Tag: ಬಂದ್

  • ಮೂರು ದಿನ ಮೈಸೂರು ಅರಮನೆ ಪ್ರವಾಸಿಗರಿಗೆ ಬಂದ್

    ಮೂರು ದಿನ ಮೈಸೂರು ಅರಮನೆ ಪ್ರವಾಸಿಗರಿಗೆ ಬಂದ್

    – ನಾಗರಹೊಳೆ, ಬಂಡಿಪುರ ಸಫಾರಿ ಮತ್ತೆ ಬಂದ್

    ಮೈಸೂರು: ಜಿಲ್ಲೆಯಲ್ಲಿ ಕೊರೊನಾ ಉಲ್ಬಣವಾಗುತ್ತಿದ್ದು, ಮೈಸೂರು ಅರಮನೆಗೂ ಕೊರೊನಾ ಭೀತಿ ಕಾಡುತ್ತಿದೆ. ಮೂರು ದಿನ ಅರಮನೆಯನ್ನು ಪ್ರವಾಸಿಗರಿಗೆ ಬಂದ್ ಮಾಡಲಾಗಿದೆ.

    ಅರಮನೆಯಲ್ಲಿ ಒಂಟೆ ನೋಡಿಕೊಳ್ಳುವ ವ್ಯಕ್ತಿಯ ಮಗನಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮೂರು ದಿನ ಅರಮನೆಯನ್ನು ಬಂದ್ ಮಾಡಲಾಗಿದೆ. ಇಂದು ಅರಮನೆ ಆವರಣದಲ್ಲಿ ಸ್ಯಾನಿಟೈಸ್ ಮಾಡಲು ಸಿದ್ಧತೆ ಮಾಡಲಾಗಿದೆ. ಶನಿವಾರ ಮತ್ತು ಭಾನುವಾರ ಪ್ರವಾಸಿಗರಿಗೆ ನಿರ್ಬಂಧ ಮಾಡಲಾಗಿದೆ. ಇವತ್ತು ಒಂದು ದಿನ ಅರಮನೆ ಆವರಣ ಸ್ಯಾನಿಟೈಸ್‍ಗಾಗಿ ನಿರ್ಬಂಧ ಮಾಡಲಾಗಿದೆ.

    ಅರಮನೆ ಹಿಂಬದಿ ಆವರಣದಲ್ಲಿ ಒಂಟೆಯನ್ನು ಕಟ್ಟಲಾಗಿದೆ. ಇಲ್ಲಿ ಒಂಟೆಯನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿಯ ಮನೆಯಲ್ಲಿರುವ ಮಗನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದರಿಂದ ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಯಾವುದೇ ಆತಂಕ ಪಡುವಾಗಿಲ್ಲ, ಮುಂಜಾಗ್ರತ ಕ್ರಮ ಕೈಗೊಂಡಿದ್ದೇವೆ ಎಂದು ಅರಮನೆ ಉಪ ನಿರ್ದೇಶಕ ಸುಬ್ರಹ್ಮಣ್ಯ ಮಾಹಿತಿ ನೀಡಿದ್ದಾರೆ.

    ಇನ್ನೂ ಮೈಸೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ನಾಗರಹೊಳೆ, ಬಂಡಿಪುರ ಸಫಾರಿಯನ್ನು ಮತ್ತೆ ಬಂದ್ ಮಾಡಲಾಗಿದೆ. ಸಫಾರಿ ಬಂದ್ ಮಾಡಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಆದೇಶ ಹೊರಡಿಸಿದ್ದಾರೆ. ಗುರುವಾರದಿಂದ ಹೆಚ್.ಡಿ.ಕೋಟೆ ತಾಲೂಕಿನಾದ್ಯಂತ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ.

    ಹೆಚ್.ಡಿ.ಕೋಟೆ ತಾಲೂಕು ವ್ಯಾಪ್ತಿಯ ಹೋಂಸ್ಟೇ, ರೆಸಾರ್ಟ್, ಲಾಡ್ಜ್ ಗಳಲ್ಲಿ ಪ್ರವಾಸಿಗರಿಗೆ ಸೌಲಭ್ಯ ನೀಡುವಂತಿಲ್ಲ. ನಾಗರಹೊಳೆ ಹಾಗೂ ಬಂಡಿಪುರದಲ್ಲಿ ಸಫಾರಿಗೂ ಅವಕಾಶ ಇಲ್ಲ. ಸದ್ಯ ಇರುವ ಪ್ರವಾಸಿರನ್ನ ಅವಧಿ ಮುಗಿಸಿ ವಾಪಸ್ ಕಳುಹಿಸಿ. ಮುಂದಿನ ಆದೇಶದವರೆಗೂ ಇಡೀ ತಾಲೂಕಿನಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂದು ಅಭಿರಾಮ್ ಜಿ.ಶಂಕರ್ ಆದೇಶ ಹೊರಡಿಸಿದ್ದಾರೆ.

    ಈಗಾಗಲೇ ಮೂರನೇ ಆಷಾಢ ಶುಕ್ರವಾರ ಹಾಗೂ ವಾರಾಂತ್ಯ ಶನಿವಾರ, ಭಾನುವಾರದಂದು ಚಾಮುಂಡಿ ಬೆಟ್ಟಕ್ಕೆ ಭಕ್ತಾದಿಗಳ ಪ್ರವೇಶಕ್ಕೆ ನಿರ್ಬಂಧವಿದೆ. ಇದರ ಜೊತೆಗೆ ಸೋಮವಾರ ಚಾಮುಂಡೇಶ್ವರಿ ದೇವಿಯ ಜನ್ಮೋತ್ಸವವಿರುವ ಕಾರಣ ಹಾಗೂ ಆಷಾಢ ಮಾಸದ ಕಡೆಯ ಮಂಗಳವಾರ ಸೇರಿ ಸತತ ಐದು ದಿನಗಳ ಕಾಲ ಚಾಮುಂಡಿಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಮಾಡಲಾಗಿದೆ.

  • ಇಂದು ರಾತ್ರಿಯಿಂದಲೇ ಕರ್ನಾಟಕ ಸ್ತಬ್ಧ- ಏನಿರುತ್ತೆ?, ಏನಿರಲ್ಲ?

    ಇಂದು ರಾತ್ರಿಯಿಂದಲೇ ಕರ್ನಾಟಕ ಸ್ತಬ್ಧ- ಏನಿರುತ್ತೆ?, ಏನಿರಲ್ಲ?

    – ಸೋಮವಾರ ಮುಂಜಾನೆ 5 ಗಂಟೆವರೆಗೂ ಕರ್ಫ್ಯೂ ಜಾರಿ

    ಬೆಂಗಳೂರು: ದಿನದಿಂದ ದಿನಕ್ಕೆ ಕೊರೊನಾ ಸ್ಫೋಟವಾಗುತ್ತಲೇ ಇದೆ. ಇತ್ತ ಕೊರೊನಾ ಹರಡದಂತೆ ತಡೆಯಲು ಇವತ್ತು ರಾತ್ರಿಯಿಂದಲೇ ಕರ್ನಾಟಕ ಸ್ತಬ್ಧವಾಗಲಿದೆ.

    ಕೊರೊನಾ ನಿಯಂತ್ರಣಕ್ಕಾಗಿ ಇಂದು ರಾತ್ರಿ 8 ಗಂಟೆಯಿಂದ ಸಂಡೇ ಕರ್ಫ್ಯೂ ಜಾರಿಯಾಗಲಿದೆ. ಇಂದು ರಾತ್ರಿ 8 ಗಂಟೆಯಿಂದ ಸೋಮವಾರ ಮುಂಜಾನೆ 5 ಗಂಟೆಯವರೆಗೂ ಕರ್ಫ್ಯೂ ಜಾರಿಯಾಗಲಿದೆ. ತುರ್ತು, ಅಗತ್ಯ ಸೇವೆ ಹೊರತುಪಡಿಸಿ ಉಳಿದವೆಲ್ಲಾ ಕಂಪ್ಲೀಟ್ ಬಂದ್ ಆಗಲಿದೆ. ಇಂದು ರಾತ್ರಿ 8ರ ನಂತರ ಬೇಕಾಬಿಟ್ಟಿಯಾಗಿ ಓಡಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ.

    ನಾಳೆ ಏನಿರುತ್ತೆ?
    * ಮಾಂಸದ ಅಂಗಡಿಗಳು ಓಪನ್
    * ಹಣ್ಣು, ತರಕಾರಿ, ದಿನಸಿ ಪದಾರ್ಥ ಖರೀದಿಗೆ ಅವಕಾಶ
    * ಆಸ್ಪತ್ರೆ, ಮೆಡಿಕಲ್ ಸ್ಟೋರ್ಸ್, ಮಾಧ್ಯಮಗಳಿಗೆ ಅವಕಾಶ
    * ಎಂದಿನಂತೆ ಡಾಕ್ಟರ್ಸ್, ನರ್ಸ್ ಗಳಿಗೆ ಆಂಬುಲೆನ್ಸ್, ಓಡಾಟ
    * ಅನಾರೋಗ್ಯ ಸಮಸ್ಯೆವುಳ್ಳರಿಗೆ ಆಸ್ಪತ್ರೆಗೆ ಹೋಗಲು ಅವಕಾಶ
    * ಗರ್ಭಿಣಿ ಸ್ತ್ರೀಯರಿಗೆ ತಪಾಸಣೆಗೆ ಸಮಸ್ಯೆ ಇಲ್ಲ
    * ತುರ್ತು ಚಿಕಿತ್ಸೆ, ರೋಗಿಗಳಿಗೆ ಆಸ್ಪತ್ರೆ ಹೋಗಲು ಅವಕಾಶ

    ನಾಳೆ ಏನಿರಲ್ಲ?
    * ರಸ್ತೆಗಿಳಿಯಲ್ಲ ಆಟೋ, ಕ್ಯಾಬ್, ಬೈಕ್
    * ಬಾರ್, ಸೆಲೂನ್, ಬ್ಯೂಟಿ ಪಾರ್ಲರ್, ಪಾರ್ಕ್ ಕ್ಲೋಸ್
    * ಗಾರ್ಮೆಂಟ್ಸ್, ಫ್ಯಾಕ್ಟರಿ, ಕಾರ್ಖಾನೆಗಳು, ಕಂಪನಿಗಳು ಸ್ತಬ್ಧ
    * ಎಲ್ಲಾ ಪಾರ್ಕ್ ಗಳು ಬಂದ್
    * ಮದ್ಯದಂಗಡಿ ಸಂಪೂರ್ಣ ಬಂದ್
    * ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಓಡಲ್ಲ (ಭಾನುವಾರ ಬೆಳಗ್ಗೆಯಿಂದ ಸೋಮವಾರ ಬೆಳಗ್ಗೆಯವರೆಗೂ ಇರುವುದಿಲ್ಲ)
    * ಹೋಟೆಲ್‍ಗಳು ಪಾರ್ಸಲ್ ಮಾತ್ರ
    * ಬೆಂಗಳೂರಿನಲ್ಲಿ ಎಲ್ಲಾ ಫ್ಲೈಓವರ್‌ಗಳು ಇಂದು ಸಂಜೆಯಿಂದ ಕ್ಲೋಸ್

  • ಒಂದು ವಾರ ಎಪಿಎಂಸಿ ತರಕಾರಿ ಮಾರುಕಟ್ಟೆ ಬಂದ್

    ಒಂದು ವಾರ ಎಪಿಎಂಸಿ ತರಕಾರಿ ಮಾರುಕಟ್ಟೆ ಬಂದ್

    ಚಾಮರಾಜನಗರ: ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚಾಮರಾಜನಗರ ಎಪಿಎಂಸಿ (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ) ತರಕಾರಿ ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

    ತರಕಾರಿ ಮಂಡಿಗಳನ್ನು ಇಂದಿನಿಂದ ಆರು ದಿನಗಳ ಕಾಲ ಮುಚ್ಚಲು ತರಕಾರಿ ವ್ಯಾಪಾರಿಗಳು, ದಲ್ಲಾಳಿಗಳು ತೀರ್ಮಾನಿಸಿದ್ದು, ಎಪಿಎಂಸಿಯಲ್ಲಿ ತರಕಾರಿ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಈ ಮಾಹಿತಿ ಇಲ್ಲದೆ ಇಂದು ಮಾರುಕಟ್ಟೆಗೆ ತರಕಾರಿ ತಂದ ಕೆಲ ರೈತರು ನಿರಾಶರಾಗಿ ವಾಪಸ್ ಹೋಗಬೇಕಾಯಿತು. ಇಷ್ಟು ದಿನ ರೈತರು, ವ್ಯಾಪಾರಿಗಳು, ದಲ್ಲಾಳಿಗಳಿಂದ ಗಿಜಿಗುಡುತ್ತಿದ್ದ ಎಪಿಎಂಸಿ ತರಕಾರಿ ಮಾರುಕಟ್ಟೆ ಇಂದು ಬಿಕೋ ಎನ್ನುತ್ತಿತ್ತು.

    ರೈತರು, ಸಗಟು, ಚಿಲ್ಲರೆ ವ್ಯಾಪಾರಿಗಳು, ದಲ್ಲಾಳಿಗಳು ಸೇರಿದಂತೆ ನಿತ್ಯ ಎರಡು ಸಾವಿರಕ್ಕೂ ಹೆಚ್ಚು ಮಂದಿ ತರಕಾರಿ ಮಂಡಿಗೆ ಬರುತ್ತಾರೆ. ತರಕಾರಿ ಹರಾಜು ಮತ್ತು ವ್ಯಾಪಾರದ ವೇಳೆ ಸಾಮಾಜಿಕ ಅಂತರ ಕಾಪಾಡುವುದು ಕಷ್ಟವಾಗಿದೆ. ಹೀಗಾಗಿ ಜನಜಂಗುಳಿಯಿಂದ ಕೊರೊನಾ ಹರಡುವ ಸಾಧ್ಯತೆಗಳಿವೆ. ಇದರಿಂದ ಜೂನ್ 29 ರಿಂದ ಜುಲೈ 4 ರವರೆಗೆ ತಾತ್ಕಾಲಿಕವಾಗಿ ತರಕಾರಿ ಮಂಡಿ ಮುಚ್ಚಲು ತರಕಾರಿ ವ್ಯಾಪಾರಿಗಳು ಹಾಗೂ ದಲ್ಲಾಳಿಗಳು ಸಭೆ ಸೇರಿ ತೀರ್ಮಾನ ಕೈಗೊಂಡಿದ್ದಾರೆ.

  • ಕೊಡಗಿನಲ್ಲಿ ಅರ್ಧ ದಿನ ಮಾತ್ರ ವ್ಯಾಪಾರ ವಹಿವಾಟು- ಸ್ವಯಂ ಬಂದ್‍ಗೆ ನಿರ್ಧಾರ

    ಕೊಡಗಿನಲ್ಲಿ ಅರ್ಧ ದಿನ ಮಾತ್ರ ವ್ಯಾಪಾರ ವಹಿವಾಟು- ಸ್ವಯಂ ಬಂದ್‍ಗೆ ನಿರ್ಧಾರ

    – ಜುಲೈ 4ರ ವರೆಗೂ ಬೆಳಿಗ್ಗೆ 6ರಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ವ್ಯಾಪಾರ ವಹಿವಾಟು

    ಮಡಿಕೇರಿ: ಕಳೆದ ಮೂರು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಕೊರೊನಾ ರಣಕೇಕೆ ಹಾಕುತ್ತಿದ್ದಂತೆ ಜಿಲ್ಲೆಯ ಜನತೆ ಬೆಚ್ಚಿಬಿದ್ದಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅರ್ಧ ದಿನ ಮಾತ್ರ ವ್ಯಾಪಾರ ವಹಿವಾಟು ನಡೆಸಿ ಮಧ್ಯಾಹ್ನ ಎರಡು ಗಂಟೆ ಬಳಿಕ ಸಂಪೂರ್ಣ ಬಂದ್‍ಗೆ ಮುಂದಾಗಿದೆ.

    ಕಳೆದ ಒಂದು ತಿಂಗಳಿಂದ ಕೊಡಗಿನಲ್ಲಿ ಸ್ವಲ್ಪ ನಿಯಂತ್ರಣದಲ್ಲಿದ್ದ ಕೊರೊನಾ ಮಹಾಮಾರಿ ಮೂರು ದಿನಗಳಲ್ಲಿ ಎರಡಕಿಯನ್ನು ದಾಟಿದೆ. ಇದೀಗ ಬರೋಬ್ಬರಿ 30 ಪ್ರಕರಣಗಳು ಜಿಲ್ಲೆಯಲ್ಲಿದ್ದು, ಆ ಸಂಖ್ಯೆ ಇನ್ನೂ ಹೆಚ್ಚುತ್ತಲೇ ಇದೆ. ಮತ್ತೊಂದೆಡೆ ಜಿಲ್ಲಾಸ್ಪತ್ರೆ ಜನರಲ್ ವಾರ್ಡ್‍ಗಳಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರು ಮತ್ತು ಖಾಸಗಿ ಕ್ಲಿನಿಕ್‍ಗಳ ಸಿಬ್ಬಂದಿಗೂ ಕೊರೊನಾ ಸೋಂಕು ಹರಡುತ್ತಿರುವುದು ಜನರನ್ನು ಮತ್ತಷ್ಟು ನಿದ್ದೆಗೆಡಿಸಿದೆ.

    ಸಾಮಾನ್ಯ ಕಾಯಿಲೆಗಳಿಗೆ ಚಿಕಿತ್ಸೆ ಪಡೆದಿದ್ದ ನೂರಾರು ಜನರು ಜಿಲ್ಲೆಯ ಹಲವೆಡೆ ಓಡಾಡಿದ್ದಾರೆ. ಹೀಗಾಗಿ ಇನ್ನೆಷ್ಟು ಜನರಿಗೆ ಈ ಮಹಾಮಾರಿ ವಕ್ಕರಿಸಿದೆಯೋ ಗೊತ್ತಿಲ್ಲ. ಮತ್ತೊಂದೆಡೆ ಜಿಲ್ಲೆಯ ಎರಡು ಸೋಂಕಿತರಿಗೆ ಯಾವುದೇ ಟ್ರಾವೆಲ್ ಹಿಸ್ಟರಿಯೇ ಇಲ್ಲದಿದ್ದರೂ ಮಹಾಮಾರಿ ಹೆಗಲೇರಿದ್ದು ಹೇಗೆ ಎಂಬುವುದು ಆಶ್ಚರ್ಯವಾಗಿದೆ. ವ್ಯಾಪಾರ ವಹಿವಾಟುಗಳು ಮುಂದುವರಿದರೆ ಇನ್ನಷ್ಟು ಸಮಸ್ಯೆ ಎದುರಾಗಬಹುದು ಎಂಬ ಉದ್ದೇಶದಿಂದ ಇಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಮತ್ತು ಸುನಿಲ್ ಸುಬ್ರಹ್ಮಣಿ ನೇತೃತ್ವದಲ್ಲಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಸಮಿತಿ ಸಭೆ ನಡೆಸಿ, ಜಿಲ್ಲೆಯಲ್ಲಿ ಜುಲೈ 4ರ ವರೆಗೂ ಬೆಳಿಗ್ಗೆ 6ರಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರವೇ ವ್ಯಾಪಾರ ವಹಿವಾಟು ನಡೆಸಿ ಬಳಿಕ ಸಂಪೂರ್ಣ ಲಾಕ್‍ಡೌನ್ ಮಾಡಲು ನಿರ್ಧರಿಸಿದೆ.

    ಇತ್ತ ಮಡಿಕೇರಿ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಮಾತ್ರ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸಬೇಕಾದರೆ ಸಂಪೂರ್ಣ ಲಾಕ್‍ಡೌನ್ ಮಾಡುವುದು ಅನಿವಾರ್ಯ ಎನ್ನುತ್ತಿದ್ದಾರೆ. ಈಗಾಗಲೇ ಹೋಂ ಸ್ಟೇ, ರೆಸಾರ್ಟ್, ಹೋಟೆಲ್ ಗಳನ್ನು ಬಂದ್ ಮಾಡಲಾಗಿದೆ. ಮುಂದೆ ಪರಿಸ್ಥಿತಿಯನ್ನು ನೋಡಿಕೊಂಡು ನಿರ್ಧಾರ ಕೈಗೊಳ್ಳಬೇಕಾದ ಅಗತ್ಯವಿದೆ ಎಂದಿದ್ದಾರೆ.

  • ಆಗುಂಬೆ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರ ಬಂದ್

    ಆಗುಂಬೆ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರ ಬಂದ್

    – ಜೂ.15 ರಿಂದ ಅ.15ರ ವರೆಗೆ ಸಂಚಾರಕ್ಕೆ ಬ್ರೇಕ್

    ಶಿವಮೊಗ್ಗ: ಮಲೆನಾಡಿನ ಭಾಗದಲ್ಲಿ ಅತಿಯಾದ ಮಳೆಯಾಗುತ್ತಿದೆ. ಹೀಗಾಗಿ ಆಗುಂಬೆ ಘಾಟಿಯಲ್ಲಿ ಮಳೆಗಾಲ ಮುಗಿಯುವವರೆಗೂ ಭಾರೀ ವಾಹನಗಳ ಸಂಚಾರವನ್ನು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ನಿಷೇಧಿಸಿದ್ದಾರೆ.

    ಅನೇಕ ದಿನಗಳಿಂದ ಮಲೆನಾಡಿನ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಹೀಗಾಗಿ ಆಗುಂಬೆ ಘಾಟಿಯಲ್ಲಿ ಅಧಿಕ ಭಾರದ ವಾಹನಗಳು ಸಂಚಾರ ನಡೆಸಿದರೆ ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ಕುಸಿಯುವ ಸಾಧ್ಯತೆ ಇದೆ. ಒಂದು ವೇಳೆ ರಸ್ತೆ ಕುಸಿದು ಬಿದ್ದರೆ ಸಾರ್ವಜನಿಕ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತದೆ. ಜೊತೆಗೆ ಸಾರ್ವಜನಿಕರ ಆಸ್ತಿ ಮತ್ತು ಪ್ರಾಣ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಆಗುಂಬೆ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿದೆ.

    ರಾಷ್ಟ್ರೀಯ ಹೆದ್ದಾರಿ 169 ಎ ರಸ್ತೆಯ ಮಾರ್ಗದಲ್ಲಿ ಅಂದರೆ ಶಿವಮೊಗ್ಗ-ತೀರ್ಥಹಳ್ಳಿ, ಉಡುಪಿ-ಮಂಗಳೂರು ರಸ್ತೆಯ ಆಗುಂಬೆ ಘಾಟಿಯಲ್ಲಿ ಮಳೆಗಾಲ ಮುಗಿಯುವವರೆಗೂ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಅಂದರೆ ಜೂನ್ 15 ರಿಂದ ಅಕ್ಟೋಬರ್ 15 ರವರೆಗೆ 12 ಟನ್‍ಗಿಂತ ಅಧಿಕ ಭಾರದ ವಾಹನಗಳ ಸಂಚಾರವನ್ನು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ನಿಷೇಧಿಸಿ ಆದೇಶಿಸಿದ್ದಾರೆ.

    ಪರ್ಯಾಯ ಮಾರ್ಗಗಳು: 12 ಟನ್‍ಗಿಂತ ಅಧಿಕ ಭಾರದ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಕಲ್ಪಿಸಲಾಗಿದೆ.
    * ಶಿವಮೊಗ್ಗ-ತೀರ್ಥಹಳ್ಳಿ-ಆಗುಂಬೆ-ಶೃಂಗೇರಿ-ಕೆರೆಕಟ್ಟೆ ಕಾರ್ಕಳ-ಉಡುಪಿ-ಮಂಗಳೂರು
    * ಶಿವಮೊಗ್ಗ-ತೀರ್ಥಹಳ್ಳಿ-ಮಾಸ್ತಿಕಟ್ಟೆ-ಹುಲಿಕಲ್-ಹೊಸಂಗಡಿ-ಸಿದ್ದಾಪುರ-ಉಡುಪಿ

  • ರಾಜ್ಯಾದ್ಯಂತ ಭಾನುವಾರ ಕರ್ಫ್ಯೂ – ಏನಿರುತ್ತೆ? ಏನಿರಲ್ಲ?

    ರಾಜ್ಯಾದ್ಯಂತ ಭಾನುವಾರ ಕರ್ಫ್ಯೂ – ಏನಿರುತ್ತೆ? ಏನಿರಲ್ಲ?

    ಬೆಂಗಳೂರು: ಸರ್ಕಾರ ಮೇ 31 ರವರೆಗೆ ಪ್ರತೀ ಭಾನುವಾರ ರಾಜ್ಯಾದ್ಯಂತ ಕಂಪ್ಲೀಟ್ ಲಾಕ್‍ಡೌನ್‍ಗೆ ಆದೇಶ ನೀಡಿದೆ. 4.0 ವಿನಾಯಿತಿ ಲಾಕ್‍ಡೌನ್‍ನ ನಡುವೆ ಮೊದಲ ಭಾನುವಾರ ಬಂದಿದ್ದು, ಇಂದು ಸಂಜೆಯಿಂದಲೇ ಕರ್ಫ್ಯೂ ಜಾರಿಯಲ್ಲಿರುತ್ತದೆ.

    ಜನರು ಮನೆಯಿಂದ ಹೊರಗೆ ಬಾರದಂತೆ ತಡೆಯಲು ಪೊಲೀಸ್ ಇಲಾಖೆ ನಿಯಮಗಳನ್ನು ರೂಪಿಸಿಕೊಂಡಿದೆ. ಇಂದು ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆ ವರೆಗೆ ಕರ್ಫ್ಯೂ ಜಾರಿಯಲ್ಲಿ ಇರಲಿದ್ದು, ಸಂಪೂರ್ಣ ಲಾಕ್‍ಡೌನ್ ಇರಲಿದೆ.

    ಹಾಗಾದರೆ ಭಾನುವಾರ ರಾಜ್ಯದಲ್ಲಿ ಏನೆಲ್ಲಾ ಇರಲಿವೆ. ಯಾವೆಲ್ಲಾ ಸೌಲಭ್ಯಗಳಿಗೆ ಮಾತ್ರ ಅವಕಾಶ ನೀಡಲಾಗುತ್ತೆ ಎಂಬುದನ್ನು ನೋಡೋದಾದರೆ:

    ಭಾನುವಾರ ಏನಿರುತ್ತೆ
    * ಹಣ್ಣು, ತರಕಾರಿ, ದಿನಸಿ, ಮಾಂಸದ ಅಂಗಡಿಗಳಿಗೆ ತೆರೆಯಲು ಅವಕಾಶ
    * ಆಸ್ಪತ್ರೆಗಳು, ಮೆಡಿಕಲ್ ಸ್ಟೋರ್ಸ್, ಫಾರ್ಮಸಿ ಗಳಿಗೆ ಅವಕಾಶ
    * ಡಾಕ್ಟರ್ಸ್, ನರ್ಸ್, ಆಂಬುಲೆನ್ಸ್, ಮಾಧ್ಯಮಗಳು ಓಡಾಟಕ್ಕೆ ಅವಕಾಶ
    * ಡಯಾಲಿಸಿಸ್, ಅನಾರೋಗ್ಯ ಸಮಸ್ಯೆ ಇದ್ದವರು ಆಸ್ಪತ್ರೆಗೆ ತೆರಳಲು ಅನುಮತಿ
    * ಗರ್ಭಿಣಿ ಸ್ತ್ರೀಯರು ಆಸ್ಪತ್ರೆಗೆ ತೆರಳಲು ಅನುಮತಿ
    * ಮದುವೆ ಸಮಾರಂಭಗಳಿಗೆ ಷರತ್ತಿನ ಅನುಮತಿ

    ಭಾನುವಾರ ಏನಿರಲ್ಲ?
    * ಸಾರ್ವಜನಿಕ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ
    * ಬಸ್ ಸಂಚಾರ ಇರಲ್ಲ
    * ಅಗತ್ಯ ವಸ್ತುಗಳನ್ನ ಹೊರತು ಪಡಿಸಿ, ಉಳಿದ ಅಂಗಡಿ ಮುಂಗಟ್ಟುಗಳು ಬಂದ್
    * ನಗರದ ಪ್ರಮುಖ ರಸ್ತೆಗಳು ಬ್ಯಾರಿಕೆಡ್‍ನಿಂದ ಕ್ಲೋಸ್
    * ಬ್ಯೂಟಿ ಪಾರ್ಲರ್, ಸಲೂನ್, ಸ್ಪಾ, ಬಟ್ಟೆ ಅಂಗಡಿ, ಚಪ್ಪಲಿ ಅಂಗಡಿ ಮುಂಗಟ್ಟುಗಳು ಬಂದ್.
    * ಗಾರ್ಮೆಂಟ್ಸ್ ಫ್ಯಾಕ್ಟರಿ ಸೇರಿದಂತೆ ಎಲ್ಲಾ ಕಾರ್ಖಾನೆಗಳು ಲಾಕ್
    * ಖಾಸಗಿ ಕಂಪನಿಗಳೂ ಕೂಡ ಬಂದ್
    * ಎಲ್ಲಾ ಪಾರ್ಕ್ ಗಳಿಗೂ ಬೀಗ ಬೀಳಲಿದ್ದು, ಜಾಗಿಂಗ್ ವಾಕಿಂಗ್ ಗೆ ಪರ್ಮೀಷನ್ ಇಲ್ಲ.
    * ಚಿನ್ನದ ಅಂಗಡಿಗಳು ಕೂಡ ಕ್ಲೋಸ್ ಆಗಲಿವೆ
    * ಆಟೋ, ಟ್ಯಾಕ್ಸಿ ಕ್ಯಾಬ್ ಗಳು ರಸ್ತೆಗೆ ಇಳಿಯುವಂತಿಲ್ಲ
    * ಖಾಸಗಿ ವಾಹನ ಬಳಸಿ ಓಡಾಡುವ ಹಾಗಿಲ್ಲ
    * ಬೇರೆ ಜಿಲ್ಲೆಗೆ ಹೋಗಲು ಅವಕಾಶವಿಲ್ಲ

    ಪ್ರತಿದಿನ ತೆರೆಯುತ್ತಿದ್ದ ಬಾರ್‌ಗಳು ಭಾನುವಾರ ಕ್ಲೋಸ್ ಆಗಲಿವೆ. ಕಮೀಷನರೇಟ್ ವ್ಯಾಪ್ತಿಯಲ್ಲಿ ಕಮೀಷನರ್ ಮತ್ತು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಬಾರ್ ಕ್ಲೋಸ್ ಬಗ್ಗೆ ಆದೇಶ ಹೊರಡಿಸಲಿದ್ದಾರೆ. ಇಲ್ಲವಾದಲ್ಲಿ ರಾಜ್ಯ ಅಬಕಾರಿ ಆಯುಕ್ತರು ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಆದೇಶ ಹೊರಡಿಸಲಿದ್ದಾರೆ.

    ಇಂದು ರಾತ್ರಿ ಏಳು ಗಂಟೆಗೆ ಎಲ್ಲಾ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‍ಗಳ ಸಂಚಾರ ಸ್ಟಾಪ್ ಆಗಲಿದ್ದು, ಭಾನುವಾರ ರೋಡಿಗೆ ಇಳಿಯೋದಿಲ್ಲ. ಸೋಮವಾರ ಬೆಳಗ್ಗೆ 7 ಗಂಟೆಗೆ ಯಥಾಸ್ಥಿತಿಯಂತೆ ಸಂಚಾರ ಆರಂಭವಾಗಲಿದೆ. ಸಿಲಿಕಾನ್ ಸಿಟಿ ಬೆಂಗಳೂರು ಮತ್ತು ರಾಜ್ಯಾದ್ಯಂತ ಭಾನುವಾರ ಸಂಪೂರ್ಣ ಲಾಕ್‍ಡೌನ್ ಇರಲಿದ್ದು, ಜನರು ಮನೆಯಿಂದ ಹೊರಬಾರದಂತೆ ಸರ್ಕಾರ ಎಚ್ಚರಿಕೆ ನೀಡಿದೆ.

  • ಬಳ್ಳಾರಿಯ ಗಡಿಭಾಗದ ಮದ್ಯದಂಗಡಿಗಳು ಬಂದ್ – ಆನಂದ್ ಸಿಂಗ್

    ಬಳ್ಳಾರಿಯ ಗಡಿಭಾಗದ ಮದ್ಯದಂಗಡಿಗಳು ಬಂದ್ – ಆನಂದ್ ಸಿಂಗ್

    ಬಳ್ಳಾರಿ: ಜಿಲ್ಲೆಯ ಗಡಿಭಾಗದ ಮದ್ಯದಂಗಡಿಗಳನ್ನ ಬಂದ್ ಮಾಡುವಂತೆ ನಾನು ಜಿಲ್ಲಾಧಿಕಾರಿಗೆ ಆದೇಶ ಕೊಟ್ಟಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದರು.

    ಮಾಧ್ಯಮಗಳ ಜೊತೆ ಮಾತನಾಡಿದ ಆನಂದ್ ಸಿಂಗ್, ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಕ್ಕೆ ನನ್ನ ವಿರೋಧ ಇಲ್ಲ. ಆದರೆ ನಮ್ಮ ಬಳ್ಳಾರಿ ಜಿಲ್ಲೆಗೆ ಆಂಧ್ರ ಪ್ರದೇಶದಿಂದ ಮದ್ಯ ಖರೀದಿಗೆ ಬರುತ್ತಿದ್ದಾರೆ. ಆಂಧ್ರ ಪ್ರದೇಶದಲ್ಲಿ ಮದ್ಯದ ಮೇಲಿನ ಅಬಕಾರಿ ಸುಂಕ ಹೆಚ್ಚಾದ ಕಾರಣ ಬಳ್ಳಾರಿ ಗಡಿ ಭಾಗಕ್ಕೆ ರಹದಾರಿ ಮೂಲಕ ಬರುತ್ತಿದ್ದಾರೆ ಎಂದರು.

    ಎಲ್ಲಾ ಕಡೆ ಚೆಕ್ ಪೋಸ್ಟ್‌ಗಳಿವೆ. ಆದರೂ ಅಲ್ಲಿನ ಜನರು ಇಲ್ಲಿಗೆ ಬಂದು ಮದ್ಯ ಖರೀದಿ ಮಾಡಿಕೊಂಡು ಹೋಗುತ್ತಾರೆ. ಅಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದನ್ನೇ ಒಂದು ರೀತಿ ದಂಧೆ ಮಾಡಿಕೊಂಡಿದ್ದಾರೆ. ಹೀಗಾಗಿ ನಾನು ಬಳ್ಳಾರಿ ಜಿಲ್ಲೆಯ ಗಡಿ ಭಾಗದ ಮದ್ಯದ ಅಂಗಡಿಗಳನ್ನು ಬಂದ್ ಮಾಡಲು ಡಿಸಿಗೆ ಆದೇಶ ನೀಡಿದ್ದೇನೆ ಎಂದು ಆನಂದ್ ಸಿಂಗ್ ಹೇಳಿದರು.

    ನಗರದ ಶಾಸಕರು ಇಡೀ ಜಿಲ್ಲೆಯಲ್ಲಿ ಮದ್ಯ ಬಂದ್ ಮಾಡಬೇಕು ಎಂದು ಹೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಮದ್ಯ ಬಂದ್ ಮಾಡುವ ಯೋಚನೆ ಇದೆ. ಈ ಬಗ್ಗೆ ಶಾಸಕರು ಸಹ ಸಲಹೆ ನೀಡಿದ್ದು, ಅದರ ಬಗ್ಗೆ ನಾವು ಚರ್ಚೆ ನಡೆಸುತ್ತಿದ್ದೇವೆ. ಸದ್ಯಕ್ಕೆ ತಾತ್ಕಾಲಿಕವಾಗಿ ಬಳ್ಳಾರಿ ಜಿಲ್ಲೆಯ ಗಡಿಭಾಗದ ಮದ್ಯ ಬಂದ್ ಮಾಡುವಂತೆ ಆದೇಶ ಹೊರಡಿಸಿದ್ದೇನೆ ಎಂದು ತಿಳಿಸಿದರು.

  • ಕೊರೊನಾ ಹಾಟ್‍ಸ್ಪಾಟ್ ಆದ ಭಟ್ಕಳ ಸೀಲ್‍ಡೌನ್ – ಮೆಡಿಕಲ್, ಪೆಟ್ರೋಲ್ ಎಲ್ಲವೂ ಬಂದ್

    ಕೊರೊನಾ ಹಾಟ್‍ಸ್ಪಾಟ್ ಆದ ಭಟ್ಕಳ ಸೀಲ್‍ಡೌನ್ – ಮೆಡಿಕಲ್, ಪೆಟ್ರೋಲ್ ಎಲ್ಲವೂ ಬಂದ್

    – ಭಟ್ಕಳಕ್ಕೆ ಮಂಗಳೂರು ಆಸ್ಪತ್ರೆಯೇ ಕಂಟಕ

    ಕಾರವಾರ: ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಒಂದೇ ದಿನ 12 ಕೇಸ್ ಪತ್ತೆಯಾಗಿದೆ. ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಹೋಗಿದ್ದ ಕುಟುಂಬ ಇಡೀ ಜಿಲ್ಲೆಯ ಜನರನ್ನ ಬೆಚ್ಚಿ ಬೀಳಿಸುವಂತೆ ಮಾಡಿದೆ. ಐದೂವರೆ ತಿಂಗಳ ಮಗುವಿನಲ್ಲೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಇಡೀ ಭಟ್ಕಳ ನಗರವನ್ನು ಸೀಲ್‍ಡೌನ್ ಮಾಡಲಾಗಿದೆ.

    ಉತ್ತರಕನ್ನಡ ಜಿಲ್ಲೆಯ ಭಟ್ಕಳವೀಗ ಕೊರೊನಾ ಹಾಟ್‍ಸ್ಪಾಟ್ ತಾಣವಾಗಿದೆ. ಒಂದೇ ದಿನ 12 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಆ ಮೂಲಕ ಸೋಂಕಿತರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಭಟ್ಕಳದಿಂದ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಹೋಗಿದ್ದ ಕುಟುಂಬದಿಂದಲೇ ಈ ಕೇಸ್ ಪತ್ತೆಯಾಗಿದೆ. ಮೇ 5ರಂದು ಪಟ್ಟಣದ ಮದೀನಾ ಕಾಲೋನಿಯ 18 ವರ್ಷದ ಯುವತಿ ರೋಗಿ ನಂಬರ್ 659ರಿಂದಲೇ 12 ಜನರಿಗೆ ಸೋಂಕು ತಗುಲಿದೆ. ಯುವತಿಯ ಕುಟುಂಬದ 10 ಮಂದಿ ಹಾಗೂ ಪಕ್ಕದ ಮನೆಯಾಕೆ, ಆಕೆ ಗೆಳತಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

    ಅತೀ ಹೆಚ್ಚು ಪಾಸಿಟಿವ್ ಬಂದ ಭಟ್ಕಳದ ಮದೀನ ಕಾಲೋನಿಯನ್ನು ಹಾಟ್‍ಸ್ಪಾಟ್ ಝೋನ್ ಆಗಿ ಘೋಷಣೆ ಮಾಡಲಾಗಿದೆ. ಪೊಲೀಸ್ ಇಲಾಖೆಗೆ ಇಡೀ ತಾಲೂಕನ್ನ ಕಂಟ್ರೋಲ್‍ಗೆ ತೆಗೆದುಕೊಂಡಿದೆ. ಇಡೀ ಭಟ್ಕಳವನ್ನು 5 ವಲಯಗಳಾಗಿ ವಿಂಗಡಿಸಿ ಪ್ರತಿ ವಲಯಕ್ಕೆ ಓರ್ವ ಪೊಲೀಸ್ ಅಧಿಕಾರಿ ಹಾಗೂ ವಲಯ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಅಲ್ಲದೇ ಇಂದಿನಿಂದ ಭಟ್ಕಳದಲ್ಲಿ ಖಾಸಗಿ ವೈದ್ಯಕೀಯ ಸೇವೆ, ಮೆಡಿಕಲ್, ಪೆಟ್ರೋಲ್ ಬಂಕ್ ಸೇರಿದಂತೆ ಎಲ್ಲವೂ ಬಂದ್ ಆಗಲಿದೆ ಎಂದು ಡಿಸಿ ಡಾ. ಹರೀಶ್ ಕುಮಾರ್ ಹೇಳಿದ್ದಾರೆ.

    ಸೋಂಕಿಗೆ ಒಳಗಾದ ಹನ್ನೆರಡು ಜನರನ್ನ ಕಾರವಾರದ ವಿಶೇಷ ಕೋವಿಡ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ. ಭಟ್ಕಳ ಮೂಲದ ಮತ್ತೆರಡು ಕುಟುಂಬದವರು ಫಸ್ಟ್ ನ್ಯೂರೋ ಆಸ್ಪತ್ರೆಗೆ ಭೇಟಿ ನೀಡಿದ್ದು, ಅವರನ್ನ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಹೀಗಾಗಿ ಬೇರೆಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರು ಸ್ವಯಂ ಪ್ರೇರಿತರಾಗಿ ಮುಂದೆ ಬಂದು ಮಾಹಿತಿ ನೀಡುವಂತೆ ಡಿಸಿ ಕೋರಿದ್ದಾರೆ.

    ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಒಟ್ಟು 24 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 12 ಜನರು ಈಗಾಗಲೇ ಗುಣಮುಖರಾಗಿ ಮನೆಗಳನ್ನ ಸೇರಿಕೊಂಡಿದ್ದಾರೆ. ಮತ್ತೆ 12 ಪ್ರಕರಣ ದಾಖಲಾಗಿರುವುದು ಅಧಿಕಾರಿಗಳ ವಲಯಕ್ಕೆ ತಲೆನೋವು ಉಂಟುಮಾಡಿದೆ. ಇವರ ಸಂಖ್ಯೆ ಇನ್ನೆರೆಡು ದಿನದಲ್ಲಿ ಮತ್ತಷ್ಟು ಏರುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡಿದೆ.

  • ಮಂಡ್ಯದಿಂದ ಹಾಸನಕ್ಕೆ ಸಂಪರ್ಕ ಕಲ್ಪಿಸೋ ರಸ್ತೆಗಳು ಬಂದ್

    ಮಂಡ್ಯದಿಂದ ಹಾಸನಕ್ಕೆ ಸಂಪರ್ಕ ಕಲ್ಪಿಸೋ ರಸ್ತೆಗಳು ಬಂದ್

    ಹಾಸನ: ಮಂಡ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಮಂಡ್ಯದಿಂದ ಹಾಸನಕ್ಕೆ ಸಂಪರ್ಕ ಕಲ್ಪಿಸುವ ಜಿಲ್ಲೆಯ ಬಹುತೇಕ ಎಲ್ಲಾ ರಸ್ತೆಗಳನ್ನು ಮಣ್ಣು ಹಾಕಿ ಬಂದ್ ಮಾಡಲಾಗಿದೆ.

    ಮಂಡ್ಯ ಜಿಲ್ಲೆಯ ನಾಗಮಂಗಲದಿಂದ ಹಾಸನ ಜಿಲ್ಲೆಗೆ ಸಂಪರ್ಕಿಸುವ ಬೆಟ್ಟದಹಳ್ಳಿ, ಸಂತೆಬಾಚಹಳ್ಳ್ತ, ಮೇಲುಕೋಟೆ, ಕೆ.ಆರ್.ಪೇಟೆ, ಕಿಕ್ಕೇರಿ ರಸ್ತೆ ಹಾಗೂ ಆನೆಗೊಳದಿಂದ ಕಾಂತರಾಜಪುರ, ಚಿಕ್ಕಬಿಳ್ತಿ, ಮಾದಪುರ, ದೊಡ್ಡತರಹಳ್ಳಿ, ಚಿಕ್ಕತರಹಳ್ಳಿ ಗಡಿ ಮಾರ್ಗವಾಗಿ ಬರುವ ಜಿಲ್ಲೆಗೆ ಸಂಪರ್ಕಿಸುವ ರಸ್ತೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ.

    ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಹೊರ ಜಿಲ್ಲೆಯ ಸಂಪರ್ಕ ನಿರ್ಬಂಧಿಸಲಾಗಿದೆ. ತುರ್ತು ಸಂದರ್ಭದಲ್ಲಿ ಓಡಾಡಲು ಅನುಕೂಲವಾಗುವಂತೆ ಹೆದ್ದಾರಿಗಳಿಗೆ ಕೇವಲ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ. ಇದರಿಂದ ಹಾಸನ ಮತ್ತು ಮಂಡ್ಯ ಜಿಲ್ಲೆಯ ನಡುವೆ ಸಂಪರ್ಕ ಬಹುತೇಕ ಕಡಿತಗೊಂಡಂತಾಗಿದೆ.

    ಭಾನುವಾರದವರೆಗೆ ಮಂಡ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 5 ಇತ್ತು. ಆದರೆ ಇವತ್ತು ಒಂದೇ ದಿನ ಮೂವರಿಗೆ ಸೋಂಕು ದೃಢಪಟ್ಟಿದೆ. ಹೀಗಾಗಿ ಮಂಡ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಸರ್ಕಾರ ಬೆಳಗ್ಗೆ ವರದಿ ಬಿಡುಗಡೆ ಮಾಡಿದ್ದು, ಕರ್ನಾಟಕದಲ್ಲಿ 15 ಮಂದಿಗೆ ಕೊರೊನಾ ಬಂದಿದ್ದು, ಒಟ್ಟು ಕೊರೊನಾ ಪೀಡಿತರ ಸಂಖ್ಯೆ 247ಕ್ಕೆ ಏರಿಕೆಯಾಗಿದೆ.

  • ಬರೋಬ್ಬರಿ 1 ತಿಂಗಳ ಕಾಲ ಸಾರಿಗೆ ಸೇವೆ ಬಂದ್!

    ಬರೋಬ್ಬರಿ 1 ತಿಂಗಳ ಕಾಲ ಸಾರಿಗೆ ಸೇವೆ ಬಂದ್!

    – ಕೊರೊನಾ ತಡೆಗೆ ಸರ್ಕಾರದ ಮಾಸ್ಟರ್ ಪ್ಲಾನ್

    ಬೆಂಗಳೂರು: 21 ದಿನ ಲಾಕ್‍ಡೌನ್ ಮಾಡಿದರೂ ದಿನೇ ದಿನೇ ಕೊರೊನಾ ಸೋಂಕಿತ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತ ಏಪ್ರಿಲ್ 14ಕ್ಕೆ ಲಾಕ್‍ಡೌನ್ ಮುಗಿಯುತ್ತಾ, ಇಲ್ಲವಾ ಎಂದು ಜನರು ಗೊಂದಲದಲ್ಲಿದ್ದಾರೆ. ಹೀಗಾಗಿ ಕೊರೊನಾ ಸೋಂಕು ತಡೆಗೆ ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

    ಲಾಕ್‍ಡೌನ್ ಸಡಿಲಿಕೆ ಆದರೂ ಕೂಡ ಸಾರ್ವಜನಿಕ ಸಾರಿಗೆ ಇರಲ್ಲ. ಅಂದರೆ ಬರೋಬ್ಬರಿ ಒಂದು ತಿಂಗಳ ಕಾಲ ಸಾರಿಗೆ ಸೇವೆ ಬಂದ್ ಮಾಡಲು ಸರ್ಕಾರ ಚಿಂತನೆ ಮಾಡುತ್ತಿದೆ ಎನ್ನಲಾಗಿದೆ. ಹೀಗಾಗಿ ಒಂದು ತಿಂಗಳು ಕಾಲ ಕೆಎಸ್ಆರ್‌ಟಿಸಿ, ಬಿಎಂಟಿಸಿ, ಮೆಟ್ರೋ, ರೈಲು ಯಾವುದೂ ಇರುವುದಿಲ್ಲ ಎಂದು ಹೇಳಲಾಗುತ್ತಿದೆ.

    ಇನ್ನೂ ಆಟೋ, ಕ್ಯಾಬ್‍ಗಳ ಓಡಾಟಕ್ಕೂ ಸರ್ಕಾರ ಬ್ರೇಕ್ ಹಾಕುವುದಕ್ಕೆ ಚಿಂತನೆ ನಡೆಸಿದೆ ಎನ್ನಲಾಗಿದೆ. ತಜ್ಞರ ಮಾಹಿತಿ ಅನುಸಾರ ಸರ್ಕಾರದಿಂದ ಮುಂದಿನ ತೀರ್ಮಾನ ಕೈಗೊಳ್ಳಲಿದೆ. ಆದರೆ ಜನ ಓಡಾಡುವುದಕ್ಕೆ ಸಡಿಲಿಕೆ ಮಾಡಲು ಚಿಂತನೆ ನಡೆಸಿದೆ. ಜೊತೆಗೆ ಖಾಸಗಿಯಾಗಿ ವಾಹನ ಓಡಿಸಲು ಕೂಡ ಅವಕಾಶ ಮಾಡಿಕೊಡಲಿದೆ ಎನ್ನಲಾಗಿದೆ.

    ಸದ್ಯಕ್ಕೆ ಇಂದಿನಿಂದ ಬೇಕರಿ, ಕಾಂಡಿಮೆಂಟ್ಸ್ ತೆರೆಯಲು ಸರ್ಕಾರ ಅವಕಾಶ ಮಾಡಿಕೊಡಲಾಗಿದೆ. ಒಂದು ವೇಳೆ ಸರ್ಕಾರ ಒಂದು ತಿಂಗಳು ಕಾಲ ಸಾರಿಗೆ ಸೇವೆಯನ್ನ ಬಂದ್ ಮಾಡಿದರೆ, ಅನಿವಾರ್ಯವಾಗಿ ಜನರು ಸಾರಿಗೆ ಸೇವೆ ಇಲ್ಲದೆ ಓಡಾಡಬೇಕಾಗುತ್ತದೆ.