Tag: ಬಂಡೆ

  • ವಿಜಯಪುರದಲ್ಲಿ ಬಂಡೆಗೆ ತಲೆ ಜಜ್ಜುವ ವಿಶಿಷ್ಟ ಆಚರಣೆ

    ವಿಜಯಪುರದಲ್ಲಿ ಬಂಡೆಗೆ ತಲೆ ಜಜ್ಜುವ ವಿಶಿಷ್ಟ ಆಚರಣೆ

    ವಿಜಯಪುರ: ಬಂಡೆಗೆ (Rock) ತಲೆ ಜಜ್ಜುವ ವಿಶಿಷ್ಟ ಆಚರಣೆಯೊಂದು ವಿಜಯಪುರ (Vijayapura) ಜಿಲ್ಲೆಯಲ್ಲಿ ನಡೆಯುತ್ತದೆ. ಇಲ್ಲಿ ಭಕ್ತರು ಓಡೋಡಿ ಬಂದು ಕಲ್ಲಿಗೆ ಜೋರಾಗಿ ತಲೆ ಜಜ್ಜಿ ದೇವರಿಗೆ ನಮಸ್ಕಾರ ಮಾಡತ್ತಾರೆ. ಈ ವಿಚಿತ್ರ ಜಾತ್ರೆ ವಿಜಯಪುರ ಜಿಲ್ಲೆಯ ನಿಡಗುಂದಿ (Nidgundi) ತಾಲೂಕಿನ ಗಣಿ ಗ್ರಾಮದಲ್ಲಿ ನಡೆಯುತ್ತದೆ.

    ಗಣಿ ಗ್ರಾಮದ ಸೋಮೇಶ್ವರ ದೇವರ ಜಾತ್ರೆ (Fair) ವೇಳೆ ಈ ರೀತಿಯ ವಿಶಿಷ್ಟ ಆಚರಣೆ ನಡೆಯುತ್ತದೆ. ಭಕ್ತರು ಒಟ್ಟು ಮೂರು ಸಲ ಬಂಡೆಗೆ ತಲೆಯನ್ನು ಜಜ್ಜಿ ನಮಸ್ಕಾರ ಮಾಡುವ ಪದ್ಧತಿ ಇಲ್ಲಿದೆ. ನೂರಾರು ಭಕ್ತರಿಂದ ನಡೆಯುವ ಈ ವಿಶಿಷ್ಟ ಆಚರಣೆ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ವಿಶೇಷ ಎಂದರೆ ಕಲ್ಲಿಗೆ ಎಷ್ಟೇ ಜೋರಾಗಿ ತಲೆ ಜಜ್ಜಿಕೊಂಡರೂ ಯಾರಿಗೂ ಇದುವರೆಗೂ ಒಂದು ಸಣ್ಣಪುಟ್ಟ ಗಾಯ ಕೂಡ ಆಗಿಲ್ಲ. ಇದನ್ನೂ ಓದಿ: ಹಿಂದೂಗಳು ಹಲಾಲ್ ಮಾಂಸ ಸೇವನೆ ಬಿಡಿ, ಝಟ್ಕಾಗೆ ಆದ್ಯತೆ ನೀಡಿ: ಕೇಂದ್ರ ಸಚಿವ

    ಸೋಮೇಶ್ವರ ದೇವರ ಶಕ್ತಿಯಿಂದ ಯಾವುದೇ ಅಪಾಯ ಆಗುವುದಿಲ್ಲ ಎಂಬುದು ಇಲ್ಲಿನ ಭಕ್ತರ ನಂಬಿಕೆಯಾಗಿದೆ. ಪ್ರತಿ ವರ್ಷ ಕಾರ್ತಿಕ ಮಾಸದ ಬಳಿಕ ಈ ವಿಶಿಷ್ಟ ಆಚರಣೆಯ ಜಾತ್ರೆ ನಡೆಯುತ್ತದೆ. ಇದನ್ನೂ ಓದಿ: ತಮಿಳುನಾಡು, ಕೇರಳ ಮೇಲ್ಮೈ ಸುಳಿಗಾಳಿ ಎಫೆಕ್ಟ್- ಬೆಂಗಳೂರು ಇನ್ನೂ 2 ದಿನ ಕೂಲ್ ಕೂಲ್

  • ಸಂಬಂಧಿಕರ ಮನೆಗೆ ಬಂದಿದ್ದ ನೂತನ ವಧು-ವರ ದುರ್ಮರಣ!

    ಸಂಬಂಧಿಕರ ಮನೆಗೆ ಬಂದಿದ್ದ ನೂತನ ವಧು-ವರ ದುರ್ಮರಣ!

    ತಿರುವನಂತಪುರಂ: ಸಂಬಂಧಿಕರ ಮನೆಗೆ ಫೋಟೋಶೂಟ್ (Photoshoot) ವೇಳೆ ನೂತನ ವಧು-ವರ (Bride- Groom) ಸೇರಿ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕೇರಳದಲ್ಲಿ ನಡೆದಿದೆ.

    ತಿರುವನಂತಪುರಂನಲ್ಲಿರುವ ಪಲ್ಲಿಕಲ್ ನದಿಯಲ್ಲಿ (Pallikal River) ಈ ಅವಘಡ ಸಂಭವಿಸಿದೆ. ನೂತನ ವಧು-ವರ ಬಂಡೆ ಮೇಲೆ ನಿಂತು ಫೋಟೋಶೂಟ್ ಮಾಡಿಸುತ್ತಿದ್ದರು. ಈ ವೇಳೆ ಆಯತಪ್ಪಿ ಇಬ್ಬರೂ ನೀರಿಗೆ ಬಿದ್ದಿದ್ದಾರೆ. ಇವರಿಬ್ಬರನ್ನು ರಕ್ಷಿಸಲು ಸಂಬಂಧಿಕರೊಬ್ಬರು ನೀರಿಗೆ ಹಾರಿದ್ದು, ಅವರು ಕೂಡ ದಾರುಣವಾಗಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಮತ್ತೊಂದು ಬಸ್ ಡೋರ್ ಮುರಿದ ನಾರಿಶಕ್ತಿ

    ಮೃತರನ್ನು ಸಿದ್ದಿಕ್, ನೌಫಿ ಹಾಗೂ ಅನ್ಸಿಲ್ ಎಂದು ಗುರುತಿಸಲಾಗಿದೆ. ಇವರೆಲ್ಲ ಕೊಲ್ಲಂ ಜಿಲ್ಲೆಯ ನಿವಾಸಿಗಳಾಗಿದ್ದಾರೆ. ಘಟನೆ ನಡೆದ ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿತ್ತು. ಈ ವೇಳೆ ಸಂಂಬಧಿಕರ ಮೃತದೇಹ ಪತ್ತೆಯಾಯಿತು. ಇನ್ನು ಘಟನೆ ನಡೆದ ಒಂದು ದಿನದ ಬಳಿಕ ವಧು ಹಾಗೂ ವರನ ಶವ ಪತ್ತೆಯಾಗಿದೆ. ನಂತರ ಮೂವರ ಮೃತದೇಹವನ್ನು ಕೊಲ್ಲಂ ಜಿಲ್ಲೆಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು.

    ವಧು ಹಾಗೂ ವರ ನೀರಿಗೆ ಬೀಳುತ್ತಿದ್ದಂತೆಯೇ ಅವರ ರಕ್ಷಣೆ ಮಾಡುವ ಸಲುವಾಗಿ ಅನ್ಸಿಲ್ ನೀರಿಗೆ ಧುಮುಕಿದ್ದಾರೆ. ಆದರೆ ಅವರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ವಾರದ ಹಿಂದೆಯಷ್ಟೇ ಜೋಡಿಗೆ ಮದುವೆಯಾಗಿದ್ದು, ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲೆಂದು ಅವರು ಅನ್ಸಿಲ್ ಮನೆಗೆ ಬಂದಿದ್ದರು. ಅಂತೆಯೇ ಮೂವರು ಅನ್ಸಿಲ್ ಮನೆ ಪಕ್ಕದಲ್ಲಿರುವ ನದಿ ಬದಿಗೆ ಫೋಟೋಶೂಟ್‍ಗಾಗಿ ತೆರಳಿದ್ದರು. ಈ ವೇಳೆ ಬಂಡೆ ಮೇಲಿನಿಂದ ಆಯತಪ್ಪಿ ನದಿಗೆ ಬಿದ್ದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಟ್ಟದಿಂದ ಉರುಳುವ ಹಂತದಲ್ಲಿ ಬಂಡೆ – ಗ್ರಾಮಸ್ಥರಲ್ಲಿ ಆತಂಕ

    ಬೆಟ್ಟದಿಂದ ಉರುಳುವ ಹಂತದಲ್ಲಿ ಬಂಡೆ – ಗ್ರಾಮಸ್ಥರಲ್ಲಿ ಆತಂಕ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸುರಿದ ಮಹಾಮಳೆ, ಈ ಎರಡು ವರ್ಷವೂ ಅನಾಹುತಗಳನ್ನೇ ಸೃಷ್ಟಿಸಿತ್ತು. ಆದರೆ ಮಳೆ ನಿಂತರೂ ಮಳೆಹನಿ ಮಾತ್ರ ನಿಲ್ಲಲ್ಲ ಅನ್ನೋ ಹಾಗೆ, ಮಳೆಗಾಲ ಮುಗಿದು ಮೂರು ತಿಂಗಳಾದ್ರೂ ಮಳೆಯಿಂದ ಆಗುತ್ತಿರುವ ಅನಾಹುತಗಳು ಮಾತ್ರ ಮುಂದುವರಿಯುತ್ತಲೇ ಇವೆ.

    ಹೌದು. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮಲ್ಲೇನಹಳ್ಳಿಯ ಉಣುಗಲು ಬೆಟ್ಟದಲ್ಲಿರುವ ಭಾರೀ ಗಾತ್ರದ ಮೂರು ಬಂಡೆಗಳು ಉರುಳಿ ಬೀಳುವ ಸ್ಥಿತಿಯಲ್ಲಿವೆ. ಸುಮಾರು 100 ಅಡಿಯಷ್ಟು ಎತ್ತರವಿರುವ ಈ ಬೆಟ್ಟದ ಮೇಲೆ ಸಾಕಷ್ಟು ಬಂಡೆಕಲ್ಲುಗಳಿದ್ದು, ಅವುಗಳ ಪೈಕಿ ಮೂರು ಬಂಡೆಗಳು ಕೆಳಕ್ಕೆ ಉರುಳುವ ಸ್ಥಿತಿಯಲ್ಲಿವೆ.

    ಕಳೆದ ಆಗಸ್ಟ್ ತಿಂಗಳಲ್ಲಿ ಸುರಿದ ಭಾರೀ ಮಳೆಗೆ ಬೃಹತ್ ಗಾತ್ರದ ಈ ಬಂಡೆಗಳು ಒಂದೆಡೆಗೆ ಬಾಗಿವೆ. ಅದರಲ್ಲೂ ಒಂದು ಬಂಡೆ ಸುಮಾರು ಎರಡು ಅಡಿಯಷ್ಟು ಬಾಗಿದ್ದು ಈ ಬಂಡೆ ಉರುಳಿದ್ದಲ್ಲಿ ಉಳಿದ ಎರಡೂ ಬಂಡೆಗಳು ಉರುಳುತ್ತವೆ. ಒಂದು ವೇಳೆ ಬಂಡೆಗಳು ಹೀಗೆ ಉರುಳಿದ್ದೇ ಆದಲ್ಲಿ ಬೆಟ್ಟದ ತಪ್ಪಲಿನಲ್ಲೇ ಇರುವ 80 ಮನೆಗಳ ಪೈಕಿ 60 ಮನೆಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಜನರು ಜೀವ ಕೈಯಲ್ಲಿ ಹಿಡಿದು ಆತಂಕದಲ್ಲಿ ಬದುಕುತ್ತಿದ್ದಾರೆ. ಮಲ್ಲೇನಹಳ್ಳಿಯಲ್ಲಿ 80 ಮನೆಗಳಿದ್ದು ಬಂಡೆಗಳು ಉರುಳಿಬಿದ್ದಲ್ಲಿ, ಕನಿಷ್ಠ 60 ಮನೆಗಳು ನಾಶವಾಗಿಬಿಡುತ್ತವೆ.

    ಅನಾದಿಕಾಲದಿಂದ ಈ ಬೆಟ್ಟದ ಮೇಲೆ ಬಂಡೆಗಳಿದ್ದರು ಇದೂವರೆಗೆ ಯಾವುದೇ ಸಮಸ್ಯೆಯಾಗಿರಲಿಲ್ಲ. ಆದರೆ ಕಳೆದ ಎರಡು ವರ್ಷಗಳಿಂದ ಸುರಿದ ಮಳೆಗೆ ಬಂಡೆಕಲ್ಲುಗಳು ಒಂದೆಡೆಗೆ ಜಾರಿವೆ. ಕಳೆದ 15 ದಿನಗಳ ಹಿಂದೆ ಗ್ರಾಮದ ಗುರು ಬಸಪ್ಪ ಎಂಬವರು ಬೆಟ್ಟದ ಮೇಲೆ ಹೋದಾಗ ಬಂಡೆಗಳು ಒಂದೆಡೆಗೆ ಬಾಗಿರುವುದನ್ನು ಕಂಡಿದ್ದಾರೆ. ಕೂಡಲೇ ಗ್ರಾಮಕ್ಕೆ ಬಂದು ವಿಷಯ ಮುಟ್ಟಿಸಿದ್ದಾರೆ. ಹೀಗಾಗಿ ಗ್ರಾಮದ ಜನರು ಹಗಲು ರಾತ್ರಿ ಎನ್ನದೇ ಬಂಡೆಗಳು ಯಾವಾಗ ಉರುಳಿ ಬೀಳುತ್ತವೆಯೋ ಎಂಬ ಭಯದಲ್ಲಿ ಬದುಕುತ್ತಿದ್ದಾರೆ.

    ಈ ಗ್ರಾಮದಲ್ಲಿ ಎಲ್ಲರೂ ಕೂಲಿ ಕೆಲಸ ಮಾಡುವವರಾಗಿದ್ದು, ಮನೆಯಲ್ಲಿ ಮಕ್ಕಳು, ವೃದ್ಧರು ಇದ್ದಾರೆ. ಒಂದು ವೇಳೆ ಬಂಡೆಗಳು ಉರುಳಿದಲ್ಲಿ ದೊಡ್ಡ ಅನಾಹುತವೇ ಸಂಭವಿಸಿ ಬಿಡುತ್ತದೆ. ಹೀಗಾಗಿ ರಾತ್ರಿ ನೆಮ್ಮದಿಯಿಂದ ನಿದ್ದೆಯನ್ನೂ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಬಂಡೆಯನ್ನು ತೆರವು ಮಾಡಬೇಕು ಎನ್ನೋದು ಜನರ ಒತ್ತಾಯವಾಗಿದೆ.

  • ಗೋಕಾಕ್‍ ಮೇಲೆ ಜೋಡಿಬಂಡೆ ಉರುಳೋ ಭೀತಿ – ಕೂಡಲೇ 100 ಮನೆ ಖಾಲಿ ಮಾಡುವಂತೆ ಸೂಚನೆ

    ಗೋಕಾಕ್‍ ಮೇಲೆ ಜೋಡಿಬಂಡೆ ಉರುಳೋ ಭೀತಿ – ಕೂಡಲೇ 100 ಮನೆ ಖಾಲಿ ಮಾಡುವಂತೆ ಸೂಚನೆ

    ಬೆಳಗಾವಿ: ಗೋಕಾಕ್ ಮಲ್ಲಿಕಾರ್ಜುನ ಬೆಟ್ಟದ ಮೇಲಿನ ಎರಡು ಬೃಹದಾಕಾರದ ದೊಡ್ಡ ಬಂಡೆಗಳು ಮತ್ತೆ ತಮ್ಮ ಸ್ಥಾನವನ್ನು ಬದಲಿಸಿ ಆತಂಕ ಹುಟ್ಟಿಸಿವೆ. ಹೀಗಾಗಿ ಯಾವುದೇ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ನೂರು ಮಾಲೀಕರಿಗೆ ಮನೆ ಖಾಲಿ ಮಾಡುವಂತೆ ಗೋಕಾಕ್ ತಹಶೀಲ್ದಾರ್ ಸೂಚಿಸಿದ್ದಾರೆ.

    ಮಂಗಳವಾರ ಕಾರ್ಯಚರಣೆಗೆ ಅಧಿಕಾರಿಗಳು ನಿಂತಾಗ ಬಂಡೆಗಳ ಬಳಿ ಮಾರ್ಕ್ ಮಾಡಿ ಗುರುತಿಸಿದ್ದರು. ಆದರೆ ಬೆಳಗ್ಗೆ ಬಂದು ನೋಡುವಷ್ಟರಲ್ಲಿ ಮತ್ತೆ ಎರಡು ಅಡಿ ಮುಂದೆ ಸರಿದ ಬಂಡೆಗಳು ಭಾರೀ ಭಯವನ್ನುಂಟು ಮಾಡಿತ್ತು. ಹಾಗಾಗಿ ಸ್ಥಳದಲ್ಲಿ ಎನ್‍ಡಿಆರ್‍ಎಫ್ ತಂಡದ ಸಿಬ್ಬಂದಿ ಬೆಳಗ್ಗೆಯಿಂದಲೂ ಬಂಡೆಯನ್ನು ಬ್ಲಾಸ್ಟ್ ಮಾಡುವ ಕಾರ್ಯಚರಣೆಯಲ್ಲಿ ತೊಡಗಿದ್ದಾರೆ.

    ಬಂಡೆ ಬ್ಲಾಸ್ಟ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಗೋಕಾಕ್ ತಹಶೀಲ್ದಾರ್, ನೂರು ಮನೆ ಮಾಲೀಕರಿಗೆ ಈ ಕೂಡಲೇ ಮನೆ ಖಾಲಿ ಮಾಡಿ ಬೇರೆ ಕಡೆ ಹೋಗಿ. ಯಾವುದೇ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. ಜೋಡಿ ಬಂಡೆ ಬಂದು ಉರುಳಬಹುದು ಎಂದು ಹೇಳಿದ್ದಾರೆ. ಹೀಗಾಗಿ ಅಂಬೇಡ್ಕರ್ ನಗರ, ಸಂಗಮನಗರ, ಗೊಲ್ಲರ ಗಲ್ಲಿ, ಸಿದ್ದೇಶ್ವರ ನಗರ ಸೇರಿ ಮರಾಠಾ ಗಲ್ಲಿಯ ಜನರು ಆತಂಕಕ್ಕೆ ಒಳಗಾಗಿದ್ದಾರೆ.

    ಕಳೆದ ರಾತ್ರಿ ಸುರಿದ ಮಳೆಗೆ ಬಂಡೆ ಸುತ್ತಮುತ್ತ ಮಣ್ಣು ಕುಸಿದು ಮತ್ತೆ ಐದು ಅಡಿಯಷ್ಟು ಕೆಳಜಾರಿದೆ. ಮಂಗಳವಾರ ಎಂಟು ಅಡಿಯಷ್ಟು ಜೋಡಿಗಲ್ಲು ಗುಡ್ಡದ ಕೆಳಗೆ ಸರಿದಿತ್ತು. ಮಣ್ಣು ಕುಸಿತಕ್ಕೆ ಇಂದು ಮತ್ತೆ ಐದು ಅಡಿಯಷ್ಟು ಬಂಡೆಗಲ್ಲು ಜಾರಿದೆ. ಬಂಡೆಗಲ್ಲು ಕೆಳ ಜಾರುತ್ತಿರುವ ಹಿನ್ನೆಲೆಯಲ್ಲಿ ಗೋಕಾಕ್ ನಗರದ ಜನರು ಆತಂಕದಲ್ಲಿ ಇದ್ದಾರೆ.

  • ಇರಾಕ್ ಬಂಡೆಯ ಮೇಲೆ ರಾಮನ ಚಿತ್ರ ಪತ್ತೆ

    ಇರಾಕ್ ಬಂಡೆಯ ಮೇಲೆ ರಾಮನ ಚಿತ್ರ ಪತ್ತೆ

    ಲಖನೌ: ಭಾರತೀಯ ನಿಯೋಗವೊಂದು ಜೂನ್‍ನಲ್ಲಿ ಇರಾಕ್ ಯಾತ್ರೆ ಕೈಗೊಂಡಿದ್ದ ವೇಳೆ ಕ್ರಿಸ್ತಪೂರ್ವ 2000ನೇ ಇಸವಿಯ ಕಾಲದ್ದು ಎನ್ನಲಾದ ಪ್ರಾಚೀನ ಬಂಡೆಯ ಮೇಲೆ ಶ್ರೀರಾಮನ ಚಿತ್ರ ಕಾಣಿಸಿಕೊಂಡಿವೆ ಎಂದು ಅಯೋಧ್ಯಾ ಶೋಧ ಸಂಸ್ಥಾನ ಹೇಳಿದೆ.

    ಇರಾಕ್‍ನ ಹೊರೇನ್ ಶೇಖಾನ್ ಪ್ರದೇಶಕ್ಕೆ ಹೋಗುವ ಕಿರುದಾದ ದಾರಿಯ ಎದುರಿನ ಮಣ್ಣಿನ ಗೋಡೆಯೊಂದರಲ್ಲಿ (ದರ್ಬಂದ್-ಇ-ಬೆಲುಲಾ) ಈ ಚಿತ್ರ ಕಂಡುಬಂದಿದೆ. ಈ ಚಿತ್ರದಲ್ಲಿ ಎದೆಯ ಮೇಲೆ ಯಾವುದೇ ಅಲಂಕಾರವಿಲ್ಲದ ರಾಜನೊಬ್ಬ ಧನುಸ್ಸನ್ನು ಹಿಡಿದು ಬಾಣ ಹೂಡುತ್ತಿರುವ ಚಿತ್ರಣವಿದೆ. ಅಲ್ಲದೇ ರಾಜನ ಸೊಂಟಕ್ಕೆ ಖಡ್ಗವನ್ನು ಸಿಕ್ಕಿಸಿಕೊಂಡಂತೆ ಇದೆ. ರಾಜನ ಎದುರಿಗೆ ಪಾದದ ಬಳಿ ಕೈಮುಗಿದು ಕುಳಿತ ಸೇವಕನ ಚಿತ್ರವಿದ್ದು, ಅದು ಹನುಮಂತನದ್ದಾಗಿರಬಹುದು ಎಂದು ಅಯೋಧ್ಯಾ ಶೋಧ ಸಂಸ್ಥಾನದ ನಿರ್ದೇಶಕರು ಹೇಳಿದ್ದಾರೆ.

    ಇರಾಕ್‍ನಲ್ಲಿರುವ ಭಾರತದ ರಾಯಭಾರಿ ಪ್ರದೀಪ್ ಸಿಂಗ್ ರಾಜಪುರೋಹಿತ್ ನೇತೃತ್ವದ ನಿಯೋಗವು ಅಯೋಧ್ಯಾ ಶೋಧ ಸಂಸ್ಥಾನದ ಕೋರಿಕೆ ಮೇರೆಗೆ ಈ ಪ್ರದೇಶಕ್ಕೆ ಯಾತ್ರೆ ಕೈಗೊಂಡಿತ್ತು. ಅಯೋಧ್ಯಾ ಶೋಧ ಸಂಸ್ಥಾನವು ಉತ್ತರ ಪ್ರದೇಶದ ಸಂಸ್ಕೃತಿ ಇಲಾಖೆಯ ಅಧೀನದಲ್ಲಿರುವ ಅಧ್ಯಯನ ಸಂಸ್ಥೆಯಾಗಿದೆ. ಭಾರತೀಯ ರಾಜತಾಂತ್ರಿಕ ಅಧಿಕಾರಿ ಚಂದ್ರಮೌಳಿ ಕರ್ಣ, ಸುಲೈಮಾನಿಯಾ ವಿಶ್ವವಿದ್ಯಾಲಯದ ಇತಿಹಾಸ ತಜ್ಞರು ಮತ್ತು ಕುರ್ದಿಸ್ಥಾನದ ಇರಾಕಿ ಗವರ್ನರ್ ಕೂಡ ಈ ಶೋಧ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

    ಅಯೋಧ್ಯಾ ಶೋಧ ಸಂಸ್ಥಾನದ ನಿರ್ದೇಶಕ ಯೋಗೇಂದ್ರ ಪ್ರತಾಪ್ ಸಿಂಗ್ ಹೇಳುವ ಪ್ರಕಾರ, ನಿಯೋಗ ಈಗ ಸಂಗ್ರಹಿಸಿರುವ ಭೌಗೋಳಿಕ ದಾಖಲೆಗಳ ವಿಸ್ತೃತ ಅಧ್ಯಯನದಿಂದ ಭಾರತೀಯ ಮತ್ತು ಮೆಸೊಪೊಟೇಮಿಯಾ ಸಂಸ್ಕೃತಿಗಳ ನಡುವಣ ಕೊಂಡಿಯನ್ನು ಪತ್ತೆ ಮಾಡಬಹುದು. ಮತ್ತು ಮಣ್ಣಿನ ಕೆತ್ತನೆಯಲ್ಲಿ ಕಂಡು ಬರುವ ದೊರೆ ಮತ್ತು ಸೇವಕನ ಚಿತ್ರಣವು ನಮ್ಮಲ್ಲಿ ಹಲವರಿಗೆ ಭಗವಾನ್ ಶ್ರೀರಾಮ ಮತ್ತು ಹನುಮಂತನನ್ನು ನೆನಪಿಗೆ ತಂದಿತು ಎಂದಿದ್ದಾರೆ.

    ಇರಾಕಿನ ವಿದ್ವಾಂಸರು, ಮಣ್ಣಿನ ಗೋಡೆಯ ಚಿತ್ರಣವು ಪರ್ವತ ಪ್ರದೇಶದ ಬುಡಕಟ್ಟು ನಾಯಕ ತಾರ್ದುನ್ನಿಯನ್ನು ಹೋಲುತ್ತದೆ. ಹಿಂದೆಯೂ ಇರಾಕ್‍ನ ಕೆಲವೆಡೆ ಈ ರೀತಿಯ ಮಣ್ಣಿನ ಭಿತ್ತಿ ಕೆತ್ತನೆಗಳಲ್ಲಿ ರಾಜ ಹಾಗೂ ಅವನ ಮುಂದೆ ಮಂಡಿಯೂರಿ ಕುಳಿತ ಸೇವಕನ ಚಿತ್ರಗಳು ಕಂಡು ಬಂದಿವೆ. ಈ ಸೇವಕನನ್ನು ರಾಜನು ಬಂಧಿಸಿ ಕರೆತಂದ ಕೈದಿಯಾಗಿರಬಹುದು ಎಂದು ಹೇಳಿದ್ದಾರೆ.

    ಇರಾಕಿನ ಪ್ರಾಚೀನ ವಸ್ತು ಸಂಶೋಧಕರು ಮತ್ತು ಇತಿಹಾಸಕಾರರ ಪ್ರಕಾರ ಈ ಚಿತ್ರಗಳಿಗೂ ಭಗವಾನ್ ರಾಮನಿಗೂ ಯಾವುದೇ ಸಂಬಂಧವಿಲ್ಲ. ಆದರೆ ಪ್ರತಾಪ್ ಸಿಂಗ್ ಅವರು ಎರಡೂ ನಾಗರಿಕತೆಗಳ ನಡುವಣ ಸಂಬಂಧದ ಕೊಂಡಿಯನ್ನು ಶೋಧಿಸಲು ಇರಾಕ್ ಸರ್ಕಾರದ ಅನುಮತಿ ಅಗತ್ಯವಿದೆ. ಅನುಮತಿಗಾಗಿ ನಾವು ಸರ್ಕಾರಕ್ಕೆ ಕೋರಿಕೆ ಮಾಡಿದ್ದೇವೆ ಎಂದು ತಿಳಿಸಿದರು.

    ಜಗತ್ತಿನ ಹಲವು ಭಾಗಗಳಲ್ಲಿ ಶ್ರೀರಾಮನ ಹೆಜ್ಜೆ ಗುರುತುಗಳ ದಾಖಲೆಗಳು ಲಭ್ಯವಾಗಿವೆ. ಹೀಗೆ ಜಗತ್ತಿನ ನಾನಾ ಭಾಗಗಳಲ್ಲಿ ಪತ್ತೆಯಾದ ದಾಖಲೆಗಳ ಪ್ರತಿಕೃತಿಗಳನ್ನು ಅಯೋಧ್ಯೆಯಲ್ಲಿ ಒಂದೇ ಕಡೆ ಸಂಗ್ರಹಿಸಿ ಇಡುವ ಉದ್ದೇಶವಿದೆ. ಸಿಂಧೂ ನಾಗರಿಕತೆ ಮತ್ತು ಮೆಸೊಪೊಟೇಮಿಯಾ ನಾಗರಿಕತೆಗಳ ನಡುವೆ ಸಂಬಂಧ ಕಲ್ಪಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಮೊದಲ ಅಧಿಕೃತ ಪ್ರಯತ್ನ ಇದಾಗಿದೆ ಎಂದು ಸಿಂಗ್ ತಿಳಿಸಿದರು.

  • ಮದ್ಯವರ್ಜನ ಶಿಬಿರದಿಂದ ತಪ್ಪಿಸಿಕೊಳ್ಳಲು ಹೋಗಿ ಬಂಡೆಯ ಮಧ್ಯೆ ಸಿಲುಕಿದ ವ್ಯಕ್ತಿಯ ರಕ್ಷಣೆ

    ಮದ್ಯವರ್ಜನ ಶಿಬಿರದಿಂದ ತಪ್ಪಿಸಿಕೊಳ್ಳಲು ಹೋಗಿ ಬಂಡೆಯ ಮಧ್ಯೆ ಸಿಲುಕಿದ ವ್ಯಕ್ತಿಯ ರಕ್ಷಣೆ

    ಬಳ್ಳಾರಿ: ಶಿಬಿರಾರ್ಥಿಯೊಬ್ಬ ಮದ್ಯವರ್ಜನ ಶಿಬಿರದಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಬೃಹತ್ ಬಂಡೆಯ ಮಧ್ಯೆ ಸಿಕ್ಕಿ ನರಳಾಡಿದ ಘಟನೆ ಹಂಪಿಯಲ್ಲಿ ನಡೆದಿದೆ.

    ಹಂಪಿ ಕಡಲೇ ಕಾಳು ಗಣೇಶ ಹಿಂಭಾಗದಲ್ಲಿ ಇರುವ ಶಿವರಾಂ ಅವಧೂತರ ಮಠದಲ್ಲಿ ಕಳೆದ ನಾಲ್ಕು ದಿನಗಳಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ವತಿಯಿಂದ ಮದ್ಯವರ್ಜನ ಶಿಬಿರ ನಡೆಯುತ್ತಿದೆ. ಈ ಶಿಬಿರದಲ್ಲಿ ಸುಮಾರು ಅರವತ್ತಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗಿಯಾಗಿದ್ದರು.

    ಇದರಲ್ಲಿ ಕೊಪ್ಪಳ ಜಿಲ್ಲೆಯ ಹುಲಿಗಿ ಮೂಲದ ದೇವೇಂದ್ರ ಶಿಬಿರದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಗ ಮಠದ ಪಕ್ಕದಲ್ಲಿರುವ ಎರಡು ಬೃಹತ್ ಬಂಡೆಗಳ ಮಧ್ಯೆ ಸಿಕ್ಕಿ ಹಾಕಿಕೊಂಡು ಹೊರಗೆ ಬರಲಾಗದೆ ನರಳಾಡಿದ್ದಾನೆ.

    ನಂತರ ಸ್ಥಳೀಯರು ವ್ಯಕ್ತಿಯನ್ನು ಗಮನಿಸಿ ಹಂಪಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಅಗ್ನಿಶಾಮಕ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿದ್ದಾರೆ. ಸತತ 4 ಗಂಟೆ ಕಾರ್ಯಾಚರಣೆ ನಡೆಸಿದ ಹೋಮ್ ಗಾರ್ಡ್ ಸಿಬ್ಬಂದಿ ಮತ್ತು ಅಗ್ನಿಶಾಮಕ ಸಿಬ್ಬಂದಿ ದೇವೇಂದ್ರನನ್ನು ರಕ್ಷಿಸಿದ್ದಾರೆ.

    ಪ್ರಾಣಪಾಯದಿಂದ ಪಾರಾಗಿರುವ ದೇವೇಂದ್ರನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.