Tag: ಬಜಾರ್

  • ಧನ್ವೀರ್ ಬರ್ತ್‍ಡೇಗೆ ಹೊಸ ರಂಗು ತುಂಬಿತು ಬಂಪರ್ ಟೀಸರ್!

    ಧನ್ವೀರ್ ಬರ್ತ್‍ಡೇಗೆ ಹೊಸ ರಂಗು ತುಂಬಿತು ಬಂಪರ್ ಟೀಸರ್!

    ಗಂಟೆ ಕಳೆಯೋದರೊಳಗೆ ದಾಖಲೆಯ ವೀಕ್ಷಣೆ!

    ಬಜಾರ್ ಖ್ಯಾತಿಯ ಧನ್ವೀರ್ ನಟನೆಯ ಬಂಪರ್ ಚಿತ್ರ ವರ್ಷದ ಹಿಂದೆಯೇ ಸಾಕಷ್ಟು ಸದ್ದು ಮಾಡಿದೆ. ಮೊದಲ ಚಿತ್ರದಲ್ಲಿಯೇ ಮಾಸ್ ಲುಕ್ಕಲ್ಲಿ ಮಿಂಚಿದ್ದ ಧನ್ವೀರ್ ಬಂಪರ್ ಮೂಲಕ ಮತ್ತೊಂದು ಭರ್ಜರಿ ಗೆಟಪ್ಪಿನಲ್ಲಿ ಎಂಟ್ರಿ ಕೊಡುತ್ತಿರೋ ವಿಚಾರವೂ ಈ ಟೈಟಲ್ ಮೂಲಕವೇ ಸ್ಪಷ್ಟವಾಗಿತ್ತು. ಖ್ಯಾತ ಯುವ ನಿರ್ಮಾಪಕ ಸುಪ್ರೀತ್ ನಿರ್ಮಾಣ ಮಾಡಿರೋ ಈ ಚಿತ್ರದ ಮತ್ತಷ್ಟು ಚಿತ್ರಣವೀಗ ಜಾಹೀರುಗೊಂಡಿದೆ. ನಾಯಕ ಧನ್ವೀರ್ ಹುಟ್ಟುಹಬ್ಬಕ್ಕೆ ಗಿಫ್ಟ್ ಎಂಬಂತೆ ಚಿತ್ರತಂಡ ಪರಿಣಾಮಕಾರಿಯಾದ ಟೀಸರ್ ಒಂದನ್ನು ಲಾಂಚ್ ಮಾಡಿದೆ. ಈ ಮೂಲಕ ಹೆಸರಿಗೆ ತಕ್ಕುದಾದ ಕಂಟೆಂಟಿನ ಸಿನಿಮಾ ನೋಡೋ ಭಾಗ್ಯ ಪ್ರೇಕ್ಷಕರಿಗೆ ಸಿಗಲಿರೋದು ಪಕ್ಕಾ ಆಗಿದೆ.

    ಇದು ಹರಿ ಸಂತೋಷ್ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಚಿತ್ರ. ಇದರ ಟೀಸರ್ ಬಿಡುಗಡೆಗೊಂಡು ಅತ್ಯಂತ ಕಡಿಮೆ ಅವಧಿಯಲ್ಲಿಯೇ ಪಡೆದುಕೊಂಡಿರೋ ವೀಕ್ಷಣೆ, ಅದರೊಂದಿಗೆ ಸೃಷ್ಟಿಯಾಗಿರೋ ಕ್ರೇಜ್, ಸಿಕ್ಕಿರೋ ಅಪಾರ ಪ್ರಮಾಣದ ಪ್ರತಿಕ್ರಿಯೆಗಳೆಲ್ಲವೂ ಧನ್ವೀರ್ ಪಾಲಿಗೆ ಈ ಹುಟ್ಟುಹಬ್ಬದ ಸಂಭ್ರಮವನ್ನ ಇಮ್ಮಡಿಸಿದೆ. ಅದರಾಚೆ ನಿಂತು ನೋಡಿದರೂ ಬಂಪರ್ ಟೀಸರ್‍ನದ್ದು ಭರವಸೆ ಮೂಡಿಸುವಂಥಾ ಖದರ್. ಧನ್ವೀರ್ ಮೇಲೆ ಮೊದಲ ಚಿತ್ರದಲ್ಲಿ ಎಂಥಾ ನಿರೀಕ್ಷೆ ಮೊಳೆತುಕೊಂಡಿತ್ತೋ ಅದನ್ನು ಮೀರಿಸುವಂಥ ರಗಡ್ ಕಥಾನಕದ ಹೊಳಹು ಸಲೀಸಾಗಿ ಸಿಕ್ಕಂತಾಗಿದೆ.

    ಧನ್ವೀರ್ ಮೊದಲ ಸಿನಿಮಾದಲ್ಲಿಯೇ ಮಾಸ್ ಹೀರೋ ಆಗಿ ಅವತರಿಸಿದ್ದವರು. ನಟನೆ ಸೇರಿದಂತೆ ಎಲ್ಲದರಲ್ಲಿಯೂ ಪಳಗಿಕೊಂಡಿದ್ದ ಧನ್ವೀರ್‍ಗೆ ಒಂದೇ ಒಂದು ಸಿನಿಮಾ ಮೂಲಕ ಕುದುರಿಕೊಂಡಿರೋ ಅಭಿಮಾನಿ ಬಳಗ ನಿಜಕ್ಕೂ ಬೆರಗಾಗುವಂತಿದೆ. ಅಂಥಾ ಅಭಿಮಾನಿಗಳೆಲ್ಲ ಧನ್ವೀರ್ ಅವರನ್ನು ಮತ್ತಷ್ಟು ರಿಗಡ್ ಲುಕ್ಕಿನಲ್ಲಿ ನೋಡಲು ಕಾತರಿಸಿದ್ದರು. ಅದನ್ನು ಸಂಪೂರ್ಣವಾಗಿ ತಣಿಸುವಂಥ ಗೆಟಪ್ಪಿನಲ್ಲಿ ಧನ್ವೀರ್ ಕಂಗೊಳಿಸಿದ್ದಾರೆ. ಮಾಸ್ ಮಾತ್ರವಲ್ಲದೆ ಸಖತ್ ಸ್ಟೈಲಿಶ್ ಆಗಿಯೂ ಅವರು ಕಾಣಿಸಿಕೊಂಡಿದ್ದಾರೆ.

    ಕಳೆದ ವರ್ಷವೇ ಧನ್ವೀರ್ ಹುಟ್ಟುಹಬ್ಬದಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಪರ್ ಚಿತ್ರದ ಫಸ್ಟ್ ಲುಕ್ ಬಿಡುಗಡೆಗೊಳಿಸಿದ್ದರು. ಆ ದೆಸೆಯಿಂದಲೇ ಭಾರೀ ಸೌಂಡು ಮಾಡಿದ್ದ ಬಂಪರ್ ಕೊರೊನಾ ಕಾಟ ಇಲ್ಲದೇ ಹೋಗಿದ್ದರೆ ಈ ಹೊತ್ತಿಗೆಲ್ಲ ಬಿಡುಗಡೆಯಾಗಿರುತ್ತಿತ್ತೇನೋ. ಆದರೆ, ಕೊರೊನಾದಿಂದ ಕೊಂಚ ಹಿನ್ನಡೆಯಾದರೂ ಬಂಪರ್ ಅನ್ನು ಮಜಬೂತಾಗಿಯೇ ಸಿದ್ಧಗೊಳಿಸಲಾಗಿದೆ. ಅದಕ್ಕೆ ಲಕ್ಷ ಲಕ್ಷ ವೀಕ್ಷಣೆ ಪಡೆದುಕೊಂಡು ಮುನ್ನುಗ್ಗುತ್ತಿರೋ ಈ ಟೀಸರ್‍ಗಿಂತಲೂ ಬೇರೆ ಸಾಕ್ಷಿ ಬೇಕಿಲ್ಲ.

  • ‘ಬಂಪರ್’ಗೆ ಕೆಜಿಎಫ್ ಖ್ಯಾತಿಯ ಗರುಡ ರಾಮ್ ವಿಲನ್!

    ‘ಬಂಪರ್’ಗೆ ಕೆಜಿಎಫ್ ಖ್ಯಾತಿಯ ಗರುಡ ರಾಮ್ ವಿಲನ್!

    ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರದ ಮೂಲಕ ನಾಯಕ ನಟನಾಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿಕೊಟ್ಟ ಭರವಸೆಯ ನಟ ಧನ್ವೀರ್. ಮೊದಲ ಸಿನಿಮಾದಲ್ಲೇ ಮಾಸ್ ಪ್ರೇಕ್ಷಕರ ಮನ ಗೆದ್ದ ಧನ್ವೀರ್ ಈಗ ಎರಡನೇ ಚಿತ್ರ ‘ಬಂಪರ್’ಗೆ ಸಿದ್ಧರಾಗುತ್ತಿದ್ದಾರೆ. ಹರಿ ಸಂತೋಷ್ ನಿರ್ದೇಶನದ ಬಂಪರ್ ಚಿತ್ರದಲ್ಲಿ ಧನ್ವೀರ್ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

    ಇದೀಗ ಬಂಪರ್ ಚಿತ್ರತಂಡದಿಂದ ‘ಬಂಪರ್’ ಸುದ್ದಿಯೊಂದು ಹೊರ ಬಿದ್ದಿದೆ. ಕೆಜಿಎಫ್ ಚಿತ್ರದಲ್ಲಿ ಗರುಡನಾಗಿ ಮಿಂಚಿದ್ದ ರಾಮ್ ಬಂಪರ್ ಚಿತ್ರದಲ್ಲಿ ವಿಲನ್ ಆಗಿ ಧನ್ವೀರ್ ಎದುರು ಸೆಣಸಾಡೋದು ಕನ್ಫರ್ಮ್ ಆಗಿದೆ.

    ಹೌದು, ಕೆಜಿಎಫ್ ಚಿತ್ರದಲ್ಲಿ ಗರುಡ ಪಾತ್ರದಲ್ಲಿ ಖಡಕ್ ವಿಲನ್ ಆಗಿ ಬಣ್ಣ ಹಚ್ಚಿದ್ದ ರಾಮ್ ಸಖತ್ ಫೇಮಸ್ ಆಗಿದ್ರು. ಮೊದಲ ಚಿತ್ರದಲ್ಲೇ ರಾಮ್ ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡು ಜನಪ್ರಿಯತೆ ಗಳಿಸಿಕೊಂಡ್ರು. ಟಾಲಿವುಡ್, ಕಾಲಿವುಡ್ ಅಂಗಳದಿಂದಲೂ ರಾಮ್‍ಗೆ ವಿಲನ್ ಆಗಿ ನಟಿಸಲು ಆಫರ್ ಬರತೊಡಗಿತ್ತು. ಇದೀಗ ಹರಿ ಸಂತೋಷ್ ನಿರ್ದೇಶನದ ಬಂಪರ್ ಚಿತ್ರಕ್ಕೆ ರಾಮ್ ವಿಲನ್ ಆಗಿ ಆಯ್ಕೆ ಆಗಿದ್ದು, ಚಿತ್ರದ ಮೇಲಿನ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ.

    ‘ಬಂಪರ್’ ಚಿತ್ರ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಭರಾಟೆ ಖ್ಯಾತಿಯ ನಿರ್ಮಾಪಕ ಸುಪ್ರಿತ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಫ್ಯಾಮಿಲಿ ಎಂಟರ್ ಟೈನ್ಮೆಂಟ್ ಚಿತ್ರವಾಗಿರೋ ಬಂಪರ್ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನವಿದೆ.

  • ಬಜಾರಲ್ಲಿ ಹಾರಾಡಲಿರೋದು ಭೂಗತ ಪಾರಿವಾಳ!

    ಬಜಾರಲ್ಲಿ ಹಾರಾಡಲಿರೋದು ಭೂಗತ ಪಾರಿವಾಳ!

    ಬೆಂಗಳೂರು: ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರ ಈಗಾಗಲೇ ವಿಭಿನ್ನವಾಗಿರೋ ಪೋಸ್ಟರ್, ಟ್ರೈಲರ್‍ಗಳಿಂದಾಗಿ ಸಖತ್ ಸೌಂಡ್ ಮಾಡುತ್ತಿದೆ. ಫೆಬ್ರವರಿ ಒಂದರಂದು ತೆರೆ ಕಾಣುತ್ತಿರೋ ಈ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿರೋ ಕುತೂಹಲ ಒಂದೆರಡಲ್ಲ. ಅದೆಲ್ಲದಕ್ಕೂ ಕಾರಣ ಪಾರಿವಾಳ!

    ಈವರೆಗೂ ಪಾರಿವಾಳಗಳನ್ನು ಸಿನಿಮಾಗಳಲ್ಲಿ ಬಳಸುವ ಪರಿಪಾಠ ನಡೆದುಕೊಂಡು ಬಂದಿದೆ. ಆದರೆ ಪಾರಿವಾಳಗಳೇ ಪ್ರಧಾನವಾಗಿರುವ, ಅದರ ಮೂಲಕವೇ ಕಥೆ ಬಿಚ್ಚಿಕೊಳ್ಳುವ ಸಿನಿಮಾಗಳು ಬಂದಿಲ್ಲ. ಈ ನಿಟ್ಟಿನಲ್ಲಿ ಬಜಾರ್ ಚಿತ್ರ ಮೈಲಿಗಲ್ಲಾಗಿ ದಾಖಲಾಗುತ್ತದೆ.

    ಬೆಂಗಳೂರಿನಂಥಾ ನಗರಗಳಲ್ಲಿ ಪಾರಿವಾಳಗಳ ರೇಸ್ ಆಗಾಗ ನಡೆಯುತ್ತಿರುತ್ತದೆ. ಈಗ ಮೋಜಿಗಷ್ಟೇ ಸೀಮಿತವಾಗಿರೋ ಈ ಆಟ ಒಂದು ಕಾಲದಲ್ಲಿ ರೌಡಿಸಂನ ಸೂತ್ರವಾಗಿತ್ತೆಂಬುದು ಅಚ್ಚರಿಯ ವಿಚಾರ. ಅಂಥಾ ಸೂಕ್ಷ್ಮ ಕಥೆಯನ್ನು ಕಲೆ ಹಾಕಿಯೇ ಸುನಿ ಈ ಚಿತ್ರವನ್ನು ರೂಪಿಸಿದ್ದಾರೆ. ನವ ನಾಯಕ ಧನ್ವೀರ್ ಇಲ್ಲಿ ವಿಭಿನ್ನವಾದ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಈ ಮೂಲಕವೇ ಅವರು ನಾಯಕನಾಗಿಯೂ ಅದ್ಧೂರಿ ಎಂಟ್ರಿ ಕೊಡುವ ಸನ್ನಾಹದಲ್ಲಿದ್ದಾರೆ.

    https://www.youtube.com/watch?v=m1gTKSLidMs

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಜಾರ್: ಸಿಂಪಲ್ ಸುನಿಯ ಸಿನಿ ಜರ್ನಿ ಸಲೀಸಿನದ್ದಲ್ಲ!

    ಬಜಾರ್: ಸಿಂಪಲ್ ಸುನಿಯ ಸಿನಿ ಜರ್ನಿ ಸಲೀಸಿನದ್ದಲ್ಲ!

    ಸಿಂಪಲ್ಲಾಗೊಂದು ಲವ್ ಸ್ಟೋರಿ ಚಿತ್ರದ ಮೂಲಕವೇ ಸ್ಟಾರ್ ನಿರ್ದೇಶಕರಾಗಿ ಹೊರ ಹೊಮ್ಮಿದವರು ಸುನಿ. ಈ ಚಿತ್ರದ್ದು ಕನ್ನಡ ಚಿತ್ರರಂಗದಲ್ಲಿಯೇ ಅಚ್ಚರಿದಾಯಕವಾದ ಗೆಲುವು. ಒಂದು ಹೊಸ ತಂಡ, ಫ್ರೆಶ್ ಆದ ಕಥೆಯೊಂದಿಗೆ ಸುನಿ ಮಾಡಿದ್ದ ಮೋಡಿ ಸಣ್ಣದೇನಲ್ಲ. ಹೊರ ಜಗತ್ತಿನ ಪಾಲಿಗೆ ಸುನಿ ಸಿಂಪಲ್ಲಾಗೊಂದ್ ಲವ್ ಸ್ಟೋರಿ ಮೂಲಕ ಏಕಾಏಕಿ ಉದ್ಭವಿಸಿದ ಹುಡುಗ ಅನ್ನಿಸಿದ್ದರೂ ಇರಬಹುದು. ಆದರೆ, ಸುನಿ ಯುವ ನಿರ್ದೇಶಕ ಸಿಂಪಲ್ ಸುನಿ ಆಗಿದ್ದರ ಹಾದಿಯೇನೂ ಅಷ್ಟು ಸಲೀಸಿನದ್ದಲ್ಲ.

    ಹೆಸರಘಟ್ಟ ಸೀಮೆಯಲ್ಲಿಯೇ ಹುಟ್ಟಿ ಬೆಳೆದವರು ಸುನಿ. ಅವರ ತಂದೆ ಇನ್ಸ್ ಪೆಕ್ಟರ್ ಆಗಿದ್ದವರು. ಆದ್ದರಿಂದ ಸುನಿ ಪಾಲಿಗೆ ಮನೆಯ ವಾತಾವರಣದಲ್ಲಿ ಕಷ್ಟ ಗೊತ್ತಾಗಿಲ್ಲ. ಆದರೆ ಆ ಕಾಲದಲ್ಲಿಯೇ ಓದುವ, ಕಥೆ ಕವನ ಬರೆಗೋ ಗೀಳಿತ್ತಲ್ಲಾ? ಅದುವೇ ಸಿನಿಮಾ ಹುಚ್ಚು ಹತ್ತಿಸಿ ಸುನಿಯನ್ನು ಕಡು ಕಷ್ಟದ ಟ್ರ್ಯಾಕಿಗೆ ತಂದು ಬಿಟ್ಟಿತ್ತು.

    ಸಿನಿಮಾ ನಿರ್ದೇಶಕನಾಗೋ ಕನಸು ಹೊತ್ತು ಗಾಂಧಿನಗರದತ್ತ ಬಂದ ಸುನಿ ಕಷ್ಟದ ಹಾದಿ ಸವೆಸಿದ್ದಾರೆ. ಕೆಲ ನಿರ್ದೇಶಕರ ಬಳಿ ಅಸಿಸ್ಟೆಂಟ್ ಆಗಿದ್ದುಕೊಂಡು ವರ್ಷಾಂತರಗಳ ಕಾಲ ದುಡಿದಿದ್ದಾರೆ. ಆದರೆ ಏನೇ ಕಷ್ಟಗಳು ಬಂದರೂ ಎದೆಗುಂದದೆ ಮುಂದುವರೆದ ಪರಿಣಾಮವಾಗಿಯೇ ಅವರು ನಿರ್ದೇಶಕರಾಗಿ ಹೊರ ಹೊಮ್ಮಿದ್ದಾರೆ.

    ಸಿಂಪಲ್ ಆಗೊಂದ್ ಲವ್ ಸ್ಟೋರಿಯಿಂದ ಆರಂಭವಾದ ಅವರ ಪ್ರಯಾಣ ಬಜಾರ್ ವರೆಗೂ ಬಂದು ತಲುಪಿಕೊಂಡಿದೆ. ಆದರೆ ಬಜಾರ್ ಸುನಿಯ ಈ ಹಿಂದಿನ ಚಿತ್ರಗಳಿಗಿಂತಲೂ ಸಂಪೂರ್ಣ ಭಿನ್ನ. ಈ ಸಿನಿಮಾ ಈ ಪಾಟಿ ಸೆನ್ಸೇಷನ್ ಕ್ರಿಯೇಟ್ ಮಾಡಿರೋದೇ ಆ ಕಾರಣಕ್ಕಾಗಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv