ಬೆಂಗಳೂರು: ಮಹದಾಯಿಗಾಗಿ ಗುರುವಾರ ಕರೆ ನೀಡಿದ್ದ ಬಂದ್ ವಿಚಾರದಲ್ಲಿ ಕನ್ನಡ ಸಂಘಟನೆಗಳ ಭಿನ್ನಮತ ಶಮನ ಆಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಈ ನಡುವೆ ಕನ್ನಡ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ವಾಟಾಳ್ ನಾಗರಾಜ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಅವರ ನಡುವೆ ಬಂದ್ ವಿಚಾರವಾಗಿ ಮುನಿಸು ಏರ್ಪಟ್ಟಿದೆ ಎನ್ನಲಾಗಿದೆ.
ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪ್ರವೀಣ್ ಶೆಟ್ಟಿ ಅವರು, ಜನವರಿ 25 ರ ಬಂದ್‍ಗೆ ಬೆಂಬಲ ಕೊಡುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಅಂದು ಬಂದ್ ಮಾಡುವ ಬದಲು ಹೋರಾಟ ಮಾಡೋಣ ಎನ್ನುವುದು ನಮ್ಮ ಕರವೇ ಕಾರ್ಯಕರ್ತ ಅಭಿಪ್ರಾಯ ಎಂದರು.
ಮಹದಾಯಿ ವಿಚಾರವಾಗಿ ಅನಿವಾರ್ಯವಾಗಿ ಬಂದ್ ಮಾಡೋಣ, ಆದರೆ ಈಗ ಜನರಲ್ಲಿ ಬಂದ್ ಅಗತ್ಯದ ಪ್ರಶ್ನೆ ಮೂಡಿದೆ. ಫೆಬ್ರವರಿ ನಾಲ್ಕರಂದು ಬೆಂಗಳೂರು ಬಂದ್ ಮಾಡುವ ನಿರ್ಧಾರಕ್ಕೆ ನಾವು ಬೆಂಬಲ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಪದೇ ಪದೇ ಬಂದ್ ನಡೆಸುವುದು ಸರಿಯಾಗುವುದಿಲ್ಲ, ಇದರಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತದೆ. ಆದರೆ ಫೆಬ್ರವರಿ ನಾಲ್ಕರಂದು ಬಂದ್ ಗೆ ಕರೆ ನೀಡಿದ್ದು ಯಾಕೆ ಎಂಬುದನ್ನು ಅವರ ಬಳಿಯೇ ಕೇಳಬೇಕು ಎಂದು ಪ್ರಶ್ನಿಸುವ ಮೂಲಕ ವಾಟಾಳ್ ನಾಗರಾಜ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಕನ್ನಡ ಸಂಘಟನೆಗಳಿಗೆ ಒಂದು ಪ್ರಾದೇಶಿಕ ಪಕ್ಷದ ಚಿಂತನೆ ಬೇಕಾಗಿದೆ. ಆದರೆ ಒಂದು ರಾಷ್ಟ್ರೀಯ ಪಕ್ಷದ ಜೊತೆ ಕೈ ಜೋಡಿಸುವುದು ಅಥವಾ ಒಂದೇ ಪಕ್ಷಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಸಂಘಟನೆ ಅಂದರೆ ಎಲ್ಲಾ ಹೋರಾಟಗಳಲ್ಲಿ ಒಟ್ಟಿಗೆ ಹೋಗಬೇಕು. ಆದರೆ ಸಂಘಟನೆಗಳ ನಡುವಿನ ಭಿನ್ನಾಭಿಪ್ರಾಯದಿಂದ ಈ ವಿಚಾರದಿಂದ ಕೊಂಚ ಹೊರ ಉಳಿದಿದ್ದೇನೆ ಎಂದರು.
ಬೆಂಗಳೂರು: ಮಹದಾಯಿಗಾಗಿ ಗುರುವಾರ ಕರೆ ನೀಡಿದ್ದ ಬಂದ್ ವಿಚಾರದಲ್ಲಿ ಕನ್ನಡ ಸಂಘಟನೆಗಳ ಭಿನ್ನಮತ ಸ್ಫೋಟಗೊಂಡ ಬೆನ್ನಲ್ಲೇ ಹೋಟೆಲ್ ಮಾಲೀಕರು ಬಂದ್ ಗೆ ಬೆಂಬಲ ನೀಡಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಹೋಟೆಲ್ ಅಸೊಸಿಯೇಷನ್ ಅಧ್ಯಕ್ಷ ರಾಧಾಕೃಷ್ಣ ಅವರು, ಹೋಟೆಲ್ ಮಾಲೀಕರ ಸಂಘ ವತಿಯಿಂದ ಜನವರಿ 25 ರಂದು ನಡೆಯುವ ಬಂದ್ ಗೆ ಬೆಂಬಲ ನೀಡದಿರಲು ನಿರ್ಧರಿಸಲಾಗಿದೆ. ಬಂದ್ ನಡೆಯುವುದರಿಂದ ಜನ ಜೀವನ ಅಸ್ತವ್ಯಸ್ತವಾಗುತ್ತದೆ. ಹಾಗಾಗಿ ನಾವು ಯಾವುದೇ ರೀತಿಯ ಬಂದ್ ಗೆ ಬೆಂಬಲ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ಹೋಟೆಲ್ ಮಾಲೀಕರ ಬೆನ್ನಲ್ಲೇ ಕರ್ನಾಟಕ ಟ್ಯಾಕ್ಸಿ ಚಾಲಕರ ಸಂಘಟನೆಯೂ ಬಂದ್ ಬೆಂಬಲ ನೀಡುವ ವಿಚಾರವಾಗಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ. ಈ ಕುರಿತು ಪಬ್ಲಿಕ್ ಟಿವಿಗೆ ¸ಸ್ಪಷ್ಟನೆ ನೀಡಿದ ಟ್ಯಾಕ್ಸಿ ಚಾಲಕರ ಅಧ್ಯಕ್ಷರು, ನಮ್ಮನ್ನು ಯಾವ ಕನ್ನಡಪರ ಸಂಘಟನೆಗಳು ಸಂಪರ್ಕಿಸಿ ಬಂದ್ ಗೆ ಬೆಂಬಲ ಕೇಳಿಲ್ಲ. ಹಾಗಾಗಿ ಬಂದ್ ಗೆ ಬೆಂಬಲ ನೀಡುವ ವಿಚಾರವಾಗಿ ಯಾವುದೇ ತೀರ್ಮಾನ ಮಾಡಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರು: ಮಹದಾಯಿ ಹೋರಾಟಕ್ಕಾಗಿ ಜನವರಿ 25 ರಂದು ಕರ್ನಾಟಕ ಬಂದ್‍ಗೆ ಕರೆ ನೀಡಿದ್ದ ಕನ್ನಡ ಪರ ಸಂಘಟನೆಗಳ ನಿರ್ಧಾರದ ಕುರಿತು ಸಂಘಟನೆಗಳಲ್ಲೇ ಒಮ್ಮತವಿಲ್ಲದೆ ಭಿನ್ನಮತ ಸ್ಫೋಟವಾಗಿದೆ.
ಕನ್ನಡ ಒಕ್ಕೂಟದ ಅಧ್ಯಕ್ಷರಾಗಿರುವ ವಾಟಾಳ್ ನಾಗರಾಜ್ ಬಂದ್ ಘೋಷಣೆ ಮಾಡಿದ್ದಾರೆ. ಆದರೆ ಈ ವೇಳೆ ಅವರು ಇತರೆ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಕರ್ನಾಟಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಬಂದ್ ವಿಚಾರವಾಗಿ ವಾಟಾಳ್ ನಾಗರಾಜ್ ಬಣದ ಗಿರೀಶ್ ಮತ್ತು ನಾಗೇಶ್ ನಡುವಿನ ಫೋನ್ ಸಂಭಾಷಣೆ ವೈರಲ್ ಆಗಿದೆ. ಮಾತುಕತೆಯಲ್ಲಿ ಬಂದ್‍ಗೆ ಬೆಂಬಲ ನೀಡದ ಕರ್ನಾಟಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ಬಗ್ಗೆ ಗಿರೀಶ್ ಗೌಡ ಅವಾಚ್ಯವಾಗಿ ಮಾತನಾಡಿದ್ದಾರೆ. ಈ ವೇಳೆ ಮಹದಾಯಿ ಹೋರಾಟ ಬೇಕು, ಆದರೆ ಜನವರಿ 25 ರ ಬಂದ್ ಬೇಕಿಲ್ಲ. ಅದೇ ದಿನ ಸಾಂಕೇತಿಕ ಧರಣಿ ನಡೆಸಲು ಕರ್ನಾಟಕ ಸಂಘಟನೆಗಳ ಒಕ್ಕೂಟ ನಿರ್ಧರಿಸಿದೆ ಎಂದು ನಾಗೇಶ್ ಹೇಳಿದ್ದಾರೆ.
ಈ ಕುರಿತು ಪಬ್ಲಿಕ್ ಟಿವಿಗೆ ದೂರವಾಣಿ ಮೂಲಕ ಸ್ಪಷ್ಟನೆ ನೀಡದ ಗಿರೀಶ್ ಗೌಡ ಅವರು, ಕನ್ನಡ ಸಂಘಟನೆಗಳ ಬಗ್ಗೆ ನಾಗೇಶ್ ಅವರಿಗೆ ಮಾಹಿತಿ ಇಲ್ಲ. ಬಂದ್ ಕುರಿತ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಹದಾಯಿ ಹೋರಾಟಗಾರರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವೇಳೆ ಚರ್ಚೆ ನಡೆಸಿ ಪ್ರಧಾನಿ ಮೋದಿ ಅವರು ಕರ್ನಾಟಕ್ಕೆ ಆಗಮಿಸುವ ದಿನವೂ ಬೆಂಗಳೂರು ಬಂದ್ ಮಾಡಲು ಷರತ್ತು ಮುಂದಿಟ್ಟಿದ್ದರು. ಮಹದಾಯಿ ಹೋರಾಟಗಾರರ ಮಾತಿಗೆ ಬೆಲೆ ನೀಡಿ ಫೆಬ್ರವರಿ 4 ರಂದು ಬೆಂಗಳೂರು ಬಂದ್ ಮಾಡಿ ಹೋರಾಟ ಮಾಡಲು ಒಪ್ಪಿಗೆ ಸೂಚಿಸಿದ್ದೇವೆ ಎಂದರು.
ವಾಟಾಳ್ ನಾಗರಾಜ್ ಅವರು ಏಕಪಕ್ಷೀಯ ನಿರ್ಧಾರ ಮಾಡಿದ್ದಾರೆ ಎಂಬ ಆರೋಪಕ್ಕೆ ಉತ್ತರಿಸಿದ ಗಿರೀಶ್ ಅವರು, ಕನ್ನಡ ನಾಡು- ನುಡಿ ವಿಷಯದ ಹೋರಾಟಕ್ಕೆ ಪ್ರತಿಯೊಬ್ಬ ಹೋರಾಟಗಾರರು ಕೈ ಜೋಡಿಸಬೇಕು. ಪ್ರತಿಯೊಬ್ಬರಿಗೂ ಪ್ರತಿ ಬಾರಿ ಹೋರಾಟ ಮಾಡುವ ವೇಳೆ ವಯಕ್ತಿಕವಾಗಿ ಆಹ್ವಾನ ನೀಡಲು ಸಾಧ್ಯವಿಲ್ಲ. ಕನ್ನಡ 2300 ಹೋರಾಟ ಸಂಸ್ಥೆಗಳು ಬಂದ್ ಗೆ ಬೆಂಬಲ ನೀಡಿವೆ. ಅಲ್ಲದೇ ಸರ್ಕಾರಿ ನೌಕಕರ ಸಂಘ, ವಕೀಲ ಸಂಘ ಬೆಂಬಲ ನೀಡಿದೆ ಎಂದರು.
ಕನ್ನಡ ಹೋರಾಟ ಸಂಘಟನೆಗಳಲ್ಲಿ ಯಾವುದೇ ರೀತಿಯ ಭಿನ್ನಮತವಿಲ್ಲ ಒಕ್ಕೂಟದ ನಿರ್ಧಾರದಂತೆ ಫೆಬ್ರವರಿ 4 ರಂದು ಬೆಂಗಳೂರು ಬಂದ್ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದರು.
ಹುಬ್ಬಳ್ಳಿ: ವಿಜಯಪುರ ದಲಿತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ, ಕೊರೆಗಾಂವ್ ಗಲಭೆ ಹಾಗೂ ಕೇಂದ್ರ ಸಚಿವ ಅನಂತ್‍ಕುಮಾರ್ ಹೇಳಿಕೆ ಖಂಡಿಸಿ ಇಂದು ಹುಬ್ಬಳ್ಳಿ ಧಾರವಾಡದಲ್ಲಿ ವಿವಿಧ ದಲಿತಪರ ಸಂಘಟನೆಗಳಿಂದ ಬಂದ್ ಗೆ ಕರೆ ನೀಡಲಾಗಿದ್ದು, ಪ್ರತಿಭಟನೆ ನಡೆಯುತ್ತಿದೆ.
ನಗರದಲ್ಲಿ ಪ್ರತಿಭಟನಾಕಾರರು ಕಲ್ಲು ತೂರುತ್ತಿದ್ದು, ಹಳೇ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದಲ್ಲಿದ್ದ ಟಿಕೆಟ್ ಕೌಂಟರ್ ಧ್ವಂಸ ಮಾಡಿದ್ದಾರೆ. ಚೆನ್ನಮ್ಮ ವೃತ್ತದಲ್ಲಿ ಬೆಳ್ಳಂಬೆಳಗ್ಗೆ ಟೈರ್ ಗೆ ಬೆಂಕಿ ಹಚ್ಚಿ ಹೋರಾಟ ಮಾಡುತ್ತಿದ್ದಾರೆ.
ಮಹಾರಾಷ್ಟ್ರದ ಕೊರೆಗಾಂವ್‍ನಲ್ಲಿ ದಲಿತನ ಹತ್ಯೆ ಖಂಡಿಸಿ ಧಾರವಾಡದಲ್ಲಿ ಬಂದ್ ಆಚರಿಸಲಾಗುತ್ತಿದ್ದು, ನಗರದ ಜುಬ್ಲಿ ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚಿದ್ದಾರೆ. ಸಂವಿಧಾನ ಬದಲಾವಣೆ ಮಾಡುತ್ತೀನಿ ಎಂಬ ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿಕೆಯನ್ನು ದಲಿತ ಸಂಘಟನೆಗಳು ಖಂಡಿಸಿವೆ.
ಚಿಕ್ಕೋಡಿ, ಕಲಬುರಗಿ, ಆಳಂದದಲ್ಲೂ ಪ್ರತಿಭಟನೆ ನಡೆಯುತ್ತಿದೆ. ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದು, ಮುಂಜಾಗೃತಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.
ಬಳ್ಳಾರಿ: ಬಿಜೆಪಿಯಲ್ಲಿ ಈಗ ಏನು ಸರಿಯಿಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ, ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗ್ಡೆ ಹೇಳಿಕೆ ಖಂಡಿಸಿ ಹೊಸಪೇಟೆ ಬಂದ್ ನಡೆಯುತ್ತಿದ್ದು, ಈ ಬಂದ್‍ಗೆ ಬಿಜೆಪಿ ಶಾಸಕ ಆನಂದ್ ಸಿಂಗ್ ಬೆಂಬಲ ನೀಡಿದ್ದಾರೆ.
ಕೂಡ್ಲಿಗಿ ಶಾಸಕ ನಾಗೇಂದ್ರ ಬಿಜೆಪಿ ತೊರೆಯುವುದು ಖಚಿತವಾದ ಬೆನ್ನಲ್ಲೇ ಹೊಸಪೇಟೆ ಶಾಸಕ ಆನಂದ್‍ಸಿಂಗ್ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಪಕ್ಷದ ಹೈಕಮಾಂಡ್ ವಿರುದ್ಧ ಗರಂ ಆಗಿರುವ ಶಾಸಕ ಆನಂದ್‍ಸಿಂಗ್ ಇದೀಗ ಕೇಂದ್ರ ಸಚಿವ ಅನಂತಕುಮಾರ ಹೆಗ್ಡೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ನೀಡುವ ಮೂಲಕ ಬಿಜೆಪಿ ನಾಯಕರ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ಸಂವಿಧಾನ ಬದಲಿಸುವ ಹೇಳಿಕೆ ನೀಡಿರುವುದನ್ನು ವಿರೋಧಿಸಿ ದಲಿತ ಸಂಘಟನೆಗಳು ಮತ್ತು ವಿವಿಧ ಪ್ರಗತಿಪರ ಸಂಘಟನೆಗಳು ಕರೆ ನೀಡಿರುವ ಹೊಸಪೇಟೆ ಬಂದ್ ಗೆ ಪರೋಕ್ಷವಾಗಿ ಶಾಸಕ ಆನಂದ್‍ಸಿಂಗ್ ಬೆಂಬಲ ನೀಡಿದ್ದಾರೆ. ಹೀಗಾಗಿ ಹೊಸಪೇಟೆಯಲ್ಲಿಂದು ನಡೆಯುತ್ತಿರುವ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.
ಹೊಸಪೇಟೆ ಬಂದ್ ಹಿನ್ನೆಲೆಯಲ್ಲಿ ಶಾಲಾ ಕಾಲೇಜು, ಅಂಗಡಿ ಮುಗ್ಗಟ್ಟು, ಬಸ ಸಂಚಾರ ಮತ್ತು ಆಟೋ ಸಂಚಾರ ಬಂದ್ ಆಗಿದ್ದು, ಆದರೆ ಶಾಸಕ ಆನಂದ್‍ಸಿಂಗ್ ತಮ್ಮ ಪಕ್ಷದ ಕೇಂದ್ರ ಸಚಿವರ ವಿರುದ್ಧ ನಡೆಯುತ್ತಿರುವ ಬಂದ್ ಗೆ ಬೆಂಬಲ ನೀಡುವ ಮೂಲಕ ಪರೋಕ್ಷವಾಗಿ ಬಿಜೆಪಿ ನಾಯಕರಿಗೆ ತಮ್ಮ ಶಕ್ತಿ ಪ್ರದರ್ಶನ ತೋರಿದ್ದಾರೆ.
ಕ್ಷಮೆ ಕೇಳಿದ್ದ ಸಚಿವರು:
ಜಾತ್ಯತೀತ ಮತ್ತು ಸಂವಿಧಾನದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಕಳೆದ ಗುರುವಾರ ಲೋಕಸಭಾ ಕಲಾಪದಲ್ಲಿ ಕ್ಷಮೆ ಕೇಳಿ ವಿವಾದಕ್ಕೆ ಪೂರ್ಣವಿರಾಮ ಹಾಕಿದ್ದರು.
ನಾನು ಆಡಿದ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಸಂವಿಧಾನವನ್ನು ಗೌರವಿಸುತ್ತೇನೆ ಅಷ್ಟೆ ಅಲ್ಲದೆ ಅದರಲ್ಲಿ ನಾನು ನಂಬಿಕೆ ಇಟ್ಟಿದ್ದೇನೆ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಅವರಲ್ಲಿ ನಾನು ಕ್ಷಮೆ ಕೇಳಲು ನನಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದರು.
ಹೆಗ್ಡೆ ಹೇಳಿದ್ದು ಏನು?
ಕೊಪ್ಪಳದ ಯಲಬುರ್ಗಾ ತಾಲೂಕಿನ ಕೊಕನೂರಿನಲ್ಲಿ ಬ್ರಾಹ್ಮಣ ಯುವ ಪರಿಷತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅನಂತ್ ಕುಮಾರ್ ಹೆಗ್ಡೆ, ಇತ್ತೀಚೆಗೆ ಹೊಸದೊಂದು ಸಂಪ್ರದಾಯ ಬಂದುಬಿಟ್ಟಿದೆ. ಅದ್ಯಾವುದೆಂದರೆ ಜಾತ್ಯತೀತರು. ನಾನೊಬ್ಬ ಹಿಂದೂ ಅಥವಾ ಮುಸ್ಲಿಂ ಅಥವಾ ಕ್ರೈಸ್ತ, ಲಿಂಗಾಯತ ಅಂತಾ ಯಾರದ್ರೂ ತಮ್ಮ ಧರ್ಮವನ್ನು ಹೆಮ್ಮೆಯಿಂದ ಹೇಳಿಕೊಂಡರೆ ನನಗೆ ಖುಷಿ ಅನಿಸುತ್ತೆ. ಯಾಕಂದ್ರೆ ಅವರಿಗೆ ಅವರ ರಕ್ತದ ಅರಿವಿದೆ ಎಂದರ್ಥ. ಆದ್ರೆ ಈ ಜಾತ್ಯತೀತರು ಅಂತ ಕರೆದುಕೊಳ್ಳುತ್ತಾರೆ ಅಲ್ವ. ಅಂಥವರು ಅಪ್ಪ-ಅಮ್ಮನ ಗುರುತು ಇಲ್ಲದೇ ಇರುವ ರಕ್ತವನ್ನು ಹೊಂದಿರುವವರು ಜಾತ್ಯತೀತರು ಅಂತ ಕರೆದುಕೊಳ್ಳುತ್ತಾರೆ ಎಂದು ಲೇವಡಿ ಮಾಡಿದ್ದರು.
ಜಾತ್ಯತೀತರಿಗೆ ತಮ್ಮ ಗುರುತೇ ತಮಗಿರುವುದಿಲ್ಲ. ಮಾತು ಎತ್ತಿದ್ರೆ ದೊಡ್ಡ ವಿಚಾರವಾದಿಗಳು. ಅಪ್ಪ-ಅಮ್ಮನ ಪರಿಚಯ ಇಲ್ಲದೇ ಇರೋ ಇವರುಗಳು ದೊಡ್ಡ ವಿಚಾರವಾದಿಗಳು. ಇವರನ್ನು ಜಾತಿಯ ಜೊತೆ ಕೂರಿಸಿಕೊಳ್ಳುತ್ತಿರೋ ಅಥವಾ ನಿಮ್ಮ ಕುಲದ ಜೊತೆ ಕೂರಿಸಿಕೊಳ್ಳುತ್ತಿರೋ ಗುರುತಿಸಿಕೊಳ್ಳಿ ಸ್ವಾಮಿ. ನಿಮಗೆ ನಿಮ್ಮ ರಕ್ತದ ಪರಿಚಯ ಇದ್ದಿದ್ದೇ ಆದ್ರೆ ನಿಮ್ಮ ಕಾಲು ಮುಟ್ಟಿ ನಮಸ್ಕರಿಸುತ್ತೇನೆ. ಆದ್ರೆ ಜಾತ್ಯತೀತರು ಅಂತ ಹೇಳಿದ್ರೆ ಮಾತ್ರ ಸ್ವಲ್ಪ ನೀವು ಯಾರು ಅಂತ ಸಂಶಯ ಬರುತ್ತೆ ಅಂತ ಹೇಳಿದ್ದರು.
ಹೌದು. ಸಂವಿಧಾನ ಜಾತ್ಯತೀತರು ಅಂತ ಹೇಳಿದೆ. ನಾವು ಸಂವಿಧಾನಕ್ಕೆ ಗೌರವ ಕೊಡುತ್ತೇವೆ. ಆದ್ರೆ ಸಂವಿಧಾನ ಕಾಲಕ್ಕೆ ತಕ್ಕಂತೆ ಅದೆಷ್ಟೋ ಬಾರಿ ಬದಲಾಗಿದೆ. ಮುಂದಿನ ದಿನಗಳಲ್ಲೂ ಬದಲಾಗುತ್ತೆ. ನಿಮಗೆ ಸಂಪ್ರದಾಯ, ಪರಂಪರೆ, ಸಂಸ್ಕೃತಿ ಇದರ ಐತಿಹಾಸಿಕ ಹೆಜ್ಜೆಯ ಗುರುತುಗಳೇ ನಿಮಗೆ ಗೊತ್ತಿಲ್ಲ. ನೀವು ಮೂರ್ಖರು. ಜಗತ್ತಿನ ಭೂಪಟಗಳು, ಸಾಮಾಜಿಕ ಚಿತ್ರಣ ಬದಲಾಗಿ ಹೋಗಿದೆ. ಹೀಗಾಗಿ ನಾವು ಸಂವಿಧಾನವನ್ನು ಬದಲಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು.
ಯಾರಿಗೆ ಸಭ್ಯತೆಯ ಅರಿವಿದೆ ಅಂತವರು ಸಂಸ್ಕಾರ ಎಂಬ ಶಬ್ಧವನ್ನು ಒಪ್ಪಿಕೊಳ್ಳಲೇ ಬೇಕು. ಆದ್ರೆ ಯಾರಿಗೆ ಈ ಶಬ್ಧ ಪರಿಚಯ ಇಲ್ಲವೋ ಅಥವಾ ಒಳ್ಳೆದು ಮತ್ತು ಕೆಟ್ಟದರ ಮಧ್ಯೆ ಇರೋ ಕಂದಕ ಗೊತ್ತಿಲ್ಲವೋ ಅಂತವರು ಶಿಕ್ಷಣವೇ ಸಂಸ್ಕಾರ ಅಂದುಕೊಂಡಿರುತ್ತಾರೆ. ಅಂತಹ ಮೂಢಮತಿಗಳ ಬಗ್ಗೆ ನಾನೇನೂ ಹೇಳುವುದಿಲ್ಲ ಎಂದು ಹೇಳಿದ್ದರು.
ಮುಂಬೈ: ಭೀಮಾ ಕೋರೆಗಾಂವ್ ವಿಜಯೋತ್ಸವ ವೇಳೆ ಆರಂಭವಾದ ಸಾಮಾವೇಶ ಹಿಂಸಾಚಾರ ರೂಪಕ್ಕೆ ತಿರುಗಿ ಇಂದು ಮಹಾರಾಷ್ಟ್ರ ಬಂದ್‍ಗೆ ಕರೆ ನೀಡಲಾಗಿದೆ. ಬಂದ್ ಹಿನ್ನೆಲೆಯಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್‍ಗಳ ಸಂಚಾರ ಕೂಡ ಸ್ಥಗಿತವಾಗಿದೆ. ಮುನ್ನೆಚರಿಕಾ ಕ್ರಮವಾಗಿ ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಿನ ಬಸ್ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಚಿಕ್ಕೋಡಿ ವಿಭಾಗದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 220 ಕ್ಕೂ ಹೆಚ್ಚು ಬಸ್‍ಗಳ ಸಂಚಾರ ಸ್ಥಗಿತಗೊಂಡಿದೆ. ಅಹಿತಕರ ಘಟನೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಬಸ್‍ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.
ಬಸ್ ಸಂಚಾರ ಸ್ಥಗಿತಗೊಂಡಿರೋ ಹಿನ್ನೆಲೆಯಲ್ಲಿ ಚಿಕ್ಕೋಡಿ, ನಿಪ್ಪಾಣಿ ಮಾರ್ಗವಾಗಿ ಮಹಾರಾಷ್ಟ್ರದ ಪುಣೆ, ಬಾಂಬೆ, ಕೊಲ್ಹಾಪುರ, ಸಾಂಗ್ಲಿ, ಮೀರಜ್‍ಗೆ ಹೋಗುವ ಪ್ರಯಾಣಿಕರು ಪರದಾಡುತ್ತಿದ್ದಾರೆ.
ಮಂಗಳವಾರದಂದು ಹೊತ್ತಿ ಉರಿದಿದ್ದ ಥಾಣೆಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಇಂದು ಕೂಡ ಪ್ರತಿಭಟನೆಗಳು ನಡೆಯುತ್ತಿದ್ದು, ಥಾಣೆಯಲ್ಲಿ ಪ್ರತಿಭಟನಾಕಾರರು ರೈಲು, ಬಸ್‍ಗಳನ್ನು ತಡೆಯಲು ಯತ್ನಿಸಿದ್ರು. ಔರಂಗಾಬಾದ್‍ನಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದ್ದು, ಬಸ್ ಸಂಚಾರದಲ್ಲೂ ವ್ಯತ್ಯಯವಾಗಿದೆ.
ನಿನ್ನೆ ಬಸ್‍ಗೆ ಬೆಂಕಿ ಹಚ್ಚಿದ್ದ ಚೆಂಬೂರ್‍ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವಹಿಸಲಾಗಿದೆ. ಪರಿಸ್ಥಿತಿ ತಹಬದಿಗೆ ಬಂದಿದ್ದರೂ ಬೂದಿ ಮುಚ್ಚಿದ ವಾತಾವರಣವಿದೆ. ಕೆಲವು ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇನ್ನೂ ಕೆಲವು ಶಾಲೆಗಳಲ್ಲಿ ಕೆಲವು ಮಕ್ಕಳು ಹಾಜರಾಗಿದ್ದು, ಅವರನ್ನು ಮನೆಗೆ ವಾಪಸ್ ಕಳಸಲಾಗಿದೆ. ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ.
ಬೆಂಗಳೂರು: ಕೇಂದ್ರ ಸರ್ಕಾರದ ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕ-2017ನ್ನು ವಿರೋಧಿಸಿ ಇಂದು ಭಾರತೀಯ ವೈದ್ಯಕೀಯ ಸಂಘ ಮತ್ತು ಭಾರತೀಯ ವೈದ್ಯಕೀಯ ಪರಿಷತ್ ಮುಷ್ಕರಕ್ಕೆ ಕರೆ ನೀಡಿದೆ.
ಇಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಸತತ 12 ಗಂಟೆಗಳ ಕಾಲ ದೇಶಾದ್ಯಂತ ಖಾಸಗಿ ಆಸ್ಪತ್ರೆಗಳ ಹೊರರೋಗಿಗಳ ವಿಭಾಗ ಬಂದ್ ಇರಲಿದೆ. ಇನ್ನು ರಾಜ್ಯದಲ್ಲೂ ಮುಷ್ಕರಕ್ಕೆ ಬೆಂಬಲ ವ್ಯಕ್ತವಾಗಿದೆ. ಆದ್ರೆ ತುರ್ತು ಚಿಕಿತ್ಸಾ ವಿಭಾಗ, ಮೆಡಿಕಲ್ ಸ್ಟೋರ್ ಗಳು ಮತ್ತು ಒಳರೋಗಿಗಳ ವಿಭಾಗ ಮತ್ತು ಸರ್ಕಾರಿ ಆಸ್ಪತ್ರೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.
ಈ ವಿಚಾರವಾಗಿ ಸೋಮವಾರ ಕೇಂದ್ರ ವೈದ್ಯಕೀಯ ಸಚಿವ ಜೆಪಿ ನಡ್ಡಾರೊಂದಿಗೆ ವೈದ್ಯಕೀಯ ಸಂಘ ನಡೆಸಿದ ಮಾತುಕತೆಯೂ ವಿಫಲವಾಗಿದೆ. ಈ ಹಿಂದೆ ವೈದ್ಯಕೀಯ ಶಿಕ್ಷಣದ ಸಂಪೂರ್ಣ ಜವಾಬ್ದಾರಿ ಭಾರತೀಯ ವೈದ್ಯಕೀಯ ಪರಿಷತ್ ಮೇಲಿತ್ತು. ಆದ್ರೆ ಎಂಸಿಐ ಮೇಲೆ ಭ್ರಷ್ಟಾಚಾರ ಆರೋಪವಿದ್ದು, ಈ ಹಿಂದೆ ಚೇರ್‍ಮನ್ ಆಗಿದ್ದ ಕೇತನ್ ದೇಸಾಯಿಯವರನ್ನು ಸಿಬಿಐ ಬಂಧಿಸಿತ್ತು. ಅಂದಿನಿಂದಲೂ ಈ ಸಂಸ್ಥೆಯ ಜಾಗದಲ್ಲಿ ಹೊಸ ಸಂಸ್ಥೆ ಸ್ಥಾಪನೆಗೆ ಬೇಡಿಕೆ ಇತ್ತು. ಹೀಗಾಗಿ ವೈದ್ಯಕೀಯ ಶಿಕ್ಷಣ ಕ್ಷೇತ್ರ ಮತ್ತು ವೈದ್ಯ ವೃತ್ತಿಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಕೇಂದ್ರಸರ್ಕಾರ ರಾಷ್ಟ್ರೀಯ ವೈದ್ಯಕೀಯ ಆಯೋಗ ಸ್ಥಾಪನೆಗೆ ಮುಂದಾಗಿದೆ.
ಡಿಸೆಂಬರ್ 13ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಸೂದೆಗೆ ಬೆಂಬಲ ದೊರೆತಿದ್ದು, ಕಳೆದ ಡಿಸೆಂಬರ್ 19ರಂದು ಲೋಕಸಭೆಯಲ್ಲಿ ಮಂಡಿಸಲಾಗಿದೆ. ಇನ್ನು ಇಂದು ಈ ಮಸೂದೆ ಸಂಬಂಧ ಚರ್ಚೆ ನಡೆಯಲಿದ್ದು, ಖಾಸಗಿ ವೈದ್ಯರು ಕರಾಳ ದಿನ ಆಚರಣೆಗೆ ಕರೆ ಕೊಟ್ಟಿದ್ದಾರೆ.
-10 ರೂ.ಗೆ ಮೋದಿ, ಬಿಎಸ್‍ವೈ, ಅಮಿತ್ ಶಾ, ಪರಿಕ್ಕರ್ ಹರಾಜು ಹಾಕಿ ಆಕ್ರೋಶ
ಹುಬ್ಬಳ್ಳಿ: ಮಹದಾಯಿ ಹೋರಾಟದ ಹಿನ್ನೆಲೆಯಲ್ಲಿ ಇಂದು ಉತ್ತರ ಕರ್ನಾಟಕದಲ್ಲಿ ಬಂದ್ ಆಚರಿಸಲಾಗ್ತಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಪಕ್ಷದ ನಾಯಕರಿಗೆ ಒಳ್ಳೆ ಬುದ್ಧಿ ಬರಲೆಂದು ಹುಬ್ಬಳ್ಳಿಯಲ್ಲಿ ಹೋಮ ಹವನ ಮಾಡಿದ್ದಾರೆ.
ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಹೋರಾಟಗಾರು ಸಕಲ ವಿಧಿವಿಧಾನದ ಪ್ರಕಾರ ನಡುರಸ್ತೆಯಲ್ಲಿ ಹೋಮ ನೆರವೇರಿಸಿದ್ರು. ರಾಜಕೀಯ ಪಕ್ಷದ ನಾಯಕರು ರಾಜಕೀಯ ಬಿಟ್ಟು ನೀರು ಕೊಡಲು ಮುಂದಾಗಲಿ ಎಂದು ಹೋಮ ಹವನ ಮಾಡಿದ್ರು. ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮಧ್ಯಸ್ಥಿಕೆಗೆ ಒತ್ತಾಯಿಸಿದ ಪ್ರತಿಭಟನಾಕಾರರು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ರು.
ಪ್ರತಿಭಟನಾಕಾರರು ನರೇಂದ್ರ ಮೋದಿ, ಬಿಎಸ್‍ವೈ, ಅಮಿತ್ ಶಾ ಹಾಗೂ ಪರಿಕ್ಕರ್ ಅವರನ್ನು ಕೇವಲ ಹತ್ತು ರೂಪಾಯಿಗೆ ಹರಾಜು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ರು. ಹುಬ್ಬಳ್ಳಿ ಹೊಸೂರಿನ ಬಳಿ ಕಾಂಕ್ರೀಟ್ ಮಿಕ್ಸರ್ ವಾಹನ ತಡೆದು ಪ್ರತಿಭಟನೆ ನಡೆಸಲಾಯ್ತು. ಲಾರಿ ಮೇಲೇರಿ ಮಹದಾಯಿ ಹೋರಾಟಗಾರರು ಘೋಷಣೆ ಕೂಗಿದ್ರು. ಪ್ರತಿಭಟನೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ- ಧಾರವಾಡ ಮಧ್ಯೆ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಕಾರಣ ಡಿಸಿಪಿ ರೇಣುಕಾ ಸುಕುಮಾರ ಸ್ಥಳಕ್ಕೆ ದೌಡಾಯಿಸಿ ಹೋರಾಟಗಾರರನ್ನು ನಿಯಂತ್ರಿಸುವ ಪ್ರಯತ್ನ ಮಾಡಿದ್ರು.
ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನಾಕಾರರು ಟಯರ್‍ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ರು. ಹುಬ್ಬಳ್ಳಿಯ ರೈಲು ನಿಲ್ದಾಣದ ಮುಂದೆ ಕನ್ನಡಪರ ಸಂಘನೆಗಳು ಹೋರಾಟ ನಡೆಸಿದವು. ರೈಲ್ವೆ ನಿಲ್ದಾಣದೆದರು ಸಂಗ್ರಾಮ ಸೇನೆಯಿಂದ ಪ್ರತಿಭಟನೆ ನಡೆಯಿತು. ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಹೊರಟಿದ್ದ ಹೋರಾಟಗಾರರಿಗೆ ಪೊಲೀಸರು ಅಡ್ಡಿಪಡಿಸಿದ್ರು.
ರಕ್ತ ಹರಿಸಿ ಪ್ರತಿಭಟನೆ: ರೈಲು ಬಂದ್ ಮಾಡಲು ಹೊರಟಿದ್ದ ಕರವೇ ಕಾರ್ಯಕರ್ತರ ಬಂಧನ ಖಂಡಿಸಿ ಹೋರಾಟಗಾರರು ಪೆÇಲೀಸ್ ವಾಹನದ ಮುಂದೆ ಕುಳಿದು ಪ್ರತಿಭಟನೆ ಮಾಡಿದ್ರು. ಈ ಮಧ್ಯೆ ಕೆಲವು ಹೋರಾಟಗಾರರು ಪೊಲೀಸರ ವರ್ತನೆ ಖಂಡಿಸಿ ಬ್ಲೇಡ್ ನಿಂದ ಕೈ ಕುಯ್ದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ರು. ರಕ್ತ ಚೆಲ್ಲುತ್ತೇವೆ, ಹೋರಾಟ ನಿಲ್ಲಿಸೋದಿಲ್ಲ ಎಂಬ ಘೋಷಣೆ ಕೂಗಿದ್ರು.
ಗಬ್ಬೂರು ಬಳಿಯ ಟೋಲ್ ಗೇಟ್‍ನಲ್ಲಿ ಜಯ ಕರ್ನಾಟಕ ಸಂಘಟನೆಯ ನೂರಾರು ಕಾರ್ಯಕರ್ತರು ಟೋಲ್ ಮೂಲಕ ಬರುತ್ತಿದ್ದ ವಾಹನಗಳನ್ನ ತಡೆದು ಪ್ರತಿಭಟನೆ ನಡೆಸಿದ್ರು ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಿಸಿದ ಹೋರಾಟಗಾರರು, ಮಾಲೀಕರಿಗೆ ಹೋರಾಟದಲ್ಲಿ ಭಾಗಿಯಾಗುವಂತೆ ಮನವಿ ಮಾಡಿದ್ರು. ಹೋಟೆಲ್ ಗೆ ಮುತ್ತಿಗೆ ಹಾಕಿ, ಹೋಟೆಲ್‍ನಲ್ಲಿದ್ದ ತಿಂಡಿ ತಿನಿಸುಗಳನ್ನ ಹೊರಗಿಟ್ಟು, ಅದೇ ತಿಂಡಿ ತಿನಿಸುಗಳನ್ನ ಸಾರ್ವಜನಿಕರಿಗೆ ಕೊಟ್ಟು ಆಕ್ರೋಶ ಹೊರಹಾಕಿದ್ರು. ನಗರದಲ್ಲಿ ವಾಹನಗಳು ತಡೆದು ಬಂದ್ ಸಹಕಾರ ನೀಡುವಂತೆ ಮನವಿ ಮಾಡಿದ್ರು.
ಮಹದಾಯಿ ಹೋರಾಟಕ್ಕೆ ಹಿರಿಯ ಸಾಹಿತಿ ಪಾಟೀಲ್ ಪುಟ್ಟಪ್ಪ ಸಾಥ್ ನೀಡಿದ್ದು, ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನಾಕಾರರ ಜೊತೆಯಲ್ಲಿ ಕುಳಿತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ರು. ಈ ವೇಳೆ ಮಾತನಾಡಿದ ಅವರು, ಯಾವ ಪಕ್ಷದ ನಾಯಕರು ಮಹದಾಯಿ ವಿವಾದ ಬಗೆಹರಿಸಲು ಸಾಧ್ಯವಿಲ್ಲ. ಕೇವಲ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಮಾತ್ರ ಸಾಧ್ಯ. ಕೂಡಲೇ ಮೋದಿ ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು. ಕರ್ನಾಟಕ ಬೇರೆ ದೇಶದಲ್ಲಿ ಇಲ್ಲ. ನಮ್ಮ ರಾಜ್ಯ ಇದೇ ದೇಶದಲ್ಲಿ ಇದೆ. ಮಹದಾಯಿ ಸಮಸ್ಯೆ ಬಗೆಹರಿಸಿ ಅದರ ಶ್ರೇಯಸ್ಸು ಬೇಕಿದ್ದರೆ ಅವರೇ ತೆಗೆದುಕೊಳ್ಳಲಿ ಎಂದರು.
ಮಹದಾಯಿ ಬಂದ್ ಬಿಸಿ ಕಿಮ್ಸ್ ಆಸ್ಪತ್ರೆಗೂ ತಟ್ಟಿದೆ. ಹುಬ್ಬಳ್ಳಿ ನಗರ ಬೆಳಿಗ್ಗೆ 6 ಗಂಟೆಯಿಂದ ಬಂದ್ ಆಗಿರೋ ಪರಿಣಾಮ ಯಾವುದೇ ಬಸ್ ಇಲ್ಲದೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರ ಪರಿಣಾಮ ಆಸ್ಪತ್ರೆಯಿಂದ ಬಿಡುಗಡೆಯಾದ ರೋಗಿಗಳು ಮನೆ ಸೇರುವುದು ಹೇಗೆ ಎನ್ನುವ ಸ್ಥಿತಿ ಕಿಮ್ಸ್ ನಲ್ಲಿದೆ.
ಧಾರವಾಡ: ಮಹದಾಯಿ, ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಮಲಪ್ರಭಾ, ಮಹದಾಯಿ, ಕಳಸಾ-ಬಂಡೂರಿ ರೈತ ಹೋರಾಟ ಸಮಿತಿ ಸೇರಿದಂತೆ ನೂರಕ್ಕೂ ಹೆಚ್ಚು ವಿವಿಧ ಕನ್ನಡಪರ, ರೈತ ಸಂಘಟನೆಗಳು ಕೇಂದ್ರ, ರಾಜ್ಯ ಸರ್ಕಾರಗಳ ನಡೆ ಖಂಡಿಸಿ ಬಂದ್ ಆರಂಭಿಸಿವೆ.
ಧಾರವಾಡ ನಗರದ ಜುಬ್ಲಿ ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಕನ್ನಡ ಪರ ಹಾಗೂ ರೈತ ಹೋರಾಟಗಾರರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತ ನರಗುಂದದಲ್ಲಿ ಆಕ್ರೋಶ ಭುಗಿಲೆದಿದ್ದು, ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕುತ್ತಿದ್ದಾರೆ. ಪ್ರತಿಭಟನಾಕಾರರು ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೆ ವಾಹನಗಳನ್ನು ತಡೆದು ಹಿಂದಕ್ಕೆ ಕಳಿಸುತ್ತಿದ್ದಾರೆ.
ಗದಗ ಜಿಲ್ಲೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಗದಗ ಹಾಗೂ ಗಜೇಂದ್ರಗಢ ನಗರದಲ್ಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ನಸುಕಿನಲ್ಲೇ ಕನ್ನಡಪರ ಸಂಘಟನೆಗಳು ಬೀದಿಗಿಳಿದಿದ್ದಾರೆ. ಗಜೇಂದ್ರಗಢ ಪಟ್ಟಣ ಸಂಪೂರ್ಣ ಸ್ತಬ್ಧವಾಗಿದ್ದು, ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚಿ, ರಸ್ತೆ ತಡೆಯುತ್ತಿದ್ದಾರೆ. ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಿಜಯಪುರದಿಂದ ಹುಬ್ಬಳ್ಳಿಗೆ ಹೊರಟಿದ್ದ ಪೆಟ್ರೋಲ್ ಟ್ಯಾಂಕರ್ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ಆರಂಭವಾಗಿದ್ದು, ರೈತ ಸಂಘಟನೆಗಳು ಹಾಗೂ ಕನ್ನಡಪರ ಸಂಘಟನೆಗಳು ಹೋರಾಟ ನಡೆಸುತ್ತಿವೆ. ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹುಬ್ಬಳ್ಳಿಯ ರೈಲು ನಿಲ್ದಾಣದ ಮುಂದೆ ಕನ್ನಡಪರ ಸಂಘನೆಗಳು ಹೋರಾಟ ನಡೆಸುತ್ತಿವೆ.
ಬಂದ್ ಹಿನ್ನಲೆಯಲ್ಲಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ಕಾವು ಪಡೆದುಕೊಳ್ಳುತ್ತಿದೆ. ರೈಲ್ವೆ ನಿಲ್ದಾಣದೆದುರು ಸಂಗ್ರಾಮ ಸೇನೆಯಿಂದ ಪ್ರತಿಭಟನೆ ನಡೆಯುತ್ತಿದ್ದು, ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಹೊರಟಿದ್ದ ಹೋರಾಟಗಾರರನ್ನ ಪೊಲೀಸರು ತಡೆದಿದ್ದಾರೆ.
ಹುಬ್ಬಳ್ಳಿ- ವಿಜಯಪುರ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ನಗರವನ್ನು ಸಂಪರ್ಕಿಸುವ ಹೆದ್ದಾರಿಗಳನ್ನು ತಡೆಯಲು ಹೋರಾಟಗಾರರು ತೀರ್ಮಾನಿಸಿದ್ದಾರೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ರೈಲ್ವೆ ನಿಲ್ದಾಣ, ಅಂಚೆ ಕಚೇರಿ, ಬಿಎಸ್‍ಎನ್‍ಎಲ್ ಕಚೇರಿಗಳಿಗೂ ಮುತ್ತಿಗೆ ಹಾಕುವುದಾಗಿ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.
ಹುಬ್ಬಳ್ಳಿ-ಧಾರವಾಡ, ಗದಗ, ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಯ ಹಲವೆಡೆ ಬಂದ್ ಗೆ ಕರೆ ನೀಡಿರುವುದರಿಂದ ಅರ್ಧ ಕರ್ನಾಟಕದ ಜನಜೀವನ ಸ್ಥಗಿತಗೊಳ್ಳಲಿದೆ. ಎಲ್ಲಾ ಅಂಗಡಿ ಮುಂಗಟ್ಟು, ಹೋಟೆಲ್, ವಾಣಿಜ್ಯ ವಹಿವಾಟು ಸ್ಥಗಿತಗೊಳ್ಳಲಿದೆ. ಆಟೋ ಸಂಚಾರ, ಟ್ಯಾಕ್ಸಿ ಸಂಚಾರವೂ ಸ್ತಬ್ಧಗೊಳ್ಳಲಿದೆ. ಬಂದ್ ಗೆ ಚಿತ್ರೋದ್ಯಮವೂ ಬೆಂಬಲ ನೀಡಿದೆ.
ಕಳೆದ ಬಾರಿ ಗಲಾಟೆ ಹೆಚ್ಚಾಗಿದ್ದ ನವಲಗುಂದ ತಾಲೂಕಿನ ಯಮನೂರು, ಅಳಗವಾಡಿ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರಾತ್ರಿಯಿಂದಲೇ ಬಂದೋಬಸ್ತ್ ಹೆಚ್ಚಿಸಲಾಗಿದೆ. ಜಿಲ್ಲೆಯ ಬಂದೋಬಸ್ತ್ ಗಾಗಿ ಎರಡು ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.
ಬೆಂಗಳೂರು: ಮಹದಾಯಿ ಹೋರಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ನಾಳೆ ಉತ್ತರ ಕರ್ನಾಟಕ ಬಂದ್ ಹೋರಾಟಗಾರರು ಕರೆ ನೀಡಿದ ಪರಿಣಾಮವಾಗಿ ಬುಧವಾರ ನಡೆಯ ಬೇಕಿದ್ದ, ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿಶ್ವವಿದ್ಯಾಲಯದ ಪರೀಕ್ಷೆಗಳು ಮುಂದೂಡಲಾಗಿದೆ.
ಈ ಕುರಿತು ವಿಟಿಯು ಕುಲಪತಿ ಕರಿಸಿದ್ದಪ್ಪ ಹೇಳಿಕೆ ನೀಡಿದ್ದು, ನಾಳೆ ನಡೆಯಬೇಕಿದ್ದ ಪರೀಕ್ಷೆಗಳನ್ನು ಡಿಸೆಂಬರ್ 29 ಹಾಗೂ ಜನವರಿ 8 ಕ್ಕೆ ಮುಂದೂಡಿರುವುದಾಗಿ ತಿಳಿಸಿದ್ದಾರೆ.