Tag: ಬಂಡೆಪ್ಪ ಕಾಶಂಪೂರ್

  • ರೈತರಿಗೆ ನೋಟಿಸ್ – ಬ್ಯಾಂಕ್ ಅಧಿಕಾರಿಗಳಿಗೆ ಬಂಡೆಪ್ಪ ಕಾಶೆಂಪೂರ್ ಕ್ಲಾಸ್

    ರೈತರಿಗೆ ನೋಟಿಸ್ – ಬ್ಯಾಂಕ್ ಅಧಿಕಾರಿಗಳಿಗೆ ಬಂಡೆಪ್ಪ ಕಾಶೆಂಪೂರ್ ಕ್ಲಾಸ್

    ಬೆಂಗಳೂರು: ರೈತರಿಗೆ ನೋಟಿಸ್ ಕೊಟ್ಟಿದ್ದಕ್ಕೆ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ಬ್ಯಾಂಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಬಂಡೆಪ್ಪ ಕಾಶೆಂಪೂರ್ ಅವರು ಬ್ಯಾಂಕ್ ಅಧಿಕಾರಿಗೆ ಫೋನ್ ಮಾಡಿ ಗರಂ ಆಗಿದ್ದಾರೆ. ರೈತರಿಗೆ ನೋಟಿಸ್ ಕೊಡಬಾರದು ಎಂದು ಸರ್ಕಾರ ಸೂಚನೆ ನೀಡಿದೆ. ಅಲ್ಲದೆ ಈ ಬಗ್ಗೆ ಸಿಎಂ ಕೂಡ ಎಚ್ಚರಿಕೆ ಕೊಟ್ಟಿದ್ದಾರೆ. ಹೀಗಿದ್ದರೂ ಸಹ ರೈತರಿಗೆ ನೋಟಿಸ್ ಕೊಡ್ತೀರಾ ಎಂದು ಸಚಿವರು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಬೆಳಗಾವಿ ಜಿಲ್ಲೆ ಚಿಕ್ಕೊಡಿ ತಾಲೂಕಿನ ನವಲಿಹಾಳ ಗ್ರಾಮದ ಸಹಕಾರ ಬ್ಯಾಂಕ್ ನಿಂದ ರೈತರಿಗೆ ನೋಟಿಸ್ ನೀಡಲಾಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆಯೇ ಸಚಿವ ಬಂಡೆಪ್ಪ ಕಾಶೆಂಪೂರ್ ಅವರು ಡಿಸಿಸಿ ಬ್ಯಾಂಕ್ ಅಧಿಕಾರಿಗಳ ಜೊತೆ ಮಾತನಾಡಿದ್ದು, ಇನ್ನು ಮುಂದೆ ಯಾವುದೇ ಕಾರಣಕ್ಕೂ ರೈತರಿಗೆ ನೋಟಿಸ್ ನೀಡಬಾರದು ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಅಲ್ಲದೆ ನೋಟಿಸ್ ಕೊಟ್ಟರೆ ಬ್ಯಾಂಕ್ ಅಧಿಕಾರಿಗಳ ವಿರುದ್ಧವೇ ಕ್ರಮ ತೆಗೆದುಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

  • ಆಪರೇಷನ್ ಕಮಲಕ್ಕೆ ಜೆಡಿಎಸ್ ಪ್ರತಿತಂತ್ರ- ಸಿಎಂ ಸಂಪರ್ಕದಲ್ಲಿದ್ದಾರೆ ನಾಲ್ಕು ಜನ ಬಿಜೆಪಿ ಶಾಸಕರು!

    ಆಪರೇಷನ್ ಕಮಲಕ್ಕೆ ಜೆಡಿಎಸ್ ಪ್ರತಿತಂತ್ರ- ಸಿಎಂ ಸಂಪರ್ಕದಲ್ಲಿದ್ದಾರೆ ನಾಲ್ಕು ಜನ ಬಿಜೆಪಿ ಶಾಸಕರು!

    ಮಂಡ್ಯ: ಆಪರೇಷನ್ ಕಮಲಕ್ಕೆ ಜೆಡಿಎಸ್ ಪ್ರತಿತಂತ್ರ ರೂಪಿಸಿದ್ದು, ಬಿಜೆಪಿಯ ನಾಲ್ಕು ಜನ ಶಾಸಕರನ್ನು ಪಕ್ಷಕ್ಕೆ ಸ್ವಾಗತಿಸಲು ಮುಂದಾಗಿದೆ ಎಂದು ಜೆಡಿಎಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್, ಹಾಸನ ಶಾಸಕ ಪ್ರೀತಮ್ ಗೌಡ, ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಹಾಗೂ ಹಿರಿಯೂರು ಶಾಸಕಿ ಪೂರ್ಣಿಮಾ ಕೃಷ್ಣಪ್ಪ ಅವರನ್ನು ಜೆಡಿಎಸ್‍ಗೆ ಕರೆತರುವ ಜವಾಬ್ದಾರಿಯನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಮತ್ತು ಸಹಕಾರಿ ಸಚಿವ ಬಂಡೆಪ್ಪ ಕಾಶಂಪೂರ್ ಅವರಿಗೆ ಒಪ್ಪಿಸಲಾಗಿದೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

    ಪಾಂಡವಪುರದ ಕೆಡಿಪಿ ಸಭೆ ಮುಗಿಯುತ್ತಿದ್ದಂತೆ ಸಚಿವ ಪುಟ್ಟರಾಜು ಅವರಿಗೆ ಬೆಂಗಳೂರಿಗೆ ಬರುವಂತೆ ಸಿಎಂ ಕುಮಾರಸ್ವಾಮಿ ತುರ್ತು ಬುಲಾವ್ ನೀಡಿದ್ದು, ಸಿಎಂ ಸೂಚನೆಯಂತೆ ಪುಟ್ಟರಾಜು ಅವರು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.

    ಪುಟ್ಟರಾಜು ಅವರ ಜೊತೆಗೆ ಬಂಡೆಪ್ಪ ಕಾಶಂಪೂರ್ ಅವರಿಗೂ ಜವಾಬ್ದಾರಿ ನೀಡಲಾಗಿದ್ದು, ಏನು ಮಾಡುತ್ತಿರೋ ಗೊತ್ತಿಲ್ಲ. ಬಿಜೆಪಿ ಶಾಸಕರನ್ನು ಮನವೊಲಿಸಿ, ಪಕ್ಷಕ್ಕೆ ಕರೆತರಬೇಕು ಎಂದು ಸಿಎಂ ಕುಮಾರಸ್ವಾಮಿ ಸೂಚಿಸಿದ್ದಾರೆ ಎನ್ನುವ ವಿಚಾರವನ್ನು ಮೂಲಗಳು ತಿಳಿಸಿವೆ.

    ಇತ್ತ ಬಿಜೆಪಿ ಹೈಕಮಾಂಡ್ ರಾಜ್ಯದ ಎಲ್ಲ ಶಾಸಕರನ್ನು ದೆಹಲಿಗೆ ಕರೆಸಿಕೊಂಡಿದೆ. ಜೊತೆಗೆ ಕಾಂಗ್ರೆಸ್‍ನ ಅತೃಪ್ತ ಶಾಸಕರೊಂದಿಗೆ ಬಿಜೆಪಿ ನಾಯಕರು ಮಾತುಕತೆ ನಡೆಸಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಸರ್ಕಾರ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಇದರಿಂದಾಗಿ ಎಚ್ಚೆತ್ತುಕೊಂಡ ಸಿಎಂ ತಮ್ಮ ಸಚಿವರ ಮೂಲಕ ಬಿಜೆಪಿ ಶಾಸಕರನ್ನು ಸಂಪರ್ಕಕ್ಕೆ ತೆಗೆದುಕೊಂಡು, ಅವರಿಂದ ರಾಜೀನಾಮೆ ಕೊಡಿಸುವ ಪ್ಲಾನ್ ರೂಪಿಸಿದ್ದಾರೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv