Tag: ಬಂದೋಬಸ್ತ್

  • ಬೆಂಗಳೂರಿನಲ್ಲಿ ಟ್ರ್ಯಾಕ್ಟರ್‌  ರ‍್ಯಾಲಿ ಪ್ರತಿಭಟನೆಗೆ ಅವಕಾಶವಿಲ್ಲ – ಕಮಲ್‌ ಪಂಥ್‌

    ಬೆಂಗಳೂರಿನಲ್ಲಿ ಟ್ರ್ಯಾಕ್ಟರ್‌ ರ‍್ಯಾಲಿ ಪ್ರತಿಭಟನೆಗೆ ಅವಕಾಶವಿಲ್ಲ – ಕಮಲ್‌ ಪಂಥ್‌

    ಬೆಂಗಳೂರು: ನಾಳಿನ ಟ್ರ್ಯಾಕ್ಟರ್‌ ರ‍್ಯಾಲಿ ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂಥ್‌ ಹೇಳಿದ್ದಾರೆ.

    ವಿವಿಧ ರೈತ ಸಂಘಟನೆಗಳು ಕೇಂದ್ರದ ಕೃಷಿ ಕಾಯ್ದೆಯನ್ನು ವಿರೋಧಿ ನಗರದಲ್ಲಿ ಟ್ರ್ಯಾಕ್ಟರ್‌ ರ‍್ಯಾಲಿ ನಡೆಸಲು ಕರೆ ನೀಡಿದ್ದರು. ಈ ಸಂಬಂಧ ಇಂದು ಸಭೆ ನಡೆಸಿದ ಕಮಲ್‌ ಪಂಥ್‌ ನಾಳಿನ ಟ್ರ್ಯಾಕ್ಟರ್‌ ರ‍್ಯಾಲಿಗೆ ಅನುಮತಿ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

    ನಾಳೆ ಗಣರಾಜ್ಯೋತ್ಸವಕ್ಕೆ ಪರಿಸ್ಥಿತಿ ನೋಡಿಕೊಂಡು ಬಂದೋಬಸ್ತ್ ಮಾಡಲಾಗುತ್ತದೆ. ಇಂದು‌ ಸಂಜೆಯಿಂದಲೇ ಬಂದೋಬಸ್ತ್ ವ್ಯವಸ್ಥೆ ಆಗಲಿದೆ. ನಗರದಲ್ಲಿ ಶಾಂತಿಯುತ ಪ್ರತಿಭಟನೆಗೆ ಮಾತ್ರ ಅವಕಾಶ.  ಟ್ರ್ಯಾಕ್ಟರ್ ಮೂಲಕ ಪ್ರತಿಭಟನೆಗೆ ಬಂದರೆ ಅವರನ್ನು ನಗರದ ಒಳಗೆ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

    ಸಾಂಕೇತಿಕವಾಗಿಯೂ ಟ್ರ್ಯಾಕ್ಟರ್‌ನಲ್ಲಿ ಪ್ರತಿಭಟನೆಗೆ ಅವಕಾಶವಿಲ್ಲ. ಹಿಂದೆ ಎಂದೂ ಟ್ರ್ಯಾಕ್ಟರ್ ಮೂಲಕ ನಗರದಲ್ಲಿ ಪ್ರತಿಭಟನೆ‌ ಆಗಿಲ್ಲ. ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲು ಕೆಲವರು ಅರ್ಜಿ ನೀಡಿದ್ದಾರೆ. ಆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

  • ಸಿಎಎ ವಿರೋಧಿಸಿ ಪ್ರತಿಭಟಿಸುವ ಮಾಹಿತಿ: ಮಂಗ್ಳೂರಿನಲ್ಲಿ ಭಾರೀ ಬಂದೋಬಸ್ತ್

    ಸಿಎಎ ವಿರೋಧಿಸಿ ಪ್ರತಿಭಟಿಸುವ ಮಾಹಿತಿ: ಮಂಗ್ಳೂರಿನಲ್ಲಿ ಭಾರೀ ಬಂದೋಬಸ್ತ್

    ಮಂಗಳೂರು: ಪೌರತ್ವ ತಿದ್ದುಪಡೆ ಕಾಯ್ದೆ ವಿರೋಧಿಸಿ ಮುಸ್ಲಿಂ ಸಂಘಟನೆಗಳು ಅನುಮತಿಯಿಲ್ಲದೆ ಇಂದು ಪ್ರತಿಭಟನೆ ನಡೆಸುವ ಮುನ್ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ಭಾರೀ ಬಂದೋಬಸ್ತ್ ನಡೆಸಿದ್ದರು.

    ನಗರದ ನೆಹರೂ ಮೈದಾನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನಡೆಸಲಾಗಿತ್ತು. ನಾಲ್ಕು ರ‍್ಯಾಪಿಡ್ ಆ್ಯಕ್ಷನ್ ಪೋರ್ಸ್(ಆರ್‌ಎಎಫ್) ಸೇರಿ 800ಕ್ಕೂ ಅಧಿಕ ಕೆ.ಎಸ್.ಆರ್.ಪಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಆಯುಕ್ತರ ಕಚೇರಿ ಮತ್ತು ಜಿಲ್ಲಾಧಿಕಾರಿ ಕಚೇರಿಗೆ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ನಗರದ ಆಯಕಟ್ಟಿನ ಜಾಗದಲ್ಲಿ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.

    ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರು ಡಿಸೆಂಬರ್ 19ರಂದು 144 ಸೆಕ್ಷನ್ ಹೊರತಾಗಿಯೂ ಪ್ರತಿಭಟನೆ ನಡೆಸಿದ್ದು ಹಿಂಸಾಚಾರಕ್ಕೆ ಕಾರಣವಾಗಿತ್ತು. ಇದೀಗ ಸಿಎಎ ವಿರೋಧಿಸಿ ಮತ್ತೆ ಪ್ರತಿಭಟನೆಗೆ ಇಂದು ಸಿದ್ಧತೆ ನಡೆಸಲಾಗಿತ್ತು. ಆದರೆ ಪೊಲೀಸ್ ಆಯುಕ್ತರು ತುರ್ತು ಸಂದರ್ಭದಲ್ಲಿ ಸಾರ್ವಜನಿಕ ಸೇವೆಗಳಿಗೆ ಸೇರಿದಂತೆ ಸಾರ್ವಜನಿಕರಿಗೆ ತೊಂದರೆಯಾಗುತ್ತೆ ಎಂದು ಮೂರು ಕಾರಣಗಳನ್ನು ನೀಡಿ ಅನುಮತಿ ನಿರಾಕರಿಸಿದ್ದರು. ಇದು ಮುಸ್ಲಿಂ ಸಂಘಟನೆಗಳ ಸಿಟ್ಟಿಗೆ ಕಾರಣವಾಗಿತ್ತು. ಹೀಗಾಗಿ ಪೊಲೀಸರು ಫುಲ್ ಎಲರ್ಟ್ ಆಗಿದ್ದರು.

    ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಮಂಗಳೂರಿಗೆ ಆಗಮಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಸೇರಿದಂತೆ ಅಧಿಕಾರಿಗಳ ಜೊತೆ ಸಭೆಯನ್ನು ನಡೆಸಿದ್ದರು. ಬಳಿಕ ಮಾತನಾಡಿ ಡಾ.ಪಿ.ಎಸ್.ಹರ್ಷ ಅವರು, ಮಂಗಳೂರು ಸಂಪೂರ್ಣ ಶಾಂತಿಯುತ ಆಗಿದೆ. ಕೆಲವು ಸಂಘಟನೆಗಳು ಪ್ರತಿಭಟನೆಗೆ ಅನುಮತಿ ಕೇಳಿದ್ದವು. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಅನುಮತಿ ಕೊಟ್ಟಿಲ್ಲ. ಈಗಾಗಲೇ ಮಂಗಳೂರು ನಗರ ಹೊರತುಪಡಿಸಿ ಉಳಿದೆಡೆ ಪ್ರತಿಭಟನೆಗೆ ಅವಕಾಶ ನೀಡಲಾಗಿದೆ. ಇದೇ 12ರಂದು ಸಿಎಎ ಪರ ಸಮಾವೇಶವನ್ನು ನಡೆಸುವುದಾಗಿ ಬಿಜೆಪಿ ಹೇಳಿತ್ತು. ಸದ್ಯ ಆ ಸಮಾವೇಶವನ್ನು ಸಂಘಟಕರು ಮುಂದೂಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

  • ನಾಳೆಯ ಟಿಪ್ಪು ಜಯಂತಿಗೆ ಇಂದಿನಿಂದ್ಲೇ ನಿಷೇಧಾಜ್ಞೆ – ಮಡಿಕೇರಿಯಲ್ಲಿ ಎಲ್ಲಿ ನೋಡಿದ್ರೂ ಪೊಲೀಸರು

    ನಾಳೆಯ ಟಿಪ್ಪು ಜಯಂತಿಗೆ ಇಂದಿನಿಂದ್ಲೇ ನಿಷೇಧಾಜ್ಞೆ – ಮಡಿಕೇರಿಯಲ್ಲಿ ಎಲ್ಲಿ ನೋಡಿದ್ರೂ ಪೊಲೀಸರು

    ಮಡಿಕೇರಿ: ನ10 ಕೊಡಗಿನ ಪಾಲಿನ ಸವಾಲಿನ ದಿನವಾಗಲಿದೆ. ಒಂದೆಡೆ ನ.10ರ ಟಿಪ್ಪು ಜಯಂತಿ ವಿರೋಧಿಸಿ ಕೊಡಗು ಬಂದ್ ಹಾಗೂ ಕುಟ್ಟಪ್ಪ ಹುತಾತ್ಮ ದಿನವನ್ನು ಹಮ್ಮಿಕೊಂಡಿರುವುದಾಗಿ ಟಿಪ್ಪು ಜಯಂತಿ ಆಚರಣಾ ವಿರೋಧಿ ಸಮಿತಿ ಘೋಷಿಸಿದ್ದರೆ, ಇತ್ತ ಜಿಲ್ಲೆಯಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿರುವ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

    ಎಂತಹ ಪರಿಸ್ಥಿತಿ ಬಂದರೂ ಎದುರಿಸಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಜ್ಜಾಗಿದ್ದು, ಹೆಚ್ಚಿನ ಪೊಲೀಸ್ ಫೋರ್ಸ್ ಮೂಲಕ ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಜಿಲ್ಲಾಡಳಿತ ಮುಂದಾಗಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆಯಿಂದ ಜಿಲ್ಲೆಯ 10 ಗಡಿ ಚೆಕ್ ಪೋಸ್ಟ್ ಗಳಲ್ಲಿ ತಲಾ 4 ಸಿಸಿ ಕ್ಯಾಮೆರಾ ಅಳವಡಿಸಿ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ.

    ಜಿಲ್ಲೆಯ ಒಳಭಾಗದ 31 ಕಡೆಗಳಲ್ಲಿ ನಾಕಾಬಂಧಿ ಹಾಕಿ ವಾಹನ ತಪಾಸಣೆ, ವಾಹನ ನೋಂದಣಿ ಹಾಗೂ ಚಾಲಕರ ಮಾಹಿತಿ ಕಲೆಹಾಕಲಾಗುತ್ತಿದೆ. ಜಿಲ್ಲೆಯಲ್ಲಿ ಸಂಚರಿಸುವ ವಾಹನಗಳ ಮೇಲೆ ನಿಗಾ ಇಡಲಾಗಿದೆ. ಜಿಲ್ಲೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 8 ಡಿವೈಎಸ್‍ಪಿ, 23 ಪೊಲೀಸ್ ಇನ್ಸ್ ಪೆಕ್ಟರ್, 68 ಸಬ್ ಇನ್ಸ್ ಪೆಕ್ಟರ್, 113 ಎಎಸ್‍ಐ, 1500 ಹೆಚ್‍ಸಿ/ಪಿಸಿ, 27 ಡಿಎಆರ್ ತುಕಡಿಗಳು, 15 ಕೆಎಸ್‍ಆರ್‍ಪಿ ತುಕಡಿಗಳು ಹಾಗೂ ಕ್ಷಿಪ್ರ ಕಾರ್ಯಚರಣೆ ಪಡೆಯನ್ನ ನಿಯೋಜಿಸಲಾಗಿದೆ.

    ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿ ವಿವಾದ ಕಾವೇರತೊಡಗುತ್ತಿರುವಂತೆಯೇ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ನವೆಂಬರ್ 9 ರಂದು ಬೆಳಗ್ಗೆ 6 ಗಂಟೆಯಿಂದ ನವೆಂಬರ್ 11 ರ ಬೆಳಿಗ್ಗೆ 6 ಗಂಟೆಯವರೆಗೆ ಸೆಕ್ಷನ್ 144 ರಡಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಅದೇಶಿಸಿದೆ. ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಪರ-ವಿರೋಧ ಹೇಳಿಕೆ ಮತ್ತು ಪ್ರತಿಭಟನೆಗಳು ನಿರಂತರವಾಗಿ ನಡೆಯುತ್ತಿರುವುದರಿಂದ ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ಅದೇಶವನ್ನು ಜಾರಿಗೊಳಿಸಿದ್ದಾರೆ. ಸರ್ಕಾರಿ ಕಾರ್ಯಕ್ರಮ, ಮದುವೆ ಸಮಾರಂಭಗಳು ಹಾಗೂ ಕುಶಾಲನಗರದ ಗೂಂಡುರಾವ್ ಬಡಾವಣೆಯಲ್ಲಿ ನಡೆಯುವ ಜಾತ್ರೆಯನ್ನು ಹೊರತುಪಡಿಸಿದಂತೆ ಜಿಲ್ಲೆಯ ಮೂರು ತಾಲೂಕುಗಳಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.

    ಟಿಪ್ಪು ಜಯಂತಿ ಹಿನ್ನಲೆ ಕೊಡಗು ಜಿಲ್ಲೆಯ ಇತಿಹಾಸದಲ್ಲಿ ಹಿಂದೆಂದೂ ಕಂಡರಿಯದಷ್ಟ್ಟು ಖಾಕಿ ಕಣ್ಗಾವಲಿನ ವ್ಯವಸ್ಥೆ ಮಾಡಲಾಗಿದ್ದು, ಬಂದೋಬಸ್ತಿನ ಉಸ್ತುವಾರಿಯನ್ನು ಐಜಿಪಿ ದರ್ಜೆಯ ಅಧಿಕಾರಿ ನೋಡಿಕೊಳ್ಳಲಿದ್ದಾರೆ. ಜಿಲ್ಲೆಯಲ್ಲಿ ಎಂತಹ ಪರಿಸ್ಥಿತಿ ಎದುರಾದರೂ ಅದನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡಿದೆ. ಒಟ್ಟಾರೆ ಜಿಲ್ಲೆಯಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿರುವ ಜಿಲ್ಲಾಡಳಿತ, ಕಾನೂನು ಸುವ್ಯವಸ್ಥೆ ಕಾಪಾಡಲು ಟೊಂಕ ಕಟ್ಟಿ ನಿಂತಿದೆ.