Tag: ಬಜೆಟ್

  • ಬಿಬಿಎಂಪಿ ಬಜೆಟ್ ಮಂಡನೆ – 19,927 ಕೋಟಿ ಬೃಹತ್ ಯೋಜನೆಗಳ ಘೋಷಣೆ

    ಬಿಬಿಎಂಪಿ ಬಜೆಟ್ ಮಂಡನೆ – 19,927 ಕೋಟಿ ಬೃಹತ್ ಯೋಜನೆಗಳ ಘೋಷಣೆ

    – ಬ್ರ್ಯಾಂಡ್ ಬೆಂಗಳೂರಿಗೆ ಬಜೆಟ್‌ನಲ್ಲಿ ಹೆಚ್ಚಿನ ಮಹತ್ವ

    ಬೆಂಗಳೂರು: 2025-26ನೇ ಸಾಲಿನ ಬಿಬಿಎಂಪಿ ಬಜೆಟ್ (BBMP Budget) ಮಂಡನೆಯಾಗಿದೆ. ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್ ಬಜೆಟ್‌ಗೆ ಅನುಮೋದನೆ ನೀಡಿದ್ದು, ಸತತ ಐದನೇ ಬಾರಿಗೆ ಅಧಿಕಾರಿಗಳೇ ಬಜೆಟ್ ಮಂಡನೆ ಮಾಡಿದ್ದಾರೆ.

    19,927 ಕೋಟಿ ಬೃಹತ್ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್ ಬಜೆಟ್ ಅನುಮೋದನೆ ನೀಡಿದ್ದು, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (Tushar Girinath) ಸಮಕ್ಷಮದಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಹರೀಶ್ ಕುಮಾರ್ ಬಜೆಟ್ ಮಂಡನೆ ಮಾಡಿದ್ದಾರೆ.

    ಬ್ರ‍್ಯಾಂಡ್ ಬೆಂಗಳೂರು (Brand Bengaluru) ದೃಷ್ಟಿಕೋನಕ್ಕೆ ಅನುಗುಣವಾಗಿ ಬೆಂಗಳೂರನ್ನು ಅಧುನಿಕ ನಗರವನ್ನಾಗಿಸುವ ಘೋಷಣೆ ಮಾಡಲಾಗಿದೆ. ಬ್ರ‍್ಯಾಂಡ್ ಬೆಂಗಳೂರಿಗೆ ಬಿಬಿಎಂಪಿ ಬಜೆಟ್‌ನಲ್ಲಿ ಅತಿ ಹೆಚ್ಚಿನ ಮಹತ್ವ ನೀಡಲಾಗಿದೆ. ಬೆಂಗಳೂರು ಪರಿಕಲ್ಪನೆ ಅಡಿಯಲ್ಲಿ ಟ್ರಾಫಿಕ್ ಮುಕ್ತ, ಗ್ರೀನ್ ಸಿಟಿ, ಟೆಕ್, ಶಿಕ್ಷಣ, ಆರೋಗ್ಯ, ರೋಮಾಂಚಕ ಬೆಂಗಳೂರು, ನೀರಿನ ಭದ್ರತೆಗೆ ಅತಿ ಹೆಚ್ಚಿನ ಒತ್ತು ನೀಡಲಾಗಿದೆ. ಬ್ರ‍್ಯಾಂಡ್ ಬೆಂಗಳೂರಿಗೆ 1,790 ಕೋಟಿ ವೆಚ್ಚ ಮಾಡಲು ನಿರ್ಧಾರ ಮಾಡಲಾಗಿದೆ.

    ಯಾವುದಕ್ಕೆ ಎಷ್ಟು ಅನುದಾನ ಮೀಸಲು?
    *ಘನತ್ಯಾಜ್ಯ ನಿರ್ವಹಣೆ ಯೋಜನೆಗಾಗಿ 1,400 ಕೋಟಿ ಮೀಸಲು ಇರಿಸಲಾಗಿದೆ. ತ್ಯಾಜ್ಯ ವಿಲೇವಾರಿ ಘಟಕ, ಒಣ ತ್ಯಾಜ್ಯ ನಿರ್ವಹಣಾ ಘಟಕ, ಮೆಕ್ಯಾನಿಕ್ ಸ್ವೀಪಿಂಗ್ ಯಂತ್ರಗಳು, ಇನ್ನಿತರ ಘನತ್ಯಾಜ್ಯ ನಿರ್ವಹಣೆ ಯೋಜನೆಗೆ 1,400 ಕೋಟಿ ಅನುದಾನ ಮೀಸಲಿರಿಸಲಾಗಿದೆ.
    *ಬೆಂಗಳೂರು ಶಿಕ್ಷಣ ಯೋಜನೆ ಅನುಷ್ಠಾನಗಳಿಗೆ 183 ಕೋಟಿ ಮೀಸಲಿಡಲಾಗಿದೆ. 15 ಶಾಲೆಗಳ ನವೀಕರಣ, 60 ಶಾಲೆಗಳ ಸ್ಮಾರ್ಟ್ ಬೋರ್ಡ್, ಶಾಲಾ ಕಟ್ಟಡಗಳ ನಿರ್ವಹಣೆಗೆ 23 ಕೋಟಿ, ಶಾಲಾ ಮೈದಾನ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ.
    *ಆರೋಗ್ಯ ಬೆಂಗಳೂರು ಯೋಜನೆಗೆ 413 ಕೋಟಿ ಅನುದಾನ ಕೊಟ್ಟಿದ್ದು, 19 ಹೊಸ ಆಸ್ಪತ್ರೆಗಳು, 26 ಹೊಸ ಡೆಂಟಲ್ ಆಸ್ಪತ್ರೆ, ಬೀದಿನಾಯಿಗಳ ನಿರ್ವಹಣೆಗೆ 60 ಕೋಟಿ ಅನುದಾನ ನೀಡಲಾಗಿದೆ.
    *ಬೆಂಗಳೂರು ನಗರವನ್ನು ಸುಂದರೀಕರಿಸಲು, ಆಕರ್ಷಣೆ ಮಾಡಲು 50 ಕೋಟಿ, ಜಂಕ್ಷನ್ ಮತ್ತು ಸಾರ್ವಜನಿಕ ಸ್ಥಳಗಳ ಸುಂದರೀಕರಣಕ್ಕೆ 25 ಕೋಟಿ ಮೀಸಲು ಇಡಲಾಗಿದೆ.
    *ಸ್ಕೈ ಡೆಕ್ ನಿರ್ಮಾಣಕ್ಕಾಗಿ 50 ಕೋಟಿ ಅನುದಾನ ನೀಡಲಾಗಿದೆ.
    *ಬೆಂಗಳೂರು ಪ್ರವಾಹ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ 247.25 ಕೋಟಿ ಮೀಸಲು ಇಡಲಾಗಿದೆ.
    *225 ವಾರ್ಡ್‌ಗಳ ಅಭಿವೃದ್ಧಿಗಾಗಿ ವಾರ್ಡ್‌ಗೆ ತಲಾ 2.50 ಕೋಟಿಯಂತೆ 675 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.
    *ಪ್ರೀಮಿಯರ್ ಎಫ್‌ಎಆರ್ ನೀತಿ ಜಾರಿ ಮಾಡಿದ್ದು, ಇದರಿಂದ 2 ಕೋಟಿ ಆದಾಯ ನೀರಿಕ್ಷೆ ಮಾಡಲಾಗಿದೆ.
    *ಪಾಲಿಕೆ ಸಿಬ್ಬಂದಿ ವರ್ಗಗಳಿಗೆ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಅವಕಾಶ ಕೊಡಲಾಗಿದೆ.
    *ಸಿಬ್ಬಂದಿ ಹಾಜರಾತಿ ಕಠಿಣಗೊಳಿಸಲು ಜಿಯೋ ಫೆನ್ಸಿಂಗ್ ವ್ಯವಸ್ಥೆ ಮಾಡಲಾಗಿದೆ.
    *12,692 ಪೌರಕಾರ್ಮಿಕರ ಕಾಯಂಗೊಳಿಸಿ 500 ಕೋಟಿ ಮೀಸಲು ಇರಿಸಲಾಗಿದೆ.
    *5,716 ಕೋಟಿ ಕಂದಾಯ ನಿರೀಕ್ಷೆ ಪಾಲಿಕೆ ವ್ಯಾಪ್ತಿಯ 20 ಲಕ್ಷ ಸ್ವತ್ತುಗಳ ಸರ್ವೇಗೆ ಪ್ರತ್ಯೇಕ ವಿಭಾಗ ಸ್ಥಾಪನೆ ಮಾಡಲಾಗುವುದು.
    *ಅನಧಿಕೃತ ಜಾಹೀರಾತಿಗೆ ಬ್ರೇಕ್ ಹಾಕಲು ಹೊಸ ನಿಯಮ ಜಾರಿ ಮಾಡಿದ್ದು, ಇದರಿಂದ 750 ಕೋಟಿ ಆದಾಯ ನಿರೀಕ್ಷಿಸಲಾಗಿದೆ.

  • ಬಜೆಟ್ ಪ್ರತಿಯಲ್ಲಿ ರೂಪಾಯಿ ಚಿಹ್ನೆ ‘₹’ ಕೈಬಿಟ್ಟ ತಮಿಳುನಾಡು

    ಬಜೆಟ್ ಪ್ರತಿಯಲ್ಲಿ ರೂಪಾಯಿ ಚಿಹ್ನೆ ‘₹’ ಕೈಬಿಟ್ಟ ತಮಿಳುನಾಡು

    ಚೆನ್ನೈ : ಕೇಂದ್ರ ಸರ್ಕಾರದೊಂದಿಗಿನ ಭಾಷಾ ವಿವಾದ ನಡೆಸುತ್ತಿರುವ ತಮಿಳುನಾಡು ಈಗ ಮತ್ತೆ ಒಂದು ಹೆಜ್ಜೆ ಮುಂದಕ್ಕೆ ಇಟ್ಟಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (MK Stalin) 2025-26 ರ ರಾಜ್ಯ ಬಜೆಟ್‌‌ನಲ್ಲಿ ರೂಪಾಯಿಯ ಅಧಿಕೃತ ಚಿಹ್ನೆ ‘₹’ ಕೈ ಬಿಟ್ಟಿದ್ದು ಬದಲಿಗೆ ‘ರುಬಾಯಿ’ (ತಮಿಳಿನಲ್ಲಿ ರೂಪಾಯಿ) ಯಿಂದ ‘ರು’ ಅನ್ನು ಆಯ್ಕೆ ಮಾಡಿಕೊಂಡು ಹೊಸ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ.

    ನಾಳೆ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾಗುವ ರಾಜ್ಯ ಬಜೆಟ್‌ನ (State Budget) ಟೀಸರ್ ಅನ್ನು ಸ್ಟಾಲಿನ್ ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು, “ಸಮಾಜದ ಎಲ್ಲಾ ವರ್ಗಗಳಿಗೆ ಅನುಕೂಲವಾಗುವ, ತಮಿಳುನಾಡಿನ (Tamil Nadu) ವ್ಯಾಪಕ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳುವ ಬಜೆಟ್” ಎಂದು ಬರೆದುಕೊಂಡಿದ್ದಾರೆ.

    ಹಿಂದಿನ ಎರಡು ಬಜೆಟ್‌ಗಳಲ್ಲಿ, ರಾಜ್ಯವು ತನ್ನ ಲೋಗೋಗಳಿಗಾಗಿ ರೂಪಾಯಿ ಚಿಹ್ನೆಯನ್ನು ಬಳಸಿತ್ತು. 2023-24ರ ಬಜೆಟ್‌ನಲ್ಲಿಯೂ ಸಹ ಈ ಚಿಹ್ನೆಯನ್ನು ಪ್ರಮುಖವಾಗಿ ತೋರಿಸಲಾಗಿತ್ತು, ಇದನ್ನು ಐಐಟಿ-ಗುವಾಹಟಿಯ ಪ್ರಾಧ್ಯಾಪಕರೊಬ್ಬರು ವಿನ್ಯಾಸಗೊಳಿಸಿದ್ದರು. ‘₹’ ಯಲ್ಲಿ ಹಿಂದಿಯ ‘ರಾ’ ಹೋಲಿಕೆ ಇರುವ ಹಿನ್ನೆಲೆಯಲ್ಲಿ ಬಳಸದಿರಲು ಸರ್ಕಾರ ನಿರ್ಧರಿಸಿದೆ. ರಾಷ್ಟ್ರೀಯ ಕರೆನ್ಸಿ ಚಿಹ್ನೆಯನ್ನು ರಾಜ್ಯವೊಂದು ತಿರಸ್ಕರಿಸಿರುವುದು ಇದೇ ಮೊದಲು.

    ರೂಪಾಯಿ ಚಿಹ್ನೆಯನ್ನು ಬದಲಾಯಿಸುವ ತಮಿಳುನಾಡು ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಮುಖ್ಯಮಂತ್ರಿ ಸ್ಟಾಲಿನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರೂಪಾಯಿ ಚಿಹ್ನೆಯನ್ನು ವಿನ್ಯಾಸಗೊಳಿಸಿದ್ದು ತಮಿಳುನಾಡಿನ ಉದಯ್ ಕುಮಾರ್, ಉದಯ್ ಕುಮಾರ್, ಮಾಜಿ ಡಿಎಂಕೆ ಶಾಸಕರ ಮಗ ಎನ್ನುವುದು ಇಲ್ಲಿ ಗಮನಿಸಬೇಕು. ನೀವು ಎಷ್ಟು ಮೂರ್ಖರು ಮಿಸ್ಟರ್ ಎಂಕೆ ಸ್ಟಾಲಿನ್ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಉಪಗ್ರಹಗಳ ಅನ್‌ಡಾಕ್ ಕಾರ್ಯ ಯಶಸ್ವಿ – ಇಸ್ರೋ ಮತ್ತೊಂದು ಸಾಧನೆ; ಚಂದ್ರಯಾನ-4ಕ್ಕೆ ದಾರಿ

     

    ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಕೂಡ ಎಂ.ಕೆ ಸ್ಟಾಲಿನ್‌ ಅವರನ್ನು ಟೀಕಿಸಿದರು. ಉದಯ ಕುಮಾರ್ ಧರ್ಮಲಿಂಗಂ ಒಬ್ಬ ಭಾರತೀಯ ಶಿಕ್ಷಣ ತಜ್ಞ ಮತ್ತು ವಿನ್ಯಾಸಕಾರ, ಮಾಜಿ ಡಿಎಂಕೆ ಶಾಸಕರ ಮಗ, ಅವರು ಭಾರತೀಯ ರೂಪಾಯಿ ಚಿಹ್ನೆಯನ್ನು ವಿನ್ಯಾಸಗೊಳಿಸಿದರು, ಇದನ್ನು ಭಾರತ ಒಪ್ಪಿಕೊಂಡಿತು. 2025-26ರ ತಮಿಳುನಾಡು ಬಜೆಟ್ ದಾಖಲೆಯಿಂದ ಚಿಹ್ನೆಯನ್ನು ಕೈಬಿಡುವ ಮೂಲಕ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ತಮಿಳರನ್ನು ಅವಮಾನಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

  • ಜನಪರವಾದ ಅತ್ಯುತ್ತಮ ದಾಖಲೆಯ ಬಜೆಟ್ – ಕೆ.ಹೆಚ್ ಮುನಿಯಪ್ಪ

    ಜನಪರವಾದ ಅತ್ಯುತ್ತಮ ದಾಖಲೆಯ ಬಜೆಟ್ – ಕೆ.ಹೆಚ್ ಮುನಿಯಪ್ಪ

    ಬೆಂಗಳೂರು: ಈ ಬಾರಿಯ ಬಜೆಟ್ ಜನಪರವಾಗಿದ್ದು, ಸಿಎಂ ತಮ್ಮ ದಾಖಲೆಯ ಬಜೆಟ್‌ನ್ನು ಬಡವರು ಹಾಗೂ ಶ್ರಮಿಕರ ಪರವಾಗಿ ಮಂಡಿಸಿದ್ದಾರೆ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ (KH Muniyappa) ಬಣ್ಣಿಸಿದ್ದಾರೆ.

    ಸಿಎಂ ಸಿದ್ದರಾಮಯ್ಯನವರು (CM Siddaramaiah) ಇಂದು ದಾಖಲೆಯ 16ನೇ ಬಜೆಟ್ ಮಂಡಿಸಿದ್ದು, ಇದು ಜನಪರವಾದ ಬಜೆಟ್ ಆಗಿದೆ. ಈ ಬಾರಿಯ ಬಜೆಟ್ ಬಡವರ ಹಾಗೂ ಶ್ರಮಿಕರ ಪರವಾಗಿದ್ದು, ಸರ್ವತೋಮುಖ ಅಭಿವೃದ್ಧಿಗಾಗಿ ನೀಡಲಾಗಿದೆ. ಬಸವಣ್ಣನವರ ತತ್ವ ಆದರ್ಶಗಳೊಂದಿಗೆ, ಮಹಾತ್ಮ ಗಾಂಧಿಜೀಯವರು ಕಂಡಂತಹ ಕನಸನ್ನು ನಮ್ಮ ಸರ್ಕಾರ ಈಡೇರಿಸುತ್ತಿದೆ. ಸಿಎಂ ಐತಿಹಾಸಿಕ ದಾಖಲೆಯ ಬಜೆಟ್ ಮಂಡಿಸಿದ್ದು, ಅವರಿಗೆ ಭಗವಂತ ಉತ್ತಮ ಆರೋಗ್ಯ ಭಾಗ್ಯವನ್ನು ಕರುಣಿಸಲಿ ಎಂದರು.ಇದನ್ನೂ ಓದಿ: ಈ ವರ್ಷ ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ರೂ. ಅನುದಾನ

    ರಾಜ್ಯದ ಬಡವರ ಹಸಿವು ನೀಗಿಸುವ ಉದ್ದೇಶದಿಂದ ಆರಂಭಿಸಲಾದ ಅನ್ನಭಾಗ್ಯ ಯೋಜನೆಯಡಿ ಇದುವರೆಗೂ ಹೆಚ್ಚುವರಿ 5 ಕೆ.ಜಿ ಆಹಾರ ಧಾನ್ಯಕ್ಕೆ ಪರ್ಯಾಯವಾಗಿ ಸಹಾಯಧನ ನೀಡಲಾಗುತ್ತಿತ್ತು. ಇದೀಗ ಸಹಾಯಧನದ ಬದಲಾಗಿ 5 ಕೆ.ಜಿ ಅಕ್ಕಿಯನ್ನು ವಿತರಿಸಲಾಗುವುದು. ಇದರಿಂದ 4.21 ಕೋಟಿ ಫಲಾನುಭವಿಗೆ ಹೆಚ್ಚುವರಿ ಅಕ್ಕಿ ಲಭ್ಯವಾಗಲಿದೆ ಎಂದು ಹೇಳಿದರು.

    ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಲು ತಂತ್ರಜ್ಞಾನವನ್ನು ಗರಿಷ್ಠ ಬಳಕೆ ಮಾಡಲಾಗುವುದು. ಇದಕ್ಕಾಗಿ ಒಟ್ಟಾರೆ 5 ಕೋಟಿ ರೂ. ವೆಚ್ಚದಲ್ಲಿ ಸಗಟು ಗೋಧಾಮುಗಳಿಗೆ ಸಿಸಿಟಿವಿ ಅಳವಡಿಕೆ, ಜಿಪಿಎಸ್ ಆಧಾರಿತ ವಾಹನ ಟ್ರ್ಯಾಕಿಂಗ್ ವ್ಯವಸ್ಥೆ ಮತ್ತು ಕಮಾಂಡ್ ಕಂಟ್ರೋಲ್ ಸೆಂಟರ್ ಸ್ಥಾಪಿಸಲಾಗುವುದು.

    80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮಾತ್ರ ಇರುವ ಮನೆಗಳಿಗೆ ಆಹಾರ ಧಾನ್ಯಗಳನ್ನು ತಲುಪಿಸಲು ಹಿಂದಿನ ವರ್ಷ ಅನ್ನ-ಸುವಿಧಾ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ 2 ಲಕ್ಷ ಫಲಾನುಭವಿಗಳನ್ನು ಗುರುತಿಸಲಾಗಿದ್ದು, 75 ವಯಸ್ಸಿನ ಮೇಲ್ಪಟ್ಟ ಹಿರಿಯ ನಾಗರಿಕರು ಮಾತ್ರ ಇರುವ ಮನೆಗಳಿಗೂ ಈ ಸೇವೆ ವಿಸ್ತರುಸಲಾಗುವುದು. ಇದರಿಂದ 3.30 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಲಿದೆ.

    ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಸಮರ್ಪಕವಾಗಿ ನಿಗಾವಹಿಸಲು ಸಾಧ್ಯವಾಗುವಂತೆ ನ್ಯಾಯಬೆಲೆ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್ ತೂಕದ ಯಂತ್ರ ಮತ್ತು ಪಾಯಿಂಟ್ ಆಫ್ ಸೇಲ್ ಸಿಸ್ಟಮ್‌ಗಳನ್ನು ಸಾರ್ವಜನಿಕ ವಿತರಣಾ ಪದ್ಧತಿಯನ್ನು ಐಟಿ ವ್ಯವಸ್ಥಯೊಂದಿಗೆ ಸಂಯೋಜಿಸಲಾಗುವುದು.

    ಅನ್ನಭಾಗ್ಯ ಯೋಜನೆಯ ಸಗಟು ಲಾಭಾಂಶ ಪ್ರತಿ ಕ್ವಿಂಟಾಲ್ 35 ರೂ.ಗಳಿಂದ 45 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ.ಇದನ್ನೂ ಓದಿ: Women’s Day | ಈ ಬಾರಿಯ ಥೀಮ್‌ – ಆಕ್ಸಲರೇಟ್‌ ಆಕ್ಷನ್‌ ಎಂದರೇನು?

  • 11 ತಿಂಗಳು 200 ರೂ., 1 ತಿಂಗಳು 300 ರೂ. ಕಡಿತ – ಏನಿದು ಉದ್ಯೋಗಿಗಳ ವೃತ್ತಿ ತೆರಿಗೆ ಲೆಕ್ಕಾಚಾರ?

    11 ತಿಂಗಳು 200 ರೂ., 1 ತಿಂಗಳು 300 ರೂ. ಕಡಿತ – ಏನಿದು ಉದ್ಯೋಗಿಗಳ ವೃತ್ತಿ ತೆರಿಗೆ ಲೆಕ್ಕಾಚಾರ?

    ಬೆಂಗಳೂರು: ಗ್ಯಾರಂಟಿ ಯೋಜನೆ (Congress Guarantee) ಜಾರಿಗೆ ಹಣ ಹೊಂದಿಸಲು ಈಗಾಗಲೇ ಹಲವು ಮಾರ್ಗಗಳನ್ನು ಹುಡುಕುತ್ತಿರುವ ಸರ್ಕಾರ ಈಗ ಉದ್ಯೋಗಿಗಳ ವೇತನಕ್ಕೆ (Salary) ಕೈಹಾಕಿದೆ. ಇನ್ಮುಂದೆ ಉದ್ಯೋಗಿಗಳ ಫೆಬ್ರವರಿ ತಿಂಗಳ ವೇತನದಿಂದ 300 ರೂ. ವೃತ್ತಿ ತೆರಿಗೆ ಕಡಿತವಾಗಲಿದೆ.

    ವೃತ್ತಿ ತೆರಿಗೆ (Professional Tax) ಅಧಿನಿಯಮದಡಿ ವಾರ್ಷಿಕವಾಗಿ ಅನುಮತಿಸಬಹುದಾದ ಗರಿಷ್ಟ ಮಿತಿ 2,500 ರೂ.ಗಳಿಗೆ ಅನುಗುಣವಾಗಿ, ಸಂಬಳ ಅಥವಾ ಮಜೂರಿ ಪಡೆಯುವ ವ್ಯಕ್ತಿಗಳು ಫೆಬ್ರವರಿ ತಿಂಗಳಲ್ಲಿ ಪಾವತಿಸುತ್ತಿರುವ ವೃತ್ತಿ ತೆರಿಗೆಯನ್ನು ಪ್ರಸ್ತುತ 200 ರೂ.ಗಳಿಂದ 300 ರೂ.ಗಳಿಗೆ ಹೆಚ್ಚಿಸಲು ಸೂಕ್ತ ತಿದ್ದುಪಡಿ ತರಲಾಗುವುದು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ತಮ್ಮ ಬಜೆಟ್‌ ಭಾಷಣದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಹಾಲಿನ ದರ 5 ರೂ. ಹೆಚ್ಚಳಕ್ಕೆ ಚಿಂತನೆ: ಭೀಮಾನಾಯ್ಕ್

    ಉದ್ಯೋಗ, ವೃತ್ತಿ, ವ್ಯಾಪಾರಗಳಿಂದ ಮಾಸಿಕ ಮಾಸಿಕ 15,000 ರೂ. ಗಿಂತ ಹೆಚ್ಚಿನ ಆದಾಯ ಪಡೆಯುತ್ತಿರುವ ಉದ್ಯೋಗಿಗಳ ವೇತನದಿಂದ ಇಲ್ಲಿಯವರೆಗೆ ವರ್ಷದ 11 ತಿಂಗಳು 200 ರೂ.ನಂತೆ ವೃತ್ತಿ ತೆರಿಗೆ ಕಡಿತವಾಗುತ್ತಿತ್ತು. ಇನ್ನು ಮುಂದೆ ಒಂದು ತಿಂಗಳು ಮಾತ್ರ 300 ರೂ. ವೃತ್ತಿ ತೆರಿಗೆಯನ್ನು ಸರ್ಕಾರ ವಿಧಿಸಲಿದೆ.

    ಈಗಾಗಲೇ ಕರ್ನಾಟಕ ವೃತ್ತಿಗಳ, ಕಸುಬುಗಳ, ಅಜೀವಿಕೆಗಳ ಮತ್ತು ಉದ್ಯೋಗಗಳ ಮೇಲಣ ತೆರಿಗೆ (ತಿದ್ದುಪಡಿ) ವಿಧೇಯಕ, 2025ಕ್ಕೆ ಸಂಪುಟ ಅನುಮೋದನೆ ನೀಡಿತ್ತು. ಈ ಅಧಿವೇಶನದಲ್ಲಿ ಈ ತಿದ್ದುಪಡಿ ವಿಧೇಯಕ ಮಂಡನೆ ಮಾಡಲಿದೆ.

    ಸಂವಿಧಾನದ ಅನುಚ್ಛೇದ 276ರಲ್ಲಿ ನಿಗದಿಪಡಿಸಿದಂತೆ ವೃತ್ತಿ ತೆರಿಗೆ ಸಂಗ್ರಹ ಪ್ರತಿ ವರ್ಷಕ್ಕೆ ಗರಿಷ್ಠ 2,500 ರೂ. ವಿಧಿಸಲು ಮಾತ್ರ ಅವಕಾಶವಿದೆ. ಹಾಲಿ ವೃತ್ತಿಪರ ಉದ್ಯೋಗಿಗಳಿಗೆ ಮಾಸಿಕ ವೇತನದಲ್ಲಿ 200 ರೂಪಾಯಿ ವೃತ್ತಿ ತೆರಿಗೆ ವಿಧಿಸಲಾಗುತ್ತಿತ್ತು.

     

    ಸದ್ಯ ತಿಂಗಳಿಗೆ 200 ರೂ. ಪ್ರತಿ ವರ್ಷ ಉದ್ಯೋಗಿಯೊಬ್ಬನಿಂದ 2,400 ರೂ. ಸಂಗ್ರಹವಾಗುತ್ತಿತ್ತು. ರಾಜ್ಯ ಸರ್ಕಾರಕ್ಕೆ ವಾರ್ಷಿಕ ಸರಾಸರಿ ಒಟ್ಟು ಸುಮಾರು 1,300 ಕೋಟಿ ರೂ. ವೃತ್ತಿ ತೆರಿಗೆ ಸಂಗ್ರಹವಾಗುತ್ತಿತ್ತು. ಫೆಬ್ರವರಿಯಲ್ಲಿ 100 ರೂ. ವೃತ್ತಿ ತೆರಿಗೆ ಹೆಚ್ಚಳದಿಂದ ಸರ್ಕಾರದ ಬೊಕ್ಕಸಕ್ಕೆ ಅಂದಾಜು 50 ಕೋಟಿ ಹೆಚ್ಚುವರಿ ಆದಾಯ ಬರುವ ನಿರೀಕ್ಷೆಯಿದೆ. ಒಂದು ತಿಂಗಳು 300 ರೂಪಾಯಿ ವೃತ್ತಿ ತೆರಿಗೆ ವಿಧಿಸುವ ಮೂಲಕ ವಾರ್ಷಿಕ ಅಂದಾಜು ಸುಮಾರು 1,360 ರೂಪಾಯಿ ವೃತ್ತಿ ತೆರಿಗೆ ಸಂಗ್ರಹವಾಗುವ ಸಾಧ್ಯತೆಯಿದೆ.

    ದೇಶದಲ್ಲಿ ಕರ್ನಾಟಕ ಸೇರಿ 17 ರಾಜ್ಯಗಳು ವೃತ್ತಿ ತೆರಿಗೆ ವಿಧಿಸುತ್ತಿದ್ದು, ಈಗಿರುವ 2,500 ರೂ. ವಾರ್ಷಿಕ ಮಿತಿಯನ್ನು 6,000 ರೂ.ಗೆ ಹೆಚ್ಚಳ ಮಾಡಲು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಹಲವು ರಾಜ್ಯಗಳ ಮನವಿ ಮಾಡಿದೆ. ಕೇಂದ್ರ ಸರ್ಕಾರ ಮಿತಿ ಹೆಚ್ಚಳದ ಬಗ್ಗೆ ಇಲ್ಲಿ ತನಕ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಒಂದು ವೇಳೆ 6 ಸಾವಿರ ರೂ.ಗೆ ಏರಿಕೆ ಮಾಡಿದರೆ ಪ್ರತಿ ತಿಂಗಳು ಉದ್ಯೋಗಿಯ ಸಂಬಳದಿಂದ 500 ರೂ. ವೃತ್ತಿ ತೆರಿಗೆ ಕಡಿತವಾಗಲಿದೆ.

  • ಸರ್ಕಾರಿ ಗುತ್ತಿಗೆ, ಖರೀದಿಯಲ್ಲಿ ಮುಸ್ಲಿಮರಿಗೆ ಮೀಸಲಾತಿ – ಇದು ಹಣಕಾಸು ತಜ್ಞರ ಒಡೆದಾಳುವ ಆರ್ಥಿಕತೆ: ಸುನಿಲ್‌ ಕುಮಾರ್‌ ಕಿಡಿ

    ಸರ್ಕಾರಿ ಗುತ್ತಿಗೆ, ಖರೀದಿಯಲ್ಲಿ ಮುಸ್ಲಿಮರಿಗೆ ಮೀಸಲಾತಿ – ಇದು ಹಣಕಾಸು ತಜ್ಞರ ಒಡೆದಾಳುವ ಆರ್ಥಿಕತೆ: ಸುನಿಲ್‌ ಕುಮಾರ್‌ ಕಿಡಿ

    ಬೆಂಗಳೂರು: ಇಷ್ಟು ದಿ‌ನ ಮುಸ್ಲಿಮರಿಗೆ (Muslims) ತೆರೆಮರೆಯಲ್ಲಿ ವಿಶೇಷ ಆದ್ಯತೆ ನೀಡುತ್ತಿದ್ದ ಸಿದ್ದರಾಮಯ್ಯ (Siddaramaiah) ಈಗ ಅದನ್ನು ಬಜೆಟ್‌ಗೂ (Budget) ವಿಸ್ತರಿಸಿದ್ದಾರೆ. ಹಣಕಾಸು ತಜ್ಞರ ಒಡೆದಾಳುವ ಆರ್ಥಿಕತೆ ಎಂದು ಕಾರ್ಕಳ ಬಿಜೆಪಿ ಶಾಸಕ ಸುನಿಲ್‌ ಕುಮಾರ್‌ (Sunil Kumar) ಆಕ್ರೋಶ ಹೊರ ಹಾಕಿದ್ದಾರೆ.

    ಸರ್ಕಾರಿ ಕಾಮಗಾರಿಗಳಲ್ಲಿ 2 ಕೋಟಿ ರೂ.ವರೆಗಿನ ಗುತ್ತಿಗೆ ಮತ್ತು 1 ಕೋಟಿ ರೂ.ವರೆಗಿನ ಖರೀದಿಯಲ್ಲಿ ಮುಸ್ಲಿಂ ಮೀಸಲಾತಿ ಕಲ್ಪಿಸುವುದಾಗಿ ರಾಜ್ಯ ಸರ್ಕಾರ ಬಜೆಟ್ ನಲ್ಲಿ ಘೋಷಿಸಿದೆ. ಸರ್ಕಾರದ ಹಿಂದೂ ವಿರೋಧಿ ನೀತಿಗೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ ಎಂದು ಪ್ರಶ್ನಿಸಿದ್ದಾರೆ.


    ಕಡುಬು ತಿನ್ನುವುದು ಕಹಿ ನೀರು ಕುಡಿಯುವುದು. ರಾಜ್ಯವನ್ನು 1,16,000 ಕೋಟಿ ರೂ. ಸಾಲದ ಶೂಲಕ್ಕೆ ದೂಡಿರುವ ಸಿದ್ದರಾಮಯ್ಯನವರ ಹದಿನಾರನೇ ಬಜೆಟ್ ಕರ್ನಾಟಕವನ್ನು ಅಕ್ಷರಶಃ ಆರ್ಥಿಕ ದುಸ್ಥಿತಿಗೆ ದೂಡಲಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಅಲ್ಪಸಂಖ್ಯಾತರಿಗೆ ಬಂಪರ್‌: ಸಾಮೂಹಿಕ ವಿವಾಹದಲ್ಲಿ ಮದ್ವೆಯಾದ ಜೋಡಿಗಳಿಗೆ 50 ಸಾವಿರ – ಬಜೆಟ್‌ ಘೋಷಣೆಗಳೇನು?

     


    ಬಜೆಟ್ ಎನ್ನುವುದು ನನ್ನ ದೃಷ್ಟಿಯಲ್ಲಿ ಕೇವಲ ಬಿಳಿಹಾಳೆಯಲ್ಲ ಎಂದು ವ್ಯಾಖ್ಯಾನಿಸಿರುವ ಸಿದ್ದರಾಮಯ್ಯನವರು ಶಾಶ್ವತ ಯೋಜನೆಗಳತ್ತ ಗಮನ ಹರಿಸಿಲ್ಲ. ಕರಾವಳಿ ಭಾಗದ ಜಿಲ್ಲೆಗಳಿಗಂತೂ ಯಾವುದೇ ಕೊಡುಗೆ ಇಲ್ಲ. ಮಂಗಳೂರಿನಿಂದ ಕಾರವಾರದವರೆಗಿನ ಕೊಂಕಣ ರೈಲ್ವೆ ಯೋಜನೆಗೆ ಸರ್ಕಾರ ನೆರವಿನ ಹಸ್ತ ಚಾಚಿಲ್ಲ ಎಂದು ದೂರಿದ್ದಾರೆ.

    ಆಕರ್ಷಣೀಯ ಘೋಷಣೆಗಳು, ಕವಿವಾಣಿಯ ಉಲ್ಲೇಖದಲ್ಲೇ ಬಜೆಟ್ ಪುಸ್ತಕ ತುಂಬಿದ್ದು, ಶಿಕ್ಷಣ, ಆರೋಗ್ಯ, ಜಲಸಂನ್ಮೂಲ, ಗ್ರಾಮೀಣಾಭಿವೃದ್ಧಿ ಯೋಜನೆಗಳ ಆಮೂಲಾಗ್ರ ಅಭಿವೃದ್ಧಿಗೆ ಯಾವುದೇ ಕೊಡುಗೆ ಇಲ್ಲ ಎಂದು ಸಿಟ್ಟು ಹೊರಹಾಕಿದ್ದಾರೆ.

  • ಬೆಂಗಳೂರಿನಲ್ಲಿ EV ಕ್ಲಸ್ಟರ್‌ಗೆ 25 ಕೋಟಿ ರೂ. – ದೇವನಹಳ್ಳಿಯಲ್ಲಿ 50 ಸಾವಿರ ಮಂದಿಗೆ ಉದ್ಯೋಗ

    ಬೆಂಗಳೂರಿನಲ್ಲಿ EV ಕ್ಲಸ್ಟರ್‌ಗೆ 25 ಕೋಟಿ ರೂ. – ದೇವನಹಳ್ಳಿಯಲ್ಲಿ 50 ಸಾವಿರ ಮಂದಿಗೆ ಉದ್ಯೋಗ

    ಬೆಂಗಳೂರು: 2025-26ನೇ ಸಾಲಿನ ಬಜೆಟ್‌ನಲ್ಲಿ (Karnataka Budget 2025) ವಾಹನಗಳ ತಯಾರಿಕೆ ಹಾಗೂ ಬಳಕೆಗೆ ಉತ್ತೇಜನ ನೀಡಲು ಬೆಂಗಳೂರು ವಲಯದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡ EV ಕ್ಲಸ್ಟರ್‌ನ್ನು ನಿರ್ಮಿಸಲು ಸರ್ಕಾರ ಮುಂದಾಗಿದೆ. ಈ ಮೂಲಕ EV ಕ್ಲಸ್ಟರ್‌ (EV Cluster) ನಿರ್ಮಾಣಕ್ಕೆ 25 ಕೋಟಿ ರೂ. ಅನುದಾನವನ್ನು ಒದಗಿಸುದಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಘೋಷಿಸಿದ್ದಾರೆ.

    ಬಜೆಟ್‌ ಘೋಷಣೆ ಏನು?
    ಸರ್ಕಾರವು Karnataka Clean Mobility Policy 2025-30 ಘೋಷಿಸಿದ್ದು, ಇದರಿಂದ ಕ್ಲೀನ್ ಮೊಬಿಲಿಟಿ ವಾಹನ ಮೌಲ್ಯ ಸರಪಳಿಯಲ್ಲಿ 50,000 ಕೋಟಿ ರೂ. ಹೂಡಿಕೆ ಆಕರ್ಷಿಸುವ ಹಾಗೂ ಸರಿಸುಮಾರು ಒಂದು ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಉದ್ದೇಶ ಹೊಂದಿದೆ. ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ Foxconn ಸಂಸ್ಥೆಯಿಂದ 21,911 ಕೋಟಿ ರೂ. ಬಂಡವಾಳ ಹೂಡಿಕೆಯೊಂದಿಗೆ ಮೊಬೈಲ್ ಫೋನ್‌ಗಳ ಉತ್ಪಾದನಾ ಘಟಕ ಪ್ರಾರಂಭಗೊಂಡಿದೆ. ಇದರಿಂದ 50,000 ಉದ್ಯೋಗ ಸೃಷ್ಟಿಯನ್ನು ನಿರೀಕ್ಷಿಸಲಾಗಿದೆ. ಈ ಕಂಪನಿಗೆ ಇ.ಎಸ್.ಡಿ.ಎಂನ ನೀತಿಯಡಿ 6,970 ಕೋಟಿ ರೂ.ಗಳ ಪ್ರೋತ್ಸಾಹ ಧನ ನೀಡಲು ಸರ್ಕಾರ ಮುಂದಾಗಿದೆ.

    ಡಿಸೆಂಬರ್ 2024ರ ಅಂತ್ಯದ ವೇಳೆಗೆ 440 ಕೋಟಿ ರೂ ವಿದೇಶಿ ಹೂಡಿಕೆ ಆಕರ್ಷಿಸುವುದರೊಂದಿಗೆ ಕರ್ನಾಟಕ ದೇಶದಲ್ಲಿ 3ನೇ ಸ್ಥಾನ ಪಡೆದಿದೆ. 88,853 ಮಿಲಿಯನ್ ಡಾಲರ್‌ ರಫ್ತು ಮಾಡುವುದರೊಂದಿಗೆ ಒಟ್ಟಾರೆ ರಫ್ತನಲ್ಲಿ ಅಗ್ರಸ್ಥಾನದಲ್ಲಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಒಟ್ಟಾರೆ ರಫ್ತನಲ್ಲಿ ರಾಜ್ಯವು 11.17% ರಷ್ಟು ಬೆಳವಣಿಗೆ ಸಾಧಿಸಿರುತ್ತದೆ. ಕರ್ನಾಟಕ ರಾಜ್ಯವು ಕೇಂದ್ರ ಸರ್ಕಾರದ Ease of Doing Business ನಲ್ಲಿಯೂ ಅತ್ಯುತ್ತಮ ಸಾಧಕ (Top Achiever) ಎಂದು ಗುರುತಿಸಲ್ಪಟ್ಟಿದೆ.

    ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಬಂಡವಾಳವನ್ನು ರಾಜ್ಯಕ್ಕೆ ಆಕರ್ಷಿಸುವ ಸಂಬಂಧ ಏರ್ಪಡಿಸಿದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ (Invest Karnataka-2025) ವಿವಿಧ ಕಂಪನಿಗಳೊಂದಿಗೆ 10.27 ಲಕ್ಷ ಕೋಟಿ ರೂ. ಹೂಡಿಕೆಗೆ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಇದರಿಂದ 6 ಲಕ್ಷಕ್ಕಿಂತ ಹೆಚ್ಚಿನ ಉದ್ಯೋಗವಕಾಶ ನಿರೀಕ್ಷಿಸಲಾಗಿದೆ.

    ರಾಜ್ಯದಲ್ಲಿ ಕೈಗಾರಿಕೆಗಳಿಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸುವ ಉದ್ದೇಶದಿಂದ ಘೋಷಿಸಲಾದ ಹೊಸ ಕೈಗಾರಿಕಾ ನೀತಿ 2025-30 ರಿಂದ 7.50 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಹಾಗೂ 20 ಲಕ್ಷ ಹೊಸ ಉದ್ಯೋಗ ಸೃಷ್ಟಿಸುವ ನಿರೀಕ್ಷೆ ಹೊಂದಿದೆ.

  • ರಾಹುಕಾಲ ಆರಂಭಕ್ಕೂ ಮೊದಲು ಬಜೆಟ್‌ ಮಂಡನೆ

    ರಾಹುಕಾಲ ಆರಂಭಕ್ಕೂ ಮೊದಲು ಬಜೆಟ್‌ ಮಂಡನೆ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಶುಕ್ರವಾರ ದಾಖಲೆಯ 16ನೇ ಬಜೆಟ್ ಮಂಡಿಸುತ್ತಿದ್ದಾರೆ. ಅಭಿವೃದ್ಧಿ ಕಾರ್ಯ ಮತ್ತು ಗ್ಯಾರಂಟಿಗಳನ್ನು (Congress Guarantee) ಬ್ಯಾಲೆನ್ಸ್ ಮಾಡುವ ದೊಡ್ಡ ಸವಾಲು ಸಿಎಂ ಮುಂದಿದೆ.

    ಶುಕ್ರವಾರ ರಾಹುಕಾಲ ಬೆಳಗ್ಗೆ 10:30ಕ್ಕೆ ಆರಂಭವಾಗುತ್ತದೆ. ರಾಹುಕಾಲ ಶುರುವಾಗುವ ಮುನ್ನ ಅಂದ್ರೆ ಬೆಳಗ್ಗೆ 10:15ಕ್ಕೆ ಸಿಎಂ ಬಜೆಟ್ ಮಂಡನೆ ಭಾಷಣ ಆರಂಭಿಸಿದ್ದಾರೆ. ಸಿಎಂ ಅವರ ಕಾರ್ಯಕಲಾಪಗಳಪಟ್ಟಿಯಲ್ಲಿ ಬೆಳಗ್ಗೆ 10:15ಕ್ಕೆ ಬಜೆಟ್‌ ಮಂಡನೆ ಎಂದು ಉಲ್ಲೇಖವಾಗಿದೆ.

    ಮಂಡಿನೋವಿನ ಕಾರಣ ಸಿಎಂ ಆರಂಭದ 10 ನಿಮಿಷ ಮಾತ್ರ ನಿಂತು ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಗಾತ್ರ 4 ಲಕ್ಷ ಕೋಟಿ ರೂ. ದಾಟುವ ನಿರೀಕ್ಷೆ ಇದೆ. ಅಂದಾಜು 1.25 ಲಕ್ಷ ಕೋಟಿ ರೂ. ಸಾಲದ ಪ್ರಸ್ತಾಪ ಮಾಡುವ ಸಂಭವ ಇದೆ.  ಇದನ್ನೂ ಓದಿ: ಆಕ್ಸ್‌ಫರ್ಡ್‌ ವಿವಿ ಬ್ಲಾಗ್‌ನಲ್ಲಿ ಕರ್ನಾಟಕ ಮಾದರಿ ಶ್ಲಾಘನೆ – ರಾಜ್ಯಪಾಲರ ಭಾಷಣದ ಅಸಲಿಯತ್ತನ್ನು ಬಯಲು ಮಾಡಿದ ಅಶೋಕ್‌

    ಸಿದ್ದು ಬಜೆಟ್ ಏನಿರಬಹುದು?
    – ಗ್ಯಾರಂಟಿಗಳು ಯಥಾಸ್ಥಿತಿ: 60-65 ಸಾವಿರ ಕೋಟಿ ರೂ. ಮೀಸಲು
    – ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಹೆಚ್ಚಳ
    – ಬೆಂಗಳೂರು ಅಭಿವೃದ್ಧಿಗಾಗಿ ವಿಶೇಷ ಅನುದಾನ ಇದನ್ನೂ ಓದಿ: ಪೊಲೀಸ್‌ ಜೀಪನ್ನೇ ಪಲ್ಟಿ ಮಾಡಿದ್ದ ಹುಬ್ಬಳ್ಳಿ ಗಲಭೆಕೋರರು ಅಮಾಯಕರೇ? – ಕೇಸ್ ವಾಪಸ್‌ಗೆ ಸರ್ಕಾರದ ಅರ್ಜಿ
    – ರಾಜಸ್ವ ಸಂಗ್ರಹ ಹೆಚ್ಚಿಸಲು ತೈಲ ಸೆಸ್ ಸೇರಿ ಕೆಲ ತೆರಿಗೆ ಪರಿಷ್ಕರಣೆ
    – ಪ್ರತಿ ಊರು- ಎಲ್ಲರಿಗೂ ಸೂರು ಯೋಜನೆಯಡಿ ಮನೆ ನಿರ್ಮಾಣ
    – ಮಹಿಳಾ ಸಹಕಾರ ಸಂಘಗಳಿಗೆ ಸಾಲ ಸೌಲಭ್ಯ ಮುಂದುವರಿಕೆ
    – ಆಶಾ, ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ

     

  • ಬಜೆಟ್ ಬಳಿಕ ಸಿಎಂ ಸಿದ್ದರಾಮಯ್ಯ ಸಂದೇಶ – ಮಹಾಸ್ಫೋಟಕ‌ ತಿರುವು

    ಬಜೆಟ್ ಬಳಿಕ ಸಿಎಂ ಸಿದ್ದರಾಮಯ್ಯ ಸಂದೇಶ – ಮಹಾಸ್ಫೋಟಕ‌ ತಿರುವು

    ಬೆಂಗಳೂರು: ರಾಜ್ಯ ಬಜೆಟ್ ಬಳಿಕ‌ ಸಿಎಂ ಸಿದ್ದರಾಮಯ್ಯ (CM Siddaramaiah) ರಾಜಕೀಯ ದಾಳ ಉರುಳಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. 16ನೇ ದಾಖಲೆ ಬಜೆಟ್ (Budget) ಮಂಡನೆ ಬಳಿಕ ಪೊಲಿಟಿಕಲ್ ಟ್ವಿಸ್ಟ್ ಸಿಗುವ ಲೆಕ್ಕಚಾರಗಳು ಗರಿಗೆದರಲಿವೆ.

    ಪವರ್ ಶೇರ್ ವಿಚಾರವಾಗಿ ಯಾವುದೇ ಸ್ಪಷ್ಟತೆ ಸಿಗದೇ ಕಾಂಗ್ರೆಸ್ (Congress) ಒಳಗಿನ ವಾರ್ ನಿಲ್ಲುತ್ತಿಲ್ಲ. ಯಾರಿಗೆ ಹೇಳಬೇಕು? ಯಾರನ್ನ ಸಮಾಧಾನಪಡಿಸಬೇಕು ಎಂಬ ಗೊಂದಲದಲ್ಲಿ ಕಾಂಗ್ರೆಸ್ ಹೈಕಮಾಂಡ್ (High Command) ಇದೆ. ಹಾಗಾಗಿ ಹೈಕಮಾಂಡ್ ಧರ್ಮಸಂಕಟಕ್ಕೆ ಸಿಎಂ ಸಿದ್ದರಾಮಯ್ಯ ಅವರೇ ಪರಿಹಾರ ಮಾರ್ಗ ತೋರಿಸುವ ಬಗ್ಗೆ ಕುತೂಹಲ ಇದೆ. ಇದನ್ನೂ ಓದಿ: ಅನ್ನಭಾಗ್ಯ ದುಡ್ಡು ಇಲ್ಲ, ಗೃಹಲಕ್ಷ್ಮಿಯೂ ಇಲ್ಲ – ಗ್ಯಾರಂಟಿಗೆ ʼಗ್ಯಾರಂಟಿʼ ಇಲ್ಲ!

     

    ಸದ್ಯ ಸಿಎಂ ಸಿದ್ದರಾಮಯ್ಯ ಬಜೆಟ್ ಸಿದ್ಧತಾ ಸಭೆಗಳಲ್ಲಿ ಬ್ಯುಸಿ ಇದ್ದಾರೆ. ದಾಖಲೆಯ 16ನೇ ಬಜೆಟ್ ಮಂಡನೆ ಬಳಿಕ ಪೊಲಿಟಿಕಲ್ ಗೇಮ್ ಚೇಂಜ್ ಗೆ ಮುಂದಾಗುವ ಸಾಧ್ಯತೆ ಇದೆ. ದೇವರಾಜ ಅರಸು ಅವರ ದಾಖಲೆ ಬ್ರೇಕ್ ಮಾಡಿ ಹೊಸ ದಾಖಲೆ ಬರೆಯವ ಉತ್ಸಾಹದಲ್ಲಿರುವ ಸಿಎಂ ಸಿದ್ದರಾಮಯ್ಯ, ದಾಖಲೆ ಬಳಿಕ‌ ಮುಂದೇನು ಎಂಬ ಬಗ್ಗೆ ಸೂಕ್ಷ್ಮವಾಗಿ ಹೈಕಮಾಂಡ್ ಗೆ ಮನವರಿಕೆ ಮಾಡಿಕೊಡುವ ಸಾಧ್ಯತೆ ಬಗ್ಗೆ ಸಿದ್ದು ಆಪ್ತ ವಲಯದಲ್ಲಿ ಚರ್ಚೆ ನಡೆದಿದೆ. ಇದನ್ನೂ ಓದಿ:ಮೂವರನ್ನು ಕೊಲೆ ಮಾಡಿದ್ದೇನೆ, ನಾನು ಸಾಯ್ತಿನಿ – ಅಮೆರಿಕದಲ್ಲಿರುವ ಅಣ್ಣನಿಗೆ ಫೋನ್‌ ಮಾಡಿ ಹೇಳಿದ್ದ ಚೇತನ್‌

    ರೆಕಾರ್ಡ್ ಎಂಬ ಚೆಕ್ ಮೇಟ್ ಸುತ್ತ ಅನುಮಾನದ ಹುತ್ತ ಹೆಚ್ಚಾಗಿದ್ದು,ಹೈಕಮಾಂಡ್ ನಾಜೂಕಾಗಿ ಬಗೆಹರಿಸುತ್ತಾ ಎಂಬ ಪ್ರಶ್ನೆ ಎದ್ದಿದೆ. ಸಿದ್ದರಾಮಯ್ಯ ಆ ಸಂದೇಶದಿಂದ ರಾಜಕೀಯ ದಿಕ್ಕು ಬದಲಾಗುತ್ತಾ? ಯಾರಿಗೆ ಲಕ್? ಯಾರಿಗೆ ಶಾಕ್? ಹೈಕಮಾಂಡ್‌ಗೆ ಸ್ಪಷ್ಟನೆ ನೀಡುತ್ತಾರಾ ಸಿಎಂ ಸಿದ್ದರಾಮಯ್ಯ ಎಂಬ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕಿದೆ.

     

  • ದೇವೇಗೌಡರು ಕರ್ನಾಟಕಕ್ಕೆ ಕೇಂದ್ರ ಮಾಡಿರೋ ಅನ್ಯಾಯದ ಬಗ್ಗೆ ಮಾತಾಡಲಿ: ಕೃಷ್ಣ ಬೈರೇಗೌಡ

    ದೇವೇಗೌಡರು ಕರ್ನಾಟಕಕ್ಕೆ ಕೇಂದ್ರ ಮಾಡಿರೋ ಅನ್ಯಾಯದ ಬಗ್ಗೆ ಮಾತಾಡಲಿ: ಕೃಷ್ಣ ಬೈರೇಗೌಡ

    ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರು (HD Deve Gowda) ಕರ್ನಾಟಕ ಸರ್ಕಾರದ (Congress) ಬಗ್ಗೆ ಮಾತಾಡೋ ಬದಲು ರಾಜ್ಯಕ್ಕೆ ಅನ್ಯಾಯ ಆಗಿರೋ ಬಗ್ಗೆ ಸಂಸತ್‌ನಲ್ಲಿ ಮಾತನಾಡಲಿ ಎಂದು ಸಚಿವ ಕೃಷ್ಣ ಬೈರೇಗೌಡ (Krishna Byre Gowda) ದೇವೇಗೌಡರಿಗೆ ತಿರುಗೇಟು ಕೊಟ್ಟಿದ್ದಾರೆ.

    ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಸಭೆಯಲ್ಲಿ ಮಾತಾಡಿದ್ದ ದೇವೇಗೌಡರ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, ದೇವೇಗೌಡರು ಸಂಸತ್‌ನಲ್ಲಿ ಮಾತನಾಡಬೇಕಿರೋದು ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಮಾಡಿರೋ ಅನ್ಯಾಯದ ಬಗ್ಗೆ. ಹೆಜ್ಜೆ ಹೆಜ್ಜೆಗೂ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ಕೇಂದ್ರ ಸರ್ಕಾರದ ಬಜೆಟ್ (Union Budget) ಕರ್ನಾಟಕಕ್ಕೆ ಕರಾಳ ಅಧ್ಯಾಯ ಆಗಿದೆ. ತೆರಿಗೆ ಕಟ್ಟುವ, ಕಷ್ಟಪಟ್ಟು ದುಡಿಯೋ ಕರ್ನಾಟಕ ಜನರ ತೆರಿಗೆ ದುಡ್ಡು ಲೂಟಿ ಆಗುತ್ತಿದೆ. ಕರ್ನಾಟಕದ ಬಗ್ಗೆ ಇವರಿಗೆ ಬದ್ಧತೆ ಇದ್ದರೆ ಕರ್ನಾಟಕಕ್ಕೆ ಮೊದಲು ಕೇಂದ್ರದಿಂದ ನ್ಯಾಯ ಕೊಡಿಸಲಿ. ಅದನ್ನ ಬಿಟ್ಟು ಅವರು ಮಾಡೋ ಅನ್ಯಾಯವನ್ನ ಮುಚ್ಚಿಹಾಕಿ ಇವರು ಕೂಡಾ ಅನ್ಯಾಯದಲ್ಲಿ ಪಾಲಾಗೋದು ಬಿಡಲಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ದುರಂತ| ಮೂರಂತಸ್ತಿನ ಕಟ್ಟಡಕ್ಕೆ ಬೆಂಕಿ, ಇಬ್ಬರು ಬಲಿ

    ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುತ್ತೇನೆ ಎಂದು ಚುನಾವಣೆ ಸಮಯದಲ್ಲಿ ಹೇಳಿದ್ದರು. ಅದನ್ನ ಮೊದಲು ಕೊಡಿಸಲಿ. ಮೇಕೆದಾಟಿಗೆ ಕೇಂದ್ರ ಸರ್ಕಾರ ಇನ್ನೂ ಅನುಮತಿ ಕೊಟ್ಟಿಲ್ಲ. ಸುಪ್ರೀಂ ಕೋರ್ಟ್ ಕೂಡ ಮೇಕೆದಾಟಿಗೆ ವಿರೋಧ ಇಲ್ಲ ಎಂದು ಹೇಳಿದೆ. ದೇವೇಗೌಡರೇ ಆಗಲಿ ಯಾರೇ ಆಗಲಿ ಮೊದಲು ಅನುಮತಿ ಕೊಡಿಸಿ. ಚನ್ನಪಟ್ಟಣ ಎಲೆಕ್ಷನ್‌ನಲ್ಲಿ ಕೈಹಿಡಿದು ಸಹಿ ಹಾಕಿಸುತ್ತೇವೆ ಎಂದುಭಾಷಣ ಮಾಡಿದರು. ಅದಕ್ಕೆ ಮೊದಲು ಅನುಮತಿ ಕೊಡಿಸಲಿ. ನಮ್ಮ ರಾಜ್ಯಕ್ಕೆ ತೆರಿಗೆ ಪಾಲಿನಲ್ಲಿ ಅನ್ಯಾಯ ಆಗುತ್ತಿದೆ. ಅದನ್ನ ಸರಿ ಮಾಡಲಿ. ಆಮೇಲೆ ಉಳಿದಿದ್ದ ವಿಷಯ ಮಾತನಾಡಲು ಅವರಿಗೂ ನೈತಿಕತೆ ಇರುತ್ತದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ವಾಲ್ಮೀಕಿ ಹಗರಣ | ಸಿಬಿಐ ತನಿಖೆ ಚುರುಕು ಮೂವರು ಆರೋಪಿಗಳಿಗೆ ನೋಟಿಸ್

  • ಜೆಸಿಬಿ ಬಳಸಿ ಕಾಲ್ತುಳಿತದ ಸ್ಥಳದಲ್ಲಿ ಸಾಕ್ಷ್ಯ ನಾಶ: ಅಖಿಲೇಶ್‌ ಕಿಡಿ

    ಜೆಸಿಬಿ ಬಳಸಿ ಕಾಲ್ತುಳಿತದ ಸ್ಥಳದಲ್ಲಿ ಸಾಕ್ಷ್ಯ ನಾಶ: ಅಖಿಲೇಶ್‌ ಕಿಡಿ

    ನವದೆಹಲಿ: ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ (Maha Kumbh Mela Stampede) ಸಾವನ್ನಪ್ಪಿದವರ ನಿಜವಾದ ಸಂಖ್ಯೆಯನ್ನು ಸರ್ಕಾರ ಮರೆಮಾಡುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಆರೋಪಿಸಿದ್ದಾರೆ. ಕಾಲ್ತುಳಿತದಲ್ಲಿ 30 ಜನರು ಸಾವನ್ನಪ್ಪಿದ್ದಾರೆ ಮತ್ತು 60 ಜನರು ಗಾಯಗೊಂಡಿದ್ದಾರೆ ಎಂದು ಸರ್ಕಾರ ಹೇಳಿದೆ. ಆದರೆ ಈ ಸಂಖ್ಯೆ ಹೆಚ್ಚಾಗಿದೆ ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.

    ಲೋಕಸಭೆಯಲ್ಲಿ (Lok Sabha) ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದ ಸಾವುನೋವುಗಳ ಬಗ್ಗೆ ಅಧಿಕೃತ ಡೇಟಾವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ಇದನ್ನೂ ಓದಿ: ಮಾರ್ಚ್ 7ಕ್ಕೆ ರಾಜ್ಯ ಬಜೆಟ್ ಮಂಡನೆ?

    ಸರ್ಕಾರ ನಿರಂತರವಾಗಿ ಬಜೆಟ್ ಅಂಕಿ ಅಂಶಗಳನ್ನು ನೀಡುವ ಹಾಗೆ ಮಹಾ ಕುಂಭದಲ್ಲಿ ಮಡಿದವರ ಅಂಕಿ ಅಂಶಗಳನ್ನು ಸಹ ನೀಡಬೇಕು. ಮಹಾ ಕುಂಭದ ವ್ಯವಸ್ಥೆಗಳ ಬಗ್ಗೆ ಸ್ಪಷ್ಟೀಕರಣ ನೀಡಲು ಸರ್ವಪಕ್ಷ ಸಭೆ ಕರೆಯಬೇಕು. ಮಹಾ ಕುಂಭ ವಿಪತ್ತು ನಿರ್ವಹಣೆ ಜವಾಬ್ದಾರಿಯನ್ನು ಸೇನೆಗೆ ನೀಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ:  ಬೆಂಗಳೂರು ದೆಹಲಿ ಆಗೋದು ಬೇಡ: ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಸಾರಿಗೆ ಸಚಿವರಿಗೆ ಗುಂಡೂರಾವ್ ಪತ್ರ

    ಕಾಲ್ತುಳಿತದ ಸ್ಥಳದಲ್ಲಿ ಸಾಕ್ಷ್ಯಗಳನ್ನು ನಾಶಮಾಡಲು ಜೆಸಿಬಿಗಳನ್ನು ಬಳಸಲಾಗಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಅಖಿಲೇಶ್ ಗಂಭೀರ ಆರೋಪ ಮಾಡಿದರು. ಮಹಾ ಕುಂಭ ಅಪಘಾತದಲ್ಲಿ ಸಾವನ್ನಪ್ಪಿದವರ ಅಂಕಿಅಂಶಗಳು, ಗಾಯಾಳುಗಳ ಚಿಕಿತ್ಸೆ, ಔಷಧಿಗಳ ಲಭ್ಯತೆ, ವೈದ್ಯರು, ಆಹಾರ, ನೀರು, ಸಾರಿಗೆ ವಿವರಗಳನ್ನು ಸಂಸತ್ತಿನಲ್ಲಿ ಮಂಡಿಸಬೇಕು. ಮಹಾ ಕುಂಭ ದುರಂತಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಸತ್ಯವನ್ನು ಮರೆಮಾಚಿದವರಿಗೆ ಶಿಕ್ಷೆ ವಿಧಿಸಬೇಕು. ಯಾವುದೇ ಅಪರಾಧವಿಲ್ಲದಿದ್ದರೆ ಅಂಕಿ ಅಂಶಗಳನ್ನು ಏಕೆ ಮರೆಮಾಡಲಾಗಿದೆ ಎಂದು ಇದೇ ವೇಳೆ ಪ್ರಶ್ನಿಸಿದರು. ಇದನ್ನೂ ಓದಿ: ಅಮೆರಿಕದಿಂದ ಅಕ್ರಮ ವಲಸಿಗರು ಗಡಿಪಾರು – 205 ಭಾರತೀಯ ಪ್ರಯಾಣಿಕರಿಗೆ ವಿಮಾನದಲ್ಲಿ ಒಂದೇ ಟಾಯ್ಲೆಟ್‌

    ಕಾಲ್ತುಳಿತದ ನಂತರ ನೂರಾರು ಜನರು ಕಾಣೆಯಾಗಿದ್ದಾರೆ. ಘಟನೆಯ ನಂತರ 15,000 ಜನರು ತಮ್ಮ ಕುಟುಂಬ ಸದಸ್ಯರು ಕಾಣೆಯಾಗಿದ್ದಾರೆ ಹೇಳಿದ್ದಾರೆ ಈ ಬಗ್ಗೆ ಸರ್ಕಾರ ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ರಾಮ್ ಗೋಪಾಲ್ ಯಾದವ್ ಹೇಳಿದ್ದಾರೆ. ಮಹಾ ಕುಂಭಮೇಳದಲ್ಲಿ 30 ಜನರು ಸಾವನ್ನಪ್ಪಿದ ಕಾಲ್ತುಳಿತದ ಬಗ್ಗೆ ತಕ್ಷಣ ಚರ್ಚಿಸಬೇಕೆಂದು ಒತ್ತಾಯಿಸಿದರು. ಇದನ್ನೂ ಓದಿ: ವಿಸಿ ನಾಲೆಗೆ ಕಾರು ಬಿದ್ದು ದುರಂತ: ಮೃತರ ಸಂಖ್ಯೆ 3ಕ್ಕೆ ಏರಿಕೆ