ಬೆಂಗಳೂರು: ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ವಿಫಲವಾಗಿದ್ದರಿಂದ ಪಾಲಿಕೆ ಇಂದಿನಿಂದ ರಸೆಲ್ ಮಾರ್ಕೆಟ್ ಸಂಪೂರ್ಣ ಬಂದ್ ಮಾಡುವಂತೆ ಆದೇಶಿಸಿದೆ.
ಬೆಂಗಳೂರಿನ ಶಿವಾಜಿನಗರದ ರಸೆಲ್ ಮಾರ್ಕೆಟ್ ಇಂದಿನಿಂದ ಏಪ್ರಿಲ್ 14ರವರೆಗೂ ಬಂದ್ ಆಗಲಿದ್ದು, ಯಾವುದೇ ವ್ಯಾಪಾರ ವಹಿವಾಟು ಮಾಡದಂತೆ ಬಿಬಿಎಂಪಿ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿ ಮಾರ್ಕೆಟ್‍ನ ಎಲ್ಲಾ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿದ್ದಾರೆ.
ಕೊರೊನಾ ವೈರಸ್‍ನಿಂದ ಪ್ರಧಾನಿ ಮೋದಿ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಿ 10 ದಿನಗಳಾಗಿವೆ. ಆದರೂ ರಸೆಲ್ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಯುತ್ತಿತ್ತು. ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮಾರ್ಕೆಟ್‍ನಲ್ಲಿ ಗುಂಪು ಗುಂಪಾಗಿ ಸೇರುತ್ತಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಬಿಬಿಎಂಪಿ ಅಧಿಕಾರಿ ಅನೇಕ ಬಾರಿ ಎಚ್ಚರಿಕೆ ಕೊಟ್ಟಿದ್ದರು. ಆದರೆ ಎಚ್ಚರಿಕೆ ಬಳಿಕವೂ ಜನರು ಗುಂಪು ಗುಂಪಾಗಿ ಸೇರುತ್ತಿದ್ದರು.
ಕೊನೆಗೆ ಬಿಬಿಎಂಪಿ ರಸೆಲ್ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಬಂದ್ ಮಾಡುವ ಮೂಲಕ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ. ಈಗಾಗಲೇ ವ್ಯಾಪಾರಕ್ಕೆ ಬಂದ ಗ್ರಾಹಕರನ್ನ ಪೊಲೀಸರು ವಾಪಸ್ ಕಳಿಸುತ್ತಿದ್ದಾರೆ. ಅಲ್ಲದೇ ಬೀದಿ ಬದಿಯ ಅಂಗಡಿಗಳನ್ನ ತೆಗೆಯುವಂತೆ ಪೊಲೀಸರು ಸೂಚನೆ ಕೊಟ್ಟಿದ್ದಾರೆ. ಇನ್ನೂ ಈ ರಸ್ತೆಯಲ್ಲಿ ಸಾರ್ವಜನಿಕರ ಓಡಾಟಕ್ಕೂ ಪೊಲೀಸರು ಬ್ರೇಕ್ ಹಾಕಿದ್ದಾರೆ. ಏಪ್ರಿಲ್ 14ವರೆಗೂ ತಾತ್ಕಾಲಿಕವಾಗಿ ರಸೆಲ್ ಮಾರ್ಕೆಟ್ ಬಂದ್ ಆಗಿದೆ.
ಬೆಂಗಳೂರು: ಲಾಕ್ ಡೌನ್ ಹಿನ್ನೆಲೆ ಆಹಾರ ಧಾನ್ಯ, ಊಟ ಸಿಗದೆ 30ಕ್ಕೂ ಹೆಚ್ಚು ಜನ ನರಳಾಡುತ್ತಿರುವ ಘಟನೆ ಬೆಂಗಳೂರು ಹೊರ ವಲಯದ ನೆಲಮಂಗಲದ ಹೊನ್ನಗಂಗಯ್ಯನ ಪಾಳ್ಯದಲ್ಲಿ ನಡೆದಿದೆ.
ಸುಮಾರು ಮೂರು ದಿನಗಳಿಂದ ಊಟ ಸಿಗದೆ ಹಕ್ಕಿಪಿಕ್ಕಿಯ ಜನ ನರಳಾಡುತ್ತಿದ್ದು, ತಾಲೂಕು ಆಡಳಿತ ಇತ್ತ ಗಮನಹರಿಸಿಲ್ಲ. ಕೊರೊನಾ ಭೀತಿಯಿಂದ ದೇಶವನ್ನೇ ಲಾಕ್‍ಡೌನ್ ಮಾಡಿರುವ ಹಿನ್ನೆಲೆ ದವಸ ಧಾನ್ಯ ಸಿಗದೆ ಜನ ಪರದಾಡುತ್ತಿದ್ದಾರೆ. ಮೂರು ದಿನಗಳಿಂದ ಊಟವಿಲ್ಲದೆ ಹಕ್ಕಿಪಿಕ್ಕಿ ಜನಾಂಗದವರು ಪರಿತಪಿಸುತ್ತಿದ್ದರೂ ಈ ಕುಟುಂಬಗಳಿಗೆ ತಾಲೂಕು ಆಡಳಿತ ನೆರವು ನೀಡಲು ಮುಂದಾಗಿಲ್ಲ.
ಲಾಕ್‍ಡೌನ್ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಸ್ತಬ್ಧವಾಗಿದ್ದು, ವಾಹನ ಸಂಚಾರ ತೀರಾ ವಿರಳವಾಗಿದೆ. ತುರ್ತು ಪರಿಸ್ಥಿತಿಯ ವಾಹನಗಳು ಮಾತ್ರ ಸಂಚರಿಸುತ್ತಿದ್ದು, ನೆಲಮಂಗಲದ ಜಾಸ್ ಟೋಲ್ ಮೂಲಕ ಓಡಾಡುತ್ತಿವೆ. ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ರಾತ್ರಿ ಪೀಣ್ಯ ಪೊಲೀಸರು ವಾಹನಗಳನ್ನು ತಡೆ ಹಿಡಿದ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ವಿರಳವಾಗಿದೆ. ಅತ್ತ ನೆಲಮಂಗಲ ಪೊಲೀಸರು ಸಹ ವಾಹನಗಳ ತಪಾಸಣೆ ಕೈಗೊಂಡಿದ್ದಾರೆ.
ಮಂಗಳೂರು: ದಕ್ಷಿಣ ಕನ್ನಡದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಶನಿವಾರ ಜಿಲ್ಲೆಯನ್ನು ಸಂಪೂರ್ಣ ಬಂದ್ ಮಾಡಲಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಡಳಿತ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಶನಿವಾರ ಅಂಗಡಿ ಮುಂಗಟ್ಟುಗಳು ಹಾಗೂ ಸಾರ್ವಜನಿಕ ಓಡಾಟವನ್ನೂ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ನೀಡಿದ ಸಮಯವನ್ನೂ ಕೂಡ ಜಿಲ್ಲಾಡಳಿತ ಹಿಂಪಡೆದಿದೆ.
ಈಗಾಗಲೇ ರಾಜ್ಯದಲ್ಲಿ 64 ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದೆ. ಇಂದು ಒಂದೇ ದಿನ 9 ಪ್ರಕರಣ ಕರ್ನಾಟಕದಲ್ಲಿ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ 7 ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದೆ. ಈ ಹಿನ್ನೆಲೆ ಸೋಂಕು ಹರಡುವುದನ್ನು ತಡೆಗಟ್ಟಲು ಮೆಡಿಕಲ್ ಸ್ಟೋರ್, ಆಸ್ಪತ್ರೆ ಸೇವೆ ಹಾಗೂ ಅಂಬುಲೆನ್ಸ್ ಸೇವೆ ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳು ಸಂಪೂರ್ಣವಾಗಿ ಜಿಲ್ಲಾದ್ಯಂತ ಶನಿವಾರ ಸ್ಥಗಿತಗೊಳಿಸಲಾಗುತ್ತಿದೆ.
– ಎಲ್ಲ ವ್ಯಾಪಾರಿಗಳಿಗೂ ನೋ ಎಂಟ್ರಿ
– ಬೇರೆ ಊರಲ್ಲಿರುವ ಗ್ರಾಮಸ್ಥರು ಅಲ್ಲೇ ಇರಿ, ಇಲ್ಲಿಗೆ ಬರಬೇಡಿ
– ಅಲ್ಲೇ ಹಬ್ಬ ಮಾಡಿ ಎಂದ ಗ್ರಾಮಸ್ಥರು
ಚಿಕ್ಕಮಗಳೂರು: ಕೊರೊನಾ ನಮ್ಮ ಊರಿಗೆ ಕಾಲಿಡೋದು ಬೇಡವೆಂದು ಗ್ರಾಮಸ್ಥರು ಆತಂಕದಿಂದ ಊರಿನ ದ್ವಾರಬಾಗಿಲಲ್ಲೇ ಕಾದು ಕೂತು ಗ್ರಾಮಕ್ಕೆ ಕಾಲಿಡುವ ವ್ಯಾಪಾರಿಗಳಿಗೆ ಗ್ರಾಮದ ಗಡಿಯಿಂದಲೇ ವಾಪಸ್ಸು ಕಳುಹಿಸುತ್ತಿದ್ದಾರೆ.
ತಾಲೂಕಿನ ಮತ್ತಾವರ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ಮುಖಂಡರ ತೀರ್ಮಾನದಂತೆ ನಾಲ್ಕೈದು ಜನ ಗ್ರಾಮದ ಮುಂಭಾಗದಲ್ಲಿರುವ ಹಳ್ಳಿಕಟ್ಟೆ ಮೇಲೆ ಕಾದು ಕೂತಿದ್ದಾರೆ. ಗ್ರಾಮಕ್ಕೆ ಯಾರೇ ಹೊಸಬರು ಕಾಲಿಟ್ಟರೂ ಅವರಿಗೆ ಕೊರೊನಾ ಬಗ್ಗೆ ತಿಳಿ ಹೇಳಿ ವಾಪಸ್ ಕಳುಹಿಸುತ್ತಿದ್ದಾರೆ. ಐಸ್ ಕ್ರೀಂ ಮಾರುವವರು, ಪಾತ್ರೆ ವ್ಯಾಪಾರಿಗಳು, ಬಟ್ಟೆ, ಬಳೆ ಮಾರುವವರು ಸೇರಿದಂತೆ ಯಾರೊಬ್ಬರಿಗೂ ಗ್ರಾಮದೊಳಕ್ಕೆ ಬಿಡದಿರಲು ನಿರ್ಧರಿಸಿ ಕಾವಲು ಕಾಯುತ್ತಿದ್ದಾರೆ.
ಊರಿನ ಪ್ರತಿಯೊಬ್ಬರೂ ಗ್ರಾಮ ಬಿಟ್ಟು ಹೊರಗೆ ಹೋಗದಂತೆ ತೀರ್ಮಾನಿಸಿದ್ದಾರೆ. ನಾವು ಕೂಡ ಸ್ಥಳೀಯವಾಗಿ ಗ್ರಾಮದೊಳಗೆ ಓಡಾಡುತ್ತಿದ್ದೇವೆ. ಗ್ರಾಮ ಬಿಟ್ಟು ಹೊರಗೆ ಹೋಗುವುದಿಲ್ಲ. ದಿನ ಬಳಕೆಗೆ ಎಷ್ಟು ವಸ್ತುಗಳು ಬೇಕೋ ಅಷ್ಟು ವಸ್ತುಗಳನ್ನು ನಿನ್ನೆ-ಮೊನ್ನೆಯೇ ಖರೀದಿಸಿ ತಂದಿದ್ದೇವೆ. ಹಬ್ಬವನ್ನೂ ಸರಳವಾಗಿ ಮಾಡಲು ಗ್ರಾಮಸ್ಥರೆಲ್ಲಾ ತೀರ್ಮಾನಿಸಿದ್ದೇವೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಬೇರೆ ಊರುಗಳಲ್ಲಿ ಕೆಲಸ ಮಾಡುತ್ತಿರುವವರಿಗೂ ಈ ಕುರಿತು ಮಾಹಿತಿ ನೀಡಿದ್ದಾರೆ. ನೀವು ಇಲ್ಲಿಗೆ ಬರೋದು ಬೇಡ. ಎಲ್ಲಿದ್ದೀರೋ ಅಲ್ಲೆ ಇರಿ, ಹಬ್ಬಕ್ಕೂ ಬರುವುದು ಬೇಡ. ಇಲ್ಲಿಗೆ ಬಂದು ವ್ಯವಸ್ಥೆ ಹಾಳುಮಾಡೋದು ಬೇಡ ಎಂದಿದ್ದಾರೆ.
ಅಲ್ಲದೆ ಪಾಳಿ ವ್ಯವಸ್ಥೆಯಲ್ಲಿ ಗ್ರಾಮಸ್ಥರು ಗ್ರಾಮವನ್ನ ಕಾಯುತ್ತಿದ್ದಾರೆ. ಪ್ರತಿ ಎರಡ್ಮೂರು ಗಂಟೆಗೊಮ್ಮೆ ಬದಲಾಗುತ್ತಿದ್ದು, ಎರಡ್ಮೂರು ಗಂಟೆ ಬಳಿಕ ಮತ್ತೊಂದು ಟೀಂ ಕಾಯುತ್ತದೆ. ಕೊರೊನಾ ವೈರಸ್ ಒಂದು ಹಂತಕ್ಕೆ ಬರುವವರೆಗೂ ಪ್ರತಿ ದಿನ ಗ್ರಾಮವನ್ನು ಕಾಯ್ತೀವಿ ಎಂದು ತಮ್ಮ ಗ್ರಾಮವನ್ನ ಕೊರೊನಾದಿಂದ ರಕ್ಷಿಸಿಕೊಳ್ಳಲು ಗ್ರಾಮಸ್ಥರೇ ಟೊಂಕ ಕಟ್ಟಿ ನಿಂತಿದ್ದಾರೆ.
ಮಡಿಕೇರಿ: ರಾಜ್ಯ ಸರ್ಕಾರವು ರಾಜ್ಯಾದ್ಯಂತ 30 ಜಿಲ್ಲೆಗಳಲ್ಲಿ ಲಾಕ್‍ಡೌನ್ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಬಹುತೇಕ ಉಪಹಾರ ಗೃಹಗಳು ಬಂದ್ ಆಗಿದೆ. ಆದ್ದರಿಂದ ನಿರ್ಗತಿಕರಿಗೆ, ಭಿಕ್ಷುಕರಿಗೆ ಉಪಹಾರ ನೀಡುವ ಮೂಲಕ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ಕೊರೊನಾ ಸೋಂಕು ನಾಗರಿಕರಿಗೆ ಹರಡದಂತೆ ತಡೆಗಟ್ಟಲು ಸರ್ಕಾರ ಹಲವು ಕ್ರಮಗಳನ್ನು ಜರುಗಿಸಿದೆ. ಆದರೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಹೆಚ್ಚು ಜನರು ಕೂಲಿ ಕಾರ್ಮಿಕರು, ಭಿಕ್ಷುಕರು ಸೇರಿದಂತೆ ಹಲವಾರು ಮಂದಿ ಹೊಟೇಲ್, ಟೀ ಅಂಗಡಿಗಳು ಮತ್ತು ಕ್ಯಾಂಟೀನ್ ಅವಲಂಬಿಸಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ಒಂದೇ ದಿನಕ್ಕೆ ಎಲ್ಲವೂ ಸ್ತಬ್ಧವಾದ ಕಾರಣ ಅವರಲ್ಲಿ ಆತಂಕ ಉಂಟಾಗಿತ್ತು.
ಊಟ ಮಾಡಲು ಹೋಟೆಲ್‍ಗಳು ಇಲ್ಲದಿರುವುದನ್ನು ಮನಗಂಡ ಪಿರಿಯಾಪಟ್ಟಣ ಪೊಲೀಸರು ನಿರ್ಗತಿಕರಿಗೆ ಆಸರೆಯಾಗುವ ಮನಸ್ಸು ಮಾಡಿದ್ದಾರೆ. ಅದರಂತೆಯೇ ಒಂದು ಹೊತ್ತು ಉಪಹಾರ ನೀಡುವ ಮೂಲಕ ಮಾನವಿಯಂತೆ ಮೆರೆದಿದ್ದಾರೆ.
ಪಿರಿಯಾಪಟ್ಟಣ ಸುತ್ತಮುತ್ತ ಭೀಕ್ಷಕರು ಊಟವಿಲ್ಲದೆ ಪರದಾಟ ಮಾಡುವುದನ್ನು ಪಿರಿಯಾಪಟ್ಟಣ ಸರ್ಕಲ್ ಇನ್ಸ್‌ಪೆಕ್ಟರ್ ಬಿ.ಆರ್ ಪ್ರದೀಪ್ ನೋಡಿದ್ದಾರೆ. ನಂತರ ಪಿರಿಯಾಪಟ್ಟಣ ನಿವಾಸಿ ಎಚ್.ಡಿ.ಮೋಹನ್ ಕುಮಾರ್ ಸಹಕಾರದೊಂದಿಗೆ ಭಿಕ್ಷುಕರಿಗೆ, ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ಊಟ ನೀರು ನೀಡಿದ್ದಾರೆ. ಸುಮಾರು 300 ಜನಕ್ಕೆ ಈ ಸೇವೆ ಮಾಡಿ ಸಾರ್ವಜನಿಕರ ಮೆಚ್ಚುಗೆ ಪಾತ್ರವಾಗಿದ್ದಾರೆ.
– ಮಾರ್ಚ್ 31ರವರೆಗೂ KSRTC-BMTC ಬಸ್ ಸಂಚಾರ ಸಂಪೂರ್ಣ ರದ್ದು
ಬೆಂಗಳೂರು: ಕೊರೊನಾ ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟಲು ವಿವಿಧ ದೇಶಗಳಲ್ಲಿ ಈಗಾಗಲೇ ಅಳವಡಿಸಿಕೊಂಡಿರುವ ಲಾಕ್‍ಡೌನ್ ಕರ್ನಾಟಕದಲ್ಲೂ ಜಾರಿಯಾಗುವ ಸಾಧ್ಯತೆಯಿದೆ.
ಲಾಕ್‍ಡೌನ್ ಘೋಷಿಸಿದರೂ ಎಂದಿನಂತೆ ಸಂಚಾರ ವ್ಯವಸ್ಥೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾನೂನಿನ ಮೂಲಕ ಕ್ರಮ ಕೈಗೊಳ್ಳಿ ಎಂದು ಆದೇಶ ಕೊಟ್ಟ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಕರ್ನಾಟಕವನ್ನು ಲಾಕ್‍ಡೌನ್ ಮಾಡಲು ಸಿದ್ಧತೆ ನಡೆಸಿದೆ.
ನಾಳೆಯಿಂದ ಮಾರ್ಚ್ 31ರವರೆಗೆ ಲಾಕ್‍ಡೌನ್ ಮಾಡಲು ಸರ್ಕಾರ ಮುಂದಾಗಿದ್ದು, ವಾಣಿಜ್ಯ ಅಂಗಡಿಗಳು ಸಂಪೂರ್ಣ ಬಂದ್ ಆಗಲಿದೆ. ಮುಖ್ಯಮಂತ್ರಿಗಳ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಇವತ್ತು ಸಂಜೆ ವಿಪಕ್ಷ ನಾಯಕರ ಸಭೆ ಬಳಿಕ ಅಧಿಕೃತವಾಗಿ ಸಿಎಂ ನಿರ್ಧಾರ ಪ್ರಕಟಿಸಲಿದ್ದಾರೆ.
ಇಂದು ಸಿಎಂ ಬಿ.ಎಸ್.ಯಡಿಯೂರಪ್ಪ ತುರ್ತು ಸುದ್ದಿಗೋಷ್ಠಿ ನಡೆಸಿದ್ದು, ಮಾಚ್ 31ರವರೆಗೂ ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‍ಗಳ ಸಂಚಾರವನ್ನು ಸಂಪೂರ್ಣವಾಗಿ ರದ್ದು ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಕೆಎಸ್ಆರ್‌ಟಿಸಿ, ಬಿಎಂಟಿಸಿ ಬಸ್ ಸಂಚಾರ ಇರುವುದಿಲ್ಲ. ಅಂಗಡಿ ಮುಂಗಟ್ಟುಗಳು ಕ್ಲೋಸ್ ಆಗಿರುತ್ತವೆ. ಅಗತ್ಯ ವಸ್ತುಗಳ ಅಂಗಡಿಗಳು ಮಾತ್ರ ತೆರೆದಿರುತ್ತವೆ. ಹಾಲು, ತರಕಾರಿ, ಹಣ್ಣು, ಆಸ್ಪತ್ರೆ, ಮೆಡಿಕಲ್ ಶಾಪ್ ಓಪನ್ ಇರುತ್ತದೆ. ಖಾಸಗಿ ವಾಹನಗಳು ಸೇರಿದಂತೆ ಎಲ್ಲವೂ ರಸ್ತೆಯಲ್ಲಿ ಓಡಾಡುವಂತಿಲ್ಲ. ವಾಣಿಜ್ಯ ಅಂಗಡಿಗಳು ಫುಲ್ ಬಂದ್ ಆಗಲಿವೆ ಎಂದು ಹೇಳಿದರು.
ಖಾಸಗಿ ಆಸ್ಪತ್ರೆ ವೈದ್ಯರ ಜೊತೆ ಸಾಕಷ್ಟು ಚರ್ಚೆ ಆಗಿದೆ. ಕೊರೊನಾ ಸೋಂಕಿತರ ಸಂಪರ್ಕದಲ್ಲಿದ್ದವರನ್ನ ಹುಡುಕಿ ಕ್ವಾರಂಟೈನ್ ಮಾಡುವುದೇ ದೊಡ್ಡ ಸವಾಲಾಗಿದೆ. ಗಂಭೀರತೆ ಅರಿತು ಸ್ವಯಂ ಪ್ರೇರಣೆಯಿಂದ ಮನೆಯಲ್ಲಿರಬೇಕು. ನಗರ ಪ್ರದೇಶದ ಜನ ಗ್ರಾಮೀಣ ಪ್ರದೇಶಕ್ಕೆ ಹೋಗಿ ಅಲ್ಲಿ ತೊಂದರೆ ಮಾಡಬೇಡಿ. ಬೆಂಗಳೂರು ನಗರದಲ್ಲಿ 144 ಸೆಕ್ಷನ್ ಮುಂದುವರಿಯುತ್ತದೆ. ಬಡವರಿಗೆ ಮಾತ್ರ ದಿನಪೂರ್ತಿ ಉಚಿತ ಊಟ ಕೊಡಲಾಗುತ್ತದೆ. ಇಂದಿರಾ ಕ್ಯಾಂಟಿನ್‍ನಲ್ಲಿ ಬಡವರಿಗೆ ಉಚಿತ ಊಟವನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಬೆಂಗಳೂರು: ಕಣ್ಣಿಗೆ ಕಾಣದ ವೈರಿ ಕೊರೊನಾ ವಿರುದ್ಧ ಇವತ್ತು ಇಡೀ ಜಗತ್ತೇ ಯುದ್ಧ ಮಾಡುತ್ತಿದೆ. ಪ್ರತಿದಿನವೂ ಸಾವಿರಾರು ಮಂದಿಯ ಪ್ರಾಣ ತೆಗೆಯುತ್ತಾ, ಮಾನವನ ಬುದ್ಧಿಶಕ್ತಿಗೆ ಸವಾಲ್ ಹಾಕುತ್ತಿರುವ ಕೊರೊನಾ ಹೊಡೆದೋಡಿಸಲು ಶತಪ್ರಯತ್ನ ಮಾಡಲಾಗುತ್ತಿದೆ. ಕರ್ನಾಟಕ ಸೇರಿ ಇಡೀ ದೇಶದಲ್ಲಿ ಹಲವು ಕ್ರಮ ಕೈಗೊಳ್ಳಲಾಗಿದೆ. ಆದರೂ ಸೋಂಕು ಕಡಿಮೆ ಆಗಿಲ್ಲ.
ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇವತ್ತು 6 ಮಂದಿಯಲ್ಲಿ ಸೋಂಕು ಕಂಡುಬಂದಿದೆ. ಇದರಿಂದ ಸೋಂಕಿತರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಇವತ್ತು ಜನರಿಂದ ಜನರಿಗಾಗಿ ಜನರಿಗೋಸ್ಕರವೇ ಕರೆ ನೀಡಲಾಗಿದ್ದ ಜನತಾ ಕರ್ಫ್ಯೂಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಇವತ್ತಿನ ಕರ್ಫ್ಯೂ ಸ್ಯಾಂಪಲ್ ಅನ್ನೋದು ಈಗ ಸಾಬೀತಾಗುತ್ತಿದೆ.
ಇಡೀ ರಾಜ್ಯ ಲಾಕ್‍ಡೌನ್ ಆಗುತ್ತಿದೆ. ಮೊದಲ ಹಂತವಾಗಿ ಬೆಂಗಳೂರು ಸೇರಿ ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡುಬಂದ 9 ಜಿಲ್ಲೆಗಳನ್ನು ಲಾಕ್‍ಡೌನ್ ಮಾಡಲಾಗಿದೆ. ತುರ್ತು ಸೇವೆ ಹೊರತುಪಡಿಸಿ ಉಳಿದ ಯಾವುದೇ ಸೇವೆಗಳು ಲಭ್ಯ ಇಲ್ಲ.
ಬೆಂಗಳೂರು ಸೇರಿ 9 ಜಿಲ್ಲೆ ಲಾಕ್‍ಡೌನ್:
ಕೊರೊನಾ ಸೋಂಕಿತರು ಕಂಡು ಬಂದ 9 ಜಿಲ್ಲೆಯನ್ನು ಮಾಚ್ 31ರವರೆಗೂ ಲಾಕ್‍ಡೌನ್ ಮಾಡಲಾಗಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಬೆಳಗಾವಿ, ಚಿಕ್ಕಬಳ್ಳಾಪುರ, ಮೈಸೂರು, ಕಲಬುರ್ಗಿ, ಕೊಡಗು, ಧಾರವಾಡ ಜಿಲ್ಲೆಯನ್ನು ಲಾಕ್‍ಡೌನ್ ಮಾಡಲಾಗುತ್ತಿದೆ.
ಏನಿರಲ್ಲ?
* ತುರ್ತು ಸೇವೆ ಹೊರತುಪಡಿಸಿ ಉಳಿದೆಲ್ಲಾ ಸೇವೆ ಬಂದ್
* ಅಂಗಡಿ ಮುಂಗಟ್ಟು, ವಾಣಿಜ್ಯ ವ್ಯಾಪಾರ ಬಂದ್
* ವರ್ಕ್ ಶಾಪ್, ಗೋಡಾನ್
* ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸಂಚಾರ (ಭಾಗಶಃ ಬಂದ್)
* ಕೆಎಸ್ಆರ್‌ಟಿಸಿ, ಖಾಸಗಿ ಬಸ್ ಬಂದ್
* ಐಟಿ-ಬಿಟಿ ಮಂದಿಗೆ ಮನೆಯಿಂದಲೇ ಕೆಲಸ
* ಗಾರ್ಮೆಂಟ್ಸ್ ನೌಕರರಿಗೆ ರೊಟೇಷನ್ ಪದ್ಧತಿಯಲ್ಲಿ ಕೆಲಸ
* 9 ಜಿಲ್ಲೆಗಳಲ್ಲಿ ಅಂತರ್ ಜಿಲ್ಲೆ ಸಾರಿಗೆ ಸೇವೆ ಬಂದ್
ಲಾಕ್‍ಡೌನ್ 9 ಜಿಲ್ಲೆಗಳಲ್ಲಿ ಏನು ಇರುತ್ತೆ:
* ಹಾಲು, ತರಕಾರಿ, ದಿನಸಿ ಅಂಗಡಿ
* ಹೋಟೆಲ್‍ನಿಂದ ಪರ್ಸೆಲ್‍ಗೆ ಅವಕಾಶ (ಹೋಂ ಡೆಲಿವರಿ)
* ಮಾಂಸ ಮತ್ತು ಮೀನು ಅಂಗಡಿ
* ಬ್ಯಾಂಕ್, ಎಟಿಎಂ
* ಸರ್ಕಾರಿ ಕಚೇರಿ
* ಪೊಲೀಸ್, ಜಲಮಂಡಳಿ, ಪೌರ ಕಾರ್ಮಿಕ ಸೇವೆ
ಇನ್ನೂ ಬೆಳಗ್ಗೆಯಿಂದ ಸಭೆಗಳ ಮೇಲೆ ಸಭೆ ನಡೆಸಿದ ರಾಜ್ಯ ಸರ್ಕಾರ ಮತ್ತಷ್ಟು ಕಠಿಣ ಕ್ರಮ ಕೈಗೊಂಡಿದೆ.
ರಾಜ್ಯ ಸರ್ಕಾರದ ಕಠಿಣ ನಿರ್ಧಾರ:
* ನಿರ್ಧಾರ 1 – ಜನತಾ ಕರ್ಫ್ಯೂ ಮುಗಿದ ಕೂಡಲೇ 144 ಸೆಕ್ಷನ್ ಜಾರಿ (ಮಧ್ಯರಾತ್ರಿವರೆಗೂ ಮಾತ್ರ)
* ನಿರ್ಧಾರ 2 – 9 ಜಿಲ್ಲೆ ಹೊರತುಪಡಿಸಿ, ಉಳಿದ ಕಡೆ ಸಾರಿಗೆ ಬಸ್ ಸಂಚಾರ (ಬಸ್‍ಗಳ ಸಂಖ್ಯೆಯಲ್ಲಿ ಕಡಿತ)
* ನಿರ್ಧಾರ 3 – ಮಾ.31ರವರೆಗೂ ಎಲ್ಲಾ ಎಸಿ ಬಸ್ ಸೇವೆ ಸ್ಥಗಿತ
* ನಿರ್ಧಾರ 4 – 15 ದಿನಗಳ ಕಾಲ ನಗರದಿಂದ ಹಳ್ಳಿಗಳಿಗೆ ಹೋಗುವಂತಿಲ್ಲ
* ನಿರ್ಧಾರ 5 – ಮಾ.31ರವರೆಗೂ ನಮ್ಮ ಮೆಟ್ರೋ ಸೇವೆ ಸ್ಥಗಿತ
* ನಿರ್ಧಾರ 6 – ರಾಜ್ಯದೆಲ್ಲೆಡೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮುಂದೂಡಿಕೆ (ಮಾ.27ರಿಂದ ಆರಂಭ ಆಗಬೇಕಿತ್ತು)
* ನಿರ್ಧಾರ 7 – ನಾಳೆಯ ಪಿಯುಸಿ ಪರೀಕ್ಷೆ ಮುಂದೂಡಿಕೆ
* ನಿರ್ಧಾರ 8 – ವಿವಿಧ ನೇಮಕಾತಿ ಪರೀಕ್ಷೆಗಳು ಮುಂದೂಡಿಕೆ
* ನಿರ್ಧಾರ 9 – ಸ್ಥಳೀಯ ಚುನಾವಣೆಗಳು ಮುಂದೂಡಿಕೆ
* ನಿರ್ಧಾರ 10 – ರಾಜ್ಯದ ಎಲ್ಲಾ ಗಡಿಗಳು ಸಂಪೂರ್ಣ ಬಂದ್
* ನಿರ್ಧಾರ 11 – ಕೊರೊನಾ ಬಾಧಿತರಿಗೆ ವಿಕ್ಟೋರಿಯಾ ಆಸ್ಪತ್ರೆ ಮೀಸಲು (1700 ಹಾಸಿಗೆಗಳ ವಿಶೇಷ ಸಮುಚ್ಚಯ ಕೊರೊನಾ ರೋಗಿಗಳಿಗೆ ಮೀಸಲು)
* ನಿರ್ಧಾರ 12 – ವಿಕ್ಟೋರಿಯಾ ಆಸ್ಪತ್ರೆ ರೋಗಿಗಳು ಬೇರೆ ಆಸ್ಪತ್ರೆಗಳಿಗೆ ಶಿಫ್ಟ್
* ನಿರ್ಧಾರ 13 – ಬಾಲಬ್ರೂಯಿ ಭವನದಲ್ಲಿ ಕೊರೊನಾ ವಾರ್ ರೂಂ
* ನಿರ್ಧಾರ 14 – ಏಪ್ರಿಲ್ ಮೊದಲ ವಾರದಲ್ಲಿ ಬಿಪಿಎಲ್ ಪಡಿತರದಾರರಿಗೆ ಎರಡು ತಿಂಗಳ ಪಡಿತರ ವಿತರಣೆ
ಬೆಂಗಳೂರು: ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದೇಶದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದ್ದಂತೆ ಹಂತ ಹಂತವಾಗಿ ಎಲ್ಲ ಉದ್ಯಮಗಳು ಬಂದ್ ಆಗುತ್ತಿದೆ. ಇದೀಗ ಬಟ್ಟೆ ಅಂಗಡಿಗಳು ಬಂದ್ ಆಗಿವೆ.
ಭಾನುವಾರದಿಂದ ಮೂರು ದಿನಗಳ ಕಾಲ ಬಟ್ಟೆ ವ್ಯಾಪಾರಿಗಳು ಸಂಪೂರ್ಣ ಬಂದ್ ಮಾಡಲು ನಿರ್ಧಾರ ಮಾಡಿದ್ದು, ಅದರ ಎಫೆಕ್ಟ್ ಇಂದಿನಿಂದಲೇ ಶುರುವಾಗಿದೆ. ಬಟ್ಟೆ ವ್ಯಾಪಾರಕ್ಕೆ ಫೇಮಸ್ ಆಗಿದ್ದ ನಗರದ ಚಿಕ್ಕಪೇಟೆಯಲ್ಲಿ ಇಂದಿನಿಂದಲೇ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಚಿಕ್ಕಪೇಟೆ ಸೇರಿದಂತೆ ಬಹುತೇಕ ದೊಡ್ಡ ದೊಡ್ಡ ಬಟ್ಟೆ ಮಳಿಗೆಗಳು ಈಗಾಗಲೇ ಬಾಗಿಲು ಮುಚ್ಚಿವೆ.
ಭಾನುವಾರ ಪ್ರಧಾನಿ ನರೇಂದ್ರ ಮೋದಿ ಜನತಾ ಕರ್ಫ್ಯೂ ಘೋಷಣೆ ಮಾಡಿದ್ದು, ಬಹುತೇಕ ಜನರು ಜನತಾ ಕರ್ಫ್ಯೂ ವನ್ನು ಸ್ವಾಗತಿಸಿದ್ದಾರೆ. ಪ್ರತಿದಿನ ಲಕ್ಷಾಂತರ ರೂಪಾಯಿ ವ್ಯಾಪಾರ ಮಾಡುತ್ತಿದ್ದ ಅಂಗಡಿಗಳು ಸಂಪೂರ್ಣ ಕ್ಲೋಸ್ ಆಗಿದೆ. ಈ ಅಂಗಡಿಗಳಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದ ಜನರಿಗೆ ಮೂರು ದಿನಗಳ ಬಟ್ಟೆ ವ್ಯವಹಾರ ಬಂದ್ ಆಗಿರುವುದು ತುಂಬಾ ತೊಂದರೆಯಾಗಿದೆ.
ದಿನ ಕೆಲಸ ಮಾಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಮೂರು ದಿನ ರಜೆ ನೀಡಿದರೆ ನಮ್ಮ ಕುಟುಂಬ ನಿರ್ವವಣೆ ಕಷ್ಟವಾಗಲಿದೆ ಎಂದು ಬಟ್ಟೆ ಅಂಗಡಿಗಳಲ್ಲಿ ಕೆಲಸ ಮಾಡೋ ಸಿಬ್ಬಂದಿ ತಮ್ಮ ಅಳಲನ್ನು ತೋಡಿಕೊಂಡರು. ಸದ್ಯ ಮೂರು ದಿನಗಳ ಮಟ್ಟಿಗೆ ಮಾತ್ರ ಬಟ್ಟೆ ವ್ಯಾಪಾರ ಬಂದ್ ಆಗಿದ್ದು, ಕೊರೊನಾ ವೈರಸ್ ಮುಂದಿನ ಹಂತ ನೋಡಿಕೊಂಡು ಬಟ್ಟೆ ವ್ಯಾಪಾರ ನಿರ್ಧಾರವಾಗಲಿದೆ.
ಬೆಂಗಳೂರು: ಮನೆಯಂಗಳಕ್ಕೆ ಬಂದು ಬಾಗಿಲು ಬಡಿಯುತ್ತಿರುವ ಕೊರೊನಾ ಮಾರಿ ಹೊಡೆದೊಡಿಸಲು ಪ್ರಧಾನಿ ಮೋದಿ, ಜನರಿಂದ ಜನರಿಗಾಗಿ, ಜನರಿಗೋಸ್ಕರ ಪ್ರಯೋಗಿಸಿರುವ ಭಾನುವಾರದ ಜನತಾ ಕರ್ಫ್ಯೂ ಯಶಸ್ವಿಗೊಳಿಸಲು ಇಡೀ ಕರುನಾಡು ಕಂಕಣ ತೊಟ್ಟಿದೆ.
ಬೆಂಗಳೂರಿಗರನ್ನು ಸೇರಿದಂತೆ ಇಡೀ ರಾಜ್ಯದ ಜನರನ್ನು ಮಾತನಾಡಿಸಿದಾಗ, ನಾವು ಜನತಾ ಕರ್ಫ್ಯೂನಲ್ಲಿ ಪಾಲ್ಗೊಳ್ಳುತ್ತೇವೆ. ಮನೆಯಲ್ಲಿ ಇದ್ದು ಜನತಾ ಕರ್ಫ್ಯೂಗೆ ಬೆಂಬಲ ಕೊಡುತ್ತೇವೆ ಎಂದು ಹೇಳಿದ್ದಾರೆ. ಭಾನುವಾರದ ಜನತಾ ಕರ್ಫ್ಯೂಗೆ ರಾಜ್ಯದ ಸಾವಿರಾರು ಸಂಘಟನೆಗಳು, ಬೆಂಬಲ ಘೋಷಿಸಿವೆ.
ಒಂದು ದಿನದ ಮಟ್ಟಿಗೆ ತಮ್ಮೆಲ್ಲಾ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡುತ್ತೇವೆ. ಪ್ರಧಾನಿ ಮೋದಿ ಹೇಳುತ್ತಿರುವುದು ನಮ್ಮ ಒಳ್ಳೆಯದಕ್ಕೆ ಎಂದು ಸಂಘ ಸಂಸ್ಥೆಗಳ ಮುಖಂಡರು ಹೇಳಿಕೆ ನೀಡಿದ್ದಾರೆ. ಹೀಗಾಗಿ ಭಾನುವಾರದ ಜನತಾ ಕರ್ಫ್ಯೂ ಯಶಸ್ವಿ ಆಗೋದು ಬಹುತೇಕ ಖಚಿತವಾಗಿದೆ.
ಭಾನುವಾರ ಏನೇನು ಇರಲ್ಲ:
* ದರ್ಶಿನಿ, ಕೆಫೆ, ಹೋಟೆಲ್, ಸ್ಟಾರ್ ಹೋಟೆಲ್
* ನಗರ ಪೊಲೀಸ್ ಕಮೀಷನರ್ ಕಚೇರಿ (ಕಂಟ್ರೋಲ್ ರೂಮ್ ಹೊರತುಪಡಿಸಿ ಬೇರೆಲ್ಲಾ ಕಚೇರಿ ಬಂದ್)
* ಬಿಎಂಟಿಸಿ (ಶೇ.20ರಷ್ಟು ಮಾತ್ರ ಸೇವೆ), ಕೆಎಸ್ಆರ್‌ಟಿಸಿ, ಲಾರಿ
* ನಮ್ಮ ಮೆಟ್ರೋ
* ರೈಲು ಸೇವೆ (ನಾಳೆ ಮಧ್ಯರಾತ್ರಿಯಿಂದ ಭಾನುವಾರ ರಾತ್ರಿ 10 ಗಂಟೆಯವರೆಗೆ)
* ಆಟೋ, ಓಲಾ, ಊಬರ್
* ಎಪಿಎಂಸಿ, ತರಕಾರಿ ಮಾರ್ಕೆಟ್ (ತರಕಾರಿ, ಹೂವು, ಹಣ್ಣು)
* ಕೆ.ಆರ್ ಮಾರ್ಕೆಟ್
* ಆಭರಣ ಮಳಿಗೆ
* ಬಟ್ಟೆ ಅಂಗಡಿ
* ಬಾರ್, ವೈನ್ ಶಾಪ್
* ಪೀಣ್ಯಾ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳು
* ದೇವಸ್ಥಾನ
* ಚಿತ್ರೋದ್ಯಮದ ಶೂಟಿಂಗ್, ಚಟುವಟಿಕೆ
* ಇಂದಿರಾ ಕ್ಯಾಂಟೀನ್
ಜನತಾ ಕರ್ಫ್ಯೂ- ಏನೇನು ಇರುತ್ತೆ?
* ಅಂಬುಲೆನ್ಸ್ ಸೇವೆ
* ಆಸ್ಪತ್ರೆ, ಮೆಡಿಕಲ್ ಶಾಪ್
* ಪೆಟ್ರೋಲ್ ಬಂಕ್ ( ಶಿವಮೊಗ್ಗ, ಮೈಸೂರಿನಲ್ಲಿ ಮಾತ್ರ ಬಂದ್)
* ಹಾಲು, ಪೇಪರ್
ರಾಯಚೂರು: ಕೊರೊನಾ ಎಫೆಕ್ಟ್ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯಿಂದ ಕಲಬುರಗಿಗೆ ಹೋಗುತ್ತಿದ್ದ ಎಲ್ಲಾ ಸರ್ಕಾರಿ ಬಸ್‍ಗಳ ಸಂಚಾರ ಬಂದ್ ಮಾಡಲಾಗಿದೆ.
ಜಿಲ್ಲೆಯ ವಿವಿಧ ಡಿಪೋಗಳಿಂದ ಒಟ್ಟು 26 ಬಸ್‍ಗಳು ಕಲಬುರಗಿಗೆ ಹೋಗುತ್ತಿದ್ದವು. ಈಗ ಎಲ್ಲವೂ ಸಂಚಾರ ಸ್ಥಬ್ದಗೊಳಿಸಿವೆ ಎಂದು ಸಾರಿಗೆ ವಿಭಾಗೀಯ ನಿಯಂತ್ರಕ ವೆಂಕಟೇಶ್ ಹೇಳಿದ್ದಾರೆ.
ಕಲಬುರಗಿಯಲ್ಲಿ ವೃದ್ಧ ಸಾವನ್ನಪ್ಪಿದ ನಂತರ ಮತ್ತೆರಡು ಪಾಸಿಟಿವ್ ಬಂದಿರುವುದರಿಂದ ಜಿಲ್ಲೆಯ ಜನರಲ್ಲೂ ಆತಂಕ ಮನೆ ಮಾಡಿದೆ. ಇದರಿಂದ ರಾಯಚೂರಿಂದ ಹೋಗುವ ಬಸ್ ಗಳು ಶಹಪುರದವರೆಗೆ ಮಾತ್ರ ಸಂಚಾರ ಮಾಡುತ್ತಿವೆ. ಹೀಗಾಗಿ ಕಲಬುರಗಿಗೆ ರಸ್ತೆ ಸಾರಿಗೆ ಸಂಪರ್ಕ ಸಂಪೂರ್ಣ ಬಂದ್ ಆಗಿದೆ.
ರಾಯಚೂರಿನಿಂದ ಖಾಸಗಿ ಬಸ್‍ಗಳ ಸಂಚಾರವೂ ಇಲ್ಲದಿರುವುದರಿಂದ ಪ್ರಯಾಣಿಕರು ಪರದಾಟಕ್ಕೀಡಾಗಿದ್ದಾರೆ. ಅಲ್ಲದೆ ಪ್ಯಾಸೆಂಜರ್ ರೈಲು ಸಹ ತಾಂತ್ರಿಕ ಕಾರಣಕ್ಕೆ ರಾಯಚೂರು ಕಲಬುರಗಿ ಸಂಚಾರ ನಿಲ್ಲಿಸಿದೆ. ಈಗಾಗಲೇ ರಾಯಚೂರಿನಿಂದ ಕಲಬುರಗಿಗೆ ಹೋಗುವವರ ಸಂಖ್ಯೆಯೂ ಗಣನೀಯವಾಗಿ ಇಳಿಕೆಯಾಗಿದೆ.