Tag: ಬಚ್ಚೇಗೌಡ

  • ಸುಮಲತಾ ನೂರಕ್ಕೆ ನೂರು ಗೆಲ್ತಾರೆ: ಯಡಿಯೂರಪ್ಪ

    ಸುಮಲತಾ ನೂರಕ್ಕೆ ನೂರು ಗೆಲ್ತಾರೆ: ಯಡಿಯೂರಪ್ಪ

    ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎನ್ ಬಚ್ಚೇಗೌಡ ಪರ ಇಂದು ಮಾಜಿ ಸಿಎಂ ಯಡಿಯೂರಪ್ಪ ರೋಡ್ ಷೋ ನಡೆಸಿ ಮತಯಾಚಿಸಿದರು.

    ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ನಗರಕ್ಕೆ ಆಗಮಿಸಿದ ಬಿಎಸ್ ಯಡಿಯೂರಪ್ಪ ನಗರದ ಮುತ್ಯಾಲಮ್ಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮುತ್ಯಾಲಮ್ಮ ದೇವಾಲಯದಿಂದ ಹಳೆಯ ಬಸ್ ನಿಲ್ದಾಣದವರೆಗೂ ರೋಡ್ ಶೊ ನಡೆಸಿ ಮತಯಾಚನೆ ನಡೆಸಿದರು.

    ಈ ವೇಳೆ ಅಭ್ಯರ್ಥಿ ಬಚ್ಚೇಗೌಡ, ಶಾಸಕ ಎಸ್.ಆರ್ ವಿಶ್ವನಾಥ್, ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಸೇರಿದಂತೆ ನೂರಾರು ಕಾರ್ಯಕರ್ತರು ರೋಡ್ ಶೋನಲ್ಲಿ ಭಾಗವಹಿಸಿದರು. ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಯಡಿಯೂರಪ್ಪ ಹಿಂದಿನ ಭಾರೀ ಚಿಕ್ಕಬಳ್ಳಾಪುರದಲ್ಲಿ ಕಡಿಮೆ ಅಂತರದಲ್ಲಿ ಸೋಲನ್ನು ಕಂಡಿದ್ದೇವು. ಆದರೆ ಈ ಬಾರಿ ಬಚ್ಚೇಗೌಡರ ಮೇಲೆ ಜನರಿಗೆ ಅನುಕಂಪ ಹಾಗೂ ಮೋದಿ ಅಲೆಯಿಂದ ಗೆದ್ದೆ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಜೊತೆಗೆ ರಾಜ್ಯದಲ್ಲಿ 22 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಮತ್ತೆ ಪುನರುಚ್ಚಾರ ಮಾಡಿದ ಯಡಿಯೂರಪ್ಪ ಮಂಡ್ಯದಲ್ಲಿ ಸುಮಲತಾ ನೂರಕ್ಕೆ ನೂರು ಗೆಲ್ಲುತ್ತಾರೆ ಎಂದು ತಿಳಿಸಿದರು.

  • ಕೆಂಪೇಗೌಡ ವಿಮಾನ ನಿಲ್ದಾಣ ನಿರ್ಮಾಣದ ಕಥೆ ಹೇಳಿ ಮೊಯ್ಲಿಗೆ ಟಾಂಗ್ ಕೊಟ್ಟ ಎಸ್‍ಎಂಕೆ

    ಕೆಂಪೇಗೌಡ ವಿಮಾನ ನಿಲ್ದಾಣ ನಿರ್ಮಾಣದ ಕಥೆ ಹೇಳಿ ಮೊಯ್ಲಿಗೆ ಟಾಂಗ್ ಕೊಟ್ಟ ಎಸ್‍ಎಂಕೆ

    – ನನ್ನ ಅಭಿವೃದ್ಧಿ ಕಾರ್ಯಗಳನ್ನ ಮೊಯ್ಲಿ ತಮ್ಮದೆಂದು ಹೇಳುತ್ತಿದ್ದಾರೆ
    – ಕೇಂದ್ರದಲ್ಲಿ ಶಕ್ತಿಶಾಲಿ ಸರ್ಕಾರಕ್ಕಾಗಿ ಮೋದಿಗೆ ಮತ ನೀಡಿ

    ಚಿಕ್ಕಬಳ್ಳಾಪುರ: ಬಿಜೆಪಿಯಿಂದ ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‍ಗೆ ವಿರುದ್ಧವಾಗಿ ಮತ ಚಲಾವಣೆ ಮಾಡುವಂತೆ ಈಗಾಗಲೇ ತೀರ್ಮಾನ ಮಾಡಿರುವುದರಿಂದ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಪರ ಪ್ರಚಾರ ಮಾಡಲು ಪಕ್ಷ ಹೇಳಿದರೆ ಪ್ರಚಾರ ಮಾಡ್ತೇನೆ ಎಂದು ಮಾಜಿ ಸಿಎಂ ಎಸ್‍ಎಂ ಕೃಷ್ಣ ಹೇಳಿದ್ದಾರೆ.

    ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ ಅವರ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಪಕ್ಷ ನನಗೆ ಎಲ್ಲಿ ಪ್ರಚಾರ ಮಾಡಿ ಎಂದರೆ ನಾನು ಅಲ್ಲಿಗೆ ಹೋಗುತ್ತೇನೆ. ಇವತ್ತು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪ್ರಚಾರ ಮಾಡು ಎಂದು ಹೇಳಿದ್ದಾರೆ. ಹೀಗಾಗಿ ನಾನು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದೇನೆ ಎಂದರು.

    ಇದೇ ವೇಳೆ ಮಹಾಘಟಬಂಧನ್ ವಿಚಾರವಾಗಿ ಪ್ರತಿಕ್ರಿಯೆ ನೀಡಿ, 25 ಪಕ್ಷಗಳು ಸೇರಿ ಸರ್ಕಾರ ಮಾಡಿದರೆ ಎಂತಹ ವೈವಿಧ್ಯಮಯ ಸರ್ಕಾರ ಮಾಡಲು ಸಾಧ್ಯ ನೀವೇ ಒಮ್ಮೆ ಯೋಚಿಸಿ. ಕೇಂದ್ರದಲ್ಲಿ ಯಾವಾಗಲೂ ಗಟ್ಟಿ, ಶಕ್ತಿ ಶಾಲಿ ಸರ್ಕಾರ ಇರಬೇಕು. ಹೀಗಾಗಿ ಮೋದಿಯವರ ಗಟ್ಟಿ ಸರ್ಕಾರ ಹೇಗಿದೆ ಎಂಬುದನ್ನು ಎಂದು ಅರ್ಥಮಾಡಿಕೊಂಡು ಮತ ಚಲಾಯಿಸಿ, ಮುಂದಿನ 5 ವರ್ಷವೂ ಮತ್ತೆ ಮೋದಿ ಪ್ರಧಾನಿಯಾಗಬೇಕು ಎಂಬುದೇ ತಮ್ಮ ಕೋರಿಕೆ ಎಂದರು.

    ಮೊಯ್ಲಿ ವಿರುದ್ಧ ಅಸಮಾಧಾನ: ಎತ್ತಿನಹೊಳೆ ಯೋಜನೆ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಹಾಗೂ ವಿಮಾನ ನಿಲ್ದಾಣಕ್ಕೆ ಕೇಂಪೇಗೌಡ ಹೆಸರಿಡಲು ಶ್ರಮಿಸಿದ್ದ ತಾನು ಎಂದು ವೀರಪ್ಪಮೊಯ್ಲಿ ಹೇಳಿಕೊಳ್ಳುತ್ತಿದ್ದಾರೆ. ಆ ಮೂಲಕ ಕ್ಷೇತ್ರದಲ್ಲಿ ಪ್ರಚಾರದ ವೇಳೆ ಕೆಲ ಅಪಪ್ರಚಾರಗಳು ನಡೆಯುತ್ತಿದ್ದಾರೆ. ಸುಳ್ಳಿನ ಸರಮಾಲೆಗಳ ಮೂಲಕ ವೀರಪ್ಪ ಮೊಯ್ಲಿ ಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

    ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಿದ್ದು ನಾನು. ಆದರೆ ಮೊಯ್ಲಿ ತಾವು ಮಾಡಿದ್ದು ಎನ್ನುತ್ತಿದ್ದಾರೆ. ಜನ ಮುರ್ಖರು ಎಂದು ತಿಳಿದುಕೊಂಡು ಹಾಗೇ ಹೇಳಿದ್ದಾರಯೇ ಎಂಬುವುದು ತಿಳಿಯುತ್ತಿಲ್ಲ. ಜನ ಬುದ್ಧಿವಂತಾರಗಿದ್ದು ಚರಿತ್ರೆಯನ್ನ ತಿಳಿದುಕೊಳ್ಳುತ್ತಾರೆ. 2001-2002 ರಲ್ಲಿ ದೆಹಲಿಗೆ ಹೋಗಿ ಪ್ರಧಾನಿ ವಾಜಪೇಯಿ ರನ್ನ ಭೇಟಿ ಮಾಡಿ ವಿಮಾನ ನಿಲ್ದಾಣದ ಶಂಕುಸ್ಥಾಪನೆಗೆ ಮನವಿ ಮಾಡಿದ್ದೆ. ಆಗ ಬಿಜೆಪಿಯವರು ಎಸ್‍ಎಂ ಕೃಷ್ಣ ಕಾಂಗ್ರೆಸ್ ಸಿಎಂ ಬರಬೇಡಿ ಎಂದಿದ್ದರು. ಅದನ್ನ ಕೇಳಿಸಿಕೊಂಡ ವಾಜಪೇಯಿ ಅವರು ಒಂದು ಕಿವಿಯಲ್ಲಿ ಕೇಳಿ ಸುಮ್ಮನಾದರು. ಕೊನೆಗೆ ಮತ್ತೊಮ್ಮೆ ನಾನು ದಿವಂಗತ ಅನಂತ್ ಕುಮಾರ್ ಹಾಗೂ ನಿತಿನ್ ಗಡ್ಕರಿ ಮೂಲಕ ಮತ್ತೆ ಭೇಟಿ ಮಾಡಿದಾಗ ಬರಲು ಒಪ್ಪಿದರು. ಆದರೆ ಸೂಕ್ತ ರಕ್ಷಣೆ ಸಮಸ್ಯೆಯಿಂದ ದೇವನಹಳ್ಳಿ ಬದಲು ವಿಧಾನಸೌಧಕ್ಕೆ ಬಂದು ಒಂದು ಬಟನ್ ಒತ್ತುವ ಮೂಲಕ ಅಲ್ಲಿದಂಲೇ ವಿಮಾನ ನಿಲ್ದಾಣಕ್ಕೆ ಅಡಿಪಾಯ ಚಾಲನೆ ಹಾಕಿದರು. ಇದು ಚರಿತ್ರೆ, ಇತಿಹಾಸ ಎಂದರು.

    ಆಗ ವೀರಪ್ಪಮೊಯ್ಲಿ ಎಲ್ಲಿದ್ದರು ಎನ್ನುವುದೇ ನನಗೆ ಗೊತ್ತಿಲ್ಲ. ಹೀಗಾಗಿ ಜನರಿಗೆ ತಪ್ಪು ಸಂದೇಶ ನೀಡುವುದು ಸರಿಯಲ್ಲ. ಕರಾವಳಿಯವರು ಅತಿ ಬುದ್ದಿವಂತರು ಎಂಬುವುದನ್ನು ತೋರಿಸುವ ಪ್ರಯತ್ನ ಮಾಡಬೇಡಿ. ಚರಿತ್ರೆಗಳನ್ನ ತಿರುಚಿ ಬೇರೆ ವ್ಯಾಖ್ಯಾನ ನೀಡುವುದು ಸಾಧುವಲ್ಲ ಎಂದು ವೀರಪ್ಪ ಮೊಯ್ಲಿಗೆ ಟಾಂಗ್ ನೀಡಿದರು. ಕಳೆದ ಬಾರಿ ಕೇಂಪೇಗೌಡ ವಂಶಸ್ಥರಾದ ಬಚ್ಚೇಗೌಡರನ್ನ ಯಾವ ಕಾರಣಕ್ಕೆ ಸೋಲಿಸಿದ್ದಾರೆ ಎಂಬುದು ಗೊತ್ತಿಲ್ಲ. ಬಚ್ಚೇಗೌಡರನ್ನ ಬಿಟ್ಟು ಎಲ್ಲಿಂದಲೋ ಬಂದವರನ್ನ ಎರಡನೇ ಸಲ ಗೆಲ್ಲಿಸಿದ್ದು, ಇದು ಈ ಮಣ್ಣಿಗೆ ಕಳಂಕ ಬಗೆದಂತೆ ಎಂದು ಬಣ್ಣಿಸಿದರು. ಈ ಬಾರಿಯಾದರು ಬಚ್ಚೇಗೌಡ ರನ್ನ ಗೆಲ್ಲಿಸಿ ಮೋದಿ ಕೈಯನ್ನ ಬಲಪಡಿಸುವಂತೆ ಮನವಿ ಮಾಡಿಕೊಂಡರು.

  • ಎತ್ತಿನ ಹೊಳೆ ನೀರು ಬಂತು, ಬಂತು..! ಮೊಯ್ಲಿ ಕನಸಿನಲ್ಲಿ: ಬಚ್ಚೇಗೌಡ ವಾಗ್ದಾಳಿ

    ಎತ್ತಿನ ಹೊಳೆ ನೀರು ಬಂತು, ಬಂತು..! ಮೊಯ್ಲಿ ಕನಸಿನಲ್ಲಿ: ಬಚ್ಚೇಗೌಡ ವಾಗ್ದಾಳಿ

    ಚಿಕ್ಕಬಳ್ಳಾಪುರ: ಕ್ಷೇತ್ರ ಹಾಲಿ ಸಂಸದರಾಗಿರುವ ವೀರಪ್ಪ ಮೊಯ್ಲಿ ಅವರು ಕಳೆದ 2 ಅವಧಿಗಳಿಂದ ನೀರು ಬಂತು ಬಂತು ಎಂದು ಜನರಿಗೆ ಸುಳ್ಳು ಹೇಳಿದ್ದಾರೆ. ಎತ್ತಿನ ಹೊಳೆ ನೀರು ಅವರ ಕನಸಿನಲ್ಲಿ ಬಂದಿದೆ ಅಷ್ಟೇ. ಆದರೆ ಈ ಬಾರಿ ಮೋದಿ ಸರ್ಕಾರ ಬರುತ್ತೆ, ನಾನು ನೀರು ತರುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ ಹೇಳಿದ್ದಾರೆ.

    ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಒರ್ವ ಸುಳ್ಳುಗಾರ, ಎರಡು ಬಾರಿ ಗೆದ್ದು ಸಂಸದರಾದ ವೀರಪ್ಪ ಮೊಯ್ಲಿ ಈ ಭಾಗಕ್ಕೆ ನೀರು ಕೊಡುತ್ತೇನೆ ಎಂದು ಕಾಲ ಕಳೆದಿದ್ದಾನೆ. ಆದರೆ ನಮ್ಮ ಭಾಗಕ್ಕೆ ನೀರು ಕೊಡಲಿಲ್ಲ. 2 ದಿನಗಳ ಹಿಂದೆಯಷ್ಟೇ ಮಾತನಾಡಿ ಮತ್ತೆ ನೀರು ಕೊಡುತ್ತೇನೆ ಎಂದು ಸುಳ್ಳು ಹೇಳುತ್ತಿದ್ದಾರೆ. ವೀರಪ್ಪಮೊಯ್ಲಿ ಎತ್ತಿನಹೊಳೆ ನೀರು ಬಂತು ಬಂತು ಅಂತಿದ್ದು, ಅವನ ಕನಸಿನಲ್ಲಿ ಎತ್ತಿನಹೊಳೆ ಬಂದಿರಬೇಕು ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

    ಕಳೆದ ಬಾರಿ ಚುನಾವಣೆ ವೇಳೆ ಎತ್ತಿನಹೊಳೆ ಯೋಜನೆಗೆ ಭಾರೀ ಪ್ರಮಾಣದಲ್ಲಿ ಪೂಜೆ ಮಾಡಿದ್ದು ಬಿಟ್ಟರೆ ಏನು ಅಭಿವೃದ್ಧಿ ಆಗಿಲ್ಲ. ಎತ್ತಿನಹೊಳೆ ಯೋಜನೆ 5 ವರ್ಷ ಆಗುತ್ತೋ 10 ವರ್ಷ ಆಗುತ್ತೋ ಗೊತ್ತಿಲ್ಲ. ಆದರೆ ಈ ಬಾರಿ ಮೋದಿ ಸರ್ಕಾರ ಬಂದೇ ಬರುತ್ತೆ, ನಾನು ನಿಮಗೆ ನೀರು ಕೊಡುತ್ತೇನೆ ಎಂದು ಆಶ್ವಾಸನೆ ನೀಡಿದರು.

    ಹಾಲಿ ಸಂಸದರಾಗಿರುವ ವೀರಪ್ಪ ಮೊಯ್ಲಿ ಅವರು ನಿನ್ನೆ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಆಂಧ್ರಪ್ರದೇಶದ ಸರ್ಕಾರ ಕೈಗೊಂಡಿರುವ ನೀರಾವರಿ ಯೋಜನೆ ಮೂಲಕ ಅನಂತಪುರಕ್ಕೆ ಬಂದಿರುವ ಕೃಷ್ಣ ನದಿ ನೀರನ್ನು ಬಯಲು ಸೀಮೆಯ ಜಿಲ್ಲೆಗಳಿಗೆ ಹರಿಸಲು ಕ್ರಮ ಕೈಗೊಳ್ಳುವ ಚಿಂತನೆ ಇದೆ ಎಂದಿದ್ದರು.

  • ನನ್ನ ಹೆಂಡ್ತಿ, ದೇವೇಗೌಡರ ಸುದ್ದಿ ಎತ್ತಬೇಡಿ ಎಂದಿದ್ದಾರೆ: ಬಚ್ಚೇಗೌಡ

    ನನ್ನ ಹೆಂಡ್ತಿ, ದೇವೇಗೌಡರ ಸುದ್ದಿ ಎತ್ತಬೇಡಿ ಎಂದಿದ್ದಾರೆ: ಬಚ್ಚೇಗೌಡ

    ಚಿಕ್ಕಬಳ್ಳಾಪುರ: ರಾಜಕೀಯದ ಕಡು ವೈರಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ವಿರುದ್ಧ ಮಾತಾಡಬೇಡಿ. ಅವರ ಸುದ್ದಿ ಎತ್ತಬೇಡಿ ಎಂದು ನನ್ನ ಹೆಂಡತಿ ಹೇಳುತ್ತಾಳೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎನ್ ಬಚ್ಚೇಗೌಡ ವ್ಯಂಗ್ಯ ಮಾಡಿದ್ದಾರೆ.

    ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿರುವ ಬಚ್ಚೇಗೌಡ, ದೇವೇಗೌಡರ ವಿರುದ್ಧ ಮಾತನಾಡಬೇಡಿ, ಅವರ ತಂಟೆಗೆ ಹೋಗಬೇಡಿ. ಎಲ್ಲರೂ ಈ ಬಾರಿ ನನಗೆ ಮತ ಕೊಡುತ್ತಾರೆ ಎಂದು ಹಲವರು ಹೇಳುತ್ತಾರೆ. ಅಂತೆಯೇ ನಮ್ಮ ಮನೆಯವರು ಸಹ ಅವರ ಸುದ್ದಿ ಎತ್ತಬೇಡಿ ಎಂದು ಹೇಳುತ್ತಾರೆ ಎಂದು ವ್ಯಂಗ್ಯ ಮಾಡಿದರು. ಇದನ್ನೂ ಓದಿ: 2014ರ ಸೋಲು – ಎಚ್‍ಡಿಡಿ ವಿರುದ್ಧ ಬಚ್ಚೇಗೌಡ ಮೃದು ಧೋರಣೆ?

    ದೇವೇಗೌಡರು ಮಾಜಿ ಪ್ರಧಾನಿಗಳು, ಕುಮಾರಸ್ವಾಮಿ ಸಿಎಂ ಅವರು ದೊಡ್ಡವರು ಅವರ ಬಗ್ಗೆ ಮಾತನಾಡಲ್ಲ. ನೀವು ಯಾರಿಗೂ ಬೈಯಬೇಡಿ, ಜೆಡಿಎಸ್, ಸಿಪಿಎಂನವರು ಎಲ್ಲರೂ ನನಗೆ ಮತ ಕೊಡುತ್ತಾರೆ ಎಂದು ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು.

    ಕಳೆದ ಲೋಕಸಭಾ ಚುನಾವಣೆ ವೇಳೆ ಎಚ್‍ಡಿಡಿ ವಿರುದ್ಧ ಬಿ.ಎನ್ ಬಚ್ಚೇಗೌಡ ಸಾಕಷ್ಟು ತೀವ್ರತರವಾಗಿ ವಾಗ್ದಾಳಿ ನಡೆಸಿದ್ದರು. ಹೀಗಾಗಿಯೇ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಎಚ್.ಡಿ ಕುಮಾರಸ್ವಾಮಿ ಅಂತಿಮ ದಿನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇದರಿಂದ ಒಕ್ಕಲಿಗರ ಮತ ವಿಭಜನೆಯಿಂದ ಮೋದಿ ಅಲೆ ನಡುವೆ ಬಿ.ಎನ್ ಬಚ್ಚೇಗೌಡ ಕೇವಲ 9500 ಮತಗಳ ಅಂತರದಿಂದ ಸೋಲು ಕಂಡಿದ್ದರು.

    ಕಳೆದ ಬಾರಿ ಬಿ.ಎನ್ ಬಚ್ಚೇಗೌಡರ ಸೋಲಿಗೆ ಎಚ್‍ಡಿಕೆ ಹಾಗೂ ಕುಟುಂಬದ ವಿರುದ್ಧ ಮಾತನಾಡಿದ್ದೇ ಕಾರಣ ಎಂದು ಜನಸಾಮಾನ್ಯರು ಮಾತಾಡುತ್ತಿದ್ದರು. ಹೀಗಾಗಿ ಈ ಬಾರಿ ಎಚ್ಚರ ವಹಿಸಿರುವ ಬಚ್ಚೇಗೌಡ, ಎಚ್.ಡಿ.ಡಿ ವಿರುದ್ಧ ಮಾತನಾಡದಿರಲು ತೀರ್ಮಾನಿಸಿರುವುದಾಗಿ ಬಿಜೆಪಿ ಕಾರ್ಯಕರ್ತರ ಮುಂದೆ ಹೇಳಿಕೊಳ್ಳುತ್ತಿದ್ದಾರೆ.

  • 2014ರ ಸೋಲು – ಎಚ್‍ಡಿಡಿ ವಿರುದ್ಧ ಬಚ್ಚೇಗೌಡ ಮೃದು ಧೋರಣೆ?

    2014ರ ಸೋಲು – ಎಚ್‍ಡಿಡಿ ವಿರುದ್ಧ ಬಚ್ಚೇಗೌಡ ಮೃದು ಧೋರಣೆ?

    ಚಿಕ್ಕಬಳ್ಳಾಪುರ: ಕಳೆದ ಚುನಾವಣೆ ವೇಳೆ ಎಚ್.ಡಿ ದೇವೇಗೌಡ ಕುಟುಂಬದ ವಿರುದ್ಧ ಹರಿಹಾಯ್ದಿದ್ದ ಮಾಜಿ ಸಚಿವ, ಈ ಬಾರಿಯ ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ ಈಗ ಮೃದು ಧೋರಣೆ ತೋರಿದ್ದಾರೆ.

    ಜಿಲ್ಲೆಯ ಚಿಂತಾಮಣಿ ತಾಲೂಕಿನ ಪುರಾಣ ಪ್ರಸಿದ್ಧ ಕೈವಾರ ಕ್ಷೇತ್ರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ಮಾಧ್ಯಮಗಳು ಈ ಬಾರಿ ನೀವು ದೇವೇಗೌಡರ ಬಗ್ಗೆ ಮೃದು ಧೋರಣೆ ತಾಳಿದ್ದು ಯಾಕೆ ಎಂದು ಪ್ರಶ್ನೆ ಕೇಳಿದ್ದಕ್ಕೆ, ದೇವೇಗೌಡರು ಮಾಜಿ ಪ್ರಧಾನಿಗಳು ಹಾಗೂ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಗಳು. ಅವರು ದೊಡ್ಡವರು, ದೊಡ್ಡವರ ವಿಷಯ ನಮಗ್ಯಾಕೆ? ನಾವು ಅವರ ಮುಂದೆ ತುಂಬಾ ಸಣ್ಣವರು ಎಂದು ಹೇಳಿ ನಸುನಕ್ಕರು.

    ಈ ಬಾರಿ ಮೋದಿ ಅಲೆಯ ಜೊತೆಗೆ, ಕಳೆದ ಬಾರಿ ಸೋತಿರುವ ಅನುಕಂಪ, ಹಾಗೂ ಮೊಯ್ಲಿ ಯವರ ಸುಳ್ಳು ಭರವಸೆಗಳು ಈಡೇರದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ನನ್ನ ಗೆಲುವಿನ ಹಾದಿ ಸುಗಮವಾಗಿದೆ ಎಂದು ತಿಳಿಸಿದರು.

    ಈ ವೇಳೆ ಮಂಡ್ಯ ಚುನಾವಣೆಯಲ್ಲಿ ಬಿಜೆಪಿ ಸುಮಲತಾ ಅವರಿಗೆ ಬೆಂಬಲ ನೀಡುತ್ತಿದ್ಯಾ ಎನ್ನುವ ಪ್ರಶ್ನೆಗೆ, ನಾನು ಹೈಕಮಾಂಡಿನ ಜೊತೆ ಹೋಗಿ ಮಾತನಾಡಿಲ್ಲ. ಮಂಡ್ಯ ರಾಜಕೀಯದ ಬಗ್ಗೆ ನನಗೆ ಏನು ಗೊತ್ತಿಲ್ಲ. ನಮ್ಮ ಚಿಕ್ಕಬಳ್ಳಾಪುರದ ಬಗ್ಗೆ ಮಾತ್ರ ನನಗೆ ಗೊತ್ತು ಎಂದು ಹೇಳಿದರು.

    ಕಳೆದ ಬಾರಿ ಏನಾಗಿತ್ತು?
    ಕಳೆದ ಬಾರಿ ದೇವೇಗೌಡರ ಬಗ್ಗೆ ಹರಿಹಾಯ್ದ ಪರಿಣಾಮ ಕೊನೆ ಕ್ಷಣದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಎಚ್‍ಡಿ ಕುಮಾರಸ್ವಾಮಿ ಕಣಕ್ಕೆ ಇಳಿದಿದ್ದರು. ಹೀಗಾಗಿ ಓಕ್ಕಲಿಗರ ಮತ ವಿಭಜನೆಯಿಂದಾಗಿ ಕೇವಲ 9,520 ಮತಗಳ ಅಂತರದಿಂದ ಬಚ್ಚೇಗೌಡ ಅವರು ಸೋತಿದ್ದರು.

    ಕಳೆದ ಬಾರಿ ಬಚ್ಚೇಗೌಡ ಅವರು ಗೆಲ್ಲಲ್ಲಿದ್ದಾರೆ ಎನ್ನುವ ವಿಶ್ಲೇಷಣೆ ಕೇಳಿ ಬಂದಿತ್ತು. ಚುನಾವಣಾ ಪ್ರಚಾರದ ಸಮಯದಲ್ಲಿ ಬಚ್ಚೇಗೌಡರು ದೇವೇಗೌಡ ಮತ್ತು ಅವರ ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಇದರ ಪರಿಣಾಮ ಕೊನೆಯ ಕ್ಷಣದಲ್ಲಿ ಕುಮಾರಸ್ವಾಮಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಎಚ್‍ಡಿಕೆ ಅಭ್ಯರ್ಥಿಯಾದ ಕೂಡಲೇ ಚುನಾವಣೆಯ ಸಂಪೂರ್ಣ ಚಿತ್ರಣವೇ ಬದಲಾಯಿತು. ಒಕ್ಕಲಿಗರ ಮತ ವಿಭಜನೆಯಾದ ಪರಿಣಮ ಬಚ್ಚೇಗೌಡ ಭಾರೀ ಸ್ಪರ್ಧೆ ನೀಡಿದರೂ ಕೊನೆ ಕ್ಷಣದಲ್ಲಿ ಮೋಯ್ಲಿ ಮುಂದೆ 9,520 ಮತಗಳ ಅಂತರದಿಂದ ಸೋಲನ್ನಪ್ಪಿದರು. ಈ ಕಾರಣಕ್ಕೆ ತಮ್ಮ ಗೆಲುವಿನ ಹಾದಿ ಕಷ್ಟ ಆಗುತ್ತದೆ ಎಂದುಕೊಂಡಿರುವ ಬಚ್ಚೇಗೌಡ ದೇವೇಗೌಡ ವಿರುದ್ಧ ತುಟಿ ಬಿಚ್ಚಲಿಲ್ಲ.

    ಕಳೆದ ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‍ನ ಎಂ.ವೀರಪ್ಪ ಮೋಯ್ಲಿ 4,24,800 ವೋಟ್ ಗಳಿಸಿದ್ದರೆ ಬಿ.ಎನ್ ಬಚ್ಚೆಗೌಡ ಅವರಿಗೆ 4,15,280 ಮತಗಳು ಬಿದ್ದಿತ್ತು. ಎಚ್.ಡಿ ಕುಮಾರಸ್ವಾಮಿ ಅವರಿಗೆ 346,339 ಲಕ್ಷ ಮತ ಪಡೆದಿದ್ದರು.