Tag: ಬಂದ್

  • ವಿಜಯನಗರ ಜಿಲ್ಲೆ ಘೋಷಣೆಗೆ ವಿರೋಧ – ಅಖಂಡ ಬಳ್ಳಾರಿಗೆ ಒತ್ತಾಯಿಸಿ ಮಂಗಳವಾರ ಬಂದ್

    ವಿಜಯನಗರ ಜಿಲ್ಲೆ ಘೋಷಣೆಗೆ ವಿರೋಧ – ಅಖಂಡ ಬಳ್ಳಾರಿಗೆ ಒತ್ತಾಯಿಸಿ ಮಂಗಳವಾರ ಬಂದ್

    ಬಳ್ಳಾರಿ: ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆಯನ್ನ ಮಾಡಬೇಕು ಎಂಬ ಸರ್ಕಾರದ ನಿರ್ಧಾರಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದ್ದು, ಇದೀಗ ಅಖಂಡ ಬಳ್ಳಾರಿ ಜಿಲ್ಲೆಯನ್ನ ಉಳಿಸಬೇಕೆಂದು ಆಗ್ರಹಿಸಿ ಮಂಗಳವಾರ ಜಿಲ್ಲೆಯ ಬಂದ್ ಕರೆ ನೀಡಲಾಗಿದೆ.

    25ಕ್ಕೂ ಹೆಚ್ಚು ಸಂಘ ಸಂಸ್ಥೆಗಳು, ಸ್ವಾಮೀಜಿಗಳು, ಚೇಂಬರ್ ಆಫ್ ಕಾರ್ಮಸ್ ಬಂದ್‍ಗೆ ಬೆಂಬಲ ನೀಡಿವೆ. ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಳ್ಳಾರಿ ಸಂಪೂರ್ಣ ಬಂದ್ ಮಾಡಿ ವಿಜಯನಗರ ಜಿಲ್ಲೆ ಸ್ಥಾಪನೆಗೆ ವಿರೋಧಿಸಿ ಪ್ರತಿಭಟನೆ ನಡೆಯಲಿದೆ. ಈಗಾಗಲೇ ಜಿಲ್ಲೆಯ ವಿಭಜನೆಗೆ ಬಿಜೆಪಿ ಶಾಸಕರಾದ ಸೋಮಶೇಖರರೆಡ್ಡಿ, ಕರುಣಾಕರೆಡ್ಡಿ, ಸಚಿವ ಶ್ರೀರಾಮುಲು ವಿರೋಧ ವ್ಯಕ್ತಪಡಿಸಿದ್ದಾರೆ.

    ಬಳ್ಳಾರಿ ಬಂದ್‍ಗೆ ತಮ್ಮ ಪರೋಕ್ಷ ಬೆಂಬಲ ಇರುವುದಾಗಿ ಬಿಜೆಪಿ ಶಾಸಕರು ಘೋಷಿಸಿದ್ದಾರೆ. ಹೀಗಾಗಿ ಮಂಗಳವಾರ ಬಳ್ಳಾರಿ ಸಂಪೂರ್ಣ ಬಂದ್ ಆಗಲಿದ್ದು ಅಂಗಡಿ ಮುಗ್ಗಟ್ಟು ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ.

    ಹೊಸಪೇಟೆ ಕ್ಷೇತ್ರದ ಅನರ್ಹ ಶಾಸಕ ಆನಂದಸಿಂಗ್ ವಿಜಯನಗರ ಕ್ಷೇತ್ರವನ್ನ ಜಿಲ್ಲಾ ಕೇಂದ್ರವಾಗಿ ಮಾಡಲು ರಾಜೀನಾಮೆ ನೀಡಿ ಕಾಂಗ್ರೆಸ್‍ನಿಂದ ಹೊರ ನಡೆದಿದ್ದರು. ಆದರೆ ಇವರ ಆಸೆಗೆ ಬಳ್ಳಾರಿ ಜಿಲ್ಲೆಯ ಬಿಜೆಪಿ ಶಾಸಕರಿಂದಲೇ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ವಿಜಯನಗರ ಜಿಲ್ಲೆ ಮಾಡಲೇಬಾರದು. ಅಖಂಡ ಬಳ್ಳಾರಿಯನ್ನ ಒಡೆಯಲೇಬಾರದು ಎಂದು ಬಿಜೆಪಿ ಶಾಸಕರು ಸರ್ಕಾರದ ವಿರುದ್ಧವೇ ಸಿಡಿದೇಳುವ ಮೂಲಕ ಆನಂದ್ ಸಿಂಗ್ ಆಸೆಗೆ ತಣ್ಣೀರರೆಚಲು ಮುಂದಾಗಿದ್ದಾರೆ. ಅಲ್ಲದೇ ಜಿಲ್ಲೆ ಮಾಡಲು ರಾಜೀನಾಮೆ ನೀಡೋದಾದ್ರೆ ಜಿಲ್ಲೆ ವಿಭಜನೆ ಮಾಡೋದು ಬೇಡವೆಂದು ಬಿಜೆಪಿ ಶಾಸಕರು ರಾಜೀನಾಮೆ ನೀಡಲು ಸಿದ್ದವೆನ್ನುತ್ತಿದ್ದಾರೆ.

  • ಕೇರಳ, ಕರ್ನಾಟಕ ವಾಹನ ಸಂಚಾರ ಬಂದ್ – ಬಂಡೀಪುರ ಚೆಕ್‍ಪೋಸ್ಟ್ ನಲ್ಲಿ ಸಾಲುಗಟ್ಟಿ ನಿಂತ ವಾಹನಗಳು

    ಕೇರಳ, ಕರ್ನಾಟಕ ವಾಹನ ಸಂಚಾರ ಬಂದ್ – ಬಂಡೀಪುರ ಚೆಕ್‍ಪೋಸ್ಟ್ ನಲ್ಲಿ ಸಾಲುಗಟ್ಟಿ ನಿಂತ ವಾಹನಗಳು

    ಚಾಮರಾಜನಗರ: ಕರ್ನಾಟಕ ಸರ್ಕಾರ ಬಂಡೀಪುರ ಅರಣ್ಯದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಹೇರಿರುವ ನಿಷೇಧವನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ವಯನಾಡ್ ಕ್ಷೇತ್ರದಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಿ ಸ್ವಯಂಪ್ರೇರಿತ ಬಂದ್ ಮಾಡಲಾಗಿದೆ.

    ಗುಂಡುಪೇಟೆ ತಾಲೂಕಿನ ಬಂಡೀಪುರ ಮೂಲಕ ಕೇರಳಕ್ಕೆ ರಾತ್ರಿ ವೇಳೆ ವಾಹನ ಸಂಚಾರ ಬಂದ್ ಹಿನ್ನೆಲೆಯಲ್ಲಿ ಕಾಂಗ್ರೆಸ್ ರಾಹುಲ್ ಗಾಂಧಿ ಪ್ರತಿನಿಧಿಸಿ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಸ್ವಯಂ ಪ್ರೇರಿತ ಬಂದ್ ಮಾಡಲಾಗಿದೆ.

    ಬಂದ್ ಹಿನ್ನೆಲೆಯಲ್ಲಿ ರಾ.ಹೆ.766 ರಲ್ಲಿ ವಾಹನ ಸಂಚಾರ ಸ್ಥಗಿತವಾಗಿದ್ದು, ಬಂಡೀಪುರದ ಮದ್ದೂರು ಚೆಕ್ ಪೋಸ್ಟ್ ಬಳಿ ವಾಹನಗಳು ಸಾಲುಗಟ್ಟಿ ನಿಂತಿವೆ. ರಾತ್ರಿ ವಾಹನ ಸಂಚಾರದಿಂದ ಕಾಡು ಪ್ರಾಣಿಗಳು ಅಪಘಾತಕ್ಕೀಡಾಗುತ್ತವೆ ಎಂಬ ಕಾರಣಕ್ಕೆ ಸಂಚಾರವನ್ನು ನಿಷೇಧ ಮಾಡಲಾಗಿತ್ತು.

    ಏನಿದು ಪ್ರಕರಣ?
    ಹುಲಿ, ಆನೆ, ಕಾಡೆಮ್ಮೆ ಸೇರಿದಂತೆ ಅಳಿವಿನಂಚಿನಲ್ಲಿರುವ ಪ್ರಾಣಿಗಳು ಅಪಘಾತದಿಂದ ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ 2009ರಲ್ಲಿ ಬಂಡೀಪುರ ಅಭಯಾರಣ್ಯದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 212 ಮತ್ತು 69 ರಲ್ಲಿ ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆಯವರೆಗೆ ವಾಹನ ಸಂಚಾರವನ್ನು ನಿಷೇಧಿಸಿ ಚಾಮಾರಾಜನಗರ ಜಿಲ್ಲಾ ಆಡಳಿತ ಆದೇಶ ಹೊರಡಿಸಿತ್ತು. ವಾಹನಗಳ ಸಂಚಾರ ನಿಷೇಧವನ್ನು ರದ್ದುಪಡಿಸದಂತೆ ಕರ್ನಾಟಕ ಹೈಕೋರ್ಟ್ 2010ರಲ್ಲಿ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಕೇರಳ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದು ವಿಚಾರಣೆ ನಡೆಯುತ್ತಿದೆ. ಕೇರಳ ಸರ್ಕಾರ ಈ ಹಿಂದೆ ಸಾಕಷ್ಟು ಬಾರಿ ನಿಷೇಧ ತೆರವುಗೊಳಿಸುವಂತೆ ರಾಜ್ಯ ಸರ್ಕಾರವನ್ನು ಕೇಳಿಕೊಂಡಿತ್ತು. ಕೇರಳದ ಲಾಬಿಗೆ ರಾಜ್ಯ ಸರ್ಕಾರ ಮಣಿದಿರಲಿಲ್ಲ.

    ಪರಿಸ್ಥಿತಿಯನ್ನು ಅಧ್ಯಯನ ನಡೆಸಲು ಸುಪ್ರೀಂ ಕೋರ್ಟ್ ಕೇಂದ್ರ ಸಾರಿಗೆ ಸಚಿವಾಲಯದ ಮುಖ್ಯ ಕಾರ್ಯದರ್ಶಿ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಪ್ರತಿನಿಧಿಗಳ ಜೊತೆ ಕರ್ನಾಟಕ, ತಮಿಳುನಾಡು, ಕೇರಳದ ಸಾರಿಗೆ ಸಚಿವಾಲಯದ ಅಧಿಕಾರಿಗಳನ್ನು ಹೊಂದಿದ್ದ ಸಮಿತಿಯನ್ನು ರಚಿಸುವಂತೆ ಸೂಚಿಸಿತ್ತು.

    ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಹಿಂದಿದ್ದ ನಾಲ್ಕೂ ಸರ್ಕಾರಗಳು ಸಮ್ಮತಿ ಸೂಚಿಸಿರಲಿಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ನೀಡಿರಲಿಲ್ಲ. ಸಿಎಂ ಕುಮಾರಸ್ವಾಮಿ ಸರ್ಕಾರದ ಜೊತೆಗೂ ಕೇರಳ ಮಾತುಕತೆ ನಡೆಸಿತ್ತು.

    ಬಲಿಯಾದ ಪ್ರಾಣಿಗಳ ಸಂಖ್ಯೆ ಎಷ್ಟು?
    ರಾತ್ರಿ ಸಂಚಾರ ನಿಷೇಧಕ್ಕೂ ಮುನ್ನ ಅಂದ್ರೆ 2004-09ರ ಅವಧಿಯಲ್ಲಿ ಬಂಡಿಪುರ ಅರಣ್ಯ ಪ್ರದೇಶದಲ್ಲಿ 86 ಪ್ರಾಣಿಗಳು ಅಪಘಾತಕ್ಕೆ ಬಲಿಯಾಗಿವೆ. ರಾತ್ರಿ ಸಂಚಾರ ನಿಷೇಧ ಬಳಿಕ 2010-18ರ ಅವಧಿಯಲ್ಲಿ 17 ಪ್ರಾಣಿ ಮೃತಪಟ್ಟಿವೆ. ಒಟ್ಟಿನಲ್ಲಿ ರಾತ್ರಿ ವಾಹನ ಸಂಚಾರ ನಿಷೇಧದ ಬಳಿಕ ಅಪಘಾತದಲ್ಲಿ ಸತ್ತ ಪ್ರಾಣಿಗಳ ಸಂಖ್ಯೆ ಇಳಿಕೆಯಾಗಿತ್ತು. ಇದೀಗ ಮತ್ತೆ ಸಂಚಾರ ಮುಕ್ತ ಮಾಡಿದ್ರೆ ಮತ್ತೆ ಪ್ರಾಣಿಗಳು ಬಲಿಯಾಗುತ್ತವೆ ಅಂತ ಪ್ರಾಣಿಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ.

    ಯಾವ ವರ್ಷದಲ್ಲಿ ಎಷ್ಟು ಪ್ರಾಣಿಗಳು ಪ್ರಾಣ ಕಳೆದುಕೋಂಡಿವೆ ಎಂಬ ವಿವರ ಈ ಕೆಳಗಿನಂತಿದೆ:
    2004 – 32, 2005 – 7, 2007 – 41, 2008 – 2, 2009 – 2, 2010 – 3, 2011 – 7, 2012 – 10, 2013 – 6, 2014 – 1, 2015 – 2, 2016 – 1, 2017 – 2, 2018 – 2 ಪ್ರಾಣಿಗಳು ಮೃತಪಟ್ಟಿವೆ.

  • ಚಾರ್ಮಾಡಿ ಘಾಟ್ ಒಂದು ತಿಂಗಳು ಬಂದ್ – ಜಿಲ್ಲಾಧಿಕಾರಿ ಆದೇಶ

    ಚಾರ್ಮಾಡಿ ಘಾಟ್ ಒಂದು ತಿಂಗಳು ಬಂದ್ – ಜಿಲ್ಲಾಧಿಕಾರಿ ಆದೇಶ

    ಚಿಕ್ಕಮಗಳೂರು: ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿಘಾಟ್ ರಸ್ತೆಗೆ ಭಾರೀ ಮಳೆಯಿಂದ ಹಾನಿಯಾಗಿರುವ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ಎಲ್ಲಾ ವಾಹನಗಳ ಸಂಚಾರ ಬಂದ್ ಮಾಡಲಾಗಿದೆ.

    ಭಾರೀ ಮಳೆಗೆ ಚಾರ್ಮಾಡಿ ಘಾಟ್ ಹಲವು ಭಾಗಗಳಲ್ಲಿ ರಸ್ತೆ ಮೇಲೆ ಗುಡ್ಡ ಕುಸಿತವಾಗಿತ್ತು. ಸದ್ಯ ರಸ್ತೆ ಮೇಲೆ ಬಿದ್ದಿರುವ ಮಣ್ಣು ತೆರವು ಕಾರ್ಯಾಚರಣೆ ಮುಂದುವರಿಸಲಾಗಿದೆ. ಈ ಕಾರ್ಯ ಪೂರ್ಣಗೊಂಡರೂ, ಕೆಲವೆಡೆ ರಸ್ತೆ ಕುಸಿತವಾಗಿರುವುದರಿಂದ ಆಗಸ್ಟ್ 15 ರಿಂದ ಸೆಪ್ಟೆಂಬರ್ 14 ವರೆಗೂ ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

    ಚಿಕ್ಕಮಗಳೂರಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ಮಾರ್ಗದಲ್ಲಿ ಸುಮಾರು 20ಕ್ಕೂ ಹೆಚ್ಚು ಪ್ರದೇಶದಲ್ಲಿ ಭೂ ಕುಸಿತ ಸಂಭವಿಸಿದೆ. ಇವುಗಳ ದುರಸ್ಥಿಗೆ 1 ತಿಂಗಳ ಸಮಯಾವಕಾಶದ ಅಗತ್ಯವಿದೆ ಎಂದು ಲೋಕೋಪಯೋಗಿ ಇಲಾಖೆ ತಿಳಿಸಿರುವುದರಿಂದ ಮಾರ್ಗವನ್ನು ಬಂದ್ ಮಾಡಲಾಗಿದೆ.

    ಕಳೆದ ವರ್ಷದ ಸುರಿದ ಭಾರೀ ಮಳೆಗೆ ಅಲ್ಲಲ್ಲಿ ಗುಡ್ಡ ಕುಸಿದು ಹಲವು ಬಾರಿ ಸಂಚಾರವನ್ನು ಬಂದ್ ಮಾಡಲಾಗಿತ್ತು. ಈ ಬಾರಿಯೂ ಇದೇ ಪರಿಸ್ಥಿತಿ ಮುಂದುವರಿದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಭಾರೀ ಪ್ರಮಾಣದ ಮರಗಳು ಕೂಡ ರಸ್ತೆ ಮೇಲೆ ಉರುಳಿ ಬಿದ್ದಿದೆ. ರಸ್ತೆಗಳ ಕೆಲ ತಿರುವುಗಳಲ್ಲಿ ರಸ್ತೆ ಭಾಗಶಃ ಕೊಚ್ಚಿ ಹೋಗಿದೆ. ಶತಮಾನಗಳಿಂದಲೂ ತನ್ನ ಸೌಂದರ್ಯ ಉಳಿಸಿಕೊಂಡಿದ್ದ ಚಾರ್ಮಾಡಿ ಘಾಟ್‍ನಲ್ಲಿ ಈಗ ಗುಡ್ಡ ಕುಸಿತವೇ ಕಣ್ಣಿಗೆ ರಾಚುತ್ತಿದ್ದು, ತಿರುವುಗಳಲ್ಲಿ ಭೂಭಾಗ ಬಾಯ್ತೆರೆದಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ.

  • ಮಾಜಿ ಸಿಎಂ ತವರಲ್ಲೇ ಇಂದಿರಾ ಕ್ಯಾಂಟಿನ್ ಬಂದ್

    ಮಾಜಿ ಸಿಎಂ ತವರಲ್ಲೇ ಇಂದಿರಾ ಕ್ಯಾಂಟಿನ್ ಬಂದ್

    ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ತವರಿನಲ್ಲೇ ಇಂದಿರಾ ಕ್ಯಾಂಟಿನ್ ಬಂದ್ ಆಗಿದೆ.

    ಟೆಂಡರ್‌ದಾರ ಹಣ ಪಾವತಿ ಮಾಡದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದ ಇಂದಿರಾ ಕ್ಯಾಂಟೀನ್ ಬಂದ್ ಮಾಡಲಾಗಿದೆ. ವ್ಯವಸ್ಥಾಪಕರು ಕ್ಯಾಂಟೀನ್ ಬಂದ್ ಮಾಡಲು ನಿರ್ಧಾರ ಮಾಡಿಕೊಂಡಿದ್ದಾರೆ.

    ಟೆಂಡರ್‌ದಾರ ಸುಮಾರು 6 ತಿಂಗಳ ಹಣ ಬಾಕಿ ಉಳಿಸಿಕೊಂಡಿದ್ದಾರೆ. ಹೀಗಾಗಿ ವ್ಯವಸ್ಥಾಪಕರು ಕ್ಯಾಂಟೀನ್ ಬಂದ್ ಮಾಡಿದ್ದಾರೆ. ಈ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕನಸಿನ ಕೂಸಿಗೆ ಕೊಡಲಿ ಏಟು ಬಿದ್ದಿದೆ.

    ನವಾಜ್ ಫಯಾಜ್ ಎಂಬವರು ಕರ್ನಾಟಕದ ಹಲವು ಕ್ಯಾಂಟೀನ್ ಅವರು ತೆಗೆದುಕೊಂಡಿದ್ದಾರೆ. ಹೆಚ್.ಡಿ ಕೋಟೆ, ಟಿ. ನರಸೀಪುರ ಇದು ಎಲ್ಲ ನಮ್ಮ ತಂಡ ಹಾಗೂ ಇಲ್ಲಿನ ಸಿಬ್ಬಂದಿಗೆ ಸಂಬಳ ಸಿಗುತ್ತಿಲ್ಲ. ಸಂಬಳ ಸಿಗದೇ ಹಲವು ಸಿಬ್ಬಂದಿ ಕೆಲಸ ಬಿಟ್ಟಿದ್ದಾರೆ. ಇಲ್ಲಿ ಕೂಡ ಸಿಬ್ಬಂದಿ ಬಿಟ್ಟು ಹೋಗದಂತೆ ನೋಡಿಕೊಂಡಿದ್ದೇನೆ. ಅಲ್ಲದೆ ಸಾಲ ಮಾಡಿ ನಾನೇ ಅವರಿಗೆ ಸಂಬಳ ನೀಡಿದ್ದೇನೆ. ನನ್ನ ಕೈಯಲ್ಲಿ ಆದಷ್ಟು ಮಾಡಿದ್ದೇನೆ. ಆದರೆ ಈಗ ನನ್ನಿಂದ ಆಗುತ್ತಿಲ್ಲ. ಹಾಗಾಗಿ ಕ್ಯಾಂಟೀನ್ ಕ್ಲೋಸ್ ಮಾಡಿದ್ದೇನೆ ಎಂದು ಇಂದಿರಾ ಕ್ಯಾಂಟೀನ್ ಸಿಬ್ಬಂದಿ ಹೇಳಿದ್ದಾರೆ.

    ಇಂದಿರಾ ಕ್ಯಾಂಟೀನ್‍ಗೆ ಬಡವರು, ಗ್ಯಾರೆ ಕೆಲಸ ಮಾಡುವವರು ಬರುತ್ತಿದ್ದರು. ಬಡವರಿಗೆ ಅನುಕೂಲ ಆಗಲಿ ಎಂದು ಕ್ಯಾಂಟೀನ್ ನಡೆಸಲಾಗುತ್ತಿತ್ತು. ಆದರೆ ಈಗ ನನ್ನಿಂದ ಆಗುತ್ತಿಲ್ಲ. ಹಾಗಾಗಿ ಇಂದಿನಿಂದ ಕ್ಯಾಂಟೀನ್ ಕ್ಲೋಸ್ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

  • ಖಾಸಗಿ ಆಸ್ಪತ್ರೆಗಳ ಜೊತೆ ಬೀದರ್‌ನಲ್ಲಿ ಸರ್ಕಾರಿ ಆಸ್ಪತ್ರೆಯೂ ಬಂದ್ – ರೋಗಿಗಳ ಪರದಾಟ

    ಖಾಸಗಿ ಆಸ್ಪತ್ರೆಗಳ ಜೊತೆ ಬೀದರ್‌ನಲ್ಲಿ ಸರ್ಕಾರಿ ಆಸ್ಪತ್ರೆಯೂ ಬಂದ್ – ರೋಗಿಗಳ ಪರದಾಟ

    ಬೀದರ್: ವೈದ್ಯರು ಕರೆ ನೀಡಿದ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಬೀದರ್ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲದೆ, ಬೀದರ್‍ನ ಸರ್ಕಾರಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ಸಹ ಬಂದ್ ಆಗಿದ್ದು, ಚಿಕಿತ್ಸೆಗಾಗಿ ರೋಗಿಗಳು ಹಾಗೂ ಗರ್ಭಿಣಿಯರು ಪರದಾಡುತ್ತಿರುವ ಸ್ಥಿತಿ ನಿರ್ಮಾಣವಾಗಿದೆ.

    ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‍ಎಂಸಿ) ವಿಧೇಯಕ ವಿರೋಧಿಸಿ ಇಂದು ಖಾಸಗಿ ಆಸ್ಪತ್ರೆಗಳ ವೈದ್ಯರು ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದು, ಈ ಹಿನ್ನೆಲೆ ಕೆಲವೆಡೆ ಖಾಸಗಿ ಆಸ್ಪತ್ರೆಗಳು ತೆರೆದಿದ್ದರೆ, ಇನ್ನೂ ಕೆಲವೆಡೆ ಆಸ್ಪತ್ರೆಗಳು ಬಂದ್ ಆಗಿವೆ. ಬೀದರ್‍ನಲ್ಲಿ ಬಹುತೇಕ ಖಾಸಗಿ ಆಸ್ಪತ್ರೆಗಳು ಬಂದ್ ಆಗಿದ್ದು, ಖಾಸಗಿ ಆಸ್ಪತ್ರೆಗಳ ಜೊತೆಗೆ ಸರ್ಕಾರಿ ಆಸ್ಪತ್ರೆಯನ್ನೂ ಬಂದ್ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳು ಮಾತ್ರ ಬಂದ್ ಆಗಿರುತ್ತವೆ, ಸರ್ಕಾರಿ ಆಸ್ಪತ್ರೆಗಳು ತೆರೆದಿರುತ್ತವೆ ಎಂದು ಆಗಮಿಸಿದ್ದ ರೋಗಿಗಳು ಹಾಗೂ ಗರ್ಭಿಣಿಯರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

    ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಬೀದರ್ ಬ್ರಿಮ್ಸ್ ಜಿಲ್ಲಾಸ್ಪತ್ರೆಯ ವೈದ್ಯರೂ ಸಹ ಕೆಲಸಕ್ಕೆ ಹಾಜರಾಗಿರಲಿಲ್ಲ. ಚಿಕಿತ್ಸೆಗಾಗಿ ರೋಗಿಗಳು, ಗರ್ಭಿಣಿಯರು ಕ್ಯೂನಲ್ಲಿ ನಿಂತು ಸುಸ್ತಾಗಿದ್ದಾರೆ. ಸ್ಕ್ಯಾನ್ ಮಾಡಿಸಲು ಬೆಳಗ್ಗೆ 6 ಗಂಟೆಯಿಂದಲೇ ರೋಗಿಗಳು ಸರತಿಯಲ್ಲಿ ನಿಂತ್ತಿದ್ದು, ಮಧ್ಯಾಹ್ನ 12 ಗಂಟೆಯಾದರೂ ಸಹ ವೈದ್ಯರು ಕೆಲಸಕ್ಕೆ ಹಾಜರಾಗಿಲ್ಲ. ಹೀಗಾಗಿ ವೈದ್ಯರ ವಿರುದ್ಧ ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬೆಳಗ್ಗೆಯಿಂದಲೇ ವೈದ್ಯರಿಗಾಗಿ ಕಾದು ಗರ್ಭಿಣಿ ಮಹಿಳೆಯರು ಹಾಗೂ ರೋಗಿಗಳು ಹೈರಾಣಾಗಿದ್ದು, ಸರತಿಯಲ್ಲಿ ನಿಲ್ಲಲೂ ಸಾಧ್ಯವಾಗದೇ ನೆಲದ ಮೇಲೆಯೇ ಮಲಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಿನ್ನೆಯೇ ವೈದ್ಯರ ಮುಷ್ಕರದ ಕುರಿತು ಎಚ್ಚರಿಕೆ ನೀಡಲಾಗಿತ್ತು. ಹೀಗಾಗಿ ಖಾಸಗಿ ಆಸ್ಪತ್ರೆಗಳು ತೆರೆದಿರುವುದಿಲ್ಲ ಎಂದು ಸರ್ಕಾರಿ ಆಸ್ಪತ್ರೆಗೆ ರೋಗಿಗಳು ಆಗಮಿಸಿದ್ದರು.

    ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್‍ಎಂಸಿ) ವಿಧೇಯಕವನ್ನು ವಿರೋಧಿಸಿ ಬುಧವಾರ ಇಂಡಿಯನ್ ಮೆಡಿಕಲ್ ಅಸೋಷಿಯೇಷನ್(ಐಎಂಎ) ದೇಶಾದ್ಯಂತ ವೈದ್ಯರ ಮುಷ್ಕರಕ್ಕೆ ಕರೆ ನಿಡಿದ್ದು, ಸುಮಾರು 24 ಗಂಟೆಗಳ ಕಾಲ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ. ಹೀಗಾಗಿ ಬಹುತೇಕ ಖಾಸಗಿ ಆಸ್ಪತ್ರೆಯ ಒಪಿಡಿ ಸಾರ್ವಜನಿಕ ಸೇವೆಗೆ ಲಭ್ಯವಿಲ್ಲ. ಬುಧವಾರ ಬೆಳಗ್ಗೆ ಆರು ಗಂಟೆಯಿಂದ ಗುರುವಾರ ಬೆಳಗ್ಗೆ ಆರು ಗಂಟೆಯವರೆಗೆ ಮುಷ್ಕರ ನಡೆಯಲಿದ್ದು, ವೈದ್ಯರ ಸೇವೆಯಲ್ಲಿ ವ್ಯತ್ಯಯವಾಗುತ್ತಿದೆ.

  • ವೈದ್ಯರ ಮೇಲೆ ಹಲ್ಲೆ – ಗಂಗಾವತಿಯ ಎಲ್ಲಾ ಖಾಸಗಿ ಆಸ್ಪತ್ರೆ, ಮೆಡಿಕಲ್ ಶಾಪ್ ಬಂದ್

    ವೈದ್ಯರ ಮೇಲೆ ಹಲ್ಲೆ – ಗಂಗಾವತಿಯ ಎಲ್ಲಾ ಖಾಸಗಿ ಆಸ್ಪತ್ರೆ, ಮೆಡಿಕಲ್ ಶಾಪ್ ಬಂದ್

    ಕೊಪ್ಪಳ: ವೈದ್ಯರ ಮೇಲೆ ನಡೆದ ಹಲ್ಲೆ ಖಂಡಿಸಿ ಇಂದು ಕೊಪ್ಪಳದ ಗಂಗಾವತಿಯ ಎಲ್ಲಾ ಖಾಸಗಿ ಆಸ್ಪತ್ರೆ ಹಾಗೂ ಮೆಡಿಕಲ್ ಶಾಪ್ ಬಂದ್ ಆಗಲಿದೆ.

    ಗಂಗಾವತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಗೌಸ್ ಮೊಹಿದ್ದೋನ್ (70) ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮೃತಪಟ್ಟ ರೋಗಿಯ ಸಂಬಂಧಿಕರು ವೈದ್ಯ ಡಾ.ಅರ್ಜುನ್ ಮತ್ತು ಆಸ್ಪತ್ರೆಯ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ್ದಾರೆ.

    ಈ ಸಂಬಂಧ ವೈದ್ಯರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಲ್ಲೆ ಖಂಡಿಸಿ ಇಂದು ಗಂಗಾವತಿಯ ಎಲ್ಲಾ ಖಾಸಗಿ ಆಸ್ಪತ್ರೆ ಮತ್ತು ಮೆಡಿಕಲ್ ಶಾಪ್ ಗಳನ್ನು ಬಂದ್ ಮಾಡಿ ಸಿಬ್ಬಂದಿ ಪ್ರತಿಭಟಿಸಲಿದ್ದಾರೆ.

  • ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಆಗ್ರಹಿಸಿ ಯಾದಗಿರಿ ಸಂಪೂರ್ಣ ಬಂದ್

    ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಆಗ್ರಹಿಸಿ ಯಾದಗಿರಿ ಸಂಪೂರ್ಣ ಬಂದ್

    ಯಾದಗಿರಿ: ಉದ್ದೇಶಿತ ಮೆಡಿಕಲ್ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಇಂದು ಯಾದಗಿರಿ ನಗರದಲ್ಲಿ ಸಂಪೂರ್ಣ ಬಂದ್ ಕರೆ ನೀಡಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಬಿಜೆಪಿ ಶಾಸಕ ವೆಂಕಟಗೌಡ ಮುದ್ನಾಳ್ ಕರೆ ನೀಡಿರುವ ಈ ಬಂದ್‍ಗೆ ಕನ್ನಡಪರ ಸಂಘಟನೆ ಸೇರಿದಂತೆ ಒಟ್ಟು 61 ಸಂಘಟನೆಗಳು ಬಂದ್ ಬೆಂಬಲ ನೀಡಿವೆ. ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ವರ್ತಕರು ಸಹ ಬಂದ್‍ಗೆ ಕೈ ಜೋಡಿಸಿದ್ದು, ನಗರದಲ್ಲಿ ವ್ಯಾಪಾರ- ವಹಿವಾಟು, ಆಟೋ ಮತ್ತು ಸರ್ಕಾರಿ ಬಸ್ ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

    ಜಿಲ್ಲಾ ಬಿಜೆಪಿ ಮತ್ತು ಬಂದ್‍ಗೆ ಬೆಂಬಲ ನೀಡಿರುವ ವಿವಿಧ ಸಂಘಟನೆಗಳಿಂದ, ನಗರದ ಮೈಲಾಪುರ ಬೇಸ್ನಿಂದ ನಗರ ಸಭೆವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದು, ಈ ಮೆರವಣಿಗೆಯಲ್ಲಿ ಸಾವಿರಾರು ಪ್ರತಿಭಟನಾಕಾರರು ಪಾಲ್ಗೊಂಡಿದ್ದಾರೆ.

    ಕಳೆದ ತಿಂಗಳು ಜಿಲ್ಲೆಯ ಚಂಡರಕಿ ಗ್ರಾಮದಲ್ಲಿ ವಾಸ್ತವ್ಯ ಮಾಡಿದ್ದ ಮುಖ್ಯಮಂತ್ರಿಗಳೂ ಈಗಾಗಲೇ ಜಿಲ್ಲೆಗೆ ಮಂಜೂರಾಗಿರುವ ಮೆಡಿಕಲ್ ಕಾಲೇಜು ರದ್ದುಪಡಿಸಿ, 300 ಬೆಡ್ ಆಸ್ಪತ್ರೆ ಘೋಷಣೆ ಮಾಡಿದ್ದರು. ಅಲ್ಲದೆ ಇಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಿದರೆ ಅದು ಜಿಲ್ಲೆಯ ಜನರಿಗಿಂತ ಹೊರಗಿನವರಿಗೆ ಅನುಕೂಲವಾಗತ್ತದೆ ಎಂಬ ಹೇಳಿಕೆ ಸಹ ನೀಡಿದ್ದರು.

    ಮುಖ್ಯಮಂತ್ರಿಗಳ ಈ ಹೇಳಿಕೆಯಿಂದ ಅಸಮಾಧಾನಗೊಂಡಿರುವ ಸ್ಥಳೀಯ ಬಿಜೆಪಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಮತ್ತು ವಿವಿಧ ಸಂಘಟನೆಗಳು ಇಂದು ಬಂದ್‍ಗೆ ಕರೆ ನೀಡಿವೆ.

  • ಬೆಂಗ್ಳೂರಿಗೆ ಶರಾವತಿ ನದಿ ನೀರು – ಶಿವಮೊಗ್ಗದಲ್ಲಿ ಬಂದ್

    ಬೆಂಗ್ಳೂರಿಗೆ ಶರಾವತಿ ನದಿ ನೀರು – ಶಿವಮೊಗ್ಗದಲ್ಲಿ ಬಂದ್

    ಶಿವಮೊಗ್ಗ: ಬೆಂಗಳೂರಿಗೆ ಲಿಂಗನಮಕ್ಕಿ ಅಣೆಕಟ್ಟಿನಿಂದ ಶರಾವತಿ ನದಿ ನೀರನ್ನು ಹರಿಸುವುದನ್ನು ಖಂಡಿಸಿ ಇಂದು ಶಿವಮೊಗ್ಗ ಜಿಲ್ಲೆಯಲ್ಲಿ ಬಂದ್ ಮಾಡಲಾಗುತ್ತಿದೆ.

    ಹಿರಿಯ ಸಾಹಿತಿ ನಾ.ಡಿಸೋಜಾ ನೇತೃತ್ವದಲ್ಲಿ ರಚನೆ ಆಗಿರುವ ಹೋರಾಟ ಸಮಿತಿ ಸ್ವಯಂ ಪ್ರೇರಿತರಾಗಿ ಬಂದ್ ಆಚರಿಸುವಂತೆ ಕರೆ ನೀಡಿತ್ತು. ಶರವಾತಿ ನದಿಗಾಗಿ ಕರೆ ನೀಡಲಾಗಿದ್ದ ಬಂದ್‍ಗೆ ಸಾಗರ, ಹೊಸನಗರ, ಸೊರಬ, ಶಿವಮೊಗ್ಗ, ತೀರ್ಥಹಳ್ಳಿ ತಾಲೂಕುಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಶಿಕಾರಿಪುರ ತಾಲೂಕುಗಳಲ್ಲಿ ಶಾಲೆಗಳಿಗೆ ರಜೆ ಫೋಷಣೆ ಮಾಡಲಾಗಿದೆ. ಇನ್ನೂ ಬಸ್ ಸಂಚಾರ ಸ್ಥಗಿತಗೊಂಡಿದೆ. ಈ ಬಗ್ಗೆ ಮಾಹಿತಿ ಇಲ್ಲದೆ, ಸಿಗಂದೂರಿಗೆ ಬರುವ ಭಕ್ತರಿಗೆ ಬಸ್ ಸಿಗದೆ ಸಮಸ್ಯೆ ಆಗಲಿದೆ. ಜೊತೆಗೆ ಹಲವಾರು ಸಂಘಟನೆಗಳ ಸದಸ್ಯರು ಗುಂಪು ಗುಂಪಾಗಿ ಶರಾವತಿ ನದಿ ನೀರನ್ನು ಬೆಂಗಳೂರಿಗೆ ಕೊಡಲ್ಲ ಎಂಬ ಫೋಷಣೆ ಕೂಗುತ್ತಾ ಮೆರವಣಿಗೆ ಮತ್ತು ಬೈಕ್ ರ‍್ಯಾಲಿ ಮಾಡುತ್ತಿದ್ದಾರೆ. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಸಂಘವೂ ಸೇರಿ 50ಕ್ಕೂ ಹೆಚ್ಚು ಸಂಘಟನೆಗಳು ಬಂದ್‍ಗೆ ಬೆಂಬಲಿಸಿವೆ.

    ಕಳೆದ ದಿನವೇ ಬಂದ್ ಹಿನ್ನೆಲೆಯಲ್ಲಿ ಹೋರಾಟದ ಕೇಂದ್ರ ಸಮಿತಿಯು ತಾಲೂಕು ಮಟ್ಟದಲ್ಲೂ ಸಭೆಗಳನ್ನು ನಡೆಸಿ, ಬಂದ್ ಯಶಸ್ವಿ ಮಾಡಲು ನಾನಾ ಸಂಘಟನೆಗಳಿಗೆ ಮನವಿ ಮಾಡಿತ್ತು. ಸಾಗರ ತಾಲೂಕಿನ ಪ್ರತೀ ಹಳ್ಳಿಯಲ್ಲೂ ಈ ಪ್ರಸ್ತಾವನೆಗೆ ವಿರೋಧ ವ್ಯಕ್ತವಾಗಿತ್ತು.

    ಅಷ್ಟೇ ಅಲ್ಲದೆ ನಾನಾ ಬಗೆಯಲ್ಲಿ ವಿರೋಧ ದಾಖಲಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿವೆ. ಈ ಹೋರಾಟದ ಅಂಗವಾಗಿ ಹೊಸನಗರದ ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ ನೇತೃತ್ವದಲ್ಲಿ 300ಕ್ಕೂ ಹೆಚ್ಚು ಯುವಕರು ಬೈಕ್ ಜಾಥಾ ಮೂಲಕ ಹೊಸನಗರದಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ತಲುಪಿ ಯೋಜನೆ ವಿರೋಧಿಸಿ ಮನವಿ ಕೊಟ್ಟಿದ್ದಾರೆ.

  • 30 ವರ್ಷದಲ್ಲಿ ಫಸ್ಟ್ ಟೈಂ – ಗೃಹಮಂತ್ರಿ ಭೇಟಿ ವೇಳೆ ಬಂದ್ ಆಗದ ಕಾಶ್ಮೀರ

    30 ವರ್ಷದಲ್ಲಿ ಫಸ್ಟ್ ಟೈಂ – ಗೃಹಮಂತ್ರಿ ಭೇಟಿ ವೇಳೆ ಬಂದ್ ಆಗದ ಕಾಶ್ಮೀರ

    ಶ್ರೀನಗರ: 30 ವರ್ಷದ ಇತಿಹಾಸದಲ್ಲಿ ಪ್ರತಿ ಬಾರಿಯೂ ಗೃಹ ಸಚಿವರು ಕಾಶ್ಮೀರಕ್ಕೆ ಭೇಟಿ ನೀಡಿದಾಗ ಪ್ರತಿಭಟನೆ ಬಂದ್ ನಡೆಯುವುದು ಸಾಮಾನ್ಯವಾಗಿತ್ತು. ಆದರೆ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಎರಡು ದಿನದ ಪ್ರವಾಸಕ್ಕೆಂದು ಬುಧವಾರ ಕಾಶ್ಮೀರಕ್ಕೆ ಭೇಟಿ ನೀಡಿದ್ದು ,ಯಾವುದೇ ರೀತಿಯ ಬಂದ್ ಅಹಿತಕರ ಘಟನೆ ನಡೆದಿಲ್ಲ.

    ಕೇಂದ್ರ ಗೃಹ ಸಚಿವರಾದ ಮೇಲೆ ಮೊದಲ ಬಾರಿಗೆ ಅಮಿತ್ ಶಾ ಕಣಿವೆ ರಾಜ್ಯಕ್ಕೆ ಭೇಟಿ ನೀಡಿದ್ದು ಭದ್ರತಾ ಪರಿಸ್ಥಿತಿಯ ಪರಿಶೀಲನೆ ನಡೆಸಿದರು. ಇದೇ ವೇಳೆ ಕಾಶ್ಮೀರದಲ್ಲಿ ಭದ್ರತೆ ಮತ್ತು ಅಭಿವೃದ್ಧಿಯ ವಿಚಾರವಾಗಿ ಹಲವಾರು ಸಭೆಗಳಲ್ಲಿ ಭಾಗವಹಿಸಿದರು.

    ಈ ಎರಡು ದಿನಗಳಲ್ಲಿ ಕಾಶ್ಮೀರ ರಾಜ್ಯದ ಬಿಜೆಪಿ ಮುಖಂಡರು, ನಾಗರಿಕ ಸಮಾಜದ ಪ್ರತಿನಿಧಿಗಳು ಪಂಚಾಯತ್ ಸದಸ್ಯರಗಳನ್ನು ಅಮಿತ್ ಶಾ ಭೇಟಿ ಮಾಡಿದ್ದಾರೆ. ಇದರ ಜೊತೆಗೆ ಉನ್ನತ ಮಟ್ಟದ ಭದ್ರತಾ ಸಭೆ ನಡೆಸಿ ಅ ಸಭೆಯಲ್ಲಿ ಉಗ್ರರು ಮತ್ತು ಗಲಭೆಕೋರರ ವಿರುದ್ಧ ಕಠಿಣ ವಿಧಾನವನ್ನು ಮುಂದುವರಿಸಲು ಸೂಚಿಸಿದ್ದಾರೆ. ಅಷ್ಟೇ ಅಲ್ಲದೇ ಅಮರನಾಥ ತೀರ್ಥಯಾತ್ರೆಯ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಲು ಸೂಚಿಸಿದ್ದಾರೆ.

    ಅಮಿತ್ ಶಾ ಅವರ ಈ ಕಾಶ್ಮೀರ ಭೇಟಿಯಲ್ಲಿ ಇನ್ನೊಂದು ವಿಶೇಷತೆ ಎಂದರೆ, ರಾಜ್ಯಕ್ಕೆ ಪ್ರಧಾನಿ ಭೇಟಿ ನೀಡಿದರೆ ಮಾತ್ರ ರಾಜ್ಯಪಾಲರು ಹೋಗಿ ಅವರನ್ನು ಬರ ಮಾಡಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಈ ಶಿಷ್ಟಾಚರವನ್ನು ಮುರಿದು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಎರಡು ದಿನಗಳ ರಾಜ್ಯ ಭೇಟಿಗೆ ಆಗಮಿಸಿದ ಗೃಹ ಸಚಿವರನ್ನು ಬರ ಮಾಡಿಕೊಂಡಿದ್ದರು.

    ಎಲ್ಲ ರೀತಿಯ ಶಿಷ್ಟಾಚಾರಗಳನ್ನು ಬದಿಗೊತ್ತಿದ ರಾಜ್ಯಪಾಲ ಸತ್ಯಪಾಲ್ ಮಲಿಕ್ ತಮ್ಮ ರಾಜಕೀಯ ಸಲಹೆಗಾರ ಮತ್ತು ಹಿರಿಯ ಅಧಿಕಾರಿಗಳ ಜತೆಗೆ ವಿಮಾನ ನಿಲ್ದಾಣಕ್ಕೆ ಹೋಗಿ ಅಮಿತ್ ಶಾ ಅವರನ್ನು ಬರ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೇ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಅಮಿತ್ ಶಾ ಉನ್ನತ ಮಟ್ಟದ ಸಭೆ ಸಹ ನಡೆಸಿದ್ದಾರೆ.

  • ನಾಳೆ ರಾಷ್ಟ್ರೀಯ ಹೆದ್ದಾರಿ ಬಂದ್

    ನಾಳೆ ರಾಷ್ಟ್ರೀಯ ಹೆದ್ದಾರಿ ಬಂದ್

    ಬೆಂಗಳೂರು: ಸೋಮವಾರ ರೋಡ್‍ಗಿಳಿಯುವ ಮುನ್ನ ಜೋಪಾನ. ಯಾಕೆಂದರೆ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ರಾಷ್ಟ್ರೀಯ ಹೆದ್ದಾರಿ ನಾಳೆ(ಸೋಮವಾರ) ಬಂದ್ ಆಗಲಿದೆ.

    ಹೌದು. ರಾಷ್ಟ್ರೀಯ ಹೆದ್ದಾರಿಯನ್ನು ರೈತರು ಒಂದು ದಿನ ಬಂದ್ ಮಾಡಲಿದ್ದಾರೆ. ಭೂಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ಸೇರಿದಂತೆ ನಾನಾ ಬೇಡಿಕೆ ಮುಂದಿಟ್ಟು ರೈತರು ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಬೀದಿಗಿಳಿಯಲಿದ್ದಾರೆ.

    ಸೋಮವಾರ ರೈತರು ಬಂದ್ ಮಾಡಲಿರುವ ರಾಷ್ಟ್ರೀಯ ಹೆದ್ದಾರಿಗಳು:
    1. ಬೊಮ್ಮಸಂದ್ರ ಹೆದ್ದಾರಿ
    2. ದೇವನಹಳ್ಳಿ ಟೋಲ್ ಎಂಟ್ರೆನ್ಸ್
    3. ಚಿಕ್ಕಬಳ್ಳಾಪುರ ಟೋಲ್ ಎಂಟ್ರೆನ್ಸ್
    4. ತುಮಕೂರು
    5. ಕೋಲಾರ
    6. ಚಿತ್ರದುರ್ಗ
    7. ಅನೇಕಲ್
    8. ಹಾವೇರಿ

    ಕಾರಣವೇನು:
    ಸರ್ಕಾರ 2013 ರಲ್ಲಿ ಭೂ ಸ್ವಾಧೀನ ಕಾಯ್ದೆ ಜಾರಿಗೆ ತಂದಿತ್ತು. ಈ ಕಾಯ್ದೆ ಪ್ರಕಾರ ರೈತರ ಜಮೀನು ಪಡೆಯುವಾಗ ಅವರ ಅನುಮತಿ ಪಡೆದು ಭೂಸ್ವಾಧೀನ ಮಾಡಬೇಕು. ಅವರಿಗೆ ನೀಡಿದ ಹಣ ತೃಪ್ತಿಕರವಾಗಿರಬೇಕು. ಒಂದು ವೇಳೆ ಆಗದೆ ಇದ್ದರೆ ನ್ಯಾಯಲಯದ ಮೊರೆ ಹೋಗಬಹುದಾಗಿತ್ತು. ಈಗ ಈ ಕಾಯ್ದೆಯನ್ನು ಸರ್ಕಾರ ಬದಲಾಯಿಸಿದೆ. ಸಾಲ ಮನ್ನಾದ ಬಗ್ಗೆ ಸ್ಪಷ್ಟ ಚಿತ್ರಣವಿಲ್ಲ, ಬರಗಾಲದ ಸಮಸ್ಯೆ ನೀಗಿಸುವಲ್ಲಿ ಕೂಡ ಸರ್ಕಾರ ಎಡವುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸೋಮವಾರ ಬೆಳಗ್ಗೆ 9 ಗಂಟೆಯಿಂದ ಪ್ರತಿಭಟನೆ ಶುರು ಆಗಲಿದ್ದು, ಇಡೀ ದಿನ ಮಾಡುತ್ತೇವೆ ಎಂದು ರೈತರು ಹೇಳುತ್ತಿದ್ದಾರೆ. ಆದರೆ ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತದೆ ಎಂದು ಇದಕ್ಕೆ ಪೊಲೀಸರು ಅವಕಾಶ ಮಾಡಿಕೊಡುವ ಸಾಧ್ಯತೆ ಕಡಿಮೆ ಇದೆ.