Tag: ಬಂದ್

  • ಫೆಬ್ರವರಿ 04 ಬೆಂಗಳೂರು ಬಂದ್ ಇಲ್ಲ: ವಾಟಾಳ್ ನಾಗರಾಜ್

    ಫೆಬ್ರವರಿ 04 ಬೆಂಗಳೂರು ಬಂದ್ ಇಲ್ಲ: ವಾಟಾಳ್ ನಾಗರಾಜ್

    ಬೆಂಗಳೂರು: ಫೆ.4 ರಂದು ಬೆಂಗಳೂರು ಬಂದ್‍ಗೆ ಹೈಕೋರ್ಟ್ ತಡೆ ಹಿನ್ನೆಲೆ ಬೆಂಗಳೂರು ಬಂದ್ ನಡೆಸುವುದಿಲ್ಲ. ಆದರೆ ಮಹದಾಯಿಗಾಗಿ ನಮ್ಮ ಹೋರಾಟ ಮುಂದುವರೆಯಲಿದ್ದು, ಮೋದಿ ರಾಜ್ಯಕ್ಕೆ ಬರುವ ದಿನವನ್ನು ಕರಾಳ ದಿನವಾಗಿ ಆಚರಣೆ ಮಾಡುವುದಾಗಿ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

    ಅಸಮರ್ಪಕ ಬಂದ್ ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಬಂದ್ ಗೆ ತಡೆ ನೀಡಿತ್ತು. ಈ ಕುರಿತು ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಬಂದ್ ನಡೆಸದಿರುವ ಕುರಿತು ಮಾಹಿತಿ ನೀಡಿದರು. ಕಳೆದ ಮೂರು ವರ್ಷಗಳಿಂದ ಮಹದಾಯಿ ಹೋರಾಟ ನಡೆಸಲಾಗುತ್ತಿದೆ. ಈ ಕುರಿತು ಪ್ರಧಾನಿಗಳ ಗಮನ ಸೆಳೆಯಲು ಫೆಬ್ರವರಿ 4 ರಂದು ಬಂದ್ ಗೆ ಕರೆ ನೀಡಲಾಗಿತ್ತು ಎಂದರು.

    ನನ್ನ ವಿರುದ್ಧ ಅಪಪ್ರಚಾರ: ನಮ್ಮ ಬಂದ್ ಕನ್ನಡದ ನಾಡು ನುಡಿಗಾಗಿ ಮಾಡುತ್ತಿದ್ದೇವೆ, ವಿನಃ ಯಾವುದೇ ಪಕ್ಷದ ಹಿತಾಸಕ್ತಿಯಿಂದ ಅಲ್ಲ. ನನ್ನ ಹೋರಾಟ ಜೀವನದಲ್ಲಿ ಇದೇ ಮೊದಲ ಬಾರಿಗೆ ಒಬ್ಬ ವ್ಯಕ್ತಿಯ ಬಗ್ಗೆ ಕೂತು ಮಾತನಾಡುವ ಸ್ಥಿತಿ ಎದುರಾಗಿದೆ. ನ್ಯಾಯಾಲಯದಲ್ಲಿ ನನ್ನ ವಿರುದ್ಧ ಅರ್ಜಿ ಸಲ್ಲಿಸಲಾಗಿದ್ದು, ಈ ಕುರಿತು ನನಗೆ ಕೋರ್ಟ್ ನಿಂದ ನೋಟಿಸ್ ಜಾರಿಯಾಗಿದೆ. ಬಂದ್ ಗೆ ಕರೆ ನೀಡಿದ್ದು ಕನ್ನಡ ಚಳುವಳಿ ವಾಟಾಳ್ ಪಕ್ಷ ಅಲ್ಲ, ಕನ್ನಡ ಒಕ್ಕೂಟಗಳು ಆದರೆ ನನ್ನ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

    ನ್ಯಾಯಾಲಯದ ತೀರ್ಪನ್ನು ನಾವು ಗೌರವಿಸುತ್ತೇವೆ. ಆದರೆ ಈ ವೇಳೆ ನನಗೆ ತಂದೆ ತಾಯಿ ಸಾವನ್ನಪ್ಪಿದ ವೇಳೆ ಉಂಟಾಗುತ್ತಿರುವ ನೋವು ಆಗುತ್ತಿದೆ. ಅದ್ದರಿಂದ ನಾವು ನ್ಯಾಯಾಲಯದ ತೀರ್ಪಿಗೆ ತಲೆಬಾಗಿ ಬಂದ್ ರದ್ದು ಮಾಡುತ್ತಿದ್ದೇವೆ. ಆದರೆ ಭಾನುವಾರ ಕರಾಳ ದಿನವಾಗಿ ಆಚರಣೆ ಮಾಡುತ್ತೇವೆ. ಫ್ರೀಡಂ ಪಾರ್ಕ್ ನಿಂದ ಮೋದಿ ಅವರ ಸಭೆಗೆ ಜಾಥ ನಡೆಸಿ ಪ್ರಧಾನಿಗಳಿಗೆ ಮನವಿ ಸಲ್ಲಿಸುತ್ತೇವೆ ಎಂದರು.

    ಬಂದ್ ಸಂವಿಧಾನ ವಿರೋಧಿ ಎಂದು ತೀರ್ಪು ನೀಡಿದ ನ್ಯಾಯಾಲಯದ ತೀರ್ಪಿನ ವಿರುದ್ಧ ಮೂಲಭೂತ ಹಕ್ಕಿಗಾಗಿ ಹೋರಾಟ ನಡೆಸುವುದಾಗಿ ತಿಳಿಸಿದರು. ನಮ್ಮ ದೇಹದಲ್ಲಿ ಒಂದು ತೊಟ್ಟು ರಕ್ತ ಇರುವರೆಗೂ ರಾಜ್ಯಕ್ಕಾಗಿ ಹೋರಾಟ ಮಾಡುತ್ತೇವೆ. 25 ರ ಬಂದ್ ರಾಜ್ಯದ ಜನರ ಕಣ್ಣು ತೆರೆಸಿದೆ ಅಂತಾ ಅಂದ್ರು.

    ಬಿಜೆಪಿ ನಾಯಕರ ವಿರುದ್ಧ ಆಕ್ರೋಶ: ಈ ವೇಳೆ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ ಅವರು, ಬಿಜೆಪಿಯವರು ನಾಲಿಗೆ ಬಿಗಿ ಹಿಡಿದುಕೊಂಡು ಮಾತನಾಡಬೇಕಿದೆ. ನಮ್ಮನ್ನು ಕಾಂಗ್ರೆಸ್ ಏಜೆಂಟರು ಎನ್ನುವ ರೀತಿ ಮಾತನಾಡುತ್ತಾರೆ. ಮೈಸೂರನಲ್ಲಿ ಅಮೀತ್ ಶಾ ಅವರು ಮಹಾದಾಯಿ ಬಗ್ಗೆ ಯಾಕೆ ಏನು ಮಾತಾನಾಡಿಲ್ಲ ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದರು. ಕರ್ನಾಟಕ ರಾಜ್ಯದ ಬಿಜೆಪಿ ನಾಯಕರು ಯಾರ ಪರ ಇದ್ದೀರಾ. ಸಂಸತ್ ನಲ್ಲಿ ರಾಜ್ಯದ ಬಿಜೆಪಿ ಸಂಸದರು ಒಮ್ಮೆಯೂ ಮಹದಾಯಿ ಬಗ್ಗೆ ಮಾತಾಡಿಲ್ಲ. ಪ್ರಧಾನ ಮಂತ್ರಿಯರವರ ಗಮನ ಸೆಳೆಯಲು 25 ಕ್ಕೆ ಬಂದ್ ಮಾಡಿದ್ದು, ಫೆಬ್ರವರಿ 4 ಕ್ಕೆ ಪ್ರಧಾನಿ ಬೆಂಗಳೂರಿಗೆ ಬರುತ್ತಿದ್ದಾರೆ. ಅವರ ಗಮನ ಸೆಳೆಯಲು ನಮ್ಮ ಹೋರಾಟ ಮುಂದುವರೆಯುತ್ತದೆ. ನಾವು ಮೋದಿ ಅವರ ವಿರುದ್ಧ ಪ್ರತಿಭಟನೆ ನಡೆಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

  • ಮೋದಿ ದೇಶದ ಪ್ರಧಾನಿ, ಬಂದ್ ನಡೆಸಲು ಅವಕಾಶ ನೀಡಲ್ಲ: ರಾಮಲಿಂಗಾ ರೆಡ್ಡಿ

    ಮೋದಿ ದೇಶದ ಪ್ರಧಾನಿ, ಬಂದ್ ನಡೆಸಲು ಅವಕಾಶ ನೀಡಲ್ಲ: ರಾಮಲಿಂಗಾ ರೆಡ್ಡಿ

    ಬೆಂಗಳೂರು: ಭಾನುವಾರ ನಗರದಲ್ಲಿ ಎಲ್ಲೂ ಪ್ರತಿಭಟನೆಗೆ ಅವಕಾಶವಿಲ್ಲ. ಬಂದ್ ಮಾಡುವವರು ಫ್ರೀಡಂ ಪಾರ್ಕ್‍ನಲ್ಲಿ ಮಾತ್ರ ಪ್ರತಿಭಟನೆ ಮಾಡಲಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿಯ ಪ್ರಧಾನಿ ಅಲ್ಲ. ಅವರು ದೇಶದ ಪ್ರಧಾನಿ. ಪ್ರಧಾನಿಗಳು ಬಂದಾಗ ಗೌರವ ಕೊಡುವುದು ರಾಜ್ಯ ಸರ್ಕಾರದ ಕರ್ತವ್ಯ. ಹೀಗಾಗಿ ಪ್ರತಿಭಟನೆ ಮಾಡುವವರಿಗೆ ಫ್ರೀಡಂ ಪಾರ್ಕ್ ಪ್ರತಿಭಟಿಸಲು ಅವಕಾಶ ನೀಡಲಾಗುವುದು ಎಂದು ಹೇಳಿದರು.

    ಭಾನುವಾರ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗುವುದು ಎಂದು ರಾಮಲಿಂಗಾ ರೆಡ್ಡಿ ತಿಳಿಸಿದರು.

    ಮಹದಾಯಿ ವಿಚಾರದಲ್ಲಿ ಪ್ರಧಾನಿ ಮೋದಿಯವರು ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆ ಹರಿಸಿಕೊಡಬೇಕು. ಮಹದಾಯಿ ಸಮಸ್ಯೆಯನ್ನು ಪ್ರಧಾನಿ ನರೇಂದ್ರ ಮೋದಿ ಬಗೆ ಹರಿಸುವ ಭರವಸೆಯನ್ನು ನೀಡದೇ ಇದ್ದರೆ ಫೆ.4 ರಂದು ಬೆಂಗಳೂರು ಬಂದ್ ನಡೆಸಲಾಗುವುದು ಎಂದು ವಾಟಾಳ್ ನಾಗರಾಜ್ ಹೇಳಿದ್ದರು.

    ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಫೆ. 4ರಂದು ಪ್ರಧಾನಿ ಮೋದಿ ಬೆಂಗಳೂರಿಗೆ ಬರುತ್ತಿದ್ದಾರೆ. ಹೀಗಾಗಿ 3ನೇ ತಾರೀಖಿನ ಒಳಗಡೆ ಮಹದಾಯಿ ನೀರಿನ ಸಮಸ್ಯೆಯನ್ನು ನಾನು ಬಗೆಹರಿಸುತ್ತೇನೆ ಎಂದು ಪ್ರಧಾನಿಯಿಂದ ಭರವಸೆ ಕೊಡಿಸಿ. ಇಲ್ಲದೇ ಇದ್ದರೆ 4ರಂದು ಬೆಂಗಳೂರು ಬಂದ್ ಮಾಡಬೇಕಾಗುತ್ತದೆ. ನಮಗೆ ಸ್ಪಷ್ಟವಾದ ಭರವಸೆ ಕೊಡಿಸಬೇಕು. ಶನಿವಾರ ಮಧ್ಯಾಹ್ನದ ತನಕ ಕಾಯುತ್ತೇವೆ. ಮಧ್ಯಾಹ್ನದ ಒಳಗಡೆ ಭರವಸೆ ಸಿಗದೇ ಹೋದರೆ ಬಂದ್ ಗೆ ಕರೆ ನೀಡಬೇಕಾಗುತ್ತದೆ ಎಂದು ವಾಟಾಳ್ ನಾಗರಾಜ್ ಬಿಜೆಪಿಗೆ ಡೆಡ್‍ಲೈನ್ ನೀಡಿದ್ದರು.

     

  • ಹಿಂಸಾಚಾರಕ್ಕೆ ತಿರುಗಿದ ಬೀದರ್ ಪ್ರತಿಭಟನೆ – ಪೊಲೀಸರಿಂದ ಲಾಠಿ ಚಾರ್ಜ್: ವಿಡಿಯೋ

    ಹಿಂಸಾಚಾರಕ್ಕೆ ತಿರುಗಿದ ಬೀದರ್ ಪ್ರತಿಭಟನೆ – ಪೊಲೀಸರಿಂದ ಲಾಠಿ ಚಾರ್ಜ್: ವಿಡಿಯೋ

    ಬೀದರ್: ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಕಾಲೇಜು ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿ ಕತ್ತು ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿದ್ದನ್ನು ಖಂಡಿಸಿ ಕರೆನೀಡಿದ್ದ ಬೀದರ್‍ ಬಂದ್ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಪ್ರತಿಭಟನಾ ನಿರತರನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ.

    ಇಂದು ಎಬಿವಿಪಿ, ಎಸ್‍ಎಫ್‍ಐ ಸೇರಿದಂತೆ ವಿವಿಧ ಸಂಘಟನೆಗಳು ಬೀದರ್ ಬಂದ್ ಗೆ ಕರೆ ನೀಡಿದ್ದವು. ಈ ವೇಳೆ ಅತ್ಯಾಚಾರ ಕೃತ್ಯ ಖಂಡಿಸಿ 2 ಸಾವಿರಕ್ಕೂ ಹೆಚ್ಚಿನ ಜನರು ಪ್ರತಿಭಟನೆ ಮಾಡುತ್ತಿದ್ದರು. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ನೆರೆದಿದ್ದ ಕಾರಣ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.

    ನಗರದ ಅಂಬೇಡ್ಕರ್ ವೃತದಲ್ಲಿ ಪ್ರತಿಭಟನಾಕಾರರು ಕೃತ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಸರ್ಕಲ್ ನ ಒಂದು ಭಾಗದಲ್ಲಿ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಲು ಅವಕಾಶ ನೀಡಲಾಗಿದ್ದು ಮತ್ತೊಂದು ಭಾಗದಲ್ಲಿ ಸಂಚಾರ ಸುಗಮ ಮಾಡಲು ಪೊಲೀಸರು ಹರಸಾಹಸ ಪಟ್ಟಿದ್ದರು.

    ಲಾಠಿ ಚಾರ್ಜ್ ನಂತರ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಂಸದ ಭಗವಂತ ಖೂಬಾ ಅವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಏನಿದು ರೇಪ್ ಪ್ರಕರಣ?
    ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಖಾನಾಪುರ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಇದೇ ತಿಂಗಳ 27 ರಂದು ಭಾಲ್ಕಿ ತಾಲೂಕಿ ಕೋಸಮ್ ಗ್ರಾಮದ ಪೂಜಾ (20) ವಿದ್ಯಾರ್ಥಿನಿ ಕೊಲೆಯಾಗಿತ್ತು. ವಿದ್ಯಾರ್ಥಿನಿ ಪೂಜಾ ನಗರದ ಅಕ್ಕಮಹಾದೇವಿ ಕಾಲೇಜಿನಲ್ಲಿ ಬಿಎ ಎರಡನೇಯ ವರ್ಷದಲ್ಲಿ ಓದುತ್ತಿದ್ದಳು.

    ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಪ್ರಕರಣದ ತನಿಖೆ ನಡೆಸಿ ಆರೋಪಿ ಶಂಶುದ್ದೀನ್ (24) ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಕೊಲೆಯಾದ ವಿದ್ಯಾರ್ಥಿನಿ ಪೂಜಾಳನ್ನು ಆರೋಪಿ ಕಳೆದ ಎರಡು ವರ್ಷದಿಂದ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಆದರೆ ಆರೋಪಿಯ ಪ್ರೀತಿಯನ್ನು ನಿರಾಕರಿಸಿದಾಗ ಒತ್ತಾಯ ಪೂರ್ವಕವಾಗಿ ಪೂಜಾಳನ್ನು ಅರಣ್ಯ ಪ್ರದಶಕ್ಕೆ ಕರೆದೊಯ್ದು ಕೊಲೆ ಮಾಡಿದ್ದ.

    ವಿವಿದ ಸಂಘಟನೆಗಳ ಹೋರಾಟಗಾರರು ಬಂದ್ ನಡೆಸಿದ್ದರು ನಗರದಲ್ಲಿ ಶಾಲಾ – ಕಾಲೇಜುಗಳಿಗೆ ರಜೆ ನೀಡಿರಲಿಲ್ಲ. ಅಲ್ಲದೇ ಸಾರಿಗೆ ಬಸ್ ಸಂಚಾರ ಎಂದಿನಂತೆ ನಡೆಯಲು ಅವಕಾಶ ನೀಡಲಾಗಿತ್ತು. ವಿದ್ಯಾರ್ಥಿ ಮೇಲಿನ ಅತ್ಯಾಚಾರ ಪ್ರಕರಣದ ಕುರಿತು ಧನ್ನೂರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    https://www.youtube.com/watch?v=SMBS7IebDnE

  • ಬಂದ್ ನಿರ್ಬಂಧಿಸಿ, ವಾಟಾಳ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪಿಐಎಲ್ ಸಲ್ಲಿಕೆ

    ಬಂದ್ ನಿರ್ಬಂಧಿಸಿ, ವಾಟಾಳ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪಿಐಎಲ್ ಸಲ್ಲಿಕೆ

    ಬೆಂಗಳೂರು: ಮಹದಾಯಿಗಾಗಿ ಕರ್ನಾಟಕ ಬಂದ್ ಕರೆ ನೀಡಿದ ವಾಟಾಳ್ ನಾಗರಾಜ್ ವಿರುದ್ಧ ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಕೆಯಾಗಿದೆ.

    ರಾಜಾಜಿನಗರ ಶ್ರದ್ಧಾ ಪೋಷಕರ ಸಂಘ ಪಿಐಎಲ್ ಸಲ್ಲಿಸಿದ್ದು, ಮಹದಾಯಿಗಾಗಿ 10 ದಿನಗಳ ಅಂತರದಲ್ಲಿ 2 ದಿನ ಬಂದ್ ಕರೆ ನೀಡಲಾಗಿದೆ ಇದರಿಂದ ಜನರ ಮೂಲಭೂತ ಹಕ್ಕಿಗೆ ದಕ್ಕೆ ಉಂಟಾಗಲಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

    ಬಂದ್ ನಡೆಸುವುದು ಅಸಂವಿಧಾನಿಕ, ಕಾನೂನು ಬಾಹಿರ ಎಂದು ಘೋಷಿಸಬೇಕು. ಬಂದ್‍ನಿಂದ ಉಂಟಾಗಿರುವ ನಷ್ಟವನ್ನು ವಾಟಾಳ್ ನಾಗರಾಜ್ ಅವರು ಸರ್ಕಾರಕ್ಕೆ ಪಾವತಿಸುವಂತೆ ಆದೇಶಿಸಬೇಕು ಹಾಗೂ ಪದೇ ಪದೇ ಬಂದ್ ಕರೆ ನೀಡುತ್ತಿರುವ ವಾಟಾಳ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಸಂಘ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದೆ.

  • ಕ್ರಿಕೆಟ್ ಆಡಿ ಮಹದಾಯಿ ಪ್ರತಿಭಟನೆ – ಬ್ಯಾಟ್ ತಾಗಿ ಕಾರ್ಯಕರ್ತನ ತಲೆ ಓಪನ್

    ಕ್ರಿಕೆಟ್ ಆಡಿ ಮಹದಾಯಿ ಪ್ರತಿಭಟನೆ – ಬ್ಯಾಟ್ ತಾಗಿ ಕಾರ್ಯಕರ್ತನ ತಲೆ ಓಪನ್

    ದಾವಣಗೆರೆ: ಮಹದಾಯಿಗಾಗಿ ನಗರದಲ್ಲಿ ಕನ್ನಡ ಪರ ಸಂಘಟನೆಗಳು ಕ್ರಿಕೆಟ್ ಆಡಿ ವಿನೂತನವಾಗಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಬ್ಯಾಟ್ ತಾಗಿ ಕಾರ್ಯಕರ್ತರ ತಲೆಗೆ ಗಂಭೀರ ಪೆಟ್ಟಾಗಿದೆ.

    ಜಯದೇವ ವೃತ್ತದಲ್ಲಿ ಕನ್ನಡ ಪರ ಸಂಘಟನೆಗಳು ಕ್ರಿಕೆಟ್ ಆಟವಾಡಿ ವಿನೂತನವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಬ್ಯಾಟ್ ತಾಗಿ ಕರವೇ ಶಿವರಾಮೆ ಗೌಡರ ಬಣದ ಚನ್ನಗಿರಿ ತಾಲೂಕಿನ ಅಧ್ಯಕ್ಷ ಲೋಹಿತ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

    ವೃತ್ತದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ. ಶಿವಕುಮಾರ್ ಬ್ಯಾಟಿಂಗ್ ಮಾಡುತ್ತಿದ್ದರು. ಬ್ಯಾಟಿಂಗ್ ಮಾಡುವಾಗ ಪಕ್ಕದಲ್ಲಿದ್ದ ಲೋಹಿತ್ ತಲೆಗೆ ಬ್ಯಾಟ್ ತಾಗಿದೆ.

    ಬ್ಯಾಟ್ ತಾಗಿದ ಪೆಟ್ಟಿಗೆ ಲೋಹಿತ್ ತಲೆ ಓಪನ್ ಆಗಿದೆ. ಕೂಡಲೇ ಲೋಹಿತ್ ಅವರನ್ನು ಕಾರ್ಯಕರ್ತರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಬಂದ್ ದಿನ ಅಂಗಡಿ ತೆರೆದ ವ್ಯಾಪಾರಿಗಳಿಗೆ ಕನ್ನಡ ಸಂಘಟನೆಗಳಿಂದ ಸನ್ಮಾನ

  • ಬಂದ್ ದಿನ ಅಂಗಡಿ ತೆರೆದ ವ್ಯಾಪಾರಿಗಳಿಗೆ ಕನ್ನಡ ಸಂಘಟನೆಗಳಿಂದ ಸನ್ಮಾನ

    ಬಂದ್ ದಿನ ಅಂಗಡಿ ತೆರೆದ ವ್ಯಾಪಾರಿಗಳಿಗೆ ಕನ್ನಡ ಸಂಘಟನೆಗಳಿಂದ ಸನ್ಮಾನ

    ಮೈಸೂರು: ಮಹದಾಯಿಗಾಗಿ ಕನ್ನಡ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿದರೆ ಮೈಸೂರಿನ ಕನ್ನಡ ಸಂಘಟನೆಗಳು ಬಂದ್ ವಿರೋಧಿಸಿವೆ.

    ಮೈಸೂರಿನಲ್ಲಿ ಬಂದ್‍ಗೆ ಬೆಂಬಲ ನೀಡದೇ ಅಂಗಡಿಯನ್ನು ತೆರೆದು ವ್ಯಾಪಾರ ಮಾಡುತ್ತಿರುವ ಅಂಗಡಿ ಮಾಲೀಕರಿಗೆ ಸಂಘಟನೆಯ ಕಾರ್ಯಕರ್ತರು ಹೂವಿನ ಹಾರ ಹಾಕಿ ಸನ್ಮಾನ ಮಾಡಿ ಅಭಿನಂದಿಸಿದ್ದಾರೆ.

    ತರಕಾರಿ ವ್ಯಾಪಾರಿಗಳು, ಸಣ್ಣ ಹೊಟೇಲ್ ಹಾಗೂ ಅಂಗಡಿಗಳ ಬಾಗಿಲು ತೆರೆದು ವ್ಯಾಪಾರ ನಡೆಸುತ್ತಿರುವ ವ್ಯಾಪಾರಿಗಳಿಗೆ ಸನ್ಮಾನ ಮಾಡಿದ್ದಾರೆ. ಕಾರ್ಯಕರ್ತರು ರಾಜಕೀಯ ಪ್ರೇರಿತ ಬಂದ್ ನಮಗೆ ಬೇಡ ಎಂದು ಘೋಷಣೆ ಕೂಗಿ ಮೆರವಣಿಗೆ ನಡೆಸಿ ಆಕ್ರೋಶ ಪಡಿಸುತ್ತಿದ್ದಾರೆ.

  • ದಾವಣಗೆರೆಯಲ್ಲಿ ಕುಡುಕನ ಅವಾಂತರ- ಬಸ್ ಸಿಗದೆ ಟೆನ್ಷನ್ ನಲ್ಲಿದ್ದ ಸಾರ್ವಜನಿಕರಿಗೆ ಕಿರಿಕ್

    ದಾವಣಗೆರೆಯಲ್ಲಿ ಕುಡುಕನ ಅವಾಂತರ- ಬಸ್ ಸಿಗದೆ ಟೆನ್ಷನ್ ನಲ್ಲಿದ್ದ ಸಾರ್ವಜನಿಕರಿಗೆ ಕಿರಿಕ್

    ದಾವಣಗೆರೆ: ರಾಜ್ಯಾದ್ಯಂತ ಬಂದ್ ಬಿಸಿ ಇದ್ದರೆ, ಇದರ ನಡುವೆ ದಾವಣಗೆರೆಯಲ್ಲಿ ಕುಡುಕನ ಅವಾಂತರ ಅಲ್ಲಿ ನೆರೆದ ಸಾರ್ವಜನಿಕರಿಗೆ ಮನೋರಂಜನೆ ನೀಡಿತ್ತು.

    ನಗರದ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದ ಎದುರು ಕುಡುಕ ಮಹಾಶಯನೊಬ್ಬ, ಬಸ್‍ಗಾಗಿ ಕಾಯುತ್ತಿದ್ದ ಪ್ರಯಣಿಕರಿಗೆ ಕಿರಿಕ್ ಮಾಡಿ ಅವಾಂತರ ಸೃಷ್ಟಿಸಿದ್ದಾನೆ. ಬಂದ್ ಇರೋದ್ರಿಂದ ಬಸ್ ಸಿಗದೆ ಟೆನ್ಷನ್ ನಲ್ಲಿದ್ದ ಪ್ರಯಾಣಿಕರ ಬಳಿ ಹೋಗಿ ಅವರನ್ನು ಎಳೆದಾಡಿ ಟವಲ್ ಕಿತ್ತುಕೊಳ್ಳುವುದು, ಅಪ್ಪಿಕೊಳ್ಳುವುದನ್ನು ಮಾಡಿದ್ದಾನೆ.

    ದಾವಣಗೆರೆ ಬಸ್ ನಿಲ್ದಾಣದ ಮುಂಭಾಗದಲ್ಲಿ ಅವಾಂತರ ನಡೆದಿದ್ದು, ಮದ್ಯವ್ಯಸನಿ ಬುಧವಾರ ರಾತ್ರಿ ಕಂಠಪೂರ್ತಿ ಕುಡಿದು ಮಲಗಿದ್ದನು. ಪ್ರತಿಭಟನಾಕಾರರು ಎಬ್ಬಿಸಿದ ಬಳಿಕ ವ್ಯಕ್ತಿ ಕಣ್ತೆರೆದಿದ್ದಾನೆ. ಒಂದು ಕಡೆ ಮನೋರಂಜನೆಯಾದರೆ, ಮತ್ತೊಂದು ಕಡೆ ಈತನ ವರ್ತನೆಯಿಂದ ಕೆಲವರಿಗೆ ಕಿರಿಕಿರಿ ಉಂಟಾಗಿದೆ.

    ನಂತರ ಪೊಲೀಸರು ಬಂದು ಕುಡುಕನನ್ನು ದಬಾಯಿಸಿ ಆಟೋ ಹತ್ತಿಸಿ ಕಳುಹಿಸಿದ್ದಾರೆ.

  • ಐಟಿ ಕಂಪೆನಿಗಳಿಗೆ ಬೀಗ ಹಾಕುವಂತೆ ಆಗ್ರಹ, ಮಾನ್ಯತಾ ಟೆಕ್ ಪಾರ್ಕ್ ಬಳಿ ಕರವೇ ಕಾರ್ಯಕರ್ತರ ಪ್ರತಿಭಟನೆ

    ಐಟಿ ಕಂಪೆನಿಗಳಿಗೆ ಬೀಗ ಹಾಕುವಂತೆ ಆಗ್ರಹ, ಮಾನ್ಯತಾ ಟೆಕ್ ಪಾರ್ಕ್ ಬಳಿ ಕರವೇ ಕಾರ್ಯಕರ್ತರ ಪ್ರತಿಭಟನೆ

    ಬೆಂಗಳೂರು: ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಬಂದ್ ಗೆ ಬೆಂಬಲ ನೀಡದ ಐಟಿ ಕಂಪನಿಗಳಿಗೆ ಬೀಗ ಹಾಕುವ ಎಚ್ಚರಿಕೆ ಹಿನ್ನಲೆಯಲ್ಲಿ ಮಾನ್ಯತಾ ಟೆಕ್ ಪಾರ್ಕ್‍ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

    ಮಾನ್ಯತಾ ಟೆಕ್ ಪಾರ್ಕ್ ಬಳಿ ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಅಂಗಡಿ ಮುಚ್ಚಿಸಲು ಕರವೇ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಮಾನ್ಯತಾ ಟೆಕ್ ಪಾರ್ಕ್ ಒಳಗೆ ಐಟಿ ಉದ್ಯೋಗಿಗಳು ಹಾಗೂ ವಾಹನಗಳನ್ನು ಬಿಡದೆ ರಸ್ತೆಯಲ್ಲಿಯೇ ತಡೆದಿದ್ದಾರೆ. ಅಷ್ಟೇ ಅಲ್ಲದೇ ಕಾರ್ಯಕರ್ತರು ಪೊಲೀಸರ ಜೊತೆ ವಾಗ್ವಾದ ನಡೆಸಿ, ರಸ್ತೆಯಲ್ಲೇ ಧರಣಿ ನಡೆಸುತ್ತಿದ್ದಾರೆ.

    ಐಟಿ ಕಂಪನಿ ಬಂದ್ ಮಾಡೋದಕ್ಕೆ ಹೇಳಿ ಎಂದು ಕರವೇ ಆಗ್ರಹಿಸಿದ್ದಾರೆ. ಆದ್ರೆ ಐಟಿ ಕಂಪನಿಯವರು ಬೇರೆ ಕೆಲಸದಲ್ಲಿ ನಿರತರಾಗಿದ್ದಾರೆ, ಬಂದ್ ಮಾಡಿದರೆ ಅರೆಸ್ಟ್ ಮಾಡುತ್ತೀವಿ ಎಂದು ಪೊಲೀಸರು ಹೇಳಿದ್ದಾರೆ. ಈ ವೇಳೆ ಪ್ರವೀಶ್ ಶೆಟ್ಟಿ ಹಾಗೂ ಪೊಲೀಸರ ಮಧ್ಯೆ ಗಲಾಟೆ ನಡೆದಿದೆ. ಅದ್ಹೇಗೆ ಅರೆಸ್ಟ್ ಮಾಡ್ತೀರಾ? ನಾವೇನ್ ಕಲ್ಲು ಹೊಡೆದಿದ್ವಾ, ನೀವೆನೂ ಹೇಳಿದ ಹಾಗೆ ಮಾಡೋದಕ್ಕೆ ಆಗಲ್ಲ ಎಂದು ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ.

    ಐಟಿ ಕಂಪನಿ ವಿರುದ್ಧ ಪ್ರವೀಣ್ ಶೆಟ್ಟಿ ವಾಗ್ಧಾಳಿ ನಡೆಸಿ ಇಲ್ಲಿನ ನೀರು, ಜಮೀನು, ಕರೆಂಟು ಎಲ್ಲವೂ ಬೇಕು. ಆದರೆ ಐಟಿಯವರು ನಮ್ಮ ಹೋರಾಟಕ್ಕೆ ಬೆಂಬಲ ಮಾತ್ರ ಕೊಡಲ್ಲ. ಬಾಗಿಲು ಮುಚ್ಚಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂದು ಬಂದ್ ಗೆ ಬೆಂಬಲಿಸದೆ ಇದ್ದರೆ ಮುಂದಿನ ಪರಿಸ್ಥಿತಿ ಗೆ ಅವರೇ ಹೊಣೆ ಎಂದು ಹೇಳಿದ್ದಾರೆ.

    ಇದಕ್ಕೆ ಮಾನ್ಯತಾ ಟೆಕ್ ಪಾರ್ಕ್ ಮ್ಯಾನೇಜರ್ ಪ್ರತಿಕ್ರಿಯಿಸಿ, ಐಟಿ ಕಂಪನಿ ಕ್ಲೋಸ್ ಇದೆ ಎಂದು ಸಮಜಾಯಿಷಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ನೀರಿನ, ನಾಡಿನ ಸಮಸ್ಯೆ ಬಂದಾಗ ಐಟಿಬಿಟಿ ಬೆಂಬಲವಿದೆ ಎಂದು ಹೇಳಿದ್ದಾರೆ.

  • ರಾಮನಗರದಲ್ಲಿ ವಿನೂತನ ಪ್ರತಿಭಟನೆ: ಪಾಲೇಕರ್ ಪ್ರತಿಕೃತಿಯನ್ನು ಚಟ್ಟದಲ್ಲಿ ಮೆರವಣಿಗೆ ಮಾಡಿ ಬೆಂಕಿ

    ರಾಮನಗರದಲ್ಲಿ ವಿನೂತನ ಪ್ರತಿಭಟನೆ: ಪಾಲೇಕರ್ ಪ್ರತಿಕೃತಿಯನ್ನು ಚಟ್ಟದಲ್ಲಿ ಮೆರವಣಿಗೆ ಮಾಡಿ ಬೆಂಕಿ

    ರಾಮನಗರ: ಮಹದಾಯಿ ನೀರಿಗಾಗಿ ವಿವಿಧ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‍ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ರಾಮನಗರದಲ್ಲಿ ಮುಂಜಾನೆಯಿಂದಲೇ ಪ್ರತಿಭಟನೆಗಳು ಶುರುವಾಗಿವೆ.

    ರಾಮನಗರದಲ್ಲಿ ಮೊದಲಿಗೆ ಕರುನಾಡ ಸೇನೆ ಕಾರ್ಯಕರ್ತರು ಐಜೂರು ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಗೋವಾ ಸಿಎಂ ಮನೋಹರ್ ಪರಿಕ್ಕರ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಕನ್ನಡ ಜನಮನ ವೇದಿಕೆ ಕಾರ್ಯಕರ್ತರು ಖಾಲಿ ಕೊಡಗಳನ್ನು ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಿದರು.

    ಚನ್ನಪಟ್ಟಣದಲ್ಲಿ ಕಸ್ತೂರಿ ಕರ್ನಾಟಕ ಜನರ ವೇದಿಕೆ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ನಡೆಸಿದರು. ಗೋವಾ ಸಿಎಂ ಪರಿಕ್ಕರ್ ಹಾಗೂ ನೀರಾವರಿ ಸಚಿವ ಪಾಲೇಕರ್ ಪ್ರತಿಕೃತಿಗಳನ್ನು ಚಟ್ಟಗಳಲ್ಲಿ ಮೆರವಣಿಗೆ ನಡೆಸಿದರು.

    ಬೆಂಗಳೂರು- ಮೈಸೂರು ಹೆದ್ದಾರಿ ರಸ್ತೆ ತಡೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗೋವಾ ಸಿಎಂ ಹಾಗೂ ನೀರಾವರಿ ಸಚಿವರ ಪ್ರತಿಕೃತಿಗಳಿಗೆ ಚಪ್ಪಲಿ ಸೇವೆ ಮಾಡಿ ಬೆಂಕಿ ಹಾಕಿ ದಹಿಸಿದರು. ಇದೇ ವೇಳೆ ಶಿವಣ್ಣ ಹಾಗೂ ಶಿವಶಂಕರ್ ಎಂಬ ಇಬ್ಬರು ಕಾರ್ಯಕರ್ತರು ಕೇಶ ಮುಂಡನ ಮಾಡಿಸಿಕೊಳ್ಳುವ ಮೂಲಕ ಅಂತ್ಯಸಂಸ್ಕಾರ ಕಾರ್ಯ ನೆರವೇರಿಸಿದರು.

    https://www.youtube.com/watch?v=2Mye0kES5G0

    https://www.youtube.com/watch?v=qNNzR2FPct4

  • ಮಹದಾಯಿಗಾಗಿ ಕರ್ನಾಟಕ ಬಂದ್: ಕರವೇ ಕಾರ್ಯಕರ್ತಯರಿಂದ ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ

    ಮಹದಾಯಿಗಾಗಿ ಕರ್ನಾಟಕ ಬಂದ್: ಕರವೇ ಕಾರ್ಯಕರ್ತಯರಿಂದ ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ

    ಬೆಂಗಳೂರು: ಮಹದಾಯಿ ನೀರಿಗಾಗಿ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ರೈಲು ಪ್ರಯಾಣಿಕರಿಗೂ ಬಂದ್ ಬಿಸಿ ತಟ್ಟಿದೆ.

    ದಿನ ನಿತ್ಯಕ್ಕಿಂತ ಪ್ರಯಾಣಿಕರ ಸಂಖ್ಯೆ ಕುಸಿತ ಕಂಡಿದ್ದು, ರೈಲ್ವೇ ನಿಲ್ದಾಣಕ್ಕೆ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಮಹದಾಯಿ ಹೋರಾಟವನ್ನು ಬೆಂಬಲಿಸಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಕ್ಕೆ ಒತ್ತಾಯಿಸಿ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡರ ಬಣದಿಂದ ಮುತ್ತಿಗೆ ಹಾಕಿದ್ದಾರೆ.

    ರೈಲ್ವೇ ಸ್ಟೇಷನ್ ಗೆ ಕರವೇ ಮುತ್ತಿಗೆ ಹಿನ್ನೆಲೆಯಲ್ಲಿ ಸ್ಟೇಷನ್ ಫ್ರಂಟ್ ಮತ್ತು ಬ್ಯಾಕ್ ಗೇಟಲ್ಲಿ ಪೊಲೀಸ್ ಫುಲ್ ಬಿಗಿ ಬಂದೋಬಸ್ತ್ ಮಾಡಿದ್ದಾರೆ. ರೈಲ್ವೇ ಸ್ಟೇಷನ್ ಮುಂಭಾಗ ಬ್ಯಾರಿಕೇಡ್ ಗಳನ್ನ ಹಾಕಿ ಬಂದೋಬಸ್ತ್ ಮಾಡಿದ್ದಾರೆ. 150ಕ್ಕೂ ಹೆಚ್ಚು ಪೊಲೀಸರನ್ನು ಆಯೋಜಿಸಲಾಗಿದೆ.

    ರೈಲ್ವೇ ಸ್ಟೇಷನ್‍ಗೆ ಕರವೇ ಅಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ಮುತ್ತಿಗೆ ನಡೆದಿದ್ದು, ಪೊಲೀಸರು ಕರವೇ ಕಾರ್ಯಕರ್ತರನ್ನ ತಡೆಯುತ್ತಿದ್ದಾರೆ. ಮಹದಾಯಿ ನಮ್ಮದು, ಮಹದಾಯಿ ನಮ್ಮದು ಎಂದು ಕೇಂದ್ರ ಸರ್ಕಾರದ ವಿರುದ್ಧ ಕರವೇ ಕಾರ್ಯಕರ್ತರ ಘೋಷಣೆ ಕೂಗುತ್ತಿದ್ದಾರೆ.

    ಕೇಂದ್ರ ಸರ್ಕಾರದ ಗಮನ ಸೆಳೆಯಲು ರೈಲ್ವೆ ನಿಲ್ದಾಣಕ್ಕೆ ಹೋಗಿ ರಾಜ್ಯದ ಎಲ್ಲಾ ರೈಲ್ವೇ ನಿಲ್ದಾಣಗಳಿಗೂ ಮುತ್ತಿಗೆ ಹಾಕಲಾಗಿದೆ. ಕುಡಿಯೋ ನೀರಿಗಾಗಿ ಇಂದು ಹೋರಾಟ ಮಾಡಲಾಗ್ತಿದೆ, ಪ್ರಧಾನಿಗಳು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆ ಹರಿಸಬೇಕು ಎಂದು ಕರವೇ ಅಧ್ಯಕ್ಷ ನಾರಾಯಣಗೌಡ ಹೇಳಿಕೆ ನೀಡಿದ್ದಾರೆ.

    ರೈಲ್ವೇ ಸ್ಟೇಷನ್‍ಗೆ ಕರವೇ ಮುತ್ತಿಗೆ ಹಾಕಿದ್ದು, ಕರವೇ ಅಧ್ಯಕ್ಷ ನಾರಾಯಣಗೌಡನನ್ನು ಬಂಧಿಸಿದ್ದಾರೆ. ಮುತ್ತಿಗೆ ಹಾಕಲು ಯತ್ನಿಸಿದ ಕರವೇ ಅಧ್ಯಕ್ಷ ನಾರಾಯಣಗೌಡನನ್ನು ಸೇರಿ ನೂರಾರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಕಾರ್ಯಕರ್ತರು ರಸ್ತೆಗಳಲ್ಲೇ ಮಲಗಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.