Tag: ಬಗರ್ ಹುಕುಂ

  • ಮೈಸೂರಿನಲ್ಲಿ ಬಗರ್ ಹುಕುಂ ಸಾಗುವಳಿ ಚೀಟಿ ಖಾತೆ ಮಾಡಿಸಲು ಲಂಚ ಕೇಳ್ತಾರೆ – ಯತೀಂದ್ರ ಆರೋಪ

    ಮೈಸೂರಿನಲ್ಲಿ ಬಗರ್ ಹುಕುಂ ಸಾಗುವಳಿ ಚೀಟಿ ಖಾತೆ ಮಾಡಿಸಲು ಲಂಚ ಕೇಳ್ತಾರೆ – ಯತೀಂದ್ರ ಆರೋಪ

    ಬೆಂಗಳೂರು: ಮೈಸೂರಿನಲ್ಲಿ ಬಗರ್ ಹುಕುಂ ಸಾಗುವಳಿ ಚೀಟಿಗೆ ಖಾತೆ ಮಾಡಿಕೊಡುವ ವಿಚಾರದಲ್ಲಿ ಅಕ್ರಮ ನಡೆಯುತ್ತಿದೆ. ಖಾತೆ ಮಾಡಿಕೊಡಲು ಲಂಚ ಪಡೆಯುವ ಕೆಲಸ ಆಗುತ್ತಿದೆ. ಕೂಡಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಆಗ್ರಹಿಸಿದರು.

    ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಪ್ರಶ್ನೆ ಕೇಳಿದ ಯತೀಂದ್ರ ಸಿದ್ದರಾಮಯ್ಯ, ಮೈಸೂರಿನಲ್ಲಿ ಸಾಗುವಳಿ ಚೀಟಿ ಇರುವವರಿಗೆ ದಾಖಲಾತಿ ಮಾಡಿಕೊಡುತ್ತಿಲ್ಲ. ಅರ್ಜಿ ಹಾಕಿ, ಹಣ ಕಟ್ಟಿದ ಮೇಲೆಯೂ ಖಾತೆ ಮಾಡಿಕೊಡುತ್ತಿಲ್ಲ. ಮೈಸೂರಿನಲ್ಲಿ ಈ ವಿಚಾರವಾಗಿ ಅಕ್ರಮಗಳು ನಡೆಯುತ್ತಿವೆ. ಖಾತೆ ಮಾಡಿಸಲು ಲಂಚ ಕೇಳುವ ಪರಿಸ್ಥಿತಿ ಬಂದಿದೆ. 30-35 ವರ್ಷಗಳಿಂದ ಖಾತೆ ಆಗಿಲ್ಲ. ಸಾಗುವಳಿ ಚೀಟಿ ಕೊಟ್ಟವರಿಗೆ ಕೂಡಲೇ ಖಾತೆ ಮಾಡಿಕೊಡಬೇಕು. ಖಾತೆ ಮಾಡಿ ಕೊಡುವುದಕ್ಕೆ ಒಂದು ಕಾಲ ಮಿತಿಯನ್ನು ಸರ್ಕಾರ ಮಾಡಬೇಕು ಎಂದರು.ಇದನ್ನೂ ಓದಿ: ಸಿಎಂ ಅವರೇ ತುಘಲಕ್ ದರ್ಬಾರಿಗೆ ಇತಿಮಿತಿ ಇರಲಿ: ವಿಜಯೇಂದ್ರ

    ಇದಕ್ಕೆ ಸಚಿವ ಕೃಷ್ಣಭೈರೇಗೌಡ ಉತ್ತರ ನೀಡಿ, ಸಾಗುವಳಿ ಚೀಟಿ ಕೊಟ್ಟವರಿಗೆ ಇನ್ನೂ ಖಾತೆ ಆಗಿಲ್ಲ ಅನ್ನೋದು ಸತ್ಯ. 20-30 ವರ್ಷಗಳಿಂದ ಸಾಗುವಳಿ ಚೀಟಿ ಇದ್ದರೂ ಖಾತೆ ಮಾಡಿಕೊಡಲು ಆಗಿಲ್ಲ. ನೈಜವಾಗಿ ಇರುವ ಕೇಸಲ್ಲಿ ಆದಷ್ಟು ಬೇಗ ಖಾತೆ ಮಾಡಿಕೊಡುತ್ತೇವೆ. ಅಧಿಕಾರಿಗಳಿಗೂ ಖಾತೆ ಮಾಡಲು ಸೂಚನೆ ಕೊಟ್ಟಿದ್ದೇನೆ. ಅನೇಕ ಕೇಸ್‌ಗಳಲ್ಲಿ ಅಕ್ರಮವಾಗಿ ಭೂಮಿ ಹಂಚಿಕೆಯಾಗಿದೆ. ಅರಣ್ಯ ಭಾಗದಲ್ಲಿ ಹಂಚಿಕೆ ಆಗಿರುವುದಕ್ಕೆ ದಾಖಲಾತಿ ಮಾಡಿಕೊಡಲು ಆಗುವುದಿಲ್ಲ. ಅದನ್ನು ಪರಿಶೀಲನೆ ಮಾಡಬೇಕು. ನೈಜವಾಗಿ ಹಂಚಿಕೆ ಆಗಿರುವವರಿಗೆ ಆದಷ್ಟು ಬೇಗ ಖಾತೆ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.

    ಮೈಸೂರಿನಲ್ಲಿ ಲಂಚ ಪಡೆಯುತ್ತಿದ್ದಾರೆ ಎಂಬ ಯತೀಂದ್ರ ಮಾತಿಗೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸಿಎಂ ಪುತ್ರರೇ ಸಾಗುವಳಿ ಚೀಟಿಗೆ ಖಾತೆ ಪಡೆಯಲು ಲಂಚ ಕೊಡಬೇಕು ಎಂದು ಹೇಳಿದ್ದಾರೆ. ಯಾರಿಗೆ ಲಂಚ ಕೊಡಬೇಕು ಅದನ್ನು ಸಚಿವರು ಹೇಳಬೇಕು ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

    ಈ ವೇಳೆ ತಮ್ಮ ಮಾತಿಗೆ ವಿವರಣೆ ಕೊಟ್ಟ ಯತೀಂದ್ರ, ಲಂಚ ಎನ್ನುವುದು ಎಲ್ಲಾ ಕಡೆಯಲ್ಲೂ ಇದೆ. ಬಗರ್ ಹುಕುಂ ಸಮಿತಿಗೆ ಸ್ಥಳೀಯ ಶಾಸಕರೇ ಅಧ್ಯಕ್ಷರಾಗಿರುತ್ತಾರೆ. ಅಧಿಕಾರಿಗಳಿಗೆ ಹೇಳಿದರೂ ಅವರು ಮಾಡಿಕೊಡುವುದಿಲ್ಲ. ಇದು ಸರ್ಕಾರದ ಹಂತದಲ್ಲಿ ಅಲ್ಲ. ಸ್ಥಳೀಯವಾಗಿ ವಿಳಂಬವಾಗಿದೆ ಎಂದು ಛಲವಾದಿಗೆ ತಿರುಗೇಟು ಕೊಟ್ಟರು.

    ಬಳಿಕ ಮಾತಾನಾಡಿದ ಸಚಿವ ಕೃಷ್ಣಭೈರೇಗೌಡ, ಎಲ್ಲಾ ವಿಷಯಗಳಲ್ಲಿ ರಾಜಕೀಯ ಮಾಡುವುದು ಬೇಡ. ಬಿಜೆಪಿ 4 ವರ್ಷಗಳ ಕಾಲ ಅಧಿಕಾರ ಮಾಡಿತ್ತು. ಯಾಕೆ ಆಗ ಖಾತೆ ಮಾಡಿಕೊಡಲಿಲ್ಲ? ಇದರಲ್ಲಿ ರಾಜಕೀಯ ಬೇಡ ಎಂದು ಛಲವಾದಿ ನಾರಾಯಣಸ್ವಾಮಿ ವಿರುದ್ಧ ಆಕ್ರೋಶ ಹೊರಹಾಕಿದರು.ಇದನ್ನೂ ಓದಿ: 2024ರಲ್ಲಿ 50 ಸಾವಿರಕ್ಕೂ ಹೆಚ್ಚು ಐಟಿ ಉದ್ಯೋಗಿಗಳ ವಜಾ – ರಿಯಲ್ ಎಸ್ಟೇಟ್‌ಗೆ ಹೊಡೆತ

     

  • ಹೊಲಕ್ಕೆ ನುಗ್ಗಿ ಅರಣ್ಯಾಧಿಕಾರಿಗಳ ಆಟಾಟೋಪ – ರೈತ ಮಹಿಳೆಯರ ಮೇಲೆ ಜೀಪ್ ಹತ್ತಿಸಲು ಯತ್ನ

    ಹೊಲಕ್ಕೆ ನುಗ್ಗಿ ಅರಣ್ಯಾಧಿಕಾರಿಗಳ ಆಟಾಟೋಪ – ರೈತ ಮಹಿಳೆಯರ ಮೇಲೆ ಜೀಪ್ ಹತ್ತಿಸಲು ಯತ್ನ

    ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಅರಣ್ಯಾಧಿಕಾರಿಗಳು ಮಾನವೀಯತೆಯನ್ನ ಮೀರಿ ವರ್ತಿಸಿದ್ದಾರೆ. ನ್ಯಾಯವಾಗಿ ಉಳುಮೆ ಮಾಡಿ ಬದುಕ್ತಿದ್ದ ರೈತರಿಗೆ ಇನ್ನಿಲ್ಲದ ಕಿರುಕುಳ ಕೊಡ್ತಿದ್ದಾರೆ.

    ಜಿಲ್ಲೆಯ ತರೀಕೆರೆ ತಾಲೂಕಿನ ಎಂಸಿ ಹಳ್ಳಿಯಲ್ಲಿ ಅರಣ್ಯಾಧಿಕಾರಿಗಳು ಸರ್ಕಾರಿ ವಾಹನವನ್ನ ಹೊಲಕ್ಕೆ ನುಗ್ಗಿಸಿ ತಮ್ಮ ರೌದ್ರಾವತಾರ ಪ್ರದರ್ಶಿಸಿದ್ದಾರೆ. ಇದು ಬಗರ್‍ಹುಕುಂ ಸಾಗುವಳಿದಾರರ ಮೇಲೆ ಸಿಎಂ ಸಿದ್ದರಾಮಯ್ಯ ಸರ್ಕಾರದ ಅಧಿಕಾರಿಗಳೇ ತೋರಿದ ದರ್ಪ, ದೌಲತ್ತಿನ ಪರಿ. ಇಲ್ಲಿಯ ಸರ್ವೇ ನಂಬರ್ 4ರಲ್ಲಿ 201 ಎಕರೆಯಷ್ಟಿರುವ ಕಂದಾಯ ಭೂಮಿಯಲ್ಲಿ ರೈತರು 40 ವರ್ಷಗಳಿಂದ ಉಳುಮೆ ಮಾಡ್ತಿದ್ದಾರೆ. ಆದ್ರೆ ಅರಣ್ಯ ಇಲಾಖೆ ಮಾತ್ರ ಇದು ನಮಗೆ ಸೇರಿದ ಭೂಮಿ ಅಂತಾ ಹೇಳಿ ವಾದಿಸ್ತಿದೆ. ಜೊತೆಗೆ ಜೀಪ್ ಹತ್ತಿಸಿಯಾದ್ರೂ ಪರ್ವಾಗಿಲ್ಲ ರೈತರನ್ನು ಓಡಿಸಬೇಕೆಂಬ ಹಠಕ್ಕೆ ಬಿದ್ದಿದೆ.

    ಅರಣ್ಯ ಇಲಾಖೆ ಭೂಮಿಯೇ ಅಲ್ಲ: ಅಂದಹಾಗೆ ಇದು ಅರಣ್ಯ ಇಲಾಖೆಗೆ ಸೇರಿದ ಭೂಮಿಯೇ ಅಲ್ಲ. ಆದರೂ ಅರಣ್ಯ ಇಲಾಖೆ ಅಧಿಕಾರಿಗಳು ಅನ್ನದಾತರಿಗೆ ಕೊಡಬಾರದ ಕಾಟ, ಹಿಂಸೆ ಕೊಡ್ತಿದ್ದಾರೆ. ವಿನಾಕಾರಣ ಕೇಸುಗಳನ್ನು ಹಾಕಿ ತಮ್ಮ ಅಧಿಕಾರದ ಅಮಲನ್ನು ಪ್ರದರ್ಶಿಸ್ತಿದ್ದಾರೆ.

    ಬಗರ್‍ಹುಕುಂ ಭೂಮಿಯಲ್ಲಿ ಮಾಜಿ ಶಾಸಕರ ಅಡಿಕೆ ತೋಟ: ವಿಚಿತ್ರ ಅಂದ್ರೆ ಸದ್ಯ ರೈತರು ಸಂಘರ್ಷ ಮಾಡ್ತಿರೋ ಬಗರ್‍ಹುಕುಂ ಭೂಮಿಯ ಪಕ್ಕದಲ್ಲೇ ಇರುವ ಎಂಟು ಎಕರೆ ಬಗರ್ ಹುಕುಂ ಭೂಮಿಯಲ್ಲಿ ಭದ್ರಾವತಿಯ ಮಾಜಿ ಶಾಸಕ ಬಿಕೆ ಸಂಗಮೇಶ್ ಅವರಿಗೆ ಸೇರಿದ ಅಡಿಕೆ ತೋಟ ಕಂಗೊಳಿಸ್ತಿದೆ. ಆದರೆ ಆ ಪ್ರಭಾವಿ ಶಾಸಕರನ್ನ ಹೋಗಿ ಪ್ರಶ್ನಿಸುವ ಧೈರ್ಯ ಅರಣ್ಯ ಇಲಾಖೆಗೆ ಇಲ್ಲ. ಆದ್ರೆ ಬಡ ರೈತರು ಬೆಳೆದ ತೆಂಗು, ಬಾಳೆಯನ್ನು ಮಾತ್ರ ಹಿಂದೆ-ಮುಂದೆ ನೋಡದೇ ಕಡಿದು ಹಾಕ್ತಿದ್ದಾರೆ.

    ಸ್ಪೀಕರ್ ಆಗಿದ್ದಾಗ ಬಗರ್‍ಹುಕುಂ ವಿಷಯದಲ್ಲಿ ಸರ್ಕಾರದ ವಿರುದ್ಧ ಬುಸುಗುಡುತ್ತಲ್ಲೇ ಇದ್ದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಈಗ ಎಲ್ಲಿ ಹೋದರು ಅನ್ನೋದೇ ಇಲ್ಲಿನವರ ಪ್ರಶ್ನೆಯಾಗಿದೆ. ಈಗಾಗಲೇ ಬಗರ್‍ಹುಕುಂ ಬೇಸಾಯಗಾರರಿಗೆ ಹಕ್ಕುಪತ್ರಗಳನ್ನು ವಿತರಿಸುವಂತೆ ಕಾಗೋಡು ತಿಮ್ಮಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದ್ರೆ ತರೀಕೆರೆ ತಹಶೀಲ್ದಾರ್ ಆಗ್ಲಿ, ಜಿಲ್ಲಾಧಿಕಾರಿಯಾಗಲೀ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

    https://youtu.be/80CkEfVEk84