವ ಯೋಜನೆ ಸರ್ಕಾರ ಮುಂದಿದೆ. ಸಂಪರ್ಕ ಕಲ್ಪಿಸಲು ಹೆಚ್ಚು ಬಂಡವಾಳದ ಅವಶ್ಯಕತೆ ಇದೆ. ರೈಲ್ವೇ ಇಲಾಖೆಯ ವಾರ್ಷಿಕ ಆದಾಯ 1.5 ರಿಂದ 1.6 ಲಕ್ಷ ಕೋಟಿ ರೂ. ಇದೆ. ಎಲ್ಲ ಉಪನಗರಗಳಿಗೆ ರೈಲು ಸಂಪರ್ಕ ಕಲ್ಪಿಸಲು ಒಂದು ದಶಕವೇ ಬೇಕು. ಟ್ರ್ಯಾಕ್, ರೈಲ್ವೇ ಇಂಜಿನ್, ಕೋಚ್, ವ್ಯಾಗನ್ ನಿರ್ಮಾಣದ ಕೆಲಸವನ್ನು ಖಾಸಗಿ ಸಹಭಾಗಿತ್ವದಲ್ಲಿ ನಡೆಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.

    ಸರ್ಕಾರಿ-ಖಾಸಗಿ ಸಹಭಾಗಿತ್ವದ ಪಿಪಿಪಿ ಮೂಲಕ ರೈಲ್ವೇ ಇಲಾಖೆಯಲ್ಲಿ ಹೂಡಿಕೆ ಪ್ರಮಾಣವನ್ನು ಹೆಚ್ಚಳ ಮಾಡುವುದು. ಬಂಡವಾಳ ಹೂಡಿಕೆ ಬಳಿಕ ರೈಲ್ವೇ ಟ್ರ್ಯಾಕ್, ಮೂಲಭೂತ ಸೌಲಭ್ಯ ನೀಡುವುದು. ಇವುಗಳ ಜೊತೆಯಲ್ಲಿ ಪ್ರಯಾಣಿಕರ ಸರಕು ಸಾಗಣೆ ((Passenger Freight Service) ಸೇವೆ ಆರಂಭಿಸುವ ಬಗ್ಗೆ ಬಜೆಟ್‍ನಲ್ಲಿ ಪ್ರಸ್ತಾಪಿಸಲಾಗಿದೆ.

    ಮೆಟ್ರೋ: 2019-20 ಬಜೆಟ್ ನಲ್ಲಿ ದೇಶದಲ್ಲಿ 657 ಕಿ.ಮೀ. ಮೆಟ್ರೋ ರೈಲ್ವೇ ನೆಟ್‍ವರ್ಕ್ ಚಾಲನೆ ಸಿಗಲಿದೆ. ಮೆಟ್ರೋ ರೈಲ್ವೇ ಹೆಚ್ಚಿನ ಕಾಮಗಾರಿ ಪಿಪಿಪಿ ಸಹಭಾಗಿತ್ವದಲ್ಲಿ ನಡೆಯಲಿದೆ.

    ಫೆಬ್ರವರಿಯಲ್ಲಿ ಮಧ್ಯಂತರ ಬಜೆಟ್ ಮಂಡಿಸಿದ್ದ ಪಿಯೂಶ್ ಗೋಯಲ್ 2019-20ರ ಆರ್ಥಿಕ ವರ್ಷದಲ್ಲಿ 64,587 ಕೋಟಿ ರೂ. ಅನುದಾನವನ್ನು ನೀಡಿದ್ದರು.

  • ಕನಸಿನ ಮನೆಯ ಕನಸುಗಾರರಿರಗೆ ಬಜೆಟ್‍ನಲ್ಲಿದೆ ಸಿಹಿ ಸುದ್ದಿ

    ಕನಸಿನ ಮನೆಯ ಕನಸುಗಾರರಿರಗೆ ಬಜೆಟ್‍ನಲ್ಲಿದೆ ಸಿಹಿ ಸುದ್ದಿ

    ನವದೆಹಲಿ: ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ತಮ್ಮ ಮೊದಲ ಪೂರ್ಣಾವಧಿಯ ಬಜೆಟ್ ಮಂಡಿಸಿದರು. ಬಜೆಟ್ ನಲ್ಲಿ ಗೃಹಸಾಲಕ್ಕೆ ಪ್ರೋತ್ಸಾಹ ಸಿಕ್ಕಿದ್ದು, ಸಾಲ ಪಡೆದ ಮೊತ್ತಕ್ಕೆ ನೀಡುವ ಬಡ್ಡಿಗೆ ತೆರಿಗೆ ವಿನಾಯ್ತಿ ಸಿಗಲಿದೆ.

    ಈ ಮೊದಲು ಗೃಹಸಾಲದ ಬಡ್ಡಿಯ ಮೊತ್ತಕ್ಕೆ 1.5 ಲಕ್ಷ ರೂ. ತೆರಿಗೆ ವ್ಯಾಪ್ತಿಯ ಒಳಪಡುತ್ತಿರಲಿಲ್ಲ. 2019-20ರ ಬಜೆಟ್ ನಲ್ಲಿ ಗೃಹಸಾಲದ ಮೇಲಿನ ವಾರ್ಷಿಕ ಬಡ್ಡಿಯ ಒಟ್ಟಾರೆ ಮೊತ್ತದಲ್ಲಿ 3.5 ಲಕ್ಷ ರೂ. ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ. ಒಟ್ಟು 45 ಲಕ್ಷ ರೂ.ವರೆಗಿನ ಸಾಲಕ್ಕೆ ಮಾತ್ರ ಈ ತೆರಿಗೆ ವಿನಾಯಿತಿ ಸಿಗಲಿದೆ. ನಿಮ್ಮ ಒಟ್ಟಾರೆ ಆದಾಯದಲ್ಲಿಯೂ ಟ್ಯಾಕ್ಸ್ ಡಿಡಕ್ಷನ್ ಗೆ ಸೇರಲಿದೆ. 3.5 ಲಕ್ಷ ರೂ. ತೆರಿಗೆ ವಿನಾಯ್ತಿ ಮಾರ್ಚ್ 31, 2020ರವರೆಗ ಮಾತ್ರ ಸಿಗಲಿದೆ. ಓರ್ವ ತೆರಿಗೆ ಪಾವತಿದಾರ ಅಥವಾ ಗೃಹಸಾಲ ಪಡೆದ ಸಾಲಗಾರ 7 ಲಕ್ಷ ರೂ.ಗೆ ಲಾಭ ಪಡೆಯಲಿದ್ದಾರೆ. ಮಧ್ಯಮ ವರ್ಗದ ಖರೀದಿದಾರದ ಸಾಲದ ಅವಧಿ 15 ವರ್ಷವಿದ್ದಾಗ 3.5 ಲಕ್ಷ ರೂ. ಡಿಡಕ್ಷನ್ ಸಿಗಲಿದೆ.

    ಮೊದಲ ಮನೆ ಖರೀದಿದಾರ (Self Occupied Property) ಮಾತ್ರ ಸಾಲದ ಬಡ್ಡಿಯ ಮೇಲೆ ವಾರ್ಷಿಕ 3.5 ಲಕ್ಷ ರೂ.ವರೆಗೆ ತೆರಿಗೆ ವಿನಾಯ್ತಿಯ ಫಲನುಭವಿ ಆಗಲಿದ್ದಾನೆ. ದೇಶದ ಪ್ರತಿ ನಾಗರೀಕನಿಗೆ ಸ್ವಂತ ಸೂರು ಎಂಬ ಉದ್ದೇಶದಿಂದ ತೆರಿಗೆ ವಿನಾಯ್ತಿ ಸಿಗಲಿದೆ ಎಂದು ಕೇಂದ್ರ ಸಚಿವೆ ತಿಳಿಸಿದ್ದಾರೆ.

    ಮಧ್ಯಮ ವರ್ಗದ ತೆರಿಗೆದಾರ ತನ್ನ ಜೀವಮಾನದಲ್ಲಿ ಮೊದಲ ಮನೆ ಖರೀದಿಸುತ್ತಿದ್ದರೆ, ಆತನು 3.5 ಲಕ್ಷ ರೂ. ತೆರಿಗೆ ವಿನಾಯಿತಿಯ ಲಾಭ ಪಡೆಯಲಿದ್ದಾನೆ. ಈ ಮೊದಲು 1.5 ಲಕ್ಷ ರೂ. ಕಡಿತಗೊಳಿಸಲಾಗುತ್ತಿತ್ತು. ಇನ್ಮುಂದೆ 3.5 ಲಕ್ಷ ರೂ. ಒಟ್ಟಾರೆ ಆದಾಯದಿಂದ ಕಡಿತಗೊಳ್ಳುತ್ತದೆ. 45 ಲಕ್ಷ ರೂ. ಮೌಲ್ಯದ ಮನೆಯನ್ನು 31 ಮಾರ್ಚ್, 2020ರೊಳಗೆ ಖರೀದಿ ಮಾಡಿದರೆ ಮಾತ್ರ ತೆರಿಗೆ ವಿನಾಯಿತಿ ಸಿಗಲಿದೆ.

    ಈ ಲಾಭ ಓರ್ವ ವ್ಯಕ್ತಿಗೆ ಜೀವನದಲ್ಲಿ ಒಂದು ಬಾರಿ ಮಾತ್ರ ಸಿಗಲಿದೆ. ಒಂದು ವೇಳೆ ವ್ಯಕ್ತಿ ಎರಡನೇ ಮನೆ ಖರೀದಿಗೆ ಮುಂದಾದರೆ ಅದನ್ನು Let Occupied Property ಎಂದು ಪರಿಗಣಿಸಲಾಗುತ್ತದೆ.

  • ನಿಮ್ಮ ಆದಾಯ 14.50 ಲಕ್ಷ ಇದ್ದರೂ ನೀವು ತೆರಿಗೆ ಪಾವತಿಸಬೇಕಿಲ್ಲ!

    ನಿಮ್ಮ ಆದಾಯ 14.50 ಲಕ್ಷ ಇದ್ದರೂ ನೀವು ತೆರಿಗೆ ಪಾವತಿಸಬೇಕಿಲ್ಲ!

    ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮೋದಿ 2.0 ಸರ್ಕಾರದ ಮೊದಲನೇ ಬಜೆಟ್ ಮಂಡಿಸಿದರು. ಈ ಬಾರಿ ಆದಾಯ ತೆರಿಗೆಯಲ್ಲಿ ಹೆಚ್ಚಿನ ಬದಲಾವಣೆಗಳನ್ನು ತರದ ಸಚಿವರು ತೆರಿಗೆಯಲ್ಲಿ ವಿನಾಯ್ತಿಯನ್ನು ನೀಡಿದ್ದಾರೆ. 45 ಲಕ್ಷ ರೂ.ವರೆಗಿನ ಗೃಹಸಾಲದ ಮೊತ್ತದ 3.5 ಲಕ್ಷ ರೂ.ಗೆ ತೆರಿಗೆ ವಿನಾಯ್ತಿ ಸಿಗಲಿದೆ. ಅದೇ ರೀತಿ ಇಲೆಕ್ಟ್ರಿಕ್ ವಾಹನ ಖರೀದಿಯ ಸಾಲದಲ್ಲಿ 1.50 ಲಕ್ಷ ರೂ.ಗೆ ತೆರಿಗೆ ವಿನಾಯ್ತಿ ಸಿಗಲಿದೆ.

    14 ಲಕ್ಷದ 5 ಸಾವಿರ ರೂ. ಆದಾಯ ಹೊಂದಿರುವ ವ್ಯಕ್ತಿ ಯಾವ ರೀತಿ ತೆರಿಗೆ ವಿನಾಯ್ತಿ ಪಡೆದುಕೊಳ್ಳಬಹುದು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.

    ಒಟ್ಟು ಆದಾಯ-14.5 ಲಕ್ಷ ರೂ
    ಗೃಹಸಾಲ -3.5 ಲಕ್ಷ ರೂ.
    ಇಲೆಕ್ಟ್ರಿಕ್ ವೆಹಿಕಲ್ ಖರೀದಿಯ ಸಾಲ- 1.5 ಲಕ್ಷ
    ಸೆಕ್ಷನ್ 80(ಸಿ)-1.5 ಲಕ್ಷ
    ಸ್ವಂತ ಆರೋಗ್ಯ ವಿಮೆ-25 ಸಾವಿರ ರೂ.
    ಪೋಷಕರ ಆರೋಗ್ಯ ವಿಮೆ-30 ಸಾವಿರ ರೂ.
    ಎನ್‍ಪಿಎಸ್ ಹೂಡಿಕೆ-50 ಸಾವಿರ ರೂ.
    ಸ್ಟ್ಯಾಂಡರ್ಡ್ ಡಿಡಕ್ಷನ್-50 ಸಾವಿರ ರೂ.
    ಶಿಕ್ಷಣ ಸಾಲ-1 ಲಕ್ಷ
    ————-
    ಒಟ್ಟು ಡಿಡಕ್ಷನ್-9.05 ಲಕ್ಷ ರೂ.
    ಉಳಿದ 5 ಲಕ್ಷದ ಮೊತ್ತದ ಮೇಲಿನ ಟ್ಯಾಕ್ಸ್-12,500
    ರಿಬೇಟ್-12,500
    ————-
    ಪಾವತಿಸಬೇಕಾದ ತೆರಿಗೆ- ಶೂನ್ಯ

  • ಚೊಚ್ಚಲ ಬಜೆಟ್‍ನಲ್ಲೇ ಮಹಿಳೆಯರಿಗೆ ಬಂಪರ್ ಆಫರ್ ಕೊಟ್ಟ ಸೀತಾರಾಮನ್

    ಚೊಚ್ಚಲ ಬಜೆಟ್‍ನಲ್ಲೇ ಮಹಿಳೆಯರಿಗೆ ಬಂಪರ್ ಆಫರ್ ಕೊಟ್ಟ ಸೀತಾರಾಮನ್

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 2ನೇ ಬಜೆಟ್ಟನ್ನು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ್ದು, ತಮ್ಮ ಚೊಚ್ಚಲ ಬಜೆಟ್ ನಲ್ಲೇ ಮಹಿಳೆಯರಿಗೆ ಮಹತ್ವದ ಯೋಜನೆಗಳನ್ನು ಘೋಷಿಸಿದ್ದಾರೆ.

    ನಾರಿಯಿಂದ ನಾರಾಯಣ ಎಂದು ಉಲ್ಲೇಖಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಸಚಿವೆ ಹೆಚ್ಚಿನ ಒತ್ತು ನೀಡಿದ್ದಾರೆ. ಮಹಿಳೆಯ ಸ್ಥಿತಿಗತಿ ಬದಲಾಗದೆ ವಿಶ್ವ ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಎಂಬ ವಿವೇಕಾನಂದ ಮಾತಿನಂತೆ ಮಹಿಳೆಯರ ಅಭಿವೃದ್ಧಿಗೆ ಯೋಜನೆಗಳನ್ನು ಘೋಷಿಸಿದ್ದಾರೆ. ಇದನ್ನೂ ಓದಿ: ಚಿನ್ನದ ಸೆಸ್ ಹೆಚ್ಚಿಸಿ ಮಹಿಳೆಯರಿಗೆ ಶಾಕ್ ಕೊಟ್ಟ ಸೀತಾರಾಮನ್

    ಗ್ರಾಮೀಣಾಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ದೊಡ್ಡದು. ಹೀಗಾಗಿ ಭಾರತದ ಅಭಿವೃದ್ಧಿಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗೀದಾರರಾಗಬೇಕು ಎಂದು ಮನವಿ ಮಾಡಿಕೊಂಡರು. ಅಲ್ಲದೆ ಮಹಿಳಾ ಸಬಲೀಕರಣಕ್ಕಾಗಿ ಈ ಹಿಂದೆ ಜಾರಿಗೊಳಿಸಿರುವ ಮುದ್ರಾ, ಸ್ಟ್ಯಾಂಡ್ ಅಪ್ ಇಂಡಿಯಾ, ಸೆಲ್ಫ್ ಹೆಲ್ಪ್, ಗ್ರೂಪ್ ಸಪೋರ್ಟ್ ನಂತಹ ಯೋಜನೆಗಳು ಮುಂದುವರಿಯಲಿವೆ ಎಂದಿದ್ದಾರೆ. ಇದನ್ನೂ ಓದಿ: ಕೇಂದ್ರ ಬಜೆಟ್ – ಯಾವುದು ಏರಿಕೆ? ಯಾವುದು ಇಳಿಕೆ?

    2022ರಂದು ನಡೆಯುವ 75ನೇ ಸ್ವಾತಂತ್ರ್ಯ ದಿನಾಚರಣೆಯ ಒಳಗಡೆ ಗ್ರಾಮೀಣ ಮಹಿಳೆಯರಿಗೆ ಗ್ಯಾಸ್ ಕನೆಕ್ಷನ್, ವಿದ್ಯುತ್ ಸೌಲಭ್ಯ ನೀಡುವುದಾಗಿ ಘೋಷಿಸಿದ್ದಾರೆ. ದೇಶದ ಎಲ್ಲಾ ಮಹಿಳಾ ಸಂಘಗಳಿಗೆ ಬಡ್ಡಿ ವಿನಾಯ್ತಿ ಸಾಲ ಹಾಗೂ ಮುದ್ರಾ ಯೋಜನೆಯಡಿ ಮಹಿಳಾ ಸಂಘಗಳಿಗೆ 1 ಲಕ್ಷ ರೂ ವರೆಗೆ ಸಾಲ ಸೌಲಭ್ಯ ನೀಡುವುದರ ಜೊತೆಗೆ ಜನ್ ಧನ್ ಖಾತೆ ಹೊಂದಿರುವ ಮಹಿಳೆಯರಿಗೆ 5 ಸಾವಿರ ರೂ. ಓವರ್ ಡ್ರಾಫ್ಟ್ ನೀಡಲಾಗುತ್ತದೆ ಎಂದು ಸೀತಾರಾಮನ್ ತಿಳಿಸಿದರು.

  • ದೇಶದ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುವ ಬಜೆಟ್: ಪ್ರಧಾನಿ ಮೋದಿ

    ದೇಶದ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುವ ಬಜೆಟ್: ಪ್ರಧಾನಿ ಮೋದಿ

    ನವದೆಹಲಿ: ಬಜೆಟ್ ಬಡವರಿಂದ ಶ್ರೀಮಂತರವರೆಗೂ ಪೂರಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

    ಬಜೆಟ್ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಈ ಬಜೆಟ್ ದೇಶದ ಜನರ ವಿಶ್ವಾಸ ಗಳಿಸಲಿದೆ. ದೇಶದ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲಿದ್ದು, ಆಕಾಂಕ್ಷೆಯ ಬಜೆಟ್ ಆಗಿದೆ. ಈ ಬಜೆಟ್ ನಿರ್ದಿಷ್ಟ ಗುರಿ ತಲುಪಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಚಿನ್ನದ ಸೆಸ್ ಹೆಚ್ಚಿಸಿ ಮಹಿಳೆಯರಿಗೆ ಶಾಕ್ ಕೊಟ್ಟ ಸೀತಾರಾಮನ್ 

    2019ರ ಬಜೆಟ್ 2022ರ ನವ ಭಾರತ ನಿರ್ಮಾಣ ಕನಸು ಈಡೇರಿಸಲು ಪೂರಕವಾಗಲಿದೆ. ದಲಿತ, ಶೋಷಿತ, ಬಡ, ವಂಚಿತ ಜನರನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಳೆದ 5 ವರ್ಷಗಳಿಂದ ಕೆಲಸ ಮಾಡುತ್ತಿದೆ. ಈ ಬಾರಿ ಬಜೆಟ್ ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಪೂರಕವಾಗಿದೆ ಎಂದರು. ಇದನ್ನೂ ಓದಿ: ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 1 ರೂ. ಸೆಸ್

    ಮುಂದಿನ ಕೆಲವು ವರ್ಷಗಳಲ್ಲಿ ಭಾರತವು 5 ಟ್ರಿಲಿಯನ್ (5 ಲಕ್ಷ ಕೋಟಿ) ಡಾಲರ್ ಅರ್ಥವ್ಯವಸ್ಥೆ ಹೊಂದಲಿದೆ. ಈ ಕನಸನ್ನು ಪೂರ್ಣಗೊಳಿಸಲು ಸರ್ಕಾರ ಶ್ರಮಿಸಲಿದೆ. ದೇಶದ ರೈತರು, ಮೀನುಗಾರರನ್ನು ಪ್ರಬಲಗೊಳಿಸಲು ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಮುಂದಿನ ಮೂರು ವರ್ಷಗಳಲ್ಲಿ ರೈತರ ಆದಾಯವು ದ್ವಿಗುಣಗೊಳ್ಳಲಿದೆ ಎಂದರು.

    ದೇಶದಲ್ಲಿ ಉಂಟಾಗುತ್ತಿರುವ ಜಲ ಸಮಸ್ಯೆಯನ್ನು ನಿವಾರಣೆ ಮಾಡಲಾಗುತ್ತದೆ. ಸ್ವಚ್ಛ ಭಾರತ್ ಅಭಿಯಾನದಂತೆ ಹರ್ ಘರ್ ಜಲ್ ಅಭಿಯಾನ ಪ್ರಾರಂಭಿಸಲಾಗುತ್ತದೆ ಎಂದು ಹೇಳಿದರು.

  • ಮಗಳಿಗೆ ಆಶೀರ್ವಾದ ಮಾಡಲು ಸಂಸತ್ ಪ್ರವೇಶಿಸಿದ್ದೇವೆ: ಸೀತಾರಾಮನ್ ಪೋಷಕರು

    ಮಗಳಿಗೆ ಆಶೀರ್ವಾದ ಮಾಡಲು ಸಂಸತ್ ಪ್ರವೇಶಿಸಿದ್ದೇವೆ: ಸೀತಾರಾಮನ್ ಪೋಷಕರು

    ನವದೆಹಲಿ: ನೂತನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೊದಲ ಬಾರಿಗೆ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ನಿರ್ಮಲಾ ಬಜೆಟ್ ಮಂಡನೆ ಮಾಡುವುದನ್ನು ನೋಡಲು ಅವರ ಪೋಷಕರು ಲೋಕಸಭೆಯ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸಿದ್ದಾರೆ.

    ಸಾವಿತ್ರಿ ಹಾಗೂ ನಾರಾಯಣನ್ ಸೀತಾರಾಮ್ ಅವರು ತಮ್ಮ ಮಗಳಿಗೆ ಆಶೀರ್ವಾದ ಹಾಗೂ ಪ್ರೋತ್ಸಾಹ ನೀಡಲು ತಮಿಳುನಾಡಿನಿಂದ ಆಗಮಿಸಿದ್ದರು. ನಿರ್ಮಲಾ ಸೀತಾರಾಮನ್ ಅವರ ತಂದೆ ನಾರಾಯಣನ್ ಅವರು ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡಿ ಈಗ ನಿವೃತ್ತರಾಗಿದ್ದಾರೆ.

    ನಿರ್ಮಲಾ ಸೀತರಾಮನ್ ಭಾರತದ ಪೂರ್ಣ ಅವಧಿಯ ಮೊದಲ ಮಹಿಳಾ ಹಣಕಾಸು ಮಂತ್ರಿಯಾಗಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಬಜೆಟ್ ಮಂಡನೆ ಶುರುವಾಗಿದೆ. ನಿರ್ಮಲಾ ಸೀತಾರಾಮನ್ ಅವರು ಸೂಟ್‍ಕೇಸ್ ಸಂಪ್ರದಾಯಕ್ಕೆ ಬ್ರೇಕ್ ಹಾಕಿ ಕೆಂಪು ಬಣ್ಣದ ಬಟ್ಟೆಯ ಒಳಗಡೆ ಬಜೆಟ್ ಪ್ರತಿಗಳನ್ನು ಇರಿಸಿಕೊಂಡು ಸಂಸತ್ ಪ್ರವೇಶಿಸಿದ್ದಾರೆ.

    ಸಂಸತ್ ಪ್ರವೇಶಿಸುವ ಮುನ್ನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಸಚಿವೆ ಭೇಟಿಯಾಗಿದ್ದರು. ಬಜೆಟ್ ಮಂಡಿಸಿದ ಬಳಿಕ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ ನಡೆಸಲಿದ್ದು, ಅನುರಾಗ್ ಠಾಕೂರ್, ಹಣಕಾಸು ಸಚಿವಾಲಯದ ಕಾರ್ಯದರ್ಶಿಗಳು ಮತ್ತು ಆರ್ಥಿಕ ಸಲಹೆಗಾರ ಕೆ.ವಿ ಸುಬ್ರಮಣಿಯನ್ ಅವರು ಭಾಗಿಯಾಗಲಿದ್ದಾರೆ.